Saturday 9 January 2021

"ಬೆಳಕು" ಅಂದರೆ....


 ನಾವು ಬೆಳಕು ಬಿತ್ತದೇ ಬೆಳಕು ಬೆಳೆಯಬಲ್ಲೆವು ಎಂದು ನಂಬಿದವರು. ಬೆಳಕೆಂದರೆ ವೇಗ, ಬೆಳಕೆಂದರೆ ಬೆತ್ತಲೆ, ಬೆಳಕೆಂದರೆ ವ್ಯಾಮೋಹ, ಬೆಳಕೆಂದರೆ ಕ್ರೌರ್ಯ. ಬೆಳಕಿನಲ್ಲೇ ಕತ್ತಿಯ ಅಂಚು, ಕೆಂಪು ರಕ್ತ, ಕುಣಿಯುತ್ತಿರುವವಳ ಹೊಳೆಯುವ ಬಟ್ಟೆ, ಕಳಚಿಬೀಳುವ ಮುಗ್ಧತೆ ನಮಗೆ ಕಾಣಿಸುತ್ತದೆ. 

ಜಗಮಗಿಸುವ ಬೆಳಕು ಬಡತನದ್ದಲ್ಲ..ಅದು ಸಿರಿವಂತರದ್ದು! ಬೆಳಕಿಗೆ ಹಸಿವಿನ ಅರ್ಥ ಗೊತ್ತಿದೆಯೇನು?

ಆದರೆ....

ಕತ್ತಲಿಗೆ ಯಾವ ಅಂಜಿಕೆಯೂ ಇಲ್ಲ. ಅಲ್ಲೆಲ್ಲೋ ದೂರದಲ್ಲಿ ಯಾರೋ ಇದ್ದಾರೆ ಎಂಬ ನಂಬಿಕೆ ಇಟ್ಟುಕೊಂಡು ಕಗ್ಗತ್ತಲಲ್ಲಿ ಬದುಕುವುದು ಸುಖ. ಅಲ್ಲಿ ಯಾರಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಆತಂಕ ಮತ್ತು ಆಮಿಷಗಳೆರಡೂ ಚಿಗುರುತ್ತದೆ. ಒಂದು ನಮ್ಮನ್ನು ಕೊಲ್ಲುತ್ತದೆ. ಮತ್ತೊಂದು ನಮ್ಮನ್ನು ಕೊಲೆಗಾರರನ್ನಾಗಿ ಮಾಡುತ್ತದೆ. ಕತ್ತಲಿಗೆ ನಾಚಿಕೆಯೂ ಇಲ್ಲ. ಅಲ್ಲಿ ಮುಚ್ಚಿಕೊಳ್ಳುವಂಥದ್ದಾದರೂ ಏನಿರುತ್ತೆ? ಇನ್ನೊಬ್ಬರಿಗೆ ತೋರಿಸಿ ಮರೆಯುವಂಥದ್ದೂ ಅಲ್ಲಿಲ್ಲ...ಆ ಮಟ್ಟಿಗೆ ಕತ್ತಲೆ 'ಪಾರದರ್ಶಕ'! ಪ್ರಾಮಾಣಿಕ!

       ಬೆಳಕನ್ನು ಜ್ಞಾನವೆಂದೂ ಕತ್ತಲನ್ನು ಅಜ್ಞಾನವೆಂದೂ ಕರೆಯುತ್ತದೆ ಈ ಜಗತ್ತು. ನಾನಿದನ್ನು ಒಪ್ಪಲಾರೆ. ವಾಸ್ತವವಾಗಿ ಎಲ್ಲವನ್ನೂ ತೋರಿಸುವೆನೆಂಬ ಭ್ರಮೆಯನ್ನು ಬೆಳಕು ಮೂಡಿಸಬಹುದು, ಆದರೆ, ಆ ಎಲ್ಲವೂ ಮೊದಲಿಗೆ ಇದ್ದದ್ದು ಅದೇ ಕತ್ತಲಿನ ತೆಕ್ಕೆಯಲ್ಲೇ ಅಲ್ಲವೇ? ತೋರಿಸಿದೆನೆಂಬ 'ಅಹಂ' ಮಾತ್ರ ಈ ಬೆಳಕಿನದ್ದು..ಕತ್ತಲೋ ಅದ್ಯಾವುದರ ಪರಿವೆಯಿಲ್ಲದೆ ನಿರ್ವಿಕಲ್ಪದ ಸ್ಥಿತಿ!

        ಬೆಳಕನ್ನು 'ಧೈರ್ಯ' ಎನ್ನುತ್ತಾರೆ..ಕತ್ತಲಿಗೆ ಹೆದರುತ್ತಾರೆ. ನಿಜ ಹೇಳಬೇಕೆಂದರೆ, ಬೆಳಕಿನಲ್ಲಿದ್ದವನಿಗೆ ಕತ್ತಲೆಯ ಭಯವಿದ್ದೀತು..ಆದರೆ, ಕತ್ತಲೆಗೆ ಯಾವ ಭಯವೂ ಇಲ್ಲ. ಸಮಾಜಕ್ಕೆ ಹೆದರುವ ಭಯ,ಮಾನ ಮರ್ಯಾದೆ ಹೋದೀತೆಂಬ ಭಯಗಳಿಗಿಂತಲೂ ದೊಡ್ಡ ಭಯ ಇನ್ಯಾವುದಿದ್ದೀತು? ಕತ್ತಲೆಗೆ ಆ ಭಯವಿಲ್ಲ. 

ಹಾಗಾಗಿ...ನನಗೆ ಕತ್ತಲೂ ಕೂಡ ಆಪ್ತವೆನಿಸುತ್ತದೆ. ಅದರಲ್ಲೊಂದು ದಿವ್ಯಮೌನವಿದೆ. ಅಸಂಗತದ ಸಾಂಗತ್ಯವಿದೆ. ಅನಂತ ಏಕಾಂತವಿದೆ. 

             ಎಲ್ಲರಿಗೂ ಬೆಳಕೇ ಬೇಕು.ಬೆಳಕಿಗೆ ಮಾತ್ರವೇ ಕತ್ತಲು ಬೇಕು. ಬೆಳಕಿನ ಅಸ್ತಿತ್ವವಿರುವುದೇ ಕತ್ತಲೆಯ ಸಾನಿಧ್ಯದಲ್ಲಿ! ಬೆಳಕಿನಷ್ಟೇ ಕತ್ತಲೆಯೂ ಸೃಷ್ಠಿಯ ಪರಮ ಅದ್ಭುತ. ಕತ್ತಲೆಂದರೆ, ಅಸಹ್ಯವಲ್ಲ, -ರಹಸ್ಯವಲ್ಲ,ಸಾವಲ್ಲ-ನಿರ್ಭಾವವಲ್ಲ, ಪಾಪವಲ್ಲ-ಪ್ರೇತವಲ್ಲ..ಅದು ಜೀವಗರ್ಭ! 

     ಹಾಗಾಗಿ....

ಕತ್ತಲೆಗೆ ನಮಿಸೋಣ. ಕತ್ತಲನ್ನು ಆರಸೋಣ. ಬೆಳಕಿನಿಂದ ಕತ್ತಲೆಯತ್ತ ನಡೆಯೋಣ. ಅಜ್ಞಾನಿಗಳಾಗೋಣ. ಮುಗ್ಧರಾಗೋಣ. ಏನನ್ನೂ ನೋಡದೇ ಈ ಕಣ್ಣುಗಳು ಪವಿತ್ರವಾಗಲಿ. ನೋಡಬೇಕು ಅನ್ನುವ ಆಸೆ ಹಾಗೆ ಉಳಿದುಕೊಳ್ಳಲಿ. ಓದಲಿಕ್ಕೆ ಬಹಳಷ್ಟಿದೆ ಎಂಬ ಆಸೆ, ಓದಿ ಮುಗಿದಿದೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಲಿ.ದುಡ್ಡಿದ್ದವನ ಬಡತನವೇನೆಂಬುದನ್ನು  ಶ್ರೀಮಂತಿಕೆಯ ಏಕಾಂಗಿತನವೇ ಕಲಿಸಲಿ. 

ದೀಪಾವಳಿಯ ದಿನವಾದರೂ ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ.

2 comments:

  1. ವಿಸ್ಮಯ ಚಿಂತಕ ನಾಗರಾಜಣ್ಣ ನ ಬರವಣಿಗೆಯ ಶೈಲಿಯೇ ವಿಶಿಷ್ಟ ಮತ್ತು ಅತ್ಯದ್ಭುತ...

    ReplyDelete

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...