Sunday 14 November 2021

ಕೃಷ್ಣ ಲಹರಿ


 ಅಷ್ಟೆಲ್ಲಾ ಕಷ್ಟಪಟ್ಟು ಕಂಸನನ್ನು ಕೊಲ್ಲುತ್ತಾನೆ ಕೃಷ್ಣ...ಆದರೆ,ತಾನು ಒಂದು ದಿನವೂ ರಾಜನಾಗಿ,ಆಡಳಿತ ಮಾಡುವುದಿಲ್ಲ.ತನ್ನಣ್ಣ ಬಲರಾಮನಿಗೂ ಬಿಡಲಿಲ್ಲ. ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ.

ಅಷ್ಟೆಲ್ಲಾ ಶ್ರಮಹಾಕಿ,ಕೌರವ-ಪಾಂಡವರ ಕಲಹ ಬಗೆಹರಿಸಲೆತ್ನಿಸಿದರೂ ಕೊನೆಗೆ ಯುದ್ಧವೇ ಆಗುತ್ತದೆ. ಒಳ್ಳೆಯವರಾದ ಪಾಂಡವರ ಪರವಾಗಿ ನಿಂತು ದುಷ್ಟ ಕುರುಕುಲವನ್ನು ಧ್ವಂಸ ಮಾಡಿದ ಕೃಷ್ಣನಿಗೆ ದಕ್ಕಿದ್ದಾದರೂ ಏನು? ಗಾಂಧಾರಿಯ ಘೋರ ಶಾಪ! ಏಕಾಂಗಿಯಾಗಿ ನರಳೀ ನರಳೀ ಸಾಯುವ ಶಿಕ್ಷೆ!

ಕೊನೆಗೆ ಸ್ವಂತ ಸಹೋದರಿಯಾದ ಪಾಂಚಾಲಿಯೂ ಕೃಷ್ಣನನ್ನು ನಿಂದಿಸುತ್ತಾಳೆ.ಕುಲಘಾತಕ,ಸ್ವಾರ್ಥಿಯೆಂದು ಜರಿಯುತ್ತಾಳೆ.ಕೃಷ್ಣಕುಲವೂ ನಾಶವಾಗಲೆಂದು ಆಶಿಸುತ್ತಾಳೆ!

ಕೃಷ್ಣ ಮಾತ್ರ ತನ್ನ ಎಂದಿನ ಅದೇ ಮಂದಸ್ಮಿತದಲ್ಲೇ ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುತ್ತಾನೆ. ತನ್ನವರೆಲ್ಲಾ ಪರಸ್ಪರ ಹೊಡೆದಾಡಿ ಸಾಯುವುದನ್ನೂ...ತನ್ನ ತಂದೆತಾಯಿ,ಹೆಂಡಿರು ಮಕ್ಕಳ ಶವಗಳಿಗೆ ಸಂಸ್ಕಾರವೂ ಇಲ್ಲದೆ ಹದ್ದು-ಕಾಗೆಗಳು ತಿನ್ನುವುದನ್ನೂ ಹಾಗೂ..ತನ್ನ ಕೊಳೆತುಹೋದ ಕಾಲು,ಅದರ ನೋವನ್ನೂ ಸಹ!!


°°°°°°°°°°°°°°° * °°°°°°°°°°°° * °°°°°°°°°°°°°°°°°


              ಮಹಾರಾಜ ಕಂಸನ ಪ್ರಿಯ ಸಹೋದರಿಯೂ,ರಾಜಪುತ್ರಿಯೂ ಆದ ದೇವಕಿಯ ಗರ್ಭದಲ್ಲಿ ಜನಿಸುತ್ತಾನೆ ಕೃಷ್ಣ! ತನ್ನ ಹಡೆದವಳ ಅಕ್ಕರೆಯನ್ನು ಅರೆಕ್ಷಣವೂ ಸವಿಯುವ ಯೋಗವಿಲ್ಲದೆ,ಅವಳ ಮಾತೃವಾಂಛಲ್ಯವನ್ನೂ ತಣಿಸದೆ, ಅದೆಲ್ಲೋ ದೂರದ ಯಮುನಾನದಿ ತೀರದ ಹಳ್ಳಿಗಾಡೊಂದರ ಯಕಃಶ್ಚಿತ್ ದನಗಾಹಿಯೊಬ್ಬನ ಹೆಂಡತಿಯಾದ ಯಶೋದೆಯ ಮಡಿಲು ಸೇರುತ್ತಾನೆ!

ಆ ದಸ್ಯುಗಳಲ್ಲಿ ಪ್ರೀತಿಯ ನದಿಯನ್ನು ಹರಿಸುತ್ತಾನೆ.ಇಡೀ ಬೃಂದಾವನವು ಮೌಢ್ಯತೆ,ಅನಾಗರೀಕತೆಯಿಂದ ವಿಮುಕ್ತವಾಗಿ ಜೀವನಪ್ರೀತಿಯ ಸೆಲೆಯಾಗಿಬಿಡುತ್ತದೆ. ಅಲ್ಲಿ ಅರಳುವ ಪ್ರತೀ ಹೂವಿಗೂ ತುಂಟತನ,ಚಿಗುರಿದ ಪ್ರತೀ ಹುಲ್ಲುಗರಿಗೂ ಪ್ರೇಮದಾಸೆ ಹುಟ್ಟುತ್ತದೆ. ಒಂದು ರೀತಿಯ ಪ್ರೀತಿಯ ಮಾಯೆ ಅಲ್ಲಿನವರನ್ನೆಲ್ಲಾ ವಿವಶಗೊಳಿಸಿಬಿಡುತ್ತದೆ. ಎಲ್ಲರೂ ಪ್ರೀತಿಸುವವರೇ..ಪ್ರೀತಿಸಲ್ಪಡುವವರೇ ಆಗಿಹೋಗುತ್ತಾರೆ.

ಎಲ್ಲರಿಗೂ ಇದೊಂದು ಅದ್ಭುತವಾಗಿ ಕಂಡರೆ, ಯಶೋದೆಗೆ ಮಾತ್ರವೇ ಕೃಷ್ಣನ ತಬ್ಬುಗೆಯಷ್ಟೇ ಸಹಜವಾಗಿ,ವಾಸ್ತವವಾಗಿ ಕಾಣುತ್ತದೆ! ...

ಮತ್ತು ಆ ರಾಧೆಗೆ ಮಾತ್ರ ತಮಾಷೆಯಾಗಿ!!


:::::::::::::::::::::::::::::::::::::::::::::::::::::::::::::::::::::::


            ಕೃಷ್ಣ ತನ್ನ ಕಾಲಿಗೆ ಆ ಬೇಟೆಗಾರನೊಬ್ಬ ಗುರಿತಪ್ಪಿ ಹೊಡೆದ ಬಾಣವು ನಾಟಿ,ರಕ್ತ ಚಿಮ್ಮಿದ ಕೂಡಲೇ "ಅಮ್ಮಾ.." ಎಂದು ನರಳಿ ಕೂಗುತ್ತಾನೆ!

ಹಡೆದ ದೇವಕಿ,ಬೆಳೆಸಿದ ಯಶೋದೆಯರ ಜೊತೆಗೆ ಇನ್ನೂ ಒಬ್ಬ ತಾಯಿ ಇರುತ್ತಾಳೆ ಅವನಿಗೆ! ಅವಳೇ - "ಪೂತನಿ" ಎಂಬ ರಕ್ಕಸಿ! ಅವಳೊಬ್ಬಳೇ ಕೃಷ್ಣನಿಗೆ ಎದೆಹಾಲು ಕುಡಿಸಿದವಳು! ಅವಳಲ್ಲಿದ್ದ ರಕ್ಕಸತನದ ವಿಷವನ್ನು ಹೀರಿ,ಮಾತೃತ್ವವನ್ನು ಮೈಯಲ್ಲರಳಿಸುತ್ತಾನೆ ಬಾಲಕ ಕೃಷ್ಣ!

ಅವನ ಕೊನೇಗಾಲದಲ್ಲಾದ ಕಾಲಿನ ಆ ಗಾಯಕ್ಕೆ ತನ್ನ ಸೆರಗು ಹರಿದು,ಪಟ್ಟಿಕಟ್ಟಿ ಸಾಂತ್ವನಿಸಿದವಳು ಪೂತನಿಯೇ! ಆ ಸೆರಗಿನ ತುಂಡು ತುಳಸೀದಳವಾಗಿ, ಅವನ ಸುರಿದ ರಕ್ತವೆಲ್ಲ ಕಣಗಿಲದ ಹೂವಾಗಿ ಅವನ ಕಳೇಬರವನ್ನು ಅಲಂಕರಿಸಿದ್ದವು! 

ಪೂತನಿಯ ಸ್ತನದ ಮೇಲೆ ಮಾತ್ರ ಕೃಷ್ಣ ಕಚ್ಚಿದ ಹಲ್ಲಿನ ಮುದ್ದಾದ ಗುರುತು!!


             

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...