Thursday, 4 April 2024

ಜನ-ಜಾಣತನ


 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ್ಲಿ ಏನಾದರೂ ಕೊಂಡಾಗ ಮಾತ್ರ ಹೇಳಬಲ್ಲ ಅವನು!
ಯಾರಾದರೂ ಟೈಮೆಷ್ಟು ಅಂತ ಕೇಳಿದರೆ, ಜನ ಹೇಳಲಾರದ ಕಾಲವಿದು! ಆಸುಪಾಸು ಯಾರಾದರೂ ಸತ್ತರೂ, ಆ ಕಡೆ ತಿರುಗಿಯೂ ನೋಡದೆ, ಫೇಸ್‌ಬುಕ್‌ ನಲ್ಲಿ ಲೈಕು,RIP ಹಾಕುವವರ ಯುಗ!

ಬೆಳಗ್ಗೆ ಏನ್ ತಿಂದಿದ್ದೆ ಅನ್ನೋದನ್ನೂ ಫೋನ್ ನೋಡಿ ಹೇಳುವ, ದೇಶದ ರಾಜಧಾನಿ ಯಾವುದು ಎಂದರೆ, ಗೂಗಲ್ ಮಾಡುವವರ ಜಮಾನಾ ಇದು!

ನಾವು ಜಾಣರಾಗತ ಇದೇವಾ? ದಡ್ಡರಾಗತ ಇದೇವಾ? ನಮ್ಮ ಜ್ಞಾಪಕಶಕ್ತಿ ನಿರುಪಯುಕ್ತ ಆಗತ ಇದೆಯಾ? 

ಆದರೆ, ನಾವು ಸ್ವಾರ್ಥಿಗಳಾಗತ ಇದೇವೆ,ಸಂಕುಚಿತಗೊಳತಾ ಇದೇವೆ. ಕುತಂತ್ರ-ದಗಾ-ಮೋಸಗಳು ಈಗ ಸಹಜ ಎನ್ನುವಷ್ಟರ ಮಟ್ಟಿಗೆ ಹೊಂದಿಕೊಳತಾ ಹೋಗಿದೇವೆ.

ಅದೆಲ್ಲೋ ಗುಲಾಂ ಆಲಿಯ ಘಜಲ್ ತೇಲಿಬರತಾ ಇದೆ. ಸೂರ್ಯ - ಯಾವುದರ ಪರಿವೆಯಿಲ್ಲದೆ,ಏನನ್ನೂ ನಿರೀಕ್ಷಿಸದೆ, ಸೃಷ್ಟಿ ಸಮಸ್ತದ ದಿನವೊಂದನ್ನು ಮುಗಿಸಿದ ಆ ಸೂರ್ಯ ಪರಮಾತ್ಮ ಪಶ್ಚಿಮದಲ್ಲಿ ವಿಶ್ರಾಂತಿ ಪಡೆಯಲು ಹವಣಿಸುತ್ತಲಿದ್ದರೆ..

ಮನೆ ಮುಂದಿನ ಹುಣಸೇಮರದಲ್ಲಿ ಹಕ್ಕಿಗಳ ಕಲರವ!! ಹೂವು ಅರಳುವ ಸದ್ದು ಅವುಗಳಿಗೆ ಮಾತ್ರವಾ ಕೇಳಿಸುವುದು?

ತೇರು...!


 ಈ ಜಾತ್ರೆಗಳೇ ಹೀಗೆ! ಅಲ್ಲಿ‌ ಬರೀ ತೇರನ್ನು ಮಾತ್ರವಲ್ಲ ಎಳೆಯುವುದು..ಅನೇಕ ಜನರ ಬದುಕಿನ ತೇರನ್ನೂ ಕೂಡ! ಅವು ಬರೀ ಕೊಂಡು ಕೊಳ್ಳುವ ಪರಿಷೆಗಳಲ್ಲ ; ಸಾವಿರ ಭಾವಗಳ,ನಿರ್ಭಾವ-ಸ್ವಭಾವ-ಅಭಾವಗಳ ಮೆಹನತ್ತಿನ ಮೆರವಣಿಗೆ!

ಜಿಲೇಬಿ ಕೊಡಿಸಲಿಕ್ಕೆ ಕಾಸಿಲ್ಲದ ಅಪ್ಪನ ನೋವು, ಆಟಿಕೆ ಕೊಳ್ಳಲಿಕ್ಕಾಗದ ಕಂದನ ಕಂಬನಿ... ಪಾತ್ರೆ ,ಲಟ್ಟಣಿಗೆ,ಕುಂಕುಮದ ಭರಣಿಗಳನ್ನು ಕೊಂಡ ಬಡ ಗೃಹಿಣಿಯ ಸಂಭ್ರಮ...ಎತ್ತುಗಳಿಗೆ ಕೋಡಣಸು,ಗಗ್ಗರ ಕೊಂಡ ರೈತನ ಹಿಗ್ಗು...!!

        ಅಲ್ಲೆಲ್ಲೋ ಕೈಕೈ ಹಿಡಿದು ನಗುತ್ತಾ ತಿರುಗಾಡುವ ಪ್ರೇಮಿಗಳ ನೋಟ..ಚಂದದ ಬಟ್ಟೆ ತೊಟ್ಟ ತರುಣಿಯರ,ತರುಣರ ಹೊಸ ಬೇಟ..! 

ಜಾತ್ರೆಗಳು... ಹೊಸ ಬಂಧಗಳನ್ನು ಬೆಸೆಯುತ್ತವೆ. ನೆನಪುಗಳ ಮೆರವಣಿಗೆಯ ಭಾಗಗಳಾಗಿ ಬದುಕಿಡೀ ಕಿಲಕಿಲ ನಗುತ್ತವೆ!

ಜಾತ್ರೆ ಅಂದರೆ ಬರೀ ದೇವರ ಆರಾಧನೆಯಲ್ಲ. ಅದೊಂದು ಕಾಲದ ಹೊಸ ಮಗ್ಗುಲ ಹೊರಳುವಿಕೆ! ಅಲ್ಲಿ ಎಷ್ಟು ಜನರ ಎದೆಗಳಲ್ಲಿ ನಂದಿಕೋಲುಗಳು ಕುಣಿದಿರುತ್ತವೋ...ಎಷ್ಟು ಹೃದಯಗಳ ಡೋಲು ಬಾರಿಸಿರುತ್ತವೆಯೋ ಯಾರಿಗೆ ಗೊತ್ತು!! ತೇರಿಗೆ ಎಸೆವ ಪ್ರತೀ ಬಾಳೆಹಣ್ಣಿನಲ್ಲೂ ಒಂದೊಂದು ಜೀವದ ಕನಸಿರುತ್ತದೆ. ಒಡೆವ ಪ್ರತೀ ತೆಂಗಿನ ಕಾಯಿಯೂ ಒಂದೊಂದು ಸಂಸಾರದ ತಲ್ಲಣದ ಪ್ರಾರ್ಥನೆ!

Wednesday, 3 April 2024

ಸಂಬಂಧಗಳು ಸಂಕೋಲೆಗಳಲ್ಲ - ಜೀವ ಪ್ರೀತಿಯ ಬಂಧಗಳು!


 ಪ್ರೀತಿಯಿಂದ ಸಾಕಿದ ಮಕ್ಕಳು.. ಕಣ್ಣೆದುರಿನಲ್ಲಿಯೇ ಆಸ್ತಿಯನ್ನು ಪಾಲು ಮಾಡಿಕೊಳ್ಳುವ , ಕಟ್ಟಿದ ಮನೆಯನ್ನು ಎರಡಾಗಿ ವಿಭಾಗಿಸಿಕೊಳ್ಳುವ ಕ್ಷಣ ಕೊಟ್ಟಷ್ಟು ಸಂಕಟವನ್ನು... ತಂದೆತಾಯಿಗಳಿಗೆ ಬೇರಾವುದೂ ಕೊಡಲಾರದು!


ಎಷ್ಟೋ ಸಲ ಗಮನಿಸಿದ್ದೇನೆ...ಈ ರಕ್ತಸಂಬಂಧಗಳ ಆಯಸ್ಸು ತೀರಾ ಕಮ್ಮಿ. ದ್ವೇಷದ ಬೆಂಕಿ ಹಬ್ಬುವುದೇ ಅಲ್ಲಿಂದ! ಅದೇ ಯಾರೋ ಎಲ್ಲೋ ಪರಿಚಯವಾದವರೇ ಗಾಢ ಬಂಧ ಬೆಸೆಯುತ್ತಾರೆ.

ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಅರ್ಧಗಂಟೆ ಕಾಲ ಕೂತವರು, ಅರ್ಧ ಜೀವದಷ್ಟು ಪ್ರೀತಿ ಕೊಡುವ ಗೆಳೆಯರಾಗುತ್ತಾರೆ..ಅದೆಲ್ಲೋ ಸಿಕ್ಕ ಜೀವವೊಂದು ಜೀವ ಬಂಧ ಬೆಸೆದುಬಿಡುತ್ತದೆ!


ಈಗ ಸೋಶಿಯಲ್ ಮೀಡಿಯಾ ಜಮಾನ! ಫೇಸ್‌ಬುಕ್‌ ‌ನಲ್ಲಿ ಫ್ರೆಂಡ್ ಆಗಿ, ವಾಟ್ಸಪ್ ಗ್ರೂಪಿನಲ್ಲಿ ಹತ್ತಿರವಾದ ಗೆಳೆತನಗಳೂ ಅಸಂಖ್ಯ ಇರಬಹುದು. ಹಾಗೆನೇ ಸ್ನೇಹದ ಹೆಸರಿನಲ್ಲಿ ಎದೆಗೋ..ಜೇಬಿಗೋ ಕತ್ತರಿ ಹಾಕಿದವರೂ ಇರಬಹುದು! ಇಷ್ಟಕ್ಕೂ ಕರುಳಬಳ್ಳಿಗಳೇ ಕಿಲುಬು ಹಿಡಿದ ಈ ಕಾಲದಲ್ಲಿ ಇದಾದರೂ ಯಾವ ಲೆಕ್ಕದ್ದು!


ನಾವು ಜಗತ್ತಿನಲ್ಲಿ ಬದುಕಬೇಕಿರುವುದು ಸಂಬಂಧಗಳಲ್ಲಿ. ಅದು ರಕ್ತ ಸಂಬಂಧವೇ ಆಗಬೇಕಿಲ್ಲ. ಅದಕ್ಕೆ ಜಾತಿ,ಧರ್ಮದ ಹರಕತ್ತೂ ಇರಬೇಕಿಲ್ಲ. ಹೃದಯದ ಜೊತೆಗೆ ನಿಃಷ್ಕಲ್ಮಶ ಬಾಂಧವ್ಯ ಬೆಸೆವ ಯಾವ ಬಂಧವೇ ಆಗಲಿ..ಅದೇ ಶ್ರೇಷ್ಠ...ಅದೇ ಸಾರ್ಥಕ!


ಬದುಕಿನಲ್ಲಿ ನಿಜದ ಸುಖವಿರುವುದು..ಲಕ್ಷುರಿ ಐಟಮ್ಮುಗಳಲ್ಲಿ ಅಲ್ಲ , ಹಣ-ಆಸ್ತಿಗಳಲ್ಲಿ ಅಲ್ಲ - ಬಾಂಧವ್ಯದಲ್ಲಿ ಸುಖವಿದೆ. ಮನುಷ್ಯ ಪ್ರೀತಿಯಲ್ಲಿ ಸಾರ್ಥಕ್ಯವಿದೆ.

ಇಷ್ಟಕ್ಕೂ ಶ್ರೀಮಂತಿಕೆ ಅಂದರೆ, ಸಂಪತ್ತಲ್ಲ - ಕಷ್ಟ ಬಂದಾಗ ಅದರಿಂದ ಯಾವ ಉಪಯೋಗ ಇಲ್ಲ. ಕಷ್ಟ ಬಂದಾಗ ಅದೆಷ್ಟೋ ಸಲ ಹಣವೂ ಕೆಲಸಕ್ಕೆ ಬಾರದ ಪೇಪರ್ ಆಗುತ್ತದೆ.

 ಆದರೆ ಜೀವಕ್ಕೆ ಜೀವ ಕೊಡುವ 'ಬಾಂಧವ್ಯ' ದೊಡ್ಡದು! 

ಹಾಗಾಗಿ...ಸಂಬಂಧಗಳನ್ನು ಉಳಿಸಿಕೊಳ್ಳಿ. ಗೆಳೆತನವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹರಿದುಕೊಳ್ಳದಿರಿ.

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...