"ಯಾತಕ್ಕೆ ಮಳೆ ಹೋದವೋ
ಶಿವ ಶಿವ ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕೀಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ?
ಹಸುಗೂಸು ಹಸಿವೀಗೆ ತಾಳದೆಲೇ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತೀಗೆ ಅನ್ನಾವು ಇಲ್ಲದೆಲೆ
ಏರುತಾವೋ ಮೊಳಕೈಗೆ ಬಳೆ
ಹೊಟ್ಟೆಗೆ ಅನ್ನ ಇಲ್ಲದೆಲೇ
ನಡೆದರೆ ಜೋಲಿ ಹೊಡೆಯುತಲೇ
ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದೆಲೆ
ಒಕ್ಕಲು ಮಕ್ಕಳಂತೆ,ಅವರಿಗೆ ಬಿಕ್ಕಲಿಕೆ ತ್ರಾಣಿಲ್ಲವೋ
ಮುಕ್ಕೋಟಿ ಜನಗಳಿಗೆ ಅನ್ನವ ಇಕ್ಕಲಿಕೆ
ಮುಕ್ಕಣ್ಣ ಮಳೆಯ ಸುರಿಸೋ...
ಇಲ್ಲಿನ ರೈತಾಪಿ ಜನ,ಈ ವರ್ಷದ ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟು ಬಿತ್ತಿದ ಬೀಜಗಳೆಲ್ಲ ಗೇಣುದ್ದ ಬೆಳೆಯುತ್ತಲೇ ಮಳೆ ಇಲ್ಲದೇ ಪೂರ್ಣ ಒಣಗಿ ಹೋಗಿವೆ. ಸಾಲ ಸೋಲ ಮಾಡಿ ರಸಗೊಬ್ಬರ ಹಾಕಿ,ಕಳೆನಾಶಕ ಹೊಡೆದು ಹಸುಕಂದನಂತೆ ಕಾಪಾಡಿದ ಬೆಳೆಯು ಕಣ್ಣೆದುರಲ್ಲೇ ಒಣಗಿ ನಿಂತಿದೆ.
ಮೆಕ್ಕೆ ಜೋಳ,ಸೇಂಗಾ,ರಾಗಿ....
.....ಎಲ್ಲವೂ ಒಣಗಿವೆ!..ರೈತ ಸಂಕುಲದ ಭರವಸೆ ಕೂಡ!!
ಕಪ್ಪೆ ಮದುವೆ,ಕತ್ತೆ ಮದುವೆ ಎಲ್ಲಾ ಮಾಡಿದ್ದಾಯ್ತು..ತನ್ನ ತಿಥಿ ಮಾತ್ರ ಬಿಟ್ಟು. ನಿಷ್ಪಾಪಿ ರೈತನಿಗೆ ದೇವರೂ ಕೈ ಎತ್ತಿಬಿಟ್ಟ ನೋಡಿ! ಇನ್ನು ಈ ಸರಕಾರಗಳದ್ದು ಯಾವ ಸುಡುಗಾಡು ಲೆಕ್ಕ!
ಇದರ ಜೊತೆಗೆ ತಾಲೂಕಿನ ಹಳ್ಳಿಗಳನ್ನು ಡೆಂಗ್ಯು , ಟೈಫಾಯಿಡ್,ಚಿಕನ್ ಗುನ್ಯಗಳೂ ಹೊಕ್ಕಿವೆ. ಸರಕಾರಿ ಆಸ್ಪತ್ರೆಗಳು ವೈದ್ಯರು ನರ್ಸುಗಳು ರಣಹದ್ದುಗಳಂತೆ ರೈತರ ಚಕ್ಕಳ ದೇಹಗಳನ್ನು ಕುಕ್ಕಿ ತಿನ್ನುತ್ತಿದ್ದಾರೆ.
ರಾಜಕಾರಣಿಗಳ ಬಾಲಂಗೋಚಿಗಳಿಗೆ,ಪುಢಾರಿಗಳಿಗೆ ಮಾತ್ರವೇ ಮೊನ್ನೆ ಮೊನ್ನೆಯ ಸಾಲಮನ್ನ ಭಾಗ್ಯ ದಕ್ಕಿದೆ.ಸಾಮಾನ್ಯ ರೈತನಿಗೆ ಅಂಥ ಸೊಸೈಟಿ,ಬ್ಯಾಂಕುಗಳಲ್ಲಿ ಸಾಲವಾದರೂ ಹೇಗೆ ಹುಟ್ಟೀತು?
ಬರಪೀಡಿತ ಎಂದು ಘೋಷಿಸಿದರೂ ರೈತನಿಗೆ ಸಿಗುವುದಾದರೂ ಎಷ್ಟು? ಓಡಾಟದ ಖರ್ಚು,ಅಧಿಕಾರಿಗಳ ಲಂಚ ಕೊಟ್ಟು...ಅಬ್ಬಬ್ಬ ಅಂದರೆ ಎರಡು ಪ್ಲೇಟ್ ಒಗ್ಗರಣೆ ತಿನ್ನಬಹುದಾದಷ್ಟು!
ರೈತ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ.ವಾರದಲ್ಲೇ ಹಿರಿಯ ಹಬ್ಬ "ಮಾರ್ಲೋಮಿ" ಇದೆ.ಮಾಡಿದ ಸಾಲಗಳು,ಮಕ್ಕಳ ಮದುವೆ......ದೃಷ್ಟಿ ಮಾತ್ರ ಮೋಡಗಳತ್ತ.!
ಇಂಥದ್ದೊಂದು ಅಸಹಾಯಕ,ಅಸಹಿಷ್ಣಕ,ದೈನೇಸೀ ಪರಿಸ್ಥಿತಿಯ ಯಾವ ಮಾಧ್ಯಮಗಳೂ ತಲೆಕೆಡಿಸಿಕೊಳ್ಳೋದಿಲ್ಲ ಬಿಡಿ.ನ್ಯೂಸ್ ಚಾನೆಲ್ಲುಗಳು ಯಾವನೋ ನಟನ ಎರಡನೆಯವಳೋ ಮೂರನೆಯವಳೋ ಹೆಂಡತಿಯನ್ನು ಗಂಟೆಗಟ್ಟಲೆ ಸ್ಟುಡಿಯೋದಲ್ಲಿ ಕೂರಿಸಿಕೊಂಡು ನಿನ್ನ ಗಂಡನಿಗೆ ತಲೆ ಮಟನ್ ಅಂದರೆ ಭಾಳ ಇಷ್ಟನಾ ಅನ್ನುವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿವೆ.ಅದು ಅವರ ಟಿ.ಆರ್.ಪಿ.ಬಿಡಿ!
ಮುದ್ರಣ ಮಾಧ್ಯಮಗಳು ಮೋದಿ ಹಂಗೆ,ಕಾಂಗ್ರೆಸ್ ಹಿಂಗೆ,ಸೆಕ್ಯುಲರ್ರು ಫ್ಯಾಸಿಸಂ ಎನ್ನುವ ಸುಡುಗಾಡು ವಿಷಯಗಳ ಬಗ್ಗೆ ಲೀಪುಗಟ್ಟಲೆ ಬರೆಯುತ್ತಿವೆ..off course ಅದು ಅವುಗಳ ಸರ್ಕುಲೇಶನ್ ವಿಷಯ ಬಿಡಿ! ಬಿಸಿನೆಸ್ಸು ನ ಪದರದಲ್ಲಿ "ಅಕ್ಷರ ಹಾದರ" ಮಾಡುವ ಅವರಿಗೂ ರೈತ ಸೇಲಬಲ್ ಐಟಮ್ಮೇ ಅಲ್ಲವಲ್ಲ!
ಇನ್ನು ಕವಿಗಳು,ವಿಚಾರವಾದಿಗಳು ಅಸಹಷ್ಣಿತೆ,ಅರಾಜಕತೆ ಎಂದೆಲ್ಲ ಬರೆದು,ವದರಿ ತಮಗೆ ಕೊಟ್ಟಂತಹ ಪ್ರಶಸ್ತಿಯ ತಗಡಿನ ಫಲಕಗಳನ್ನು(ದುಡ್ಡಲ್ಲ!?) ಸರಕಾರಕ್ಕೆ ವಾಪಸ್ ಮಾಡುತ್ತಿದ್ದಾರೆ!
ಇವರಿಗೆ ಹಳ್ಳಿಗಳಲ್ಲಿನ ಅಸಹಷ್ಣಿತೆ,ಅಸಹಾಯಕತೆಗಳು ಕಣ್ಣಿಗೆ ಅಪ್ಪಿತಪ್ಪಿಯೂ ಬೀಳಲಾರವು..ಹಾಗಾಗಿ ಅವರೆಲ್ಲ ಮೋದಿಯ ವಿರುದ್ಧವೋ ಪರವೋ ಬರೆದುಕೊಂಡು ಬರೋದನ್ನ ಪಡೆದುಕೊಳ್ಳುವುದರಲ್ಲಿ ಮುಳುಗಿದ್ದಾರೆ.
ರೈತನಿಗೆ ತನ್ನ ಬದುಕಿನ ಅಸಹಷ್ಣಿತೆ,ಅಸಹಾಯಕತೆಯ ವಿರುದ್ಧ ಪ್ರತಿಭಟಿಸಿ ಸರಕಾರಕ್ಕೆ ವಾಪಾಸ್ ನೀಡಲು ಯಾವ ಪ್ರಶಸ್ತಿಗಳೂ ಇಲ್ಲವಲ್ಲ!..ಇರೋದು ಒಂದೇ; ಅದು ತನ್ನ ಜೀವ! ಅದನ್ನೇ ನೀಡುತ್ತಾನೆ.!
ಪತ್ರಿಕೆಗಳಲ್ಲಿ ಯಾವುದೋ ಮೂಲೆಯಲ್ಲಿ "ಸಾಲಬಾಧೆ-ರೈತ ನೇಣಿಗೆ ಶರಣು" ಎಂಬ ಸಿಂಗಲ್ ಕಾಲಂ ಸುದ್ದಿ ಬರಬಹುದಷ್ಟೇ!
ಅದಿರಲಿ, ರೈತನ ಆತ್ಮಹತ್ಯೆಯನ್ನೂ ಒಂದು ಪ್ರತಿಭಟನೆ ಎಂದು ಈ ಮಾಧ್ಯಮಗಳಿಗೆ,ಸರಕಾರಕ್ಕೆ ಅನಿಸುವುದೂ ಇಲ್ಲ.
ಇಂತಹ ಹೊತ್ತಲ್ಲೇ ಜನಗಳ ತೆರಿಗೆಯ ಹಣದಲ್ಲಿ ನಡೆವ ಅನಗತ್ಯ "ಉಪ ಚುನಾವಣೆ" ಬಂದಿದೆ. ನಿಲ್ಲುವವರು ಟಿಕೆಟ್ಟುಗಳಿಗೆ ಓಡಾಡುತ್ತಲಿದ್ದಾರೆ.ಟಿಕೆಟ್ ಸಿಕ್ಕವರು ಮತ್ತೆ ಹಳ್ಳಿಗಳಿಗೆ ಹೋಗಿ 'ನಿಮ್ಮೂರಿಗೆ ಭದ್ರಾ ನದಿ ನೀರು ತರುತ್ತೇವೆ,ನಮಗೇ ಓಟು ಹಾಕಿ' ಎಂಬ ಶಾಶ್ವತ ಭರವಸೆ ಕೊಡುವ ಹವಣಿಕೆಯಲ್ಲಿದ್ದಾರೆ.
ಸಾವು ಮಾತ್ರ ರೈತನ ತಲೆಬಾಗಿಲಲ್ಲಿ ಕುಳಿತು ಕಾಯುತ್ತದೆ.
ದನಕರುಗಳಿಗೆ ಹುಲ್ಲಿಲ್ಲ ಕಾಡಲ್ಲಿ! ನೀವೇ ನೋಡಿ ಇಲ್ಲಿ! |
ಕಮರಿದ್ದು ಬೆಳೆಯಲ್ಲ...ಬದುಕಿನ ಕನಸು! |
ಒಣಗಿ ನಿಂತ ಮೆಕ್ಕೆಜೋಳದ ಇನ್ನೊಂದು ಹೊಲದ ಚಿತ್ರ. |
ಮಳೆ ಕಾಣದೆ ತೆನೆ ಇಲ್ಲದೆ ಒಣಗಿದ ಮೆಕ್ಕೆ ಜೋಳ. |
ಸಂಪೂರ್ಣ ಒಣಗಿ ನಿಂತಿದೆ ರಾಗಿ. |
ಮಳೆ ಇಲ್ಲದೆ ಒಣಗಿದ ನೆಲಗಡಲೆ ಬೆಳೆ. |