Monday 11 December 2023

ಓಶೋ...ಎಂಬ ಕಾಡುವ ಪೋಲಿ ಮುದುಕ!


 ನ್ನ ಬದುಕಿನ ಪದರುಗಳಲ್ಲಿ ಈ ಪರಮಕೊಳಕ ಮುದುಕ ಬಂದು ಸೇರಿಕೊಂಡು ಹತ್ತಿರ ಹತ್ತಿರ ಇಪ್ಪತ್ತು ಮೂರು ವರ್ಷ! ಪ್ರತಿ ವರ್ಷವೂ ಇಷ್ಟಿಷ್ಟೇ ನನ್ನನ್ನು ಆವರಿಸುತ್ತ ಬಂದು ಈಗ ಪೂರ್ಣಾಹುತಿಯನ್ನಾಗಿಸಿಕೊಂಡ ಅವನ ತಾಕತ್ತಿನ ಬಗೆಗೆ ನನಗಂತೂ ವಿಸ್ಮಯವೆನಿಸಿಬಿಡುತ್ತದೆ...

             

          ಅವನ ತುಂಟ ಕಣ್ಣುಗಳು,ಅವನ ಬೆಳ್ಳಿಯ ಬಣ್ಣದ ಗಡ್ಡ , ತಲೆಗೆ ಸುತ್ತಿದ ಢಾಕ ಮಸ್ಲಿನ್ ಟರ್ಬನ್ನು , ಆಳದಲ್ಲೆಲ್ಲೋ ಅರ್ಥ ಮಡುಗಟ್ಟಿದಂತೆ ಕಾಣುವ ಅವನ ತಣ್ಣನೆಯ ನಗು...ಅವನಿಗೆ ಸೋಲಲು ಯಾರಿಗಾದರೂ ಇಷ್ಟು ಸಾಕು.

      

      ...ಆದರೆ, ನನಗೆ ಹುಚ್ಚು ಹಿಡಿಸಿದ್ದು ಅವನ ಧ್ವನಿ! ಆ ಧ್ವನಿಗೆ ಎಂತಹ ಕಲ್ಲನ್ನಾದರೂ ಒಪ್ಪಿಸಿಬಿಡಬಲ್ಲ ಅಸಲಿ ತಾಕತ್ತಿದೆಯೇನೋ ಅನಿಸುತ್ತದೆ.

       

        ಎಷ್ಟೋ ಸಲ..ನನಗೂ ಇವನಿಂದ ರೇಜಿಗೆ ಹುಟ್ಟಿ , ಇನ್ನು ಈ ಬೋಳಿಮಗನ ಸಾವಾಸ ಸಾಕು ಅನಿಸಿದ್ದಿದೆ.ಅವಾಗ ದೂರ ಮಾಡಲೆತ್ನಿಸಿದಷ್ಟೂ ಹತ್ತಿರವಾಗುವ ಅವನ "ಪ್ರಭಾವಳಿ" ಗೆ ನಾನೇ ಬೆರಗಾಗಿದ್ದೇನೆ.

           ಅವನು ಮಾತನಾಡದ,ಬರೆಯದ ವಿಷಯಗಳಿಲ್ಲ. ಕೆಮಿಷ್ಟ್ರೀಯಿಂದ ಹಿಡಿದು ಕೆಮ್ಮಿನ ತನಕ, ಪಾರಲೌಕಿಕದಿಂದ ಹಿಡಿದು ಪ್ಯಾರಲಿಸಿಸ್ ತನಕ ಹೇಳಿದ್ದಾನೆ.ಅವನ ಚಿಂತನೆಯ ಧಾಟಿಯೇ ಅನನ್ಯ!


ಅವನು ಯಾವ ಸುಡುಗಾಡು "ಇಸಂ" ಅನ್ನು ಪ್ರತಿಪಾದಿಸಲಿಲ್ಲ.ಇರುವ ಯಾವ ಇಸಂ ಗಳನ್ನು ಅಲ್ಲಗಳೆಯಲೂ ಇಲ್ಲ. ಎಲ್ಲವುಗಳ ಮಧ್ಯೆ ಒಂದು ತಾದಾತ್ಮ್ಯಕತೆಯನ್ನು ನಿರ್ಮಿಸುತ್ತ ಹೋದ.

ಸೆಕ್ಸು ,ಲವ್ವುಗಳ ಬಗ್ಗೆ ಬರೆದದ್ದಕ್ಕೇ ಜನ ಅವನನ್ನು ಸೆಕ್ಸ್ ಗುರು ಅಂದರು.ಬರೋಬ್ಬರಿ ಮೂವತ್ತಕ್ಕೂ ಹೆಚ್ಚಿನ ದೇಶಗಳು ಅವನನ್ನು ನಿರ್ಬಂಧಿಸಿದ್ದವು.ಸುಮಾರು ಕೇಸುಗಳು ಅವನ ಮೇಲಿದ್ದವು.ಅವನು ಬಾಯಿ ತೆರೆಯುವುದನ್ನೇ ಮಾಧ್ಯಮಗಳು ಕಾದಿದ್ದು ,ಅವನು ಹೇಳಿದ್ದನ್ನೆಲ್ಲವನ್ನೂ ವಿವಾದಗಳನ್ನಾಗಿಸುತ್ತಿದ್ದವು.


...ಆದರೆ, ಅವನು ಇವುಗಳಿಗೆ ಕ್ಯಾರೇ ಅನ್ನದೆ ತನ್ನದೇ ಬದುಕನ್ನು ಬದುಕಿಬಿಟ್ಟ. ಬದುಕಿದ ಅಷ್ಟೂ ಕ್ಷಣಗಳನ್ನೂ ತನಗಾಗಿ ಎತ್ತಿಟ್ಟುಕೊಂಡ.ಯಾವ ಭಿಡೆಗಳನ್ನೂ ಇಟ್ಟುಕೊಳ್ಳಲಿಲ್ಲ.ಯಾವ ಫಾಲೋವರುಗಳಿಗೂ ಹೀಗೇ ಬದುಕಿ ಅಂತ ಬೋಧಿಸೋಕೆ ಹೋಗಲಿಲ್ಲ.


ಹೌದು.."ಮೋಹನ ಚಂದ್ರ ಜೈನ್" ಆಲಿಯಾಸ್ "ಓಶೋ" ನ ಜನ್ಮದಿನ ಇವತ್ತು! ಅವನು ಸತ್ತು ಮೂವತ್ತು ಮೂರು ವರ್ಷಗಳಾದರೂ ಇನ್ನೂ ಅವನು ನನ್ನಂತಹ ಸಾವಿರ ಸಾವಿರ ಜನಗಳ ಒಳತೋಟಿಗಳನ್ನು ಮೀಟುತ್ತ ಬದುಕಿಯೇ ಇದ್ದಾನೆ!


ಅವನ ಬಗ್ಗೆ ಬರೆಯಬೇಕೆಂದು ನಾನು ಮಾಡಿಕೊಂಡ ಟಿಪ್ಪಣಿಗಳು ಲೀಪುಗಟ್ಟಲೆ ಇವೆ. ಅದ್ಯಾವಾಗ ಬರೆಯುತ್ತೇನೋ ಏನೋ!! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...