'ಇಲ್ಲೇ ಐದು ನಿಮಿಷ ಹೋಗಿಬರತೇನೆ ಅಂತ ಅವನು ಹೋದ ಕಣ. ಇವತ್ತಿಗೆ ಐನೂರು ದಿನ ಆದವು.ಬರಲೇ ಇಲ್ಲ ಹೋದವನು!' - ಅವಳು ಹೇಳುತ್ತಲೇ ಇದ್ದಳು. ತುಂಬಾ ಚಂದನೆಯ ಸಂಸಾರವಾಗಿತ್ತು ಅವಳದು. ಎರಡು ವರ್ಷದ ಹಿಂದೆ ಗಂಡ ಆ್ಯಕ್ಸಿಡೆಂಟಿನಲ್ಲಿ ತೀರಿದಾಗಿನಿಂದ ಅವಳನ್ನು ಸಂತೈಸಿ ನಾನೇ ಬೇಸತ್ತಿದ್ದೆ.
'ಈ ಇಬ್ಬರು ಮಕ್ಕಳು ಇಲ್ಲದೇ ಇದ್ದಿದ್ರೆ ನಾನೂ ಅವತ್ತೇ ಅವನ ಜೊತೆಗೇ ಹೋಗಿಬಿಡುತ್ತಿದ್ದೆ.' ಬಿಕ್ಕುತ್ತಿದ್ದಳು ಅವಳು. ಇಬ್ಬರೂ ಮಕ್ಕಳು ಆಗಲೇ ಮಲಗಿದ್ದರು.
'ಎಲ್ಲರೂ ಕ್ಯಾಲೆಂಡರಿನಲ್ಲಿ ದಿನ ಎಣಿಸ್ತಾರೆ..ನಾನು ಪ್ರತೀ ನಿಮಿಷಕ್ಕೂ ಎಣಿಸ್ತಾ ಇದೀನಿ ಕಣೋ' ಅವಳ ಅಳುವಿನ ಕಟ್ಟೆ ಒಡೆದಿತ್ತು. ನನ್ನ ಕಣ್ಣಲ್ಲೂ ನೀರು!
ಅವಳ ಗಂಡನಂತೆ, ಇಲ್ಲೇ ಒಂದು ನಿಮಿಷ ಹೋಗಿಬರತೇನೆ ಅಂದು ಶಾಶ್ವತವಾಗಿ ತಣ್ಣಗೆ ಹೋಗಿ ಬಿಡುವ ರೀತಿಯನ್ನು ನಿರ್ಲಿಪ್ತನಾಗಿ ಯೋಚಿಸಿದ್ದೆ. ಸಾವಲ್ಲೂ ಕೂಡ ಒಳ್ಳೆಯ ಸಾವು-ಕೆಟ್ಟ ಸಾವು ಇರುವುದರ ಬಗ್ಗೆ ತಮಾಷೆ ಎನಿಸಿತ್ತು.
ಅದೆಷ್ಟು ಬಾರಿ ಅವಳ ಅಳುವಿನ ನದಿಗೆ ಎದೆಯೊಡ್ಡಿದ್ದೇನೋ ಏನೋ. ಸಮಯ ರಾತ್ರಿ 2 ಗಂಟೆಯಾಗಿತ್ತು.
ಹೆಡ್ ಫೋನಿನಲ್ಲಿ...
ಜಗಜಿತ್ ಸಿಂಗ್ ಮಾತ್ರ ಹಾಡುತ್ತಲೇ ಇದ್ದ! ಆ ಘಜಲಿನಲ್ಲಿ ಬದುಕಿತ್ತಾ..ಸಾವಿತ್ತಾ...ಎಂದು ಹುಡುಕುವ ಹೊತ್ತಿಗೆ ಬೆಳಕು ಹರಿದಿತ್ತು.
No comments:
Post a Comment