ಕೆಲವೊಂದು ಪುಸ್ತಕಗಳಿರುತ್ತವೆ.ಅವುಗಳನ್ನು ಓದುವುದಕ್ಕಿರಲಿ,ಮುಟ್ಟುವುದಕ್ಕೂ ಯೋಗ್ಯತೆ ಬೇಕಾಗುತ್ತದೆ. ನನ್ನೂರಿನ ಹಿರಿಯ ಕವಿವರ್ಯರಾದ ಹಿ.ಮ.ನಾಗಯ್ಯ ಅವರ "ಭವ್ಯ ಭಾರತ ಭಾಗ್ಯೋದಯ" ಅಂತಹ ಪುಸ್ತಕಗಳ ಸಾಲಿನಲ್ಲಿ ಮೊದಲಿಗಿದೆ.
ಈ ಪುಸ್ತಕ ಮೊದಲಿಗೆ ನನ್ನನ್ನು ಆಕರ್ಷಿಸದೇ ಇರಲಿಕ್ಕೆ ಬಹುಶಃ ಅದರ ಬೃಹತ್ ಗಾತ್ರ ಹಾಗೂ ಅದೊಂದು ಛಂದೋಬಂಧ ಕಾವ್ಯ ಎಂಬ ಎರಡು ಕಾರಣಗಳೇ ಇರಬೇಕು.ಕಾವ್ಯಗಳು,ಅದರಲ್ಲೂ ಛಂದಕಾವ್ಯಗಳು ಅಪಾರ ಕಾಲ-ತಾಳ್ಮೆ ಬೇಡುತ್ತವೆ ಅನ್ನುವುದಕ್ಕಿಂತಲೂ ಅವು ಜೀವಿತಪೂರ್ತಿ ನಮ್ಮನ್ನಾವರಿಸಿಬಿಡುವ ಒಂದು ಪ್ರಭಾವಲಯವನ್ನು ಅವು ಸೃಷ್ಟಿಸಿಬಿಡಬಲ್ಲವು!
ಆದರೆ, ಮೊನ್ನೆ ಯಾಕೋ ಅದನ್ನು ಹಿಡಿದು ಸುಮ್ಮನೆ ತಿರುವಿ ಹಾಕುತ್ತಿದ್ದಾಗ, ಛೇ! ಇಂಥದೊಂದು ಅಪೂರ್ವ ಕೃತಿಯನ್ನು ನಾನಿನ್ನೂ ಓದಿಯೇ ಇಲ್ಲವೆಂಬ ಖೇದ ನನ್ನನ್ನು ಕಾಡಿತು!ಓದಿನ ಆಳಕ್ಕೆ ಇಳಿದಂತೆಲ್ಲಾ ಅದರ ಕಾವ್ಯ ಶ್ರೀಮಂತಿಕೆ,ಶಬ್ಧ ಸೌಂದರ್ಯ,ಛಂದಸ್ಸಿನ ಕಟ್ಟು ಮೂಕ ವಿಸ್ಮಿತನನ್ನಾಗಿಸಿತ್ತು.
ರಾಮಾಯಣ,ಮಹಾಭಾರತದಂತಹ ಪುರಾಣಗಳನ್ನಿಟ್ಟುಕೊಂಡು ಅನೇಕರು ಅನೇಕ ಕಾವ್ಯ ರಚಿಸಿದ್ದಾರೆ. ಆದರೆ, ಭಾರತದ ಇತಿಹಾಸವನ್ನು ಅದರ ಸ್ವತಂತ್ರ ಹೋರಾಟದ ಮಜಲಿನಲ್ಲಿ ಕೇಂದ್ರೀಕರಿಸಿ ಮಹಾಕಾವ್ಯ ರಚಿಸಿರುವುದು ನನಗೆ ತಿಳಿದಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಇದೇ ಮೊದಲು!
ಆಧುನಿಕ ಕಾಲದ ಕಾವ್ಯರಚನೆಯಾದ ಕುವೆಂಪು ರವರ "ಶ್ರೀ ರಾಮಾಯಣ ದರ್ಶನಂ" ಕೃತಿಗೇ ಸರಿಸಾಟಿಯಾದಂತಹ ಅಪರೂಪದ ಅನರ್ಘ್ಯ ಕೃತಿ ರತ್ನವೇ ಈ "ಭವ್ಯ ಭಾರತ ಭಾಗ್ಯೋದಯ"!!
ಕೃತಿಯ ಮೊದಲ ಪುಟದ ಅರ್ಪಣೆಯು ಹೀಗಿದೆ :
"ಪೆಂಪೆಸೆದ ಅಮರಸಿರಿ ಭೂವಲಯಕೆರೆಗುವೆನು
ಸಂಪನ್ನೆ ಭಾರತಿಗೆ ಭಕುತಿಯಲಿ ಬಾಗುವೆನು
ಕಂಪೆಸೆದ ಕಸ್ತೂರಿ ಕನ್ನಡಕೆ ನಮಿಸುವೆನು
ಇಂಪೊಗೆಯಲೀ ಎನ್ನ ಕಾವ್ಯಕಾನತನಹೆನು"!!!
ಪ್ರತೀ ಪದ್ಯವು ಹತ್ತು ಸಾಲುಗಳನ್ನೊಳಗೊಂಡಿದ್ದು, ಅಂತಹ ಪದ್ಯಗಳ ಸಂಖ್ಯೆಯೇ ಸುಮಾರು ೩೦,೦೦೦!! ಒಂದೊಂದು ಪದ್ಯವೂ ಅನನ್ಯ! ಸುಮಾರು ಸಾವಿರ ಪುಟಗಳಿಗೂ ಅಧಿಕ ಗಾತ್ರದ ಈ ಪುಸ್ತಕ " ಅಪೂರ್ಣ"( ಕೃತಿ ರಚನೆಯ ಕಾಲದಲ್ಲಿಯೇ ಹಿ.ಮ.ನಾ.ರವರು ನಿಧನ ಹೊಂದಿದರು,ಹಾಗಾಗಿ "ಭಾಗ್ಯೋದಯ" ಪೂರ್ಣವಾಗಲಿಲ್ಲ.)
ಲಲಿತ,ಮಂದಾನಿಲ ಮತ್ತು ಉತ್ಸಾಹ ರಗಳೆಗಳ ಸುಂದರ ಪಡಿಯಚ್ಚಿನಲ್ಲಿ ಈ ಕಾವ್ಯ ಪಡಿಮೂಡಿರುವಂಥದ್ದು. ಯಾವ ಪದ್ಯದ ಪಾದವೂ ಅಪೂರ್ಣಗೊಳ್ಳದೇ ಹತ್ತು ಸಾಲುಗಳ ಮಣಿ ಮಾಲಿಕೆಗಳಾಗಿ ಆ ಬೃಹತ್ ಮಾಲೆಯ ರೂಪ ತಾಳಿವೆ.
ನಾಲ್ಕು ಅಧ್ಯಾಯಗಳ ಈ ಕೃತಿಯು ಭಾರತದ ಇತಿಹಾಸದ ಸುಂದರ ಅನಾವರಣ!
ಮೊದಲ ಅಧ್ಯಾಯದಲ್ಲಿ ಕವಿ,ಕಾವ್ಯೋದ್ದೇಶದೊಂದಿಗೆ ಪ್ರವೇಶಿಕೆ ಮಾಡುವ ಓದುಗನಿಗೆ ಎರಡನೆಯ ಅಧ್ಯಾಯವು ಭಾರತೀಯ ಆಧ್ಯಾತ್ಮದ ಅನುಸಂಧಾನಕ್ಕೆ ಕರೆಯುತ್ತದೆ.ದ್ವೈತಾದ್ವೈತದ,ಶೈವಾವೈಷ್ಣವದ,ಜೈನಸಿಖ್ಖ್ ದ ಸಮ್ಮಿಳಿತೆಯಲ್ಲಿ ರೂಪುಗೊಂಡ ಭಾರತೀಯತೆಯ ಸುಂದರ ವಾಖ್ಯಾನವೊಂದನ್ನು ಮುಂದಿಡುತ್ತದೆ. ಹೊಸ ತಲೆಮಾರಿಗಿರುವ ಕರ್ತವ್ಯಗಳನ್ನು ದೇಶವು ಹೆಗಲ ಮೇಲಿಟ್ಟಿರುವುದನ್ನು ಎಚ್ಚರಿಸುತ್ತದೆ.
ನಾಲ್ಕನೇ ಅಧ್ಯಾಯವು ಸಮಗ್ರ ಭಾರತದ ಸಂಪೂರ್ಣ ದರ್ಶನ ಮಾಡಿಸುತ್ತ ಹೋಗುತ್ತದೆ.ಹಿಮಾಲಯದ ಔನ್ನತ್ಯದ ಲಡಾಖಿನಿಂದ ದಕ್ಷಿಣ ಭೂಶಿರ ರಾಮೇಶ್ವರದವರೆಗೂ ಭಾರತದ ಸುಂದರ ವರ್ಣನೆಯೊಂದಿಗೆ ಓದುಗನ ಭಾರತದರ್ಶನ ಮಾಡಿಸುತ್ತದೆ.
ಸ್ವತಂತ್ರ ಹೋರಾಟವನ್ನು ಹಿ.ಮ.ನಾ.ಅವರು "ಮಹಾ ಪ್ರಗಾಥ" ಎಂದು ಕರೆದಿದ್ದಾರೆ.
"ಬೆಟ್ಟ ಹತ್ತುವ ಸಾಸದಂತಾಗೆ ಕವಿಭಾಷೆ; ಅಟ್ಟುಣಲದಕ್ಕುಮೇ ಸಾಮಾನ್ಯರಭಿಲಾಷೆ." ಎನ್ನುತ್ತಾರೆ ಹಿ.ಮ.ನಾ. ಕಾವ್ಯದ ಪ್ರವೇಶಿಕೆಯಲ್ಲಿ. ಕಾವ್ಯ ಕಟ್ಟುವಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ಅವರ ವಿಶಿಷ್ಟ ಶೈಲಿ ಅವರದ್ದು!
"ವಿಶ್ವದೊಳಗುಟ್ಟನುರೆ ಕಟ್ಟಿ ಒಗೆದಂತಿರುವ
ಹೃಸ್ವವಾಗಿಳಿದಿರುವ,ಸರ್ವಾಗ್ರಕೇರಿರುವ,
ಬ್ರಹ್ಮನೊಳ ಬಗೆಯನುರೆ ಸೆಳೆದಗ್ರವಾಗಿರುಆಗಿರುವ
ಬ್ರಹ್ಮಚೇತನಕೊಮ್ಮೆ ಪ್ರತಿಸ್ಪರ್ಧಿಯಂತಿರುವ
ಬ್ರಹ್ಮವೇ ಆಗಿರುವ ಮಾನವನ ಒಳಗಿರುವ
ಅದ್ಭುತವದೇನೆಂಬೆ! ಒಳಗಿರುವ ನಿಜಗೊಂಬೆ
ಉದ್ಭವಿಸಿ ಹೊರಬಂದು,ಜಗದಮಲ ಕಣ್ಗೊಂಬೆ-
ಯಂತಾಗಿ ಚೆಲುವಿನಲಿ ಒಲವಿನಲಿ ಎಬ್ಬಿಸುತೆ
ಕಾಂತಿಯನು ಎರೆದಂದು,ಹೊಳೆದಂತೆ ನಿಜ ಹಣತೆ!"
ಸಿಂಧೂ ನಾಗರೀಕತೆಯ ಉಗಮದಿಂದ ಹಿಡಿದು,ಹೂಣರ ಆಕ್ರಮಣ,ಟರ್ಕರ ಪ್ರಾಬಲ್ಯ,ಚೇಂಗೀಸ್ ಖಾನ್ ನ ಧಾಳಿ,ಘೋರಿ-ಘಜನಿಗಳ ದಂಡಯಾತ್ರೆ,ಗ್ರೀಕರ ದಂಡಯಾತ್ರೆ..ಹೀಗೆಯೇ ಕಾಲಾನುಕ್ರಮದ ಭಾರತದ ಚರಿತ್ರೆ ಕಾವ್ಯವಾಗುತ್ತಾ ಹೋಗುತ್ತದೆ.
ಗುಪ್ತರ,ಮೌರ್ಯರ ಮಧ್ಯಯುಗದ ವೈಭವ,ಮರಾಠರ,ರಜಪೂತರ,ವಿಜಯ ನಗರದ ಪಾಳೇಪಟ್ಟಿನ ಅರಸೊತ್ತಿಗೆಗಳ ಆಡಳಿತದ ಮಹತ್ವ...ಎಲ್ಲವೂ ಭಾರತದ ಭಾಗ್ಯೋದಯದಲ್ಲಿ ಅರಳಿವೆ.
ವಿಶ್ವ ಮಹಾಯುದ್ಧಗಳ ಬಗ್ಗೆಯೂ ಅದರಿಂದ ಭಾರತದ ಮೇಲಾದ ಪರಿಣಾಮಗಳೂ ಚರ್ಚಿತವಾಗಿವೆ.
"ವೈರಿ ಸಾಮ್ರಾಜ್ಯವನು ಕುಬ್ಜಗೊಳಿಸಿದರೇನು,
ಸೈರಣೆಯು ಬರಲಿಲ್ಲ; ಮತಪಂಥಗಳ ಕೂಗು
ನೇರಮಾಗಲೆ ಇಲ್ಲ; ಚಾಲನೆಯ ಶಕ್ತಿಯದು
ತೇರನೇರಲೆ ಇಲ್ಲ; ಮಂದಮತಿಯನು ಪೊರೆದು
ಕುಂದನೆಣೆಸುತೆ ಕುಳಿತು ತಲೆ ತಿರುಕರಂತಾಗಿ,
ಕೊಂದು ತಿನುವಸುರಾಳಿ ಕೂರಲಗಿನಂತಾಗಿ
ಮಸೆಯುತಿರೆ ಮನದೊಳಗೆ,ಅದನರಿಯದಂತಾಗಿ,
ದೆಸೆದೆಸೆಗೆ ಕೈ ಚಾಚುತಿರೆ ಕಾಣದಂತಾಗಿ
ಗೆಲುವಡೆದರೂ ಕೊನೆಗೆ ಮನದರಿವು ಮರೆಯಾಗಿ
ಕೆಲಕು ಬಿದ್ದರು ಮತ್ತೆ ಕಟುಕರಿಗೆ ಬಲಿಯಾಗಿ"
ನಂತರದ ಅಧ್ಯಾಯಗಳಲ್ಲಿ ಸಿಪಾಯಿ ದಂಗೆಯ ಕಾಲಘಟ್ಟದಿಂದ ಕಾವ್ಯವು ಒಂದು ವಿಶಿಷ್ಟ ಗೇಯಸಂಪನ್ನತೆಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.
"ಕೆಸರಿನಿಂದಲೆ ಕೆಸರ ತೊಳೆವ ಸಾಹಸ ಬೇಡ
ಹೊಸ ನೀರ ಪಸರಿಸುವ ಕೈಂಕರ್ಯಕೆಡೆ ಮಾಡ
ಮಸಿಯು ತುಂಬಿದ ಕೈಯ ಮೂತಿಗೊರೆಯಲು ಬೇಡ
ಹಸಿ ಕಾಡ ಕೋಡಗನ ತೆರೆ ನೆಗೆದು ಕೆಡಬೇಡ
ಧರ್ಮಲೇಪನವಡೆದ ಆರ್ಥಿಕದ ಸಿದ್ಧಿಯಲಿ
ನಿರ್ಮಲಾಂತಃಕರಣದೈಸಿರಿಯ ತೊರೆ ಬರಲಿ"
ಎಂತಹ ಆಶಯ ನೋಡಿ ಕವಿ ಹೃದಯದ್ದು!
ಪ್ರಸ್ತುತ ಕಾವ್ಯ ರಚನೆಯ ಹಿಂದಿರುವ ಶ್ರಮ,ಅಧ್ಯಯನ ನಿಜಕ್ಕೂ ಅಗಾಧವಾದುದು.ವಸ್ತು ನಿಷ್ಠ ಇತಿಹಾಸವನ್ನೇ ಕಾವ್ಯವಾಗಿಸಿದ ಕವಿ ಹಿ.ಮ.ನಾ. ಕನ್ನಡ ಸಾಹಿತ್ಯಲೋಕದ ಹೊಸ ಬಾಗಿಲೊಂದರ ತೆರೆಯುವಿಕೆಗೂ ಕಾರಣರಾಗುತ್ತಾರೆ.
ಕರ್ನಾಟಕದ ಸಾಹಿತ್ಯಲೋಕದ ಅಪರೂಪದ ಕೃತಿಯಾದ "ಭವ್ಯ ಭಾರತ ಭಾಗ್ಯೋದಯ" ವು ಒಮ್ಮೆ ಓದಿ ಮುಚ್ಚಿಡಬಹುದಾದ ಪುಸ್ತಕವಲ್ಲ! ಓದಿದವರ ಅಂತರಾತ್ಮವನ್ನು ತೆರೆಯುವಂತಹದ್ದು!
ಈ ಕೃತಿಯು ಅನೇಕ ಸಂಶೋಧನಾ ಗ್ರಂಥಗಳಿಗೆ ಆಕರವಾಗಬಲ್ಲದು.
ಇಂಥದೊಂದು ಕೃತಿಯು ಸರ್ಕಾರದ,ವಿಶ್ವವಿದ್ಯಾಲಯಗಳ ಮಟ್ಟದ ಸರ್ವ ಮನ್ನಣೆಯನ್ನು ಪಡೆಯಬೇಕಾಗಿತ್ತು. ಆದರೆ, ಲಾಬಿ ರಾಜಕಾರಣಗಳಿಂದಾಗಿ ಕಾವ್ಯಾಸಕ್ತರಿಗಷ್ಟೇ ಸೀಮಿತವಾದದ್ದು ದುರದೃಷ್ಟಕರ!
ಶ್ರೀ ಹಿ.ಮ.ನಾ. ರವರ ಕೃತಿಗಳು ಇಂದಿನ ತಲೆಮಾರಿಗೂ ನಿಲುಕುವಂತಾಗಬೇಕು..ಅಂದರೆ,ಈಗಿನವರ ತಂತ್ರಜ್ಞಾನದ ಅಗತ್ಯಕ್ಕೆ ತಕ್ಕಂತೆ ಇ-ಬುಕ್ ಆವೃತ್ತಿಗಳಲ್ಲೂ ದೊರೆಯುವಂತಾಗಬೇಕು.
ಸಾಧ್ಯವಾದರೆ, ಯಾರದಾದರೂ ಸುಶ್ರಾವ್ಯ ಕಂಠದ ಸಹಾಯದಿಂದ ಸಂಕ್ಷಿಪ್ತ ವಿವರಣೆಯೊಂದಿಗೆ "ಭವ್ಯ ಭಾರತ ಭಾಗ್ಯೋದಯ" ಕೃತಿಯ ವಾಚನದ ಸಂಪೂರ್ಣ ಆಡಿಯೋಬುಕ್ ಕೂಡ ಲಭ್ಯವಾಗಬೇಕು.
"ಅನುಭವದ ಸಾರವಿದು ; ಸಾಧನೆಗೆ ಸಕಲ ಬಲ
ಕೊಳೆತು ನಾರುವ ಹಳೆಯ ಕೀಳು ಧರ್ಮಗಳೆಲ್ಲ
ತಿಳಿಗೊಳದಿ ಮುಳು ಮುಳುಗಿ ತರಲೊಮ್ಮೆ ಹೊಸ ಸೊಲ್ಲ."
ನನ್ನ ಹಳ್ಳಿಯ ಕವಿ ಮಹರ್ಷಿಯ ಈ ಸದಾಶಯ ವಾಸ್ತವವಾಗಲಿ. ಈ ಅನರ್ಘ್ಯ ಕೃತಿರತ್ನವು ಎಲ್ಲರ ಓದಿಗೂ ನಿಲುಕಲಿ!!
"ಭವ್ಯ ಭಾರತ ಭಾಗ್ಯೋದಯ" ಕೃತಿ ನನ್ನ ಕೈಯಲ್ಲಿ! |
ಮೊದಲ "ಅರ್ಪಣೆ" ಯ ಪುಟ. |
Nice article sir
ReplyDeletevery good analysis
ReplyDelete