ಯಾವುದೋ 'ಪುರುಷರೇಣು'ವಿನ ಫಲಿತಕ್ಕಾಗಿ 'ಭೂಮಿ'ಯಾಗುತ್ತಾಳೆ ಹೆಣ್ಣು! ತನ್ನ ಸರ್ವ ಸತ್ವಗಳನ್ನೆಲ್ಲಾ ಬಸಿದು,ತನ್ನ ಉಸಿರನ್ನೇ-ಉಣಿಸನ್ನೇ ಗರ್ಭಸ್ಥ ಕಂದನೊಂದಿಗೆ ಹಂಚಿಕೊಂಡು,ಹೊತ್ತುಕೊಂಡು ನಡೆದು, ಮರಣಸದೃಶ ನೋವುನನುಭವಿಸಿ ಹೆತ್ತರೂ...ಆ ಮಗುವು ಅದೇ 'ಪುರುಷ'ನನ್ನೇ ಪ್ರತಿನಿಧಿಸುತ್ತದೆಯೇ ಹೊರತು ಹೆತ್ತೊಡಲನ್ನಲ್ಲ! ಪ್ರಕೃತಿಯೇ 'ಪುರುಷ ಪ್ರಧಾನ್ಯ'ವನ್ನು ಪೋಷಿಸುವ ಬಗ್ಗೆ ನನಗೆ ಈಗಲೂ ಸೂಜಿಗವಿದ್ದೇ ಇದೆ!
ಸಕಲ ಸತ್ವವನ್ನೂ ಒದಗಿಸಿ,ಬೀಳುವ ಮಳೆಗೆ ಬೊಗಸೆ ಹಿಡಿದು ಕೂಡಿಸಿ-ಕುಡಿಸಿ,ಬೆಳೆಸಿದ್ದು 'ಭೂಮಿ'! ಮೊಳೆತ ಗಿಡಕ್ಕೆ ಭೂಮಿಯ ಹೆಸರಿಲ್ಲ...! 'ಬೀಜ'ದಿಂದಲೇ ಆ ಗಿಡದ ತಳಿ-ಹೆಸರು ಗುರುತಿಸುತ್ತೇವಲ್ಲವೇ ನಾವು!
Umbilical Cord ನ್ನು ಕತ್ತರಿಸಿಕೊಂಡ ಮಾತ್ರಕ್ಕೇ ತಾಯಿಯಿಂದ ಬೇರ್ಪಟ್ಟುಬಿಡುತ್ತದೇನು ಕೂಸು? Placenta ದೊಂದಿಗೇನೆ ತಾಯಿಋಣಿ ತೀರಿಬಿಡುತ್ತದೇನು?
"ಮಾತೃತ್ವ" ವೇ ಹಾಗೆ! ಎಲ್ಲವನ್ನು ನೀಡಿಯೂ ಏನೂ ಅಲ್ಲದಂತಾಗಿಬಿಡುವ ಔದಾರ್ಯ,ತಾನೇ ಅಂತಸ್ಥವಾಗಿದ್ದೂ ನಿಃಶೂನ್ಯವೆನಿಸುವ ತ್ಯಾಗ! ತನ್ನ ತಾನೇ ಕರಗಿಸಿಕೊಂಡು ಲಯವಾಗಿ,ಜೀವ ಜಾಲ ಸರಣಿಯ ತುಣುಕೊಂದರ ರೇಣುವಿನ ಧೂಳಾಗಿಹೋಗುವ ಸೃಷ್ಟಿಕಾರ್ಯದ ಭೂಮಾನುಭೂತಿ ಕ್ರಿಯೆ!
"ತಾಯಿ" ಯಾಗೋದು ಅಂದರೆ ಸುಮ್ಮನೆ ಅಲ್ಲ..!
No comments:
Post a Comment