Friday 1 September 2017

...ಕಾದ ನೆನಪು ಕಾಡುತ್ತಲಿದೆ.

ಬಾಲ್ಯವೇ ಹಾಗೇ...ಕೊನೆಯ ತನಕ ಕಾಡುತ್ತಲೇ ಇರುತ್ತದೆ.ಅದರಲ್ಲೂ ಹಳ್ಳಿಗರ ಬಾಲ್ಯವಂತೂ ನೆನಪುಗಳ ಕುಂಭದ್ರೋಣ ಮಳೆ!
ಚಿಕ್ಕವರಿದ್ದಾಗ ಎಮ್ಮೆ-ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ ನೆನಪು ನಿಮಗೂ ಇರಬಹುದೇನೋ...ಭಾನುವಾರದ ರಜೆಯಿರಲಿ,ಶನಿವಾರವೂ ಶಾಲೆಗೇ ಪೋಷಕರು ಬಂದು ಮಕ್ಕಳನ್ನು ದನಕಾಯಲು ಕರೆದುಕೊಂಡು ಹೋಗುತ್ತಿದ್ದ ದಿನಗಳವು!
ಕೋಟೆಗಡ್ಡೆ ಅಡವಿ,ಗುಡ್ಡದ ಅಡವಿಗಳಲ್ಲಿ ಗೆಳೆಯರೊಂದಿಗೆ ಓಡಾಡಿದ್ದು ಇನ್ನೂ ಹಚ್ಚಹಸಿರಾಗಿದೆ ನನ್ನ ಸ್ಮೃತಿಪಟಲದಲ್ಲಿ!
ಮೊದಲ ಬಾರಿಗೆ 'ಬಿದ್ದ ಗುಂಡು' ಹತ್ತಿದಾಗ ಎಷ್ಟು ಸಂತೋಷವಾಗಿತ್ತೊ,ಮೊದಲ ಬಾರಿ ನರಿಗವಿಯ ಬಾಗಿಲಲ್ಲಿ ಹಣಿಕಿದಾಗ ಅಷ್ಟೇ ಭಯವೂ ಆಗಿತ್ತಾಗ!
ನಿಂಬಳಗೆರೆ ಗುಡ್ಡ ಹತ್ತಿದಾಗ ಮೌಂಟ್ ಎವೆರೆಸ್ಟ್ ಹತ್ತಿದಷ್ಟೇ ಖುಷಿಯೂ ಆಗಿತ್ತು...
ಆಗೆಲ್ಲಾ ನಮ್ಮ ಜೊತೆ ಊರಿನ ವಯಸ್ಸಾದ ಅಜ್ಜಿಯಂದಿರೂ ಬರುತ್ತಿದ್ದುದರಿಂದ ಅವರೇ ನಮ್ಮ ಮೊದಲ ಗೈಡುಗಳೂ ಆಗಿರುತ್ತಿದ್ದರು.
ದನಗಳನ್ನು ಅಡವಿಗೆ ಹೊಡೆದುಕೊಂಡು ಹೋಗುವಾಗ ಹಾದಿಬದಿಯ ಹೊಲದವರ ಜೊತೆ ನಿತ್ಯವೂ ನಡೆಯುತ್ತಿದ್ದ ಜಗಳ-ಕದನಗಳದ್ದೇ ಒಂದು ಕಥೆಯಾದರೆ,ಮನೆಗೆ ಹಿಂತಿರುಗುವಾಗ ಬೇಕೆಂತಲೇ ತಡಮಾಡಿ,ಹೊಲದವರೆಲ್ಲಾ ಹೋದ ನಂತರ ಅವರ ಹೊಲಗಳ ಮೇಲೆ ನಾವೂ ನಮ್ಮ ದನಗಳೂ ರೋಷ ತೀರಿಸಿಕೊಳ್ಳುತ್ತಿದ್ದ ಕಥೆಯೆ ಬೇರೆ!
ಮೊದಮೊದಲು ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದುದೂ ಉಂಟು,ಮುದ್ದೆಯ ಮೇಲೆ ಒಂದು ಕುಳಿ ಮಾಡಿ ಅದರಲ್ಲಿ ಬೆಣ್ಣೆಯ ಉಂಡೆಯೋ,ಬದನೇ ಚಟ್ನಿಯೋ,ಗುರೆಳ್ಳು ಪುಡಿಯೋ ಹಾಕಿ ಬಟ್ಟೆಯ ಪುಟ್ಟ ಗಂಟೊಂದನ್ನು ನಮ್ಮ ಅಕ್ಕಂದಿರೋ ಅಮ್ಮನೋ ಕಟ್ಟಿಕಳಿಸುತ್ತಿದ್ದರು.
ಆ ಗಂಟು ಟವೆಲ್ಲಿನ ಒಂದು ತುದಿಗೆ ಸೇರಿ ತಲೆ ಮೇಲಿಂದ ನೇತಾಡುವಂತೆ ಬಿಗಿದುಕೊಂಡು ಹೊರಡುತ್ತಿದ್ದೆವು.
ಬುತ್ತಿಯನ್ನು ಹೋದ ಕೂಡಲೇ ಉಂಡುಬಿಡುವ ಅವಸರ ನಮಗೆ! ಗುಡ್ಡದ ಕೆಳಗೋ,ಅಡವಿಯ ಅಲ್ಲಲ್ಲಿ ಹರಿಯುತ್ತಿದ್ದ ಪರಿಶುಭ್ರ ನೀರಿನಾಸರೆ ಸಿಕ್ಕೊಡನೆ ಊಟ ಮುಗಿಯುತ್ತಿತ್ತು.ತೀರಾ ಮಳೆ ಬರದೆ ಬಹಳ ದಿನವಾಗಿ ಹಳ್ಳ/ಸರ ಬತ್ತಿದ್ದರೆ "ಒರತೆ" ಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆವು.
ಅಡವಿಗಳಲ್ಲಿ ಆಟಕ್ಕೇನೂ ಕೊರತೆಯಿರಲಿಲ್ಲ.'ತೀಟೆ ಸೊಪ್ಪು'ಎನ್ನುವ ಉರಿಯುಂಟುಮಾಡುವ ಗಿಡವೊಂದು ಗುಡ್ಡದ ಮಟ್ಟಿಯ ಕೆಳಗೆ ಸಿಗುತ್ತಿತ್ತು..ಅದರಿಂದ ಯಾರಿಗಾದರೂ ಸೋಕಿಸಿದರೆ ನವೆ-ಉರಿಯ ಅನುಭವವಾಗಿ ದದ್ದುಗಳೇಳುತ್ತಿದ್ದವು.ನಾವು ಆ ತೀಟೆ ಸೊಪ್ಪಿನ ಗಿಡಗಳನ್ನು ಹಿಡಿದು ಒಬ್ಬರಿಗೊಬ್ಬರು ಬಡಿದಾಡುತ್ತಿದ್ದೆವು!
ಸೇಂಗಾ ಬಳ್ಳಿಯ ಹೊರೆಗಳನ್ನು ರಾಶಿ ಹಾಕಿ ಸುಟ್ಟು,ಸುತ್ತಲೂ ಮಾತನಾಡುತ್ತಾ ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜವೇ ಬೇರೆ! ಸೂರ್ಯಕಾಂತಿ ತೆನೆಗಳನ್ನು ಕಿತ್ತು ವೃತ್ತಾಕಾರವಾಗಿ ಕಾಳು ಬಿಡಿಸುತ್ತಾ ಹಲ್ಲುಗಳೆಲ್ಲಾ ಕಪ್ಪಡರುವುವರೆಗೂ ತಿನ್ನುತ್ತಿದ್ದೆವು.
ದನಗಳು ಕಾಣದೆ ಮರೆಯಾಗಿ,'ಕಳೆದು ಹೋದಾಗ' ಎಲ್ಲರೂ ಪರಸ್ಪರ ಸಹಾಯಕ್ಕೆ ಬರುತ್ತ ಹುಡುಕಲು ಹೊರಡುತ್ತಿದ್ದೆವು.ಎತ್ತರದ ಮಟ್ಟಿಗಳನ್ನು ಹತ್ತಿ ನೋಡಿ ಕಂಡು ಹಿಡಿಯುತ್ತಿದ್ದೆವು.ಇನ್ನೂ ಕಾಣದಿದ್ದರೆ ಹತ್ತಿರದ ಗುಡ್ಡ ಹತ್ತುತ್ತಿದ್ದೆವು.
ತುಂಬಾ ಹೊತ್ತು ದನ ಸಿಗದೇ ಇದ್ದಾಗ ಅಳುವ,ಅಳುವವರನ್ನು ನೋಡಿ ನಗುವ ಕಲಾಪ ಇದ್ದೇ ಇರುತ್ತಾದರೂ ದನಗಳು ಮಾತ್ರ ತಪ್ಪದೆ ಸಾಯಂಕಾಲದ ಹೊತ್ತಿಗೆ ತಮ್ಮಷ್ಟಕ್ಕೆ ತಾವೇ ಎಲ್ಲೆಲ್ಲೋ ಮೇದು ಮನೆಗೆ ಮರುಳುತ್ತಿದ್ದವು.ನಮ್ಮ ಸಿಟ್ಟಿನ ಪ್ರಹಾರ ಅವುಗಳ ಮೇಲಾಗುತ್ತಿತ್ತು ಆಗ!
ಹೊಟ್ಟೆ ಹಸಿದಾಗ ಕಾರೆಹಣ್ಣು,ಬುಕ್ಕಿಹಣ್ಣು,ಹುಲುಲಿ ಹಣ್ಣು,ಪುಟ್ಲಾಸು ಹಣ್ಣು,ಕವುಳಿ ಹಣ್ಣುಗಳು ಧಂಡಿಯಾಗಿ ಸಿಗುತ್ತಿದ್ದ ಕಾಲವದು.ಬಸಳೀಕದ ಗಡ್ಡೆಯೋ,ಈಚಲ ಗಡ್ಡೆಯೋ ಅಪರೂಪವಾಗಿ ನಮ್ಮ ಹೊಟ್ಟೆ ಸೇರುತ್ತಿದ್ದುದೂ ಉಂಟು.
ಒಮ್ಮೊಮ್ಮೆ ಎಲ್ಲರೂ ಹತ್ತತ್ತು ರೂಪಾಯಿ ಹಣ ಹಾಕಿ ಕಾಡಿನಲ್ಲೇ ಮಂಡಾಳು ಒಗ್ಗರಣೆಯನ್ನೋ ಮಿರ್ಚಿಯನ್ನೋ ಮಾಡುತ್ತಿದ್ದುದೂ ಉಂಟು.
ಮುಂಗಾರಿನ ಸಮಯದಲ್ಲಿ ದನ ಮೇಯಿಸುವುದರಲ್ಲಿದ್ದ ಮಜಕ್ಕಿಂತಲೂ 'ಹಕ್ಕಲು'ಕಾಲದಲ್ಲೇ ಹೆಚ್ಚು ಮಜವಿರುತ್ತಿತ್ತು.ಎತ್ತುಗಳಿಗೂ ಬಿಡವಿನ ಕಾಲವಾದ್ದರಿಂದ ಎತ್ತುಗಳೂ,ಅವುಗಳ ಜೊತೆ ದೊಡ್ಡವರೂ ಬರುತ್ತಿದ್ದುದರಿಂದ ದನಕಾಯುವವರ ಸಂಖ್ಯೆ ಆಗ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು.ಚಿಣ್ಣಿದಾಂಡು,ಚೀಟಿ ಆಟ,ಜೂಜು,ಇಸ್ಪೀಟಾಟಗಳೂ ರಂಗೇರುತ್ತಿದ್ದವು.ಎಷ್ಟೋ ಜನ ಈ ದನಕಾಯುವುದರಲ್ಲಿನ ಸುಖದ ಆಕರ್ಷಣೆಯಿಂದಾಗಿ ಶಾಲೆಗಳನ್ನೇ ತೊರೆದಿದ್ದರು.ಬೇರೆ ಊರಿಗೆ ಓದಲು ಹೋಗುವವರಿಗೂ ಇದೊಂದು ಅವರನ್ನು obsessionನಂತೆ ಕಾಡುತ್ತಲೇ ಇರುತ್ತಿತ್ತು!

ನಿಜ; ಆಗ ನಮ್ಮ ಬದುಕು ಸರಳವಾಗಿತ್ತು.ಹಳ್ಳಿಯ ವ್ಯವಸ್ಥೆ ಈ ಮಟ್ಟಿಗೆ ಸಂಕೀರ್ಣಗೊಂಡು ಕಲುಷಿತಗೊಂಡು ಸೂಕ್ಷ್ಮತೆಗಳಿಗಿಳಿದಿರಲಿಲ್ಲ.
ಈಗ ಬಿಡಿ...
ಆ ಕಾಡೂ ಇಲ್ಲ,ದನಗಳೂ ಇಲ್ಲ..
ಹಾಗಾಗಿ ಆ ಪ್ರಕೃತಿಯೊಡನಾಟ ಈಗಿನ ಪೀಳಿಗೆಗಳಿಗೆ ದಕ್ಕುತ್ತಿಲ್ಲ..ಮೊಬೈಲಿನ ಗೇಮುಗಳೇ ಅವರ ಚತುರ್ಲೋಕಗಳಾಗಿರುವಂಥ ಕಾಲವಿದು!!
ಆದರೆ...
ಆ ದನಗಳನ್ನು
ಕಾದವರ ನೆನಪಿನಲ್ಲಿ ಮಾತ್ರ ತರೇದ ಮರದ ಮುಳ್ಳಿನಂತೆ ಆಗಾಗ ಮೀಟುತ್ತಲೇ ಇರುತ್ತವೆ..ಆ ಕ್ಷಣಗಳು...ಸಾವಿನಂಚಿನವರೆಗೂ!

ಕವಳೆ ಹಣ್ಣಿನ ಗಿಡ.

ಪುಟ್ಲಾಸು ಕಾಯಿಯ ಮರ.

ಹುಲುಗಿಲಿ ಹಣ್ಣಿನ ಗಿಡ..ತುಂಬೆಲ್ಲಾ ಹಣ್ಣು!

ಕಾರೆಯ ಹಣ್ಣಿನ ಪೊದರು..

1 comment:

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...