ಕುಂಟು ಬಿದ್ದ ಈ ದರವೇಶಿ ಬದುಕನೆತ್ತಿ ಕೈ ಹಿಡಿದು
ನಡೆಸುತ್ತೇನೆಂಬ ನಿನ್ನ ವಾಗ್ದಾನಕ್ಕೀಗ ಹತ್ತು ವರ್ಷ!
ಅವತ್ತು ಕೇಳಿಸಿಕೊಂಡಿದ್ದ ಆ ಹುಣಸೆಮರದಲ್ಲಿದ್ದ
ಕುಂಟಗುಬ್ಬಿಯೂ ಮುದಿಯಾಗಿ ಸತ್ತು ಮಣ್ಣಾಗಿರಬೇಕು!
ಅವತ್ತು ಬಿಡದ ಜಡಿಮಳೆ,ಬಾನಲ್ಲೊಂದು ಕಾಮನಬಿಲ್ಲು!
ಮತ್ತೆ ಮಳೆ ಬರಲಿಲ್ಲ ಬಿಡು...ಒಂದು ಹನಿಯೂ ಕೂಡ!
ಬದುಕಭೂಮಿಯ ಹಸಿರ ಹಸಿವು,ಬಿಸಿಲ ಹಂಚಿನ ಮೇಲೆ ಸತ್ತಿತ್ತು!
ಒಡೆದ ಕಾಲುಗಳಲ್ಲಿ ಒಸರಲು ರಕ್ತವಾದರೂ ಇತ್ತೇನು?
ನಿನ್ನ ಹೆಜ್ಜೆ ಮೂಡದ ಹಾದಿಯ ದಿಕ್ಕಿಗೆ ಸೂರ‌್ಯೋದಯವಾಗಲಿಲ್ಲ.
ಆ ಕುಂಟಗುಬ್ಬಿಯದ್ದೂ ಅಂಥದ್ದೇ ಹಾದಿಯಾಗಿತ್ತಲ್ಲವೇ?
ಇನ್ನೂ ಉಸಿರಿದೆ.ಬರುವ ಮಳೆಗೆ ಬೊಗಸೆಯೊಡ್ಡುವ ಆಸೆಗೆ.
ಒಡಲ ಕನಸಬೀಜ ಮೊಳೆಸಿ ಬೆಳೆಸಿ,ಮಾಡಬೇಕು ಸಾವ ಹಾಸಿಗೆ!
No comments:
Post a Comment