Sunday 10 January 2021

ಬಾಂಧವ್ಯ


 ಇಷ್ಟವಿಲ್ಲದವರ ತುದಿಬೆರೆಳ ಸ್ಪರ್ಶದಲ್ಲೂ 

ನರಕವಿರುತ್ತದೆಯಂತೆ..! 

ನಸೀಬಿನ ಜೊತೆಗೆ ನನ್ನದೊಂದು

ಜಗಳವಿದ್ದೇ ಇದೆ..!


ನನ್ನ ಪ್ರತಿದಿನಗಳೂ ಹೀಗೇ ಇರಲಿಕ್ಕೆ

ಒಂದನ್ನಾದರೂ ಉಳಿಸಿ ಹೋಗಿದ್ದೀ..

ಅದಕ್ಕೆ ಇಲ್ಲಿ ಯಾರೋ 'ಖಾಲಿತನ' ಅಂದರು!

ಇರಬಹುದೇನೋ..ನನಗೂ ಗೊತ್ತಿಲ್ಲ.


ಎದುರಾದಾಗ 'ಹೇಗಿದ್ದೀಯಾ ನೀನು?'

ಎಂದು ಕೇಳಲಾಗದ ನಿನಗೆ,

ದೂರದಲ್ಲೇ ನಿಂತು ಅವರಿವರಲ್ಲಿ

ನನ್ನ ಯೋಗಕ್ಷೇಮ ವಿಚಾರಿಸುವ ತವಕವೇಕೋ?

ಏನೂ ಅಲ್ಲದ ಒಂದು ನಂಟು

ಇಬ್ಬರಲ್ಲೂ ಹೀಗೆಯೇ ಬೆಸೆದುಕೊಂಡಿರಲೆಂದು

 ಸದಾ ಹವಣಿಸುತ್ತಿರುವ ನಿನ್ನ ಹುಚ್ಚು ಹಂಬಲಕ್ಕೆ

ಮನಸಾರೆ ನಗಬೇಕು ಅನಿಸಿಬಿಡುತ್ತದೆ ಆಗಾಗ!

ಇದಕ್ಕೆ ಇಲ್ಯಾರೋ 'ಬಾಂಧವ್ಯ' ಅಂದರು ನೋಡು!

ಮತ್ತೆ...

ಎಂದಿಗೂ ಸಿಗಲಾರೆ ಎನ್ನುವ 

ನಿನ್ನ ಅಸಹಾಯಕತೆಯನ್ನು ಮಾತ್ರವೇ

ಈ ಜಗತ್ತು 'ಪ್ರೇಮ'ವೆಂದು ಕರೆಯುತ್ತದೆಯಲ್ಲವೇ?


Saturday 9 January 2021

"ಬೆಳಕು" ಅಂದರೆ....


 ನಾವು ಬೆಳಕು ಬಿತ್ತದೇ ಬೆಳಕು ಬೆಳೆಯಬಲ್ಲೆವು ಎಂದು ನಂಬಿದವರು. ಬೆಳಕೆಂದರೆ ವೇಗ, ಬೆಳಕೆಂದರೆ ಬೆತ್ತಲೆ, ಬೆಳಕೆಂದರೆ ವ್ಯಾಮೋಹ, ಬೆಳಕೆಂದರೆ ಕ್ರೌರ್ಯ. ಬೆಳಕಿನಲ್ಲೇ ಕತ್ತಿಯ ಅಂಚು, ಕೆಂಪು ರಕ್ತ, ಕುಣಿಯುತ್ತಿರುವವಳ ಹೊಳೆಯುವ ಬಟ್ಟೆ, ಕಳಚಿಬೀಳುವ ಮುಗ್ಧತೆ ನಮಗೆ ಕಾಣಿಸುತ್ತದೆ. 

ಜಗಮಗಿಸುವ ಬೆಳಕು ಬಡತನದ್ದಲ್ಲ..ಅದು ಸಿರಿವಂತರದ್ದು! ಬೆಳಕಿಗೆ ಹಸಿವಿನ ಅರ್ಥ ಗೊತ್ತಿದೆಯೇನು?

ಆದರೆ....

ಕತ್ತಲಿಗೆ ಯಾವ ಅಂಜಿಕೆಯೂ ಇಲ್ಲ. ಅಲ್ಲೆಲ್ಲೋ ದೂರದಲ್ಲಿ ಯಾರೋ ಇದ್ದಾರೆ ಎಂಬ ನಂಬಿಕೆ ಇಟ್ಟುಕೊಂಡು ಕಗ್ಗತ್ತಲಲ್ಲಿ ಬದುಕುವುದು ಸುಖ. ಅಲ್ಲಿ ಯಾರಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಆತಂಕ ಮತ್ತು ಆಮಿಷಗಳೆರಡೂ ಚಿಗುರುತ್ತದೆ. ಒಂದು ನಮ್ಮನ್ನು ಕೊಲ್ಲುತ್ತದೆ. ಮತ್ತೊಂದು ನಮ್ಮನ್ನು ಕೊಲೆಗಾರರನ್ನಾಗಿ ಮಾಡುತ್ತದೆ. ಕತ್ತಲಿಗೆ ನಾಚಿಕೆಯೂ ಇಲ್ಲ. ಅಲ್ಲಿ ಮುಚ್ಚಿಕೊಳ್ಳುವಂಥದ್ದಾದರೂ ಏನಿರುತ್ತೆ? ಇನ್ನೊಬ್ಬರಿಗೆ ತೋರಿಸಿ ಮರೆಯುವಂಥದ್ದೂ ಅಲ್ಲಿಲ್ಲ...ಆ ಮಟ್ಟಿಗೆ ಕತ್ತಲೆ 'ಪಾರದರ್ಶಕ'! ಪ್ರಾಮಾಣಿಕ!

       ಬೆಳಕನ್ನು ಜ್ಞಾನವೆಂದೂ ಕತ್ತಲನ್ನು ಅಜ್ಞಾನವೆಂದೂ ಕರೆಯುತ್ತದೆ ಈ ಜಗತ್ತು. ನಾನಿದನ್ನು ಒಪ್ಪಲಾರೆ. ವಾಸ್ತವವಾಗಿ ಎಲ್ಲವನ್ನೂ ತೋರಿಸುವೆನೆಂಬ ಭ್ರಮೆಯನ್ನು ಬೆಳಕು ಮೂಡಿಸಬಹುದು, ಆದರೆ, ಆ ಎಲ್ಲವೂ ಮೊದಲಿಗೆ ಇದ್ದದ್ದು ಅದೇ ಕತ್ತಲಿನ ತೆಕ್ಕೆಯಲ್ಲೇ ಅಲ್ಲವೇ? ತೋರಿಸಿದೆನೆಂಬ 'ಅಹಂ' ಮಾತ್ರ ಈ ಬೆಳಕಿನದ್ದು..ಕತ್ತಲೋ ಅದ್ಯಾವುದರ ಪರಿವೆಯಿಲ್ಲದೆ ನಿರ್ವಿಕಲ್ಪದ ಸ್ಥಿತಿ!

        ಬೆಳಕನ್ನು 'ಧೈರ್ಯ' ಎನ್ನುತ್ತಾರೆ..ಕತ್ತಲಿಗೆ ಹೆದರುತ್ತಾರೆ. ನಿಜ ಹೇಳಬೇಕೆಂದರೆ, ಬೆಳಕಿನಲ್ಲಿದ್ದವನಿಗೆ ಕತ್ತಲೆಯ ಭಯವಿದ್ದೀತು..ಆದರೆ, ಕತ್ತಲೆಗೆ ಯಾವ ಭಯವೂ ಇಲ್ಲ. ಸಮಾಜಕ್ಕೆ ಹೆದರುವ ಭಯ,ಮಾನ ಮರ್ಯಾದೆ ಹೋದೀತೆಂಬ ಭಯಗಳಿಗಿಂತಲೂ ದೊಡ್ಡ ಭಯ ಇನ್ಯಾವುದಿದ್ದೀತು? ಕತ್ತಲೆಗೆ ಆ ಭಯವಿಲ್ಲ. 

ಹಾಗಾಗಿ...ನನಗೆ ಕತ್ತಲೂ ಕೂಡ ಆಪ್ತವೆನಿಸುತ್ತದೆ. ಅದರಲ್ಲೊಂದು ದಿವ್ಯಮೌನವಿದೆ. ಅಸಂಗತದ ಸಾಂಗತ್ಯವಿದೆ. ಅನಂತ ಏಕಾಂತವಿದೆ. 

             ಎಲ್ಲರಿಗೂ ಬೆಳಕೇ ಬೇಕು.ಬೆಳಕಿಗೆ ಮಾತ್ರವೇ ಕತ್ತಲು ಬೇಕು. ಬೆಳಕಿನ ಅಸ್ತಿತ್ವವಿರುವುದೇ ಕತ್ತಲೆಯ ಸಾನಿಧ್ಯದಲ್ಲಿ! ಬೆಳಕಿನಷ್ಟೇ ಕತ್ತಲೆಯೂ ಸೃಷ್ಠಿಯ ಪರಮ ಅದ್ಭುತ. ಕತ್ತಲೆಂದರೆ, ಅಸಹ್ಯವಲ್ಲ, -ರಹಸ್ಯವಲ್ಲ,ಸಾವಲ್ಲ-ನಿರ್ಭಾವವಲ್ಲ, ಪಾಪವಲ್ಲ-ಪ್ರೇತವಲ್ಲ..ಅದು ಜೀವಗರ್ಭ! 

     ಹಾಗಾಗಿ....

ಕತ್ತಲೆಗೆ ನಮಿಸೋಣ. ಕತ್ತಲನ್ನು ಆರಸೋಣ. ಬೆಳಕಿನಿಂದ ಕತ್ತಲೆಯತ್ತ ನಡೆಯೋಣ. ಅಜ್ಞಾನಿಗಳಾಗೋಣ. ಮುಗ್ಧರಾಗೋಣ. ಏನನ್ನೂ ನೋಡದೇ ಈ ಕಣ್ಣುಗಳು ಪವಿತ್ರವಾಗಲಿ. ನೋಡಬೇಕು ಅನ್ನುವ ಆಸೆ ಹಾಗೆ ಉಳಿದುಕೊಳ್ಳಲಿ. ಓದಲಿಕ್ಕೆ ಬಹಳಷ್ಟಿದೆ ಎಂಬ ಆಸೆ, ಓದಿ ಮುಗಿದಿದೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಲಿ.ದುಡ್ಡಿದ್ದವನ ಬಡತನವೇನೆಂಬುದನ್ನು  ಶ್ರೀಮಂತಿಕೆಯ ಏಕಾಂಗಿತನವೇ ಕಲಿಸಲಿ. 

ದೀಪಾವಳಿಯ ದಿನವಾದರೂ ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ.

Friday 8 January 2021

ನನ್ನ ಸಾವು ನೀನು ನೋಡು!

 


ಒಂದೊಂದು ಹೆಜ್ಜೆಯೂರಲೂ ಅವ್ಯಕ್ತ ಭಯ! 

ಅದೇನು ಸಾವಿನದ್ದಲ್ಲ, ಬೀಳುವ ಹತಾಶೆಯದ್ದು! 

ಅದೆಷ್ಟು ಸಲ ಬಿದ್ದಾಗ ಕೈ ಹಿಡಿದೆಬ್ಬಿಸಿದ್ದೆ ನೀನು ಹೇಳು?

ಸುರಿದ ನೆತ್ತರಿನ ರುಚಿಯುಂಡ ಆ ಇರುವೆಯಾದರೂ ಕೇಳು!

ನಿನ್ನಲ್ಲಿ ಬರೀ ಬೆಳಕಿತ್ತು ಫನಾ, ಕತ್ತಲಿರಲಿಲ್ಲ. 

ನನ್ನಲ್ಲಿ ಕತ್ತಲಿತ್ತು,ಜೊತೆಗೆ ಸೋಲಿತ್ತು..ಬೆಳಕಿರಲಿಲ್ಲ. 

ನಿನ್ನಲ್ಲಿ ಬದುಕಿನ ಹಸಿರು ಉಕ್ಕಿ ಮೊರೆಯುತ್ತಲಿತ್ತು. 

ಬಗಲಿನ ಸಾವಿಗೆ ಬದುಕಿನಾಸೆಯ ದರ್ದಾದರೂ ಯಾಕೆ?

 ನನ್ನ ಬಿವಕಾಸೀ ಬದುಕಿನ ತಕದೀರಿಗಾಗಿ ಹುಡುಕುತ್ತಲಿದ್ದೆ.

 ಮೊಣಕಾಲೂರಿ ಮಾಡುವ ಪ್ರತೀ ದುವಾದಲ್ಲೂ ಕೇಳುತ್ತಲಿದ್ದೆ. 

ಯಾವ ಹದೀಸುಗಳಲ್ಲೂ ನನಗೆ ಉತ್ತರವಿರಲಿಲ್ಲ ನೋಡು! 

ನಿನ್ನ ಜೊತೆಗಿನ ಬದುಕುವ ಕ್ಷಣದ ಜನ್ನತ್ ಸಿಗಲೇ ಇಲ್ಲ.

ನಿನ್ನ ಇಬಾದತ್ತಿನ ಫರಕು ಏನೆಂದು ಗೊತ್ತಾಗಲೇ ಇಲ್ಲ.

ಸಾವಿನ ಹೊಲದಲ್ಲಿ ಬದುಕ ಬಿತ್ತುವ ರೈತ ನಾನು.

ಹುಟ್ಟಿದ ಮಣ್ಣಲ್ಲೇ ಬೆವರು ಬೆರೆಸಿ,ಬೆಳೆಯ ಮೊಳೆಸಿ

ಬದುಕು ಚಿಗುರಿಸುವ,ನನ್ನಂಥ ನನಗೇ ಮಡಿಲ ಬರವೇನು?

 ನೂರು ಸಾವು ನೋಡುತ್ತೇನೆ..ನನ್ನ ಸಾವು ನೀನು ನೋಡು!


....ಧಿಕ್ಕಾರವಿದೆ!


 ಸತ್ತ ಸಂಬಂಧದ ಗೋರಿಯ ಮೇಲೆ
ಸ್ನೇಹದ ಹೂ ಅರಳುವುದಿಲ್ಲ ಎಂದೂ...
ಕಡಲ ಸೇರಿದ ಹೊಳೆಯ ನೀರು
ಒಡಲ ಉರಿಸಿದ ನೆನಪಿನ ತೇರು
ಮತ್ತೆ ವರ್ತಮಾನವನ್ನು ಸೋಲಿಸಲಾರವು!
ಕಾಲಕ್ಕಿಂತಲೂ ದೊಡ್ಡವನೇನು ನಾನು?
ಹಾದಿಯ ಹಂಗಿಲ್ಲದವನಿಗೆ,
ಮೂಡಿದ ಹೆಜ್ಜೆಗುರುತುಗಳ ದರ್ದೇಕೆ ಹೇಳು?
ಬೆತ್ತಲಾಗಿ ಬಯಲಗಾಳಿಗೆ ನಿಂತವನಿಗೆ,
ತೂರಿಬರುವ ಹೂಗಳ,ಕಲ್ಲುಗಳ ಪರಿವೆಯಿಲ್ಲ ಕೇಳು!
ನೀನೊಂದು ಸತ್ತ ಕಾಲದ ಕ್ಷಣದ ತುಣುಕಷ್ಟೆ!
ನನ್ನ ಸಾವಿನ ತನಕವೂ ಕಾಡುತ್ತೇನೆನ್ನುವ ನಿನ್ನ ಹಠಕ್ಕೆ
ನನ್ನದೊಂದು ನಿರ್ಭಾವುಕ ಮೌನದ ಧಿಕ್ಕಾರವಿದೆ!

Thursday 7 January 2021

ಹೊರಗೆ ಹೋಗಬೇಡ ...ಅಪ್ಪಿ ತಪ್ಪಿಯೂ...


ಬಾಯಿತುಂಬಾ ನಕ್ಕು ಹಗುರಾಗದೆ
ಅದೆಷ್ಟು ದಿನಗಳಾದವು ಬದುಕೇ...
ತಮಾಷೆಗೂ ನಗಿಸಲಿಲ್ಲ ಯಾರನ್ನೂ
ಕಾಲದ ಬಗೆಗೊಂದು ನನ್ನ  ತಕರಾರಿದ್ದೇ ಇದೆ!
ಹೆಜ್ಜೆ ಮೂಡಿಸದ ನನ್ನ ದಾರಿಯಲ್ಲಿ 
ಅದೆಷ್ಟೋ ಕನಸುಗಳ ಹೂ ಅರಳಿ ಬಾಡಿದ್ದವಲ್ಲವೇ?
ಬದುಕಿನ ಸುಂಕ ಕಟ್ಟಿದ್ದವನಿಗೆ
ಸಾವು ಮುಫತ್ತಾಗಬೇಕಿತ್ತು...ದುಬಾರಿಯಾಗಿದೆ!
ಬದುಕಿನ ಹಾಳೆ ಹರಿದು ಹಾಕಿದವನಿಗೆ
ಬದಲಾಗುವ ತಾರೀಖುಗಳ ಬಗೆಗೆ
ಎಂದಿಗೂ ಕುತೂಹಲವಿರಲಿಲ್ಲ..ಇಂದಿಗೂ!!
ಇರುಳ ಬೆರಳಿಗೆ ನಿನ್ನ ನೆನಪಿನುಂಗುರವಿಟ್ಟರೆ
ಅದೆಲ್ಲಿಯದೋ ಒಂದು ಬೆಳಕು ಬರುತ್ತದೆ..
ಅಷ್ಟು ಸಾಕೆನಿಸಿಬಿಡುತ್ತದೆ..ಉಂಡು ಮಲಗಲು!
ನಮ್ಮೊಳಗಷ್ಟೇ ಅನಂತದ ನಿರಂತರ ಬಯಲು..
ಹೊರಗೆ ಹೋಗಬೇಡ..ಅಪ್ಪಿತಪ್ಪಿಯೂ ಕೂಡ!
ಅಲ್ಲಿ ಹೆಜ್ಜೆಗೊಂದೊಂದು ಗೋಡೆ..ಪ್ರಶ್ನೆಗಳ ಬಂಧ!!
ಹೀಗೇ ಇದ್ದುಬಿಡುವ.. ಕಾಲ ಕರೆವತನಕ!!

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...