ಈ ಅಕಾಲಿಕ ಮಳೆ,ಒಂದು ನೆಪವಷ್ಟೇ
ಉದುರಿದ್ದು ಮಾತ್ರ ಕಣ್ಣೀರ ಧಾರೆ!
ನಿದ್ದೆ ಕಳೆದ ರಾತ್ರಿಗಳೆಷ್ಟೋ ಮುಸಾಫಿರಾ?
ಸಾಧ್ಯವಿದ್ದರೆ ಲೆಕ್ಕವಿಡು ಎಲ್ಲವನ್ನೂ!
ನಿನ್ನ ಅಕ್ಷರಗಳಲ್ಲೇಕೆ ಅಷ್ಟು ನೋವು?
ದಿನವೂ ಕೇಳುತ್ತಾರಿಲ್ಲಿ ಯಾರೋ...
ನನ್ನ ಅಕ್ಷರಗಳೋ..
ಉಳ್ಳವನ ಮಾಳಿಗೆಯವಲ್ಲ..ಇಲ್ಲದವನ ಜೋಳಿಗೆಯವು!
ಬಿಚ್ಚಿದರೆ ಅಲ್ಲಿ ಬರೀ ಬಿಕ್ಕಳಿಕೆ ಮಾತ್ರವೇ!
ನೋವುಣ್ಣುವುದೂ ಒಂದು ಚಟವೋ ಸೂಫಿ!
ನನ್ನ ಹೆಣದ ಮೇಲೆ ಹೊದಿಸುವ ಬಟ್ಟೆಗೂ
ಸಾವಿರ ಸಾವಿರ ರಕ್ತದ ಕಲೆಗಳಿರಲಿ..
ಮತ್ತು..ಆಗ ತಾನೇ ಅರಳಿದ ಒಂದು ಹೂವು!