Tuesday 19 May 2020

ಕ್ವೇರಂಟೀನ್ ಕವಿತೆಗಳು - ೦೩

ಕುಂತಿದ್ದಳು ನೋಡಾ...

ಸಾಲಲಿ ಮುಂದೆ, ಭಾರತಾಂಬೆ!!
ಬಾಗಿದ ನಡು,ಬತ್ತಿದ ಕಣ್ಣು..
ಎದೆಯಲ್ಲಿ ಕೀವು ಸುರಿವ ಹುಣ್ಣು!
ಕಾಲು-ತಲೆಯ ಮೇಲೆ ಧೂಳು-ಮಣ್ಣು!!

ಹೊಟ್ಟೆ ಹಸಿದಿದೆ, ಕೇಳುವರಾರು?
ಬದುಕು ಕುಸಿದಿದೆ, ನೋಡುವರಾರು?
ಸನಾತನೆಯಂತೆ,ಧೀರೆಯಂತೆ..ದೈನೇಸಿಯಾಗಿದ್ದಳು.
ಅನ್ನಪೂರ್ಣೆಯಂತೆ,ಆದಿತ್ಯೆಯಂತೆ..ಕೈಯೊಡ್ಡಿದ್ದಳು!!

ಅದೇನೋ ರೋಗವಂತೆ, ಭಿಕ್ಷೆ ಬೇಡಬಾರದಂತೆ!
ಮಾಸ್ಕು ಹಾಕಿಕೊಳ್ಳಬೇಕಂತೆ, ದೂರ ನಿಲ್ಲಬೇಕಂತೆ!
ಹೊಟ್ಟೆಗೆ ಹಾಕುವ ಮಾಸ್ಕುಗಳಿಲ್ಲವೇ?ಹಸಿವ‌ ಮುಚ್ಚಲು?
ಹಸಿವಿಗಿಂತ ಭೀಕರ ರೋಗ ಯಾವುದಿದೆಯಂತೆ?
ಈ ಶತಕೋಟಿ ಮಕ್ಕಳ ತಾಯಿಯ ಅದೇ ಹಳೆಯ ಪ್ರಶ್ನೆ!!

ತಲೆ ನರೆತ ಈ ಬಡಕಲು ಮುದುಕಿಗೆ
ಅದೆಂಥ ಜೀವನಪ್ರೀತಿ ನೋಡು!
ಇನ್ನೂ ಹಡೆಯುತ್ತಲೇ ಇದ್ದಾಳೆ, ಅಗಣಿತ ಪಾಪ ಸಂಕುಲವ!
ಜಾತಿ-ಧರ್ಮ,ಪಂಥ-ಪಂಗಡಗಳ ತೊಟ್ಟಿಲಿಗೆ ಹಾಕಿ..
ಅದೇನೋ ಸಂವಿಧಾನದ ಜೋಗುಳ ಹಾಡುತ್ತಿದ್ದಾಳೆ!
ಅರ್ಥ ಮಾಡಿಕೊಂಡ ಕೂಸುಗಳಿಗೆ ಸುಖದ ನಿದ್ದೆ!
ಆಗದಿದ್ದವುಗಳ ರಚ್ಚೆಗೆ ಹೈರಾಣಾಗಿದ್ದಾಳೆ ಪಾಪದ ಮುದುಕಿ!



Monday 18 May 2020

ಕ್ವೇರಂಟೀನ್ ಕವಿತೆ - ೦೨

ಅವರಾರೂ ಎಲ್ಲಿಂದಲೋ ಬಂದವರಲ್ಲ
ಮಣ್ಣ ಮಡಿಲಿನಿಂದ ಬಂದವರು!
ಮಣ್ಣ ಬಗೆದು,ಅನ್ನ ಬೆಳೆದಿದ್ದವರು!
ಹಸಿವ ನೀಗಿದ್ದವರು,ಖುಷಿಗೆ ಮಾಗಿದ್ದವರು!

ಅವರ‌್ಯಾಕೋ..ನಗರಗಳಿಗೆ ಗುಳೆ ಬಂದರು.
ಚರಂಡಿ ತೋಡಿದರು,ಮಹಲಿಗೆ ಮಣ್ಣ ಹೊತ್ತರು.
ಕೇಬಲ್ಲುಗಳನ್ನು ಎಳೆದರು,ಗೇಟುಗಳಿಗೆ ಕಾವಲಾದರು!
ಗುಳೆ ಬಂದವರಿಗೆಲ್ಲಾ ಹಳ್ಳಿ ನೆನಪಿತ್ತು..ಹಸಿವು ತಡೆದಿತ್ತು.

ಒಂದು ದಿನ ಕೆಲಸವಿಲ್ಲ ನಿಮಗೆ ಅಂದರು..
ಕೊರೋನ ಇದೆ ನಡೆ ಅಂದರು, ಬಾಗಿಲು ಮುಚ್ಚಿದರು.
ಅವರೇ ಮಣ್ಣುಹೊತ್ತು ಮಾಡಿದ ರಸ್ತೆ....
ಹಿಡಿದು ನಡೆದರು,ನಡೆದೇ ನಡೆದೇ ಸತ್ತರು ಕೆಲವರು!
ಅವರಿಗೇನು ಹೂವಿನ ಹಾದಿಯಾಗಲಿಲ್ಲ ಆ ರಸ್ತೆ! 
ಅವರು ಕಟ್ಟಿದ ಮಹಲುಗಳಲ್ಲಿ ನೆರಳಿರಲಿಲ್ಲ!

ಯಾರೋ ಬಿಳಿಬಟ್ಟೆಯವರು,ಕನ್ನಡಕದವರು..
ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದರು.
ಎರಡು ಬಾಳೆಹಣ್ಣೋ..ಒಂದು ಬಿಸ್ಕತ್ತೋ ಕೊಡುತ್ತಿದ್ದರು
ಫೋಟೋ ತೆಗದುಕೊಂಡು, ಪೇಪರಿಗೆ ಹಾಕಿಕೊಂಡು
ನಿಮ್ಮ ಜೊತೆ ನಾವಿದ್ದೇವೆ..ಹೆದರಬೇಡಿ ಎನ್ನುತ್ತಿದ್ದರು.
ಬೊಬ್ಬೆ ಎದ್ದ ಮಕ್ಕಳ ಕಾಲಿಗೆ ಚಪ್ಪಲಿ ಕೊಡಿಸಲಿಲ್ಲ ಯಾರೂ!

ನಾಗರೀಕತೆ ಇತಿಹಾಸವಾಗುತ್ತದೆ! ನೆನಪು ಸಾಯುತ್ತವೆ.
ಬಳಿದ ಬಣ್ಣಗಳೆಲ್ಲವೂ ಮಾಸಲೇಬೇಕು!
ಕಟ್ಟಿದ ಮಹಲುಗಳೂ ಮಣ್ಣಾಗಲೇಬೇಕು!
ಕಾಲ...
ಭಾಷಣ ಕುಟ್ಟಿದವರನ್ನು ಮೆರೆಸುತ್ತದೆ;
ಕಲ್ಲು ಹೊತ್ತವರನ್ನು ಮರೆಸುತ್ತದೆ!

ನಾಗರೀಕತೆಯ ಕಟ್ಟಡಕ್ಕೆ ಬುನಾದಿ ಅಗೆದವರು,
ರಸ್ತೆಗೆ ಜಲ್ಲಿ ಹೊತ್ತು ಟಾರಿನ ಜೊತೆ ಬೆವರು ಸುರಿದವರು,
ಬರೀ ಹೊಟ್ಟೆಯಲ್ಲಿ ಅದೇ ರಸ್ತೆಯಲ್ಲಿ ಗೂಡಿಗೆ ಮರಳುತ್ತಿದ್ದಾರೆ.
ಬದುಕಿ ಬಂದಾರೆಂದು...ಎದೆಗೆ ತಾಕುವರೆಂದು
ಅವರ ಹೊಲದ ಮಣ್ಣಿಗೆ ಅದೇನೋ ಅದಮ್ಯ ನಂಬಿಕೆ!




Sunday 17 May 2020

ಕ್ವೇರಂಟೀನ್ ಕವಿತೆಗಳು -೧


ಗುಡುಗು,ಮಿಂಚು,ಸಿಡಿಲ ಮೇಳದ
ಭವ್ಯ ಮೆರವಣಿಗೆಯಲ್ಲಿ ನಿನ್ನೆ ನನ್ನೂರಿಗೆ ಬಂದ,
ಆ ಕುಂಭದ್ರೋಣದ ಮುಂಗಾರಿನ ಮಳೆಗೆ
ಲಾಕ್ ಡೌನ್ ಹಾಕಲಾದೀತೇನು?
ಮೊದಲ ಮಳೆ ಸ್ಪರ್ಶಕೆ ಘಮ್ಮನೆ ಹೊಮ್ಮುವ
ಮಣ್ಣವಾಸನೆಗೆ ಕ್ವಾರಂಟೀನ್ ಮಾಡುವಿರೇನು?

ಮಳೆಗೇ ಕಾದಿದ್ದು, ಬಂದೊಡನೇ ಪುತಪುತನೇ
ಟಿಸಿಲೊಡೆದು ಚಿಗುರಿ ಹಬ್ಬುವ ಲಕ್ಷ ಅಕ್ಷಯ
ಸಸ್ಯರಾಶಿಗೆ ಅದ್ಯಾವ ಸಾಮಾಜಿಕ ಅಂತರವಿತ್ತು?
ಅರೇ..ಆ ಹೆಜ್ಜೇನು ಹೊಟ್ಟಿನದ್ಯಾವ ಅಂತರ?
ಬಣ್ಣಬಣ್ಣದ ಕೀಟರಾಶಿಗೆ,ಪತಂಗ ಸಹಸ್ರಕ್ಕೆ..
ನಾಕಾಬಂದಿ ಹಾಕಿ, ತಡೆಯಬಲ್ಲಿರೇನು?

ಮಾವಿನ ಚಿಗುರು ಮೆದ್ದ ಕೋಗಿಲೆಯ ಇನಿದನಿಯ
ಅರಳಿದ ಹೂ ಮೇಲೆ ಪಟಪನೆ ಹಾರುವ ದುಂಬಿಯ
ಚಿಗುರು ಹುಲ್ಲನರಸಿ ಎಲ್ಲಿಂದಲೋ ಬಂದ ಮೊಲವ
ಹಿಡಿದು ಮುಂಗೈಗೆ ಸೀಲು ಹಾಕುವಿರೇನು?

ಈ ಕರೊನ ಬಂದದ್ದು ಪ್ರಕೃತಿಗಲ್ಲ, ಪ್ರಕೃತಿಯಿಂದಲೂ ಅಲ್ಲ.
ಮಾನವ ವಿಕೃತಿಗೆ, ಧರ್ಮ-ಜಾತಿಗೆ,ಮತ್ತು ಅರಿವೆಂಬ ಅಜ್ಞಾನಕ್ಕೆ!! 

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...