Friday 8 January 2021

ನನ್ನ ಸಾವು ನೀನು ನೋಡು!

 


ಒಂದೊಂದು ಹೆಜ್ಜೆಯೂರಲೂ ಅವ್ಯಕ್ತ ಭಯ! 

ಅದೇನು ಸಾವಿನದ್ದಲ್ಲ, ಬೀಳುವ ಹತಾಶೆಯದ್ದು! 

ಅದೆಷ್ಟು ಸಲ ಬಿದ್ದಾಗ ಕೈ ಹಿಡಿದೆಬ್ಬಿಸಿದ್ದೆ ನೀನು ಹೇಳು?

ಸುರಿದ ನೆತ್ತರಿನ ರುಚಿಯುಂಡ ಆ ಇರುವೆಯಾದರೂ ಕೇಳು!

ನಿನ್ನಲ್ಲಿ ಬರೀ ಬೆಳಕಿತ್ತು ಫನಾ, ಕತ್ತಲಿರಲಿಲ್ಲ. 

ನನ್ನಲ್ಲಿ ಕತ್ತಲಿತ್ತು,ಜೊತೆಗೆ ಸೋಲಿತ್ತು..ಬೆಳಕಿರಲಿಲ್ಲ. 

ನಿನ್ನಲ್ಲಿ ಬದುಕಿನ ಹಸಿರು ಉಕ್ಕಿ ಮೊರೆಯುತ್ತಲಿತ್ತು. 

ಬಗಲಿನ ಸಾವಿಗೆ ಬದುಕಿನಾಸೆಯ ದರ್ದಾದರೂ ಯಾಕೆ?

 ನನ್ನ ಬಿವಕಾಸೀ ಬದುಕಿನ ತಕದೀರಿಗಾಗಿ ಹುಡುಕುತ್ತಲಿದ್ದೆ.

 ಮೊಣಕಾಲೂರಿ ಮಾಡುವ ಪ್ರತೀ ದುವಾದಲ್ಲೂ ಕೇಳುತ್ತಲಿದ್ದೆ. 

ಯಾವ ಹದೀಸುಗಳಲ್ಲೂ ನನಗೆ ಉತ್ತರವಿರಲಿಲ್ಲ ನೋಡು! 

ನಿನ್ನ ಜೊತೆಗಿನ ಬದುಕುವ ಕ್ಷಣದ ಜನ್ನತ್ ಸಿಗಲೇ ಇಲ್ಲ.

ನಿನ್ನ ಇಬಾದತ್ತಿನ ಫರಕು ಏನೆಂದು ಗೊತ್ತಾಗಲೇ ಇಲ್ಲ.

ಸಾವಿನ ಹೊಲದಲ್ಲಿ ಬದುಕ ಬಿತ್ತುವ ರೈತ ನಾನು.

ಹುಟ್ಟಿದ ಮಣ್ಣಲ್ಲೇ ಬೆವರು ಬೆರೆಸಿ,ಬೆಳೆಯ ಮೊಳೆಸಿ

ಬದುಕು ಚಿಗುರಿಸುವ,ನನ್ನಂಥ ನನಗೇ ಮಡಿಲ ಬರವೇನು?

 ನೂರು ಸಾವು ನೋಡುತ್ತೇನೆ..ನನ್ನ ಸಾವು ನೀನು ನೋಡು!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...