Friday, 24 February 2023

ಹಸಿವು,ಶಿಕ್ಷಣ ಮತ್ತು ರಾಜಕಾರಣ!!


 ಒಂದು ಬದುಕಿನ ನೆಲೆಯನ್ನು ಹಸಿವು ಕಟ್ಟುತ್ತದೆ.ಅಂತಹ ಸಾವಿರ ಬದುಕುಗಳಿಂದಲೇ ಸಮಾಜ ಹುಟ್ಟುತ್ತದೆ.ದೇಶ ಮೈದಳೆಯುತ್ತದೆ.ಸಾತ್ವಿಕ ಹಸಿವು ನೀಗುವ ಅವಕಾಶಗಳು ಹೆಚ್ಚಿದಷ್ಟೂ ಸುಂದರ ಸಮಾಜ ಬೆಳೆಯಬಲ್ಲದು ಹಾಗೆಯೇ ಹಸಿವು ವಿಕೃತತೆಗೆ ತಿರುಗಿದಾಗಲೆಲ್ಲ ಸಮಾಜವಿರಲಿ,ಜೀವ ಸಂಕುಲದ ಅಸ್ತಿತ್ವವೇ ಲಯವಾಗುತ್ತದೆ.


ಈ ದೇಶವೆಂದರೇನೆ, ಒಂದು ಹಸಿದವರ ಜೋಪಡಿ! ಹೊಟ್ಟೆ ತುಂಬಿದವರ - ತುಂಬದವರ ನಡುವಿನ ಸಂಘರ್ಷವೇ ಇದರ ಇತಿಹಾಸ. ವರ್ತಮಾನವೂ ಅದೇ..ಭವಿಷ್ಯವೂ ಅದೇ! ಏನೋ ಒಂದಷ್ಟು GDP,FDA ಎಂಬೆಲ್ಲಾ ಶಬ್ಧಗಳ ಅಲಂಕಾರದ ಹೊದಿಕೆ ಇರಬಹುದಷ್ಟೇ! ಹಸಿವು ತಣಿಸುವ ಭರವಸೆಯ ಮಾತುಗಳೇ ರಾಜಕಾರಣ! ಹಸಿವನ್ನು ತುಚ್ಛವಾಗಿ ಕಾಣುವವನೇ ದೇಶದ್ರೋಹಿ. ಬೆವರ ಬಸಿದು,ಅನ್ನ ಬೆಳೆದು ಹಸಿವ ತಣಿಸುವ ಪ್ರತೀಯೊಬ್ಬ ರೈತನೂ ಈ ದೇಶದ ಸೈನಿಕನೇ!

ಅನ್ನ ಬೆಳೆವ,ಹಸಿವ ತಣಿಸುವ ಚಿಂತನೆಗಳೆಲ್ಲವೂ ರಾಷ್ಟ್ರೀಯತೆ! ದೇಶದ ಬೆವರದೊರೆಗಳೆಲ್ಲರೂ ರಾಷ್ಟ್ರಭಕ್ತರೇ! ಇದನ್ನು ಹೊರತುಪಡಿಸಿ, ಬೇರೆಯ ರಾಷ್ಟ್ರಭಕ್ತಿಯಿಲ್ಲ...!

ಇದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು.ಪುಸ್ತಕದಲ್ಲಿ ಅದ್ಯಾವ ಕಲರಿನ ಬದನೇಕಾಯಿ ಬೇಕಾದರೂ ಇದ್ದುಕೊಳ್ಳಲಿ..ನಾವು ಇಷ್ಟು ಬಿಟ್ಟು ಬೇರೆಯದನ್ನು ಅವರ ತಲೆಗೆ ತುಂಬಿಸುವ ಅಗತ್ಯವಿಲ್ಲ..ಅದು ಅವರಿಗೆ,ಅವರ ಭವಿಷ್ಯಕ್ಕೆ..ಮತ್ತು ದೇಶಕ್ಕೆ ಸಾಕಷ್ಟಾಯಿತು!

          ಆದರೆ, ಎತ್ತ ಸಾಗುತ್ತಲಿದೆ ಈ ದೇಶ? ಎಲ್ಲರೂ ಭ್ರಮೆಗಳಲ್ಲಿ ಬದುಕುತ್ತಲಿದ್ದೇವೆ.ಕೃತಕ ವಿಕೃತ ಮುಖವಾಡಗಳನ್ನು ತೊಟ್ಟು ಅಸಹ್ಯದ ಬದುಕು ಬದುಕುತ್ತಲಿದ್ದೇವೆ. ಮೌಲ್ಯದ ಜೀವನವೇ ಇವತ್ತು ಅಪಹಾಸ್ಯಕ್ಕೊಳಗಾಗುತ್ತಲಿದೆ. ಗಾಂಧಿ,ಬುದ್ಧರೆಲ್ಲರೂ ನಮ್ಮ ತಲೆಮಾರಿನವರಿಗೆ ಕಾಮಿಡಿ ಐಟಂಗಳಂತೆ ಕಾಣುತ್ತಲಿದ್ದಾರೆ.

          ಈ ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲದಲ್ಲಿ ಎಲ್ಲರೂ ಹೀರೋಗಳಾಗಿ ಹೋಗಿದ್ದಾರೆ. ಕೆಲಸಕ್ಕೆ ಬಾರದ್ದೆಲ್ಲಾ ವೈರಲ್ ಆಗಿ, ಕಚಡಾಗಳೆಲ್ಲಾ ಸುದ್ದಿಯಾಗುತ್ತಿದ್ದಾರೆ. ತಿದ್ದಬೇಕಾದ ಸುದ್ದಿ ಮಾಧ್ಯಮಗಳು ಹಾದರದ ಅಡ್ಡೆಗಳಾಗಿವೆ..ಎಲ್ಲವೂ ಇಲ್ಲಿ ಬಿಜಿನೆಸ್ಸೇ ಆಗಿಹೋಗಿಬಿಟ್ಟಿದೆ..

          ಹೀಗಿದ್ದಾಗ..ರಾಜಕಾರಣದ ಬಗ್ಗೆ ಅದ್ಯಾವ ಭರವಸೆ ಇಡಬೇಕು ಅಲ್ಲವೇ? ಸಕಲೆಂಟು ಪಾಪದ ಕೂಪವೇ ಅದಲ್ಲವೇ?

          ಪ್ರಜಾಪ್ರಭುತ್ವ - ನಾಶವಾಗುವ ಕಾಲ ಹತ್ತಿರ ಬಂತೇನೋ ಅನಿಸಿಬಿಡುತ್ತದೆ ಒಮ್ಮೊಮ್ಮೆ.

ಆದರೂ..ಅದೆಲ್ಲೋ ಮೂಲೆಯಲ್ಲಿ ಒಂದು ಕುಡಿಯಾಸೆ ಇದ್ದೇ ಇದೆ..ಆ ಕುಡಿಯೇ ಬೆಳಕಿನ ಕೋಲಾಗಬೇಕಷ್ಟೇ ಈ ದೇಶಕ್ಕೆ!!

Sunday, 6 March 2022

ದುರಂತದ ಹಂಬಲ

 ಒಂದೊಂದು ಸಲ,ಕೆಲವರಿಗೆ...

ಪ್ರೀತಿಯಷ್ಟೇ ಖುಷಿಯನ್ನು ಆ ದ್ವೇಷವೂ ಕೊಡುತ್ತದೆ.ಶಾಂತಿಗಿಂತ ಹೆಚ್ಚು ನಿರಾಳತೆಯನ್ನು ಯುದ್ಧ ಕೊಡುತ್ತದೆ.ಮಧುರ ಸಂಗೀತಕ್ಕಿಂತ ಹೆಚ್ಚು ರಂಜನೆಯನ್ನು ಈ ದೌರ್ಜನ್ಯ,ಹಿಂಸೆ,ಆಕ್ರಂದನಗಳು ಕೊಡುತ್ತವೆ.

ತಮಾಷೆ ಎನಿಸಬಹುದು ನಿಮಗೆ ;

ನೆಮ್ಮದಿಗಾಗಿ ಪರದಾಡುವಂತೆ,ದುರಂತಕ್ಕಾಗಿಯೂ ಹಂಬಲಿಸುತ್ತಾರೆ ಕೆಲವರು! 


"And two bodies ruined by a single sweetness.” - ಬರೆಯುತ್ತಾನೆ ನೆರುಡಾ!

ದುರದೃಷ್ಟವೇನು ಗೊತ್ತಾ? ಇತ್ತೀಚೆಗೆ ಇಂಥ ಮನಃಸ್ಥಿತಿಗಳು ಹೆಚ್ಚಾಗುತ್ತಿವೆ.Social Media Platform ಗಳು ಇಂತಹ ಮನಃಸ್ಥಿತಿಗಳನ್ನು Propogate ಮಾಡುತ್ತಿವೆ...ಮತ್ತು ಇದನ್ನೇ ಒಂದು ಒಳ್ಳೆಯ ಜೀವನ ಮೌಲ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಮುಂದಿನ ಸಂತತಿಗೆ ಇದು ಆದರ್ಶದ ಪಾಠವೂ ಆಗಬಹುದೇನೋ!


ಯಾರಿಗೋ ಟೋಪಿಹಾಕಿ 100 ರೂಪಾಯಿ ತೆಗೆದುಕೊಂಡು ಬಂದ ಮಗನನ್ನು ನಾವ್ಯಾರೂ ಬೈಯುತ್ತಿಲ್ಲ..'ಎಷ್ಟು ಜಾಣ' ಎಂದು ಹೆಮ್ಮೆಪಡುತ್ತಿದ್ದೇವೆ. ದೊಡ್ಡದೊಡ್ಡ Management College ಗಳಲ್ಲಿ ಜನರಿಗೆ ಯಾಮಾರಿಸಿ,ಉತ್ಪನ್ನಗಳನ್ನು ಹೇಗೆಲ್ಲಾ ಮಾರಬಹುದು ಎಂಬುದೇ Business Strategy ಯ, Ethic ಆಗಿ ಸಿಲಬಸ್ ಆಗಿ ಬೋಧಿಸಲಾಗುತ್ತಿದೆ.


         ಮತ್ತೆ ನಾವು ಮಾತ್ರ...ನಮ್ಮಗಳ ಫೇಸ್‌ಬುಕ್ -ವಾಟ್ಸಪ್ ಸ್ಟೇಟಸ್ಸುಗಳಲ್ಲಿ ಭಗವದ್ಗೀತೆ,ಉಪನಿಷತ್ತುಗಳ ಸೂಕ್ತಿಗಳನ್ನು ಹಾಕಿಕೊಳ್ಳುತ್ತಿರುತ್ತೇವೆ!

ಗಂಟು


ಅಷ್ಟು ಭಾರದ ಪ್ರಶ್ನೆಗಳ ಗಂಟನ್ನು

ತಲೆಯ ಮೇಲೆ ಯಾಕೆ ಹೊತ್ತಿರುವೆ ಗೆಳೆಯಾ?

ಅವತ್ತೊಂದಿನ ಆ 'ಉತ್ತರ'ವು ನನ್ನನ್ನು ಕೇಳಿತ್ತು!

ಅವುಗಳನ್ನು ಇಳಿಸು,ನನ್ನನ್ನು ಹೊರು ಅಂಗಲಾಚಿತ್ತು.

ಪ್ರಶ್ನೆಗಳ ಗಂಟು ಇಳಿಸಿ,ಉತ್ತರದ ಗಂಟು ಹೊತ್ತೆ!

ಉತ್ತರಗಳ ಭಾರ ತಡೆಯದೆ ಕುಸಿದು ಬಿತ್ತು ಬದುಕು..

ಈಗ ಪ್ರಶ್ನೆಗಳಿಗಾಗಿ ಅಂಡಲೆಯುತ್ತಲಿದ್ದೇನೆ...

ಕಂಡವುಗಳನ್ನೆಲ್ಲಾ ಆಯ್ದು ಗಂಟು ಕಟ್ಟುತ್ತಲಿದ್ದೇನೆ.

ಮತ್ತೆ..ನಿಮ್ಮಲ್ಲಿ ಒಂದಷ್ಟು ಪ್ರಶ್ನೆಗಳಿದ್ದರೆ ನನಗೆ ಹೇಳಿರಿ!

ಬದುಕು


ವಯಸ್ಸೇನೋ ಸಣ್ಣದೇ..

ಹೊತ್ತ ಬದುಕಿನ ಭಾರ ದೊಡ್ಡದು!

ಹೀಗೆಯೇ ಇರುತ್ತಾರೆ ಕೆಲವರು...

ಹೊತ್ತದ್ದನ್ನು ಕೈ ನೀಡಿ,ಕ್ಷಣ ಹೊತ್ತಾದರೂ

ಇಳಿಸಲಿಕ್ಕೆ ಯಾರೂ ಇಲ್ಲದವರು!


Friday, 4 March 2022

ಅಮಾಯಕರಾಗಬೇಕಿದೆ

 ನಾವು..ಈ ದೇಶದ ರಾಜಕಾರಣಿಗಳಿಂದ,ರಾಜಕಾರಣದಿಂದ ಜನಕ್ಕೆ, ಸಮಾಜಕ್ಕೆ ಏನಾದರೂ ಒಳ್ಳೆಯದಾದೀತೆಂಬ ಸಣ್ಣ ಭರವಸೆಯನ್ನೂ ಕಳೆದುಕೊಂಡು ಬಾಜೀರಾಯನ ಕಾಲವಾಯಿತು ಬಿಡಿ! In fact  ಇದು ರಾಜಕಾರಣಿಗಳಿಗೆ ಗೊತ್ತಾದ್ದರಿಂದಲೇ, ಅಭಿವೃದ್ಧಿ-ಅಭ್ಯುದಯಗಳ ಗೊಡವೆಗೆ ಹೋಗದೆ, "ಧರ್ಮ" ವೆಂಬ ಗಾಂಜಾದ ಅಮಲನ್ನು ಜನತೆಗೆ ಏರಿಸಿ,ಮರೆಸಿ,ಮಲಗಿಸಿ..ಮಲಗಿದವರ ಮೇಲೆ ಮೆರೆಯಬಹುದಾದ ಸುಲಭ-ಸರಳ,ಖರ್ಚಿಲ್ಲದ ದಾರಿ ನೋಡಿಕೊಂಡಿದ್ದಾರೆ! 

             Social Media ದ ಈ ಜಮಾನದಲ್ಲಿ ದೇಶದಲ್ಲಿ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಏನಾದರೂ ಪ್ರತಿಕ್ರಿಯೆ ಕೊಟ್ಟು ನಾವು ದೊಡ್ಡ ತೋಲಪ್ಪಗಳಾಗುವ ಧಾವಂತಕ್ಕೆ ಬಿದ್ದುಬಿಟ್ಟಿದ್ದೇವೆ ನಾವೆಲ್ಲ! ಮನಸ್ಸುಗಳ ನೆಮ್ಮದಿಗೆ ಕಲ್ಲು ಹಾಕಿಕೊಂಡು ಕ್ಷುದ್ರರಾಗುತ್ತ..ನಮ್ಮ ಭವಿಷ್ಯದ ಸಂತತಿಗಳ ಬಾಲ್ಯಕ್ಕೂ ಮುಳ್ಳುಗಳಾಗುತ್ತಿದ್ದೇವೆ. 

           Yes...ನಾವು ಅಜ್ಞಾನಿಗಳಾಗಬೇಕಿದೆ... ಅಮಾಯಕರಾಗಬೇಕಿದೆ..ಮುಗ್ಧರಾಗಬೇಕಿದೆ..ಅಯೋಗ್ಯರಾಗಬೇಕಿದೆ. ಇಲ್ಲದೇ ಇದ್ದರೆ, ನಾವು ರಾಜಕಾರಣಿಗಳು ಹಚ್ಚುವ ಬೆಂಕಿಗೆ ಉರುವಲುಗಳಾಗಿ ಉರಿದು ಬೂದಿಯಾಗುತ್ತೇವಷ್ಟೇ!

Old People of Makunti

 

ಈ Research Thesis ಗಳನ್ನು ಓದೋದೆಂದರೇನೆ ಪರಮ ಹಿಂಸೆ. ನಿರ್ಭಾವುಕ ಭಾಷೆ,ನಿರ್ಜೀವವೆನಿಸುವ presentation ಗಳು ಬೋರೆನಿಸುತ್ತವೆ. Offcoz ಆ thesis ನ್ನು ಬರೆದವರನ್ನು ಬಿಟ್ರೆ ಬೇರೆಯವರು ಓದೋದೇ ಕಡಿಮೆ.
          ಡಾ|| ಎಚ್.ಎಂ.ಎಂ.ರವರ "The Old People of Makunti" ಪುಸ್ತಕ ಮಾತ್ರ ಇದಕ್ಕೆ ಹೊರತಾಗಿದೆ. 2-3 ಸಲ ಓದಿದರೂ ಓದಬೇಕೆನಿಸುವ ಪುಸ್ತಕವಿದು. ಕನ್ನಡದ ಅಕ್ಷರ ಲೋಕದಲ್ಲಿ Gerentrology(ವೃದ್ಧರ ಅಧ್ಯಯನ ಶಾಖೆ)ಗೆ ಸಂಬಂಧಿಸಿದಂತೆ ಬಂದ ಮೊದಲ ಪುಸ್ತಕ.ವೃದ್ಧರನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಕ್ಷೇತ್ರಾಧ್ಯಯನ ಮಾಡಿ ಬರೆದ ಏಕೈಕ ಪುಸ್ತಕ.ಕರ್ನಾಟಕದಲ್ಲಷ್ಟೇ ಅಲ್ಲ ಭಾರತೀಯ ಸಮಾಜಶಾಸ್ತ್ರ ಕ್ಷೇತ್ರಕ್ಕೂ ಇದು  ಮೈಲಿಗಲ್ಲೇ!
       ಧಾರವಾಡದಿಂದ 10km ದೂರದ ಮಾಕುಂಟಿ ಎಂಬ ಹಳ್ಳಿಯ ವೃದ್ಧರನ್ನು ಸತತ 3 ವರ್ಷಗಳ ಕಾಲ ಅಧ್ಯಯನ ಮಾಡಿ(1963-66) ಅವರ ಸಾಮಾಜಿಕ ಮಹತ್ವವನ್ನು ಜಗತ್ತಿನೆದುರು ಡಾ|| ಎಚ್.ಎಂ.ಎಂ.ತೆರೆದಿಟ್ಟಿದ್ದಾರೆ.ಅಲ್ಲಲ್ಲಿ ಮಧುರ ಹಾಸ್ಯದ ನಿರೂಪಣೆ,ಅವರೇ ಕೈಯಾರೆ ಬಿಡಿಸಿದ ರೇಖಾಚಿತ್ರಗಳು..ಪುಸ್ತಕವನ್ನು ಓದಿಸುತ್ತವೆ.
         ಪ್ರಸ್ತುತ ಈ ಪುಸ್ತಕ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳ ಲೈಬ್ರರಿಗಳಲ್ಲಿದೆ. ಅದರ ಕನ್ನಡ ಆವೃತ್ತಿಯೂ ಇದೆ.(ಸಂಡೂರಿನವರೊಬ್ಬರು ಮಾಡಿದ್ದಾರೆ)  Online ನಲ್ಲಿ Google books,amazon, Penguin, Bantom ಗಳಲ್ಲಿ ಲಭ್ಯವಿದೆ.
ನೀವೂ ಓದಬಹುದು.

ನಂಬಿಗಸ್ತ


ಬದುಕು ಕೇಳುವ

ಸಾವಿರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ

ಜೀವವು ತತ್ತರಿಸಿದಾಗಲೆಲ್ಲಾ

ಆ ಸಾವು ಮಾತ್ರ

ಉತ್ತರ ನನ್ನಲ್ಲಿದೆ ಎಂದು

ಕೈ ಎತ್ತಿ ಮುಂದೆ ಬರುತ್ತದೆ!

ಬದುಕ ಬಯಲಿನಲ್ಲಿ

ಸಾವಿನೂರಿನ ದಾರಿಯನ್ನು 

ಹುಡುಕಲೇನು ಕಷ್ಟವೇನು?

ಬದುಕು ಕತ್ತಲು ಹೊದ್ದಾಗಲೆಲ್ಲಾ

ಸಾವು,ಬೆಳಕಿನಲ್ಲಿ ಫಳ್ಳನೆ ಮಿಂಚಿಬಿಡುತ್ತದೆ!

ಕೈ ಹಿಡಿದರೆ,ಬಿಟ್ಟಿತೇನು ಸಾವು?

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...