ತೀರಾ....
ನನ್ನಂಥವನೊಬ್ಬನ ಎದೆಯೊಳಗೆ
ಸಂಘರ್ಷ-ಸಾಂತ್ವನ ಎರಡೂ ನೀನೇ!
ಬಡಿದಾಡಿಸುವುದೂ ನೀನೇ
ಲಲ್ಲೆಗರೆಯುವುದೂ ನೀನೇ
ಕಣ್ಣೀರಿಗೊಡ್ಡುವ ಬೊಗಸೆಯೂ ನಿನ್ನದೇ
ಬಾಯತುಂಬಾ ನಗಿಸುವ ಮಾತೂ ನಿನ್ನದೇ
ನಿದ್ದೆಗೆ ಚುಕ್ಕು ತಟ್ಟುವ ಕೈಯೂ ನಿನ್ನದೇ
ಚಿವುಟಿ ಎಬ್ಬಿಸುವ ಉಗುರೂ ನಿನ್ನದೇ
ಬೆಳಗಿನ ಸೂರ್ಯೋದಯವೂ ನಿನದೇ
ಈಗಿನ ಬೈಗುಗಪ್ಪಿನ ಗೋಧೂಳಿಯೂ ನಿನದೇ
ಪೂರ್ಣ ಚಂದಿರನ ತಂಪು ಹುಣ್ಣಿಮೆಯೂ ನೀನೇ
ಕರಾಳಭೀಕರ ನಿದ್ರೆರಹಿತ ನಿಶೆಯೂ ನೀನೇ
ಇಲ್ಲಿ ಒಡಮೂಡುವ ಪ್ರತೀ ಅಕ್ಷರವೂ ನೀನೇ
ಒಡಮೂಡಿಸುವ ಬೆರಳಿನ ಚೈತನ್ಯವೂ ನೀನೇ
ಹುಟ್ಟು-ಸಾವು,ಬದುಕು-ಭ್ರಮೆಗಳೆಲ್ಲವೂ ನೀನೇ
ರೋಗ-ರುಜಿನ,ಹಸಿವು-ಹತ್ಯೆಗಳೂ ನೀನೇ
ಸಾಂಗತ್ಯ-ವಿರಹ,ಸುರತ-ವಿರತ ನಿಸ್ಸಂಗತವೂ ನೀನೇ
ಎಲ್ಲದರಲ್ಲಿ ಎಲ್ಲವೂ ಆಗಿ,ಬದುಕು ಮಾಗಿ-ದೇಹ ಬಾಗಿ,
ಕೇಳುವುದೊಂದೇ ನಿನ್ನನು ಕೇಳೋ ದೇವರೇ..
ಸಾವಿಗೂ ಮುನ್ನ ನನ್ನೆದೆಯೊಲವ ಬತ್ತಿಸದಿರು ದೊರೇ!
No comments:
Post a Comment