ಕವಿತೆಯೇ...
ನೀನೀಗ ನನಗೆ ಮಜಾ ಅಲ್ಲ.
ನೀನೇನು ನನಗೆ ಖಯಾಲಲ್ಲ.
ನಿನ್ನನ್ನೇನು ನೂರು ಜನ ಓದಬೇಕಿಲ್ಲ.
ಓದಿದವರೆಲ್ಲ ನನಗೆ ಹೇಳುವ
ಭೋಪರಾಕುಗಳಿಂದ ಆಗಬೇಕಾದ್ದೇನಿಲ್ಲ.
ನಿನ್ನನ್ನು ಬರೆದು,ಎಲ್ಲೋ ಹಾಕಿಕೊಂಡು
ನಾನೇನು ದೊಡ್ಡ ಪೋತಪ್ಪನಾಗಬೇಕಿಲ್ಲ.
ಕವಿತೆಯೇ....
ಛಂದ-ಪ್ರಾಸಗಳ ಅಲಂಕಾರ ನಿನಗಿಲ್ಲ.
ಶಬ್ಧ-ಅರ್ಥಗಳ ಭಾರ ಹೊರಬೇಕಿಲ್ಲ.
ಕಣ್ಣ ಸೆಳೆವ ಶೀರ್ಷಿಕೆಯೂ ನಿನಗಿಲ್ಲ.
ನೀನೇನು ವೇದಿಕೆಯ ಹಾಡಾಗಬೇಕಿಲ್ಲ.
ನೀನು ನನ್ನ ಅಂತರಂಗದ ಗೋಳೂ ಅಲ್ಲ.
ಬಹಿರಂಗದ ಬಾಯಿ ಬಡಾಯಿಯೂ ಅಲ್ಲ.
ಕವಿತೆಯೇ...
ನನ್ನಂತೆ ತುಳಿಸಿಕೊಂಡು ಅತ್ತವರ
ಅತ್ತು ಸತ್ತವರ,ಎದೆಯ ಬೆಂಕಿಯಾಗು!
ಬಡವರ ಬಟ್ಟೆಯಾಗದಿದ್ದರೂ ಚಿಂತೆಯಿಲ್ಲ.
ಅವರ ಹಸಿದ ಹೊಟ್ಟೆಯ ರೊಟ್ಟಿಯಾಗು!
ಬಿದ್ದವರ ಮೇಲೆತ್ತುವ ಬಲಗೈಯ ರಟ್ಟೆಯಾಗು!
ಜೋಲು ಮೊಲೆ ಚೀಪುವ ಕೂಸಿಗೆ ಜೋಲಿಯಾಗು.
ಬಾಯಿ ಸತ್ತವರಿಗೆ ಬಲ ತುಂಬಿ ಖಾಲಿಯಾಗು.
Shivagangammahshivu123@gmail.com
ReplyDelete