Wednesday, 22 April 2020

ಕ್ವೇರಂಟೀನ್ ಕವಿತೆಗಳು -೦೪

ಈ ಸಾವು ಬಂದು ಬಾಗಿಲು ತಟ್ಟಿದರೆ
ಕದ ತೆರೆಯುವುದು ಒಳಗಿದ್ದ ಹಸಿವೇ!
ಆ ರೋಗ,ಹಸಿವನ್ನು ಸಾಯಿಸಲಾರದು..
ಸಾವಿಗೂ ಹಸಿವೆಂದರೆ ಅವ್ಯಕ್ತ ಭಯ ನೋಡು!
ಹಾಗಾಗಿಯೇ.......
ಬಡತನಕ್ಕೆ ಕಾಲು ಚಾಚಿ ಮಲಗುವಷ್ಟು ನಿರಾಳತೆ!

ಈಗೀಗ ಅನ್ನವೂ ಕೂಡ 
ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆಯೇನೋ..
ಬಡವರಿಂದ,ಶ್ರಮಿಕರಿಂದ ಅದು ದೂರ ದೂರ!
ಬೀಜ ಬಿತ್ತಿ ಬೆವರು ಬಸಿದು ಬೆಳೆದವನ ಹೊಟ್ಟೆ ಸತ್ತಿದೆ.
ಗಿಲೀಟು ಮಾಡುವ ಜನರ ಹೊಟ್ಟೆಯ ಗಾತ್ರ ನೋಡು!
ಹಾಗಾಗಿಯೇ.....
ಭೂಮಿಗೂ ಮಳೆಗೂ ಅಪಾತ್ರರಿಗೆ ಅನ್ನವಿಕ್ಕುವ ಲೋಪ!!

ಹಸಿವನ್ನು ಕೊಲ್ಲುವ ರೋಗವಿರಬೇಕಿತ್ತು.
ಹಸಿವನ್ನು ಕೊಲ್ಲುವ ಔಷಧವಾದರೂ ವಿಷವಾದರೂ ಸರಿ.
ಅನ್ನಭಾಗ್ಯದ ಸರ್ಕಾರ,ಆ ರೋಗವನ್ನು ವಿತರಿಸಬೇಕಿತ್ತು.
ಹೌದು ಬರೀ ಬಿಪಿಎಲ್ಲು,ಅಂತ್ಯೋದಯದ ಆರ್ಥಿಗಳಿಗಾಗಿ.
ಹಾಗಾಗಿದ್ದಿದ್ದರೆ......
ಹಸಿವಿರುತ್ತಿರಲಿಲ್ಲ..ಬಡವರಿರುತ್ತಿರಲಿಲ್ಲ..ಭಾಗ್ಯಗಳಿರುತ್ತಿರಲಿಲ್ಲ.
ದೇಶ ಶ್ರೀಮಂತರಿಂದ ಶ್ರೀಮಂತವಾಗಿರುತ್ತಿತ್ತು...!!!


Friday, 7 February 2020

"ವಾಗ್ದಾನ"

ಕುಂಟು ಬಿದ್ದ ಈ ದರವೇಶಿ ಬದುಕನೆತ್ತಿ ಕೈ ಹಿಡಿದು
ನಡೆಸುತ್ತೇನೆಂಬ ನಿನ್ನ ವಾಗ್ದಾನಕ್ಕೀಗ ಹತ್ತು ವರ್ಷ!
ಅವತ್ತು ಕೇಳಿಸಿಕೊಂಡಿದ್ದ ಆ ಹುಣಸೆಮರದಲ್ಲಿದ್ದ
ಕುಂಟಗುಬ್ಬಿಯೂ ಮುದಿಯಾಗಿ ಸತ್ತು ಮಣ್ಣಾಗಿರಬೇಕು!
ಅವತ್ತು ಬಿಡದ ಜಡಿಮಳೆ,ಬಾನಲ್ಲೊಂದು ಕಾಮನಬಿಲ್ಲು!

ಮತ್ತೆ ಮಳೆ ಬರಲಿಲ್ಲ ಬಿಡು...ಒಂದು ಹನಿಯೂ ಕೂಡ!
ಬದುಕಭೂಮಿಯ ಹಸಿರ ಹಸಿವು,ಬಿಸಿಲ ಹಂಚಿನ ಮೇಲೆ ಸತ್ತಿತ್ತು!
ಒಡೆದ ಕಾಲುಗಳಲ್ಲಿ ಒಸರಲು ರಕ್ತವಾದರೂ ಇತ್ತೇನು?
ನಿನ್ನ ಹೆಜ್ಜೆ ಮೂಡದ ಹಾದಿಯ ದಿಕ್ಕಿಗೆ ಸೂರ‌್ಯೋದಯವಾಗಲಿಲ್ಲ.
ಆ ಕುಂಟಗುಬ್ಬಿಯದ್ದೂ ಅಂಥದ್ದೇ ಹಾದಿಯಾಗಿತ್ತಲ್ಲವೇ?

ಇನ್ನೂ ಉಸಿರಿದೆ.ಬರುವ ಮಳೆಗೆ ಬೊಗಸೆಯೊಡ್ಡುವ ಆಸೆಗೆ.
ಒಡಲ ಕನಸಬೀಜ ಮೊಳೆಸಿ ಬೆಳೆಸಿ,ಮಾಡಬೇಕು ಸಾವ ಹಾಸಿಗೆ!





Saturday, 18 January 2020

"ಬೆಳಕು" ಅಂದರೆ?





"ಬೆಳಕು" ಎಂದರೇನು?
ಈ ವಿಕ್ಷಿಪ್ತ ಪ್ರಶ್ನೆಯನ್ನು
ಇವತ್ತು ಯಾಕೋ ನನ್ನ ಬದುಕಿಗೆ ಕೇಳಿದ್ದೆ.
"ನಿನ್ನನ್ನು ನೀನು ಸುಟ್ಟುಕೊಳ್ಳುವುದು"
ಎಂದು ಗಂಭೀರವಾಗಿ ಉತ್ತರಿಸಿತ್ತು ಬದುಕು!
ಅರ್ಥವಾಗದೆ ಚಡಪಡಿಸಿದ್ದೆ.
ಕೊನೆಗೆ ನನ್ನ ಅಂತರಾತ್ಮವನ್ನೇ ಕೇಳಿಕೊಂಡೆ.
ಹೇಳು ಬೆಳಕೆಂದರೇನು?
"ಬೇರೇನಿಲ್ಲ.ಬೆಳಕೆಂದರೆ ಬೆಳಕು,ಅಷ್ಟೆ"
ಉತ್ತರಿಸಿತ್ತು..ನನ್ನೊಳಗಿನ ಆತ್ಮಸಾಕ್ಷಿ!
ಪ್ರಶ್ನೆಯು ಉತ್ತರದ ಬೆಳಕ ಜೊತೆ ನಕ್ಕಿತ್ತು.
ಉತ್ತರವೂ ಅದೇ ಬೆಳಕಿನಲ್ಲಿ ಉರಿಯುತ್ತಿತ್ತು.
ಪ್ರಶ್ನೆ ಬೆಳೆಯುತ್ತಾ ಬೆಳೆಯುತ್ತಾ
ಉರಿವ ಬೆಳಕಾಯಿತು. ಬೆಳಗಾಯಿತು.
ಪ್ರಶ್ನೆಯೂ ಬೆಳಕೇ. ಉತ್ತರವೂ ಬೆಳಕೇ!

Thursday, 9 January 2020

ಏನೂ ಅಲ್ಲ....

ಕಾಲದ ಕದಲುವಿಕೆಯನ್ನು ಅಳೆಯುವುದು ಗಡಿಯಾರದ ಮುಳ್ಳುಗಳೋ ಕ್ಯಾಲೆಂಡರಿನ ಹಾಳೆಗಳೋ ಅಲ್ಲ. ನನ್ನ ನಾಡಿಯ ಪ್ರತೀ ಮಿಡಿತವೂ,ಹೃದಯದ ಪ್ರತೀ ಬಡಿತವೂ ಕಳೆದ ಕಾಲವನ್ನು ಕರಾರುವಕ್ಕಾಗಿ ಅಳೆದು ದಾಖಲಿಸುತ್ತವೆ.

ಪ್ರತೀ ಸೂರ್ಯಾಸ್ತದ ಹೊನ್ನಕಿರಣವೂ ನನ್ನ ಮೈಮೇಲೆ ಬಿದ್ದಾಗ ನನ್ನ ಒಂದು ದಿನದ ಲೆಕ್ಕ ಮುಗಿದಿರುತ್ತದೆ. ಇರುಳಿನ  ಪ್ರತೀ ಪೂರ್ಣ ಚಂದ್ರನೂ ನನ್ನ ಒಂದು ತಿಂಗಳ ಲೆಕ್ಕಚಾರವನ್ನು  ಅನಂತ ವಿಸ್ತಾರದ ಆಗಸದ ಮೇಲೆ ಸ್ಫುಟವಾಗಿಯೇ ಬರೆದುಕೊಳ್ಳುತ್ತಾನೆ.
ನನ್ನ ತಲೆಯಲ್ಲೊಂದು ಬೆಳ್ಳಿಕೂದಲು ಮೂಡಿಸಿ,ಚರ್ಮದಲ್ಲೊಂದು ನೆರಿಗೆ ಮಡಿಸಿ ಗುರುತು ಹಾಕುತ್ತಾನೆ.

ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಶಿಸಿದ ಅಮೋಘ ಕ್ಷಣ, ಆ ಹನಿಗಳ ತೊನೆಗೆ ಘಮ್ಮನೆ ನೆಲದ ಪರಿಮಳ ಹೊಮ್ಮುವ ಕ್ಷಣ, ಪ್ರಕೃತಿಯ ಅದಾವ ಗೂಢಲಿಪಿಯ ಸಂದೇಶದ ಪರಿಣಾಮದಿಂದಲೋ ಅದೆಲ್ಲೋ ಅವಿತಿದ್ದ ಸಹಸ್ರ ಕೀಟಕೋಟಿಯ ಮೊಟ್ಟೆಗಳೆಲ್ಲ ಬಣ್ಣಬಣ್ಣದ ಮರಿಗಳಾಗಿ ಹುಳುಗಳಾಗಿ ಹಸಿ ನೆಲದ ಮೇಲೆ ಓಕುಳಿ ಮೆರವಣಿಗೆ ಹೊರಡುವ ಕ್ಷಣ....

ಒಣ ಮರಗಳ ರೆಂಬೆ ಸಂದುಗಳಲ್ಲಿ ಹಸಿರ ಚಿಗುರು ಕುಡಿಯೊಡೆವ ಕ್ಷಣ,ಹೊಸ ಚಿಗುರ ಮೆದ್ದ‌ ಕೋಗಿಲೆ, ಅಲ್ಲೆಲ್ಲೋ ಮರೆಯಲ್ಲಿ ಬಾಯ್ತುಂಬಾ ಕೂಗಿ ಕರೆದ ಕ್ಷಣ....

ಆ ಕ್ಷಣ...ನನ್ನ ಹೊಸ ವರ್ಷದ ಪ್ರಾರಂಭ! 
ಅದರ ಸಂಭ್ರಮಾಚರಣೆಗೆ ಇಡೀ ಭೂಮಂಡಲದ ಸೃಷ್ಟಿ ಸಮಸ್ತವೇ ನನ್ನ ಜೊತೆಗೆ ಭಾಗಿಯಾಗುತ್ತದೆ.

ಹಾಗಾಗಿ...ಈ ಜನವರಿ ಒಂದರ ಹೊಸವರ್ಷ ನನಗೆ ಏನೂ ಅಲ್ಲ.ಏನೇನೂ ಅಲ್ಲ.

Wednesday, 3 July 2019

"ಯಾವ ಕವಿತೆ?"


ಸುರಿದ ಆರಿದ್ರೆಯ ಮಳೆ ಹನಿಗೆ
ಬಾಯೊಡ್ಡಿದ್ದವು ಜೀವಗಳೆಲ್ಲ ಬಾನಿಗೆ
ಚಿಗಿತ ಮರದೆಡೆಗೆ,ಓಡಿದೆ ದುಂಬಿ ಜೇನಿಗೆ
ಮೊಳೆತ ಬೀಜದ ಸಾಲು ಕಂಡ ರೈತನಿಗೆ
ಹಾಯೆನಿಸಿ,ಹೊಮ್ಮಿದ್ದು ಯಾವ ಕವಿತೆ?

ಇಲ್ಲಿ ಯಾರೂ ನಿಂತು ಕೇಳಲಿಲ್ಲ
ಅರಳಿದ ಹೂಮೊಗ್ಗಿನಾ ಸವಿಸೊಲ್ಲ
ರವಿಕಿರಣ ಸೋಕಲು ಮೈ ಮೆಲ್ಲ
ತಣ್ಣಗೆ ಅರಳಿದ್ದು ಆಗ ಯಾವ ಕವಿತೆ?

ನಟ್ಟಿರುಳಲ್ಲೇ ಕಂಡ ಬೆಂಕಿಯ ಜ್ವಾಲೆ
ಹಾಗೇ ಹೊತ್ತಿ ಹೀಗೆ ಆರಿತ್ತು ಒಮ್ಮೆಲೆ
ಉರಿದ ಹಾಗೆ ಬಡವರ ಮನೆಯ ಒಲೆ
ಅರೆಕ್ಷಣ ಕಣ್ಣಲರಳಿದ ಕಾಂತಿ ಯಾವ ಕವಿತೆ?

ರಾತ್ರಿ ನಿದ್ದೆಯ ಕನವರಿಕೆ
ಅದಕ್ಕೊಂದಷ್ಟು ಭಾವದ ಬೆರಕೆ
ಒಪ್ಪುವ ಎಲ್ಲಿನದೋ ಚಿತ್ರಿಕೆ
ಅದಕ್ಕೆ ಈ ಬ್ಲಾಗಿನ ಕೂಡಿಕೆ
ಈಗ ನಿಮ್ಮ ಕೈಬೆರಳು ಸವರಿದ
ಬೊಗಸೆ ಅಕ್ಷರದ ಮಾಲಿಕೆ,ಯಾವ ಕವಿತೆ?






Wednesday, 12 June 2019

ಸೇವೆಯ ಮಿಡಿತ

ತಾನು ಬೆಂದು ಇರುಳ ಬೆಳಗುವ
ದೀಪದ್ದು - ಒಂದು ಘನತೆಯ ಸಾವು!
ಹೆಣದ ಮೇಲಿಟ್ಟರೂ ಕ್ಷಣ ಹೊತ್ತಾದರೂ
ಕಂಪು ಸೂಸಿಯೇ ಸಾಯುತ್ತದೆ - ಹೂವು!
ತನ್ನ ಕಂದನ ಪಾಲಿನ ಕೆಚ್ಚಲ ಹಾಲನ್ನು
ಕಸಿದು ಕರೆದರೂ- ಹಸುವಿಗಿಲ್ಲ ನೋವು!

ಯಾರಿಗೋಸ್ಕರ ಈ ಮಾವು-ಬೇವು?
ಯಾರಿಗೆ ಆ ಕೋಳಿ ಕೊಡುವ ಮರಿ-ಕಾವು?
ತೆನೆಯ ಜೋಳ ಸೇರುವುದಾದರೂ ಯಾರ ಹಗೇವು?
ಕೊಟ್ಟಿತೇನು ಜೇನ ಹೊಟ್ಟು ಜೇನ ಬದಲು ಕೀವು?
ಇಷ್ಟಕ್ಕೂ ಹಾಕಿದ್ದರಾದರೂ ಯಾರು ಅವಕ್ಕೆ ಮೇವು?
ಯೋಚಿಸಬೇಕಿದೆ..ಒಮ್ಮೆಯಾದರೂ ನಾವು-ನೀವು!
ಮತ್ತೊಂದು ಜೀವಕ್ಕೆ ಮಿಡಿಯದ ಜೀವನ‌ - ನಿತ್ಯ ಸಾವು!
ಇದೇ "ಹೆಜ್ಜೆ ಮೂಡದ ಹಾದಿಯ" ಠರಾವು!






Friday, 7 June 2019

"ಹೆಜ್ಜೆ ಮೂಡದ ಹಾದಿ"

ಹಾದಿಯ ಹಂಗಿಲ್ಲ.....ಹಾಡಿನದ್ದೇ ಗುಂಗು!!
ಸಾವಿನೆಡೆ ನಿರ್ಲಿಪ್ತ....ಬದುಕು ಸಂತೃಪ್ತ
ಅಪ್ಪನಿಲ್ಲ , ಮಗನಿಲ್ಲ...ಭಾರವಿಲ್ಲದ ಹೆಗಲು
ಗಮ್ಯವಿಲ್ಲ ,ಗಾಬರಿಯಿಲ್ಲ...ಸರಾಗ ನನ್ನ ಹಗಲು
ಕಾಡಲಿಕ್ಕೆ ಒಂದಷ್ಟು ಕನಸುಗಳಿವೆ!
ಅಲ್ಲಿ ಯಾರದ್ದೋ ಎದೆಯಲ್ಲಿ ಬಿಟ್ಟ ನೆನಪುಗಳಿವೆ!
ಜಗತ್ತಿನ ಸಂಭವ-ಅಸಂಭವಗಳು ಏನಾದರೂ ಆಗಲಿ!
ಆರ್ತ ಜೀವಗಳಿಗೆ ಮರುಗುವ ಮನಸು ನನಗಿರಲಿ!
ಕಾಲ-ಕಾಲು ಕರೆದಲ್ಲಿ ಸಾಗುತ್ತೇನೆ;
ಅದೇ ನನಗೆ ನಿತ್ಯ ಯುಗಾದಿ!
ತೇಕು ಬಂದೆಡೆಯಲ್ಲಿ ನಿಲ್ಲಿಸುತ್ತೇನೆ
ನನ್ನ "ಹೆಜ್ಜೆ ಮೂಡದ ಹಾದಿ"!!





"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...