Tuesday, 27 February 2018

ಹುಚ್ಚುಖೋಡಿ ಮನಸು - ೮

ನೀನು ಹಾಸಿಕೊಂಡ ಮೌನದ ಮೇಲೆ
ನಮ್ಮ ನಡುವಿನ ಪ್ರಶ್ನೆಗಳನ್ನೆಲ್ಲ ತುಂಬಿ
ಗಂಟುಕಟ್ಟಿ ದೂರ ಎಸೆಯಬೇಕು...
ನನ್ನ ನಿನ್ನ ನಡುವಿನ ಅಂತರದ ಹೊಳೆಗೆ
ಭರವಸೆಯ ಕಲ್ಲುಗಳ ಹಾಕಿ
ಎಂದೂ ಮುಳುಗದ ಸೇತುವೆ ಕಟ್ಟಬೇಕು..
ನಿನ್ನ ಜೊತೆಯಿದ್ದಾಗಲೆಲ್ಲ ಬೇಗನೆ ಸರಿವ
ಆ ಕಾಲದ ಕೈಕಾಲುಗಳ ಬಿಗಿದು
ಬೆಂಕಿ ಹಚ್ಚಿ  ಛಳಿ ಕಾಯಿಸಿಕೊಳ್ಳಬೇಕು..
ನೀನಿದ್ದೆಡೆಯೆಲ್ಲಾ ತಂಗಾಳಿಯೇ ಬೀಸುವಂತೆ
ಹಗಲಿಡೀ ಬೆಳದಿಂಗಳಿರುವಂತೆ,
ವರ್ಷವಿಡೀ ಹೂವುಗಳರಳುವಂತೆ,
ಅನುಗಾಲವೂ ಇಬ್ಬನಿ ಉದುರುವಂತೆ
ಸೃಷ್ಟಿಕರ್ತನಿಗೆ ಶಿಸ್ತಾಗಿ ಹೇಳಿಬಿಡಬೇಕು...
ನನ್ನೊಲವೇ...
ನಿನ್ನ ಒಂದು  ನಗುವಿಗೆ ಇಷ್ಟು ಸಾಕಲ್ಲವೇ?
ಕೇಳಿ ಹೇಳು..ಆ ನಿನ್ನ  ಹುಚ್ಚುಖೋಡಿ ಮನಸು ???

Monday, 26 February 2018

ಹುಚ್ಚುಖೋಡಿ ಮನಸು-೭

ನಿನ್ನ ಭವಿಷ್ಯದ ಹಾದಿಯುದ್ದಕ್ಕೂ
ನನ್ನ ಆಯಸ್ಸನ್ನು ಹಾಸಿಬಿಡುತ್ತೇನೆ..
ನಿನ್ನ ಒಂದೊಂದು ಕಂಬನಿಗೂ
ನನ್ನ ಎದೆ ಬಟ್ಟಲನ್ನೇ ಇಡುತ್ತೇನೆ..
ನನ್ನದೆಯ ಕದದ ಕೀ ನಿನ್ನದೇ
ನನ್ನ ಮನದ ಬಯಲೂ ನಿನ್ನದೇ
ನನ್ನ ಬದುಕಿನ ಹೊಲದ ತುಂಬೆಲ್ಲಾ
ನಿನ್ನ ಕನಸಿನ ಬೀಜಗಳನ್ನೇ ಬಿತ್ತುತ್ತೇನೆ..
ಬೆಳೆಯೋಣ ಬಾ ಒಲವೇ..
ತುಂಬು ಜೀವನದ ಹುಲುಸು ಫಸಲು!!!
ನಿನ್ನ ಮಡಿಲ ತುಂಬ ಅದೇ ಹೊಲದ
ಕಾಳುಕಡಿಗಳ ಉಡಿಯಕ್ಕಿ..
ನಿನ್ನ ಬದುಕ ತುಂಬ ಬರೀ ಗೆಲುವಿನ
ನಗೆ ಹರಿಯಲಿ ತೆರೆಯುಕ್ಕಿ..
ಸೋಲು?...ಸಾವಿಗಿರಲಿ ಬಿಡು!
ಬದುಕಾಗಲಿ ಬಿಡು ಚಂದದ ಒಲವ ಕನಸು!
ಏನಂದೀತು? ನಿನ್ನ ಹುಚ್ಚುಖೋಡಿ ಮನಸು??


Saturday, 24 February 2018

ಹುಚ್ಚುಖೋಡಿ ಮನಸು- ೬


ನಿನ್ನ ಎದೆಯೊಳಗಿನಿಂದ
ಜಾರಿ ಬೀಳುತ್ತಿದ್ದ
ಒಂದೊಂದು ನೆನಪುಗಳಿಗೂ
ಕಾಲಿಗೆ ಬಿದ್ದು ಬೇಡಿಕೊಂಡಿದ್ದೆ..
ನಿನಗಾಗಿ ನೂರು ಸಲ ಸೋತಿದ್ದೆ
ಸಾವಿರ ಸಾವಿರ ಸಲ ಸತ್ತಿದ್ದೆ...
ಈಗ ನೋಡು...
ನೊಂದ ಮನಸಿಗೊಂದು
ಹುಸಿನಗುವಿನ ಮುಖವಾಡ..
ನಗುವಿಗೂ ಇಲ್ಲ ಬಿಡು ಅರ್ಥ
ಇದರಲ್ಲಿಲ್ಲ ಕೇಳು ನನ್ನ ಸ್ವಾರ್ಥ!!
ನನ್ನಿಂದ ದೂರ ಹೊರಡುವ
ನಿನ್ನ ಪ್ರತಿ ಹೆಜ್ಜೆ ಗುರುತುಗಳಲ್ಲೂ
ನನ್ನ ಕಣ್ಣೀರಿನ ಒಂದೊಂದು ಹನಿ
ನಿನ್ನಿಂದ ಸಾಧ್ಯವಾದರೆ..
ಆ ನಿನ್ನ ನೆನಪುಗಳ ಹೆಜ್ಜೆಗುರುತು
ಅಳಿಸಿ ಹೋಗಿಬಿಡೇ..ಪುಣ್ಯಾತಗಿತ್ತೀ.
ಉತ್ತರಿಸುತ್ತಿಲ್ಲವೇಕೆ...
ಈ ನಿನ್ನ ಹುಚ್ಚು ಖೋಡಿ ಮನಸು?

Tuesday, 20 February 2018

ಆಶಯ......

ನನ್ನ ಈ ಕವಿತೆಯನ್ನು
ಸ್ಪರ್ಶಿಸುವ ಪ್ರತಿಯೊಂದು
ಕೈ ಬೆರಳುಗಳಿಗೂ
ಒಂದಷ್ಟು ಪ್ರೀತಿಯ ಹುಡಿ
ಅಂಟಿಕೊಂಡುಬಿಡಲಿ...
ನೋಡುವ ಪ್ರತಿಯೊಂದು
ಕಣ್ಣುಗಳಿಗೂ
ನನ್ನ ಒಲವಿನಾಳ ಗೋಚರಿಸಲಿ..
ಓದಿಕೊಳ್ಳುವ
ಪ್ರತಿಯೊಂದು ಮನಸ್ಸೂ
ಒಲವಿನ ನವಿಲುಗರಿಯಾಗಿಬಿಡಲಿ..

Monday, 19 February 2018

ಹುಚ್ಚು ಖೋಡಿ ಮನಸು-೫

ಮಾತುಗಳೆಲ್ಲವೂ
ಮೌನವ ಹೊದ್ದು ಮಲಗಿವೆ..
ನೆನಪುಗಳು ಬಂದು
ಬಡಿದೆಬ್ಬಿಸಿದರೂ ಏಳುತ್ತಿಲ್ಲ..
ಅವತ್ತು ನೀನು
ಹಚ್ಚಿಟ್ಟುಹೋದ ಹಣತೆ ಮಾತ್ರ
ಸಣ್ಣಗೆ ಎದೆಗೂಡಿನಲ್ಲಿ ಉರಿಯುತ್ತಿದೆ..
ನೀನು ಹನಿಸಿದ ಕಂಬನಿಯ ಬಿಂದು
ನನ್ನ ಮುಂಗೈ ಮೇಲೆ ಹಾಗೇ ಇದೆ..
ನನ್ನ ಬಿಟ್ಟು ಬದುಕಬಲ್ಲೆನೆಂಬ
ನಿನ್ನ ಹುಂಬತನದ ನವಿಲಿಗೆ
ಕಡೆಯದಾಗಿ ಒಂದೇ ಮಾತು ಹೇಳಲಾ?
ನೀನು ಹಚ್ಚಿದ್ದ ಹಣತೆಯ ಬೆಳಕಲ್ಲೇ
ಗೋರಿ ತೋಡುತ್ತದೆ ಬಿಡು ಈ ರಾತ್ರಿ
ನನ್ನ 'ಹುಚ್ಚು ಖೋಡಿ ಮನಸು' !!!

Thursday, 15 February 2018

ಹುಚ್ಚುಖೋಡಿ ಮನಸು -೪

"ಇಳಿ ಸಂಜೆಯ ತಿಳಿ ಮೌನ"…

ಕಡಲ ಮುಂದೆ
ನನ್ನ ಹೆಗಲಿಗೆ ನೀನು ಒರಗಿ
ಕೂತಿದ್ದನ್ನು ನೆನೆದು
ಹೃದಯ ಕೊರಗುತ್ತಿದೆ ..
ಪ್ರಾಣ ಬಿಡುವವರೆಗೂ
ನೀನು ಬಿಡುಅಂದರೂ ಬಿಡಲೊಲ್ಲೆ ಎಂದು
ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ
ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .

ಇಳಿ ಸಂಜೆಯ
ತಿಳಿ ಮೌನದಲ್ಲಿ
ನೀನು ಆಡಿದ ಮಾತುಗಳನ್ನೆಲ್ಲಾ
ಅಲೆಗಳು ಕೂಗಿ ಹೇಳಿದಂತಿದೆ ..
ದಡದಲ್ಲಿ ನಾವಿಬ್ಬರೂ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ ..

ನಾನೇಕೆ ನಿನ್ನ ಬಳಿ ಬಂದೆ
ನೀನ್ಯಾಕೆ ನನ್ನ ಬಿಟ್ಟು ಹೋದೆ
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ
ಎದೆಗೆ ಯಾರೋ ತಿವಿದಂತಿದೆ
ಆ ನೋವಿನಲ್ಲೇ ಬರೆದ ಸಾಲುಗಳಿಂದಲೇ
ನಾನು ‘ಕವಿ’ಯಾದಂತಿದೆ.

××××××××××××××××××××

೧.
ನಿನ್ನನು ಮರೆತು ಬಿಡೋಣ
ಅನ್ನುವಷ್ಟರಲ್ಲಿ
ಹೃದಯದಲ್ಲಿ ನಿನ್ನ ನೆನಪುಗಳ
ಪಥಸಂಚಲನ !

೨.
ನಿನ್ನ ನೆನಪುಗಳನ್ನು
ಹೊದ್ದು ಮಲಗಿದ್ದ ನನಗೆ
ಆಸರೆಯಾಗಿದ್ದು ಗಲ್ಲದ ಮೇಲೆ
ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು

೩.
ನೀನಾಡಿದ ಮಾತುಗಳೆನ್ನಲ್ಲಾ
ನಾನು ಸಂಗ್ರಹಿಸಿದ್ದೇನೆ.
ಒಂದು ಹೊತ್ತಿಗೆ ಹೊರತರಿಲಿದ್ದೇನೆ
“ಮೌನದೊಳಗಿನ ಮಾತುಗಳು ” ಎಂಬ
ಶೀರ್ಷಿಕೆಯಡಿ


ಅವಳ ಮೌನದೊಳಗೆ
ನನ್ನ ಮಾತು ಕೇಳಿಸಲೇ ಇಲ್ಲ
ಅಷ್ಟು ಸದ್ದು ಮಾಡಿತ್ತು ಅವಳ ಮೌನ !

ಅಲ್ಲೆಲ್ಲೋ ನನ್ನ ಹುಚ್ಚುಖೋಡಿ ಮನಸು
ಸದ್ದಿಲ್ಲದೆ ಕರಗಿ ಸತ್ತಿತ್ತು!!!

Tuesday, 13 February 2018

ಹುಚ್ಚು ಖೋಡಿ ಮನಸು -೩

ಕೈ ಬಳೆಯ ದನಿ ಕಾಲ್ಗೆಜ್ಜೆಯ ಸಪ್ಪುಳ
ಮುಡಿದ ಹೂವ ದಂಡೆಯ ಘಮಲು
ಸಾವಿರ ದೀಪ ಒಮ್ಮೆಗೇ ಬೆಳಗಿದಂಥ
ಫಳ್ಳನೆಯ ತುಂಟ ನಗು..
ಸತ್ತ ಹೆಣಕ್ಕೂ ಜೀವದಾಸೆ ಹುಟ್ಟಿಸುವ
ಮಧುರ ಸವಿಯ ಮಾತು..
ನಡೆದರೆ ಜೀವ ದ್ರವ್ಯದ ಹೊನಲು
ಕುಳಿತರೆ ಪಾರಿಜಾತ ಗಿಡದ ಟಿಸಿಲು
ಈ ಜೀವಕ್ಕಿಷ್ಟು ಸಾಕು ಬಿಡು
ಅಂದುಕೊಂಡು...ಬಾಚಿ ತಬ್ಬ ಹೋದರೆ,
ಅಲ್ಲೇನಿದೆ?...ಬರೀ ಬಟ್ಟ ಬಯಲು!
ಮುಡಿಯಿಂದುದುರಿದ ಹೂಗಳ ಘಮಲು!
ನನ್ನೊಲವೇ....
ಕಾಲವನ್ನೂ ನಿಲ್ಲಿಸುವೆ ನಿನ್ನ ಕಾಲ ಬಳಿ
ಕೊಡು ಒಂದೇ ಒಂದು ತಬ್ಬುಗೆಯ ಉಂಬಳಿ!
ಓದಿಕೋ....
ನನ್ನ ಹುಚ್ಚುಖೋಡಿ ಮನಸಿನ ಕಳಕಳಿ!

Monday, 12 February 2018

ಹುಚ್ಚು ಖೋಡಿ ಮನಸು -೨

ಆ ಹೆಪ್ಪುಗಟ್ಟಿದ ಮೌನದಲ್ಲೂ
ಬೇಸರ ಬರದಂತೆ...
ನೆತ್ತಿ ಸುಡು ಬಿಸಿಲಲ್ಲೂ
ಪಾದ ತಂಪು ಮಾಡುತ್ತ..
ಕಣ್ಣಲ್ಲಿ ಬಿದ್ದ ಧೂಳ ಕಣವನ್ನು
ಲಂಗದ ತುದಿಯಿಂದ
ಎಳೆಮಾಡಿ ತೆಗೆದು
ಸೆರಗನ್ನು ಇಬ್ಬರ ತಲೆಗೂ
ಹೊದಿಸಿದವಳು!!

ನಿನ್ನೆಯ ಅನುಭವದ ಜೊತೆ
ಇಂದಿನ ವಾಸ್ತವ ಬೆರೆಸಿ...
ನಾಳೆಯ ಭರವಸೆಯ ಬಿತ್ತಿ
ಬದುಕ ಪ್ರೀತಿಸ ಹೇಳಿ...
ಅಲ್ಲೆಲ್ಲೋ ಹಾರುತ್ತಿದ್ದ
ಜೋಡಿ ಗುಬ್ಬಿಗಳ ತೋರಿ...
ಏನೋ ಹೇಳಹೊರಟು
ತುಟಿಕಚ್ಚಿ,ಅರ್ಧಕ್ಕೆ ನಿಲ್ಲಿಸಿದವಳು!!

ನೀನೇನು ಭ್ರಮೆಯಾ?
ನಿನ್ನದೇನು ಬರೀ ಕಲ್ಪನೆಯಾ?
ಬಿಗಿಹಿಡಿದು ಕೇಳಿದ್ದಕ್ಕೆ-
ಭ್ರಮೆ ಮತ್ತು ವಾಸ್ತವಗಳ
ಮುಖಾಮುಖಿ ಅಂದವಳು!!!
ಸಿಗದ ಅರ್ಥವನ್ನು ಹುಡುಕುತ್ತಿತ್ತು
ನನ್ನ ಹುಚ್ಚುಖೋಡಿ ಮನಸು!!!


Friday, 9 February 2018

ದೀಪ

ದೀಪ
ಹಚ್ಚಿದ ಹೆಂಗಸೇ..
ನಿನಗೊಂದು ಮಾತು,
ಬೆಳಗಲು ಬಿಡು
ನೀ ಹಚ್ಚಿದ ದೀಪದ
ಪೂರ್ಣ ಬೆಳಕ!
ನಿನ್ನ ಹಿಂದಿನ
ನೆರಳ ಕತ್ತಲ ತನಕ!
ದೀಪಕ್ಕೋ..
ಗಾಳಿಗೆ ನಂದುವ ಭಯ
ತೈಲ ತೀರಿತೆಂಬ ಭಯ
ಬತ್ತಿ ಸವೆಯಿತೆಂಬ ಭಯ
ಭಯವಿಲ್ಲದಾವುದುಂಟು?
ಕತ್ತಲಿಗೂ
ತನ್ನ ನಶ್ವರತೆಯ ಭಯ
ಬೆಳಕಿಗೂ
ಏಕತಾನತೆಯ ಭಯ!!!

ಹುಚ್ಚುಖೋಡಿ ಮನಸು - ೧

ಅವತ್ತು ನೀನು..
ನನ್ನ ಕನಸಿನ ಕದ ತಟ್ಟಿದ್ದೆಯಲ್ಲವೇ?
ತೆರೆದು ನೋಡಿದರೆ
ನೀನಿಲ್ಲದ ಬಯಲು!
ಅಲ್ಲೆಲ್ಲೋ ಒಂದು
ಕುಂಟಗುಬ್ಬಿಯ ಚೀತ್ಕಾರ...
ಮುದಿ ನಾಯಿಯೊಂದರ ಊಳು!
ಹೊತ್ತಾರೆಯೆದ್ದು ನೋಡಿದರೆ,
ನನ್ನ ಹೃದಯ ಪುಷ್ಪದ
ಮೇಲೊಂದು ಇಬ್ಬನಿ...
ಅದರಲ್ಲೇ ನಿನ್ನ ಹೆಸರಿತ್ತು ನೋಡು!
ಸೂರ್ಯ ಬರುವ ಮುನ್ನ
ಎತ್ತಿಟ್ಟುಕೋ ನನ್ನಾ..
ಕೂಗಿತ್ತು ನಿನ್ನ ಹುಚ್ಚು ಖೋಡಿ ಮನಸು!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...