Sunday 14 November 2021

ಊರೆಂಬಾ ಊರಿಗೆ ಮಂಕು ಕವಿದಿತ್ತು.....!


 ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವನ ಮಗಳು,ಅವಳ ಹೆಸರು ಈಗಲೂ ನೆನಪಿದೆ - "ಕಾಸವ್ವ"! ನನಗಿಂತಲೂ ದೊಡ್ಡವಳು, ನಮ್ಮೊಡನೆ ಹಗಲಿಡೀ ಆಡಲು ಬರುತ್ತಿದ್ದಳು. ಹುಣಸೇಮರಗಳನ್ನು ಸರಸರನೇ ಹತ್ತುವುದರಲ್ಲಿ ಅವಳು ಎಕ್ಸಪರ್ಟು ಆಗ! ಅವನ ಹೆಂಡತಿ ಊರಿನ ಲಿಂಗಾಯತರೊಂದಿಗೆ ಬಂಧುವಿನಂತೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದಳು. ಹಗಲಿಡೀ ಗಂಡನೊಂದಿಗೆ ದುಡಿದರೂ ಆಗಾಗ ಕುಡಿದುಬಂದು ಹೊಡೆಯುವ ಅವನ ಮತ್ತೊಂದು ಮುಖದ ಕ್ರೌರ್ಯವನ್ನೂ ಹಂಚಿಕೊಳ್ಳುತ್ತಿದ್ದಳು. 


ಆ 'ಕಲಾಯಿಸಾಬಿ' ಅದ್ಭುತವಾಗಿ ಭಜನೆ ಹಾಡು ಹಾಡುತ್ತಿದ್ದ. ಗುಡಿಯ ಪ್ರತಿದಿನದ ಭಜನೆಯಲ್ಲಿ ಅವನ ಹಾಡು! ಅವನು ಮಸೀದಿಗೆ ಹೋಗಿದ್ದನ್ನು ನಾನೆಂದೂ ನೋಡಿರಲಿಲ್ಲ. ಅದೇ ಪೀರಲದೇವರ ಗುಡಿಯಲ್ಲೇ ಐದು ಬಾರಿ ನಮಾಜ್ ಮಾಡುತ್ತಿದ್ದ.

ಅವನ ಹೆಸರು ನೆನಪಿಲ್ಲ. ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಆ 'ಕಲಾಯಿಸಾಬಿ' ನನಗೆ ಹುಡುಕಿದರೂ ಸಿಕ್ಕಿಲ್ಲ. ಅವನ ಮಗಳು ಎಲ್ಲಾದರೂ ಸಿಕ್ಕಿದರೆ, " ಹೇಗಿದ್ದೀಯಾ ಅಕ್ಕಾ?" ಎಂದು ಪ್ರೀತಿಯಿಂದ ಮಾತಾಡಿಸಬೇಕೆಂಬ ನನ್ನ ಆಸೆ ಹಾಗೇ ಇದೆ.


ಈಗಲೂ ನನ್ನೂರಿನ ಕೆಲವು ಪಿಂಜಾರ ಮುದುಕರು ಅದ್ಭುತವಾಗಿ 'ಬಯಲಾಟ' ಕುಣಿಯಬಲ್ಲರು. ರಾಮ-ಕೃಷ್ಣ-ವಿರೋಚನ-ಕಂಸರಾಗಬಲ್ಲರು! ಒಬ್ಬ ಮುದುಕ, 'ಜೈಮಿನಿ ಭಾರತ'ವನ್ನು ಚನ್ನಾಗೇ ವಾಖ್ಯಾನಿಸಬಲ್ಲರು! ಈಗ ಅದೆಲ್ಲಾ ಇತಿಹಾಸ ಬಿಡಿ!


ಮೊದಲೆಲ್ಲಾ ಸಾಬರೂ ಊರಿನ ಹಿಂದೂ ದೇವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಯನ್ನು ಹೊರುತ್ತಿದ್ದರು.ಹಣ್ಣುಕಾಯಿ ಮಾಡಿಸಿ,ಹರಕೆ ಹೊತ್ತು ಕೈ ಮುಗಿದು ಅಡ್ಡ ಬೀಳುತ್ತಿದ್ದರು. ಲಿಂಗಾಯತರನ್ನೆಲ್ಲಾ "ಮಾವ"," ಅತ್ತೆ" ಗಳೆಂದೇ ಮಾತಾಡಿಸುತ್ತ ಅವರೊಳಗೊಂದಾಗಿದ್ದರು. ಮೊಹರಂ ನ ಚೊಂಗಿ ಅದೆಷ್ಟು ಲಿಂಗಾಯತ ಮನೆಗಳ ದೇವರ ಜಗಲಿಯಲ್ಲಿರುತ್ತಿತ್ತು!


          ಊರಲ್ಲಿ ವರ್ಷಕ್ಕೊಮ್ಮೆ ಆಷಾಢದಲ್ಲಿ ಮಾಡುವ ಲಿಂಗಾಯತರೂ,ದಲಿತರೂ ಮಾಡುತ್ತಿದ್ದ ಹಬ್ಬ 'ಹೋಳಿಗೆಮ್ಮ' ನ ಹಬ್ಬವನ್ನು ಅವರೂ ಮಾಡುತ್ತಿದ್ದರು. ಕಾರಹುಣ್ಣಿಮೆಯಂದು ತಮ್ಮ ಎತ್ತುಗಳನ್ನು ಮೈ ತೊಳೆದು,ಕೋಡಿಗೆ ಬಣ್ಣ ಸವರಿ,ಶೃಂಗರಿಸುತ್ತಲಿದ್ದರು. ಸೋಮವಾರದ ದಿನ ಬೇಸಾಯ ಮಾಡುವುದು ನಿಷಿದ್ಧವಾದ್ದರಿಂದ ಆ ಕಟ್ಟಳೆಯನ್ನು ಈಗಲೂ ಅವರು ಮೀರಿಲ್ಲ.


         ಕ್ರಮೇಣ ಕಾಲ ಬದಲಾಯಿತು. ಹಿರಿಯ ಪಿಂಜಾರ ಮುದುಕರು ಸತ್ತರು.ಲಿಂಗಾಯತ,ದಲಿತ ಮುದುಕರೂ ಸತ್ತರು.ಹೊಸ ತಲೆಮಾರು ಹಳೆಯ ಮೌಲ್ಯಗಳನ್ನು ಅಸಡ್ಡೆ ಮಾಡಿತು. ಊರಲ್ಲಿ ಮಸೀದಿ ಆಯಿತು.ಬೇರೆ ಊರುಗಳ,ರಾಜ್ಯಗಳ ಇತರೇ ಜನರೂ ಮಸೀದಿಗೆ ಬಂದು ಬೋಧನೆ ಮಾಡಲು ಸುರುಹಚ್ಚಿದರು. ಅಷ್ಟೂ ಕಾಲ ಪಿಂಜಾರರಾಗಿದ್ದವರು, ದಿಡೀರನೇ ಮುಸ್ಲಿಮರಾಗಿದ್ದರು!. ಮದರಸಾ ಹುಟ್ಟಿಕೊಂಡಿತು. ಯಾವುದೋ ಓಣಿಯ ತಿರುವಿನಲ್ಲಿ 'ಟಿಪ್ಪು ಸರ್ಕಲ್' ಎಂಬ ಬೋರ್ಡು ನೇತಾಡತೊಡಗಿತು. ಟಿಪ್ಪು ಜಯಂತಿಯೂ ನಡೆಯಿತು.


        ಮತ್ತೊಂದೆಡೆ ಇವರಿಗೆ ಸಮಾಂತರವಾಗಿ ನಾವೂ ಕಮ್ಮಿಯಲ್ಲ ಎಂದು,ಲಿಂಗಾಯತರ ಹುಡುಗರು ಆರೆಸ್ಸೆಸ್ ಶಾಖೆಯನ್ನು ಮಾಡಿದರು.ಊರಿನ ಪ್ರಮುಖ ದೇವಸ್ಥಾನವಾದ ಹಾಲಸ್ವಾಮಿಯ ಜಾತ್ರೆಯ ಮುಳ್ಳುಗದ್ದುಗೆಯ ಮೆರವಣಿಗೆಯೂ ಮಸೀದಿಯ ಮುಂದಿನಿಂದಲೇ ಹೊರಟಿತು. ಆಗಲೂ ಕೆಲವು ಸಾಬರ ಭಕ್ತರು ಮುಳ್ಳುಗದ್ದುಗೆಯನ್ನು ಹೊತ್ತರು. "ಹಾಲೇಶ್ವರ ಭೋ ಪರಾಕ್" ನ ಘೋಷಕ್ಕೆ ದನಿಗೂಡಿಸಿದ್ದರು.

ಗಣೇಶ ಚತುರ್ಥೀಯ ಮೆರವಣಿಗೆಯು ಮಸೀದಿಯ ಮುಂದಿನಿಂದಲೇ ಹಾಯ್ದು ಹೋಗಲಾರಂಭಿಸಿತು.

ಜೈಶ್ರೀರಾಂ ಎಂಬ ಘೋಷಣೆಯು 'ಆಜಾನ್' ನಡುವೆ ಕೇಳಲಾರಂಭಿಸಿತು. ಯಾವ ಸಾಬರೂ "ಹಾಲೇಶ್ವರ ಭೋರಾಕ್" ಗೆ ದನಿಗೂಡಿಸಿದಂತೆ, "ಜೈ ಶ್ರೀರಾಂ" ನ ಘೋಷಕ್ಕೆ ದನಿಗೂಡಿಸಲಿಲ್ಲ..


           ಸೋಶಿಯಲ್ ಮೀಡಿಯಾಗಳು ಹಳ್ಳಿಯ ಮುಗ್ಧ ಯುವಕರ ಮನಸ್ಸುಗಳನ್ನು ಒಡೆದಿದ್ದವು. ದರಿದ್ರ ಮಾಧ್ಯಮಗಳು ಊರಿನ ನೆಮ್ಮದಿಗೆ ಕಲ್ಲು ಹಾಕತೊಡಗಿದ್ದವು. ಮೋದಿಯ ಸರಕಾರ ಬಂದ ನಂತರದಿಂದ ಇದು ವಿಪರೀತಕ್ಕೆ ಹೋಗಿತು. ಮೋದಿಯ ಅನುಯಾಯಿಗಳೆನಿಸಿಕೊಂಡ ಹಲವು ಚಿಂತಕರು ಹಿಂದೂ ಯುವಕರ ಅಂತರಂಗದ ಕೊಳಕ್ಕೆ ಕಲ್ಲುಗಳನ್ನು ಬೀಸಿ ಬೀಸಿ ಒಗೆಯಲಾರಂಭಿಸಿದ್ದರು. ಇಷ್ಟಕ್ಕೂ ಅವರು ಕಲ್ಲುಗಳನ್ನು ಒಗೆಯಬಲ್ಲವರಷ್ಟೆ ಆಗಿದ್ದರೇ ಹೊರತು, ಅವು ಎಬ್ಬಿಸುವ ಅಲೆಗಳ ಮೇಲೆ ಅವರಿಗಾವ ಅಧಿಕಾರವೂ ಇರಲಿಲ್ಲ.


      ಈಗ ನೋಡಿ...ಊರಿನಲ್ಲಿ ಸಣ್ಣ ಹಬ್ಬವಾದರೂ ಪೋಲೀಸರ ಉಪಸ್ಥಿತಿ ಬೇಕು.ಅವರು ಬಂದಾಗಲೆಲ್ಲಾ ಅವರ ಮೇಜುವಾನಿಯ ಖರ್ಚನ್ನು ನೋಡಿಕೊಳ್ಳಬೇಕು ಊರವರು.ಜಾತ್ರೆಯ ಸಂದರ್ಭದಲ್ಲಂತೂ ಇಪ್ಪತ್ತೋ ಮೂವತ್ತೋ ಸಾವಿರದ ದೊಡ್ಡ ರಖಮೇ ಪೋಲೀಸರಿಗೆ ಮೀಸಲಿಡಬೇಕು. ಚೆಂದಾಗಿ ನಡೆಯುತ್ತಲಿದ್ದ ಭಾವೈಕ್ಯದ 'ಮೊಹರಮ್' ಗೂ ಮಂಕು ಕವಿದಿದೆ. 


ಎರಡೇ ದಶಕದಲ್ಲಿ ಊರೆಂಬ ಜಗತ್ತು ಹೇಗೆ ಮಗ್ಗುಲು ಬದಲಿಸಿತು ನೋಡಿ! ದೇವರನ್ನು ಮನುಷ್ಯತ್ವದಲ್ಲಿ ಹುಡುಕುವದ ಬಿಟ್ಟ ಧರ್ಮಗಳು ರಕ್ಕಸತನದಲ್ಲಿ ಹುಡುಕತೊಡಗಿದ್ದವು. ಬದುಕುವುದನ್ನೇ ಸರಿಯಾಗಿ ಕಲಿಸದ ಧರ್ಮಗಳು ಸತ್ತ ನಂತರದ ಮೋಕ್ಷದ ಬಗ್ಗೆ ಅದೇನು ತಾನೇ ಹೇಳಿಯಾವು!


ಧರ್ಮಕ್ಕಿಂತಲೂ ಬದುಕು ದೊಡ್ಡದು ಕಣ್ರೀ..ಹಳ್ಳಿಗಳ ಜನರಿಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಬೇಕಾದಷ್ಟು ವಿಷಯಗಳಿವೆ. ಅವರುಗಳ ಬದುಕುಗಳೇ ಸ್ಥಿತ್ಯಂತರ ತಪ್ಪಿವೆ.ನೀರಿಲ್ಲದೆ ಬೋರುವೆಲ್ಲುಗಳು ಬತ್ತಿವೆ. ಚೆಂದನೆಯ ಎಲೆಬಳ್ಳಿಯ ತೋಟಗಳು ಒಣಗಿವೆ.ಮಳೆ ಬಿದ್ದರೂ ಬೆಳೆಗಳು ಕೈಗೆ ಬರದೆ ವರ್ಷಕ್ಕೊಂದು ಹೊಸ ರೋಗಕ್ಕೆ ತುತ್ತಾಗುತ್ತಿವೆ. ಹೇಗೋ ಬೆಳೆ ಬಂದರೂ ಬೆಲೆ ಸಿಗಬೇಕಲ್ಲ?

ಕೈಗೆ ಬಂದ ಮಗನಿಗೆ ಹೆಣ್ಣು ಸಿಗುತ್ತಿಲ್ಲ.ಮನೆ ಕಟ್ಟಲು,ಮಗಳ ಮದುವೆಗೆ ಮಾಡಿದ್ದ ಸಾಲ ತೀರುತ್ತಿಲ್ಲ....

ಇಷ್ಟೆಲ್ಲಾ..ಚಿಂತೆಗಳ ನಡುವೆ ಈ ಧರ್ಮ ತಾಢನಗಳು! 

1 comment:

  1. ಅಣ್ಣ ಮುಸ್ಲಿಮರ ಬಗ್ಗೆ ನಿನ್ನ ಸಾಫ್ಟ್ ಕಾರ್ನರ್ ಇಲ್ಲಿ ಅಗತ್ಯ ಇರಲಿಲ್ಲ

    ReplyDelete

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...