ಒಬ್ಬ ವ್ಯಕ್ತಿಯನ್ನು ಹೇಗೆಲ್ಲಾ ಕೊಲ್ಲಬಹುದು? ಯೋಚೆನೆಗೆ ಬೀಳುತ್ತೇನೆ. ಹೇಗೆಲ್ಲಾ ವಂಚಿಸಬಹುದು?..ತಲ್ಲಣಿಸಿಹೋಗಿದ್ದೇನೆ! ಬದುಕಿನಲ್ಲಿ ನಾನು ಅನೇಕ ಸಲ ವಂಚನೆಗೊಳಗಾಗಿದ್ದೇನೆ.ದಗಾ ಹಾಕಿಸಿಕೊಂಡಿದ್ದೇನೆ. ಅದು ದುಡ್ಡಿನದ್ದು! ಈ ವಂಚನೆಗಳಿಗೂ ಅದೆಷ್ಟೋ ಮುಖಗಳಿರುತ್ತವಂತೆ!
ನನ್ನ ಭಾವಕೋಶದ ನವಿರು ಸಂವೇದನೆಯೊಂದು ನಿನ್ನೆ ಸತ್ತುಬಿಟ್ಟಿತು. ಮೂರು ಹಿಡಿ ಮಣ್ಣು ಹಾಕಿ,ಹೂತು ಬಿಟ್ಟರು! ಮತ್ತೆಂದೂ ಅದಕ್ಕೆ ಜೀವ ಬರಲಾರದು! ಈ ಎದೆಯೀಗ ಅಕ್ಷರಶಃ ಮರುಭೂಮಿ! ಇಲ್ಲೀಗ ಯಾವ ಹಸಿರೂ ಇಲ್ಲ.
ಉಫ್......ಈ ಜಗತ್ತು..ಜನ..ಬಂಧ..ಅನುಬಂಧ.. ಯಾವುದೂ ಬೇಡವೆನಿಸಿಬಿಟ್ಟಿದೆ. ತುಂಬಾ ತಿರುಗಾಡುತ್ತಿದ್ದವನು ನಾನು, ಅಷ್ಟೇ ತೀವ್ರವಾಗಿ ಏಕಾಂಗಿತನದ ಸುಖವನ್ನೂ ನೋಡಿದವನು!
ಬದುಕು ಮುರಕೊಂಡು ಬಿದ್ದಿದೆ. ಕನಸುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಇನ್ನೆಷ್ಟು ಹೊತ್ತು ಬೇಕು ಅವು ಬೆಂಕಿಗೋ ಬಿಸಿಲಿಗೋ ಒಣಗಿ ಸಾಯಲಿಕ್ಕೆ?
ಉಂಡದ್ದು ಯಾವಾಗೋ ನೆನಪಿಲ್ಲ..ಉಂಡರೆ ತೀರುವ ಹಸಿವೂ ಅದಲ್ಲ.
ಈ ಬಿವಕಾಸಿ ಬದುಕಿಗೆ ಇನ್ನು ಅದೆಷ್ಟು ದಿನದ ಆಯಸ್ಸು? ಲೆಕ್ಕ ಹಾಕುತ್ತಲಿದೆ ಕಾಲ! ನಕ್ಷತ್ರವೂಂದು ಅಲ್ಲೇ ಪಕ್ಕದಲ್ಲಿದೆ.
ನೀಲಿ ಆಗಸವೀಗ ಕಪ್ಪಾಗಿದೆ..ಅದರೊಡಲಿನ ಕಂಬನಿಯ ಊಟೆ ಯಾವಾಗ ಒಡೆಯಲಿಕ್ಕಿದೆಯೋ ಗೊತ್ತಿಲ್ಲ. ನೀಲಿ ಸಮುದ್ರದಲ್ಲೂ ಪ್ರಕ್ಷುಬ್ಧತೆಯ ಅಲೆಗಳೆದ್ದಿವೆ.ಅದರಲ್ಲೀಗ ಯಾವ ಮುತ್ತೂ ಇಲ್ಲ.
ನನ್ನ ದೈನೇಸೀತನಕ್ಕೆ ಆ ಹುಣಸೇಮರದ ಕುಂಟಗುಬ್ಬಿಯೂ ಮರುಗುತ್ತಲಿದೆ. ಈ ಕಲ್ಲೂ ನೀರೂ ಕರಗುವ ರಾತ್ರಿ ಹೊತ್ತಿನಲ್ಲಿ... ನಾನೇ ಇಡಿಯಾಗಿ ಕರಗುತ್ತಲಿದ್ದೇನೆ!
No comments:
Post a Comment