ಹಗುರಾಗಬೇಕು ಒಮ್ಮೆಯಾದರೂ
ಎದೆಬಿಚ್ಚಿ ನಿನ್ನೆದುರು,ಮಂಡಿಯೂರಿಕೊಂಡು;
ಭಾರಹೊರುವಷ್ಟು ತೂಕದ್ದಲ್ಲ
ನಾನೂ ಮತ್ತು ನನ್ನ ಎದೆಜೋಳಿಗೆಯೂ
ಹೊತ್ತ ಮಣಭಾರದ ಬದುಕ
ಕಿತ್ತು ಬಿಸುಟಿಬಿಡಬೇಕು ಸಹಾನುವರ್ತಿ...
ಎದೆಯನೆಲ್ಲ ತೆರೆದು ನಿನ್ನೆದುರು
ನಿರಮ್ಮಳನಾಗಿ ಕೂರುವಷ್ಟು ಉಸಿರಿಲ್ಲ!
ಜೋಳಿಗೆಯ ಹಾಡು ಬೇಕೆಂದ
ನಿನ್ನ ಲಾಜವಾಬ್ ಮನಸ್ಸಿಗೇನು ಗೊತ್ತು?
ಅವುಗಳಲ್ಲಿ ರಕ್ತದ ಕಲೆ ಇತ್ತೆಂದು!
ಸಾವಿರ ಕಿವಿಯ ಈ ಜಗತ್ತಿಗೆ
ನನ್ನ ಅಂತರಂಗದ ಕೂಗು ಕೇಳಿಸದು ಜನಾಬ್
ಬೆವರ ವಾಸನೆಗಷ್ಟೆ ಅಲ್ಲವೆ ನೀನು ಓಗೊಡುವುದು?
ನಿಸ್ಸಾರನಾಗಿ,ನಿರಮ್ಮಳವಾಗಿ ಕೂತಿದ್ದೇನೆ..
ಸಾವಿನಪ್ಪುಗೆಯ ಸುಖಕ್ಕಾಗಿಯೇ ನನ್ನ ಇವತ್ತಿನ ದುವಾ!
ಕೇಳಿಸಿಕೊಂಡು,ಬಾ ಒಮ್ಮೆ ಅಪ್ಪಿಬಿಡು..
ನಕ್ಕುಬಿಡುತ್ತೇನೆ...ಮನಸಾರೆ ಕೊನೆಗೊಮ್ಮೆ!
No comments:
Post a Comment