Friday 8 June 2018

ವಿದಾಯಕ್ಕೊಂದು ಕವಿತೆ....

ನೀನು ಈಗ ಗೂಡು ಕಟ್ಟಿಕೊಂಡ ತಾಯಿಗುಬ್ಬಿ
ನಾನೋ...ಸೂತ್ರ ಕಿತ್ತ ಗಾಳಿಪಟದ ಪ್ರೇತರೂಪ
ಹೀಗೇ ಯಾವಗಲಾದರೊಮ್ಮೆ,
ಮಳೆಯಲ್ಲಿ ನೆಂದು ನಡುಗುವಾಗಲೆಲ್ಲ
ನಿನ್ನ ನೆನಪಾಗುತ್ತದೆ..
ಅಲ್ಲೇ ಬೋಳುಮರದ ಮೇಲೆ
ಕುಳಿತ ಕುಂಟಗುಬ್ಬಿಯ ಜೊತೆಗೆ
ಮಾತನಾಡಿಕೊಳ್ಳುತ್ತೇನೆ.....

ನೀನು ಕೊಟ್ಟ ವಿರಹದ ನೋವಿಗಿಂತಲೂ
ನಾವಿಬ್ಬರೂ ಜೊತೆಗಿದ್ದ ಕ್ಷಣ ನೆನಪಾಗುತ್ತಿದೆ.
ಸ್ವಲ್ಪ ಕಣ್ಣೀರು,ಬೀಸಿದ ಗಾಳಿಗೋ
ಅಥವ ನಿಟ್ಟುಸಿರಿಗೋ ಇಳಿವ ಮುನ್ನವೇ ಆವಿ!
ಹೌದು...
ನೀನು ಕೊಟ್ಟು ಹೋದ
ನೋವಿನ ಸಾಲವನ್ನು
ನಾ ಬರೆದ ಸಾಲುಗಳಿಂದಲೇ
ತೀರಿಸುವ ವ್ಯರ್ಥ ಪ್ರಯತ್ನ ನನ್ನದು..

ನಾ ಬರೆದ ಸಾಲುಗಳಲ್ಲಿ
ಮೊದಲ ಪ್ರೀತಿಯ ಸೋಲಿದೆ.

ಪ್ರೀತಿಸಿದ ಹೃದಯದ ಸಾವಿದೆ.
ಹರಿಸಿದ ಕಣ್ಣೀರ ಹನಿಗಳನು
ನೆನಪಿನ ಲೇಖನಿಯೊಳಗೆ ಸೇರಿಸಿ
ಬಾಳಪುಸ್ತಕದಲ್ಲಿ ಬರೆದ ಸಾಲುಗಳಿವು.
ಅಲ್ಲಲ್ಲಿ ಅಕ್ಷರಗಳು
ಸ್ಪಷ್ಟವಾಗಿ ಕಾಣದಿದ್ದರೆ ಕ್ಷಮಿಸಬಿಡು..
ಯಾಕೆಂದರೆ,ನನಗೂ ವಯಸ್ಸಾಯಿತು ನೋಡು!
ಆ ಅಕ್ಷರದೊಳಗೆ ನನ್ನ
ಕಣ್ಣೀರೂ ಜಾಸ್ತಿಯೇ ಹರಿದಿರಬಹುದು.
ಮುಗಿಯದ ಈ ಬಾಳಪುಸ್ತಕದಲ್ಲಿ
ಕಣ್ಣೀರು ಮುಗಿಯುವರೆಗೆ ಬರೆಯುತ್ತೇನೆ.
ಬರವಣಿಗೆಯಿಂದ ಬರೀ ನಿನ್ನ
ನೆನಪಿನ ಮೆರವಣಿಗೆ ಮಾಡಿದ ನಾನು
ನನ್ನಲ್ಲಿ ಬದಲಾವಣೆ ತಂದು
“ಕವಿ ಕಾಣದನ್ನೂ ಕಂಡು ”
ಕವಿಯಾಗಿ ಬರೆಯುತ್ತೇನೆ !




No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...