Wednesday 3 July 2019

"ಯಾವ ಕವಿತೆ?"


ಸುರಿದ ಆರಿದ್ರೆಯ ಮಳೆ ಹನಿಗೆ
ಬಾಯೊಡ್ಡಿದ್ದವು ಜೀವಗಳೆಲ್ಲ ಬಾನಿಗೆ
ಚಿಗಿತ ಮರದೆಡೆಗೆ,ಓಡಿದೆ ದುಂಬಿ ಜೇನಿಗೆ
ಮೊಳೆತ ಬೀಜದ ಸಾಲು ಕಂಡ ರೈತನಿಗೆ
ಹಾಯೆನಿಸಿ,ಹೊಮ್ಮಿದ್ದು ಯಾವ ಕವಿತೆ?

ಇಲ್ಲಿ ಯಾರೂ ನಿಂತು ಕೇಳಲಿಲ್ಲ
ಅರಳಿದ ಹೂಮೊಗ್ಗಿನಾ ಸವಿಸೊಲ್ಲ
ರವಿಕಿರಣ ಸೋಕಲು ಮೈ ಮೆಲ್ಲ
ತಣ್ಣಗೆ ಅರಳಿದ್ದು ಆಗ ಯಾವ ಕವಿತೆ?

ನಟ್ಟಿರುಳಲ್ಲೇ ಕಂಡ ಬೆಂಕಿಯ ಜ್ವಾಲೆ
ಹಾಗೇ ಹೊತ್ತಿ ಹೀಗೆ ಆರಿತ್ತು ಒಮ್ಮೆಲೆ
ಉರಿದ ಹಾಗೆ ಬಡವರ ಮನೆಯ ಒಲೆ
ಅರೆಕ್ಷಣ ಕಣ್ಣಲರಳಿದ ಕಾಂತಿ ಯಾವ ಕವಿತೆ?

ರಾತ್ರಿ ನಿದ್ದೆಯ ಕನವರಿಕೆ
ಅದಕ್ಕೊಂದಷ್ಟು ಭಾವದ ಬೆರಕೆ
ಒಪ್ಪುವ ಎಲ್ಲಿನದೋ ಚಿತ್ರಿಕೆ
ಅದಕ್ಕೆ ಈ ಬ್ಲಾಗಿನ ಕೂಡಿಕೆ
ಈಗ ನಿಮ್ಮ ಕೈಬೆರಳು ಸವರಿದ
ಬೊಗಸೆ ಅಕ್ಷರದ ಮಾಲಿಕೆ,ಯಾವ ಕವಿತೆ?






Wednesday 12 June 2019

ಸೇವೆಯ ಮಿಡಿತ

ತಾನು ಬೆಂದು ಇರುಳ ಬೆಳಗುವ
ದೀಪದ್ದು - ಒಂದು ಘನತೆಯ ಸಾವು!
ಹೆಣದ ಮೇಲಿಟ್ಟರೂ ಕ್ಷಣ ಹೊತ್ತಾದರೂ
ಕಂಪು ಸೂಸಿಯೇ ಸಾಯುತ್ತದೆ - ಹೂವು!
ತನ್ನ ಕಂದನ ಪಾಲಿನ ಕೆಚ್ಚಲ ಹಾಲನ್ನು
ಕಸಿದು ಕರೆದರೂ- ಹಸುವಿಗಿಲ್ಲ ನೋವು!

ಯಾರಿಗೋಸ್ಕರ ಈ ಮಾವು-ಬೇವು?
ಯಾರಿಗೆ ಆ ಕೋಳಿ ಕೊಡುವ ಮರಿ-ಕಾವು?
ತೆನೆಯ ಜೋಳ ಸೇರುವುದಾದರೂ ಯಾರ ಹಗೇವು?
ಕೊಟ್ಟಿತೇನು ಜೇನ ಹೊಟ್ಟು ಜೇನ ಬದಲು ಕೀವು?
ಇಷ್ಟಕ್ಕೂ ಹಾಕಿದ್ದರಾದರೂ ಯಾರು ಅವಕ್ಕೆ ಮೇವು?
ಯೋಚಿಸಬೇಕಿದೆ..ಒಮ್ಮೆಯಾದರೂ ನಾವು-ನೀವು!
ಮತ್ತೊಂದು ಜೀವಕ್ಕೆ ಮಿಡಿಯದ ಜೀವನ‌ - ನಿತ್ಯ ಸಾವು!
ಇದೇ "ಹೆಜ್ಜೆ ಮೂಡದ ಹಾದಿಯ" ಠರಾವು!






Friday 7 June 2019

"ಹೆಜ್ಜೆ ಮೂಡದ ಹಾದಿ"

ಹಾದಿಯ ಹಂಗಿಲ್ಲ.....ಹಾಡಿನದ್ದೇ ಗುಂಗು!!
ಸಾವಿನೆಡೆ ನಿರ್ಲಿಪ್ತ....ಬದುಕು ಸಂತೃಪ್ತ
ಅಪ್ಪನಿಲ್ಲ , ಮಗನಿಲ್ಲ...ಭಾರವಿಲ್ಲದ ಹೆಗಲು
ಗಮ್ಯವಿಲ್ಲ ,ಗಾಬರಿಯಿಲ್ಲ...ಸರಾಗ ನನ್ನ ಹಗಲು
ಕಾಡಲಿಕ್ಕೆ ಒಂದಷ್ಟು ಕನಸುಗಳಿವೆ!
ಅಲ್ಲಿ ಯಾರದ್ದೋ ಎದೆಯಲ್ಲಿ ಬಿಟ್ಟ ನೆನಪುಗಳಿವೆ!
ಜಗತ್ತಿನ ಸಂಭವ-ಅಸಂಭವಗಳು ಏನಾದರೂ ಆಗಲಿ!
ಆರ್ತ ಜೀವಗಳಿಗೆ ಮರುಗುವ ಮನಸು ನನಗಿರಲಿ!
ಕಾಲ-ಕಾಲು ಕರೆದಲ್ಲಿ ಸಾಗುತ್ತೇನೆ;
ಅದೇ ನನಗೆ ನಿತ್ಯ ಯುಗಾದಿ!
ತೇಕು ಬಂದೆಡೆಯಲ್ಲಿ ನಿಲ್ಲಿಸುತ್ತೇನೆ
ನನ್ನ "ಹೆಜ್ಜೆ ಮೂಡದ ಹಾದಿ"!!





Saturday 23 March 2019

ನಮೋಸ್ತುತೆ

ಮೂಕವಾಗಿದೆ ಕಾಲ, ಈ ಕಾಲ ಬಳಿಯಲ್ಲಿ
ಹಗುರವಾಗಿದೆ ಚಿಂತೆಯ ಭೂಭಾರವಿಲ್ಲಿ!
ಸೃಷ್ಟಿಕರ್ತನೇ ಬಾಗಿ ಕೈ ಮುಗಿದ, ನೋಡಿಲ್ಲಿ!
ಗೆಜ್ಜೆದನಿ ಆಲಿಸಲು ಪ್ರಕೃತಿಯೇ ಮೌನವಿಲ್ಲಿ..

ಅಕ್ಷರಗಳ ಹಂಗಿಲ್ಲದೆ ಮೂಡುತ್ತಿದೆ ಕವಿತೆ
ಕಾರಣವೇ ಇಲ್ಲದೆ ಉಕ್ಕಿದೆ ಆನಂದದ ಧನ್ಯತೆ
ಮಗುವೇ ನಿನ್ನ ಪಾದಗಳಿಗೆ ನಮೋ ನಮೋಸ್ತುತೆ!


Saturday 26 January 2019

ಮೌನದ ಅಂಗಡಿ

ಅವಳದ್ದೊಂದು ಮೌನದ ಅಂಗಡಿ..!
ತೂಕಮಾಡಿ ಮಾರುತ್ತಿದ್ದಳು ಮೌನವನ್ನು!
ಆಗ, ನಾನು ಕೂಡ ಒಂದಷ್ಟು ಉದ್ರಿ ತಂದಿದ್ದೆ.

ಒಂದಷ್ಟು ಮಾತುಗಳು ಸಿಕ್ಕಲಾರವೇ ಹುಡುಗಿ?
ಅದೊಮ್ಮೆ ನಾನೇ ಅವಳನ್ನು ಕೇಳಿದ್ದೆ.
ಸುಮ್ಮನೆ ನನ್ನೆಡೆ ನೋಡಿ ತಲೆಯಾಡಿಸಿದ್ದಳು.
ಸರಿ; ಒಂದಷ್ಟು ಪ್ರೀತಿಯ ಮಾತು ಕೊಡು
ಹಳೆಯ ಬಾಕಿ ಸಮೇತ ಇದನ್ನೂ ತೀರಿಸುವೆ ಅಂದಿದ್ದೆ.

ಮೌನವನ್ನು ತೂಗಿದಂತೆ,ಮಾತು ತೂಗಲಿಲ್ಲ.
ಒಂದೊಂದೇ ಎಣೆಸಿ, ಪೋಣಿಸಿ ಕೊಟ್ಟಿದ್ದಳು!
ನನಗೂ ಅವಳ ಮಾಲು ರುಚಿಸಿತ್ತು..ಲೆಕ್ಕ ಬೆಳೆದಿತ್ತು!

ಅದೊಂದು ದಿನ....
ಅವಳ ಅಂಗಡಿಯ ಬಾಗಿಲು ಮುಚ್ಚಿಬಿಟ್ಟಿತ್ತು.
ಅವಳ ಬಾಕಿಯ ಋಣ ನನ್ನ ಎದೆಯ ಮೇಲಿತ್ತು.

ಹೆಸರಿಲ್ಲದ,ವಿಳಾಸವಿಲ್ಲದ ಅವಳನ್ನು
ನೂರು ಕಡೆ ಹುಡುಕಿದ್ದೆ..ಸಿಗಲೇ ಇಲ್ಲ!!


ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...