Wednesday, 25 October 2017

"ಗೌರಿಯ ಮಕ್ಕಳು"

ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು!
ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧವೊಂದನ್ನು ಬೆಸೆದಿರುತ್ತದೆ! ಇಲ್ಲಿನ ಎತ್ತು,ಆಕಳು,ಎಮ್ಮೆ,ಆಡು,ಹೊಲದ ಬದು,ಬದುವಿನ ಮೇಲೆ ಬೆಳೆದ ಟಂಗಟಿಯ ಗಿಡ...ಹೀಗೆ ಯಾವುದೂ ಇಲ್ಲಿ ಅಮುಖ್ಯವೆನಿಸುವುದೇ ಇಲ್ಲ! ಎಲ್ಲವೂ ಹಳ್ಳಿಗರ ಬದುಕಿನ ಅವಿಭಾಜ್ಯ ಅಂಶಗಳಾಗಿ,ಅವರ ಬದುಕು,ಸಂಸ್ಕೃತಿಯೊಂದಿಗೇ ಸಾಗುತ್ತಿರುತ್ತವೆ.

ಇಲ್ಲಿ ಸ್ತ್ರೀ ಎಂಬ ಕಾರಣಕ್ಕೆ ಅವಳ ಹಕ್ಕಿನ ನಿರಾಕರಣೆಯಾಗದು.ಬದುಕಿನ ಸುಖಕ್ಕೆ ಬೇಕಿರುವುದು ಸಮಾನತೆಗಾಗಿನ ಬಡಿದಾಟವಲ್ಲ,ಸೌಹಾರ್ದದೆಡೆಗಿನ ಸಾಮರಸ್ಯ ಎಂಬ ಜೀವನಮೌಲ್ಯ ಸಾರುವಂತಹ ಸಂಸ್ಕೃತಿ ಹಳ್ಳಿಗಳದ್ದು.!

ಅದಕ್ಕೆ "ಗೌರೀ ಹಬ್ಬ" ದ ಆಚರಣೆಯನ್ನು ಉದಾಹರಿಸಬಹುದು.ಇದು ಹಿರೇಕುಂಬಳಗುಂಟೆಯಂತಹ ಹಲವು ಹಳ್ಳಿಗಳಿಗೇ ದೊಡ್ಡಹಬ್ಬವೂ ಹೌದು.ಕೇವಲ ಮಹಿಳೆಯರ ಅದರಲ್ಲೂ ಅವಿವಾಹಿತ ಹುಡುಗಿಯರು ಸಂಭ್ರಮಿಸಿ ಸುಖಿಸುವ ಹಬ್ಬ!

ದಸರಾ ಅಮವಾಸ್ಯೆಯ ನಂತರದ ಸೀಗೆ ಹುಣ್ಣಿಮೆಗೆ "ಸಣ್ಣ ಗೌರೀ ಹಬ್ಬ" ಆಚರಿಸಿದರೆ,ದೀಪಾವಳಿ ಅಮವಾಸ್ಯೆಯ ನಂತರ ಬರುವ ಹುಣ್ಣಿಮೆಯೇ "ಗೌರಿ ಹಬ್ಬ" ದ ಆಚರಣೆಗೆ ಮೀಸಲಾಗಿರುತ್ತದೆ.ಬಹುತೇಕ ಎರಡೂ "ಗೌರಿ ಹಬ್ಬ" ಗಳೂ ಒಂದೇ ರೀತಿಯವಾದರೂ ದೊಡ್ಡ ಗೌರಿ ಹಬ್ಬವೇ ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ ಪಡೆದಿದೆ.

ಹುಣ್ಣಿಮೆ ಇನ್ನೂ ಒಂದು ವಾರವಿರುವಾಗಲೇ ಊರ ಹೊರಗಿನ ಫಲವತ್ತಾದ ಮಣ್ಣನ್ನು ತರುವ ಮೂಲಕ ಗೌರಿಹಬ್ಬ ಚಾಲನೆ ಪಡೆದುಕೊಳ್ಳುತ್ತದೆ.
ಊರಿನ ಅವಿವಾಹಿತ ಹೆಂಗಳೆಯರೆಲ್ಲ ಕೂಡಿ ಭೂಮಿಯನ್ನು ಪೂಜಿಸಿ,ಹುರುಳಿ ಬೇಳೆ-ಬೆಲ್ಲದ ಎಡೆ ಅರ್ಪಿಸಿ ಬಟ್ಟಲುಗಳಲ್ಲಿ ಮಣ್ಣು ತುಂಬಿ ಎಲ್ಲರೂ ಒಟ್ಟಾಗಿ ಹಾಡುತ್ತ ಹೊತ್ತು ತರುತ್ತಾರೆ.

" ಕುತನಿ ಜರಿಯ ಕುಬುಸ ತೊಟ್ಟು
ಕುಂಕುಂಬೊಟ್ಟು ಹಣೆ ಮೇಲಿಟ್ಟು
ವಾಲೆ ಕಪ್ಪು ಕಿವಿಯಲಿಟ್ಟು
ಒಲುಮೆಯಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||

ಸಾಸ್ವಿ ಬಣ್ಣದ ಸೀರೆಯುಟ್ಟು
ಮುತ್ತಿನ ದಂಡೆ ಜಡೆಯಲಿಟ್ಟು
ಬೇಳೆ-ಬೆಲ್ಲ ತೆಗೆದುಕೊಂಡು
ಹರುಷದಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||

ಕಂಚಿನ ಕಳಶ ತುಂಬಿ ಇಟ್ಟು
ಗೆಳತಿಯರು ನಾವು ಐವಾರು
ಗೌರಿ ನಿನ್ನ ಮಣ್ಣ ತುಂಬಿ
ನಿರುತದಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||"

 ಹೀಗೆ ತಂದ ಮಣ್ಣನ್ನು ಗ್ರಾಮದ ದೇವಸ್ಥಾನದ ಮೂಲೆಯಲ್ಲಿ ಚಿಕ್ಕ ಗುಡ್ಡೆಹಾಕುತ್ತಾರೆ.
ಇದನ್ನು "ಗೌರಿಯನ್ನು ಕರೆತರುವುದು" ಎನ್ನಲಾಗುತ್ತದೆ.ಈ ಮಣ್ಣಗುಡ್ಡೆಗೆ ಪ್ರತಿ ದಿನವೂ ಹೂವಿನ ಆರತಿ ಬೆಳಗುತ್ತಾರೆ.
ತರಕಾರಿಗಳನ್ನು ಅಡ್ಡಡ್ಡ ಕೊಯ್ದು ಹೋಳುಗಳ ಮೇಲೆ ಬತ್ತಿಗಳನ್ನಿಟ್ಟು,ಜೊತೆಗೆ ಟಂಗಟಿಯ ಹೂಗಳನ್ನೋ,ಗುರೆಳ್ಳು,ಕೋಲಣ್ಣೆ,ಸೂರ್ಯಕಾಂತಿ ಹೀಗೆ ವೈವಿದ್ಯಮಯ ಹೂಗಳ ಜೊತೆ ಆರತಿ ಬೆಳಗುವುದನ್ನು ನೋಡುವುದೇ ಚಂದ!

ಹೊಲಗಳಲ್ಲಿನ ಬೆಳೆಗಳೆಲ್ಲ ಹೂವಾಡುವ,ಕಾಳುಗಟ್ಟುವ ಕಾಲವಾದ್ದರಿಂದ,ಫಲ ಕೊಟ್ಟ ಭೂದೇವಿ(ಮಣ್ಣು) ಯನ್ನೂ ಗೌರಿಯ ರೂಪದಲ್ಲಿ ಪೂಜಿಸಿ ಕೃತಜ್ಞತೆಯರ್ಪಿಸುವ ಅರ್ಥಪೂರ್ಣ ಆಚರಣೆ ಇದು!
ಮೂರು ದಿನ ಮಣ್ಣುಗೌರಿಗೆ ಆರತಿ ಬೆಳಗಿದ ನಂತರ ದೇಗುಲದ ಒಳಗಿನ ಗೌರಮ್ಮನನ್ನು(ಮರದ ವಿಗ್ರಹ)ಹೊರಗೆ ತಂದು ಅದಕ್ಕೂ ಸೀರೆಯುಡಿಸಿ ಆರತಿ ಬೆಳಗುತ್ತಾರೆ.

ಐದು ದಿನಗಳ ಆರತಿ ಬೆಳಗುವುದು ಮುಗಿದ ಮರುದಿನ ಹೆಣ್ಣುಮಕ್ಕಳೆಲ್ಲಾ "ಗೌರಿ ಹುಡುಗಿ" ಯರಾಗಿ ನಲಿದಾಡುವ ದಿನ.
ಪುಟ್ಟ ಪುಟ್ಟ ಹೆಂಗೂಸುಗಳಿಂದ ಹಿಡಿದು,ಪ್ರಾಯಕ್ಕೆ ಬಂದ ತರುಣಿಯ ತನಕ ಎಲ್ಲರೂ ಸೀರೆಯುಟ್ಟು ಅಲಂಕರಿಸಿಕೊಂಡು ತಂಡ ತಂಡಗಳಾಗಿ ವಿವಿಧ ಆಟಗಳಾಡುತ್ತ ದಿನವಿಡೀ ಸಂತೋಷದಿಂದ ಕಳೆಯುತ್ತಾರೆ.
ಅಡಕೆಲೆಯ ಸಂಚಿಗಳನ್ನು ಸೊಂಟಗಳಲ್ಲಿ ಸಿಕ್ಕಿಸಿಕೊಂಡು ವೈಯಾರದಿಂದ ನಡೆಯುವ ಆ ಗೌರಿಮಕ್ಕಳ ನೋಟವೇ ಒಂದು ಚಂದ!

" ಒಂದು ಸೇರು ಬೆಲ್ಲಾವ ತಂದು
ಘಮಾ ಘಮಾ ಹುಗ್ಗಿಯ ಮಾಡಿ|
ರಾಯರಾಡೋದು ಹಾದಿಬೀದ್ಯಾಗ
ನಾವಾಡೋದು ಗೌರಿ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಎರಡು ಸೇರು ಅಕ್ಕಿಯ ತಂದು
ಎರಡು ಬುಟ್ಟಿ ಕಜ್ಜಾಯ ಮಾಡಿ|
ಶೆಟ್ಟರಾಡೋದು ಪಟ್ಟಣಸಾಲ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಮೂರು ಸೇರು ತೊಗರಿ ತಂದು
ಮೂರು ಪರಾತ ಹೋಳಿಗೆ ಮಾಡಿ|
ಮಕ್ಕಳಾಡೋದು ಮಂಗಳಾರಪೇಟ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ನಾಕು ಸೇರು ಕಡಲೆ ತಂದು
ಒಪ್ಪಾಗಿ ಮಾಡಿ ಉಂಡೀಕಡುಬು|
ಕರಣೀಕರಾಡೋದು ಕೋಟೆಬೀದ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಐದು ಸೇರು ಹಲಸಂದಿ ತಂದು
ಐದೂ ತರಾದ ಹಪ್ಪಾಳ ಮಾಡಿ
ಉಳ್ಳವರಾಡೋದು ಹಾಲಿನ ಹೊಳಿಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||"

ಈ ಮೂರೂ ದಿನಗಳ "ಗೌರಿಯಾಟ" ದಲ್ಲಿ ಹೊಲಗಳಲ್ಲಿ ಏನೇ ಕೆಲಸಗಳಿದ್ದರೂ ಅವರನ್ನು ಮನೆಯವರು ಕೆಲಸಗಳಿಗೆ ಕರೆಯುವ ಹಾಗಿಲ್ಲ.ಅಕ್ಷರಶಃ ಅವರು ಹಕ್ಕಿಗಳು ಅವಾಗ!
ಆಟವಾಡಿ ದಣಿದು ಸಾಯಂಕಾಲವಾದೊಡನೆ ಅವರಿಗಾಗಿ ಮನೆಗಳಲ್ಲಿ ವಿಶೇಷ ತಿಂಡಿಗಳ ವ್ಯವಸ್ಥೆಯಾಗುತ್ತದೆ.ಎಲ್ಲರೂ ಒಟ್ಟಾಗಿ ಊರಿನ ಒಂದು ಕಡೆ ತಿಂಡಿ ತಿಂದು ತಾಂಬೂಲ ಮೆಲ್ಲುತ್ತಾ
ಊರಿನ ಪೋಲಿಹುಡುಗರ ಕಡೆಗೊಂದು ಛಳ್ಳನೆ ಕುಡಿನೋಟ ಬೀರುವ,ಪಿಚಕ್ಕನೆ ಎಲೆಯಡಕೆ ರಸ ಹಾರಿಸುವ ಅವರ ಗತ್ತೇ ಸೊಗಸು.

ಇದು ಹೆಣ್ಣು ನೋಡುವರಿಗೆ ಸೂಕ್ತ ಸಂದರ್ಭವೂ ಆಗಿರುತ್ತದೆ.ಪರಸ್ಪರ ಸಂಬಂಧಗಳು ಕೂಡಲೂ ವೇದಿಕೆಯೂ ಆಗುತ್ತದೆ.ಒಂದು ರೀತಿಯಲ್ಲಿ ಗೌರಿಹಬ್ಬ "ವಧುಗಳ ಸಮಾವೇಷ" ದಂತೆಯೂ ಕಾಣುತ್ತದೆ.

ಕೊನೆಯ ದಿನ ಗೌರಿಯನ್ನು ಗಂಡನ ಮನೆಗೆ ಕಳಿಸಿಕೊಡುವ ದಿನ.ಅವತ್ತು ಮಾತ್ರ ಗೌರಿಹುಡುಗಿಯರ ಜೊತೆ ಊರಿನ ಇತರೆ ಮುತ್ತೈದೆಯರೂ ಬಂದು ಗೌರಿ ಮೂರ್ತಿಗೆ ಹೊಸ ಸೀರೆಯುಡಿಸಿ ಉಡಿ ತುಂಬಿ ಅಕ್ಷತೆ ಹಾಕಿ ಪದಗಳನ್ನು ಹಾಡಿ ಆಕೆಯ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ.

"ಮಾಮರದ ತಂಪಿಗೆ ಕೂತಿರುವ ಗಿಳಿಗಳೇ
ಚದುರಂಗಿ ಮಾತ ನಿಲ್ಲಿಸೀ
ಚದುರಂಗಿನೇ ಮಾತ ನಿಲ್ಲಿಸಿ ಗಿಳಿಗಳೇ
ಬನ್ನಿರವ್ವ ಗೌರಿಯ ಕಳಿಸಾಕೆ ||ಪ||

ಊರ ಮುಂದೀನ ತೋಟ ತೆಂಗಿನಡಕೆಯ ತೋಟ
ನಡುವಿರುವ ದೊಡ್ಡಮಾವಿನಾ
ನಡುವಿರುವ ಈ ದೊಡ್ಡ ಮಾವಿನ ಮರದ ತಂಪ
ನೆರಳೇ ಬಾ ಗೌರೀಯ ಕಳಿಸಾಕೆ ||೧||

ನೀರಾಗೆ ಹುಟ್ಟೊದೆ ನೀರಾಗೆ ಬೆಳೆಯೊದೆ
ನೆಲದಾಗೆ ಗುಟುವಾ ಕೊರೆಯೋದೇ
ನೆಲದಾಗೆನೇ ಗುಟುವ ಕೊರೆಯೋ ನಾಗರಬಳ್ಳಿ
ನೀನೂ ಬಾ ಗೌರೀಯ ಕಳಿಸಾಕೆ ||೨|| 

ಚಪ್ಪರದ ಮಲ್ಲಿಗೆ ಕೆಸರೋಳು ಕಮಲದ ಹೂವೆ
ಮರದಾಗರಳುವಾ ಸಂಪಿಗೇ
ಮರದಾಗೆ ಅರಳುವಾ ಸಂಪಿಗೆ ಒಳಗಿರುವ
ಪರಿಮಳ ಬಾ ಗೌರಿಯ ಕಳಿಸಾಕೆ ||೩||

ಬಾಯ್ತುಂಬಿ ಹರಸುವೆ ನನ್ನ ಗೆಳತೀಯರ
ತಾಯ್ತಂದೆ ಅಣ್ಣತಮ್ಮಾರ
ತಾಯಿ ತಂದೇಯರ ಅಣ್ಣ ತಮ್ಮಂದೀರ
ನೀವು ಬನ್ನಿ ಗೌರಿ ಕಳಿಸಾಕೆ ||೪||

- ಎಂತಹ ಭಾವ ಪೂರ್ವಕ ವಿದಾಯ ನೋಡಿ ಇದು.!
ಈ ದಿನ ಮಾತ್ರ ಗೌರಿಯ ಮೂರ್ತಿಗೆ ಸಕ್ಕರೆಯ ಬೊಂಬೆಗಳನ್ನು ಆರತಿ ತಟ್ಟೆಯಲ್ಲಿಟ್ಟು ಸಕ್ಕರೆಯ ಆರತಿ ಎಂಬ ವಿಶಿಷ್ಟ ಆರತಿ ಬೆಳಗಲಾಗುತ್ತದೆ.

ಒಂದು ಸೇರಕ್ಕಿ ತಾರಲೇ ಗೌರವ್ವಾ
ಒಂದೆ ಮಂಡಲ ಬರೀಲೇ
ಆರದಕ್ಕಿ ನೀಲಿಬಣ್ಣದೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಎರಡು ಸೇರಕ್ಕಿ ತಾರಲೇ ಗೌರವ್ವ
ಎರಡೆ ಮಂಡಲ ಬರೀಲೇ
ಕಾರೆಳ್ಳು ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ||

ಮೂರು ಸೇರಕ್ಕಿ ತಾರಲೇ ಗೌರವ್ವ
ಮೂರು ಮಂಡಲ ಬರೀಲೇ
ಕಣಗೀಲೆ ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ನಾಕು ಸೇರಕ್ಕಿ ತಾರಲೇ ಗೌರವ್ವ
ನಾಕು ಮಂಡಲ ಬರೀಲೇ
ಹಳದಿ ಚಂಡೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಐದು ಸೇರಕ್ಕಿ ತಾರಲೇ ಗೌರವ್ವ
ಐದು ಮಂಡಲ ಬರೀಲೇ
ಮಲ್ಲೀಗೆ ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಗೌರವ್ವ ಹಣ್ಣಿಮೆ ಎಡೆ ಕೊಡಲೇ 

ಗೌರಿಯನ್ನು ಗಂಡನ ಮನೆಗೆ ಕಳುಹಿಸಿದ ನಂತರದ ಹುಣ್ಣಿಮೆಯ ದಿನದಂದು ಎಲ್ಲರ ಮನೆಗಳಲ್ಲೂ ಎಳ್ಳು ಹಚ್ಚಿದ ಸಜ್ಜೆಯ ರೊಟ್ಟಿ ಹಾಗೂ ಮತ್ತಿತರ ತಿಂಡಿಗಳನ್ನು ಮಾಡಿ "ಕೊಂತಿ ಬಸಪ್ಪ" ಎಂಬ ವಿಶಿಷ್ಟ ಆಚರಣೆಯನ್ನು ಮಾಡಲಾಗುತ್ತದೆ.
ಮನೆಯಂಗಳವನ್ನು ಸಾರಿಸಿ,ಸುಣ್ಣದಿಂದ ಚಂದ್ರನ ಚಿತ್ರವನ್ನು ಬರೆದು,ಅದಕ್ಕೆ ಏಣಿಯ ಚಿತ್ರವನ್ನೂ ಬರೆಯಲಾಗುತ್ತದೆ.ಆ ಚಿತ್ರವನ್ನು ಪೂಜಿಸಿ,ಎಲ್ಲರೂ ಮನೆಯ ಮಾಳಿಗೆಗಳನ್ನು ಹತ್ತಿ,ಅಲ್ಲಿಯೇ ಒಟ್ಟಾಗಿ ಊಟ ಮಾಡುತ್ತಾರೆ.
ಅಂದಿಗೆ ಗೌರಿ ಹಬ್ಬ ಕೊನೆಗೊಳ್ಳುತ್ತದೆ.

ಈ ಗೌರಿ ಹಳ್ಳಿಯ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ,ಸಂಸ್ಕೃತಿಯೊಂದರ ರಾಯಭಾರಿಯಾಗಿ ಸಾವಿರ ಸಾವಿರ ಬದುಕುಗಳ ಅಂತರ್ಧ್ವನಿಯಾಗಿ ನಮಗೆ ಗೋಚರಿಸುತ್ತಾಳೆ.
ಆಧುನಿಕ ಕಾಲದ ಥಳುಕುಬಳುಕಿನ ಕೃತಕತೆಯ ನಡುವೆಯೂ ಒಂದು "ಅಸ್ಮಿತೆ" ಯಂತೆ ತೋರುತ್ತಾಳೆ.
ಕೈಲಾಸದ ಗಂಡನ ಮನೆಗೆ ಹೋದ ಗೌರಿ ಮತ್ತೆ ತನ್ನ ಭೂಮಿಯ ಮೇಲಿನ ತವರು ಮನೆಗೆ ಮುಂದಿನ ವರ್ಷ ತಪ್ಪದೆ ಬರುತ್ತಾಳೆ...ಕೊನೇ ಪಕ್ಷ ತನ್ನ ಹಳ್ಳಿಯ ಗೆಣೆಕಾರ್ತಿಯರನ್ನು ಮಾತನಾಡಿಸಲಾದರೂ!!
ಆಡಿ ನಲಿಯುತ್ತಿರುವ ಗೌರಿ ಮಕ್ಕಳು

ಗೌರಿ ಮಣ್ಣಿನ ಗುಡ್ಡೆಯ ಮುಂದೆ ಗೌರಿಯರು!

ಸರ್ವಾಲಂಕಾರ ಭೂಷಿತೆ ಗೌರಿ..


Monday, 4 September 2017

...ನಿಜಕ್ಕೂ ಉರಿಯುತ್ತಿರುವುದು ಮಣ್ಣು!

ದೇಶದ ಉಪರಾಷ್ಟ್ರಪತಿಯೊಬ್ಬರು ತಮ್ಮ ಅಭದ್ರತೆಯ ಬಗ್ಗೆ ಮಾತನಾಡಿದ್ದಾರೆ..ಆ ಮೂಲಕ ದೇಶದ ಅಸಹಷ್ಣತೆಯ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ..ಹಾಗೆ ನೋಡಿದರೆ,ದೇಶದಲ್ಲಿ ಇದ್ದಿರಬಹುದಾದ intoleranceನ್ನು ಮೊದಲು ಗುರುತಿಸಬೇಕಿದ್ದುದು ಮಾಧ್ಯಮಗಳಾಗಬೇಕಿತ್ತು,ಆದರೆ ಚಲನಶೀಲ(in motion?)ಸಾಹಿತ್ಯವಲಯ ಅದನ್ನು ಗುರುತಿಸಿತು,ನಂತರ ಕೆಲ stationary(ಕುಂತಲ್ಲೆ ಗಿರಗಿಟ್ಲೆ ಹೊಡೆಯುವ)ಸಾಹಿತಿಗಳು ಅವರನ್ನು ಅನುಸರಿಸಿದರು.
...ಸ್ವೀಕರಿಸುವಾಗ ಪಡೆದ ಪ್ರಚಾರವನ್ನು ಸಕಲೆಂಟು ಮಾಧ್ಯಮಗಳ ಕವರಿಂಗ್ ಅಡಿ ಪ್ರಶಸ್ತಿ ಹಿಂತಿರುಗಿಸುವಾಗಲೂ ಪಡೆದರು.
ಇವರೆಲ್ಲರೂ ಅಕಾಡೆಮಿಕ್ ವಲಯ,ಪರಿಷತ್ತು,ಮಾಧ್ಯಮಗಳಿಂದ ಬಂದವರಾಗಿದ್ದು ಸಹಜವಾಗಿಯೇ ನಗರ ಪ್ರದೇಶಗಳಲ್ಲಿ ವಾಸಿಸುವವರಾದ್ದರಿಂದ,ಅವರು ನಗರ ಪ್ರದೇಶಗಳಲ್ಲಿ ಇರುವಂಥ intolerance ನ್ನು ಮಾತ್ರವೇ ಗುರುತಿಸಿದ್ದರು.
ದೇಶದ ಹಳ್ಳಿಗಳಲ್ಲಿ ಇರುವ intoleleranceಬಗ್ಗೆ ಯಾವ ಮಾಧ್ಯಮಗಳೂ ಆಸಕ್ತಿ ತೋರಿಸಲಿಲ್ಲ.
ವಾಸ್ತವವಾಗಿ ನಿಜವಾದ intolerance ಇರುವುದು ಹಳ್ಳಿಗಳಲ್ಲಿ!ಭೂಮಿಯನ್ನು ನಂಬಿ ಬದುಕುತ್ತಿರುವವರ ಬದುಕಿನಲ್ಲಿ!ಪ್ರತಿದಿನವೂ ಕ್ಷಣವೂ ಅಸಹನೆ,ಅಸಹಿಷ್ಣತೆಗಳು ತಾಂಡವಿಸುತ್ತಿವೆ!ಹಳ್ಳಿಗಳಲ್ಲಿನ ಜನ ಭಯದ ಮಧ್ಯೆ ಬದುಕುತ್ತಿದ್ದಾರೆ!
ಅದಕ್ಕೆ ಪ್ರಕೃತಿ ಕಾರಣವೋ,ಪಕ್ಷಗಳು ಕಾರಣವೋ,ಪ್ರಧಾನಿ ಕಾರಣವೋ ಗೊತ್ತಿಲ್ಲ.
ಜನಗಳಲ್ಲಿ ಮೊದಲಿದ್ದ ಸಾಮರಸ್ಯ ಈಗುಳಿದಿಲ್ಲ.ಯಾವ ಹಬ್ಬಗಳೂ ವಿವಾದ,ಹೊಡೆದಾಟಗಳಿಲ್ಲದೆ ನಡೆಯುತ್ತಿಲ್ಲ.ಯಾವ ಯೋಜನೆಗಳೂ ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿಲ್ಲ.
ಸಾರಾಯಿ ಬಂದ್ ಆದಾಗಿನಿಂದ ಹಳ್ಳಿಗಳ ಎಲ್ಲಾ ಸಣ್ಣಪುಟ್ಟ ಕಿರಾಣಿ,ಗೂಡಂಗಡಿಗಳಲ್ಲೂ ಲಿಕ್ಕರ್  ಸಿಗುತ್ತಿರುವುದರಿಂದ ಹಳ್ಳಿಗಳಲ್ಲಿನ ಹುಡಗರೆಲ್ಲಾ ಹಗಲುಗುಡುಕರಾಗುತ್ತಿರುವುದಕ್ಕೆ ಯಾವ ಮುಖ್ಯಮಂತ್ತ್ರಿ ಕಾರಣವೋ ಗೊತ್ತಿಲ್ಲ.
ಪ್ರತಿಭಟಿಸಲು ಸಾಹಿತಿಗಳಿಗೇನೋ ಸರ್ಕಾರ ಕೊಟ್ಟ ಪ್ರಶಸ್ತಿಯ ತಗಡಿನ ಫಲಕಗಳೋ  ಪದಕಗಳೋ ಇದ್ದವು....ಹಳ್ಳಿಗಳಲ್ಲಿನ ರೈತರಲ್ಲಿ ಜೀವವೊಂದು ಬಿಟ್ಟು ಬೇರೆ ಏನು ತಾನೇ ಉಳಿದಿತ್ತು?....ಅದನ್ನೇ ರೈತ ಸರ್ಕಾರಕ್ಕೆ ಅತ್ಯಂತ ವಿನಯದಿಂದಲೇ ಅರ್ಪಿಸಿಕೊಳ್ಳುತ್ತಿದ್ದಾನೆ.
ಕೆಲವರು ಅದನ್ನೂ ಕೂಡಾ ವ್ಯಂಗ್ಯವಾಗಿಯೇ ನೋಡುತ್ತಿದ್ದಾರೆ....
ಅದಿರಲಿ,ರೈತರಿಗೆ ದೇಶದಲ್ಲಿನ ,ರಾಜ್ಯದಲ್ಲಿನ,ಅವರ ಊರು,ಅವರ ಬದುಕುಗಳಲ್ಲಿನ intolerance ವಿರುದ್ಧ ಪ್ರತಿಭಟಿಸಲು ಆತ್ಮಹತ್ಯೆಗಿಂತಲೂ ಬೇರೆ ರೀತಿಯ ಗೌರವಯುತವಾದದಾರಿಗಳು ಯಾವೂ ಇಲ್ಲವೇ?ಅವರ ಆತ್ಮಹತ್ಯೆಗಳೂ intoleranceವಿರುದ್ಧದ ಪ್ರತಿಭಟನೆ ಎಂದು ಸರ್ಕಾರಗಳು,ಮಾಧ್ಯಮಗಳಿಗೆ ಅನಿಸುವುದು ಯಾವಾಗ?

x

Saturday, 2 September 2017

"ಆಹ್ವಾನ"




ಚಿತ್ತಭಿತ್ತಿಯ ತುಂಬ
ನಿನ್ನದೇ ಚಿತ್ತಾರ
ಕೆತ್ತಿರುವೆ ಹುಡುಗೀ...
ಉಬ್ಬು ತಗ್ಗುಗಳವು
ಅಳತೆ ಮೀರಿ ಮೂಡಿಹವು
ಸರಿಪಡಿಸು ಬಾರೇ...
ನೀ ಕೇಳಿದ್ದೆ ಕೊಡುವೆ!

ಎದೆಯ ಬಾಂದಳವ
ಗುಡಿಸಿ ಸಾರಿಸಿಕೊಂಡು
ಹೂಹರಡಿ ಕಂಪಡರಿ
ಬಾಗಿಲಲಿ ಕಾದಿರುವೆ
ಒಳಗೆ ಬಾ ಹುಡುಗಾ...
ಅಂಗಳದ ರಂಗೋಲಿಯ ತುಳಿಯದೆ
ನೀ ಕೇಳಿದ್ದನ್ನೇ ಕೊಡುವೆ!

ಜೋಕುಮಾರನೆಂಬ ಫಲವಂತಿಕೆಯ ಸಂಕೇತ!

ಗ್ರಾಮಭಾರತದಲ್ಲಿ ದೇಸೀ ಹಬ್ಬಗಳು ಈ ಆಧುನಿಕ ಯುಗದಲ್ಲೂ ಪಳೆಯುಳಿಕೆಯ ರೂಪದಲ್ಲಿಯಾದರೂ ಇನ್ನೂ ಆಚರಿಸಲ್ಪಡುತ್ತಿರುವುದು ಅವುಗಳ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.
ಜೋಕುಮಾರನ ಹಬ್ಬ ಅಂಥದೊಂದು ಅಪ್ಪಟ ದೇಸೀಯ,ಜನಪದ ಸಮೃದ್ಧ ಆಚರಣೆ! ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಹುಮುಖ್ಯ ಹಳ್ಳಿ ಹಬ್ಬಗಳಲ್ಲೊಂದು!

ಜೋಕುಮಾರನನ್ನು ಇತ್ತೀಚೆಗೆ ಕೆಲವರು ವೇದ-ಪುರಾಣಗಳಿಗೆಲ್ಲ ಲಿಂಕ್ ಮಾಡಿ,ಅವನನ್ನು ಶಿವನ ಮಗನೆಂದೂ,ಮನ್ಮಥನ ಅವತಾರವೆಂದೂ ಹೇಳುತ್ತಿರುವರಾದರೂ ಅದರ ಬಗ್ಗೆ ಯಾವುದೇ ಉಲ್ಲೇಖಗಳು ಯಾವ ಪುರಾಣಗಳಲ್ಲೂ ಇಲ್ಲ...ಹಾಗಾಗಿ ಜೋಕುಮಾರಸ್ವಾಮಿಯು ಗಣೇಶ,ಶಿವ,ವಿಷ್ಣುವಿನಂಥ ಶಿಷ್ಟ ದೇವತೆಯಲ್ಲ..ವಿಶಿಷ್ಟ ದೈವ! ದುಡಿವ ವರ್ಗದ ಫಲದೈವ!

ಜೋಕುಮಾರಸ್ವಾಮಿಯ ವಿಧ್ಯುಕ್ತ ಆಚರಣೆಯು ಪ್ರತಿ ವರ್ಷ ಗಣೇಶ ವಿಸರ್ಜನೆಯ ನಂತರ ಅಂದರೆ ಭಾದ್ರಪದ ಅಷ್ಟಮಿಯ ದಿನ ಪ್ರಾರಂಭವಾಗುತ್ತದೆ.ಜೋಕುಮಾರ ಹುಟ್ಟುವುದು "ಬಾರೀಕರು" ಎಂಬ ಪಂಗಡದ ಮನೆಯಲ್ಲಿ.ಆ ಜಾತಿಯ ಹೆಂಗಳೆಯರೇ ಅವನನ್ನು ಹಳ್ಳಿಹಳ್ಳಿಗೂ ಹೊತ್ತು ತಿರುಗಿ "ಊರು ಆಡುವ" ಕಾರ್ಯ ಮಾಡುತ್ತಾರೆ.ನಂತರ ಕೆರೆಯೋ ಹಳ್ಳದ ಬದಿಯೋ "ಸಾಯಿಸುವ" ಕಾರ್ಯ ಮಾಡುತ್ತಾರೆ.ಅಂತ್ಯ ಸಂಸ್ಕಾರದ ಜವಾಬ್ದಾರಿ ಮಡಿವಾಳ ಜನಾಂಗದವರದ್ದು..! ಒಟ್ಟು ಜೋಕುಮಾರನ ಆಯಸ್ಸು ಕೇವಲ ಏಳು ದಿನಗಳಷ್ಟೆ!

ಅನಂತನ ಹುಣ್ಣಿಮೆ ಅಥವಾ ಜೋಕುಮಾರನ ಹುಣ್ಣಿಮೆಯ ದಿನ ಜೋಕುಮಾರನ ತಿಥಿಯ ರೂಪದಲ್ಲಿ ಗ್ರಾಮದ ಎಲ್ಲರೂ ಹಬ್ಬ ಆಚರಿಸುತ್ತಾರೆ.ತುಂಬು ಫಸಲಿನ ಹೊಲಗಳಿಗೆ "ಹಸಿರಂಬಲಿ" ಮತ್ತು "ಹಾಲಂಬಲಿ" ಎಂಬ ಚೆರಗವನ್ನು ಚೆಲ್ಲುತ್ತಾರೆ.ಫಸಲನ್ನು ಪೂಜಿಸಿ ಎಡೆಯಿಟ್ಟು ನಮಿಸುತ್ತಾರೆ.

ಈ ಹಬ್ಬಕ್ಕಾಗಿಯೇ ಮಾಡುವ "ಮಿದಿಕಿ" ಎಂಬ ವಿಶಿಷ್ಟ ತಿನಿಸಿದೆ.ಬಹುಶಃ ಅದು "ಮೋದಕ" ದ ಇನ್ನೊಂದು ರೂಪವಿರಬಹುದು.ಸಜ್ಜೆ,ಗೋಧಿ,ಬೆಲ್ಲಗಳಿಂದ ತಯಾರಿಸುವ ಈ ಮಿದಿಕೆಯನ್ನು ಜೋಕುಮಾರನ ಹಬ್ಬ ಹೊರತುಪಡಿಸಿ ಬೇರಾವ ಸಂದರ್ಭದಲ್ಲೂ ನಮ್ಮ ಹಳ್ಳಿಗರು ಮಾಡುವುದಿಲ್ಲ...ಆ ಮಟ್ಟಿಗಿನ ಅನನ್ಯತೆ ಅವನದು!
ಜೋಕುಮಾರ ಮೂರ್ತಿಯ ರೂಪು ಬಹುತೇಕ ಪುರುಷ ಜನನಾಂಗವನ್ನು ಹೋಲುತ್ತದೆ...ಹಾಗೆಯೇ ಜೋಕುಮಾರನನ್ನು ಹೊತ್ತು ತರುವ ಹೆಂಗಸರು ರೈತ ಮಹಿಳೆಯರಿಂದ ಕಾಳು-ಕಡಿ ಹಾಗೂ ಜೋಕುಮಾರನಿಗೆ ಪ್ರಿಯವಾದ ಎಮ್ಮೆಯ ಮೀಸಲು ಬೆಣ್ಣೆ ಪಡೆದು,ಅದಕ್ಕೆ ಪ್ರತಿಯಾಗಿ ಜೋಕುಮಾರನ ಜನನೇಂದ್ರಿಯ ಕೂದಲನ್ನೇ ಪ್ರಸಾದ ರೂಪದಲ್ಲಿ ಕೊಡುತ್ತಾರೆ.ರೈತರೂ ಆ ಕೂದಲುಗಳನ್ನು ಭಕ್ತಿಯಿಂದಲೇ ಸ್ವೀಕರಿಸಿ,ತಮ್ಮ ಹೊಲಗಳಿಗೆ ಹಾಕುತ್ತಾರೆ..!

ಹೌದು;ಜೋಕುಮಾರ,ಫಲವಂತಿಕೆಯ ಸಂಕೇತವಾಗಿಯೂ ಆರಾಧಿಸಲ್ಪಡುತ್ತಾನೆ.ರೈತರ ಹೊಲದ ಬೆಳೆಗಳೆಲ್ಲಾ ಕಾಳು ಕಟ್ಟುವ ಸಮಯ ಇದಾಗಿರುವುದರಿಂದ ನಮ್ಮ ಬೆಳೆಗಳು ಜೊಳ್ಳಾಗದಿರಲಿ ಎಂಬುದರ ಅರ್ಥಪೂರ್ಣ ಪ್ರತಿಮಾರಾಧನೆ ಇದು...ಹಾಗೆಯೇ ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಹೆಂಗಳೆಯರಿಗೂ ಈ ಹದಿನೈದು ದಿನಗಳ "ಜೋಕುಮಾರನ ಅಳಲು" ಎಂಬ ಕಟ್ಟಳೆ ಹಾಕಲಾಗುತ್ತದೆ,ಅದರ ಪ್ರಕಾರ ಈ ಅವಧಿಯಲ್ಲಿ ಅವರು ತವರುಮನೆಯಲ್ಲಿ ಇರುವುದು ನಿಷಿದ್ಧವಾಗುತ್ತದೆ..ಗಂಡನ ಜೊತೆಯೆ ಇರಬೇಕಾಗಿರುತ್ತದೆ!!
ಜೋಕುಮಾರನ ಬಗೆಗಿನ ಜನಪದ ಹಾಡುಗಳಂತೂ ಧಂಡಿಯಾಗಿವೆ.ಹಳ್ಳಿಗರ ಕಾಮದೇವನೆಂಬಂತೆ ಅವನನ್ನು ಜನಪದದಲ್ಲಿ ವಿಡಂಬಿಸಲಾಗಿದೆ.

ಬಾಗಾನ ಮಗ ಬಂದು
ಬಾಗೀಲಾಗೇ ಕುಂತಾನವ್ವಾ...
ಬೇಗಾನೇ ಬೆಣ್ಣೆ ಕೊಡಿರವ್ವಾ..
ಬೇಗಾನೆ ಬೆಣ್ಣೆ ಕೊಡಿರವ್ವ ನಮ್ಮ
ಕೊಮಾರ
ಸಾಗಾನೆ ಮರದಾ ಸವಿಮುದ್ದು...
ಅಡ್ಡಡ್ಡ ಮಳೆ ಬಂದು ಒಡ್ಡುಗೋಳೊ
ದಿಡ್ಡಿಗೋದೋ
ನಮ್ಮ ಗೊಡ್ಡು ದನವೆಲ್ಲಾ ಹೈನಾದೋ
......ಹೀಗೇ ಅನೇಕ ಜನಪದ ಹಾಡುಗಳಲ್ಲಿ ಜೋಕುಮಾರನನ್ನು ಹಾಸ್ಯರೂಪದಲ್ಲಿಯೆ ಚಿತ್ರಿಸಲಾಗಿದೆ...!

ಕನ್ನಡದ ಜಾನಪದದ ಬೇರುಗಳು ಇಂದಿಗೂ ಚಿಗುರು ಮುಚ್ಚಿ ಕಂಗೊಳಿಸಿಕೊಂಡಿರಲಿಕ್ಕೆ ಇಂಥ ದೇಸೀಯ ದೈವಗಳ ಕೊಡುಗೆ ಗಮನಾರ್ಹವಾದುದು.
ಆಧುನಿಕತೆ ಎಂಬ ಕೃತಕ ಲೋಕದಲ್ಲಿ ಬದುಕುತ್ತಿರುವ ನಮಗೆ ಪ್ರಕೃತಿಯಾರಾಧನೆಯೇ ಪರಮೇಶ್ವರನ ಆರಾಧನೆ ಎಂಬ ಪರಿಪೂರ್ಣ ಸಂದೇಶ ಕೊಡಲು ಜೋಕುಮಾರಸ್ವಾಮಿ ಪ್ರತೀ ವರ್ಷವೂ ನಮ್ಮ ಹಳ್ಳಿಗಳೆಡೆ ಬರುತ್ತಲಿದ್ದಾನೆ..
ಪೂಜೆಗೊಳ್ಳುತ್ತಿರುವ ಜೋಕುಮಾರ ಸ್ವಾಮಿ.

ಕಾಣಿಕೆ ನೀಡಿಸಿಕೊಳ್ಳುತ್ತಿರುವ ಜೋಕುಮಾರನ ಬಳಗ(ಬಾರೀಕ ಹೆಂಗಳೆಯರು)

Friday, 1 September 2017

...ಕಾದ ನೆನಪು ಕಾಡುತ್ತಲಿದೆ.

ಬಾಲ್ಯವೇ ಹಾಗೇ...ಕೊನೆಯ ತನಕ ಕಾಡುತ್ತಲೇ ಇರುತ್ತದೆ.ಅದರಲ್ಲೂ ಹಳ್ಳಿಗರ ಬಾಲ್ಯವಂತೂ ನೆನಪುಗಳ ಕುಂಭದ್ರೋಣ ಮಳೆ!
ಚಿಕ್ಕವರಿದ್ದಾಗ ಎಮ್ಮೆ-ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ ನೆನಪು ನಿಮಗೂ ಇರಬಹುದೇನೋ...ಭಾನುವಾರದ ರಜೆಯಿರಲಿ,ಶನಿವಾರವೂ ಶಾಲೆಗೇ ಪೋಷಕರು ಬಂದು ಮಕ್ಕಳನ್ನು ದನಕಾಯಲು ಕರೆದುಕೊಂಡು ಹೋಗುತ್ತಿದ್ದ ದಿನಗಳವು!
ಕೋಟೆಗಡ್ಡೆ ಅಡವಿ,ಗುಡ್ಡದ ಅಡವಿಗಳಲ್ಲಿ ಗೆಳೆಯರೊಂದಿಗೆ ಓಡಾಡಿದ್ದು ಇನ್ನೂ ಹಚ್ಚಹಸಿರಾಗಿದೆ ನನ್ನ ಸ್ಮೃತಿಪಟಲದಲ್ಲಿ!
ಮೊದಲ ಬಾರಿಗೆ 'ಬಿದ್ದ ಗುಂಡು' ಹತ್ತಿದಾಗ ಎಷ್ಟು ಸಂತೋಷವಾಗಿತ್ತೊ,ಮೊದಲ ಬಾರಿ ನರಿಗವಿಯ ಬಾಗಿಲಲ್ಲಿ ಹಣಿಕಿದಾಗ ಅಷ್ಟೇ ಭಯವೂ ಆಗಿತ್ತಾಗ!
ನಿಂಬಳಗೆರೆ ಗುಡ್ಡ ಹತ್ತಿದಾಗ ಮೌಂಟ್ ಎವೆರೆಸ್ಟ್ ಹತ್ತಿದಷ್ಟೇ ಖುಷಿಯೂ ಆಗಿತ್ತು...
ಆಗೆಲ್ಲಾ ನಮ್ಮ ಜೊತೆ ಊರಿನ ವಯಸ್ಸಾದ ಅಜ್ಜಿಯಂದಿರೂ ಬರುತ್ತಿದ್ದುದರಿಂದ ಅವರೇ ನಮ್ಮ ಮೊದಲ ಗೈಡುಗಳೂ ಆಗಿರುತ್ತಿದ್ದರು.
ದನಗಳನ್ನು ಅಡವಿಗೆ ಹೊಡೆದುಕೊಂಡು ಹೋಗುವಾಗ ಹಾದಿಬದಿಯ ಹೊಲದವರ ಜೊತೆ ನಿತ್ಯವೂ ನಡೆಯುತ್ತಿದ್ದ ಜಗಳ-ಕದನಗಳದ್ದೇ ಒಂದು ಕಥೆಯಾದರೆ,ಮನೆಗೆ ಹಿಂತಿರುಗುವಾಗ ಬೇಕೆಂತಲೇ ತಡಮಾಡಿ,ಹೊಲದವರೆಲ್ಲಾ ಹೋದ ನಂತರ ಅವರ ಹೊಲಗಳ ಮೇಲೆ ನಾವೂ ನಮ್ಮ ದನಗಳೂ ರೋಷ ತೀರಿಸಿಕೊಳ್ಳುತ್ತಿದ್ದ ಕಥೆಯೆ ಬೇರೆ!
ಮೊದಮೊದಲು ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದುದೂ ಉಂಟು,ಮುದ್ದೆಯ ಮೇಲೆ ಒಂದು ಕುಳಿ ಮಾಡಿ ಅದರಲ್ಲಿ ಬೆಣ್ಣೆಯ ಉಂಡೆಯೋ,ಬದನೇ ಚಟ್ನಿಯೋ,ಗುರೆಳ್ಳು ಪುಡಿಯೋ ಹಾಕಿ ಬಟ್ಟೆಯ ಪುಟ್ಟ ಗಂಟೊಂದನ್ನು ನಮ್ಮ ಅಕ್ಕಂದಿರೋ ಅಮ್ಮನೋ ಕಟ್ಟಿಕಳಿಸುತ್ತಿದ್ದರು.
ಆ ಗಂಟು ಟವೆಲ್ಲಿನ ಒಂದು ತುದಿಗೆ ಸೇರಿ ತಲೆ ಮೇಲಿಂದ ನೇತಾಡುವಂತೆ ಬಿಗಿದುಕೊಂಡು ಹೊರಡುತ್ತಿದ್ದೆವು.
ಬುತ್ತಿಯನ್ನು ಹೋದ ಕೂಡಲೇ ಉಂಡುಬಿಡುವ ಅವಸರ ನಮಗೆ! ಗುಡ್ಡದ ಕೆಳಗೋ,ಅಡವಿಯ ಅಲ್ಲಲ್ಲಿ ಹರಿಯುತ್ತಿದ್ದ ಪರಿಶುಭ್ರ ನೀರಿನಾಸರೆ ಸಿಕ್ಕೊಡನೆ ಊಟ ಮುಗಿಯುತ್ತಿತ್ತು.ತೀರಾ ಮಳೆ ಬರದೆ ಬಹಳ ದಿನವಾಗಿ ಹಳ್ಳ/ಸರ ಬತ್ತಿದ್ದರೆ "ಒರತೆ" ಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆವು.
ಅಡವಿಗಳಲ್ಲಿ ಆಟಕ್ಕೇನೂ ಕೊರತೆಯಿರಲಿಲ್ಲ.'ತೀಟೆ ಸೊಪ್ಪು'ಎನ್ನುವ ಉರಿಯುಂಟುಮಾಡುವ ಗಿಡವೊಂದು ಗುಡ್ಡದ ಮಟ್ಟಿಯ ಕೆಳಗೆ ಸಿಗುತ್ತಿತ್ತು..ಅದರಿಂದ ಯಾರಿಗಾದರೂ ಸೋಕಿಸಿದರೆ ನವೆ-ಉರಿಯ ಅನುಭವವಾಗಿ ದದ್ದುಗಳೇಳುತ್ತಿದ್ದವು.ನಾವು ಆ ತೀಟೆ ಸೊಪ್ಪಿನ ಗಿಡಗಳನ್ನು ಹಿಡಿದು ಒಬ್ಬರಿಗೊಬ್ಬರು ಬಡಿದಾಡುತ್ತಿದ್ದೆವು!
ಸೇಂಗಾ ಬಳ್ಳಿಯ ಹೊರೆಗಳನ್ನು ರಾಶಿ ಹಾಕಿ ಸುಟ್ಟು,ಸುತ್ತಲೂ ಮಾತನಾಡುತ್ತಾ ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜವೇ ಬೇರೆ! ಸೂರ್ಯಕಾಂತಿ ತೆನೆಗಳನ್ನು ಕಿತ್ತು ವೃತ್ತಾಕಾರವಾಗಿ ಕಾಳು ಬಿಡಿಸುತ್ತಾ ಹಲ್ಲುಗಳೆಲ್ಲಾ ಕಪ್ಪಡರುವುವರೆಗೂ ತಿನ್ನುತ್ತಿದ್ದೆವು.
ದನಗಳು ಕಾಣದೆ ಮರೆಯಾಗಿ,'ಕಳೆದು ಹೋದಾಗ' ಎಲ್ಲರೂ ಪರಸ್ಪರ ಸಹಾಯಕ್ಕೆ ಬರುತ್ತ ಹುಡುಕಲು ಹೊರಡುತ್ತಿದ್ದೆವು.ಎತ್ತರದ ಮಟ್ಟಿಗಳನ್ನು ಹತ್ತಿ ನೋಡಿ ಕಂಡು ಹಿಡಿಯುತ್ತಿದ್ದೆವು.ಇನ್ನೂ ಕಾಣದಿದ್ದರೆ ಹತ್ತಿರದ ಗುಡ್ಡ ಹತ್ತುತ್ತಿದ್ದೆವು.
ತುಂಬಾ ಹೊತ್ತು ದನ ಸಿಗದೇ ಇದ್ದಾಗ ಅಳುವ,ಅಳುವವರನ್ನು ನೋಡಿ ನಗುವ ಕಲಾಪ ಇದ್ದೇ ಇರುತ್ತಾದರೂ ದನಗಳು ಮಾತ್ರ ತಪ್ಪದೆ ಸಾಯಂಕಾಲದ ಹೊತ್ತಿಗೆ ತಮ್ಮಷ್ಟಕ್ಕೆ ತಾವೇ ಎಲ್ಲೆಲ್ಲೋ ಮೇದು ಮನೆಗೆ ಮರುಳುತ್ತಿದ್ದವು.ನಮ್ಮ ಸಿಟ್ಟಿನ ಪ್ರಹಾರ ಅವುಗಳ ಮೇಲಾಗುತ್ತಿತ್ತು ಆಗ!
ಹೊಟ್ಟೆ ಹಸಿದಾಗ ಕಾರೆಹಣ್ಣು,ಬುಕ್ಕಿಹಣ್ಣು,ಹುಲುಲಿ ಹಣ್ಣು,ಪುಟ್ಲಾಸು ಹಣ್ಣು,ಕವುಳಿ ಹಣ್ಣುಗಳು ಧಂಡಿಯಾಗಿ ಸಿಗುತ್ತಿದ್ದ ಕಾಲವದು.ಬಸಳೀಕದ ಗಡ್ಡೆಯೋ,ಈಚಲ ಗಡ್ಡೆಯೋ ಅಪರೂಪವಾಗಿ ನಮ್ಮ ಹೊಟ್ಟೆ ಸೇರುತ್ತಿದ್ದುದೂ ಉಂಟು.
ಒಮ್ಮೊಮ್ಮೆ ಎಲ್ಲರೂ ಹತ್ತತ್ತು ರೂಪಾಯಿ ಹಣ ಹಾಕಿ ಕಾಡಿನಲ್ಲೇ ಮಂಡಾಳು ಒಗ್ಗರಣೆಯನ್ನೋ ಮಿರ್ಚಿಯನ್ನೋ ಮಾಡುತ್ತಿದ್ದುದೂ ಉಂಟು.
ಮುಂಗಾರಿನ ಸಮಯದಲ್ಲಿ ದನ ಮೇಯಿಸುವುದರಲ್ಲಿದ್ದ ಮಜಕ್ಕಿಂತಲೂ 'ಹಕ್ಕಲು'ಕಾಲದಲ್ಲೇ ಹೆಚ್ಚು ಮಜವಿರುತ್ತಿತ್ತು.ಎತ್ತುಗಳಿಗೂ ಬಿಡವಿನ ಕಾಲವಾದ್ದರಿಂದ ಎತ್ತುಗಳೂ,ಅವುಗಳ ಜೊತೆ ದೊಡ್ಡವರೂ ಬರುತ್ತಿದ್ದುದರಿಂದ ದನಕಾಯುವವರ ಸಂಖ್ಯೆ ಆಗ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು.ಚಿಣ್ಣಿದಾಂಡು,ಚೀಟಿ ಆಟ,ಜೂಜು,ಇಸ್ಪೀಟಾಟಗಳೂ ರಂಗೇರುತ್ತಿದ್ದವು.ಎಷ್ಟೋ ಜನ ಈ ದನಕಾಯುವುದರಲ್ಲಿನ ಸುಖದ ಆಕರ್ಷಣೆಯಿಂದಾಗಿ ಶಾಲೆಗಳನ್ನೇ ತೊರೆದಿದ್ದರು.ಬೇರೆ ಊರಿಗೆ ಓದಲು ಹೋಗುವವರಿಗೂ ಇದೊಂದು ಅವರನ್ನು obsessionನಂತೆ ಕಾಡುತ್ತಲೇ ಇರುತ್ತಿತ್ತು!

ನಿಜ; ಆಗ ನಮ್ಮ ಬದುಕು ಸರಳವಾಗಿತ್ತು.ಹಳ್ಳಿಯ ವ್ಯವಸ್ಥೆ ಈ ಮಟ್ಟಿಗೆ ಸಂಕೀರ್ಣಗೊಂಡು ಕಲುಷಿತಗೊಂಡು ಸೂಕ್ಷ್ಮತೆಗಳಿಗಿಳಿದಿರಲಿಲ್ಲ.
ಈಗ ಬಿಡಿ...
ಆ ಕಾಡೂ ಇಲ್ಲ,ದನಗಳೂ ಇಲ್ಲ..
ಹಾಗಾಗಿ ಆ ಪ್ರಕೃತಿಯೊಡನಾಟ ಈಗಿನ ಪೀಳಿಗೆಗಳಿಗೆ ದಕ್ಕುತ್ತಿಲ್ಲ..ಮೊಬೈಲಿನ ಗೇಮುಗಳೇ ಅವರ ಚತುರ್ಲೋಕಗಳಾಗಿರುವಂಥ ಕಾಲವಿದು!!
ಆದರೆ...
ಆ ದನಗಳನ್ನು
ಕಾದವರ ನೆನಪಿನಲ್ಲಿ ಮಾತ್ರ ತರೇದ ಮರದ ಮುಳ್ಳಿನಂತೆ ಆಗಾಗ ಮೀಟುತ್ತಲೇ ಇರುತ್ತವೆ..ಆ ಕ್ಷಣಗಳು...ಸಾವಿನಂಚಿನವರೆಗೂ!

ಕವಳೆ ಹಣ್ಣಿನ ಗಿಡ.

ಪುಟ್ಲಾಸು ಕಾಯಿಯ ಮರ.

ಹುಲುಗಿಲಿ ಹಣ್ಣಿನ ಗಿಡ..ತುಂಬೆಲ್ಲಾ ಹಣ್ಣು!

ಕಾರೆಯ ಹಣ್ಣಿನ ಪೊದರು..

Saturday, 12 August 2017

ಬಿತ್ತುವುದೇನೋ ಬಿತ್ತಿದ್ದೇವೆ...ಬದುಕುತ್ತೇವಾ?



ಎಂದಿನಂತೆ ಈ ವರ್ಷವೂ ಕೂಡ್ಲಿಗಿಯ ರೈತರಿಗೆ ಮುಂಗಾರಿನ ಬಿತ್ತನೆ ಸುಗ್ಗಿ ಮುಗಿಯುತ್ತ ಬಂದಿದೆ...ಬಿತ್ತಿದ ಬೀಜ ಬೆಳೆಯುತ್ತದೆಯೋ,ಬೆಳೆದದ್ದು ಕಣಕ್ಕೆ ಬರುತ್ತದೆಯೋ,ಕಣಕ್ಕೆ ಬಂದದ್ದು ಕೈಸಿಕ್ಕುತ್ತದೆಯೋ ಎಂಬ ಭರವಸೆ ಯಾರಲ್ಲೂ ಇಲ್ಲ.ಬಹುಶಃ ಕಾರಣೀಕ ದೈವಗಳಾದ ಕೊಟ್ಟೂರಿನ ಕೊಟ್ಟೂರೇಶ್ವರನೋ,ಉಜ್ಜಿನಿಯ ಸಿದ್ದೇಶನೋ,ಶರಣೇಶನೋ ನಮ್ಮನ್ನು ಕಾಯುತ್ತಾನೆ,ಕೈ ಹಿಡಿಯುತ್ತಾನೆ ಎಂಬ ಅದಮ್ಯ ಭರವಸೆ ಅವರದು..! ಒಂದು ಮಟ್ಟಿಗೆ ಅದು ನಿಜವೂ ಕೂಡ!..ಯಾಕೆಂದರೆ ಹಿಂದೆ ಕೆಲ ವರ್ಷಗಳ ಕೆಳಗೆ ನಮ್ಮೂರ ಸುತ್ತಮುತ್ತಲಿನ ತಾಲೂಕುಗಳ ಬೆಳೆಗಳೆಲ್ಲಾ ಸಂಪೂರ್ಣ ಕೈ ಕೊಟ್ಟಿದ್ದರೂ ನಮ್ಮಲ್ಲಿ ಅಂಥಮಟ್ಟಿಗಿನ ನಷ್ಟವೇನೂ ಆಗಿರಲಿಲ್ಲ..ಇವತ್ತಿಗೂ ಕೂಡಾ!!




ಮೊನ್ನೆ ಬೆಂಗಳೂರಿನ ಮಾಧ್ಯಮವೊಂದರಲ್ಲಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿರುವ ನನ್ನ ಮಿತ್ರನನ್ನು ಭೇಟಿಯಾಗಿದ್ದೆ.ಹಾಗೇ ಅದೂ ಇದೂ ಮಾತಾಡುತ್ತಾ ಕೃಷಿಕ ಬದುಕಿನ ಗಂಭೀರವಾದ ಪ್ರಶ್ನೆಯೊಂದನ್ನು ಅವನು ಮುಂದಿಟ್ಟ....ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ. ನಟರ ಮಕ್ಕಳು ನಟರಾಗಲು ಇಚ್ಚಿಸುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ಆದರೆ ರೈತರ ಮಕ್ಕಳು ರೈತರಾಗೋದಕ್ಕೆ ಹಿಂಜರಿಯುತ್ತಿದ್ದಾರೆ. ನಾನು ರೈತನಾಗಲಾರೆ ಅಂತ ಹೇಳುತ್ತಿದ್ದಾರೆ. ರೈತರ ಸಮಸ್ಯೆಗಳು, ತಾಪತ್ರಯಗಳು, ಒಂದರ ಹಿಂದೊಂದರಂತೆ ಎದುರಾಗುವ ತೊಂದರೆಗಳು, ಕೈಗೆ ಹತ್ತದ ಬೆಳೆ, ಏರುವ ಬಡ್ಡಿ, ತೀರಿಸಲಾಗದ ಸಾಲ ಎಲ್ಲವೂ ಸೇರಿಕೊಂಡು ರೈತನನ್ನು ಅಕ್ಷರಶಃ ಕಂಗಾಲು ಮಾಡಿಬಿಟ್ಟಿದೆ. ರೈತನಾಗಿ ಹುಟ್ಟುವುದು ಮತ್ತು ರೈತನಾಗಿಯೇ ಬದುಕುವುದು ಒಂದು ದೌರ್ಭಾಗ್ಯ ಎಂದು ರೈತರೇ ಅಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ತಂದಿಟ್ಟಿದೆ.

ಸ್ಮಾರ್ಟ್‌ಸಿಟಿಗಳನ್ನು ಕಟ್ಟಲು ಹೊರಡುವವರು, ವಿದೇಶಗಳ ಮಾದರಿಯನ್ನು ತಂದು ಮುಂದಿಡುವವರು, ಅನ್ನಭಾಗ್ಯ ಮುಂತಾದ ಯೋಜನೆಗಳನ್ನು ಘೋಷಿಸುವವರು ಇಲ್ಲಿ ಬೇಕಾದಷ್ಟು ಮಂದಿ ಸಿಗುತ್ತಾರೆ. ನಮ್ಮ ಬಹುತೇಕ ರಾಜಕೀಯ ನಾಯಕರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನುವುದನ್ನು ಅವರು ಆರಂಭಿಸುವ ಯೋಜನೆಗಳೇ ಹೇಳುತ್ತವೆ.

ಕತ್ರಿಗುಪ್ಪೆಯಲ್ಲಿ ನಮ್ಮೂರಿನ ಇಪ್ಪತ್ತು ವರುಷದ ತರುಣ ತನ್ನ ಬೆನ್ನಿಗೆ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿರುವ ಹಲಗೆಯನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ. ಅದೇ ಸಂಸ್ಥೆಯವರು ಕೊಟ್ಟ ಟೀಶರ್ಟು, ಪ್ಯಾಂಟು, ಸಾಕಷ್ಟು ದುಬಾರಿಯಾದ ಶೂ ಹಾಕಿಕೊಂಡಿದ್ದ ಆ ಹುಡುಗನನ್ನು ಮಾತಾಡಿಸಿದರೆ, ಅವನು ನಮ್ಮೂರ ರೈತನ ಮಗ ಅನ್ನುವುದು ಗೊತ್ತಾಯಿತು. ಆರೇಳು ಎಕರೆ ಜಮೀನಿದ್ದ ಕಾಲದಲ್ಲಿ ನೀರಾವರಿ ಮಾಡಿ ವೀಳ್ಯದೆಲೆ ತೋಟ,ಜೋಳ ಅವನ ತಾತಂದಿರ ಕಾಲದಲ್ಲಿ ಬೆಳೆಯುತ್ತಿದ್ದರಂತೆ. ಆಮೇಲೆ ರಾಗಿ, ಶೇಂಗಾ,ಹುರುಳಿ ಬೆಳೆಯಲು ಶುರುಮಾಡಿದರಂತೆ. ಇವನ ಕಾಲಕ್ಕೆ ಆಸ್ತಿ ಪಾಲಾಗಿ ಒಂದೆಕರೆ ಹದಿನೆಂಟು ಗುಂಟೆ ಇವನ ಪಾಲಿಗೆ ಬಂದಿತ್ತಂತೆ.

ಅಷ್ಟು ನೆಲದಲ್ಲಿ ಏನಾದರೂ ಬೆಳೆಯೋದಕ್ಕಾಗಲ್ಲವಾ? ತರಕಾರಿ ಬೆಳೆಯಬಹುದಲ್ಲ ಅಂತ ಕೇಳಿದರೆ ಅವನು ಅದು ಸವುಳು ಮಣ್ಣಿರುವ ನೆಲ. ಮಳೆ ಬಿದ್ದರೆ ಮಾತ್ರ ನೀರು. ಬೋರ್ ಕೊರೆಸಿದರೆ ನೀರು ಸಿಗುತ್ತೆ ಅಂತ ಖಾತ್ರಿಯಿಲ್ಲ ಅಂತೆಲ್ಲ ಕತೆ ಹೇಳತೊಡಗಿದ. ಒಟ್ಟಿನಲ್ಲಿ ಆತನಿಗೆ ಊರಲ್ಲಿರಲು ಇಷ್ಟವಿಲ್ಲ, ನಗರಕ್ಕೆ ಬಂದು ಸೇರಬೇಕು ಅನ್ನುವುದು ಅವನ ಮಾತಿನಲ್ಲೇ ಮತ್ತೆ ಮತ್ತೆ ವ್ಯಕ್ತವಾಗುತ್ತಿತ್ತು. ಹೀಗೊಂದು ಬೋರ್ಡು ಬೆನ್ನಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಅಲೆಯೋದು ಆತ್ಮಗೌರವದ ಕೆಲಸ ಹೌದಾ ಅಲ್ಲವಾ ಅನ್ನುವ ಬಗ್ಗೆ ಗೊಂದಲಗಳಿದ್ದವು. ಬೆಂಗಳೂರಲ್ಲಿ ಕೆಲಸ ಅಂತ ಹೇಳಿಕೊಳ್ಳುವುದು ಕುಂಬಳಗುಂಟೆಯ ರೈತ ಎಂದು ಹೇಳಿಕೊಳ್ಳುವುದಕ್ಕಿಂತ ಗೌರವದ್ದು ಎಂದು ಅವನ ಪರಿಸರ ಅವನಿಗೆ ಕಲಿಸಿಕೊಟ್ಟಿತ್ತೇನೋ?

ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ದೇಶದಲ್ಲಿ ಸಹಕಾರಿ ಚಳವಳಿಗಳು ಸತ್ತೇ ಹೋದಂತಿವೆ. ಒಂದು ಕಾಲದಲ್ಲಿ ರೈತರ ಸಹಕಾರಿ ಸಂಘಗಳು, ಸಂಸ್ಥೆಗಳು ರೈತನ ಬೆನ್ನಿಗೆ ನಿಲ್ಲುತ್ತಿದ್ದವು. ಬೆಳೆಗಾರರ ಸಹಕಾರಿ ಸಂಘಗಳು ರೈತನ ಹಿತರಕ್ಷಣೆ ಮಾಡುತ್ತಿದ್ದವು. ಚಿತ್ರದುರ್ಗ,ಚಳ್ಳಕೆರೆಯ ದಲ್ಲಾಳಿ ಅಂಗಡಿಗಳು ಕೂಡ ರೈತನಿಗೆ ಆಪತ್ಕಾಲಕ್ಕೆ ನೆರವಾಗುತ್ತಿದ್ದವು. ಇವತ್ತು ಅಂಥ ಯಾವ ವ್ಯವಸ್ಥೆಯೂ ರೈತನ ಹಿತ ಕಾಯುತ್ತಿಲ್ಲ. ಅದಕ್ಕೆ ಕಾರಣ ರೈತನೂ ಅಲ್ಲ, ಸಹಕಾರಿ ಸಂಘಗಳೂ ಅಲ್ಲ.




ಬಹುಶಃ...

ಮಹಾನಗರದಲ್ಲಿ ತಲೆಯೆತ್ತಿರುವ ಶಾಪಿಂಗ್‌ ಮಾಲ್‌ಗ‌ಳು..! ಅವುಗಳ ಕಾರ್ಯವಿಧಾನ, ಅವುಗಳ ನಡುವಿನ ಪೈಪೋಟಿ. ರೈತನಿಗೆ ತನ್ನ ಉತ್ಪನ್ನವನ್ನು ಎಲ್ಲಿಗೆ ತಲುಪಿಸಬೇಕು ಅನ್ನುವುದೇ ಗೊತ್ತಾಗದ ಸ್ಥಿತಿ!

ಕರ್ನಾಟಕ ಹಾಲು ಮಹಾಮಂಡಲದ ಕಾರ್ಯವೈಖರಿಯನ್ನೇ ನೋಡಿ. ಅದು ಎಷ್ಟು ಅಚ್ಚುಕಟ್ಟಾಗಿ, ಸಮಾನತೆ ಮತ್ತು ಸಹಕಾರ ತತ್ವವನ್ನು ಪಡಿಮೂಡಿಸಿಕೊಂಡು ನಡೆಯುತ್ತಿದೆ. ಅಲ್ಲೇನಾದ್ರೂ ತೊಂದರೆಗಳಾದರೆ, ಅದು ಅಧಿಕಾರ ಹಿಡಿದವರ ದುರಾಸೆಯಿಂದಲೋ ಅಧಿಕಾರ ಲಾಲಸೆಯಿಂದಲೋ ಆಗಬೇಕೇ ಹೊರತು, ರೈತರಿಂದಲೋ ವ್ಯವಸ್ಥೆಯ ಲೋಪದಿಂದಲೋ ಅಲ್ಲ. ಅಂಥದ್ದೇ ಒಂದು ವ್ಯವಸ್ಥೆಯನ್ನು ಅಕ್ಕಿ, ಬೇಳೆ, ತರಕಾರಿ, ಟೊಮ್ಯಾಟೋ- ಇವುಗಳಿಗೂ ಕಲ್ಪಿಸುವುದು ಕಷ್ಟವೇ? ಒಂದು ದಿನ ಇಟ್ಟರೆ ಹಾಳಾಗಿ ಹೋಗುವಂಥ ಹಾಲನ್ನೇ ಶೇಖರಿಸಿ, ಸರಬರಾಜು ಮಾಡುವುದು ಸಾಧ್ಯವಾಗಿರುವಾಗ ಅಂಥದ್ದೇ ಒಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಬೇರೆ ಬೆಳೆಗಾರರಿಗೂ ಯಾಕೆ ಕಲ್ಪಿಸಿಕೊಡಬಾರದು?....

ಒಂದು ಶೇಂಗಾ ಬೆಳೆಗಾರರ ಮಹಾಮಂಡಲ, ವೀಳ್ಯದೆಲೆ ಬೆಳೆಗಾರರ ಮಹಾಮಂಡಲ, ರೇಷ್ಮೆ ಕೃಷಿಕ ಮಹಾಮಂಡಲ,ತರಕಾರಿ ಮಹಾಮಂಡಲ..

ಹೀಗೆ; ಆರಂಭವಾಗಿ, ಲಾಭದಾಸೆಯಿಲ್ಲದೇ, ನಷ್ಟವೂ ಆಗದಂತೆ ಅದು ರೈತರಿಂದ ಗ್ರಾಹಕರಿಗೆ ಅಕ್ಕಿ, ಬೇಳೆ, ತರಕಾರಿಗಳನ್ನು ಹಸ್ತಾಂತರ ಮಾಡುವ ಕೆಲಸ ಯಾಕೆ ಮಾಡಬಾರದು?

ನೀಟಾಗಿ ಪ್ಯಾಕ್‌ ಆಗಿರುವ ವೈವಿಧ್ಯಮಯ ತರಕಾರಿಗಳು ಬೆಳಗ್ಗೆ ಮನೆಗೇ ಬಂದು ಬೀಳುತ್ತವೆ ಅಂದರೆ ಯಾರು ತಾನೇ ಬೇಡ ಅನ್ನುತ್ತಾರೆ.

ರೈತರಿಗೆ ಇರುವ ಶಕ್ತಿಯೇ ಅದು..!




ಗೆಳೆಯರೊಬ್ಬರು ಹೇಳುವಂತೆ ನಮ್ಮ ದೇಶದಲ್ಲಿ ಶೇಕಡಾ 90ರಷ್ಟು ರೈತರಿದ್ದಾರೆ. ಅವರೆಲ್ಲ ಸೇರಿ ಒಂದು ರೈತರ ಪಕ್ಷ ಕಟ್ಟಿದರೆ, ರೈತರೆಲ್ಲ ಜಾತಿ ಮತಗಳ ಬೇಧವಿಲ್ಲದೇ, ನಾವು ರೈತರ ಜಾತಿ ಅಂದುಕೊಂಡು ಮತಹಾಕಿದರೆ, ಇಲ್ಲಿ ರೈತನೊಬ್ಬ ಪ್ರಧಾನ ಮಂತ್ರಿಯೂ ಮುಖ್ಯಮಂತ್ರಿಯೂ ಆಗಬಲ್ಲ. ಇಡೀ ಕ್ಯಾಬಿನೆಟ್ಟಿಗೆ ಕ್ಯಾಬಿನೆಟ್ಟೇ ರೈತರು ತುಂಬಿಕೊಂಡರೆ ನಮ್ಮ ದೇಶದಲ್ಲೊಂದು ಬಹುದೊಡ್ಡ ಕ್ರಾಂತಿಯೇ ಆಗಿಬಿಡಬಹುದು. ಈ ಪ್ರಚಾರದ ರಾಜಕಾರಣ, ಭಾಗ್ಯದ ರಾಜಕಾರಣಗಳನ್ನೆಲ್ಲ ಮೂಲೆಗೆ ತಳ್ಳಿ ಶ್ರಮಸಂಸ್ಕೃತಿಯ ಗೆಲುವು ಕಣ್ಣಿಗೆ ಕಟ್ಟಬಹುದು..!!




ಕಳೆದೊಂದೆರಡು ತಿಂಗಳ ಹಿಂದೆ ಸರ್ಕಾರಿ ಬಸ್ಸಿನಡಿಗೆ ಸಿಕ್ಕಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷವೋ ಐದು ಲಕ್ಷವೋ ಪರಿಹಾರ ಘೋಷಿಸಿತು. ಆ ಊರಿನ ರೈತರೊಬ್ಬರು ಅದನ್ನು ನೋಡಿ ಹೇಳಿದ್ದಿಷ್ಟು: ಆ ಹುಡುಗ ಹೆಲ್ಮೆಟ್‌ ಹಾಕಿರಲಿಲ್ಲ.

ಅವನಿಗೆ ಲೈಸೆನ್ಸ್‌ ಇರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ. ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಿದ್ದ. ಅಷ್ಟೆಲ್ಲ ತಪ್ಪುಗಳನ್ನು ಮಾಡಿ ಬಸ್ಸಿನಡಿಗೆ ಬಿದ್ದು ಸತ್ತ. ಅದರಲ್ಲಿ ಡ್ರೈವರನ ಯಾವ ತಪ್ಪೂ ಇರಲಿಲ್ಲ. ಜನರೆಲ್ಲ ಸೇರಿ ಡ್ರೈವರನಿಗೆ ಹೊಡೆದರು. ಆ ಹುಡುಗನ ಕುಟುಂಬಕ್ಕೆ ಪರಿಹಾರ ಕೊಡಿಸಿದರು. ಮೂವತ್ತು ವರುಷಗಳ ಕಾಲ ಒಂದೇ ಒಂದು ಅಪಘಾತ ಮಾಡದೇ, ಒಂದೇ ಒಂದು ಸಲ ಕಾನೂನು ಭಂಗ ಮಾಡದೇ, ಕೊಟ್ಟ ಸಂಬಳ ತೆಗೆದುಕೊಂಡು, ರಗಳೆ ಮಾಡದೇ, ನಿಯತ್ತಿನಿಂದ ಕೆಲಸ ಮಾಡಿದವನಿಗೆ ಸಿಕ್ಕಿದ್ದು ಧರ್ಮದೇಟು ಮತ್ತು ಶಿಕ್ಷೆ. ಎಲ್ಲಾ ತಪ್ಪುಗಳನ್ನು ಮಾಡಿದವನಿಗೆ ದೊಡ್ಡ ಮೊತ್ತದ ಪರಿಹಾರ. ಇದು ನಮ್ಮ ದೇಶದ ರಾಜಕೀಯ ಸ್ಥಿತಿ ಮತ್ತು ಗತಿ.

.

ಇವತ್ತು ಗ್ರಾಮೀಣ ಭಾರತವನ್ನು ಕೀಳರಿಮೆಗೆ ತಳ್ಳುತ್ತಿರುವುದು ನಮ್ಮ ಮನರಂಜನಾ ಉದ್ಯಮ. ಅದು ಎಲ್ಲಾ ಬದಲಾವಣೆಗಳ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಬಟ್ಟೆ, ಮಾತಿನ ಶೈಲಿ, ಕೆಲಸ ಮಾಡುವ ಕ್ರಮ, ನಿಲುವು, ಒಲವು, ದೃಷ್ಟಿಕೋನ ಎಲ್ಲವನ್ನೂ ಎಂಟರ್‌ಟೇನ್‌ಮೆಂಟ್‌ ಹೆಸರಿನಲ್ಲಿ ಬದಲಾಯಿಸಲಾಗುತ್ತಿದೆ. ಅದರಲ್ಲಿ ಜಾಹೀರಾತುಗಳ ಪಾತ್ರವೂ ಉಂಟು. ಬಟ್ಟೆ ಬಿಳುಪಾಗಿರಬೇಕು, ಮುಖ ಬಿಳುಪಾಗಿರಬೇಕು, ಟಾಯ್ಲೆಟ್ಟು ಅಡುಗೆ ಮನೆಯಂತಿರಬೇಕು, ಮನೆ ಅರಮನೆಯಂತೆ ಇರಬೇಕು ಎಂಬಿತ್ಯಾದಿ ಸಂಗತಿಗಳನ್ನು ಎಷ್ಟು ಸೊಗಸಾಗಿ ಹೇರಲಾಗುತ್ತಿದೆ ಎಂದರೆ ಹಳ್ಳಿಯ ಹುಡುಗ ಹುಡುಗಿಯರು ಕೂಡ ಬಟ್ಟೆಗಳಲ್ಲಿ ಆಧುನಿಕರಾಗುತ್ತಿದ್ದಾರೆ. ಇವತ್ತು ಕೆಲಸ ಇದೆಯೋ ಇಲ್ಲವೋ ಆದಾಯ ಇದೆಯೋ ಇಲ್ಲವೋ ಚೆಂದದ ಬಟ್ಟೆ ಮತ್ತು ಟಚ್‌ಸ್ಕ್ರೀನ್‌ ಮೊಬೈಲು ಅನಿವಾರ್ಯ ಎಂಬ ನಂಬಿಕೆ ಬಂದುಬಿಟ್ಟಿದೆ.

ಶಿಕ್ಷಣ ನಮ್ಮೆಲ್ಲರನ್ನೂ ಹೆಚ್ಚು ಹೆಚ್ಚು ಬುದ್ಧಿವಂತರನ್ನಾಗಿ ಮಾಡಬೇಕಾಗಿತ್ತು. ಆದರೆ ಶಿಕ್ಷಣವೇ ಅತ್ಯಂತ ದಡ್ಡತನದ ಕೆಲಸ ಆದಂತಿದೆ. ವಿದ್ಯೆ ಎಂದರೆ ಮಗು ಮತ್ತು ಒಂದು ಲಕ್ಷ ರೂಪಾಯಿಯನ್ನು ಒಂದು ಕಟ್ಟಡದೊಳಗೆ ಎಸೆಯುವುದು ಎಂದಷ್ಟೇ ಆಗಿಬಿಟ್ಟಿದೆ.

ಇದೆಲ್ಲವನ್ನೂ ಹೇಳಬಾರದು. ಆದರೆ ಹೇಳದೇ ವಿಧಿಯಿಲ್ಲ. ಇದು ಬದಲಾಗುತ್ತದೆ ಅಂತೇನೂ ಖಾತ್ರಿಯಿಲ್ಲ. ಒಂದು ಮನೆಯಿದ್ದರೂ ಮತ್ತೂಂದು ಮನೆ, ಒಂದು ಸೈಟಿದ್ದರೂ ಮತ್ತೂಂದು ಸೈಟು, ಒಂದಿದ್ದರೂ ಮತ್ತೂಂದು ಕೊಂಡುಕೊಂಡು ಸುಭದ್ರರಾಗುವ ಭಾವನೆಯಲ್ಲೇ ನಮ್ಮ ದುರಂತದ ಬೀಜ ಇದ್ದಂತಿದೆ....




ಬಹುಶಃ ರೈತನ ಬದುಕಿನ ಚರಮಕಾಲ ಪ್ರಾರಂಭವಾಗಿದೆಯೇನೋ ಎಂದು ಅನಿಸುತ್ತಿದೆ.



Tuesday, 8 August 2017

ಬೆಳಕು

"ಬೆಳಕು"
--------------
ಊಟಕ್ಕೆ ಕುಳಿತ್ತಿದ್ದೆ
ವಿದ್ಯುತ್ ದೀಪದ
ಭವ್ಯ ಬೆಳಕಿನ ಕೆಳಗೆ
ಒಂದು ರಾತ್ರಿ..
ಹಬ್ಬವೇ ಇರಬೇಕೇನೋ
ಬಗೆಬಗೆಯ ಭಕ್ಷ್ಯಗಳು
ತಟ್ಟೆಯಲ್ಲಿ...
ಇನ್ನೇನು ಕೈಹಾಕಿದೆ
ಅನ್ನುತ್ತಿದ್ದ ಹಾಗೆಯೇ
ಕರೆಂಟ್ ಹೋಗಿಬಿಡಬೇಕೇ
ತಥ್ ಹಾಳಾದ್ದು ಶನಿ!
ಶಪಿಸುತ್ತ ಕಾಯುತ್ತಿದ್ದೆ...
ಹೊಟ್ಟೆಯಲ್ಲೋ ಹಸಿವಿನ
ರುದ್ರ ನರ್ತನ!
'ಹಣತೆಯಾದರೂ
ಹಚ್ಚಿಕೊಳ್ಳೋ ಹುಡುಗಾ'
ಅಂದಿದ್ದಳು
ಬಡಿಸಿದ ಹುಡುಗಿ.
'ಹುಚ್ಚೀ ದೀಪದ
ಕೆಳಗೆ ಕತ್ತಲಿರೋದಿಲ್ಲವೇ
ಅಲ್ಲೇ ನಾನು
ಕುಳಿತಿರೋದು'...
'ಪಾಪ ಕರೆಂಟು ಬರೋ ತನಕ
ಅದು ಹೇಗೆ ಕಾಯುತ್ತೀಯೋ'
ಗೊಣಗುತ್ತ ಎದುರಿಗೆ
ಕುಳಿತಳವಳು-
ಏನೋ ಹವಣಿಕೆಯಲ್ಲಿ...
ಹೃದಯದ ಶುಷ್ಕಕೋಶಕ್ಕೂ
ಕಣ್ಣದೀಪಗಳಿಗೂ
ನರಗಳಿಂದ ಸಂಪರ್ಕಿಸುತ್ತಿದ್ದಾಳೆ
ಅಂದುಕೊಂಡೆ...
ನೋಡಿದಳು ನನ್ನೆಡೆ
ಫಳ್ಳನೆ ಮುಗುಳುನಗೆಯ
ಸ್ವಿಚ್ ಹಾಕಿ...
ಹೌದು
ಬೆಳಕು ಬಂದಿತ್ತು
ಎರಡೂ ದೀಪಗಳಿಂದಲೂ
ಅದು
ಪ್ರೀತಿಯ ಬೆಳಕು
ಮತ್ತೆ ಹೋಗಲಿಲ್ಲ ಅದು,
ನಾವು ಉಂಡು
ಮಲಗುವವರೆಗೆ..!

-ಜಿ.ಎಂ.ನಾಗರಾಜ್.
‌ಹಿರೇಕುಂಬಳಗುಂಟೆ.

ಅನ್ವೇಷಣೆ

"ಅನ್ವೇಷಣೆ"
.....................

ವೇದಗಳಲ್ಲಿ
ಉಪನಿಷತ್ತುಗಳಲ್ಲಿ
ಸ್ಮೃತಿಗಳಲ್ಲಿ
ಪುರಾಣಗಳಲ್ಲಿ
ಆಕೆಯನ್ನು ಹುಡುಕಿದೆ
ಸಿಗಲಿಲ್ಲ

ಬೈಬಲಿನಲ್ಲಿ
ಖುರಾನಿನಲ್ಲಿ
ಚರಿತ್ರೆಯಲ್ಲಿ ವಿಜ್ಞಾನದಲ್ಲಿ
ಖಗೋಳದಲ್ಲಿ ಭೂಗೋಳದಲ್ಲಿ
ತಡಕಾಡಿದೆ ಆಕೆಗೆ
ಸುಳಿವಿರಲಿಲ್ಲ

ಆಚರಣೆಗಳಲ್ಲಿ ದೇಗುಲಗಳಲ್ಲಿ
ಭಜನೆ,ಸ್ತುತಿ ಪ್ರಾರ್ಥನೆಗಳಲ್ಲಿ
ನಂಬಿಕೆ ಮೂಢನಂಬಿಕೆಗಳಲ್ಲಿ
ಕ್ರೌರ್ಯ ಅನಾಚಾರಗಳಲ್ಲಿ
ಆಕೆಯನ್ನು ಅರಸಿದೆ
ದೊರಕಲಿಲ್ಲ

ನಗರಗಳಲ್ಲಿ ಕೊಂಪೆಗಳಲ್ಲಿ
ಗುಡ್ಡಗಳಲ್ಲಿ ಗವಿಗಳಲ್ಲಿ
ಜನಗಳಲ್ಲಿ ಜಾನುವಾರುಗಳಲ್ಲಿ
ಮನುಷ್ಯರಲ್ಲಿ ಮಹಾತ್ಮರಲ್ಲಿ
ಆಕೆಯನ್ನು
ನೋಡಹೋದೆ
ಮೂಡಲಿಲ್ಲ

ಆಕೆಗಾಗಿ
ಮೌನಿಯಾದೆ ಅವಮಾನಿಯಾದೆ
ಜಪಹೇಳಿದೆ ತಪಮಾಡಿದೆ
ಅನ್ನಬಿಟ್ಟೆ ನೀರೂ ಬಿಟ್ಟೆ
ಕೂಗಿದೆ ರೇಗಿದೆ
ಉತ್ತರಿಸಲೇ ಇಲ್ಲ
ಅವಳು

ಕೊನೆಗೆ
ಕಟ್ಟಕಡೆಗೆ ಆಕೆಗಾಗಿ
ಸಾಯಲು ಅಣಿಯಾದೆ
ಅಲ್ಲಿಯಾದರೂ
ಕಂಡಾಳೆಂಬ ಕುಡಿಯಾಸೆ!
ಎದೆಬಡಿದು ಗೋಳಾಡಿದೆ
ಸೋಲಿಗೆ

ಕಿಲಕಿಲ ನಕ್ಕದ್ದು ಕೇಳಿಸಿತು
ಹುಚ್ಚನಂತೆ ಸುತ್ತಲೂ ಅರಸಿದೆ
ಬಾಗಿಲು ತೆರೆದು
ಹೊರಬಂದಳವಳು
ನನ್ನೆದೆಯ ಬಾಗಿಲು
ಆಗಲೇ ನೆನಪಿಸಿಕೊಂಡದ್ದು
ಊರೆಲ್ಲ ಹುಡುಕಿಯೂ
ಮನೆಯಲ್ಲಿ
ಹುಡುಕದೆ ಹೋಗಿದ್ದೆ.
-----------------------*-----------*-----------------------------
ಜಿ.ಎಂ.ನಾಗರಾಜ್
ಹಿರೇಕುಂಬಳಗುಂಟೆ
*****************************************

ಏಕಾಂತೆ


"ಏ-ಕಾಂತೆ"
--------------
ಅವಳು
ನನ್ನ ಹೆಂಡತಿ
ನಾನು
ಅವಳ ಪತಿ
ತುಂಬಾ ಪ್ರೀತಿಸುತ್ತಾಳೆ
ಸಾಯೋವಷ್ಟು
ನಾನೂ ಅಷ್ಟೆ
...ಆಕೆ ಪತಿವ್ರತೆಯೇನೋ
ಅಲ್ಲ; ನನ್ನಂತೆ
ಗಂಡರು ಮಿಂಡರು
ಪ್ರೇಮಿಗಳು ವೈರಿಗಳು
ಆಕೆಗೆ ಇದ್ದಾರೆ
ಆದರೆ ನಮ್ಮ ದಾಂಪತ್ಯಕ್ಕೇನೂ
ಧಕ್ಕೆಯಾಗಿಲ್ಲ
ನಾನು ಕರೆದಾಗ
ಓಡಿಬರುತ್ತಾಳೆ
ಸಾಕೆನಿಸಿ ದೂಡಿದಾಗ
ಹೊರಡುತ್ತಾಳೆ.!
ಅನೈತಿಕವೇನೂ ಅಲ್ಲ
ನಮ್ಮ ಸಂಬಂಧ
ಆದರೆ
ನೋಡಿ ಸಹಿಸದ ಕೆಲವರು
ನನ್ನನ್ನು ಒಂಥರಾ ನೋಡುತ್ತಾರೆ
ಏಕಾಂಗಿ ಎಂದು ಜರಿಯುತ್ತಾರೆ
ನನಗೆ ಗೊತ್ತು
ಪ್ರಪಂಚದ ಮಹಾತ್ಮರಿಗೆಲ್ಲ
ಜ್ಞಾನದ ಬಾಗಿಲು
ತೆರೆದವಳು ಇವಳೇ ಎಂದು.
ಜಡವಲ್ಲ ಆಕೆ
ಕ್ರಿಯಾಶೀಲತೆಗೆ ಸ್ಫೂರ್ತಿ.
ಮೌನಿಯಲ್ಲ
ತಲೆ ತುಂಬಿಸುವಷ್ಟು
ವಾಚಾಳಿ
ಹುಚ್ಚಿಯಲ್ಲ
ವೈಚಾರಿಕತೆಯ ಮೂಲಬಿಂದು
ಕಾಡಿಸುತ್ತಾಳೆ
ಕಠೋರವಾಗಿ
ಒಮ್ಮೊಮ್ಮೆ
ತಾಳಿಕೊಳ್ಳಬೇಕಷ್ಟೆ.

ಚುಂಬಿಸಿ ಕರೆಯುತ್ತೇನೆ
ಅವಳನ್ನು ನಾನು
ಏ ಕಾಂತೆ ಬಾರೇ ಇಲ್ಲಿ
ಸಂಧಿಸಿ ಪ್ರೀತಿಸುವಿರೇನು
ನೀವು ಅವಳನ್ನು
ಏಕಾಂತದಲ್ಲಿ....
*****************************************

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...