Monday 9 November 2020

ಸಾವೂ ಕೂಡಾ ಹಸಿವಿನಿಂದ ಸಾಯುತ್ತದೆ!


 ಸಹರೀ ಇಲ್ಲದ ಉಪವಾಸ ನನ್ನದು..

ಇಫ್ತಾರಿನ ಹಂಗೇಕೆ ಹೇಳು?

ಕಣ್ಣೀರ ಜೊತೆ ಅನ್ನ ಬೆರೆಸಿ ತಿನ್ನಲು?

ಬಿರುಗಾಳಿಯ  ದಿಗಿಲಿಲ್ಲ ನನಗೆ..

ನೀರವ ರಾತ್ರಿಯದ್ದೇ ಭಯ!

ಸಾವಿನ ಹೆಗಲ ಮೇಲೆ ಕೈ ಹಾಕಿಕೊಂಡೇ

ಹೆಜ್ಜೆಮೂಡದ ಹಾದಿಯ ಸವೆಸಿದವನು!

ಸಾವಿನೂರಿನ ವಿಳಾಸ ಸಿಗಲೇ ಇಲ್ಲ...

ಅರೇ..ಸಾವಿಗೂ ನನ್ನ ಕಂಡರೆ ಅದೆಂಥ ಉಡಾಫೆ!

ಖಾಲಿ ಜೇಬಿನ ಫಕೀರನಿಗೂ ನಕ್ಷತ್ರ ಎಣೆಸುವಾಸೆ!

ಜೋಳಿಗೆಯ ತುಂಬಾ ಬರೀ ಹಾಡುಗಳೇ..

ಅವುಗಳನ್ನೆಲ್ಲಾ ಅಖೈರಾಗಿ ಒಮ್ಮೆಯಾದರೂ

ಎಣೆಸಬೇಕೆನ್ನುವ ನಿನ್ನ ಖಯಾಲಿಗೆ ಏನು ಹೇಳಲಿ?

ಹಸಿವಿನಿಂದ ಆ ಹಾಡುಗಳೆಲ್ಲವೂ ಸತ್ತಿವೆ..

ನೆನಪಿಡು ; ಹಸಿವು ಎಲ್ಲವನ್ನೂ ಕೊಲ್ಲುತ್ತದೆ.

ಸಾವೂ ಕೂಡಾ ಸಾಯುವುದು ಹಸಿವಿನಿಂದಲೇ!





Monday 27 July 2020

'ಹಂಬಲ'



ಆ ಸಾವಿನ ಹಂಬಲ ನೀಡುವ ನಶೆ
ಬದುಕಿನ ಬಟ್ಟಲಿನಲ್ಲಿಲ್ಲ ನೋಡು!
ಹುಟ್ಟುವಾಗಿನ ಮಗುವಿನ ಅಳುವಿಗೂ
ಸಾಯುವಾಗಿನ ಹೆಣದ ನಗುವಿಗದೆಷ್ಟು ಫರಕು!
ಮುಖವಾಡದ ಬದುಕು,ಸಾವಿನ ಮುಂದೆ ಸೋಲಬೇಕು!
ಉಟ್ಟ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದರೂ
ಬೆತ್ತಲೆ ಎನಿಸುವುದೇ ಇಲ್ಲ, ಎಷ್ಟಿವೆಯೋ ಕೃತ್ರಿಮದ ಪದರು?
ಇಲ್ಲಿ ನಗುವಿಗೂ ಒಂದು ಬೆಲೆ,ಅಳುವೂ ಮಾರಾಟದ ಸರಕೇ!
ಸಂಬಂಧಗಳಿಗೊಂದೊಂದು ಬ್ರಾಂಡು,ನೀಟಾದ ಪ್ಯಾಕು!ಹೂಗಳರಳಿದರೆ ಕಂಪಿಲ್ಲ, ಹಕ್ಕಿ ಹಾಡಿದರೆ ಇಂಪಿಲ್ಲ.
ಸುರಿವ ಪುನರ್ವಸು ಮಳೆಯಲ್ಲೇಕೆ ಕಣ್ಣೀರಿನ ಉಪ್ಪು?
ಆಷಾಢದ ತುಂಟ ಗಾಳಿಯಲ್ಲೂ ದೀರ್ಘ ನಿಟ್ಟುಸಿರು!
ಸೋಮಾರಿ ಸೂರ್ಯನ ಬಿಸಿಲು ಮಾತ್ರ ಹೆಣ ಸುಡುವ ಚಿತೆ!
ಮಾತುಗಳನ್ನೆಲ್ಲ ಕೊಲ್ಲಬೇಕು,ಸಾಯುವ ಮೊದಲು.
ಮೌನವನ್ನೂ ಆಚೆಗೆ ಅಟ್ಟಬೇಕು ಎಲ್ಲಕ್ಕೂ ಮೊದಲು.
ಖಾಲಿಯಾಗಬೇಕು,ನಿಸ್ಸಾರವಾಗಬೇಕು,ನಿರ್ಮೋಹಿಯಾಗಬೇಕು.
ಮತ್ತು....
ನಾನಾಗಬೇಕು..ಸಾವಾಗಬೇಕು..ಸಾವಿನ ನಿಃಶಬ್ಧವಾಗಬೇಕು
!





Tuesday 19 May 2020

ಕ್ವೇರಂಟೀನ್ ಕವಿತೆಗಳು - ೦೩

ಕುಂತಿದ್ದಳು ನೋಡಾ...

ಸಾಲಲಿ ಮುಂದೆ, ಭಾರತಾಂಬೆ!!
ಬಾಗಿದ ನಡು,ಬತ್ತಿದ ಕಣ್ಣು..
ಎದೆಯಲ್ಲಿ ಕೀವು ಸುರಿವ ಹುಣ್ಣು!
ಕಾಲು-ತಲೆಯ ಮೇಲೆ ಧೂಳು-ಮಣ್ಣು!!

ಹೊಟ್ಟೆ ಹಸಿದಿದೆ, ಕೇಳುವರಾರು?
ಬದುಕು ಕುಸಿದಿದೆ, ನೋಡುವರಾರು?
ಸನಾತನೆಯಂತೆ,ಧೀರೆಯಂತೆ..ದೈನೇಸಿಯಾಗಿದ್ದಳು.
ಅನ್ನಪೂರ್ಣೆಯಂತೆ,ಆದಿತ್ಯೆಯಂತೆ..ಕೈಯೊಡ್ಡಿದ್ದಳು!!

ಅದೇನೋ ರೋಗವಂತೆ, ಭಿಕ್ಷೆ ಬೇಡಬಾರದಂತೆ!
ಮಾಸ್ಕು ಹಾಕಿಕೊಳ್ಳಬೇಕಂತೆ, ದೂರ ನಿಲ್ಲಬೇಕಂತೆ!
ಹೊಟ್ಟೆಗೆ ಹಾಕುವ ಮಾಸ್ಕುಗಳಿಲ್ಲವೇ?ಹಸಿವ‌ ಮುಚ್ಚಲು?
ಹಸಿವಿಗಿಂತ ಭೀಕರ ರೋಗ ಯಾವುದಿದೆಯಂತೆ?
ಈ ಶತಕೋಟಿ ಮಕ್ಕಳ ತಾಯಿಯ ಅದೇ ಹಳೆಯ ಪ್ರಶ್ನೆ!!

ತಲೆ ನರೆತ ಈ ಬಡಕಲು ಮುದುಕಿಗೆ
ಅದೆಂಥ ಜೀವನಪ್ರೀತಿ ನೋಡು!
ಇನ್ನೂ ಹಡೆಯುತ್ತಲೇ ಇದ್ದಾಳೆ, ಅಗಣಿತ ಪಾಪ ಸಂಕುಲವ!
ಜಾತಿ-ಧರ್ಮ,ಪಂಥ-ಪಂಗಡಗಳ ತೊಟ್ಟಿಲಿಗೆ ಹಾಕಿ..
ಅದೇನೋ ಸಂವಿಧಾನದ ಜೋಗುಳ ಹಾಡುತ್ತಿದ್ದಾಳೆ!
ಅರ್ಥ ಮಾಡಿಕೊಂಡ ಕೂಸುಗಳಿಗೆ ಸುಖದ ನಿದ್ದೆ!
ಆಗದಿದ್ದವುಗಳ ರಚ್ಚೆಗೆ ಹೈರಾಣಾಗಿದ್ದಾಳೆ ಪಾಪದ ಮುದುಕಿ!



Monday 18 May 2020

ಕ್ವೇರಂಟೀನ್ ಕವಿತೆ - ೦೨

ಅವರಾರೂ ಎಲ್ಲಿಂದಲೋ ಬಂದವರಲ್ಲ
ಮಣ್ಣ ಮಡಿಲಿನಿಂದ ಬಂದವರು!
ಮಣ್ಣ ಬಗೆದು,ಅನ್ನ ಬೆಳೆದಿದ್ದವರು!
ಹಸಿವ ನೀಗಿದ್ದವರು,ಖುಷಿಗೆ ಮಾಗಿದ್ದವರು!

ಅವರ‌್ಯಾಕೋ..ನಗರಗಳಿಗೆ ಗುಳೆ ಬಂದರು.
ಚರಂಡಿ ತೋಡಿದರು,ಮಹಲಿಗೆ ಮಣ್ಣ ಹೊತ್ತರು.
ಕೇಬಲ್ಲುಗಳನ್ನು ಎಳೆದರು,ಗೇಟುಗಳಿಗೆ ಕಾವಲಾದರು!
ಗುಳೆ ಬಂದವರಿಗೆಲ್ಲಾ ಹಳ್ಳಿ ನೆನಪಿತ್ತು..ಹಸಿವು ತಡೆದಿತ್ತು.

ಒಂದು ದಿನ ಕೆಲಸವಿಲ್ಲ ನಿಮಗೆ ಅಂದರು..
ಕೊರೋನ ಇದೆ ನಡೆ ಅಂದರು, ಬಾಗಿಲು ಮುಚ್ಚಿದರು.
ಅವರೇ ಮಣ್ಣುಹೊತ್ತು ಮಾಡಿದ ರಸ್ತೆ....
ಹಿಡಿದು ನಡೆದರು,ನಡೆದೇ ನಡೆದೇ ಸತ್ತರು ಕೆಲವರು!
ಅವರಿಗೇನು ಹೂವಿನ ಹಾದಿಯಾಗಲಿಲ್ಲ ಆ ರಸ್ತೆ! 
ಅವರು ಕಟ್ಟಿದ ಮಹಲುಗಳಲ್ಲಿ ನೆರಳಿರಲಿಲ್ಲ!

ಯಾರೋ ಬಿಳಿಬಟ್ಟೆಯವರು,ಕನ್ನಡಕದವರು..
ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದರು.
ಎರಡು ಬಾಳೆಹಣ್ಣೋ..ಒಂದು ಬಿಸ್ಕತ್ತೋ ಕೊಡುತ್ತಿದ್ದರು
ಫೋಟೋ ತೆಗದುಕೊಂಡು, ಪೇಪರಿಗೆ ಹಾಕಿಕೊಂಡು
ನಿಮ್ಮ ಜೊತೆ ನಾವಿದ್ದೇವೆ..ಹೆದರಬೇಡಿ ಎನ್ನುತ್ತಿದ್ದರು.
ಬೊಬ್ಬೆ ಎದ್ದ ಮಕ್ಕಳ ಕಾಲಿಗೆ ಚಪ್ಪಲಿ ಕೊಡಿಸಲಿಲ್ಲ ಯಾರೂ!

ನಾಗರೀಕತೆ ಇತಿಹಾಸವಾಗುತ್ತದೆ! ನೆನಪು ಸಾಯುತ್ತವೆ.
ಬಳಿದ ಬಣ್ಣಗಳೆಲ್ಲವೂ ಮಾಸಲೇಬೇಕು!
ಕಟ್ಟಿದ ಮಹಲುಗಳೂ ಮಣ್ಣಾಗಲೇಬೇಕು!
ಕಾಲ...
ಭಾಷಣ ಕುಟ್ಟಿದವರನ್ನು ಮೆರೆಸುತ್ತದೆ;
ಕಲ್ಲು ಹೊತ್ತವರನ್ನು ಮರೆಸುತ್ತದೆ!

ನಾಗರೀಕತೆಯ ಕಟ್ಟಡಕ್ಕೆ ಬುನಾದಿ ಅಗೆದವರು,
ರಸ್ತೆಗೆ ಜಲ್ಲಿ ಹೊತ್ತು ಟಾರಿನ ಜೊತೆ ಬೆವರು ಸುರಿದವರು,
ಬರೀ ಹೊಟ್ಟೆಯಲ್ಲಿ ಅದೇ ರಸ್ತೆಯಲ್ಲಿ ಗೂಡಿಗೆ ಮರಳುತ್ತಿದ್ದಾರೆ.
ಬದುಕಿ ಬಂದಾರೆಂದು...ಎದೆಗೆ ತಾಕುವರೆಂದು
ಅವರ ಹೊಲದ ಮಣ್ಣಿಗೆ ಅದೇನೋ ಅದಮ್ಯ ನಂಬಿಕೆ!




Sunday 17 May 2020

ಕ್ವೇರಂಟೀನ್ ಕವಿತೆಗಳು -೧


ಗುಡುಗು,ಮಿಂಚು,ಸಿಡಿಲ ಮೇಳದ
ಭವ್ಯ ಮೆರವಣಿಗೆಯಲ್ಲಿ ನಿನ್ನೆ ನನ್ನೂರಿಗೆ ಬಂದ,
ಆ ಕುಂಭದ್ರೋಣದ ಮುಂಗಾರಿನ ಮಳೆಗೆ
ಲಾಕ್ ಡೌನ್ ಹಾಕಲಾದೀತೇನು?
ಮೊದಲ ಮಳೆ ಸ್ಪರ್ಶಕೆ ಘಮ್ಮನೆ ಹೊಮ್ಮುವ
ಮಣ್ಣವಾಸನೆಗೆ ಕ್ವಾರಂಟೀನ್ ಮಾಡುವಿರೇನು?

ಮಳೆಗೇ ಕಾದಿದ್ದು, ಬಂದೊಡನೇ ಪುತಪುತನೇ
ಟಿಸಿಲೊಡೆದು ಚಿಗುರಿ ಹಬ್ಬುವ ಲಕ್ಷ ಅಕ್ಷಯ
ಸಸ್ಯರಾಶಿಗೆ ಅದ್ಯಾವ ಸಾಮಾಜಿಕ ಅಂತರವಿತ್ತು?
ಅರೇ..ಆ ಹೆಜ್ಜೇನು ಹೊಟ್ಟಿನದ್ಯಾವ ಅಂತರ?
ಬಣ್ಣಬಣ್ಣದ ಕೀಟರಾಶಿಗೆ,ಪತಂಗ ಸಹಸ್ರಕ್ಕೆ..
ನಾಕಾಬಂದಿ ಹಾಕಿ, ತಡೆಯಬಲ್ಲಿರೇನು?

ಮಾವಿನ ಚಿಗುರು ಮೆದ್ದ ಕೋಗಿಲೆಯ ಇನಿದನಿಯ
ಅರಳಿದ ಹೂ ಮೇಲೆ ಪಟಪನೆ ಹಾರುವ ದುಂಬಿಯ
ಚಿಗುರು ಹುಲ್ಲನರಸಿ ಎಲ್ಲಿಂದಲೋ ಬಂದ ಮೊಲವ
ಹಿಡಿದು ಮುಂಗೈಗೆ ಸೀಲು ಹಾಕುವಿರೇನು?

ಈ ಕರೊನ ಬಂದದ್ದು ಪ್ರಕೃತಿಗಲ್ಲ, ಪ್ರಕೃತಿಯಿಂದಲೂ ಅಲ್ಲ.
ಮಾನವ ವಿಕೃತಿಗೆ, ಧರ್ಮ-ಜಾತಿಗೆ,ಮತ್ತು ಅರಿವೆಂಬ ಅಜ್ಞಾನಕ್ಕೆ!! 

Wednesday 22 April 2020

ಕ್ವೇರಂಟೀನ್ ಕವಿತೆಗಳು -೦೪

ಈ ಸಾವು ಬಂದು ಬಾಗಿಲು ತಟ್ಟಿದರೆ
ಕದ ತೆರೆಯುವುದು ಒಳಗಿದ್ದ ಹಸಿವೇ!
ಆ ರೋಗ,ಹಸಿವನ್ನು ಸಾಯಿಸಲಾರದು..
ಸಾವಿಗೂ ಹಸಿವೆಂದರೆ ಅವ್ಯಕ್ತ ಭಯ ನೋಡು!
ಹಾಗಾಗಿಯೇ.......
ಬಡತನಕ್ಕೆ ಕಾಲು ಚಾಚಿ ಮಲಗುವಷ್ಟು ನಿರಾಳತೆ!

ಈಗೀಗ ಅನ್ನವೂ ಕೂಡ 
ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆಯೇನೋ..
ಬಡವರಿಂದ,ಶ್ರಮಿಕರಿಂದ ಅದು ದೂರ ದೂರ!
ಬೀಜ ಬಿತ್ತಿ ಬೆವರು ಬಸಿದು ಬೆಳೆದವನ ಹೊಟ್ಟೆ ಸತ್ತಿದೆ.
ಗಿಲೀಟು ಮಾಡುವ ಜನರ ಹೊಟ್ಟೆಯ ಗಾತ್ರ ನೋಡು!
ಹಾಗಾಗಿಯೇ.....
ಭೂಮಿಗೂ ಮಳೆಗೂ ಅಪಾತ್ರರಿಗೆ ಅನ್ನವಿಕ್ಕುವ ಲೋಪ!!

ಹಸಿವನ್ನು ಕೊಲ್ಲುವ ರೋಗವಿರಬೇಕಿತ್ತು.
ಹಸಿವನ್ನು ಕೊಲ್ಲುವ ಔಷಧವಾದರೂ ವಿಷವಾದರೂ ಸರಿ.
ಅನ್ನಭಾಗ್ಯದ ಸರ್ಕಾರ,ಆ ರೋಗವನ್ನು ವಿತರಿಸಬೇಕಿತ್ತು.
ಹೌದು ಬರೀ ಬಿಪಿಎಲ್ಲು,ಅಂತ್ಯೋದಯದ ಆರ್ಥಿಗಳಿಗಾಗಿ.
ಹಾಗಾಗಿದ್ದಿದ್ದರೆ......
ಹಸಿವಿರುತ್ತಿರಲಿಲ್ಲ..ಬಡವರಿರುತ್ತಿರಲಿಲ್ಲ..ಭಾಗ್ಯಗಳಿರುತ್ತಿರಲಿಲ್ಲ.
ದೇಶ ಶ್ರೀಮಂತರಿಂದ ಶ್ರೀಮಂತವಾಗಿರುತ್ತಿತ್ತು...!!!


Friday 7 February 2020

"ವಾಗ್ದಾನ"

ಕುಂಟು ಬಿದ್ದ ಈ ದರವೇಶಿ ಬದುಕನೆತ್ತಿ ಕೈ ಹಿಡಿದು
ನಡೆಸುತ್ತೇನೆಂಬ ನಿನ್ನ ವಾಗ್ದಾನಕ್ಕೀಗ ಹತ್ತು ವರ್ಷ!
ಅವತ್ತು ಕೇಳಿಸಿಕೊಂಡಿದ್ದ ಆ ಹುಣಸೆಮರದಲ್ಲಿದ್ದ
ಕುಂಟಗುಬ್ಬಿಯೂ ಮುದಿಯಾಗಿ ಸತ್ತು ಮಣ್ಣಾಗಿರಬೇಕು!
ಅವತ್ತು ಬಿಡದ ಜಡಿಮಳೆ,ಬಾನಲ್ಲೊಂದು ಕಾಮನಬಿಲ್ಲು!

ಮತ್ತೆ ಮಳೆ ಬರಲಿಲ್ಲ ಬಿಡು...ಒಂದು ಹನಿಯೂ ಕೂಡ!
ಬದುಕಭೂಮಿಯ ಹಸಿರ ಹಸಿವು,ಬಿಸಿಲ ಹಂಚಿನ ಮೇಲೆ ಸತ್ತಿತ್ತು!
ಒಡೆದ ಕಾಲುಗಳಲ್ಲಿ ಒಸರಲು ರಕ್ತವಾದರೂ ಇತ್ತೇನು?
ನಿನ್ನ ಹೆಜ್ಜೆ ಮೂಡದ ಹಾದಿಯ ದಿಕ್ಕಿಗೆ ಸೂರ‌್ಯೋದಯವಾಗಲಿಲ್ಲ.
ಆ ಕುಂಟಗುಬ್ಬಿಯದ್ದೂ ಅಂಥದ್ದೇ ಹಾದಿಯಾಗಿತ್ತಲ್ಲವೇ?

ಇನ್ನೂ ಉಸಿರಿದೆ.ಬರುವ ಮಳೆಗೆ ಬೊಗಸೆಯೊಡ್ಡುವ ಆಸೆಗೆ.
ಒಡಲ ಕನಸಬೀಜ ಮೊಳೆಸಿ ಬೆಳೆಸಿ,ಮಾಡಬೇಕು ಸಾವ ಹಾಸಿಗೆ!





Saturday 18 January 2020

"ಬೆಳಕು" ಅಂದರೆ?





"ಬೆಳಕು" ಎಂದರೇನು?
ಈ ವಿಕ್ಷಿಪ್ತ ಪ್ರಶ್ನೆಯನ್ನು
ಇವತ್ತು ಯಾಕೋ ನನ್ನ ಬದುಕಿಗೆ ಕೇಳಿದ್ದೆ.
"ನಿನ್ನನ್ನು ನೀನು ಸುಟ್ಟುಕೊಳ್ಳುವುದು"
ಎಂದು ಗಂಭೀರವಾಗಿ ಉತ್ತರಿಸಿತ್ತು ಬದುಕು!
ಅರ್ಥವಾಗದೆ ಚಡಪಡಿಸಿದ್ದೆ.
ಕೊನೆಗೆ ನನ್ನ ಅಂತರಾತ್ಮವನ್ನೇ ಕೇಳಿಕೊಂಡೆ.
ಹೇಳು ಬೆಳಕೆಂದರೇನು?
"ಬೇರೇನಿಲ್ಲ.ಬೆಳಕೆಂದರೆ ಬೆಳಕು,ಅಷ್ಟೆ"
ಉತ್ತರಿಸಿತ್ತು..ನನ್ನೊಳಗಿನ ಆತ್ಮಸಾಕ್ಷಿ!
ಪ್ರಶ್ನೆಯು ಉತ್ತರದ ಬೆಳಕ ಜೊತೆ ನಕ್ಕಿತ್ತು.
ಉತ್ತರವೂ ಅದೇ ಬೆಳಕಿನಲ್ಲಿ ಉರಿಯುತ್ತಿತ್ತು.
ಪ್ರಶ್ನೆ ಬೆಳೆಯುತ್ತಾ ಬೆಳೆಯುತ್ತಾ
ಉರಿವ ಬೆಳಕಾಯಿತು. ಬೆಳಗಾಯಿತು.
ಪ್ರಶ್ನೆಯೂ ಬೆಳಕೇ. ಉತ್ತರವೂ ಬೆಳಕೇ!

Thursday 9 January 2020

ಏನೂ ಅಲ್ಲ....

ಕಾಲದ ಕದಲುವಿಕೆಯನ್ನು ಅಳೆಯುವುದು ಗಡಿಯಾರದ ಮುಳ್ಳುಗಳೋ ಕ್ಯಾಲೆಂಡರಿನ ಹಾಳೆಗಳೋ ಅಲ್ಲ. ನನ್ನ ನಾಡಿಯ ಪ್ರತೀ ಮಿಡಿತವೂ,ಹೃದಯದ ಪ್ರತೀ ಬಡಿತವೂ ಕಳೆದ ಕಾಲವನ್ನು ಕರಾರುವಕ್ಕಾಗಿ ಅಳೆದು ದಾಖಲಿಸುತ್ತವೆ.

ಪ್ರತೀ ಸೂರ್ಯಾಸ್ತದ ಹೊನ್ನಕಿರಣವೂ ನನ್ನ ಮೈಮೇಲೆ ಬಿದ್ದಾಗ ನನ್ನ ಒಂದು ದಿನದ ಲೆಕ್ಕ ಮುಗಿದಿರುತ್ತದೆ. ಇರುಳಿನ  ಪ್ರತೀ ಪೂರ್ಣ ಚಂದ್ರನೂ ನನ್ನ ಒಂದು ತಿಂಗಳ ಲೆಕ್ಕಚಾರವನ್ನು  ಅನಂತ ವಿಸ್ತಾರದ ಆಗಸದ ಮೇಲೆ ಸ್ಫುಟವಾಗಿಯೇ ಬರೆದುಕೊಳ್ಳುತ್ತಾನೆ.
ನನ್ನ ತಲೆಯಲ್ಲೊಂದು ಬೆಳ್ಳಿಕೂದಲು ಮೂಡಿಸಿ,ಚರ್ಮದಲ್ಲೊಂದು ನೆರಿಗೆ ಮಡಿಸಿ ಗುರುತು ಹಾಕುತ್ತಾನೆ.

ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸಿದ ಅಮೋಘ ಕ್ಷಣ, ಆ ಹನಿಗಳ ತೊನೆಗೆ ಘಮ್ಮನೆ ನೆಲದ ಪರಿಮಳ ಹೊಮ್ಮುವ ಕ್ಷಣ, ಪ್ರಕೃತಿಯ ಅದಾವ ಗೂಢಲಿಪಿಯ ಸಂದೇಶದ ಪರಿಣಾಮದಿಂದಲೋ ಅದೆಲ್ಲೋ ಅವಿತಿದ್ದ ಸಹಸ್ರ ಕೀಟಕೋಟಿಯ ಮೊಟ್ಟೆಗಳೆಲ್ಲ ಬಣ್ಣಬಣ್ಣದ ಮರಿಗಳಾಗಿ ಹುಳುಗಳಾಗಿ ಹಸಿ ನೆಲದ ಮೇಲೆ ಓಕುಳಿ ಮೆರವಣಿಗೆ ಹೊರಡುವ ಕ್ಷಣ....

ಒಣ ಮರಗಳ ರೆಂಬೆ ಸಂದುಗಳಲ್ಲಿ ಹಸಿರ ಚಿಗುರು ಕುಡಿಯೊಡೆವ ಕ್ಷಣ,ಹೊಸ ಚಿಗುರ ಮೆದ್ದ‌ ಕೋಗಿಲೆ, ಅಲ್ಲೆಲ್ಲೋ ಮರೆಯಲ್ಲಿ ಬಾಯ್ತುಂಬಾ ಕೂಗಿ ಕರೆದ ಕ್ಷಣ....

ಆ ಕ್ಷಣ...ನನ್ನ ಹೊಸ ವರ್ಷದ ಪ್ರಾರಂಭ! 
ಅದರ ಸಂಭ್ರಮಾಚರಣೆಗೆ ಇಡೀ ಭೂಮಂಡಲದ ಸೃಷ್ಟಿ ಸಮಸ್ತವೇ ನನ್ನ ಜೊತೆಗೆ ಭಾಗಿಯಾಗುತ್ತದೆ.

ಹಾಗಾಗಿ...ಈ ಜನವರಿ ಒಂದರ ಹೊಸವರ್ಷ ನನಗೆ ಏನೂ ಅಲ್ಲ.ಏನೇನೂ ಅಲ್ಲ.

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...