Saturday 2 September 2017

ಜೋಕುಮಾರನೆಂಬ ಫಲವಂತಿಕೆಯ ಸಂಕೇತ!

ಗ್ರಾಮಭಾರತದಲ್ಲಿ ದೇಸೀ ಹಬ್ಬಗಳು ಈ ಆಧುನಿಕ ಯುಗದಲ್ಲೂ ಪಳೆಯುಳಿಕೆಯ ರೂಪದಲ್ಲಿಯಾದರೂ ಇನ್ನೂ ಆಚರಿಸಲ್ಪಡುತ್ತಿರುವುದು ಅವುಗಳ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.
ಜೋಕುಮಾರನ ಹಬ್ಬ ಅಂಥದೊಂದು ಅಪ್ಪಟ ದೇಸೀಯ,ಜನಪದ ಸಮೃದ್ಧ ಆಚರಣೆ! ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಹುಮುಖ್ಯ ಹಳ್ಳಿ ಹಬ್ಬಗಳಲ್ಲೊಂದು!

ಜೋಕುಮಾರನನ್ನು ಇತ್ತೀಚೆಗೆ ಕೆಲವರು ವೇದ-ಪುರಾಣಗಳಿಗೆಲ್ಲ ಲಿಂಕ್ ಮಾಡಿ,ಅವನನ್ನು ಶಿವನ ಮಗನೆಂದೂ,ಮನ್ಮಥನ ಅವತಾರವೆಂದೂ ಹೇಳುತ್ತಿರುವರಾದರೂ ಅದರ ಬಗ್ಗೆ ಯಾವುದೇ ಉಲ್ಲೇಖಗಳು ಯಾವ ಪುರಾಣಗಳಲ್ಲೂ ಇಲ್ಲ...ಹಾಗಾಗಿ ಜೋಕುಮಾರಸ್ವಾಮಿಯು ಗಣೇಶ,ಶಿವ,ವಿಷ್ಣುವಿನಂಥ ಶಿಷ್ಟ ದೇವತೆಯಲ್ಲ..ವಿಶಿಷ್ಟ ದೈವ! ದುಡಿವ ವರ್ಗದ ಫಲದೈವ!

ಜೋಕುಮಾರಸ್ವಾಮಿಯ ವಿಧ್ಯುಕ್ತ ಆಚರಣೆಯು ಪ್ರತಿ ವರ್ಷ ಗಣೇಶ ವಿಸರ್ಜನೆಯ ನಂತರ ಅಂದರೆ ಭಾದ್ರಪದ ಅಷ್ಟಮಿಯ ದಿನ ಪ್ರಾರಂಭವಾಗುತ್ತದೆ.ಜೋಕುಮಾರ ಹುಟ್ಟುವುದು "ಬಾರೀಕರು" ಎಂಬ ಪಂಗಡದ ಮನೆಯಲ್ಲಿ.ಆ ಜಾತಿಯ ಹೆಂಗಳೆಯರೇ ಅವನನ್ನು ಹಳ್ಳಿಹಳ್ಳಿಗೂ ಹೊತ್ತು ತಿರುಗಿ "ಊರು ಆಡುವ" ಕಾರ್ಯ ಮಾಡುತ್ತಾರೆ.ನಂತರ ಕೆರೆಯೋ ಹಳ್ಳದ ಬದಿಯೋ "ಸಾಯಿಸುವ" ಕಾರ್ಯ ಮಾಡುತ್ತಾರೆ.ಅಂತ್ಯ ಸಂಸ್ಕಾರದ ಜವಾಬ್ದಾರಿ ಮಡಿವಾಳ ಜನಾಂಗದವರದ್ದು..! ಒಟ್ಟು ಜೋಕುಮಾರನ ಆಯಸ್ಸು ಕೇವಲ ಏಳು ದಿನಗಳಷ್ಟೆ!

ಅನಂತನ ಹುಣ್ಣಿಮೆ ಅಥವಾ ಜೋಕುಮಾರನ ಹುಣ್ಣಿಮೆಯ ದಿನ ಜೋಕುಮಾರನ ತಿಥಿಯ ರೂಪದಲ್ಲಿ ಗ್ರಾಮದ ಎಲ್ಲರೂ ಹಬ್ಬ ಆಚರಿಸುತ್ತಾರೆ.ತುಂಬು ಫಸಲಿನ ಹೊಲಗಳಿಗೆ "ಹಸಿರಂಬಲಿ" ಮತ್ತು "ಹಾಲಂಬಲಿ" ಎಂಬ ಚೆರಗವನ್ನು ಚೆಲ್ಲುತ್ತಾರೆ.ಫಸಲನ್ನು ಪೂಜಿಸಿ ಎಡೆಯಿಟ್ಟು ನಮಿಸುತ್ತಾರೆ.

ಈ ಹಬ್ಬಕ್ಕಾಗಿಯೇ ಮಾಡುವ "ಮಿದಿಕಿ" ಎಂಬ ವಿಶಿಷ್ಟ ತಿನಿಸಿದೆ.ಬಹುಶಃ ಅದು "ಮೋದಕ" ದ ಇನ್ನೊಂದು ರೂಪವಿರಬಹುದು.ಸಜ್ಜೆ,ಗೋಧಿ,ಬೆಲ್ಲಗಳಿಂದ ತಯಾರಿಸುವ ಈ ಮಿದಿಕೆಯನ್ನು ಜೋಕುಮಾರನ ಹಬ್ಬ ಹೊರತುಪಡಿಸಿ ಬೇರಾವ ಸಂದರ್ಭದಲ್ಲೂ ನಮ್ಮ ಹಳ್ಳಿಗರು ಮಾಡುವುದಿಲ್ಲ...ಆ ಮಟ್ಟಿಗಿನ ಅನನ್ಯತೆ ಅವನದು!
ಜೋಕುಮಾರ ಮೂರ್ತಿಯ ರೂಪು ಬಹುತೇಕ ಪುರುಷ ಜನನಾಂಗವನ್ನು ಹೋಲುತ್ತದೆ...ಹಾಗೆಯೇ ಜೋಕುಮಾರನನ್ನು ಹೊತ್ತು ತರುವ ಹೆಂಗಸರು ರೈತ ಮಹಿಳೆಯರಿಂದ ಕಾಳು-ಕಡಿ ಹಾಗೂ ಜೋಕುಮಾರನಿಗೆ ಪ್ರಿಯವಾದ ಎಮ್ಮೆಯ ಮೀಸಲು ಬೆಣ್ಣೆ ಪಡೆದು,ಅದಕ್ಕೆ ಪ್ರತಿಯಾಗಿ ಜೋಕುಮಾರನ ಜನನೇಂದ್ರಿಯ ಕೂದಲನ್ನೇ ಪ್ರಸಾದ ರೂಪದಲ್ಲಿ ಕೊಡುತ್ತಾರೆ.ರೈತರೂ ಆ ಕೂದಲುಗಳನ್ನು ಭಕ್ತಿಯಿಂದಲೇ ಸ್ವೀಕರಿಸಿ,ತಮ್ಮ ಹೊಲಗಳಿಗೆ ಹಾಕುತ್ತಾರೆ..!

ಹೌದು;ಜೋಕುಮಾರ,ಫಲವಂತಿಕೆಯ ಸಂಕೇತವಾಗಿಯೂ ಆರಾಧಿಸಲ್ಪಡುತ್ತಾನೆ.ರೈತರ ಹೊಲದ ಬೆಳೆಗಳೆಲ್ಲಾ ಕಾಳು ಕಟ್ಟುವ ಸಮಯ ಇದಾಗಿರುವುದರಿಂದ ನಮ್ಮ ಬೆಳೆಗಳು ಜೊಳ್ಳಾಗದಿರಲಿ ಎಂಬುದರ ಅರ್ಥಪೂರ್ಣ ಪ್ರತಿಮಾರಾಧನೆ ಇದು...ಹಾಗೆಯೇ ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಹೆಂಗಳೆಯರಿಗೂ ಈ ಹದಿನೈದು ದಿನಗಳ "ಜೋಕುಮಾರನ ಅಳಲು" ಎಂಬ ಕಟ್ಟಳೆ ಹಾಕಲಾಗುತ್ತದೆ,ಅದರ ಪ್ರಕಾರ ಈ ಅವಧಿಯಲ್ಲಿ ಅವರು ತವರುಮನೆಯಲ್ಲಿ ಇರುವುದು ನಿಷಿದ್ಧವಾಗುತ್ತದೆ..ಗಂಡನ ಜೊತೆಯೆ ಇರಬೇಕಾಗಿರುತ್ತದೆ!!
ಜೋಕುಮಾರನ ಬಗೆಗಿನ ಜನಪದ ಹಾಡುಗಳಂತೂ ಧಂಡಿಯಾಗಿವೆ.ಹಳ್ಳಿಗರ ಕಾಮದೇವನೆಂಬಂತೆ ಅವನನ್ನು ಜನಪದದಲ್ಲಿ ವಿಡಂಬಿಸಲಾಗಿದೆ.

ಬಾಗಾನ ಮಗ ಬಂದು
ಬಾಗೀಲಾಗೇ ಕುಂತಾನವ್ವಾ...
ಬೇಗಾನೇ ಬೆಣ್ಣೆ ಕೊಡಿರವ್ವಾ..
ಬೇಗಾನೆ ಬೆಣ್ಣೆ ಕೊಡಿರವ್ವ ನಮ್ಮ
ಕೊಮಾರ
ಸಾಗಾನೆ ಮರದಾ ಸವಿಮುದ್ದು...
ಅಡ್ಡಡ್ಡ ಮಳೆ ಬಂದು ಒಡ್ಡುಗೋಳೊ
ದಿಡ್ಡಿಗೋದೋ
ನಮ್ಮ ಗೊಡ್ಡು ದನವೆಲ್ಲಾ ಹೈನಾದೋ
......ಹೀಗೇ ಅನೇಕ ಜನಪದ ಹಾಡುಗಳಲ್ಲಿ ಜೋಕುಮಾರನನ್ನು ಹಾಸ್ಯರೂಪದಲ್ಲಿಯೆ ಚಿತ್ರಿಸಲಾಗಿದೆ...!

ಕನ್ನಡದ ಜಾನಪದದ ಬೇರುಗಳು ಇಂದಿಗೂ ಚಿಗುರು ಮುಚ್ಚಿ ಕಂಗೊಳಿಸಿಕೊಂಡಿರಲಿಕ್ಕೆ ಇಂಥ ದೇಸೀಯ ದೈವಗಳ ಕೊಡುಗೆ ಗಮನಾರ್ಹವಾದುದು.
ಆಧುನಿಕತೆ ಎಂಬ ಕೃತಕ ಲೋಕದಲ್ಲಿ ಬದುಕುತ್ತಿರುವ ನಮಗೆ ಪ್ರಕೃತಿಯಾರಾಧನೆಯೇ ಪರಮೇಶ್ವರನ ಆರಾಧನೆ ಎಂಬ ಪರಿಪೂರ್ಣ ಸಂದೇಶ ಕೊಡಲು ಜೋಕುಮಾರಸ್ವಾಮಿ ಪ್ರತೀ ವರ್ಷವೂ ನಮ್ಮ ಹಳ್ಳಿಗಳೆಡೆ ಬರುತ್ತಲಿದ್ದಾನೆ..
ಪೂಜೆಗೊಳ್ಳುತ್ತಿರುವ ಜೋಕುಮಾರ ಸ್ವಾಮಿ.

ಕಾಣಿಕೆ ನೀಡಿಸಿಕೊಳ್ಳುತ್ತಿರುವ ಜೋಕುಮಾರನ ಬಳಗ(ಬಾರೀಕ ಹೆಂಗಳೆಯರು)

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...