Monday 11 December 2023

ಓಶೋ...ಎಂಬ ಕಾಡುವ ಪೋಲಿ ಮುದುಕ!


 ನ್ನ ಬದುಕಿನ ಪದರುಗಳಲ್ಲಿ ಈ ಪರಮಕೊಳಕ ಮುದುಕ ಬಂದು ಸೇರಿಕೊಂಡು ಹತ್ತಿರ ಹತ್ತಿರ ಇಪ್ಪತ್ತು ಮೂರು ವರ್ಷ! ಪ್ರತಿ ವರ್ಷವೂ ಇಷ್ಟಿಷ್ಟೇ ನನ್ನನ್ನು ಆವರಿಸುತ್ತ ಬಂದು ಈಗ ಪೂರ್ಣಾಹುತಿಯನ್ನಾಗಿಸಿಕೊಂಡ ಅವನ ತಾಕತ್ತಿನ ಬಗೆಗೆ ನನಗಂತೂ ವಿಸ್ಮಯವೆನಿಸಿಬಿಡುತ್ತದೆ...

             

          ಅವನ ತುಂಟ ಕಣ್ಣುಗಳು,ಅವನ ಬೆಳ್ಳಿಯ ಬಣ್ಣದ ಗಡ್ಡ , ತಲೆಗೆ ಸುತ್ತಿದ ಢಾಕ ಮಸ್ಲಿನ್ ಟರ್ಬನ್ನು , ಆಳದಲ್ಲೆಲ್ಲೋ ಅರ್ಥ ಮಡುಗಟ್ಟಿದಂತೆ ಕಾಣುವ ಅವನ ತಣ್ಣನೆಯ ನಗು...ಅವನಿಗೆ ಸೋಲಲು ಯಾರಿಗಾದರೂ ಇಷ್ಟು ಸಾಕು.

      

      ...ಆದರೆ, ನನಗೆ ಹುಚ್ಚು ಹಿಡಿಸಿದ್ದು ಅವನ ಧ್ವನಿ! ಆ ಧ್ವನಿಗೆ ಎಂತಹ ಕಲ್ಲನ್ನಾದರೂ ಒಪ್ಪಿಸಿಬಿಡಬಲ್ಲ ಅಸಲಿ ತಾಕತ್ತಿದೆಯೇನೋ ಅನಿಸುತ್ತದೆ.

       

        ಎಷ್ಟೋ ಸಲ..ನನಗೂ ಇವನಿಂದ ರೇಜಿಗೆ ಹುಟ್ಟಿ , ಇನ್ನು ಈ ಬೋಳಿಮಗನ ಸಾವಾಸ ಸಾಕು ಅನಿಸಿದ್ದಿದೆ.ಅವಾಗ ದೂರ ಮಾಡಲೆತ್ನಿಸಿದಷ್ಟೂ ಹತ್ತಿರವಾಗುವ ಅವನ "ಪ್ರಭಾವಳಿ" ಗೆ ನಾನೇ ಬೆರಗಾಗಿದ್ದೇನೆ.

           ಅವನು ಮಾತನಾಡದ,ಬರೆಯದ ವಿಷಯಗಳಿಲ್ಲ. ಕೆಮಿಷ್ಟ್ರೀಯಿಂದ ಹಿಡಿದು ಕೆಮ್ಮಿನ ತನಕ, ಪಾರಲೌಕಿಕದಿಂದ ಹಿಡಿದು ಪ್ಯಾರಲಿಸಿಸ್ ತನಕ ಹೇಳಿದ್ದಾನೆ.ಅವನ ಚಿಂತನೆಯ ಧಾಟಿಯೇ ಅನನ್ಯ!


ಅವನು ಯಾವ ಸುಡುಗಾಡು "ಇಸಂ" ಅನ್ನು ಪ್ರತಿಪಾದಿಸಲಿಲ್ಲ.ಇರುವ ಯಾವ ಇಸಂ ಗಳನ್ನು ಅಲ್ಲಗಳೆಯಲೂ ಇಲ್ಲ. ಎಲ್ಲವುಗಳ ಮಧ್ಯೆ ಒಂದು ತಾದಾತ್ಮ್ಯಕತೆಯನ್ನು ನಿರ್ಮಿಸುತ್ತ ಹೋದ.

ಸೆಕ್ಸು ,ಲವ್ವುಗಳ ಬಗ್ಗೆ ಬರೆದದ್ದಕ್ಕೇ ಜನ ಅವನನ್ನು ಸೆಕ್ಸ್ ಗುರು ಅಂದರು.ಬರೋಬ್ಬರಿ ಮೂವತ್ತಕ್ಕೂ ಹೆಚ್ಚಿನ ದೇಶಗಳು ಅವನನ್ನು ನಿರ್ಬಂಧಿಸಿದ್ದವು.ಸುಮಾರು ಕೇಸುಗಳು ಅವನ ಮೇಲಿದ್ದವು.ಅವನು ಬಾಯಿ ತೆರೆಯುವುದನ್ನೇ ಮಾಧ್ಯಮಗಳು ಕಾದಿದ್ದು ,ಅವನು ಹೇಳಿದ್ದನ್ನೆಲ್ಲವನ್ನೂ ವಿವಾದಗಳನ್ನಾಗಿಸುತ್ತಿದ್ದವು.


...ಆದರೆ, ಅವನು ಇವುಗಳಿಗೆ ಕ್ಯಾರೇ ಅನ್ನದೆ ತನ್ನದೇ ಬದುಕನ್ನು ಬದುಕಿಬಿಟ್ಟ. ಬದುಕಿದ ಅಷ್ಟೂ ಕ್ಷಣಗಳನ್ನೂ ತನಗಾಗಿ ಎತ್ತಿಟ್ಟುಕೊಂಡ.ಯಾವ ಭಿಡೆಗಳನ್ನೂ ಇಟ್ಟುಕೊಳ್ಳಲಿಲ್ಲ.ಯಾವ ಫಾಲೋವರುಗಳಿಗೂ ಹೀಗೇ ಬದುಕಿ ಅಂತ ಬೋಧಿಸೋಕೆ ಹೋಗಲಿಲ್ಲ.


ಹೌದು.."ಮೋಹನ ಚಂದ್ರ ಜೈನ್" ಆಲಿಯಾಸ್ "ಓಶೋ" ನ ಜನ್ಮದಿನ ಇವತ್ತು! ಅವನು ಸತ್ತು ಮೂವತ್ತು ಮೂರು ವರ್ಷಗಳಾದರೂ ಇನ್ನೂ ಅವನು ನನ್ನಂತಹ ಸಾವಿರ ಸಾವಿರ ಜನಗಳ ಒಳತೋಟಿಗಳನ್ನು ಮೀಟುತ್ತ ಬದುಕಿಯೇ ಇದ್ದಾನೆ!


ಅವನ ಬಗ್ಗೆ ಬರೆಯಬೇಕೆಂದು ನಾನು ಮಾಡಿಕೊಂಡ ಟಿಪ್ಪಣಿಗಳು ಲೀಪುಗಟ್ಟಲೆ ಇವೆ. ಅದ್ಯಾವಾಗ ಬರೆಯುತ್ತೇನೋ ಏನೋ!! 

Tuesday 24 October 2023

ವ್ಯಂಗ್ಯ ಮಾಡಬೇಡಿ - ಭಾರತಾಂಬೆಯನ್ನು!!

 ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ.

ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ


ಸಂದರ್ಭದಲ್ಲಿ ನೆಲೆಯನ್ನೂ,ನೆಲವನ್ನೂ ಕಳೆದುಕೊಳ್ಳುತ್ತಿರುವ ಕಷ್ಟಕುಲದವರನ್ನು ನಾವು ಅರ್ಥಮಾಡಿಕೊಳ್ಳದೇ ಹೋದರೆ,ನಮ್ಮೂರು ನಮಗೆ ಅರ್ಥವಾಗುವುದಿಲ್ಲ.ಹಳ್ಳಿಗಳು ಅರ್ಥವಾಗದೆ ಭಾರತವೂ ಅರ್ಥವಾಗುವುದಿಲ್ಲ..!

ಹಾಗಾಗಿಯೇ ಈ "ಗ್ಯಾರೆಂಟೀ"ಗಳು, ಶ್ರಮಿಕ ವರ್ಗದವರನ್ನು ಸೆಳೆದದ್ದು. 


ಮಲ್ಯ ,ನೀರವ್ ಮೋದಿ,ಚೋಕ್ಸಿಯಂಥವರ ಸಾವಿರಾರು ಕೋಟಿಗಳ ಉಂಡೆನಾಮದ ಬಗ್ಗೆಯೂ ಮಾತಾಡಬೇಕು. ಅದಾನಿ,ಅಂಬಾನಿಯವರ ದಿಢೀರನೆ ಸಂಪತ್ತು ಹೆಚ್ಚಿದ್ದರ ಬಗ್ಗೆಯೂ..!


ಇರಲಿ ಬಿಡಿ.. ದೇಶದ ಸಂಪತ್ತನ್ನು ಬಡವರೂ ಕೆಲಕಾಲ ತಿನ್ನಲಿ. ಅದು ಬಿಟ್ಟಿ ,ಪುಕ್ಸಟ್ಟೆ ಅಂದುಕೊಂಡವರ ಸಂವೇದನೆ ಸತ್ತಿದೆ ಅಷ್ಟೇ.

ಈ ಮರ, ಮಾರಕವಾದ ಕಾರ್ಬನ್ ಡೈಆಕ್ಸೈಡ್ ಹೀರಿ,ನಮ್ಮ ಜೀವ ವಾಯುವಾದ ಆಕ್ಸಿಜನ್ ಕೊಟ್ಟಂತೆ, ಸರಕಾರಗಳೂ ಕೂಡ,ಉಳ್ಳವರ ಸಂಪತ್ತಿನ ಕೆಲ ಭಾಗವನ್ನು ಇಲ್ಲದವರಿಗೆ ಹಂಚಬೇಕು. ಅದೇ "ಸಮಾಜವಾದ"! ವಾಸ್ತವವಾಗಿ ಅತೀ ಹೆಚ್ಚು ದುಡಿಯುವುದು ಸಮಾಜದ ತಳಶ್ರೇಣಿಯೇ! ಸರ್ಕಾರದ ಸವಲತ್ತುಗಳನ್ನು ಅನುಭವಿಸುವುದು ಮಾತ್ರ ಕಾರ್ಪೊರೇಟ್ ಧಣಿಗಳಾಗಬೇಕೇಕೆ! ನೆನಪಿಡಿ..ಈ ಭಾರತದ ಭೂಮಿಗೆ ಸುರಿವ ಬಡವರ ಬೆವರಿನ ಪ್ರತೀ ಹನಿಯೂ..ಅವನು ಕಟ್ಟುವ ಟ್ಯಾಕ್ಸ್!

ನಮ್ಮ ತಿಳುವಳಿಕೆಗಳೂ ಸಹ ಅಪ ಡೇಟ್ ಆಗಬೇಕಾದುದೂ ಹೀಗೆಯೇ! 


ಅನ್ನಭಾಗ್ಯವನ್ನು ಕೇವಲವಾಗಿ ಕಾಣಬೇಡಿ. ಫ್ರೀಯಾಗಿ ಕೆಂಪು ಬಸ್ ಹತ್ತುವುದು ತಾಯಿ ಭಾರತಾಂಬೆ! ವ್ಯಂಗ್ಯ ಮಾಡಬೇಡಿ. 

ರಾಜಕಾರಣ... ನಮ್ಮ ಮನುಷ್ಯತ್ವವನ್ನು ನಾಶ ಮಾಡುವಂತಾಗಬಾರದು!

Wednesday 20 September 2023

ಕಲ್ಲೂ ನೀರು ಕರಗುವ ಹೊತ್ತಿನಲ್ಲಿ...


 ಒಬ್ಬ ವ್ಯಕ್ತಿಯನ್ನು ಹೇಗೆಲ್ಲಾ ಕೊಲ್ಲಬಹುದು? ಯೋಚೆನೆಗೆ ಬೀಳುತ್ತೇನೆ. ಹೇಗೆಲ್ಲಾ ವಂಚಿಸಬಹುದು?..ತಲ್ಲಣಿಸಿಹೋಗಿದ್ದೇನೆ! ಬದುಕಿನಲ್ಲಿ ನಾನು ಅನೇಕ ಸಲ ವಂಚನೆಗೊಳಗಾಗಿದ್ದೇನೆ.ದಗಾ ಹಾಕಿಸಿಕೊಂಡಿದ್ದೇನೆ. ಅದು ದುಡ್ಡಿನದ್ದು! ಈ ವಂಚನೆಗಳಿಗೂ ಅದೆಷ್ಟೋ ಮುಖಗಳಿರುತ್ತವಂತೆ! 

ನನ್ನ ಭಾವಕೋಶದ ನವಿರು ಸಂವೇದನೆಯೊಂದು ನಿನ್ನೆ ಸತ್ತುಬಿಟ್ಟಿತು. ಮೂರು ಹಿಡಿ ಮಣ್ಣು ಹಾಕಿ,ಹೂತು ಬಿಟ್ಟರು! ಮತ್ತೆಂದೂ ಅದಕ್ಕೆ ಜೀವ ಬರಲಾರದು! ಈ ಎದೆಯೀಗ ಅಕ್ಷರಶಃ ಮರುಭೂಮಿ! ಇಲ್ಲೀಗ ಯಾವ ಹಸಿರೂ ಇಲ್ಲ. 
         ಉಫ್......ಈ ಜಗತ್ತು..ಜನ..ಬಂಧ..ಅನುಬಂಧ.. ಯಾವುದೂ ಬೇಡವೆನಿಸಿಬಿಟ್ಟಿದೆ. ತುಂಬಾ ತಿರುಗಾಡುತ್ತಿದ್ದವನು ನಾನು, ಅಷ್ಟೇ ತೀವ್ರವಾಗಿ ಏಕಾಂಗಿತನದ ಸುಖವನ್ನೂ ನೋಡಿದವನು! 
ಬದುಕು ಮುರಕೊಂಡು ಬಿದ್ದಿದೆ. ಕನಸುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಇನ್ನೆಷ್ಟು ಹೊತ್ತು ಬೇಕು ಅವು ಬೆಂಕಿಗೋ ಬಿಸಿಲಿಗೋ ಒಣಗಿ ಸಾಯಲಿಕ್ಕೆ? 
ಉಂಡದ್ದು ಯಾವಾಗೋ ನೆನಪಿಲ್ಲ..ಉಂಡರೆ ತೀರುವ ಹಸಿವೂ ಅದಲ್ಲ.
ಈ ಬಿವಕಾಸಿ ಬದುಕಿಗೆ ಇನ್ನು ಅದೆಷ್ಟು ದಿನದ ಆಯಸ್ಸು? ಲೆಕ್ಕ ಹಾಕುತ್ತಲಿದೆ ಕಾಲ! ನಕ್ಷತ್ರವೂಂದು ಅಲ್ಲೇ ಪಕ್ಕದಲ್ಲಿದೆ.
ನೀಲಿ ಆಗಸವೀಗ ಕಪ್ಪಾಗಿದೆ..ಅದರೊಡಲಿನ ಕಂಬನಿಯ ಊಟೆ ಯಾವಾಗ ಒಡೆಯಲಿಕ್ಕಿದೆಯೋ ಗೊತ್ತಿಲ್ಲ. ನೀಲಿ ಸಮುದ್ರದಲ್ಲೂ ಪ್ರಕ್ಷುಬ್ಧತೆಯ ಅಲೆಗಳೆದ್ದಿವೆ.ಅದರಲ್ಲೀಗ ಯಾವ ಮುತ್ತೂ ಇಲ್ಲ.
ನನ್ನ ದೈನೇಸೀತನಕ್ಕೆ ಆ ಹುಣಸೇಮರದ ಕುಂಟಗುಬ್ಬಿಯೂ ಮರುಗುತ್ತಲಿದೆ. ಈ ಕಲ್ಲೂ ನೀರೂ ಕರಗುವ ರಾತ್ರಿ ಹೊತ್ತಿನಲ್ಲಿ... ನಾನೇ ಇಡಿಯಾಗಿ ಕರಗುತ್ತಲಿದ್ದೇನೆ!

Tuesday 5 September 2023

"ಇರವಂಜಿ" ನದಿಯಲ್ಲಿ ಹುಟ್ಟಿದ ಪ್ರೀತಿಯ ಪ್ರವಾಹ!!


 

ಕೆಲವೊಂದು ಸಿನಿಮಾಗಳು, ಇಡೀ ಮನಸ್ಸನ್ನು ಆವರಿಸಿಬಿಡುತ್ತವೆ. ಬಹುಕಾಲ ಕಾಡುತ್ತಲೇ ಇರುತ್ತವೆ. ತಲ್ಲಣಗಳನ್ನು ಎಬ್ಬಿಸಿ,ಆಳವನ್ನು ತಾಕುತ್ರವೆ.

ನಾನು ತುಂಬಾ ಹಚ್ಚಿಕೊಂಡು ನೋಡುವುದು ಬಹುತೇಕ ಇರಾನಿ ಸಿನಿಮಾಗಳನ್ನೇ! ಆವಾಗವಾಗ ಭಾರತೀಯ ಸಿನಿಮಾಗಳನ್ನೂ ಇಷ್ಟಪಟ್ಟು ನೋಡುತ್ತೇನೆ. ಮಲಯಾಳಂ ಸಿನಿಮಾಗಳೂ ತುಂಬಾ ಚಂದ ಇರುತ್ತವೆ. ಕಮರ್ಷಿಯಲ್ ಎಲಿಮೆಂಟುಗಳಿಲ್ಲದ,ಹಿರೋಯಿಸಂ ಇಲ್ಲದ, ಸ್ಕ್ರಿಪ್ಟೇ ಪ್ರಧಾನವಾದ ಸಿನಿಮಾಗಳು ಇಷ್ಟವಾಗುತ್ತವೆ.

ಎಷ್ಟು ಜನ ಪ್ರತಿಭಾವಂತ ನಟರಿದ್ದಾರೆ..ಮಲಯಾಳಂನಲ್ಲಿ! ಮುಮ್ಮಟ್ಟಿ , ಮೋಹನ್, ದಲ್ಕೀರ್ ಸಲ್ಮಾನ್,ಫಹಾದ್ ಫಾಸಿಲ್, ಪೃತ್ವಿರಾಜ್...!
ಮೊನ್ನೆ.. Hotstar ನಲ್ಲಿ  ನೋಡಿದ "ಎನ್ ನಿಂಡೆ ಮೊಯುದೀನ್" ಎಂಬ ಚಂದದ ಸಿನಿಮಾ ಬಗ್ಗೆ ಬರೆಯಬೇಕು ಅನಿಸುತ್ತಿದೆ.
ಇಡೀ ಸಿನಿಮಾ ; ಸತ್ಯ ಘಟನೆಯನ್ನಾಧರಿಸಿದ್ದು.
  1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ನಡೆದದ್ದು! ಅಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಮತ್ತು ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಎಂಬ ಈ ಜೋಡಿ ಹಕ್ಕಿಗಳ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ. Offcoz ಅದು ಲವ್ ಜಿಹಾದ್ ಅಲ್ಲ,  ಶುದ್ಧ ಪ್ರೀತಿ. ಪರಸ್ಪರ ಪ್ರೀತಿಯೇ ಅವರ ಜೀವನ ಆಗಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ಇಬ್ಬರದ್ದು ರೆಬೆಲ್ ಪರ್ಸನಾಲಿಟಿ..
    ಪ್ರೀತಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿ 'ಹಿಂದೂ-ಮುಸ್ಲಿಂ' ಪ್ರೀತಿಯನ್ನು ಯಾರಾದರೂ ಒಪ್ಪಿಯಾರೇ?  ಕಾಲೇಜು ಕಲೀತಿದ್ದ ಕಾಂಚನಮಾಲಾಗೆ ಗೃಹಬಂಧನದ ಶಿಕ್ಷೆ.. ತನ್ನ ಆಪ್ತ ಮಿತ್ರನ ಮಗಳನ್ನೇ ಪ್ರೀತಿಸಿದ ಕಾರಣಕ್ಕೆ ಮೊಯ್ದಿನ್ ನ  ಮುಂಗೋಪಿ ಅಪ್ಪ ತನ್ನ ಕರುಳ ಕುಡಿಯನ್ನೇ ಗುಂಡಿಕ್ಕಿ ಕೊಲ್ಲಲು ಪ್ರಯತ್ನ ಮಾಡಿದ್ದ. ಮತ್ತೊಮ್ಮೆ ಮಗನನ್ನು 22 ಬಾರಿ ಇರಿದು ಸೀದಾ ಪೊಲೀಸ್ ಠಾಣೆಗೆ ಹೋದ ಮೊಯ್ದಿನ್ ಅಪ್ಪ, 'ಮಗನನ್ನು ನಾನೇ ಕೊಂದೆ' ಅಂತ ಶರಣಾಗಿದ್ದ. ಮೊಯ್ದಿನ್ ಪವಾಡದ ರೀತಿ ಬದುಕುಳಿದಿದ್ದ. "ನನಗ್ಯಾರು ಇರಿದಿಲ್ಲ, ನಾನೇ ಬಿದ್ದು ಗಾಯಗೊಂಡೆ" ಎಂದು ಕೋರ್ಟ್ ಕಟಕಟೆಯಲ್ಲಿ ಸುಳ್ಳು ಹೇಳಿ ಶಿಕ್ಷೆಯಿಂದ ಅಪ್ಪನನ್ನು ಪಾರು ಮಾಡಿದ್ದ. 'ನನ್ನನ್ನು ಕೊಂದರೂ ನಮ್ಮ ಪ್ರೀತಿ ಸಾಯಲ್ಲ' ಎಂದು ಹಠ ಹಿಡಿದಿದ್ದ ಮೊಯ್ದಿನ್ ಕೊನೆಗೆ ಹುಟ್ಟಿದ  ಮನೆಯಿಂದಲೇ ಹೊರದಬ್ಬಲ್ಪಟ್ಟಿದ್ದ.
  ಉಲ್ಲಾಟಿಲ್ ಉನ್ನಿ ಮೊಯ್ದಿನ್ ಸಾಹೇಬರ ಮಗ ಮೊಯ್ದಿನ್ ಹಾಗೂ ಕೊಟ್ಟಂಗಲ್ ಅಚ್ಯುತನ್ ಅವರ ಮಗಳು ಕಾಂಚನಮಾಲಾ ಮಧ್ಯೆ ಪ್ರೀತಿಗೆ ಕಿಚ್ಚು ಹಚ್ಚಿದ್ದು ಮುಕ್ಕಂನಲ್ಲಿ ಹರಿಯುವ ಇರುವಂಜಿ ನದಿ. ಈ ನದಿ ದಂಡೆಯಲ್ಲಿ ಪ್ರೇಮ ಹಕ್ಕಿಗಳು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖಾಮುಖಿಯಾದಾಗ ಕಣ್ಣುಗಳೇ ಮಾತಾಡಿ ನಿಟ್ಟುಸಿರು ಬಿಟ್ಟಿದ್ದವು. 'ಇರುವಂಜಿಪುಝ  ಹರಿದು ಅರಬ್ಬಿ ಸಮುದ್ರವನ್ನು ಸೇರುವ ಹಾಗೆ ನಾವು ಒಂದು ದಿನ ಜೊತೆಯಾಗಿ ಬಾಳೋದು ಸತ್ಯ' ಎಂದು ಮೊಯ್ದಿನ್ ಮಾತು ಕೊಟ್ಟಿದ್ದ. ಕಾಂಚನಾಳ ಈ ಸುದೀರ್ಘ ಗೃಹ ಬಂಧನದ ಸಮಯದಲ್ಲಿ ಇಬ್ಬರ ಮಧ್ಯೆ ಪತ್ರ ವ್ಯವಹಾರ ಮಾತ್ರ ನಡೀತಿತ್ತು. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತನ್ನ ಪ್ರೇಮ ಪತ್ರಕ್ಕೆ ಹೊಸ ಲಿಪಿ ಕಂಡುಹಿಡಿದಿದ್ದಳು ಕಾಂಚನ. ಈ ಜಗತ್ತಿನಲ್ಲಿ ಮೊಯ್ದಿನ್ ಮತ್ತು ಕಾಂಚನಾಳಿಗೆ ಮಾತ್ರ ಓದೋಕೆ ಬರೆಯೋಕೆ ಸಾಧ್ಯವಿರುವ ಲಿಪಿ ಅದು.
   ಇರುವಂಜಿ ನದಿ ಹರಿದು ಸಮುದ್ರ ಸೇರಲು ಒಂದಷ್ಟು ದಿನಗಳಾಗುತ್ತೆ ಅಂತ ನಂಬಿಕೊಂಡಿದ್ದ ಈ ಜೋಡಿ ಕಾಯುವಿಕೆಯನ್ನೂ ಪ್ರೀತಿಸಿದ್ದರು. ಪ್ರೀತಿಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಸಿಟ್ಟಲ್ಲಿ ಈಗಿನ ಜಮಾನದವರಂತೆ  ಓಡಿಹೋಗಲಿಲ್ಲ. ಎರಡು ದಶಕಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕುಳಿತರು. ಆದರೆ ಹೆತ್ತವರ ಮನಸು ಬದಲಾಗಲಿಲ್ಲ. 'ಹುಡುಗಿ ಇಸ್ಲಾಮಿಗೆ ಮತಾಂತರವಾದರೆ ಓಕೆ' ಎಂಬ ಅಂತಿಮ ಆಯ್ಕೆಯ ಸಂದೇಶ ಅಪ್ಪನ ಕಡೆಯಿಂದ ಬಂದಾಗ "ಆಕೆ ಮತಾಂತರವಾದ ಕ್ಷಣವೇ ನನ್ನ ಪ್ರೀತಿ ಅಂತ್ಯಗೊಳ್ಳುತ್ತೆ" ಎಂಬ ಉದಾತ್ತ ಧರ್ಮ ಸಹಿಷ್ಣುತೆಯ ಸಂದೇಶ ಮೊಯ್ದಿನ್ ಕಡೆಯಿಂದ ರವಾನೆಯಾಗಿತ್ತು.
    ಅಪ್ಪ ಕಟ್ಟಾ ಕಾಂಗ್ರೆಸ್ಸಿಗನಾದರೂ ಮಗ ಮೊಯ್ದಿನ್ ಪಕ್ಕಾ ಸೋಷಿಯಲಿಸ್ಟ್. ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮೂಗು ಮುಟ್ಟೋಕೂ ಸಾಧ್ಯವಿಲ್ಲ ಎಂದು ಅಪ್ಪ‌ ಮೂದಲಿಸಿದಾಗ ಮುಕ್ಕಂನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸಂಘಟಿಸಿ ಕಾಂಗ್ರೆಸಿಗರೇ ಮೂಗು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಮೊಯ್ದಿನ್ ಹೆಗ್ಗಳಿಕೆ. ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಮೊಯ್ದಿನ್ ಜನಪ್ರತಿನಿಧಿಯೂ ಆಗಿದ್ದ.
     ಮುಕ್ಕಂ ಮಣ್ಣಿನ ಅಪತ್ಬಾಂದವನಾಗಿದ್ದ ಮೊಯ್ದಿನ್ ಬಹುಮುಖ ಪ್ರತಿಭೆ. ಪತ್ರಕರ್ತ, ಛಾಯಗ್ರಾಹಕ, ಲೇಖಕ, ಪ್ರಕಾಶಕ, ನಿರ್ದೇಶಕ, ನಿರ್ಮಾಪಕ, ಜನನಾಯಕ.. ಉತ್ತಮ ಫುಟ್ಬಾಲ್ ಆಟಗಾರ, ನುರಿತ ಈಜುಗಾರ, ಆಟಗಾರ-ಓಟಗಾರ, ಖಡಕ್ ಹೋರಾಟಗಾರ. ಮುಕ್ಕಂನ ಸಮಸ್ಯೆಗೆ ಪರಿಹಾರ ಬೇಕಾದರೆ ಅಲ್ಲಿ ಮೊಯ್ದಿನ್ ಇರಲೇಬೇಕಿತ್ತು. "ಕೇರಳದ ಹುಡುಗಿಯರು ಪ್ರೀತಿ ಮಾಡಿ ಓಡಿಹೋಗಲು ಕಾರಣಾಗಿರುವ ನಟ", ಕೇರಳಿಯರ ನೆಚ್ಚಿನ ಸಿನಿಮಾ ಹೀರೋ ಪೃಥ್ವಿರಾಜ್ ಗೂ ಈ ಮೊಯ್ದಿನೇ ರಿಯಲ್ ಹೀರೋ.
   60 ದಶಕದ ಪ್ರೀತಿ 80ರ ದಶಕವನ್ನು ದಾಟಿತ್ತು. ದಿನಗಳು ಊರುಳುತ್ತಾನೇ ಇತ್ತು. ಗೃಹಬಂಧನದಲ್ಲಿದ್ದ ಕಾಂಚನ,, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೊಯ್ದಿನ್.. ಇಬ್ಬರ ವಯಸ್ಸು 40ರ ಗಡಿ ದಾಟಿತ್ತು. ಆದರೆ ಪರಸ್ಪರ ಪ್ರೀತಿ ಚೂರು ಕಡಿಮೆಯಾಗಿರಲಿಲ್ಲ. ದೂರದಲ್ಲೇ ಇದ್ದು ಗಾಢವಾಗಿ ಪ್ರೀತಿಸುತ್ತಲೇ ಇದ್ದರು.
    1982ರ ಮಳೆಗಾಲದ ಸಮಯ. ಆ ದಿನ ಮುಕ್ಕಂನಲ್ಲಿ ಮಳೆಯ ಆರ್ಭಟ ಜೋರಿತ್ತು. ಇರುವಂಜಿ ನದಿಯ ನೀರಿನ ಮಟ್ಟ ಕೂಡ ಏರಿತ್ತು. 10 ಜನರ ಕೆಪಾಸಿಟಿ ಇರುವ ದೋಣಿಯಲ್ಲಿ 30 ಮಂದಿ ತೂರಿಕೊಂಡಿದ್ದರು. ಮುಂದಾಗುವ ಅನಾಹುತದ ಸುಳಿವು ಯಾರಿಗೂ ಇರಲಿಲ್ಲ. ನದಿದಂಡೆಯಿಂದ ಹತ್ತಿಪ್ಪತ್ತು ಮೀಟರ್ ದೂರ ಸಾಗುತ್ತಿದ್ದಂತೆ ದೋಣಿ ಮಗುಚಿ ಬಿತ್ತು. ಮುಕ್ಕಂ‌ನ ಆಪತ್ಬಾಂದವ ಮೊಯ್ದಿನ್ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಮುಳುಗುತ್ತಿದ್ದವರ ರಕ್ಷಣೆಗೆ ಧುಮುಕಿದ್ದ. ಆಳಕ್ಕೆ ಹೋಗಿ ಒಬ್ಬರನ್ನೇ ಎಳೆದುತಂದು ದಡ ಮುಟ್ಟಿಸುತ್ತಿದ್ದ.  "ನನ್ನ ಬಗ್ಗೆ ಚಿಂತೆ ಬಿಡಿ, ಬೇರೆಯವರನ್ನು ನೋಡಿಕೊಳ್ಳಿ" ಎಂದು ಹೇಳಿ ಕೊನೆಯದಾಗಿ ಆಳಕ್ಕೆ ಹೋದ ಮೊಯ್ದಿನ್ ಮರಳಿ ಬರಲೇ ಇಲ್ಲ. ಆಳದಲ್ಲಿದ್ದ ನೀರಿನ ಸುಳಿ ಮೊಯ್ದಿನ್ ಎಂಬ ಪುಣ್ಯಾತ್ಮನನ್ನು ಬಲಿ ಪಡೆದಿತ್ತು. ಸಮಾಜಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟಿದ್ದ ಮೊಯ್ದಿನ್ ಬೇರೆಯವರ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದ. ಮೂರು ದಿನಗಳ ಬಳಿಕ ಶವ ಮೇಲೆ ಬಂದಾಗಲೂ ಮುಕ್ಕಂನ ಕಣ್ಣೀರು ಕೊನೆಯಾಗಿರಲಿಲ್ಲ. ಮಳೆಯ ರೂಪದಲ್ಲಿ ಕಣ್ಣೀರು ಸುರಿಸುತ್ತ ಆ ವಿಧಿ ಕೂಡ  ಪಶ್ಚಾತಾಪ ಪಟ್ಟಿತ್ತು. ಆ ಕಾಲದಲ್ಲಿ ಮುಕ್ಕಂನ ಮಣ್ಣಿನಲ್ಲಿ ನಿಂತು ಇಂದಿರಾ ಗಾಂಧಿಯವರ ನೀತಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಮೊಯ್ದಿನ್ ಗೆ 1983ರಲ್ಲಿ ಇಂದಿರಾ ಗಾಂಧಿಯ ಸರ್ಕಾರವೇ ಮರಣೋತ್ತರ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿತ್ತು.
     ಪ್ರಿಯಕರನ ಸಾವಿನ ಸುದ್ದಿ ಕೇಳಿ  ಕುಸಿದು ಹೋಗಿದ್ದ ಕಾಂಚನಾಳಿಗೆ, ಮೊಯ್ದಿನ್ ಮುಖ ನೋಡಬೇಕೆಂಬ ಕೊನೆ ಆಸೆಯೂ ಈಡೇರಲಿಲ್ಲ. ಮೊಯ್ದಿನ್ ಸಮಾಧಿಯಾಗುವುದರ ಜೊತೆಯಲ್ಲೇ ಅಪ್ಪಟ ಪ್ರೀತಿಯೊಂದಕ್ಕೆ ಗೋರಿ ಕಟ್ಟಲಾಯಿತು. ಮೊಯ್ದಿನ್ ಇಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಯಾವ ಆಸೆಯೂ ಕಾಂಚನಾಳಿಗೆ ಇರಲಿಲ್ಲ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮನೆಯವರು ತಡೆಯಾದರು. ಆರನೇ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿ ಕಣ್ಣುಬಿಟ್ಟಾಗ ಕಾಂಚನಾಳ ಮುಂದೆ ಮೊಯ್ದಿನ್ ತಾಯಿ ನಿಂತಿದ್ದರು. ಮೊಯ್ದಿನ್-ಕಾಂಚನ ಮದುವೆಯಾಗದಿದ್ದರೂ ಹಿಂದೂ ಹುಡುಗಿಯನ್ನು ವಿಧವಾ ಸೊಸೆಯಾಗಿ ಸ್ವೀಕರಿಸಿದಳು ಮೊಯ್ದಿನ್ ಉಮ್ಮ. ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಕಾಂಚನ, ಮೃತ ಪ್ರಿಯಕರನ ಮನೆ ಸೇರಿಕೊಂಡಳು. ಹಿಂದೂವಾಗಿದ್ದುಕೊಂಡೇ ಮುಸ್ಲಿಂ ಮನೆಯಲ್ಲಿ ಹೊಸ ಜೀವನ ಶುರು ಮಾಡಿದಳು.
     79 ವರ್ಷ ವಯಸ್ಸಿನ ಕಾಂಚನ ಅಮ್ಮ, ಮೊಯ್ದಿನ್ ಎಂಬ ಅಮರ ಪ್ರೇಮಿಯ ನೆನಪಲ್ಲಿ ಈಗಲೂ ಅದೇ ಮನೆಯಲ್ಲಿದ್ದಾರೆ. ಮುಕ್ಕಂನ ಮಳೆಯಲಿ ನೆನೆಯುತ್ತ, ಇರುವಂಜಿ ನದಿ ದಂಡೆಯಲ್ಲಿ ವಿಹರಿಸುತ್ತ, ಖಬರಸ್ಥಾನದಲ್ಲಿ ಮೊಯ್ದಿನ್ ಸಮಾಧಿ ಸಂದರ್ಶನ ಮಾಡುತ್ತ, ತಮ್ಮ ಪ್ರೀತಿಯನ್ನು ಜೀವಂತವಾಗಿಟ್ಟಿದ್ದಾರೆ ದೇವರ ನಾಡಿನ ಬ್ಯಾಚುಲರ್ ವಿಧವೆ ಕಾಂಚನಮಾಲಾ.
      ಹೌದು... ಸರಿಯಾಗಿ 37 ವರ್ಷಗಳ ಹಿಂದೆ ಇದೇ ದಿನದಂದು ಇರುವಂಜಿ ನದಿ ಮೊಯ್ದಿನ್ ಎಂಬ ಮಹಾತ್ಮನನ್ನು ಬಲಿ ಪಡೆದಿತ್ತು. ಮೊಯ್ದಿನ್ ಈ ಜಗತ್ತಿನಲ್ಲಿ ಇಲ್ಲದಿದ್ದರೂ ಆತನ ಪ್ರೀತಿ ಇವತ್ತಿಗೂ ಅಮರ. ಮೊಯ್ದಿನ್ ಹುಟ್ಟಿ ಬೆಳೆದಿದ್ದ ಮನೆ ಈಗ ಮೊಯ್ದಿನ್ ಸೇವಾ ಮಂದಿರವಾಗಿ ಬದಲಾಗಿದೆ. ತನ್ನ ಮನೆಯನ್ನು ಮೊಯ್ದಿನ್ ತಾಯಿ ವಿಧವಾ ಸೊಸೆಗೆ ಕೊಟ್ಟು ನಿರ್ಗಮಿಸಿದ್ದರು. ಹಿರಿಯ ಜೀವ ಕಾಂಚನ ಅಮ್ನ ಸೇವಾ ಮಂದಿರದ ಮೂಲಕ ಮೊಯ್ದಿನ್ ಅರ್ಧದಲ್ಲಿ ಬಿಟ್ಟುಹೋಗಿದ್ದ ಕನಸುಗಳನ್ನು ಪೂರ್ತಿ ಮಾಡುತ್ತಿದ್ದಾರೆ.
       "ಜಲಂ ಕೊಂಡು ಮುರಿವೇಟಲ್" (ನೀರಿನಿಂದ ಆಗಿರುವ ಗಾಯ) ಹೆಸರಿನ ಡಾಕ್ಯುಮೆಂಟರಿ ಮೂಲಕ ಈ ಅಮರ ಪ್ರೇಮ ಕತೆಯನ್ನು 2006ರಲ್ಲಿ ಜಗತ್ತಿಗೆ ಪರಿಚಯಿಸಿದ ಕೇರಳದ ಪತ್ರಕರ್ತ ವಿಮಲ್, 2015ರಲ್ಲಿ ಇದೇ ರಿಯಲ್ ಸ್ಟೋರಿಯನ್ನು "ಎನ್ನುಂ ನಿಂಡೆ ಮೊಯ್ದಿನ್"( ಎಂದಿಗೂ ನಿನ್ನ ಮೊಯ್ದಿನ್) ಹೆಸರಿನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತಂದಿದ್ದರು.
ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ನಟನೆಯ ಈ ಚಿತ್ರ ಮಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಅಬ್ಬರ ಮಾಡಿತ್ತು. ಈ ಸಿನಿಮಾದ 'ಮುಕ್ಕತ್ತೆ ಪೆಣ್ಣೆ' ಹಾಡು ಪ್ರೇಮಿಗಳ ಪಾಲಿಗೆ ಪವಿತ್ರ ಗೀತೆ..
ಅಮರ ಪ್ರೇಮ ಅಂದರೆ ರೋಮಿಯೋ-ಜೂಲಿಯೆಟ್,, ಲೈಲಾ- ಮಜ್ನು, ಸಲೀಂ-ಅನಾರ್ಕಲಿ ಅಂತ ಜಗತ್ತು ನೆನಪು ಮಾಡಕೊಳ್ಳಬಹುದು. ಆದ್ರೆ ಕೇರಳಕ್ಕೆ ಮಾತ್ರ ಮೊಯ್ದಿನ್- ಕಾಂಚನ..!

ಆ ಕೇರಳದ " ಇರವಂಜಿ" ನದಿಯ ಪ್ರೀತಿಯ ಹರಿವು..ಇನ್ನೂ ನಿಂತಿಲ್ಲ. ಹರಿಯುತ್ತಲೇ ಇದೆ. ಇಷ್ಟು ದಿನ ನನ್ನ ಎದೆಯಲ್ಲಿ.. ಮತ್ತು ಇನ್ನುಮುಂದೆ ಇದನ್ನು ಓದಿದ ನಿಮ್ಮಗಳ ಎದೆಯಲ್ಲಿ!!

Wednesday 19 July 2023

"ಪ್ರೇಮ್" ಎಂಬ ಕನಸುಗಾರನ "ಪರಂವಾ" ಎಂಬ ಕನಸು!!




 ಕನ್ನಡದ ಸಿನಿಮಾ ಜಗತ್ತಿನಲ್ಲಿ ಬೆನ್ನಿಗೆ ಯಾರೂ ಇಲ್ಲದೆ, ಕೈಲಿ ದುಡ್ಡಿನ ಥೈಲಿಯಿರದೆ, ಬೆಳೆಯೋದು ತುಂಬಾ ಕಷ್ಟಕರ. ಅದರಲ್ಲೂ ಬಯಲು ಸೀಮೆಯ, ಗ್ರಾಮೀಣ ಯುವಕನೊಬ್ಬನು ಬೆಳೆಯುತ್ತಿದ್ದಾನೆ ಎಂಬುದೇ ಕಾಲದ ಬೆರಗು!

      ಕೂಡ್ಲಿಗಿಯ ಗುಡೇಕೋಟೆಗೆ ಕೂಗಳತೆ ದೂರದಲ್ಲಿರುವ "ಸಿಡೇಗಲ್" ಎಂಬ ಪುಟ್ಟ ಹಳ್ಳಿಯ "ಪ್ರೇಮ್"-ಎಂಬ ಹುಡುಗ ಕಂಡಿದ್ದು ಸಿನಿಮಾ ಕನಸನ್ನು!  ಕೃಷಿಯಲ್ಲಿ ಬಿಟೆಕ್ ಮಾಡಿ,ಕೈಲಿದ್ದ ಒಳ್ಳೆಯ ಕೆಲಸ ಬಿಟ್ಟು ಸಿನಿಮಾ ಹಿಂದೆ ಹೊರಟ!

      ಸಾಣೇಹಳ್ಳಿಯ 'ಶಿವಸಂಚಾರ'ದಂತಹ ರಂಗಭೂಮಿಯ ತಂಡಗಳಲ್ಲಿ ನಟನೆಯನ್ನು ಕರಗತ ಮಾಡಿಕೊಂಡು, ಕೆಲವಾರು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ, ತಂತ್ರಜ್ಞತೆಯನ್ನೂ ಪಳಗಿಸಿಕೊಂಡು ಇದೀಗ " ಪರಂವಾ" ಎಂಬ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ತೆರೆಗೆ ಬರಲು ಸಿದ್ಧನಾಗಿದ್ದಾನೆ.

      ಸುಮಾರು ಎರಡು ವರ್ಷಗಳ ಹಿಂದೆಯೇ ಈ ಸಿನಿಮಾ ಬರಬೇಕಿತ್ತು. ಜನಗಳ ಹಣದಿಂದ (ಕ್ರೌಡ್ ಫಂಡಿಂಗ್) ಸಿನಿಮಾ ಬೆಳೆಯಬೇಕಿತ್ತಲ್ಲವೇ! ಹಾಗಾಗಿ ಚೂರು ತಡವಾಗಿದೆ. 

      ಪ್ರೇಮ್ ನನ್ನು ನೋಡಿದಾಗ, ತುಂಬಾ ಪ್ರತಿಭಾವಂತ ಅನಿಸುತ್ತದೆ. ಅವನ ಜೊತೆಗೆ ಸಂತೋಷ್ ಕೈದಾಳೆ ಎಂಬ ಮತ್ತೊಬ್ಬ ಕನಸುಗಾರ ಶ್ರಮಿಕನೂ ಸೇರಿ ಈ "ಪರಂವಾ" ಸಿದ್ಧಗೊಂಡಿದೆ.

      ಉತ್ತರಕರ್ನಾಟಕ ಭಾಗದ ಗಂಡುಕಲೆಯಾದ "ವೀರಗಾಸೆ" ಈ ಸಿನಿಮಾದಲ್ಲಿ ಢಾಳಾಗಿ ಮೈದಳೆದಿದೆ. ಟೀಸರ್ ನೋಡಿದಾಗ ಇದು ಗೊತ್ತಾಗುತ್ತದೆ. ವೀರಗಾಸೆ ಕಲಾವಿದನೊಬ್ಬನ ಬದುಕನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಭಾವತೀವ್ರತೆಯೇ ಸಿನಿಮಾದ ಹೂರಣ! ಅನಗತ್ಯ ಕಮರ್ಷಿಯಲ್ ಎಲಿಮೆಂಟುಗಳಿಗಿಂತ ಕಂಟೆಂಟು ಆಧಾರಿತ ಸಿನಿಮಾ ಇದು..ಅನಿಸುತ್ತದೆ.

      ಸಿನಿಮಾದ ಹಾಡುಗಳು ಕೇಳಲು ಹಿತವಾಗಿವೆ.ಸಾಹಿತ್ಯವೂ ಚಂದವಿದೆ. 

      ಹೊಸ ಹುಡುಗರ ಸಿನಿಮಾ..ಹೊಸ ಅನುಭವ ನೀಡಬಲ್ಲದು!

ಇದೇ ಜುಲೈ 21 ಕ್ಕೆ ಬಿಡುಗಡೆಯಾಗಿ, ನಿಮ್ಮ ಕಣ್ಣೆದುರು ಬರಲಿದೆ. 

ದಯವಿಟ್ಟು ಈ ಸಿನಿಮಾ ನೋಡೋಣ... ನಮ್ಮ ಹುಡುಗರ ಸಿನಿಮಾ ನಾವು ನೋಡದೆ, ಇನ್ಯಾರು ಶ್ರೀಲಂಕಾದವರೋ ಮಲೇಷ್ಯಾದವರೋ ನೋಡೋಕಾಗತ್ತಾ!!!

"ಪರಂವಾ" ಸಿನಿಮಾ ಟೀಸರ್.

ಸಿನಿಮಾದ ಟೀಸರ್ ಇಲ್ಲಿದೆ. https://youtu.be/SEKzT7vtImE

"ಪರಂವಾ" ಹಾಡು - ಭೂರಮೆಲಿ


ಸಿನಿಮಾದ ಒಂದು ಚಂದದ ಹಾಡು .. https://youtu.be/

ನಾನೂ ಸಿನಿಮಾ ನೋಡತೇನೆ...ಇಲ್ಲೇ ಅದರ ಚಿತ್ರವಿಮರ್ಶೆಯನ್ನೂ ಬರೆತೇನೆ.

Friday 24 February 2023

ಹಸಿವು,ಶಿಕ್ಷಣ ಮತ್ತು ರಾಜಕಾರಣ!!


 ಒಂದು ಬದುಕಿನ ನೆಲೆಯನ್ನು ಹಸಿವು ಕಟ್ಟುತ್ತದೆ.ಅಂತಹ ಸಾವಿರ ಬದುಕುಗಳಿಂದಲೇ ಸಮಾಜ ಹುಟ್ಟುತ್ತದೆ.ದೇಶ ಮೈದಳೆಯುತ್ತದೆ.ಸಾತ್ವಿಕ ಹಸಿವು ನೀಗುವ ಅವಕಾಶಗಳು ಹೆಚ್ಚಿದಷ್ಟೂ ಸುಂದರ ಸಮಾಜ ಬೆಳೆಯಬಲ್ಲದು ಹಾಗೆಯೇ ಹಸಿವು ವಿಕೃತತೆಗೆ ತಿರುಗಿದಾಗಲೆಲ್ಲ ಸಮಾಜವಿರಲಿ,ಜೀವ ಸಂಕುಲದ ಅಸ್ತಿತ್ವವೇ ಲಯವಾಗುತ್ತದೆ.


ಈ ದೇಶವೆಂದರೇನೆ, ಒಂದು ಹಸಿದವರ ಜೋಪಡಿ! ಹೊಟ್ಟೆ ತುಂಬಿದವರ - ತುಂಬದವರ ನಡುವಿನ ಸಂಘರ್ಷವೇ ಇದರ ಇತಿಹಾಸ. ವರ್ತಮಾನವೂ ಅದೇ..ಭವಿಷ್ಯವೂ ಅದೇ! ಏನೋ ಒಂದಷ್ಟು GDP,FDA ಎಂಬೆಲ್ಲಾ ಶಬ್ಧಗಳ ಅಲಂಕಾರದ ಹೊದಿಕೆ ಇರಬಹುದಷ್ಟೇ! ಹಸಿವು ತಣಿಸುವ ಭರವಸೆಯ ಮಾತುಗಳೇ ರಾಜಕಾರಣ! ಹಸಿವನ್ನು ತುಚ್ಛವಾಗಿ ಕಾಣುವವನೇ ದೇಶದ್ರೋಹಿ. ಬೆವರ ಬಸಿದು,ಅನ್ನ ಬೆಳೆದು ಹಸಿವ ತಣಿಸುವ ಪ್ರತೀಯೊಬ್ಬ ರೈತನೂ ಈ ದೇಶದ ಸೈನಿಕನೇ!

ಅನ್ನ ಬೆಳೆವ,ಹಸಿವ ತಣಿಸುವ ಚಿಂತನೆಗಳೆಲ್ಲವೂ ರಾಷ್ಟ್ರೀಯತೆ! ದೇಶದ ಬೆವರದೊರೆಗಳೆಲ್ಲರೂ ರಾಷ್ಟ್ರಭಕ್ತರೇ! ಇದನ್ನು ಹೊರತುಪಡಿಸಿ, ಬೇರೆಯ ರಾಷ್ಟ್ರಭಕ್ತಿಯಿಲ್ಲ...!

ಇದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು.ಪುಸ್ತಕದಲ್ಲಿ ಅದ್ಯಾವ ಕಲರಿನ ಬದನೇಕಾಯಿ ಬೇಕಾದರೂ ಇದ್ದುಕೊಳ್ಳಲಿ..ನಾವು ಇಷ್ಟು ಬಿಟ್ಟು ಬೇರೆಯದನ್ನು ಅವರ ತಲೆಗೆ ತುಂಬಿಸುವ ಅಗತ್ಯವಿಲ್ಲ..ಅದು ಅವರಿಗೆ,ಅವರ ಭವಿಷ್ಯಕ್ಕೆ..ಮತ್ತು ದೇಶಕ್ಕೆ ಸಾಕಷ್ಟಾಯಿತು!

          ಆದರೆ, ಎತ್ತ ಸಾಗುತ್ತಲಿದೆ ಈ ದೇಶ? ಎಲ್ಲರೂ ಭ್ರಮೆಗಳಲ್ಲಿ ಬದುಕುತ್ತಲಿದ್ದೇವೆ.ಕೃತಕ ವಿಕೃತ ಮುಖವಾಡಗಳನ್ನು ತೊಟ್ಟು ಅಸಹ್ಯದ ಬದುಕು ಬದುಕುತ್ತಲಿದ್ದೇವೆ. ಮೌಲ್ಯದ ಜೀವನವೇ ಇವತ್ತು ಅಪಹಾಸ್ಯಕ್ಕೊಳಗಾಗುತ್ತಲಿದೆ. ಗಾಂಧಿ,ಬುದ್ಧರೆಲ್ಲರೂ ನಮ್ಮ ತಲೆಮಾರಿನವರಿಗೆ ಕಾಮಿಡಿ ಐಟಂಗಳಂತೆ ಕಾಣುತ್ತಲಿದ್ದಾರೆ.

          ಈ ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲದಲ್ಲಿ ಎಲ್ಲರೂ ಹೀರೋಗಳಾಗಿ ಹೋಗಿದ್ದಾರೆ. ಕೆಲಸಕ್ಕೆ ಬಾರದ್ದೆಲ್ಲಾ ವೈರಲ್ ಆಗಿ, ಕಚಡಾಗಳೆಲ್ಲಾ ಸುದ್ದಿಯಾಗುತ್ತಿದ್ದಾರೆ. ತಿದ್ದಬೇಕಾದ ಸುದ್ದಿ ಮಾಧ್ಯಮಗಳು ಹಾದರದ ಅಡ್ಡೆಗಳಾಗಿವೆ..ಎಲ್ಲವೂ ಇಲ್ಲಿ ಬಿಜಿನೆಸ್ಸೇ ಆಗಿಹೋಗಿಬಿಟ್ಟಿದೆ..

          ಹೀಗಿದ್ದಾಗ..ರಾಜಕಾರಣದ ಬಗ್ಗೆ ಅದ್ಯಾವ ಭರವಸೆ ಇಡಬೇಕು ಅಲ್ಲವೇ? ಸಕಲೆಂಟು ಪಾಪದ ಕೂಪವೇ ಅದಲ್ಲವೇ?

          ಪ್ರಜಾಪ್ರಭುತ್ವ - ನಾಶವಾಗುವ ಕಾಲ ಹತ್ತಿರ ಬಂತೇನೋ ಅನಿಸಿಬಿಡುತ್ತದೆ ಒಮ್ಮೊಮ್ಮೆ.

ಆದರೂ..ಅದೆಲ್ಲೋ ಮೂಲೆಯಲ್ಲಿ ಒಂದು ಕುಡಿಯಾಸೆ ಇದ್ದೇ ಇದೆ..ಆ ಕುಡಿಯೇ ಬೆಳಕಿನ ಕೋಲಾಗಬೇಕಷ್ಟೇ ಈ ದೇಶಕ್ಕೆ!!

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...