ಒಂದು ಬದುಕಿನ ನೆಲೆಯನ್ನು ಹಸಿವು ಕಟ್ಟುತ್ತದೆ.ಅಂತಹ ಸಾವಿರ ಬದುಕುಗಳಿಂದಲೇ ಸಮಾಜ ಹುಟ್ಟುತ್ತದೆ.ದೇಶ ಮೈದಳೆಯುತ್ತದೆ.ಸಾತ್ವಿಕ ಹಸಿವು ನೀಗುವ ಅವಕಾಶಗಳು ಹೆಚ್ಚಿದಷ್ಟೂ ಸುಂದರ ಸಮಾಜ ಬೆಳೆಯಬಲ್ಲದು ಹಾಗೆಯೇ ಹಸಿವು ವಿಕೃತತೆಗೆ ತಿರುಗಿದಾಗಲೆಲ್ಲ ಸಮಾಜವಿರಲಿ,ಜೀವ ಸಂಕುಲದ ಅಸ್ತಿತ್ವವೇ ಲಯವಾಗುತ್ತದೆ.
ಈ ದೇಶವೆಂದರೇನೆ, ಒಂದು ಹಸಿದವರ ಜೋಪಡಿ! ಹೊಟ್ಟೆ ತುಂಬಿದವರ - ತುಂಬದವರ ನಡುವಿನ ಸಂಘರ್ಷವೇ ಇದರ ಇತಿಹಾಸ. ವರ್ತಮಾನವೂ ಅದೇ..ಭವಿಷ್ಯವೂ ಅದೇ! ಏನೋ ಒಂದಷ್ಟು GDP,FDA ಎಂಬೆಲ್ಲಾ ಶಬ್ಧಗಳ ಅಲಂಕಾರದ ಹೊದಿಕೆ ಇರಬಹುದಷ್ಟೇ! ಹಸಿವು ತಣಿಸುವ ಭರವಸೆಯ ಮಾತುಗಳೇ ರಾಜಕಾರಣ! ಹಸಿವನ್ನು ತುಚ್ಛವಾಗಿ ಕಾಣುವವನೇ ದೇಶದ್ರೋಹಿ. ಬೆವರ ಬಸಿದು,ಅನ್ನ ಬೆಳೆದು ಹಸಿವ ತಣಿಸುವ ಪ್ರತೀಯೊಬ್ಬ ರೈತನೂ ಈ ದೇಶದ ಸೈನಿಕನೇ!
ಅನ್ನ ಬೆಳೆವ,ಹಸಿವ ತಣಿಸುವ ಚಿಂತನೆಗಳೆಲ್ಲವೂ ರಾಷ್ಟ್ರೀಯತೆ! ದೇಶದ ಬೆವರದೊರೆಗಳೆಲ್ಲರೂ ರಾಷ್ಟ್ರಭಕ್ತರೇ! ಇದನ್ನು ಹೊರತುಪಡಿಸಿ, ಬೇರೆಯ ರಾಷ್ಟ್ರಭಕ್ತಿಯಿಲ್ಲ...!
ಇದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು.ಪುಸ್ತಕದಲ್ಲಿ ಅದ್ಯಾವ ಕಲರಿನ ಬದನೇಕಾಯಿ ಬೇಕಾದರೂ ಇದ್ದುಕೊಳ್ಳಲಿ..ನಾವು ಇಷ್ಟು ಬಿಟ್ಟು ಬೇರೆಯದನ್ನು ಅವರ ತಲೆಗೆ ತುಂಬಿಸುವ ಅಗತ್ಯವಿಲ್ಲ..ಅದು ಅವರಿಗೆ,ಅವರ ಭವಿಷ್ಯಕ್ಕೆ..ಮತ್ತು ದೇಶಕ್ಕೆ ಸಾಕಷ್ಟಾಯಿತು!
ಆದರೆ, ಎತ್ತ ಸಾಗುತ್ತಲಿದೆ ಈ ದೇಶ? ಎಲ್ಲರೂ ಭ್ರಮೆಗಳಲ್ಲಿ ಬದುಕುತ್ತಲಿದ್ದೇವೆ.ಕೃತಕ ವಿಕೃತ ಮುಖವಾಡಗಳನ್ನು ತೊಟ್ಟು ಅಸಹ್ಯದ ಬದುಕು ಬದುಕುತ್ತಲಿದ್ದೇವೆ. ಮೌಲ್ಯದ ಜೀವನವೇ ಇವತ್ತು ಅಪಹಾಸ್ಯಕ್ಕೊಳಗಾಗುತ್ತಲಿದೆ. ಗಾಂಧಿ,ಬುದ್ಧರೆಲ್ಲರೂ ನಮ್ಮ ತಲೆಮಾರಿನವರಿಗೆ ಕಾಮಿಡಿ ಐಟಂಗಳಂತೆ ಕಾಣುತ್ತಲಿದ್ದಾರೆ.
ಈ ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲದಲ್ಲಿ ಎಲ್ಲರೂ ಹೀರೋಗಳಾಗಿ ಹೋಗಿದ್ದಾರೆ. ಕೆಲಸಕ್ಕೆ ಬಾರದ್ದೆಲ್ಲಾ ವೈರಲ್ ಆಗಿ, ಕಚಡಾಗಳೆಲ್ಲಾ ಸುದ್ದಿಯಾಗುತ್ತಿದ್ದಾರೆ. ತಿದ್ದಬೇಕಾದ ಸುದ್ದಿ ಮಾಧ್ಯಮಗಳು ಹಾದರದ ಅಡ್ಡೆಗಳಾಗಿವೆ..ಎಲ್ಲವೂ ಇಲ್ಲಿ ಬಿಜಿನೆಸ್ಸೇ ಆಗಿಹೋಗಿಬಿಟ್ಟಿದೆ..
ಹೀಗಿದ್ದಾಗ..ರಾಜಕಾರಣದ ಬಗ್ಗೆ ಅದ್ಯಾವ ಭರವಸೆ ಇಡಬೇಕು ಅಲ್ಲವೇ? ಸಕಲೆಂಟು ಪಾಪದ ಕೂಪವೇ ಅದಲ್ಲವೇ?
ಪ್ರಜಾಪ್ರಭುತ್ವ - ನಾಶವಾಗುವ ಕಾಲ ಹತ್ತಿರ ಬಂತೇನೋ ಅನಿಸಿಬಿಡುತ್ತದೆ ಒಮ್ಮೊಮ್ಮೆ.
ಆದರೂ..ಅದೆಲ್ಲೋ ಮೂಲೆಯಲ್ಲಿ ಒಂದು ಕುಡಿಯಾಸೆ ಇದ್ದೇ ಇದೆ..ಆ ಕುಡಿಯೇ ಬೆಳಕಿನ ಕೋಲಾಗಬೇಕಷ್ಟೇ ಈ ದೇಶಕ್ಕೆ!!
W3
ReplyDeleteCry Hungry
ReplyDelete