Thursday 4 April 2024

ತೇರು...!


 ಈ ಜಾತ್ರೆಗಳೇ ಹೀಗೆ! ಅಲ್ಲಿ‌ ಬರೀ ತೇರನ್ನು ಮಾತ್ರವಲ್ಲ ಎಳೆಯುವುದು..ಅನೇಕ ಜನರ ಬದುಕಿನ ತೇರನ್ನೂ ಕೂಡ! ಅವು ಬರೀ ಕೊಂಡು ಕೊಳ್ಳುವ ಪರಿಷೆಗಳಲ್ಲ ; ಸಾವಿರ ಭಾವಗಳ,ನಿರ್ಭಾವ-ಸ್ವಭಾವ-ಅಭಾವಗಳ ಮೆಹನತ್ತಿನ ಮೆರವಣಿಗೆ!

ಜಿಲೇಬಿ ಕೊಡಿಸಲಿಕ್ಕೆ ಕಾಸಿಲ್ಲದ ಅಪ್ಪನ ನೋವು, ಆಟಿಕೆ ಕೊಳ್ಳಲಿಕ್ಕಾಗದ ಕಂದನ ಕಂಬನಿ... ಪಾತ್ರೆ ,ಲಟ್ಟಣಿಗೆ,ಕುಂಕುಮದ ಭರಣಿಗಳನ್ನು ಕೊಂಡ ಬಡ ಗೃಹಿಣಿಯ ಸಂಭ್ರಮ...ಎತ್ತುಗಳಿಗೆ ಕೋಡಣಸು,ಗಗ್ಗರ ಕೊಂಡ ರೈತನ ಹಿಗ್ಗು...!!

        ಅಲ್ಲೆಲ್ಲೋ ಕೈಕೈ ಹಿಡಿದು ನಗುತ್ತಾ ತಿರುಗಾಡುವ ಪ್ರೇಮಿಗಳ ನೋಟ..ಚಂದದ ಬಟ್ಟೆ ತೊಟ್ಟ ತರುಣಿಯರ,ತರುಣರ ಹೊಸ ಬೇಟ..! 

ಜಾತ್ರೆಗಳು... ಹೊಸ ಬಂಧಗಳನ್ನು ಬೆಸೆಯುತ್ತವೆ. ನೆನಪುಗಳ ಮೆರವಣಿಗೆಯ ಭಾಗಗಳಾಗಿ ಬದುಕಿಡೀ ಕಿಲಕಿಲ ನಗುತ್ತವೆ!

ಜಾತ್ರೆ ಅಂದರೆ ಬರೀ ದೇವರ ಆರಾಧನೆಯಲ್ಲ. ಅದೊಂದು ಕಾಲದ ಹೊಸ ಮಗ್ಗುಲ ಹೊರಳುವಿಕೆ! ಅಲ್ಲಿ ಎಷ್ಟು ಜನರ ಎದೆಗಳಲ್ಲಿ ನಂದಿಕೋಲುಗಳು ಕುಣಿದಿರುತ್ತವೋ...ಎಷ್ಟು ಹೃದಯಗಳ ಡೋಲು ಬಾರಿಸಿರುತ್ತವೆಯೋ ಯಾರಿಗೆ ಗೊತ್ತು!! ತೇರಿಗೆ ಎಸೆವ ಪ್ರತೀ ಬಾಳೆಹಣ್ಣಿನಲ್ಲೂ ಒಂದೊಂದು ಜೀವದ ಕನಸಿರುತ್ತದೆ. ಒಡೆವ ಪ್ರತೀ ತೆಂಗಿನ ಕಾಯಿಯೂ ಒಂದೊಂದು ಸಂಸಾರದ ತಲ್ಲಣದ ಪ್ರಾರ್ಥನೆ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...