ಬದುಕಿನ ಕನಸುಗಳನರಸಿಕೊಂಡು ಬೆಂಗಳೂರಿನಂಥ ನಗರಗಳೆಡೆಗೆ ನನ್ನೂರು ಸೇರಿದಂತೆ,ಅದೆಷ್ಟೋ ಹಳ್ಳಿಯ ರೈತಾಪಿ ಹುಡುಗರು ಹೆಜ್ಜೆ ಹಾಕಿದ್ದಾರೆ..ಸಣ್ಣ ಸಣ್ಣ ಪೆಟ್ಟಿಗೆಗಳಂಥ ಬಾಡಿಗೆ ಮನೆಗಳಲ್ಲಿ ಬದುಕುತ್ತಾ...ಬರೋ ಸಣ್ಣ ಸಂಬಳಕ್ಕೆ ಹಗಲು ರಾತ್ರಿಗಳಲ್ಲಿ ಯಾವನದ್ದೋ ಉದ್ಧಾರಕ್ಕೆ ದುಡಿಯುತ್ತಾ..ಉಳಿಸಲಿಕ್ಕಾಗುವುದು ಬರೀ PF ದುಡ್ಡು ಮಾತ್ರ ಎಂಬ ಸತ್ಯ ಗೊತ್ತಿದ್ದರೂ...
ಕನಸುಗಳ ಕನವರಿಕೆ ನಡದೇ ಇರುತ್ತದೆ. ಬಿಟ್ಟು ಬಂದ ಹಳ್ಳಿಯ ಬೇರಿನೆಡೆಗೊಂದು ನಿರ್ಲಕ್ಷ್ತವನ್ನು ತಾಳಿ, ನಗರದ ಝಗಮಗ ಬೆರಗಿನ ಬೆಳಕಿಗೆ ಬಲಿಯಾಗುವ ದೀಪದ ಹುಳುಗಳಂತೆ ಇವರ ಕನಸುಗಳೂ ಕೂಡ!
ಕನಸುಗಳೊಂದಿಗೆ ಆರೋಗ್ಯ, ಆಯಸ್ಸೂ ಕೂಡ ಕರಗಿರುತ್ತದೆ. ಪಡೆದುಕೊಂಡದ್ದೇನು,ಕಳೆದುಕೊಂಡದ್ದೇನು ಎಂಬ ಲೆಕ್ಕಾಚಾರಕ್ಕೆ ಕೂರುವ ವೇಳೆಗೆ, ಕಾಲದ ಪಥ ಬದಲಾಗಿರುತ್ತದೆ...ನಗರವು ಹೊಸ ಬಣ್ಣ ಬಳಿದುಕೊಂಡು,ಅವರನ್ನು ಪರಿಚಯವೇ ಇಲ್ಲವೆಂಬಂತೆ ನಿರುಕಿಸಿ,ಮತ್ತೆ ಹೊಸ ಕನಸು ಹೊತ್ತ ಹೊಸ ತಲೆಮಾರಿನೆಡೆ ಮುಗುಳು ನಗುತ್ತಾ ಕೈ ಚಾಚುತ್ತದೆ!!
ಹೋದವರು ಮತ್ತೆ ಹಳ್ಳಿಕಡೆ ಬರುವುದು ಮತ್ತೆ ನಗರವು ಇವರನ್ನು ವಿಸರ್ಜಿಸಿದಾಗಲೇ! ಜೀರ್ಣವಾದದ್ದು ವಿಸರ್ಜನೆಯಾಗುವಂತೆ, ವೃದ್ಧಾಪ್ಯದಲ್ಲಿ ಮಕ್ಕಳಿಗೆ ಇವರು ಕೂಳಿಗೆ ಭಾರವೆನಿಸಿದಾಗ!
No comments:
Post a Comment