Wednesday 3 July 2019

"ಯಾವ ಕವಿತೆ?"


ಸುರಿದ ಆರಿದ್ರೆಯ ಮಳೆ ಹನಿಗೆ
ಬಾಯೊಡ್ಡಿದ್ದವು ಜೀವಗಳೆಲ್ಲ ಬಾನಿಗೆ
ಚಿಗಿತ ಮರದೆಡೆಗೆ,ಓಡಿದೆ ದುಂಬಿ ಜೇನಿಗೆ
ಮೊಳೆತ ಬೀಜದ ಸಾಲು ಕಂಡ ರೈತನಿಗೆ
ಹಾಯೆನಿಸಿ,ಹೊಮ್ಮಿದ್ದು ಯಾವ ಕವಿತೆ?

ಇಲ್ಲಿ ಯಾರೂ ನಿಂತು ಕೇಳಲಿಲ್ಲ
ಅರಳಿದ ಹೂಮೊಗ್ಗಿನಾ ಸವಿಸೊಲ್ಲ
ರವಿಕಿರಣ ಸೋಕಲು ಮೈ ಮೆಲ್ಲ
ತಣ್ಣಗೆ ಅರಳಿದ್ದು ಆಗ ಯಾವ ಕವಿತೆ?

ನಟ್ಟಿರುಳಲ್ಲೇ ಕಂಡ ಬೆಂಕಿಯ ಜ್ವಾಲೆ
ಹಾಗೇ ಹೊತ್ತಿ ಹೀಗೆ ಆರಿತ್ತು ಒಮ್ಮೆಲೆ
ಉರಿದ ಹಾಗೆ ಬಡವರ ಮನೆಯ ಒಲೆ
ಅರೆಕ್ಷಣ ಕಣ್ಣಲರಳಿದ ಕಾಂತಿ ಯಾವ ಕವಿತೆ?

ರಾತ್ರಿ ನಿದ್ದೆಯ ಕನವರಿಕೆ
ಅದಕ್ಕೊಂದಷ್ಟು ಭಾವದ ಬೆರಕೆ
ಒಪ್ಪುವ ಎಲ್ಲಿನದೋ ಚಿತ್ರಿಕೆ
ಅದಕ್ಕೆ ಈ ಬ್ಲಾಗಿನ ಕೂಡಿಕೆ
ಈಗ ನಿಮ್ಮ ಕೈಬೆರಳು ಸವರಿದ
ಬೊಗಸೆ ಅಕ್ಷರದ ಮಾಲಿಕೆ,ಯಾವ ಕವಿತೆ?






No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...