Thursday 15 March 2018

ಹಾದಿ....-೧

ಹುಟ್ಟು ನಿನ್ನದು ಅಂದೆ
ಸಾವು ನನ್ನದು ಅಂದೆ
ಮಧ್ಯದ ಬದುಕು...
 ಯಾರಪ್ಪನದೋ ತಂದೆ?
ಬರೀ ನಿರ್ವಾತ..
ಸಂತಸವಿತ್ತು ಕೊಂಚ..ಮಿಂದೆ
ಮತ್ತೆ ನೋವುಗಳಿಗೂ ಬೆಂದೆ
ಈಗ ಹೇಳೋ ತಂದೆ..
ಮತ್ತೇನು ಇಟ್ಟಿರುವೆ ಮುಂದೆ?
ದಾರಿ ಅರ್ಧವ ಕ್ರಮಿಸಿದೆ
ಇನ್ನೂ ಉಳಿಸಿದ ವಯಸ್ಸಿದೆ
ಸ್ವಂತಕ್ಕೆ ಏನೂ ಬಯಸದ  ನಿರ್ಲಿಪ್ತ
ಇರುವುದೇ ನನ್ನದೆನ್ನುವ ಸಂತೃಪ್ತ
ಎಸೆದದ್ದಾಗಿದೆ ದೂರ,ಕನಸು-ಆಸೆಗಳ ಯಾದಿ
ಸವೆಸುತ್ತಿದ್ದೇನೆ ನನ್ನ "ಹೆಜ್ಜೆಮೂಡದ ಹಾದಿ"!!!




Wednesday 7 March 2018

ನನ್ನೊಲವಿಗೆ....

ನಾನು ಬೀಜ ಬಿತ್ತುವ
ರೈತನಾಗುತ್ತೇನೆ
ನೀನು ಫಲ ಕೊಡುವ
ಭೂಮಿಯಾಗು
ಇಬ್ಬರ ಬೆವರಿನಲ್ಲಿ
ಹುಟ್ಟಲಿ ಬಿಡು..ಸಣ್ಣ ಹೊಳೆ
ನಮ್ಮ ಮಕ್ಕಳು
ಕಾಗದದ ದೋಣಿ ಬಿಡಲಿ!!!
ನಾನು ಬದುವಿನಲ್ಲಿ
ದೊಡ್ಡ ಮರವಾಗುತ್ತೇನೆ
ನೀನು ತಬ್ಬಿ ಬೆಳೆವ
ಹೂವಿನ ಬಳ್ಳಿಯಾಗು..
ನಮ್ಮ ಮಕ್ಕಳು
ಹೂವ ಘಮಲಿನಲ್ಲಿ
ಮರದ ನೆರಳಿನಲ್ಲಿ
ತಣ್ಣಗೆ ಮಲಗಲಿ ಬಿಡು!!
ನಾನು ಬಿಸಿಲಾದರೆ
ನೀನು ನೆರಳಾಗು
ನಾನು ಗುಡುಗಾದರೆ
ನೀನು ಮಳೆಯಾಗು
ಚಿಟ್ಟೆಯಾಗಿಬಿಡು
ಬೆಳೆಗಳ ಪರಾಗಸ್ಪರ್ಷಕ್ಕೆ
ಹಕ್ಕಿಯಾಗುತ್ತೇನೆ
ತೆನೆ ತಿನ್ನುವ ಕೀಟದ ಬೇಟಕ್ಕೆ
ಮಾಡುವ ಬಾ ಒಲವೇ
ಕೊಯಿಲಾದ ನಮ್ಮೆಲ್ಲ
ಕನಸುಗಳ ದೊಡ್ಡ ರಾಶಿ...!!
ಅದೆ ಬದುಕಿನ ಪರಮ ಖುಶಿ!!!

ಹಸಿವು ಎಂಬ ಅಂತ್ಯವಿಲ್ಲದ ಹೋರಾಟ!!

ಹಸಿವು,ಸಾವು ಮತ್ತು ಕಾಮ...ಎಂಬ ಮೂರಂಶಗಳೇ ಎಲ್ಲರ ಸಂವೇದನೆಗಳನ್ನು ಸದಾ ಕಾಡುವಂಥವುಗಳು.
ಇದರಲ್ಲಿ "ಹಸಿವು" ಅನ್ನುವ ಜೈವಿಕ,ಬೌದ್ಧಿಕ,ಸಾಮಾಜಿಕ ಸ್ಥಿತಿಯೇ ಸಾರ್ವಕಾಲಿಕವಾಗಿ ಚರ್ಚಿತವಾಗುತ್ತಿರುವುದು...ಮತ್ತು ನನ್ನ ಸಂವೇದನೆಯನ್ನು ಕಾಡುತ್ತಿರುವುದು.
ಮೊನ್ನೆ ಕೇರಳದಲ್ಲಿ ಯಾರೋ ಆದಿವಾಸಿಯೊಬ್ಬ ಒಂದು ಹಿಡಿಯಷ್ಟು ಅಕ್ಕಿ ಕದ್ದನೆಂಬ ಕಾರಣಕ್ಕೆ ಬಡಿತಕ್ಕೊಳಗಾಗಿ ಸತ್ತ ಎಂಬ ವಿಷಯದಲ್ಲೂ ನಾವು ಒಂದಷ್ಟು ಗೆಳೆಯರು ಮಾತನಾಡಿಕೊಂಡದ್ದು "ಹಸಿವಿನ" ಹತ್ತಾರು ಮುಖಗಳ ಬಗ್ಗೆಯೇ!

ಜಗತ್ತಿನ ಸೃಷ್ಟಿ ಪ್ರಕ್ರಿಯೆಯ,ಸರ್ವ ಜೀವ ಜಂತುಗಳ ಮೊದಲ ಭೌತಿಕ ಸಂವೇದನೆ "ಹಸಿವು"! ಹುಟ್ಟಿದ ಮರು ಕ್ಷಣದಲ್ಲೇ ಮಗು ಅಳುವುದು ಹಸಿವಿನಿಂದಲೇ.ಹಸುವೊಂದು ಕರು ಈಯ್ದ ಕೂಡಲೇ ಕರು ತನ್ನ ತಾಯಿಯ ಕೆಚ್ಚಲ ಕಡೆಯೇ ಮೊದಲು ಬಾಯಿ ಚಾಚಲು ಹವಣಿಸುತ್ತದೆ.

ಹಸಿವು ಬರೀ ಆಹಾರಕ್ಕಷ್ಟೆ ಸಂಬಂಧಿಸಿರುವುದಲ್ಲ..ಅದಕ್ಕೂ ಅನೇಕ ಮುಖಗಳಿವೆ.ಸಾತ್ವಿಕ ರೀತಿಯ ಜ್ಞಾನದ ಹಸಿವು,ಪ್ರೀತಿಯ ಹಸಿವು,ಸೇವೆಯ ಹಸಿವುಗಳು ಹಾಗೂ ರಕ್ಕಸ ಪ್ರವೃತ್ತಿಯ ರಕ್ತದ ಹಸಿವು,ಅಧಿಕಾರದ ಹಸಿವು,ಹಣದ ಹಸಿವು ಮುಂತಾದವು.

ಒಂದು ಬದುಕಿನ ನೆಲೆಯನ್ನು ಹಸಿವು ಕಟ್ಟುತ್ತದೆ.ಅಂತಹ ಸಾವಿರ ಬದುಕುಗಳಿಂದಲೇ ಸಮಾಜ ಹುಟ್ಟುತ್ತದೆ.ದೇಶ ಮೈದಳೆಯುತ್ತದೆ.ಸಾತ್ವಿಕ ಹಸಿವು ನೀಗುವ ಅವಕಾಶಗಳು ಹೆಚ್ಚಿದಷ್ಟೂ ಸುಂದರ ಸಮಾಜ ಬೆಳೆಯಬಲ್ಲದು ಹಾಗೆಯೇ ಹಸಿವು ವಿಕೃತತೆಗೆ ತಿರುಗಿದಾಗಲೆಲ್ಲ ಸಮಾಜವಿರಲಿ,ಜೀವ ಸಂಕುಲದ ಅಸ್ತಿತ್ವವೇ ಲಯವಾಗುತ್ತದೆ.

ಹಸಿವು ಮಾನವ ಕುಲದ ಅತ್ಯಂತ ಹಳೆಯ ಹೋರಾಟಗಳಲ್ಲೊಂದು.ದುರಂತವೆಂದರೆ,ಆ ಹೋರಾಟ ಇನ್ನೂ ಕೆಲವು ಮನುಷ್ಯರಿಗೆ ಅನಿವಾರ್ಯವಾಗಿರುವುದು... ನಾಗರೀಕತೆ,ಸಂಸ್ಕೃತಿಗಳ ವಿಕಸನಕ್ಕೊಂದು ಅಣಕವಿದು!! ಅದಕ್ಕೆ ಕಾರಣಗಳು ನೂರಿರಲಿ;

ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕಾರಣದಲ್ಲಂತೂ " ಹಸಿವು"ಬಹುಮುಖ್ಯ ಪಾತ್ರ ವಹಿಸುತ್ತಿದೆ.ಹಸಿವುಮುಕ್ತ ಮಾಡುತ್ತೇನೆನ್ನುವ ಭರವಸೆಗಳು ಹೆಚ್ಚಿದಷ್ಟೂ ಹಸಿವಿನಿಂದಾಗುವ ಸಾವುಗಳೂ ಹೆಚ್ಚುತ್ತಿರುವುದು ವಿಪರ್ಯಾಸ.ಮನುಷ್ಯನ ಮೂಲಭೂತ ಅಗತ್ಯಗಳನ್ನೇ ತೀರಿಸದ ವಿಜ್ಞಾನ-ತಂತ್ರಜ್ಞಾನಗಳನ್ನು ಅವಾಗೆಲ್ಲ ತಿಪ್ಪೆಗೆಸೆಯಬೇಕೆನಿಸಿಬಿಡುತ್ತದೆ.

ಬ್ರಿಟಿಷರಿಂದ ಸ್ವತಂತ್ರ ಹೊಂದಿ 70 ವರ್ಷಗಳಾದ, ಪ್ರಜಾಪ್ರಭುತ್ವವಿರುವ ಭಾರತದಂಥ ದೇಶವೊಂದನ್ನು ಹೀಗೆ ಹಸಿವು ಮತ್ತು ಸಾವು-ನೋವುಗಳು ಕಾಡುತ್ತಿರುವ ಭೀಬತ್ಸಕರ ನೋಟಗಳು ಈ ದೇಶದ ಪ್ರಗತಿಯ ಗತಿಯನ್ನು ವಿಶ್ವದೆದುರು ತೆರೆದಿಡುತ್ತಲೇ ಇವೆ. ಹಾಗಾದರೆ ಈ ದೇಶದಲ್ಲಿ ಜೀವವುಳಿಸಿಕೊಳ್ಳಲು ಬಡವನೊಬ್ಬ ತನ್ನ ಜೀವದಂತಹ ದುಬಾರಿ ಬೆಲೆ ತೆರಬೇಕೇ? ಅನ್ನ, ಆರೋಗ್ಯ, ಸೂರು, ಶಿಕ್ಷಣವೆಲ್ಲ ಇನ್ನೆಲ್ಲಿಯ ತನಕ ಮರೀಚಿಕೆಯಾಗುತ್ತಲಿರಬೇಕು? ಯಾಕಿಷ್ಟು ಧರ್ಮ, ಜಾತಿ, ವರ್ಗ ಅಸಮಾನತೆಯ ಕಂದಕಗಳು ಇನ್ನಷ್ಟು ಮತ್ತಷ್ಟು ದೊಡ್ಡವಾಗುತ್ತಾ ವಿಕಾರವಾಗಿ ಕುಣಿಯುತ್ತ ಅಟ್ಟಹಾಸಮಾಡುತ್ತಲಿವೆ? ಕೊನೆಯಿಲ್ಲವೇ ಇವಕ್ಕೆ? ಯಾರು ಕೇಳಬೇಕು ಇವಕ್ಕೆಲ್ಲ ನ್ಯಾಯವನ್ನು? ಏಕಾಯಿತು ನಮ್ಮ ವ್ಯವಸ್ಥೆ ಹೀಗೆ?

ಬಡತನ ದೇಶಕ್ಕಂಟಿದ ಶಾಪ ಎನ್ನಲಾಗುತ್ತದೆ ಆದರೆ ನಾನು ಅನ್ನುವುದು ಈ ದೇಶದ ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ವ್ಯವಸ್ಥೆ ಈ ದೇಶಕ್ಕಂಟಿದ ಶಾಪವೆಂದು. ಈ ಭ್ರಷ್ಟತೆ ದಿನೇ ದಿನೇ ಹೆಚ್ಚುತ್ತಾ ತನ್ನ ಅತ್ಯಂತ ಅಸಹ್ಯ ರೂಪವನ್ನು ತೋರುತ್ತಲಿದೆ. ಸರಕಾರಗಳೆಲ್ಲವೂ ದಿನೇ ದಿನೇ ದಬ್ಬಾಳಿಕೆಯನ್ನು ಮೆರೆಯುತ್ತಾ ಪ್ಯಾಸಿಸಂ ಕಡೆಗೆ ಸರಿದಂತೆ ಗೋಚರವಾಗುತ್ತಲಿದೆ. ಹತ್ಯಾಂಕಾಂಡಗಳು, ಅತ್ಯಾಚಾರ, ಗಲಾಟೆಗಳು, ಕುಟಿಲ ಅಟ್ಟಹಾಸಗಳು, ಮೋಸ, ವಂಚನೆ, ನೈಚ್ಯಾನುಸಂಧಾನಗಳು ಅಂಕೆಯಿಲ್ಲದಂತೆ ನಡೆದಿವೆ. ನಿರುದ್ಯೋಗ, ಹಸಿವು, ಬಡತನಗಳೊಂದೆಡೆಯಾದರೆ ಬೆಲೆಯೇರಿಕೆ, ನೆರೆ ಬರಗಳಂತಹ ಸಮಸ್ಯೆಗಳೊಂದೆಡೆ. ಈ ದೇಶವು ಹಿಂದೆಂದೂ ಕಾಣದಂತಹ ಸುಳ್ಳುಬುರುಕ ಸರಕಾರವಾಗಿ ಅಸಹ್ಯ ಹುಟ್ಟಿಸುತ್ತಿದೆ.

ಇಷ್ಟಾದರೂ ಈ ದೇಶದ ಜನತೆ ಸಿಡಿದೆದ್ದಿದ್ದು ಈ ಸಮಸ್ಯೆಗಳಿಗೊಂದು ತಾರ್ಕಿಕ ಅಂತ್ಯ ಕಾಣಿಸಿದ್ದು ಇಲ್ಲವೇ ಇಲ್ಲ. ಹಾಗೆ ನೋಡಿದರೆ ಮೋದಿ ಸರಕಾರ ಬಂದ ಮೇಲೆ ಅದರ ದಬ್ಬಾಳಿಕೆಯ ವಿರುದ್ಧ, ಹಿಂದೆಂದಿಗಿಂತಲೂ ಹೆಚ್ಚು ಪ್ರತಿಭಟನೆ, ಹೋರಾಟ, ಚಳುವಳಿಗಳನ್ನು ಈ ದೇಶ ಕಾಣುತ್ತಿದೆ. ಆದರೆ ಆ ಎಲ್ಲವೂ ಅಲ್ಲಲ್ಲೇ ಅಡಗುತ್ತಲಿದೆ ಕೂಡ. ರಾಮಮನೋಹರ ಲೋಹಿಯಾ 1962ರಲ್ಲಿ ಬರೆದ ‘ನಿರಾಶಾ ಕೆ ಕರ್ತವ್ಯ’ ಬರಹದಲ್ಲಿ ಕಳೆದ 1500 ವರ್ಷಗಳಿಂದ ದೇಶದಲ್ಲಿ ಜನತೆ ಆಂತರಿಕ ದಬ್ಬಾಳಿಕೆಗಾರನ ವಿರುದ್ಧ ಒಮ್ಮೆಯೂ ಬಂಡೆದ್ದಿಲ್ಲ ಎನ್ನುತ್ತಾರೆ. ಆಳುವವ ದಬ್ಬಾಳಿಕೆಗಾರನಾದರೆ ಅಂಥವನ ವಿರುದ್ಧ ಬಂಡೇಳುತ್ತಾರೆ, ಕಾನೂನು ಉಲ್ಲಂಘಿಸುತ್ತಾರೆ, ಕಟ್ಟಡಗಳನ್ನು ಧ್ವಂಸಗೊಳಿಸುತ್ತಾರೆ ಇಲ್ಲವೇ ಅವುಗಳನ್ನು ವಶಪಡಿಸಿಕೊಳ್ಳುತ್ತಾರೆ, ದಬ್ಬಾಳಿಕೆಗಾರನನ್ನು ಬಂಧಿಸುತ್ತಾರೆ, ಅವನನ್ನು ಗಲ್ಲಿಗೇರಿಸುತ್ತಾರೆ. ಇಂಥ ಪ್ರಸಂಗಗಳು 1500 ವರ್ಷಗಳೀಚೆ ಭಾರತದಲ್ಲಿ ನಡೆದಿಲ್ಲ ಎನ್ನುತ್ತಾರೆ. ಮುಂದುವರಿದು ಅವರು 1500 ವರ್ಷಗಳ ಅಭ್ಯಾಸ ಬಲದಿಂದ ಶರಣಾಗತಿಯನ್ನು ತನ್ನ ರಕ್ತ, ಮಾಂಸದ ಒಂದಂಗ ಮಾಡಿಕೊಂಡಿದೆಯೆನ್ನುತ್ತಾರೆ. ಇದು ನಿಜವೂ ಹೌದೆನ್ನಿಸುತ್ತದೆ. ಗುಜರಾತಿನ ದಲಿತರ ಹೋರಾಟ, ಬುದ್ದಿಜೀವಿಗಳ ಹತ್ಯೆಗಳ ವಿರುದ್ಧದ ಪ್ರಶಸ್ತಿ ವಾಪಸಾತಿ ಚಳುವಳಿಗಳು, ಜೆ.ಎನ್.ಯು., ಅಹಮದಾಬಾದ್, ಹೈದರಾಬಾದ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಚಳುವಳಿಗಳು, ಕೊಲೆ ಅತ್ಯಾಚಾರಗಳ ವಿರುದ್ಧದ ಹೋರಾಟಗಳು, ಭೂಮಿ ನಮ್ಮ ಹಕ್ಕು ಎನ್ನುವ ಸತ್ಯಾಗ್ರಹಗಳು, ನೀರಿಗೆ ಸಂಬಂಧಿಸಿದ ಹೋರಾಟಗಳಿಂದ ಹಿಡಿದು ಕೆಲವು ಹೊಡಿ ಬಡಿ ಎಂಬಂತಹ ಹೇಳಿಕೆಗಳ ತನಕ ಪ್ರಭುತ್ವದ ವಿರುದ್ಧ ನಡೆಯುತ್ತಿರುವ ಎಲ್ಲ ಹೋರಾಟಗಳೂ ಶಕ್ತಿಮೀರಿ ನಡೆಯುತ್ತಿದ್ದರೂ ಅದು ಪ್ರಭುತ್ವವನ್ನು ಅಲ್ಲಾಡಿಸುವಲ್ಲಿ, ನ್ಯಾಯ ದೊರಕಿಸುವಲ್ಲಿ ಅಂಥ ಪರಿಣಾಮ ಬೀರಲಿಲ್ಲವೆಂದು ಕಾಣುತ್ತದೆ ಅಥವಾ ಅಂಥ ತೀವ್ರ ಹೋರಾಟಗಳಿಗೂ ಒಂದಿನಿತೂ ಬಗ್ಗದಂತಹ ಮೊಂಡು ವ್ಯವಸ್ಥೆಯೊಂದು ಭಾರತವನ್ನು ಆಳುತ್ತಿದೆ ಎನ್ನಬಹುದೇನೋ!

ಲೋಹಿಯಾ ಹೇಳುತ್ತಾರೆ: ‘ಶರಣಾಗತಿಯನ್ನು ನಮ್ಮ ದೇಶದಲ್ಲಿ ಹೀಗೆ ಸುಂದರವಾಗಿ ಬಣ್ಣಿಸಲಾಗುತ್ತದೆ: ‘ನಮ್ಮ ದೇಶ ತುಂಬ ಸಮನ್ವಯಿಯಾಗಿದ್ದು ಎಲ್ಲ ಒಳ್ಳೆಯ ವಿಚಾರಗಳನ್ನ ಅಂಗೀಕರಿಸುತ್ತದೆ’ ಎಂದು. ವಾಸ್ತವದಲ್ಲಿ ಸಮನ್ವಯ ಎರಡು ರೀತಿಯದ್ದಾಗಿರುತ್ತದೆ. ಒಂದು ದಾಸನ ಸಮನ್ವಯ, ಇನ್ನೊಂದು ಪ್ರಭುವಿನ ಸಮನ್ವಯ. ಪ್ರಭು ಅಥವ ಬಲಶಾಲಿ ದೇಶ ಅಥವಾ ಬಲಶಾಲಿ ಜನ ಸಮನ್ವಯ ಸಾಧಿಸಿದರೆ, ಅನ್ಯರ ಯಾವ ವಿಚಾರ ಒಳ್ಳೆಯದು, ಯಾವ ವಿಧದಲ್ಲಿ ಅದನ್ನು ಅಂಗೀಕರಿಸಿದರೆ ನಮ್ಮ ಶಕ್ತಿ ವೃದ್ಧಿಸಬಲ್ಲದು ಎನ್ನುವುದನ್ನು ಪರಿಶೀಲಿಸಿದ ಮೇಲೆ ಅದನ್ನು ಅಂಗೀಕರಿಸುತ್ತಾನೆ. ಆದರೆ ಸೇವಕ ಅಥವಾ ದಾಸ ಅಥವಾ ಗುಲಾಮ ಅದನ್ನು ಪರಿಶೀಲಿಸಲಾರ. ತನ್ನ ಗಮನಕ್ಕೆ ಯಾವುದೇ ಹೊಸ ವಿಚಾರ, ಅನ್ಯರ ವಿಚಾರ ಬಂದರೆ ಅದು ಪ್ರಭಾವಶಾಲಿಯಾಗಿದ್ದರೆ ಅದನ್ನು ಸ್ವೀಕರಿಸಿಬಿಡುತ್ತಾನೆ. ಅದು ಗತ್ಯಂತರವಿಲ್ಲದೆ ಸ್ವೀಕರಿಸುವ ಪ್ರಸಂಗ’ ಎಂದು. ನೋಟ್ ರದ್ಧತಿ, ಜಿಎಸ್ಟಿ ಹೇರಿಕೆ, ಬೆಲೆ ಏರಿಕೆ ಇತ್ಯಾದಿಗಳಾದಾಗ ಆದದ್ದೂ ಇದೇ ಎಂದು ನನಗನಿಸುವುದು.

ಇದೇ ಬರಹದ ಮುಂದುವರಿದ ಭಾಗದಲ್ಲಿ ಲೋಹಿಯಾ ಹೀಗೆ ಹೇಳುತ್ತಾರೆ: ‘ನಮ್ಮ ದೇಶದಲ್ಲಿ ಬಹುತೇಕ ಇದೇ ತೆರನ ಸಮನ್ವಯ ನಡೆದಿದೆ. ಅದರ ಪರಿಣಾಮವಾಗಿ ಮನುಷ್ಯ ತನ್ನತನಕ್ಕಾಗಿ- ಸ್ವಾತಂತ್ರ್ಯವೂ ಅದರ ಒಂದು ಅಂಗ-ತನ್ನ ಅಸ್ತಿತ್ವಕ್ಕಾಗಿ ಹೋರಾಡಲು, ಪ್ರಾಣವನ್ನೇ ಪಣಕ್ಕಿಡಲು ಅಷ್ಟಾಗಿ ಮುಂದೆ ಬರುವುದಿಲ್ಲ. ಅವನು ತಲೆಬಾಗುತ್ತಾನೆ ಮತ್ತು ಸ್ಥಿರತೆಯ ಹಂಬಲವೂ ಮೂಡುತ್ತದೆ. ಎಷ್ಟೇ ಬಡವನಾಗಿರಲಿ, ಎಷ್ಟೇ ಅನಾರೋಗ್ಯದಿಂದ ಬಳಲುತ್ತಿರಲಿ, ಶರೀರ ಕೊಳೆತುಹೋಗುತ್ತಿದ್ದರೂ ತನ್ನ ಜೀವಕ್ಕಾಗಿ ಹಾತೊರೆಯುವವರನ್ನು ನಿಮ್ಮ ದೇಶದಲ್ಲಿ ಎಲ್ಲೆಲ್ಲೂ ಕಾಣುವಿರಿ. ಯಾವುದೇ ಕಾರ್ಯ ನಿರ್ವಹಿಸುವಾಗ ಅಲ್ಲಿ ತಮ್ಮ ಪ್ರಾಣಕ್ಕೆ ಅಪಾಯವಿದೆಯೋ ಎನ್ನುತ್ತಿರುತ್ತಾರೆ. ಮನುಷ್ಯನು ಬಡವನಾದಷ್ಟೂ ಹಣಕ್ಕಾಗಿ ಹಪಾಹಪಿ ಹೆಚ್ಚುತ್ತದೇನೋ ಅನಿಸುತ್ತದೆ. ಒಟ್ಟಾರೆ ಒಂದು ವಿಚಿತ್ರ ಸನ್ನಿವೇಶ ನಿರ್ಮಾಣವಾಗುತ್ತದೆ. ಶರೀರ ದುರ್ಬಲವಾಗಿದೆ. ಜೇಬು ಬರಿದಾಗಿದೆ. ಆದರೆ ಇಲ್ಲಿ ಮನುಷ್ಯನಿಗೆ ಹಣ ಮತ್ತು ಜೀವದ ಬಗೆಗೆ ಅದೆಷ್ಟು ವ್ಯಾಮೋಹವೆಂದರೆ ಅವನು ಎಂದೂ ಸಾಹಸಕ್ಕೆ ಇಳಿಯಲಾರ. ಸಾಹಸಕ್ಕೆ ಮುಂದಾಗದ ಸಂದರ್ಭದಲ್ಲಿ ಏನೂ ಸಾಧ್ಯವಾಗುವುದಿಲ್ಲ. ಕ್ರಾಂತಿ ಅಸಂಭವವೇ ಆಗಿಬಿಡುತ್ತದೆ. ಆದರೂ ಕ್ರಾಂತಿಯ ವಿಚಾರ ಮಾತನಾಡುವಾಗ ‘ಅಸಂಭವ’ ಶಬ್ದ ಬಳಸಲಾರೆ’ ಎನ್ನುತ್ತಾರೆ. ಲೋಹಿಯಾರ ಮಾತುಗಳು ನನಗೆ ನಿಜ ಎನಿಸಿಬಿಡುತ್ತವೆ. ಈ ದಿನಗಳಲ್ಲಿ ಕೆಲವರೇ ಹೋರಾಟದ ಕಣಕ್ಕಿಳಿದು ಗುದ್ದಾಡುತ್ತಿರುವುದನ್ನು ಬಿಟ್ಟರೆ ಪ್ರಭುತ್ವತ ದಬ್ಬಾಳಿಕೆ, ತಪ್ಪು ನಿರ್ಧಾರ, ದುರಾಡಳಿತದಿಂದ ದಿನನಿತ್ಯ ಹೈರಾಣಾಗುತ್ತಿರುವ ಜನಸಾಮಾನ್ಯ ತುಟಿ ಎರಡು ಮಾಡುತ್ತಿಲ್ಲ. ಲೋಹಿಯಾ ಹೇಳುವಂತೆ ಕ್ರಾಂತಿಯ ಅವಶ್ಯಕತೆ ಯಾರಿಗಿದೆಯೋ ಅವರಲ್ಲಿ ಶಕ್ತಿಯೇ ಇಲ್ಲವಾಗಿದೆ. ಅವರು ಜಾಗೃತರಾಗಿ ಅದಕ್ಕಾಗಿ ಹಂಬಲಿಸಲಾರರು. ಯಾರಿಗೆ ಕ್ರಾಂತಿ ಮಾಡುವ ಸಾಮರ್ಥ್ಯವಿದೆಯೋ ಅವರಿಗೆ ಕ್ರಾಂತಿ ಬೇಕಿಲ್ಲ ಅಥವಾ ಅವರು ಆ ಮನೋಧರ್ಮದವರಲ್ಲ. ಸ್ಥೂಲವಾಗಿ ರಾಷ್ಟ್ರೀಯ ನಿರಾಶೆಯ ಸ್ಥಿತಿಯಿದು.

ಲೋಹಿಯಾ ವಿದ್ಯಾರ್ಥಿಗಳು, ಯುವ ಜನರು ಕೆಚ್ಚೆದೆಯಿಂದ ಕ್ರಾಂತಿಗಿಳಿಯಬೇಕೆನ್ನುತ್ತಾರೆ. ಆದರೆ ನಮ್ಮಲ್ಲೀಗ ವಿದ್ಯಾರ್ಥಿ ಮತ್ತು ಯುವ ಸಮುದಾಯಗಳನ್ನೇ ಗುರಿಯಾಗಿಟ್ಟುಕೊಂಡು ಜಾತಿ ಧರ್ಮದ ವಿಷ ಉಣಿಸಲಾಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿ ಅಥವಾ ಅವರ ನಿರುದ್ಯೋಗದ ಖಾಲಿತನವನ್ನು ಅವರ ಮೆದುಳುಗಳಿಗೆ ಧರ್ಮದ ನಂಜುಣಿಸುವ ಕೆಲಸಗಳಿಗೆ ಬಳಸಲಾಗುತ್ತಿದೆ. ಮತ್ತು ಇದನ್ನು ಮಾಡುತ್ತಿರುವವರು ಸುರಕ್ಷಿತವಾಗಿದ್ದುಕೊಂಡು ನಮ್ಮ ಮಕ್ಕಳನ್ನೇ ನಮ್ಮ ಮಕ್ಕಳ ವಿರುದ್ಧವೇ ಹೊಡೆದಾಡಿ ಸಾಯಲು ಅಣಿಗೊಳಿಸಲಾಗುತ್ತಿದೆ.

ಡಿ.ವಿ.ಜಿ.ಯವರ ಕಗ್ಗದ ಪದ್ಯವೊಂದು ಇಲ್ಲಿ ನೆನಪಾಗುತ್ತದೆ...

"ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ II "

ಚುನಾವಣೆಗಳು ಹೊಸ್ತಿಲಲ್ಲಿ ನಿಂತಿರುವ ಹೊತ್ತಲ್ಲಿ ಅರಾಜಕತೆಗಳು ಇನ್ನಷ್ಟು ಮತ್ತಷ್ಟು ಹೆಚ್ಚುತ್ತಿರುವ ಹೊತ್ತಲ್ಲಿ ಹಿರಿಕಿರಿಯರೆನ್ನದೆ ಒಗ್ಗೂಡಿ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ. ನಮ್ಮ ನೆಮ್ಮದಿಯ ಬದುಕುಗಳಿಗೆ ಬೇಕಾಗಿರುವುದು ಯಾವುದೋ ಬಣ್ಣದ ಬಾವುಟಗಳೋ,ಇನ್ಯಾವನದ್ದೋ ಪ್ರತಿಮೆಯೋ,ಯಾವುದೋ ಮಂದಿರವೋ ಅಲ್ಲ..ಸಾಮಾನ್ಯ ಜನರ ನಾಡಿಮಿಡಿತಗಳನ್ನು ಅರ್ಥೈಸಿಕೊಂಡು ಸಂತೈಸಬಲ್ಲ ವ್ಯವಸ್ಥೆ..ಅದು ಯಾವ ಪಕ್ಷದ್ದಾದರೂ ಆಗಿರಲಿ..ಯಾಕೆಂದರೆ,ಈಗ ಯಾವ ಪಕ್ಷಗಳಿಗೂ ಅಂತಹ ಹೇಳಿಕೊಳ್ಳುವಷ್ಟು ವ್ಯತ್ಯಾಸಗಳಿಲ್ಲ..

ಅಂಥದ್ದೊಂದು ವ್ಯವಸ್ಥೆ ಬರುತ್ತದೆ ಅಂತೀರ?

ನೋಡೋಣ...ಆಶಾವಾದಿಗಳೋಣ..ಅಲ್ಲವೆ?

Monday 5 March 2018

ಹುಚ್ಚುಖೋಡಿ ಮನಸು - ೯

ನಿನ್ನ ದೇಹದ ಲಿಪಿ
ಯಾವ ಭಾಷೆಯದ್ದು?
ನನಗೊಬ್ಬನಿಗಾದರೂ ಹೇಳಿಬಿಡು..
ಅನುವಾದಿಸುತ್ತೇನೆ
ಅರ್ಥೈಸಿಕೊಳ್ಳುತ್ತೇನೆ..!
ನನ್ನೊಲವೇ....
ಬದುಕಿನ ಹಾಳೆಯ ತುಂಬ
ನಿನ್ನದೇ ಕವಿತೆಗಳು
ಹೀಗೆಯೇ ಕಳಿಸುತ್ತಿರುತ್ತೇನೆ
ಓದಿಕೋ...ಅರ್ಥೈಸಿಕೋ..
ರಾಯಭಾರಿಯಾಗಲಿ ಬಿಡು
ರಾತ್ರಿ ಬೀಳುವ ಕನಸು...!
ಅಂದಿತ್ತು ನೋಡು
ನನ್ನ 'ಹುಚ್ಚುಖೋಡಿ ಮನಸು'!!!

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...