Monday 18 May 2020

ಕ್ವೇರಂಟೀನ್ ಕವಿತೆ - ೦೨

ಅವರಾರೂ ಎಲ್ಲಿಂದಲೋ ಬಂದವರಲ್ಲ
ಮಣ್ಣ ಮಡಿಲಿನಿಂದ ಬಂದವರು!
ಮಣ್ಣ ಬಗೆದು,ಅನ್ನ ಬೆಳೆದಿದ್ದವರು!
ಹಸಿವ ನೀಗಿದ್ದವರು,ಖುಷಿಗೆ ಮಾಗಿದ್ದವರು!

ಅವರ‌್ಯಾಕೋ..ನಗರಗಳಿಗೆ ಗುಳೆ ಬಂದರು.
ಚರಂಡಿ ತೋಡಿದರು,ಮಹಲಿಗೆ ಮಣ್ಣ ಹೊತ್ತರು.
ಕೇಬಲ್ಲುಗಳನ್ನು ಎಳೆದರು,ಗೇಟುಗಳಿಗೆ ಕಾವಲಾದರು!
ಗುಳೆ ಬಂದವರಿಗೆಲ್ಲಾ ಹಳ್ಳಿ ನೆನಪಿತ್ತು..ಹಸಿವು ತಡೆದಿತ್ತು.

ಒಂದು ದಿನ ಕೆಲಸವಿಲ್ಲ ನಿಮಗೆ ಅಂದರು..
ಕೊರೋನ ಇದೆ ನಡೆ ಅಂದರು, ಬಾಗಿಲು ಮುಚ್ಚಿದರು.
ಅವರೇ ಮಣ್ಣುಹೊತ್ತು ಮಾಡಿದ ರಸ್ತೆ....
ಹಿಡಿದು ನಡೆದರು,ನಡೆದೇ ನಡೆದೇ ಸತ್ತರು ಕೆಲವರು!
ಅವರಿಗೇನು ಹೂವಿನ ಹಾದಿಯಾಗಲಿಲ್ಲ ಆ ರಸ್ತೆ! 
ಅವರು ಕಟ್ಟಿದ ಮಹಲುಗಳಲ್ಲಿ ನೆರಳಿರಲಿಲ್ಲ!

ಯಾರೋ ಬಿಳಿಬಟ್ಟೆಯವರು,ಕನ್ನಡಕದವರು..
ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದರು.
ಎರಡು ಬಾಳೆಹಣ್ಣೋ..ಒಂದು ಬಿಸ್ಕತ್ತೋ ಕೊಡುತ್ತಿದ್ದರು
ಫೋಟೋ ತೆಗದುಕೊಂಡು, ಪೇಪರಿಗೆ ಹಾಕಿಕೊಂಡು
ನಿಮ್ಮ ಜೊತೆ ನಾವಿದ್ದೇವೆ..ಹೆದರಬೇಡಿ ಎನ್ನುತ್ತಿದ್ದರು.
ಬೊಬ್ಬೆ ಎದ್ದ ಮಕ್ಕಳ ಕಾಲಿಗೆ ಚಪ್ಪಲಿ ಕೊಡಿಸಲಿಲ್ಲ ಯಾರೂ!

ನಾಗರೀಕತೆ ಇತಿಹಾಸವಾಗುತ್ತದೆ! ನೆನಪು ಸಾಯುತ್ತವೆ.
ಬಳಿದ ಬಣ್ಣಗಳೆಲ್ಲವೂ ಮಾಸಲೇಬೇಕು!
ಕಟ್ಟಿದ ಮಹಲುಗಳೂ ಮಣ್ಣಾಗಲೇಬೇಕು!
ಕಾಲ...
ಭಾಷಣ ಕುಟ್ಟಿದವರನ್ನು ಮೆರೆಸುತ್ತದೆ;
ಕಲ್ಲು ಹೊತ್ತವರನ್ನು ಮರೆಸುತ್ತದೆ!

ನಾಗರೀಕತೆಯ ಕಟ್ಟಡಕ್ಕೆ ಬುನಾದಿ ಅಗೆದವರು,
ರಸ್ತೆಗೆ ಜಲ್ಲಿ ಹೊತ್ತು ಟಾರಿನ ಜೊತೆ ಬೆವರು ಸುರಿದವರು,
ಬರೀ ಹೊಟ್ಟೆಯಲ್ಲಿ ಅದೇ ರಸ್ತೆಯಲ್ಲಿ ಗೂಡಿಗೆ ಮರಳುತ್ತಿದ್ದಾರೆ.
ಬದುಕಿ ಬಂದಾರೆಂದು...ಎದೆಗೆ ತಾಕುವರೆಂದು
ಅವರ ಹೊಲದ ಮಣ್ಣಿಗೆ ಅದೇನೋ ಅದಮ್ಯ ನಂಬಿಕೆ!




3 comments:

  1. ನೋವು ಸುರಿಯುತ್ತದೆ ಈ ಕವನದಲ್ಲಿ

    ReplyDelete
  2. ಕವನದ ಪ್ರತಿ ಸಾಲು ಅರ್ಥಪೂರ್ಣ ಆಗಿವೆ. ಸತ್ಯವಾದ ಸಾಲುಗಳು.

    ReplyDelete
  3. ಕವನದ ಪ್ರತಿ ಸಾಲು ಅರ್ಥಪೂರ್ಣ ಆಗಿವೆ. ಸತ್ಯವಾದ ಸಾಲುಗಳು.

    ReplyDelete

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...