Wednesday, 30 June 2021

ಅರ್ಥಕ್ರಾಂತಿಯ ಹರಿಕಾರ,ಯುಗಪುರುಷ - ಬಸವಣ್ಣ.


 ಕೋವಿಡ್ ನ ಈ ದುರಿತಕಾಲದಲ್ಲಿ ಗುಳೆ-ವಲಸೆ,ಹಸಿವು,ಸಾವು ಎಂಬೆಲ್ಲಾ ಶಬ್ಧಗಳನ್ನು ಕೇಳಿದಾಗ ಆಯಾಚಿತವಾಗಿ ಬಸವಣ್ಣ ನೆನಪಾಗಿಬಿಡುತ್ತಾನೆ. ಅವನ ಸಮಾಜವಾದೀ ಸಮಸಮಾಜದ ಕಲ್ಪನೆಯು ಕಣ್ಣಮುಂದೆ ಹಾದುಹೋಗಿಬಿಡುತ್ತದೆ. ಶ್ರಮವನ್ನು ಮತ್ತು ಶ್ರಮದ ಪ್ರತಿಫಲವನ್ನೂ ಸಮನಾಗಿ ಸಮುದಾಯದಲ್ಲಿ ಹಂಚಿ ಬದುಕಬೇಕೆಂಬ ಅವನ ಚಿಂತನೆಯನ್ನು ನಮ್ಮ ಸಮಾಜವು ಮರೆಯದೆ,ತೊಡೆಯದೆ ಅನುಶಾಸನವನ್ನಾಗಿಸಿಕೊಂಡಿದ್ದರೆಷ್ಟು ಚೆಂದವಿತ್ತಲ್ಲವೇ ಎನಿಸಿಬಿಡುತ್ತದೆ.

ನಿಜ ; ಬಸವಣ್ಣನ ಕಾಲಘಟ್ಟವೇ ಅಂಥದು! ಅದೊಂದು ಜಾಗತಿಕ ವೈಚಾರಿಕ ಕ್ರಾಂತಿಯ ಯುಗಮಾನ! ಜಗತ್ತಿನೆಲ್ಲೆಡೆಯೂ ವಿಶಿಷ್ಟ ಚಿಂತನೆಗಳು ಮೊಳಕೆಯೊಡೆದಿದ್ದ ಕಾಲ. ಇರಾನ್-ಅಫ್ಘನಿಸ್ತಾನ ಭಾಗದಲ್ಲಿ ಸೂಫಿಸಂ ಪ್ರವರ್ಧಮಾನಕ್ಕೆ ಬಂದದ್ದು ಆಗಲೇ. ಜಲಾಲುದ್ದೀನ್ ರೂಮಿ,ಶಂಶುದ್ದೀನ್ ಅಲ್-ತಬ್ರೀಜ್,ತಾವೂಸ್ ಖೈತಾನ್ ರಂಥವರು ಬದುಕಿದ್ದದ್ದು ಆಗಲೇ! ಕಟ್ಟರ್ ಸಂಪ್ರದಾಯದ ಇಸ್ಲಾಂ ನಲ್ಲೂ ಭಕ್ತಿಪಂಥವೊಂದು ಹರಿದಿತ್ತು ಆಗ. ಕ್ರೈಸ್ತ ಧರ್ಮದಲ್ಲೂ ಅಪೋಸ್ಟೆಲಿಕ್ ಪೋಪ್ ನ,ಚರ್ಚುಗಳ ನಿರಂಕುಶ ದಬ್ಬಾಳಿಕೆ,ದೌರ್ಜನ್ಯ ಗಳ ವಿರುದ್ಧ ಸಣ್ಣಗೆ ದನಿಯೆದ್ದಿತ್ತು. ಅನೇಕ ಸಂತರು ತಮ್ಮದೇ ದಾರಿಗಳಲ್ಲಿ ವೈಚಾರಿಕ ಮನೋಭೂಮಿಕೆಗಳನ್ನು ಜನಮಾನಸದಲ್ಲಿ ಮೂಡಿಸಿದ್ದರು.
ಸೆಮೆಟಿಕ್ ಧರ್ಮಗಳೂ ಆಗ ಭಾರತಕ್ಕೆ ಕಾಲಿಟ್ಟದ್ದಕ್ಕೆ ಆಧಾರಗಳಿವೆ. ಬಸವಣ್ಣನಿಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಗೊತ್ತಿತ್ತು. ಚನ್ನಬಸವಣ್ಣನ ಕೆಲವಚನಗಳಲ್ಲಿ ಇದಕ್ಕೆ ಪೂರಕ ಸಾಕ್ಷಿಗಳನ್ನು ಕಾಣಬಹುದು. ಆದರೆ,ಬಸವಣ್ಣನ ಶರಣ ಚಿಂತನೆಯು ತುಳಿದ ಹಾದಿಯು ಮಾತ್ರ ತೀರಾ ವಿಭಿನ್ನವಾಗಿತ್ತು. ಅದು ಬರೀ ಧರ್ಮಕ್ಕೆ, ದೇವರಿಗೆ ಸಂಬಂಧಿಸಿರದೆ ನಿತ್ಯದ ಬದುಕಿಗೂ ಆವರಣವೊಂದನ್ನೆಳೆದಿತ್ತು. ಆ "ಅರ್ಥಚಿಂತನೆ" ಯೇ ಅಂದಿನ ಪ್ರಭುತ್ವವನ್ನು ಕಂಗೆಡಿಸಿದ್ದು.

ಬಸವಣ್ಣ ಹುಟ್ಟಿದ್ದು ಸಂಪ್ರದಾಯಿಕ ಶೈವ ಬ್ರಾಹ್ಮಣನಾಗಿ. ಅವನ ಜಾತಿಯು ಬ್ರಾಹ್ಮಣವರ್ಗದಲ್ಲಿ ಕನಿಷ್ಠದ್ದು. ಹಾಗಾಗಿ ಅವನಿಗಿಂತಲೂ ಮೇಲುಜಾತಿಯ ಬ್ರಾಹ್ಮಣರ ತಾರತಮ್ಯವನ್ನು ಅವನ ಬಾಲ್ಯವು ಅನುಭವಿಸಿತ್ತು.ಹಾಗೆಯೇ ತನ್ನ ಜಾತಿಯೂ ಕೂಡ ತನಗಿಂತ ಕೆಳಗಿನ ಶೂದ್ರವರ್ಗದ ಮೇಲೆ ಮಾಡುವ ಅಮಾನವೀಯ ಶೋಷಣೆಗಳನ್ನೂ ಕಂಡಿತ್ತು. ಬಹುಶಃ ಅವನ ದಾರಿಯ ಸ್ಪಷ್ಟತೆ ಆಗಲೇ ಅವನಿಗೆ ಸಿಕ್ಕುಹೋಗಿತ್ತೇನೋ.. ಜನಿವಾರವೆಂಬ ಸಂಪ್ರದಾಯಿಕ ಮೌಢ್ಯದಾಸ್ಯವನ್ನು ಕಿತ್ತೆಸೆದು ಗುರುವನ್ನರಸಿ ಬಾಗೇವಾಡಿಯ ತನ್ನ ಅಪ್ಪನ ಮನೆಯಿಂದ ಕೂಡಲಸಂಗಮಕ್ಕೆ ಬರುತ್ತಾನೆ. ಜಾತವೇದ ಮುನಿಯ ಆಶ್ರಯದಲ್ಲಿ ಅಧ್ಯಯನಕ್ಕೆ ನಿಲ್ಲುತ್ತಾನೆ.
ಅವನ ಶ್ರಮಕ್ಕೆ ಕಲ್ಯಾಣದ ಕಲಚೂರಿ ರಾಜ್ಯದ ಅರ್ಥಮಂತ್ರಿ ಪದವಿ,ರಾಜಕುಮಾರಿಯೇ ಪತ್ನಿಯಾಗುವ ಅದೃಷ್ಟ ಒಲಿಯುತ್ತದೆ.ಮನಸ್ಸು ಮಾತ್ರ ಸಮಾಜದ ಅಸಮಾನತೆ, ಶ್ರೇಣೀಕೃತ ಅರ್ಥವ್ಯವಸ್ಥೆಯಡೆ ಧೇನಿಸುತ್ತಿರುತ್ತದೆ. ಅರಸನ ಊಳಿಗಕ್ಕೆ ಚ್ಯುತಿ ಬಾರದಂತೆ ಬಸವಕಲ್ಯಾಣದಲ್ಲೇ ವಿವಿಧವರ್ಗದ ಜನರನ್ನು ಒಂದೆಡೆ ತರುತ್ತಾನೆ. ಅಲ್ಲಿ ಪರಸ್ಪರ ಚರ್ಚೆಗೆ ವೇದಿಕೆಯಾಗುತ್ತದೆ.ಮೇಲುನೋಟಕ್ಕೆ ಇದು ಆಧ್ಯಾತ್ಮ-ಧಾರ್ಮಿಕ ಚರ್ಚೆಯೆನಿಸಿದರೂ ಅದು ನಿತ್ಯಬದುಕಿಗೊಂದು ಹೊಸದಾರಿಯಾಗಬಲ್ಲ ಚಿಂತನೆಗೆ ಕಾರಣವಾಗುತ್ತದೆ.
ಈ ನಿತ್ಯಚರ್ಚೆಯ ವೇದಿಕೆಯು ಕ್ರಮೇಣ ವಿಸ್ತಾರಗೊಳ್ಳುತ್ತದೆ.ಜಾತಿ ವರ್ಗಗಳ ಬೇಧವಿಲ್ಲದ್ದರಿಂದ ಜನರ ಗಮನಸೆಳೆಯುತ್ತದೆ.ಅದು ಆ ಕಾಲಘಟ್ಟದ ಅಸಾಮಾನ್ಯ ಸಂಗತಿಯಾಗುತ್ತದೆ. "ಅನುಭವ ಮಂಟಪ" ಹೀಗೇ ರೂಪುಗೊಳ್ಳುತ್ತ ಹೋಗುತ್ತದೆ. ಅಲ್ಲಿ ನಡೆಯುವ ಚರ್ಚೆಗಳೇ "ಶರಣ ಮಾರ್ಗ" ವಾಗುತ್ತದೆ. ಅವು ಇನ್ನಿತರೆ ಜನರಿಗೂ ತಲುಪಲೆಂದು ಆಡುಭಾಷೆಯಾದ ಸರಳ ಕನ್ನಡದಲ್ಲೇ ದಾಖಲೀಕರಣವಾಗುತ್ತದೆ.ಅನುಭವ ಮಂಟಪದ ಎಲ್ಲರಿಗೂ ಈ ದಾಖಲೀಕರಣಕ್ಕೆ ಪ್ರೊತ್ಸಾಹ ಸಿಗುತ್ತದೆ. "ವಚನಗಳು"
ಅಸಂಖ್ಯವಾಗುತ್ತವೆ.
ಅನುಭವ ಮಂಟಪದಲ್ಲಿ ಮಹಿಳೆಯರೂ ಕ್ರಿಯಾಶೀಲರಾಗಿಯೇ ಭಾಗವಹಿಸಿದ್ದಾರೆ.ವಚನ ರಚಿಸಿದ್ದಾರೆ. ಅಸ್ಪೃಷ್ಯರು,ಬ್ರಾಹ್ಮಣರು ಹೀಗೇ ಎಲ್ಲರೂ "ಶರಣ ಮಾರ್ಗ" ದಲ್ಲಿ ಸೇರಿಹೋಗುತ್ತಾರೆ.
ಅವರಿಗಾಗಿ "ಮಹಾಮನೆ" ಯೂ ಸಿದ್ಧವಾಗುತ್ತದೆ. ಕಾಯಕಗಳ ಹಂಚಿಕೆಯಾಗುತ್ತದೆ.ಎಲ್ಲರ ಕಾಯಕ ಪ್ರತಿಫಲವೂ ಒಂದೆಡೆ ಕ್ರೋಢೀಕರಣಗೊಂಡು,ಎಲ್ಲರಲ್ಲೂ ಸಮನಾಗಿ ಹಂಚಿಕೆಯಾಗುತ್ತದೆ.ಇದೇ "ದಾಸೋಹ" ಎಂಬ ಕ್ರಾಂತಿಕಾರಿ ಚಿಂತನೆ! ಇದು ಬರೀ ಚಿಂತನೆಯಾಗುಳಿಯದೆ "ಚಳುವಳಿ" ಯ ರೂಪವೂ ತಾಳಿತು.
ಮಾರ್ಕ್ಸ್-ಎಂಗೆಲ್ಸ್ ರ "ಕಮ್ಯುನಿಸಂ" ಚಿಂತನೆಗಿಂತ ಬಹುಮುಂಚೆಯೇ "ಮಹಾಮನೆ" ಯಲ್ಲಿ "ಸಮಾಜವಾದದ" ಪ್ರಯೋಗ ನಡೆದುಹೋಗಿತ್ತು. ಅನುಭವ ಮಂಟಪವು ಈಗಿನ ಪ್ರಜಾತಂತ್ರ ವ್ಯವಸ್ಥೆಯ ಪಾರ್ಲಿಮೆಂಟು-ಅಸೆಂಬ್ಲಿಗಳಿಗಿಂತೆ ಅನನ್ಯ ಪ್ರಜಾರಾಜ್ಯ ಪರಿಕಲ್ಪನೆಯನ್ನು .
ಜಗತ್ತಿನ ಮೊದಲ ಸಾಮಾಜಿಕ ಚಳುವಳಿಯಾಗಿ ಶರಣಮಾರ್ಗ ಗುರುತಿಸಿಕೊಂಡಿದೆ.ಮೊದಲ ಸಮಾಜವಾದೀ ವ್ಯವಸ್ಥೆಯ ಪ್ರಯೋಗವೂ ಅದರದ್ದೇ.ಮೊದಲ ಪ್ರಜಾತಂತ್ರದ ಪ್ರಯೋಗವೂ ಶರಣರದ್ದೇ!
ಬಸವಣ್ಣ ಮತ್ತು ಅವನ ಶರಣ ಸಹಚಾರಿಗಳ ಚಿಂತನೆಗಳು ಇಡೀ ಭಾರತವನ್ನೇ ಪ್ರಭಾವಿಸಿದವು. ಕ್ರಮೇಣ ಈ ಶರಣ ಚಳುವಳಿಯು ರಾಜಕೀಯ ವಿದ್ರೋಹಿಗಳ ಕಣ್ಣುಕುಕ್ಕಿಸಿ,ಇದನ್ನು ಅವರು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ನಿಮಿತ್ತವೊದಗಿಸಿದ್ದು ದುರಂತ. ವರ್ಣಾಂತರ ವಿವಾಹವನ್ನೇ ನೆಪವಾಗಿಸಿಕೊಂಡು ಚಳುವಳಿಯನ್ನು ಯಶಸ್ವಿಯಾಗಿ ಹಣಿಯಲಾಗುತ್ತದೆ.
ಶರಣ ಚಳುವಳಿಯನ್ನು ರಾಜಕೀಯಕ್ಕೆ ಬಳಸಿಕೊಂಡ ವಿದ್ರೋಹಿಗಳು ಬಿಜ್ಜಳನ ಕೊಲೆಗೈಯುತ್ತಾರೆ.ವಿಪ್ಲವನೆಬ್ಬಿಸಿ,ಶರಣ-ಶರಣೆಯರನ್ನು ಸಿಕ್ಕಲ್ಲಿ ಕೊಂದುಹಾಕುತ್ತಾರೆ. ರಾಜಪುತ್ರಿ ನೀಲಾಂಬಿಕೆ ಶರಣೆಯರ ಜೀವರಕ್ಷಣೆಗೆ ಕತ್ತಿಹಿರಿದು ಹೋರಾಡಿ ಸಾವನಪ್ಪುತ್ತಾಳೆ.

ಕಲ್ಯಾಣದಿಂದ ಗಡೀಪಾರಾದ ಬಸವಣ್ಣ ಕೂಡಲಸಂಗಮಕ್ಕೆ ಹೊರಡುತ್ತಾನೆ. ಗಂಗಾಂಬಿಕೆಯೊಡನೆ ತೆಪ್ಪದಲ್ಲಿ ಮಲಪ್ರಭೆಯನ್ನು ದಾಟುವಾಗ, ಪುಟ್ಟ 'ಸಂಗಮೇಶ' ನೀರುಪಾಲಾಗುತ್ತದೆ.ಉಳಿಸಲು ಹೋದ ಗಂಗಾಂಬಿಕೆಯೂ ಮುಳುಗುತ್ತಾಳೆ. ಬಸವಣ್ಣನೂ ಅದೇ ನೀರಿನಲ್ಲೇ ಕೊನೆಯುಸಿರೆಳೆಯುತ್ತಾನೆ.
ಅವನ ಶರಣಚಳುವಳಿಯು ಮಾತ್ರ ಮಲಪ್ರಭೆಯಂತೆ ಹರಿಯುತ್ತ ವಿಸ್ತರವಾಗುತ್ತದೆ.ತುಂಗೆಯಾಚೆಗೂ,ಕೃಷ್ಣೆಯಾಚೆಗೂ ಹರಿಯುತ್ತದೆ.ತನ್ನೊಡನೆ ಕೊಳೆ-ಕೊಚ್ಚೆಗಳನ್ನೂ ಕ್ರಮೇಣ ಸೇರಿಸಿಕೊಳ್ಳುತ್ತದೆ.ರೂಪಾಂತರವಾಗುತ್ತದೆ.
ಯಾವ ಜಾತಿಯ ಕಂದರಗಳನ್ನು ತೊಡೆಯಲೆತ್ನಿಸಿದನೋ,ಅದೇ ಬಸವಣ್ಣನನ್ನು ಒಂದು ಜಾತಿಯ ಕೋಟೆಯಲ್ಲಿ ಬಂಧಿಸಿದ್ದೇವೆ ನಾವು. ಧರ್ಮ-ಮೌಢ್ಯದ ಹೆಸರಲ್ಲಿ ಅಮಾಯಕರನ್ನು ಶೋಷಿಸುತ್ತಾ ತಮ್ಮ ಉದರಪೋಷಣೆ ಮಾಡುತ್ತಿದ್ದವರನ್ನೆಲ್ಲಾ ಖಂಡಿಸಿದ ಬಸವಣ್ಣನ ಹೆಸರಿನಲ್ಲೇ ಮಠ-ಪೀಠಗಳನ್ನು ಮಾಡಿಕೊಂಡು ಅದೇ ಮುಗ್ಧ ಜನರ ಹೆಗಲ ಮೇಲಿನ ಪಲ್ಲಕ್ಕಿಗಳಲ್ಲಿ ಮೆರೆಯುವವರಿಗೇ ನಾವು ಅಡ್ಡ ಬೀಳುತ್ತಿದ್ದೇವೆ.
ವೈಚಾರಿಕ ಕ್ರಾಂತಿಯನ್ನೇ ಮಾಡಿದ ಆ ಮಹಾತ್ಮನನ್ನು ಎತ್ತನ್ನಾಗಿಸಿ,ಕೊಡಣಸು-ಮೂಗುದಾರ ಹಾಕಿ ಗುಡಿಯಲ್ಲಿ ಕೂಡಿಹಾಕಿಬಿಟ್ಟಿದ್ದೇವೆ. ಸ್ಥಾವರ-ಪೂಜೆ ನಿರಾಕರಿಸಿದವನಿಗೆ ರುದ್ರಾಭಿಷೇಕ,ಕಾಯಕತತ್ವ ನೀಡಿದವನಿಗೆ ಸೊಂಭೇರಿಗಳೇ ಪ್ರತಿನಿಧಿಗಳು,ದಾಸೋಹ ಮೌಲ್ಯ ಅರುಹಿದವನ ಹೆಸರಿನಲ್ಲಿ ಲಿಂಗಾಯತ-ವೀರಶೈವಗಳೆಂಬ ನೆಪದಲ್ಲಿ ಸಮಾಜಬೇಧ ಮಾಡುವ ನೀಚತನಗಳನ್ನು ನೋಡುತ್ತಲಿದ್ದೇವೆ.
ಬಸವಣ್ಣ ಹೆಚ್ಚೆಂದರೆ ಈಗ ಬರೀ ಒಂದು ಶಿಲಾಪುತ್ಥಳಿಯಷ್ಟೇ! ಅವನ ಚಿಂತನೆಗಳು ಮನರಂಜನೆಯ ಹಾಡುಗಳಷ್ಟೇ! ಜಾತಿ ರಾಜಕಾರಣಕ್ಕೆ ಒಂದು ನಿಮಿತ್ತವಷ್ಟೇ! ಬಸವ ಜಯಂತಿಯು ಹೆಚ್ಚೆಂದರೆ ಒಂದು ಕಾರ್ಯಕ್ರಮವಷ್ಟೇ ಆಗಹೋಗಿದೆ.

ಯಾವ ಜಾತಿಯ ಕಂದರಗಳನ್ನು ತೊಡೆಯಲೆತ್ನಿಸಿದನೋ,ಅದೇ ಬಸವಣ್ಣನನ್ನು ಒಂದು ಜಾತಿಯ ಕೋಟೆಯಲ್ಲಿ ಬಂಧಿಸಿದ್ದೇವೆ ನಾವು. ಧರ್ಮ-ಮೌಢ್ಯದ ಹೆಸರಲ್ಲಿ ಅಮಾಯಕರನ್ನು ಶೋಷಿಸುತ್ತಾ ತಮ್ಮ ಉದರಪೋಷಣೆ ಮಾಡುತ್ತಿದ್ದವರನ್ನೆಲ್ಲಾ ಖಂಡಿಸಿದ ಬಸವಣ್ಣನ ಹೆಸರಿನಲ್ಲೇ ಮಠ-ಪೀಠಗಳನ್ನು ಮಾಡಿಕೊಂಡು ಅದೇ ಮುಗ್ಧ ಜನರ ಹೆಗಲ ಮೇಲಿನ ಪಲ್ಲಕ್ಕಿಗಳಲ್ಲಿ ಮೆರೆಯುವವರಿಗೇ ನಾವು ಅಡ್ಡ ಬೀಳುತ್ತಿದ್ದೇವೆ.
ವೈಚಾರಿಕ ಕ್ರಾಂತಿಯನ್ನೇ ಮಾಡಿದ ಆ ಮಹಾತ್ಮನನ್ನು ಎತ್ತನ್ನಾಗಿಸಿ,ಕೊಡಣಸು-ಮೂಗುದಾರ ಹಾಕಿ ಗುಡಿಯಲ್ಲಿ ಕೂಡಿಹಾಕಿಬಿಟ್ಟಿದ್ದೇವೆ. ಸ್ಥಾವರ-ಪೂಜೆ ನಿರಾಕರಿಸಿದವನಿಗೆ ರುದ್ರಾಭಿಷೇಕ,ಕಾಯಕತತ್ವ ನೀಡಿದವನಿಗೆ ಸೊಂಭೇರಿಗಳೇ ಪ್ರತಿನಿಧಿಗಳು,ದಾಸೋಹ ಮೌಲ್ಯ ಅರುಹಿದವನ ಹೆಸರಿನಲ್ಲಿ ಲಿಂಗಾಯತ-ವೀರಶೈವಗಳೆಂಬ ನೆಪದಲ್ಲಿ ಸಮಾಜಬೇಧ ಮಾಡುವ ನೀಚತನಗಳನ್ನು ನೋಡುತ್ತಲಿದ್ದೇವೆ.
ಬಸವಣ್ಣ ಹೆಚ್ಚೆಂದರೆ ಈಗ ಬರೀ ಒಂದು ಶಿಲಾಪುತ್ಥಳಿಯಷ್ಟೇ! ಅವನ ಚಿಂತನೆಗಳು ಮನರಂಜನೆಯ ಹಾಡುಗಳಷ್ಟೇ! ಜಾತಿ ರಾಜಕಾರಣಕ್ಕೆ ಒಂದು ನಿಮಿತ್ತವಷ್ಟೇ!

*#ಬಸವ ಜಯಂತಿ*

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...