Saturday 18 January 2020

"ಬೆಳಕು" ಅಂದರೆ?





"ಬೆಳಕು" ಎಂದರೇನು?
ಈ ವಿಕ್ಷಿಪ್ತ ಪ್ರಶ್ನೆಯನ್ನು
ಇವತ್ತು ಯಾಕೋ ನನ್ನ ಬದುಕಿಗೆ ಕೇಳಿದ್ದೆ.
"ನಿನ್ನನ್ನು ನೀನು ಸುಟ್ಟುಕೊಳ್ಳುವುದು"
ಎಂದು ಗಂಭೀರವಾಗಿ ಉತ್ತರಿಸಿತ್ತು ಬದುಕು!
ಅರ್ಥವಾಗದೆ ಚಡಪಡಿಸಿದ್ದೆ.
ಕೊನೆಗೆ ನನ್ನ ಅಂತರಾತ್ಮವನ್ನೇ ಕೇಳಿಕೊಂಡೆ.
ಹೇಳು ಬೆಳಕೆಂದರೇನು?
"ಬೇರೇನಿಲ್ಲ.ಬೆಳಕೆಂದರೆ ಬೆಳಕು,ಅಷ್ಟೆ"
ಉತ್ತರಿಸಿತ್ತು..ನನ್ನೊಳಗಿನ ಆತ್ಮಸಾಕ್ಷಿ!
ಪ್ರಶ್ನೆಯು ಉತ್ತರದ ಬೆಳಕ ಜೊತೆ ನಕ್ಕಿತ್ತು.
ಉತ್ತರವೂ ಅದೇ ಬೆಳಕಿನಲ್ಲಿ ಉರಿಯುತ್ತಿತ್ತು.
ಪ್ರಶ್ನೆ ಬೆಳೆಯುತ್ತಾ ಬೆಳೆಯುತ್ತಾ
ಉರಿವ ಬೆಳಕಾಯಿತು. ಬೆಳಗಾಯಿತು.
ಪ್ರಶ್ನೆಯೂ ಬೆಳಕೇ. ಉತ್ತರವೂ ಬೆಳಕೇ!

Thursday 9 January 2020

ಏನೂ ಅಲ್ಲ....

ಕಾಲದ ಕದಲುವಿಕೆಯನ್ನು ಅಳೆಯುವುದು ಗಡಿಯಾರದ ಮುಳ್ಳುಗಳೋ ಕ್ಯಾಲೆಂಡರಿನ ಹಾಳೆಗಳೋ ಅಲ್ಲ. ನನ್ನ ನಾಡಿಯ ಪ್ರತೀ ಮಿಡಿತವೂ,ಹೃದಯದ ಪ್ರತೀ ಬಡಿತವೂ ಕಳೆದ ಕಾಲವನ್ನು ಕರಾರುವಕ್ಕಾಗಿ ಅಳೆದು ದಾಖಲಿಸುತ್ತವೆ.

ಪ್ರತೀ ಸೂರ್ಯಾಸ್ತದ ಹೊನ್ನಕಿರಣವೂ ನನ್ನ ಮೈಮೇಲೆ ಬಿದ್ದಾಗ ನನ್ನ ಒಂದು ದಿನದ ಲೆಕ್ಕ ಮುಗಿದಿರುತ್ತದೆ. ಇರುಳಿನ  ಪ್ರತೀ ಪೂರ್ಣ ಚಂದ್ರನೂ ನನ್ನ ಒಂದು ತಿಂಗಳ ಲೆಕ್ಕಚಾರವನ್ನು  ಅನಂತ ವಿಸ್ತಾರದ ಆಗಸದ ಮೇಲೆ ಸ್ಫುಟವಾಗಿಯೇ ಬರೆದುಕೊಳ್ಳುತ್ತಾನೆ.
ನನ್ನ ತಲೆಯಲ್ಲೊಂದು ಬೆಳ್ಳಿಕೂದಲು ಮೂಡಿಸಿ,ಚರ್ಮದಲ್ಲೊಂದು ನೆರಿಗೆ ಮಡಿಸಿ ಗುರುತು ಹಾಕುತ್ತಾನೆ.

ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸಿದ ಅಮೋಘ ಕ್ಷಣ, ಆ ಹನಿಗಳ ತೊನೆಗೆ ಘಮ್ಮನೆ ನೆಲದ ಪರಿಮಳ ಹೊಮ್ಮುವ ಕ್ಷಣ, ಪ್ರಕೃತಿಯ ಅದಾವ ಗೂಢಲಿಪಿಯ ಸಂದೇಶದ ಪರಿಣಾಮದಿಂದಲೋ ಅದೆಲ್ಲೋ ಅವಿತಿದ್ದ ಸಹಸ್ರ ಕೀಟಕೋಟಿಯ ಮೊಟ್ಟೆಗಳೆಲ್ಲ ಬಣ್ಣಬಣ್ಣದ ಮರಿಗಳಾಗಿ ಹುಳುಗಳಾಗಿ ಹಸಿ ನೆಲದ ಮೇಲೆ ಓಕುಳಿ ಮೆರವಣಿಗೆ ಹೊರಡುವ ಕ್ಷಣ....

ಒಣ ಮರಗಳ ರೆಂಬೆ ಸಂದುಗಳಲ್ಲಿ ಹಸಿರ ಚಿಗುರು ಕುಡಿಯೊಡೆವ ಕ್ಷಣ,ಹೊಸ ಚಿಗುರ ಮೆದ್ದ‌ ಕೋಗಿಲೆ, ಅಲ್ಲೆಲ್ಲೋ ಮರೆಯಲ್ಲಿ ಬಾಯ್ತುಂಬಾ ಕೂಗಿ ಕರೆದ ಕ್ಷಣ....

ಆ ಕ್ಷಣ...ನನ್ನ ಹೊಸ ವರ್ಷದ ಪ್ರಾರಂಭ! 
ಅದರ ಸಂಭ್ರಮಾಚರಣೆಗೆ ಇಡೀ ಭೂಮಂಡಲದ ಸೃಷ್ಟಿ ಸಮಸ್ತವೇ ನನ್ನ ಜೊತೆಗೆ ಭಾಗಿಯಾಗುತ್ತದೆ.

ಹಾಗಾಗಿ...ಈ ಜನವರಿ ಒಂದರ ಹೊಸವರ್ಷ ನನಗೆ ಏನೂ ಅಲ್ಲ.ಏನೇನೂ ಅಲ್ಲ.

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...