Saturday, 23 March 2019

ನಮೋಸ್ತುತೆ

ಮೂಕವಾಗಿದೆ ಕಾಲ, ಈ ಕಾಲ ಬಳಿಯಲ್ಲಿ
ಹಗುರವಾಗಿದೆ ಚಿಂತೆಯ ಭೂಭಾರವಿಲ್ಲಿ!
ಸೃಷ್ಟಿಕರ್ತನೇ ಬಾಗಿ ಕೈ ಮುಗಿದ, ನೋಡಿಲ್ಲಿ!
ಗೆಜ್ಜೆದನಿ ಆಲಿಸಲು ಪ್ರಕೃತಿಯೇ ಮೌನವಿಲ್ಲಿ..

ಅಕ್ಷರಗಳ ಹಂಗಿಲ್ಲದೆ ಮೂಡುತ್ತಿದೆ ಕವಿತೆ
ಕಾರಣವೇ ಇಲ್ಲದೆ ಉಕ್ಕಿದೆ ಆನಂದದ ಧನ್ಯತೆ
ಮಗುವೇ ನಿನ್ನ ಪಾದಗಳಿಗೆ ನಮೋ ನಮೋಸ್ತುತೆ!


Saturday, 26 January 2019

ಮೌನದ ಅಂಗಡಿ

ಅವಳದ್ದೊಂದು ಮೌನದ ಅಂಗಡಿ..!
ತೂಕಮಾಡಿ ಮಾರುತ್ತಿದ್ದಳು ಮೌನವನ್ನು!
ಆಗ, ನಾನು ಕೂಡ ಒಂದಷ್ಟು ಉದ್ರಿ ತಂದಿದ್ದೆ.

ಒಂದಷ್ಟು ಮಾತುಗಳು ಸಿಕ್ಕಲಾರವೇ ಹುಡುಗಿ?
ಅದೊಮ್ಮೆ ನಾನೇ ಅವಳನ್ನು ಕೇಳಿದ್ದೆ.
ಸುಮ್ಮನೆ ನನ್ನೆಡೆ ನೋಡಿ ತಲೆಯಾಡಿಸಿದ್ದಳು.
ಸರಿ; ಒಂದಷ್ಟು ಪ್ರೀತಿಯ ಮಾತು ಕೊಡು
ಹಳೆಯ ಬಾಕಿ ಸಮೇತ ಇದನ್ನೂ ತೀರಿಸುವೆ ಅಂದಿದ್ದೆ.

ಮೌನವನ್ನು ತೂಗಿದಂತೆ,ಮಾತು ತೂಗಲಿಲ್ಲ.
ಒಂದೊಂದೇ ಎಣೆಸಿ, ಪೋಣಿಸಿ ಕೊಟ್ಟಿದ್ದಳು!
ನನಗೂ ಅವಳ ಮಾಲು ರುಚಿಸಿತ್ತು..ಲೆಕ್ಕ ಬೆಳೆದಿತ್ತು!

ಅದೊಂದು ದಿನ....
ಅವಳ ಅಂಗಡಿಯ ಬಾಗಿಲು ಮುಚ್ಚಿಬಿಟ್ಟಿತ್ತು.
ಅವಳ ಬಾಕಿಯ ಋಣ ನನ್ನ ಎದೆಯ ಮೇಲಿತ್ತು.

ಹೆಸರಿಲ್ಲದ,ವಿಳಾಸವಿಲ್ಲದ ಅವಳನ್ನು
ನೂರು ಕಡೆ ಹುಡುಕಿದ್ದೆ..ಸಿಗಲೇ ಇಲ್ಲ!!


Friday, 21 December 2018

"ನಾನಿಲ್ಲ"

ಹೆಪ್ಪುಗಟ್ಟಿದೆ ಚಿತ್ತ
ಮೇಲೆಲ್ಲ ಬೆಳೆದ ಹುತ್ತ
ನೆಲವು ಮೌನವ ತಬ್ಬಿ
ಮುಗಿಲು ನನ್ನೆದೆಗೆ ಹಬ್ಬಿ
ಕಾಲ ಕೂಡಾ..ಸ್ವಲ್ಪ ಕಾಲ,
ಕುಳಿತು ಮಲಗಿದ ಘಳಿಗೆ...
ನಾನಿಲ್ಲ ನನ್ನಯ ಒಳಗೆ..

Thursday, 20 December 2018

ಹುಚ್ಚು ಖೋಡಿ ಮನಸು -೧೩

ಮುಗಿಲ ಎದೆಯಲ್ಲಿ ತಲೆಯನಿಟ್ಟು
ಭೋರೆಂದು ಅಳಬೇಕೆನಿಸಿತ್ತು..
ಕರಿಮೋಡವೊಂದು ನನಗೆ ಮರುಗಿ
ಕಂಬನಿಯ ತುಂತುರು ಹನಿಸಿತ್ತು..

ನನ್ನ ಗೋರಿ ನಾನೇ ಬಗೆದು
ಅಲ್ಲೇ ತಣ್ಣಗೆ ಮಲಗಬೇಕೆನಿಸಿತ್ತು..
ನೀನಿಲ್ಲದ ಜೀವ-ಜೀವನ ಸಾಕೆನಿಸಿತ್ತು.
ಸತ್ತ ಕನಸುಗಳ ಹೆಣ..ಕೊಳೆತು ನಾರುತ್ತಿತ್ತು

ಇಷ್ಟು ದಿನಗಳ ಕಾಲ ನೀನಿಲ್ಲದ ಬದುಕು
ಸವೆಸಿದ್ದಕ್ಕೆ , ನನ್ನ ಮೇಲೆಯೇ ಜಿಗುಪ್ಸೆ!

 ಹೋಗಲಿ ಬಿಡು ಬಂಗಾರ...
ನೀ ಬಿಟ್ಟುಹೋದ ನೆನಪುಗಳನ್ನೇ
ನೆಟ್ಟು ನೀರೆರೆದು,ಬೆಳೆಸಿ, ಅದರ ಬುಡದಲ್ಲೇ
ಕೊನೆಯ ಕನಸ ಹೂ ಅರಳಿಸುತ್ತೇನೆ.
ಈ ಜಲುಮಕ್ಕೆ ಅಷ್ಟು ಸಾಕು ಬಿಡು!

ಕನವರಿಸಿತ್ತು ನೋಡು ಅರ್ಧಜೀವದ ಕನಸು
ಏನಂದೀತು ಕೇಳು ನಿನ್ನ ಹುಚ್ಚು ಖೋಡಿ ಮನಸು!



Friday, 12 October 2018

ರೈತನೂ ಮತ್ತು ಮಳೆ ಅಂಬೋ ಮಳೆಯೂ...

"ಯಾತಕ್ಕೆ ಮಳೆ ಹೋದವೋ
ಶಿವ ಶಿವ ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕೀಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ?  

ಹಸುಗೂಸು ಹಸಿವೀಗೆ ತಾಳದೆಲೇ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತೀಗೆ ಅನ್ನಾವು ಇಲ್ಲದೆಲೆ
ಏರುತಾವೋ ಮೊಳಕೈಗೆ ಬಳೆ

ಹೊಟ್ಟೆಗೆ ಅನ್ನ ಇಲ್ಲದೆಲೇ
ನಡೆದರೆ ಜೋಲಿ ಹೊಡೆಯುತಲೇ
ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದೆಲೆ

ಒಕ್ಕಲು ಮಕ್ಕಳಂತೆ,ಅವರಿಗೆ ಬಿಕ್ಕಲಿಕೆ ತ್ರಾಣಿಲ್ಲವೋ
ಮುಕ್ಕೋಟಿ ಜನಗಳಿಗೆ ಅನ್ನವ ಇಕ್ಕಲಿಕೆ
ಮುಕ್ಕಣ್ಣ ಮಳೆಯ ಸುರಿಸೋ...


ಮೇಲಿನ ಜನಪದದಲ್ಲಿನ ಘೋರ ದೃಶ್ಯಕ್ಕೂ ಕೂಡ್ಲಿಗಿ ಹಾಗೂ ಬಯಲುಸೀಮೆಯ ಹಲವಾರು ತಾಲೂಕುಗಳ ಪ್ರಸಕ್ತ ಪರಿಸ್ಥಿತಿಗೂ ಅಂತಹ ವ್ಯತ್ಯಾಸಗಳಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ!

ಇಲ್ಲಿನ ರೈತಾಪಿ ಜನ,ಈ ವರ್ಷದ ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟು ಬಿತ್ತಿದ ಬೀಜಗಳೆಲ್ಲ ಗೇಣುದ್ದ ಬೆಳೆಯುತ್ತಲೇ ಮಳೆ ಇಲ್ಲದೇ ಪೂರ್ಣ ಒಣಗಿ ಹೋಗಿವೆ. ಸಾಲ ಸೋಲ ಮಾಡಿ ರಸಗೊಬ್ಬರ ಹಾಕಿ,ಕಳೆನಾಶಕ ಹೊಡೆದು ಹಸುಕಂದನಂತೆ ಕಾಪಾಡಿದ ಬೆಳೆಯು ಕಣ್ಣೆದುರಲ್ಲೇ ಒಣಗಿ ನಿಂತಿದೆ.
ಮೆಕ್ಕೆ ಜೋಳ,ಸೇಂಗಾ,ರಾಗಿ....
.....ಎಲ್ಲವೂ ಒಣಗಿವೆ!..ರೈತ ಸಂಕುಲದ ಭರವಸೆ ಕೂಡ!!

ಕಪ್ಪೆ ಮದುವೆ,ಕತ್ತೆ ಮದುವೆ ಎಲ್ಲಾ ಮಾಡಿದ್ದಾಯ್ತು..ತನ್ನ ತಿಥಿ ಮಾತ್ರ ಬಿಟ್ಟು. ನಿಷ್ಪಾಪಿ ರೈತನಿಗೆ ದೇವರೂ ಕೈ ಎತ್ತಿಬಿಟ್ಟ ನೋಡಿ! ಇನ್ನು ಈ ಸರಕಾರಗಳದ್ದು ಯಾವ ಸುಡುಗಾಡು ಲೆಕ್ಕ!

ಇದರ ಜೊತೆಗೆ ತಾಲೂಕಿನ ಹಳ್ಳಿಗಳನ್ನು ಡೆಂಗ್ಯು , ಟೈಫಾಯಿಡ್,ಚಿಕನ್ ಗುನ್ಯಗಳೂ ಹೊಕ್ಕಿವೆ. ಸರಕಾರಿ ಆಸ್ಪತ್ರೆಗಳು ವೈದ್ಯರು ನರ್ಸುಗಳು ರಣಹದ್ದುಗಳಂತೆ ರೈತರ ಚಕ್ಕಳ ದೇಹಗಳನ್ನು ಕುಕ್ಕಿ ತಿನ್ನುತ್ತಿದ್ದಾರೆ.

ರಾಜಕಾರಣಿಗಳ ಬಾಲಂಗೋಚಿಗಳಿಗೆ,ಪುಢಾರಿಗಳಿಗೆ ಮಾತ್ರವೇ ಮೊನ್ನೆ ಮೊನ್ನೆಯ ಸಾಲಮನ್ನ ಭಾಗ್ಯ ದಕ್ಕಿದೆ.ಸಾಮಾನ್ಯ ರೈತನಿಗೆ ಅಂಥ ಸೊಸೈಟಿ,ಬ್ಯಾಂಕುಗಳಲ್ಲಿ ಸಾಲವಾದರೂ ಹೇಗೆ ಹುಟ್ಟೀತು?
ಬರಪೀಡಿತ ಎಂದು ಘೋಷಿಸಿದರೂ ರೈತನಿಗೆ ಸಿಗುವುದಾದರೂ ಎಷ್ಟು? ಓಡಾಟದ ಖರ್ಚು,ಅಧಿಕಾರಿಗಳ ಲಂಚ ಕೊಟ್ಟು...ಅಬ್ಬಬ್ಬ ಅಂದರೆ ಎರಡು ಪ್ಲೇಟ್ ಒಗ್ಗರಣೆ ತಿನ್ನಬಹುದಾದಷ್ಟು!

ರೈತ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ.ವಾರದಲ್ಲೇ ಹಿರಿಯ ಹಬ್ಬ "ಮಾರ್ಲೋಮಿ" ಇದೆ.ಮಾಡಿದ ಸಾಲಗಳು,ಮಕ್ಕಳ ಮದುವೆ......ದೃಷ್ಟಿ ಮಾತ್ರ ಮೋಡಗಳತ್ತ.!

ಇಂಥದ್ದೊಂದು ಅಸಹಾಯಕ,ಅಸಹಿಷ್ಣಕ,ದೈನೇಸೀ ಪರಿಸ್ಥಿತಿಯ ಯಾವ ಮಾಧ್ಯಮಗಳೂ ತಲೆಕೆಡಿಸಿಕೊಳ್ಳೋದಿಲ್ಲ ಬಿಡಿ.ನ್ಯೂಸ್ ಚಾನೆಲ್ಲುಗಳು ಯಾವನೋ ನಟನ ಎರಡನೆಯವಳೋ ಮೂರನೆಯವಳೋ ಹೆಂಡತಿಯನ್ನು ಗಂಟೆಗಟ್ಟಲೆ ಸ್ಟುಡಿಯೋದಲ್ಲಿ ಕೂರಿಸಿಕೊಂಡು ನಿನ್ನ ಗಂಡನಿಗೆ ತಲೆ ಮಟನ್ ಅಂದರೆ ಭಾಳ ಇಷ್ಟನಾ ಅನ್ನುವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿವೆ.ಅದು ಅವರ ಟಿ.ಆರ್.ಪಿ.ಬಿಡಿ!
ಮುದ್ರಣ ಮಾಧ್ಯಮಗಳು ಮೋದಿ ಹಂಗೆ,ಕಾಂಗ್ರೆಸ್ ಹಿಂಗೆ,ಸೆಕ್ಯುಲರ್ರು ಫ್ಯಾಸಿಸಂ ಎನ್ನುವ ಸುಡುಗಾಡು ವಿಷಯಗಳ ಬಗ್ಗೆ ಲೀಪುಗಟ್ಟಲೆ ಬರೆಯುತ್ತಿವೆ..off course ಅದು ಅವುಗಳ ಸರ್ಕುಲೇಶನ್ ವಿಷಯ ಬಿಡಿ! ಬಿಸಿನೆಸ್ಸು ನ ಪದರದಲ್ಲಿ "ಅಕ್ಷರ ಹಾದರ" ಮಾಡುವ ಅವರಿಗೂ ರೈತ ಸೇಲಬಲ್ ಐಟಮ್ಮೇ ಅಲ್ಲವಲ್ಲ!

ಇನ್ನು ಕವಿಗಳು,ವಿಚಾರವಾದಿಗಳು ಅಸಹಷ್ಣಿತೆ,ಅರಾಜಕತೆ ಎಂದೆಲ್ಲ ಬರೆದು,ವದರಿ ತಮಗೆ ಕೊಟ್ಟಂತಹ ಪ್ರಶಸ್ತಿಯ ತಗಡಿನ ಫಲಕಗಳನ್ನು(ದುಡ್ಡಲ್ಲ!?) ಸರಕಾರಕ್ಕೆ ವಾಪಸ್ ಮಾಡುತ್ತಿದ್ದಾರೆ!
ಇವರಿಗೆ ಹಳ್ಳಿಗಳಲ್ಲಿನ ಅಸಹಷ್ಣಿತೆ,ಅಸಹಾಯಕತೆಗಳು ಕಣ್ಣಿಗೆ ಅಪ್ಪಿತಪ್ಪಿಯೂ ಬೀಳಲಾರವು..ಹಾಗಾಗಿ ಅವರೆಲ್ಲ ಮೋದಿಯ ವಿರುದ್ಧವೋ ಪರವೋ ಬರೆದುಕೊಂಡು ಬರೋದನ್ನ ಪಡೆದುಕೊಳ್ಳುವುದರಲ್ಲಿ ಮುಳುಗಿದ್ದಾರೆ.

ರೈತನಿಗೆ ತನ್ನ ಬದುಕಿನ ಅಸಹಷ್ಣಿತೆ,ಅಸಹಾಯಕತೆಯ ವಿರುದ್ಧ ಪ್ರತಿಭಟಿಸಿ ಸರಕಾರಕ್ಕೆ ವಾಪಾಸ್ ನೀಡಲು ಯಾವ ಪ್ರಶಸ್ತಿಗಳೂ ಇಲ್ಲವಲ್ಲ!..ಇರೋದು ಒಂದೇ; ಅದು ತನ್ನ ಜೀವ! ಅದನ್ನೇ ನೀಡುತ್ತಾನೆ.!
ಪತ್ರಿಕೆಗಳಲ್ಲಿ ಯಾವುದೋ ಮೂಲೆಯಲ್ಲಿ "ಸಾಲಬಾಧೆ-ರೈತ ನೇಣಿಗೆ ಶರಣು" ಎಂಬ ಸಿಂಗಲ್ ಕಾಲಂ ಸುದ್ದಿ ಬರಬಹುದಷ್ಟೇ!
ಅದಿರಲಿ, ರೈತನ ಆತ್ಮಹತ್ಯೆಯನ್ನೂ ಒಂದು ಪ್ರತಿಭಟನೆ ಎಂದು ಈ ಮಾಧ್ಯಮಗಳಿಗೆ,ಸರಕಾರಕ್ಕೆ ಅನಿಸುವುದೂ ಇಲ್ಲ.

ಇಂತಹ ಹೊತ್ತಲ್ಲೇ ಜನಗಳ ತೆರಿಗೆಯ ಹಣದಲ್ಲಿ ನಡೆವ ಅನಗತ್ಯ "ಉಪ ಚುನಾವಣೆ" ಬಂದಿದೆ. ನಿಲ್ಲುವವರು ಟಿಕೆಟ್ಟುಗಳಿಗೆ ಓಡಾಡುತ್ತಲಿದ್ದಾರೆ.ಟಿಕೆಟ್ ಸಿಕ್ಕವರು ಮತ್ತೆ ಹಳ್ಳಿಗಳಿಗೆ ಹೋಗಿ 'ನಿಮ್ಮೂರಿಗೆ ಭದ್ರಾ ನದಿ ನೀರು ತರುತ್ತೇವೆ,ನಮಗೇ ಓಟು ಹಾಕಿ' ಎಂಬ ಶಾಶ್ವತ ಭರವಸೆ ಕೊಡುವ ಹವಣಿಕೆಯಲ್ಲಿದ್ದಾರೆ.

ಸಾವು ಮಾತ್ರ ರೈತನ ತಲೆಬಾಗಿಲಲ್ಲಿ ಕುಳಿತು ಕಾಯುತ್ತದೆ.



ದನಕರುಗಳಿಗೆ ಹುಲ್ಲಿಲ್ಲ ಕಾಡಲ್ಲಿ! ನೀವೇ ನೋಡಿ ಇಲ್ಲಿ!

ಕಮರಿದ್ದು ಬೆಳೆಯಲ್ಲ...ಬದುಕಿನ ಕನಸು!

ಒಣಗಿ ನಿಂತ ಮೆಕ್ಕೆಜೋಳದ ಇನ್ನೊಂದು ಹೊಲದ ಚಿತ್ರ.

ಮಳೆ ಕಾಣದೆ ತೆನೆ ಇಲ್ಲದೆ‌ ಒಣಗಿದ ಮೆಕ್ಕೆ ಜೋಳ.

ಸಂಪೂರ್ಣ ಒಣಗಿ ನಿಂತಿದೆ ರಾಗಿ.

ಮಳೆ ಇಲ್ಲದೆ ಒಣಗಿದ ನೆಲಗಡಲೆ ಬೆಳೆ.

Monday, 2 July 2018

ಹುಚ್ಚು ಖೋಡಿ ಮನಸು - ೧೨

ನಾನು ಬರೆದದ್ದನ್ನು ಓದುವ ಜೀವ ಜೀವಾಳವೇ...
ನಮ್ಮ ಮಧ್ಯೆ ಹರಿದಾಡಿದ ಅಕ್ಷರಗಳ ಲೆಕ್ಕ
ನಿನ್ನ ಮೌನಕ್ಕೂ ಹಾಕಿಟ್ಟಿದ್ದೇನೆ ಬಿಡು ತೂಕ!
ಎಷ್ಟು ಸಲ ತುಟಿ ಕಚ್ಚಿ ತಡೆದಿದ್ದೆ ಹೇಳು ಬಿಕ್ಕ?
ಕೊಂದಿದ್ದ ಕಾಲವೆಷ್ಟು? ಹೇಳಲಿಲ್ಲ ಯಾಕ?

ಸಾವಿಗೂ ಸಮಾಧಾನ ಮಾಡುತ್ತಿದ್ದೆ
ಕತ್ತಲನ್ನೂ ಬಿಡದೆ ಹತ್ತಿರ ಕರೆಯುತ್ತಿದ್ದೆ
ಕಾರಣಗಳೇ ಇಲ್ಲದೆ ನಕ್ಕಿದ್ದಕ್ಕೆ
ದಾರುಣವಾಗಿ ಬಿಕ್ಕಿ ಅತ್ತಿದ್ದಕ್ಕೆ
ಕಂದಾಯ ಕಟ್ಟಲೇಬೇಕಿದೆಯಲ್ಲವೇ ಕಾಲಕ್ಕೆ?

ಈಗಲೂ ಬೀಳುತ್ತವೆ ಬಿಡು,
ರಾತ್ರಿ ಮಲಗಿದಾಗ ಕೆಲ ಅರ್ಥವಾಗದ ಕನಸು!
ಆಗಾಗ ಕಳಿಸುತ್ತಿರುತ್ತೇನೆ ಹೀಗೆ
ತೆರೆದು ನೋಡು ನಿನ್ನ ಹುಚ್ಚು ಖೋಡಿ ಮನಸು!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...