ಸತ್ತ ಸಂಬಂಧದ ಗೋರಿಯ ಮೇಲೆ
ಸ್ನೇಹದ ಹೂ ಅರಳುವುದಿಲ್ಲ ಎಂದೂ...
ಕಡಲ ಸೇರಿದ ಹೊಳೆಯ ನೀರು
ಒಡಲ ಉರಿಸಿದ ನೆನಪಿನ ತೇರು
ಮತ್ತೆ ವರ್ತಮಾನವನ್ನು ಸೋಲಿಸಲಾರವು!
ಕಾಲಕ್ಕಿಂತಲೂ ದೊಡ್ಡವನೇನು ನಾನು?
ಹಾದಿಯ ಹಂಗಿಲ್ಲದವನಿಗೆ,
ಮೂಡಿದ ಹೆಜ್ಜೆಗುರುತುಗಳ ದರ್ದೇಕೆ ಹೇಳು?
ಬೆತ್ತಲಾಗಿ ಬಯಲಗಾಳಿಗೆ ನಿಂತವನಿಗೆ,
ತೂರಿಬರುವ ಹೂಗಳ,ಕಲ್ಲುಗಳ ಪರಿವೆಯಿಲ್ಲ ಕೇಳು!
ನೀನೊಂದು ಸತ್ತ ಕಾಲದ ಕ್ಷಣದ ತುಣುಕಷ್ಟೆ!
ನನ್ನ ಸಾವಿನ ತನಕವೂ ಕಾಡುತ್ತೇನೆನ್ನುವ ನಿನ್ನ ಹಠಕ್ಕೆ
ನನ್ನದೊಂದು ನಿರ್ಭಾವುಕ ಮೌನದ ಧಿಕ್ಕಾರವಿದೆ!
No comments:
Post a Comment