Saturday, 3 August 2024

"ಹಿ.ಮ.ನಾ. ರವರ ಬಗ್ಗೆ.


 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೨೫ ರ ಜುಲೈ ೧ ರಂದು. ತಂದೆ ಮಠದ ದೊಲಡ್ಡ ಬಸವಯ್ಯ, ತಾಯಿ ದೊಡ್ಡ ಬಸವಮ್ಮ. ಇಂಟರ್ಮೀಡಿಯೆಟ್‌ವರೆಗೆ ಓದಿದ್ದು ಕೊಟ್ಟೂರಿನಲ್ಲಿ. ಆಗ ದೇಶದ ಎಲ್ಲೆಡೆ ಸ್ವಾತಂತ್ರ್ಯ ಹೋರಾಟದ ಬಿಸಿ. ಗಾಂಧೀಜಿಯವರ ಕರೆಯಂತೆ ವಿದ್ಯಾರ್ಥಿಗಳು ಶಾಲಾ , ಕಾಲೇಜು ತೊರೆದು ಚಳುವಳಿಯಲ್ಲಿ ಭಾಗಿಯಾಗುತ್ತಿದ್ದ ಸಮಯ. ನಾಗಯ್ಯನವರೂ ಶಾಲೆ ತೊರೆದು ಬಂದಾಗ, ಇವರ ಗುರುಗಳೊಬ್ಬರು ‘ಓದುವ ಕಡೆ ಗಮನ ಕೊಡು, ಓದು ಮುಗಿದ ನಂತರ ದೇಶ ಸೇವೆ’ ಎಂದು ಉಪದೇಶಿಸಿದಾಗ ಪುನಃ ಶಾಲೆಗೆ ಹೋಗಿ ಇಂಟರ್ಮೀಡಿಯೆಟ್‌ವರೆಗೆ ಓದಿದರು. ಕಾಲೇಜು ಕಲಿಯುತ್ತಿದ್ದಾಗಲೇ ಇವರ ಅನೇಕ ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಬೆಂಗಳೂರಿನ ಬ್ರದರ್ ಅಂಡ್‌ ಬ್ರದರ್ ಪ್ರಕಾಶನ ಸಂಸ್ಥೆಯವರು ನಾಗಯ್ಯನವರನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ಕವನಗಳ ಸಂಕಲನ ‘ಬಳ್ಳಾರಿ ಬೆಳಕು’ (೧೯೪೮) ಎಂಬುದನ್ನೂ ಪ್ರಕಟಿಸಿದರು. ಜೀವನ ನಿರ್ವಹಣೆಗಾಗಿ ಆಯ್ದುಕೊಂಡದ್ದು ಪತ್ರಿಕೋದ್ಯಮ. ತಾಯಿನಾಡು ವರದಿಗಾರರಾಗಿ ಸೇರಿ ಎರಡು ದಶಕಗಳ ಅವರ ನಿರಂತರ ಸೇವೆಗೆ ಪ್ರಧಾನ ವರದಿಗಾರರ ಹುದ್ದೆ ದೊರೆಯಿತು. ನಂತರ ವಿಶ್ವಕರ್ನಾಟಕ ಉಪಸಂಪಾದಕರಾಗಿ, ಕೀರ್ತಿಕಿರಣ ಮಾಸ ಪತ್ರಿಕೆಯ ಸಂಪಾದಕರಾಗಿ, ಕನ್ನಡ ಕೇಸರಿ ವಾರಪತ್ರಿಕೆ ಮಾಲಿಕ ಹಾಗೂ ಸಂಪಾದಕರಾಗಿ ತಮ್ಮ ಸ್ವಂತ ಪತ್ರಿಕೋದ್ಯಮದಡಿಯಲ್ಲಿ ‘ಹಿಮಾಲಯ’ ಎಂಬ ಸಂಜೆ ದಿನ ಪತ್ರಿಕೆಯನ್ನೂ ಹೊರಡಿಸಿದರು. ಹೀಗೆ ಸಂಜೆ ದಿನ ಪತ್ರಿಕೆಯನ್ನು ಹೊರಡಿಸಿದವರಲ್ಲಿ ಇವರೇ ಮೊದಲಿಗರು. ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡನುಡಿ’ ಸಂಪಾದಕರಾಗಿ ಮತ್ತು ಲೋಕವಾಣಿ ದಿನ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ಆಗಾಗ್ಗೆ ಪ್ರಜಾಮತ ವಾರಪತ್ರಿಕೆಗೂ ಲೇಖನಗಳನ್ನೂ ಬರೆಯತೊಡಗಿದ್ದು, ಅನೇಕ ಮೌಲಿಕ ಲೇಖನಗಳು ಪ್ರಕಟಗೊಂಡವು. ಇವರ ಪತ್ರಿಕೋದ್ಯಮದ ಸೇವೆಯನ್ನು ಗುರುತಿಸಿ ಕರ್ನಾಟಕ ಪತ್ರಿಕೋದ್ಯೋಗಿಗಳ ಸಂಘವು ಅಧ್ಯಕ್ಷರನ್ನಾಗಿ (೧೯೬೮-೭೦) ಆಯ್ಕೆಮಾಡಿ ಗೌರವಿಸಿತು. ಪ್ರತಿಭಾಸಂಪನ್ನರಾದ ನಾಗಯ್ಯನವರಿಗೆ ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ ಮುಂತಾದ ಸಾಹಿತ್ಯ ದಿಗ್ಗಜರುಗಳ ಒಡನಾಟವಿತ್ತು. ‘ಬಳ್ಳಾರಿ ಬೆಳಗು’ ಕವನ ಸಂಕಲನದ ಪ್ರಕಟಣೆಯ ನಂತರ ಗಾಂಧೀಜಿ ಕುರಿತ ನೀಳ್ಗವಿತೆ ಮತ್ತು ಇತರ ಕವನಗಳ ಸಂಕಲನ ‘ಕಾಣಿಕೆ’ (೧೯೪೯), ‘ಅಮೃತಧಾರೆ’ (ಭಾವಗೀತೆಗಳು) ಮತ್ತು ‘ಚಂಪಕ’ (ಪ್ರೇಮಗೀತೆಗಳ) ಸಂಕಲನವು (೧೯೭೩), ನೀವೆಲ್ಲರೂ ನಮ್ಮವರೆ (೧೯೭೬, ೭೯) ‘ತುಂಬು ಅರಳಿದ ಬೇವು’ (೧೯೮೫), ನಿನಗೊಂದು ತಿಳಿಮಾತು (೧೯೯೨), ಇಂಗ್ಕಿಷ್‌ ಪದ್ಯ ಸಂಗ್ರಹ ‘ನೆಕ್ಟರ್ ಆಫ್‌ ನೀಮ್‌’ (೧೯೮೨) ಮುಂತಾದ ಕವನ ಸಂಕಲನಗಳು ಪ್ರಕಟಗೊಂಡವು. ಹಲವಾರು ಕವನಗಳು ಚೀನಿ ಭಾಷೆಗೂ ಅನುವಾದಗೊಂಡಿವೆ. ಕಾವ್ಯಕ್ಷೇತ್ರಕ್ಕೆ ಇವರು ನೀಡಿದ ಮಹಾನ್‌ ಕೃತಿ ಎಂದರೆ ‘ಭವ್ಯ ಭಾರತ ಭಾಗ್ಯೋದಯ’. ಇದೊಂದು ಅಪೂರ್ವಮಹಾಕಾವ್ಯ. ಹರಿಹರನು (೧೨ ನೆಯ ಶತಮಾನ) ತನ್ನ ಕಾವ್ಯವನ್ನು ಮಂದಾನಿಲ, ಲಲಿತ, ಉತ್ಸಾಹ-ರಗಳೆ ಎಂಬ ಮೂರು ಪ್ರಭೇದಗಳನ್ನೂಪಯೋಗಿಸಿಕೊಂಡು ರಚಿಸಿದಂತೆ ಈ ಮಹಾಕಾವ್ಯವನ್ನೂ ನಾಗಯ್ಯನವರು ರಚಿಸಿ, ಅಭಿನಯ ಹರಿಹರನೆನೆಸಿಕೊಂಡರು. ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆದ ಮಹಾಕಾವ್ಯವು ಇದಾಗಿದ್ದು ೨೮೭೧ ಪದ್ಯಗಳಿಂದ ಕೂಡಿದ್ದು ನಾಲ್ಕು ಅಧ್ಯಾಯಗಳಾಗಿ ವಿಭಾಗಿಸಿ ೧೦೮೯ ಪುಟಗಳ ಕೂಡಿದ ಮಹಾಕಾವ್ಯ. ಅವರ ಯೋಜನೆಯ ಪ್ರಕಾರ ೯೦,೦೦೦ ಸಾಲುಗಳಿಂದ ಕೂಡಿ ಸುಮರು ೩೦೦೦ ಪುಟಗಳ ಮಹಾಕಾವ್ಯ ರಚನೆಗೆ ಯೋಜನೆಯೊಂದನ್ನೂ ಸಿದ್ಧಪಡಿಸಿದ್ದರು. ಆದರೆ ಈ ಮಹಾಕೃತಿ ಪೂರ್ಣಗೊಳ್ಳುವ ಮೊದಲೇ ನಿಧನರಾದದ್ದು ಕನ್ನಡ ಸಾಹಿತ್ಯಕ್ಕಾದ ದೊಡ್ಡನಷ್ಟ. ಆದರೆ ಅವರ ಕುಟುಂಬದವರ ದೃಢ ಸಂಕಲ್ಪದಿಂದ ಈ ಕೃತಿಯು ೧೯೯೩ ರಲ್ಲಿ ಪ್ರಕಟಗೊಂಡಿದ್ದೇ ಕನ್ನಡಿಗರ ಭಾಗ್ಯ.

ಪೆಂಪೆಸೆದ ಅಮರ ಸಿರಿ ಭೂವಲಯಕೆರಗುವೆನು ಸಂಪನ್ನ ಭಾರತಿಗೆ ಭಕುತಿಯಲಿ ಬಾಗುವೆನು ಕಂಪೆಸೆದ ಕಸ್ತೂರಿ ಕನ್ನಡಕೆ ನಮಿಸುವೆನು ಇಂಪೊಗೆಯಲೀಯೆನ್ನ ಕಾವ್ಯಕಾನತನಹೆನು (ನಾಂದಿಪದ್ಯ)


ಇವರು ರಚಿಸಿದ ಗದ್ಯಕೃತಿಗಳೆಂದರೆ ‘ಒಲಿದು ಬಂದ ಸರಸ್ವತಿ’ (೧೯೫೨) ಕಥಾಸಂಗ್ರಹ; ಗಾಂಧೀಜಿ, ನೆಹರು, ವಿವೇಕಾನಂದ, ಠಾಕೂರ್ ಮುಂತಾದವರ ವ್ಯಕ್ತಿ ಚಿತ್ರಗಳ ವಿದ್ಯಾರ್ಥಿ ರತ್ನಗಳು (೧೯೫೪); ಶಾಂತವೇರಿ ಗೋಪಾಲಗೌಡರ ಜೀವನಚರಿತ್ರೆ (೧೯೮೧); ಪಂಚಾಕ್ಷರಿ ಗವಾಯಿಗಳ ‘ಗಾನಯೋಗಿ’ (೧೯೮೮) ಮತ್ತು ಕನ್ನಡ ಸಾಹಿತ್ಯ ಪರಿಷತ್‌ಗಾಗಿ ಸಂಪಾದಿಸಿದ ಕೃತಿ ‘ಪುಸ್ತಕ ಭಾಗ್ಯ.’ (೧೯೭೨); ಇತರ ಲೇಖಕರು ಇವರ ಕಾವ್ಯ ಸಮೀಕ್ಷೆ ನಡೆಸಿ ಪ್ರಕಟಿಸಿದ ಕೃತಿ ‘ಹಿ.ಮ.ನಾ. ಕಾವ್ಯ ಸಮೀಕ್ಷೆ’. ಆಕಾಶವಾಣಿ, ದೂರದರ್ಶನದ ವಾಹಿನಿಗಳಿಗಾಗಿ ಅನೇಕ ಸಂದರ್ಶನ, ಚಿಂತನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹಿಸಿ ಸಾಹಿತ್ಯಾಸಕ್ತಿ ಬೆಳೆಯುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕವಿಗಳ ಸಂಘ, ಬಿ.ಎಚ್‌.ಇ.ಎಲ್‌.  ಮತ್ತು ಇ.ಪಿ.ಡಿ ಕಾರ್ಖಾನೆಗಳ ಕನ್ನಡ ಸಂಘಗಳ ಅಧ್ಯಕ್ಷರಾಗಿ, ಉದಯಭಾನು ಕಲಾಸಂಘ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಮತ್ತು ಗಮಕ ಕಲಾ ಪರಿಷತ್‌ ಮುಂತಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರ ಕಾರ್ಯಚತುರತೆ,  ಪ್ರಾಮಾಣಿಕತೆ, ದೂರದೃಷ್ಟಿಯನ್ನೂ ಗಮನಿಸಿ ಬೆಂಗಳೂರು ನಗರ ಜನತಾದಳದ ಉಪಾಧ್ಯಕ್ಷರಾಗಿ ಆಯ್ಕೆಮಾಡಿದ್ದಲ್ಲದೆ ಬೆಂಗಳೂರು ನಗರ ಸಭೆಗೆ ಸದಸ್ಯರನ್ನಗಿ ಆಯ್ಕೆಮಾಡಿದರು (೧೯೮೩-೮೮) ಈ ಅವಧಿಯಲ್ಲಿ ಬೆಂಗಳೂರು ನಗರ ಸಭೆ ತೆರಿಗೆ ಅಪೀಲು ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಇವರ ನಿಧನಾನಂತರ ಜಯನಗರದ ಒಂಬತ್ತನೆಯ ಬ್ಲಾಕಿನ ೨೬ನೆಯ ಮುಖ್ಯರಸ್ತೆಗೆ ಹಿ.ಮ.ನಾಗಯ್ಯ ರಸ್ತೆ ಎಂದೇ ನಾಮಕರಣ ಮಾಡಿ ಗೌರವ ತೋರಿದ್ದಾರೆ. ನಾಡು-ನುಡಿಯ ಸೇವೆಗಾಗಿ ಹಗಲಿರುಳು ದುಡಿದ ನಾಗಯ್ಯನವರನ್ನು ಸೊಂಡೂರಿನಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದಾರೆ. ಗಾಂಧೀಜಿಯವರ ತತ್ತ್ವಾದರ್ಶಗಳಿಗೆ ಮಾರುಹೋಗಿ, ಸರಳ ಜೀವನವನ್ನೂ ರೂಢಿಸಿಕೊಂಡಿದ್ದು ‘ಕಾಯಕವೇ ಕೈಲಾಸ ಇಲ್ಲದಿದ್ದರೆ ಉಪವಾಸ’ ಎಂಬ ತತ್ತ್ವಕ್ಕೆ ಕಟ್ಟುಬಿದ್ದ ಪತ್ರಕರ್ತ, ಪ್ರಕಾಶಕ, ದಾರ್ಶನಿಕ, ಅಪರೂಪದ ರಾಜಕಾರಣಿ, ಸಮಾಜಸೇವಕ, ಕನ್ನಡ ನುಡಿ ಸೇವಕ ಜೀವನ ರಂಗದಿಂದ ನಿರ್ಗಮಿಸಿದ್ದು ೧೯೯೨ ರ ಜುಲೈ ೨೫ ರಂದು.


Thursday, 4 April 2024

ಜನ-ಜಾಣತನ


 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ್ಲಿ ಏನಾದರೂ ಕೊಂಡಾಗ ಮಾತ್ರ ಹೇಳಬಲ್ಲ ಅವನು!
ಯಾರಾದರೂ ಟೈಮೆಷ್ಟು ಅಂತ ಕೇಳಿದರೆ, ಜನ ಹೇಳಲಾರದ ಕಾಲವಿದು! ಆಸುಪಾಸು ಯಾರಾದರೂ ಸತ್ತರೂ, ಆ ಕಡೆ ತಿರುಗಿಯೂ ನೋಡದೆ, ಫೇಸ್‌ಬುಕ್‌ ನಲ್ಲಿ ಲೈಕು,RIP ಹಾಕುವವರ ಯುಗ!

ಬೆಳಗ್ಗೆ ಏನ್ ತಿಂದಿದ್ದೆ ಅನ್ನೋದನ್ನೂ ಫೋನ್ ನೋಡಿ ಹೇಳುವ, ದೇಶದ ರಾಜಧಾನಿ ಯಾವುದು ಎಂದರೆ, ಗೂಗಲ್ ಮಾಡುವವರ ಜಮಾನಾ ಇದು!

ನಾವು ಜಾಣರಾಗತ ಇದೇವಾ? ದಡ್ಡರಾಗತ ಇದೇವಾ? ನಮ್ಮ ಜ್ಞಾಪಕಶಕ್ತಿ ನಿರುಪಯುಕ್ತ ಆಗತ ಇದೆಯಾ? 

ಆದರೆ, ನಾವು ಸ್ವಾರ್ಥಿಗಳಾಗತ ಇದೇವೆ,ಸಂಕುಚಿತಗೊಳತಾ ಇದೇವೆ. ಕುತಂತ್ರ-ದಗಾ-ಮೋಸಗಳು ಈಗ ಸಹಜ ಎನ್ನುವಷ್ಟರ ಮಟ್ಟಿಗೆ ಹೊಂದಿಕೊಳತಾ ಹೋಗಿದೇವೆ.

ಅದೆಲ್ಲೋ ಗುಲಾಂ ಆಲಿಯ ಘಜಲ್ ತೇಲಿಬರತಾ ಇದೆ. ಸೂರ್ಯ - ಯಾವುದರ ಪರಿವೆಯಿಲ್ಲದೆ,ಏನನ್ನೂ ನಿರೀಕ್ಷಿಸದೆ, ಸೃಷ್ಟಿ ಸಮಸ್ತದ ದಿನವೊಂದನ್ನು ಮುಗಿಸಿದ ಆ ಸೂರ್ಯ ಪರಮಾತ್ಮ ಪಶ್ಚಿಮದಲ್ಲಿ ವಿಶ್ರಾಂತಿ ಪಡೆಯಲು ಹವಣಿಸುತ್ತಲಿದ್ದರೆ..

ಮನೆ ಮುಂದಿನ ಹುಣಸೇಮರದಲ್ಲಿ ಹಕ್ಕಿಗಳ ಕಲರವ!! ಹೂವು ಅರಳುವ ಸದ್ದು ಅವುಗಳಿಗೆ ಮಾತ್ರವಾ ಕೇಳಿಸುವುದು?

ತೇರು...!


 ಈ ಜಾತ್ರೆಗಳೇ ಹೀಗೆ! ಅಲ್ಲಿ‌ ಬರೀ ತೇರನ್ನು ಮಾತ್ರವಲ್ಲ ಎಳೆಯುವುದು..ಅನೇಕ ಜನರ ಬದುಕಿನ ತೇರನ್ನೂ ಕೂಡ! ಅವು ಬರೀ ಕೊಂಡು ಕೊಳ್ಳುವ ಪರಿಷೆಗಳಲ್ಲ ; ಸಾವಿರ ಭಾವಗಳ,ನಿರ್ಭಾವ-ಸ್ವಭಾವ-ಅಭಾವಗಳ ಮೆಹನತ್ತಿನ ಮೆರವಣಿಗೆ!

ಜಿಲೇಬಿ ಕೊಡಿಸಲಿಕ್ಕೆ ಕಾಸಿಲ್ಲದ ಅಪ್ಪನ ನೋವು, ಆಟಿಕೆ ಕೊಳ್ಳಲಿಕ್ಕಾಗದ ಕಂದನ ಕಂಬನಿ... ಪಾತ್ರೆ ,ಲಟ್ಟಣಿಗೆ,ಕುಂಕುಮದ ಭರಣಿಗಳನ್ನು ಕೊಂಡ ಬಡ ಗೃಹಿಣಿಯ ಸಂಭ್ರಮ...ಎತ್ತುಗಳಿಗೆ ಕೋಡಣಸು,ಗಗ್ಗರ ಕೊಂಡ ರೈತನ ಹಿಗ್ಗು...!!

        ಅಲ್ಲೆಲ್ಲೋ ಕೈಕೈ ಹಿಡಿದು ನಗುತ್ತಾ ತಿರುಗಾಡುವ ಪ್ರೇಮಿಗಳ ನೋಟ..ಚಂದದ ಬಟ್ಟೆ ತೊಟ್ಟ ತರುಣಿಯರ,ತರುಣರ ಹೊಸ ಬೇಟ..! 

ಜಾತ್ರೆಗಳು... ಹೊಸ ಬಂಧಗಳನ್ನು ಬೆಸೆಯುತ್ತವೆ. ನೆನಪುಗಳ ಮೆರವಣಿಗೆಯ ಭಾಗಗಳಾಗಿ ಬದುಕಿಡೀ ಕಿಲಕಿಲ ನಗುತ್ತವೆ!

ಜಾತ್ರೆ ಅಂದರೆ ಬರೀ ದೇವರ ಆರಾಧನೆಯಲ್ಲ. ಅದೊಂದು ಕಾಲದ ಹೊಸ ಮಗ್ಗುಲ ಹೊರಳುವಿಕೆ! ಅಲ್ಲಿ ಎಷ್ಟು ಜನರ ಎದೆಗಳಲ್ಲಿ ನಂದಿಕೋಲುಗಳು ಕುಣಿದಿರುತ್ತವೋ...ಎಷ್ಟು ಹೃದಯಗಳ ಡೋಲು ಬಾರಿಸಿರುತ್ತವೆಯೋ ಯಾರಿಗೆ ಗೊತ್ತು!! ತೇರಿಗೆ ಎಸೆವ ಪ್ರತೀ ಬಾಳೆಹಣ್ಣಿನಲ್ಲೂ ಒಂದೊಂದು ಜೀವದ ಕನಸಿರುತ್ತದೆ. ಒಡೆವ ಪ್ರತೀ ತೆಂಗಿನ ಕಾಯಿಯೂ ಒಂದೊಂದು ಸಂಸಾರದ ತಲ್ಲಣದ ಪ್ರಾರ್ಥನೆ!

Wednesday, 3 April 2024

ಸಂಬಂಧಗಳು ಸಂಕೋಲೆಗಳಲ್ಲ - ಜೀವ ಪ್ರೀತಿಯ ಬಂಧಗಳು!


 ಪ್ರೀತಿಯಿಂದ ಸಾಕಿದ ಮಕ್ಕಳು.. ಕಣ್ಣೆದುರಿನಲ್ಲಿಯೇ ಆಸ್ತಿಯನ್ನು ಪಾಲು ಮಾಡಿಕೊಳ್ಳುವ , ಕಟ್ಟಿದ ಮನೆಯನ್ನು ಎರಡಾಗಿ ವಿಭಾಗಿಸಿಕೊಳ್ಳುವ ಕ್ಷಣ ಕೊಟ್ಟಷ್ಟು ಸಂಕಟವನ್ನು... ತಂದೆತಾಯಿಗಳಿಗೆ ಬೇರಾವುದೂ ಕೊಡಲಾರದು!


ಎಷ್ಟೋ ಸಲ ಗಮನಿಸಿದ್ದೇನೆ...ಈ ರಕ್ತಸಂಬಂಧಗಳ ಆಯಸ್ಸು ತೀರಾ ಕಮ್ಮಿ. ದ್ವೇಷದ ಬೆಂಕಿ ಹಬ್ಬುವುದೇ ಅಲ್ಲಿಂದ! ಅದೇ ಯಾರೋ ಎಲ್ಲೋ ಪರಿಚಯವಾದವರೇ ಗಾಢ ಬಂಧ ಬೆಸೆಯುತ್ತಾರೆ.

ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಅರ್ಧಗಂಟೆ ಕಾಲ ಕೂತವರು, ಅರ್ಧ ಜೀವದಷ್ಟು ಪ್ರೀತಿ ಕೊಡುವ ಗೆಳೆಯರಾಗುತ್ತಾರೆ..ಅದೆಲ್ಲೋ ಸಿಕ್ಕ ಜೀವವೊಂದು ಜೀವ ಬಂಧ ಬೆಸೆದುಬಿಡುತ್ತದೆ!


ಈಗ ಸೋಶಿಯಲ್ ಮೀಡಿಯಾ ಜಮಾನ! ಫೇಸ್‌ಬುಕ್‌ ‌ನಲ್ಲಿ ಫ್ರೆಂಡ್ ಆಗಿ, ವಾಟ್ಸಪ್ ಗ್ರೂಪಿನಲ್ಲಿ ಹತ್ತಿರವಾದ ಗೆಳೆತನಗಳೂ ಅಸಂಖ್ಯ ಇರಬಹುದು. ಹಾಗೆನೇ ಸ್ನೇಹದ ಹೆಸರಿನಲ್ಲಿ ಎದೆಗೋ..ಜೇಬಿಗೋ ಕತ್ತರಿ ಹಾಕಿದವರೂ ಇರಬಹುದು! ಇಷ್ಟಕ್ಕೂ ಕರುಳಬಳ್ಳಿಗಳೇ ಕಿಲುಬು ಹಿಡಿದ ಈ ಕಾಲದಲ್ಲಿ ಇದಾದರೂ ಯಾವ ಲೆಕ್ಕದ್ದು!


ನಾವು ಜಗತ್ತಿನಲ್ಲಿ ಬದುಕಬೇಕಿರುವುದು ಸಂಬಂಧಗಳಲ್ಲಿ. ಅದು ರಕ್ತ ಸಂಬಂಧವೇ ಆಗಬೇಕಿಲ್ಲ. ಅದಕ್ಕೆ ಜಾತಿ,ಧರ್ಮದ ಹರಕತ್ತೂ ಇರಬೇಕಿಲ್ಲ. ಹೃದಯದ ಜೊತೆಗೆ ನಿಃಷ್ಕಲ್ಮಶ ಬಾಂಧವ್ಯ ಬೆಸೆವ ಯಾವ ಬಂಧವೇ ಆಗಲಿ..ಅದೇ ಶ್ರೇಷ್ಠ...ಅದೇ ಸಾರ್ಥಕ!


ಬದುಕಿನಲ್ಲಿ ನಿಜದ ಸುಖವಿರುವುದು..ಲಕ್ಷುರಿ ಐಟಮ್ಮುಗಳಲ್ಲಿ ಅಲ್ಲ , ಹಣ-ಆಸ್ತಿಗಳಲ್ಲಿ ಅಲ್ಲ - ಬಾಂಧವ್ಯದಲ್ಲಿ ಸುಖವಿದೆ. ಮನುಷ್ಯ ಪ್ರೀತಿಯಲ್ಲಿ ಸಾರ್ಥಕ್ಯವಿದೆ.

ಇಷ್ಟಕ್ಕೂ ಶ್ರೀಮಂತಿಕೆ ಅಂದರೆ, ಸಂಪತ್ತಲ್ಲ - ಕಷ್ಟ ಬಂದಾಗ ಅದರಿಂದ ಯಾವ ಉಪಯೋಗ ಇಲ್ಲ. ಕಷ್ಟ ಬಂದಾಗ ಅದೆಷ್ಟೋ ಸಲ ಹಣವೂ ಕೆಲಸಕ್ಕೆ ಬಾರದ ಪೇಪರ್ ಆಗುತ್ತದೆ.

 ಆದರೆ ಜೀವಕ್ಕೆ ಜೀವ ಕೊಡುವ 'ಬಾಂಧವ್ಯ' ದೊಡ್ಡದು! 

ಹಾಗಾಗಿ...ಸಂಬಂಧಗಳನ್ನು ಉಳಿಸಿಕೊಳ್ಳಿ. ಗೆಳೆತನವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹರಿದುಕೊಳ್ಳದಿರಿ.

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...