Saturday 13 November 2021

ಮದುವೆಗಳು ಅಂದರೆ....

 

ಅಲ್ಲೊಂದಷ್ಟು ಹಾಸ್ಯ, ಕಾಲೆಳೆತ,ಸಣ್ಣ ಜಗಳ,ಹುಸಿಮುನಿಸುಗಳ ನಡುವೆಯೇ ದುಃಖ-ದುಮ್ಮಾನಗಳ ಮಾತು-ನಗುಗಳು...ಹಿರಿಯ ಜೀವಗಳ ಬದುಕಿನ ಪಾಠ,ಗೆಣೆಕಾರ್ತಿಯರ ಅಕ್ಕರೆ,ಅಪ್ಪನ ದುಗುಡ,ಅಣ್ಣನ ಪ್ರೀತಿ,ತಂಗಿಯ ತರ್ಲೆ ಮತ್ತು ಆಗಾಗ ಗೊತ್ತಿಲ್ಲದೆ ಒರೆಸಿಕೊಳ್ಳುವ ಅವ್ವನ ಕಣ್ಣಿನ ಮುಸಲಧಾರೆ....

ಇದರ ಜೊತೆಗೆ ಜನಪದದ ತುಂಟತನವೇನು ಕಡಿಮೆಯೇನು? ಹಾಡಿನಲ್ಲೇ ಬೀಗತಿಯ ಹಂಗಿಸುವ,ಹಾಡಿನಲ್ಲೇ ಭವಿತವ್ಯದ ಜವಬ್ದಾರಿಗಳನ್ನು ನಿರ್ದೇಶಿಸುವ ಹಳ್ಳಿಗರ ಮದುವೆಗಳು ನಿಜಕ್ಕೂ ಸುಂದರ..ಮೌಲಿಕ! ಅಲ್ಲೇ ಆಧ್ಯಾತ್ಮದ ಅನುಸಂಧಾನ,ಲೌಕಿಕದ ವ್ಯವಹಾರ..ಎಲ್ಲವೂ ಜರುಗಿಬಿಡಬಲ್ಲವು!


ಮೊದಲೆಲ್ಲಾ ತಿಂಗಳಿಡೀ ಮದುವೆಯಿರುತ್ತಿತ್ತಂತೆ. ಈಗೆಲ್ಲಾ ಎರಡೇ ದಿನಕ್ಕೆ ಲಕ್ಷಗಟ್ಟಲೆ ಸಾಲವಾಗಿ ಹೈರಾಣಾಗಿರುತ್ತಾರೆ ಪೋಷಕರು. ಸೋಬಾನೆ-ಸೊವ್ವೆಗಳಿಲ್ಲ. ಫೋನುಗಳಲ್ಲೇ ಹಳಬರಾಗಿರುವ ಜೋಡಿಗಳಿಗೆ ಶಾಸ್ತ್ರ-ಮೌಲ್ಯಗಳ ಹರಕತ್ತೇ ಗೊತ್ತಿರೋದಿಲ್ಲ. ಇನ್ನು ಸೋಬಾನೆ-ಸೊವ್ವೆಗಳೆಲ್ಲಿ ಇದ್ದಾವು? 

ಸಿಟಿಮಂದಿ ವಿಷಯ ಬಿಡಿ,ಅವರಿಗೆ ಅದೊಂದು Event management company ಯೊಂದರ ಪ್ಯಾಕೇಜಷ್ಟೇ!


ಇನ್ನು ಈ ಕೊರೊನಾ ಕಾಲದಲ್ಲಂತೂ ಓಣಿಗೂ ಗೊತ್ತಾಗದೆ ಕಳ್ಳತನದಲ್ಲೇ ಮದುವೆಗಳು! ಕರುಳ-ಬಳ್ಳಿಗಳ ಬಂಧಗಳನ್ನೇ ಈ ಕೋವಿಡ್ ಕತ್ತರಿಸಿಬಿಟ್ಟಿದೆ. ಎಂಥಾ ವೈರಿಗಳೂ ಕೂಡ ಸತ್ತಾಗ ಮಣ್ಣಿಗೆ ಹೋಗುತ್ತಿದ್ದವರು,ಈಗ ಕುಟುಂಬದವರು ಸತ್ತರೂ ಹೋಗಲು ಹಿಂದುಮುಂದು ನೋಡುವಂತಹ ಸ್ಥಿತಿ.. ಹೀಗಿದ್ದಾಗ ಮದುವೆಗೆ ಹೋಗುವುದು ದೂರದ ಮಾತು!


ಈ ಕೊರೊನ ಒಂದು ರೀತಿಯಲ್ಲಿ ಬಡವರ ಮದುವೆಯ ಅಷ್ಟೋ ಇಷ್ಟೋ ಖರ್ಚುಗಳನ್ನು ಕಮ್ಮಿ ಮಾಡಿದ್ದೇನೋ ನಿಜವೇ..ಆದರೆ, ಸಂಬಂಧಗಳನ್ನು ತೆಳವುಗೊಳಿಸಿದ್ದು ದುರಂತ. ಮದುವೆಗಳು ಅಂದರೆ,ಹೆಣ್ಣುಮಕ್ಕಳ ಸಂತೆ! ಯಾವತ್ತೋ ಕಲೆತವರು,ಅವತ್ತು ಕಲೆತು ಬಾಯತುಂಬಾ ಮಾತಾಡುವ ದಿನ. ಆ ಹಳ್ಳಿಯ ಹೆಂಗಸರಿಗೆ ಬೇಕೆಂದಾಗ ಬೇಕಾದವರನ್ನು ನೋಡೋಕೆ ಹೋಗೋದ ಸಾಧ್ಯವಿಲ್ಲವಲ್ಲ! ಹಾಗಾಗಿ ಈ ಮದುವೆಗಳಲ್ಲಿಯೇ ಅವರ ಬಾಲ್ಯದ ಗೆಣೆಕಾರ್ತಿಯರನ್ನು ,ದೂರದ ಬಂಧುಗಳನ್ನು ಭೇಟಿ ಮಾಡುವುದು!


             ಈಗೀಗ ಹಳ್ಳಿಗಳು ಬದಲಾದಂತೆ ತೋರಿದರೂ ಸಂಬಂಧಗಳ ದಟ್ಟತೆ ಇನ್ನೂ ಹಾಗೇ ಇದೆ ಕಣ್ರೀ..ಹಾಗೇ ಇರಬೇಕು ಕೂಡಾ! ಅದೇ ಜೀವದ್ರವ್ಯವಲ್ಲವೇ ಬದುಕುಗಳಿಗೆ!




No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...