ಇಷ್ಟವಿಲ್ಲದವರ ತುದಿಬೆರೆಳ ಸ್ಪರ್ಶದಲ್ಲೂ
ನರಕವಿರುತ್ತದೆಯಂತೆ..!
ನಸೀಬಿನ ಜೊತೆಗೆ ನನ್ನದೊಂದು
ಜಗಳವಿದ್ದೇ ಇದೆ..!
ನನ್ನ ಪ್ರತಿದಿನಗಳೂ ಹೀಗೇ ಇರಲಿಕ್ಕೆ
ಒಂದನ್ನಾದರೂ ಉಳಿಸಿ ಹೋಗಿದ್ದೀ..
ಅದಕ್ಕೆ ಇಲ್ಲಿ ಯಾರೋ 'ಖಾಲಿತನ' ಅಂದರು!
ಇರಬಹುದೇನೋ..ನನಗೂ ಗೊತ್ತಿಲ್ಲ.
ಎದುರಾದಾಗ 'ಹೇಗಿದ್ದೀಯಾ ನೀನು?'
ಎಂದು ಕೇಳಲಾಗದ ನಿನಗೆ,
ದೂರದಲ್ಲೇ ನಿಂತು ಅವರಿವರಲ್ಲಿ
ನನ್ನ ಯೋಗಕ್ಷೇಮ ವಿಚಾರಿಸುವ ತವಕವೇಕೋ?
ಏನೂ ಅಲ್ಲದ ಒಂದು ನಂಟು
ಇಬ್ಬರಲ್ಲೂ ಹೀಗೆಯೇ ಬೆಸೆದುಕೊಂಡಿರಲೆಂದು
ಸದಾ ಹವಣಿಸುತ್ತಿರುವ ನಿನ್ನ ಹುಚ್ಚು ಹಂಬಲಕ್ಕೆ
ಮನಸಾರೆ ನಗಬೇಕು ಅನಿಸಿಬಿಡುತ್ತದೆ ಆಗಾಗ!
ಇದಕ್ಕೆ ಇಲ್ಯಾರೋ 'ಬಾಂಧವ್ಯ' ಅಂದರು ನೋಡು!
ಮತ್ತೆ...
ಎಂದಿಗೂ ಸಿಗಲಾರೆ ಎನ್ನುವ
ನಿನ್ನ ಅಸಹಾಯಕತೆಯನ್ನು ಮಾತ್ರವೇ
ಈ ಜಗತ್ತು 'ಪ್ರೇಮ'ವೆಂದು ಕರೆಯುತ್ತದೆಯಲ್ಲವೇ?