Monday, 21 February 2022

ಕೇಳಿಸಿಕೋ...


ಹೇ ಪರಮಾತ್ಮಾ...

ದನಿಯಿದ್ದವರೆಲ್ಲಾ ನಿನ್ನನ್ನು

ಇಂಪಾಗಿಯೋ ಸೊಂಪಾಗಿಯೋ

ಪ್ರಾರ್ಥಿಸಿ,ಬೇಡಿಕೊಳ್ಳುತ್ತಾರೆನೋ!

ದನಿಯಿಲ್ಲದ ಜೀವಿಗಳೂ ಕೂಡ

ನಿನ್ನವೇ ಸೃಷ್ಟಿಯಲ್ಲವೇ..?

ಅವುಗಳ ಪ್ರಾರ್ಥನೆಗಳನ್ನೊಮ್ಮೆ

ಕೇಳಿಸಿಕೋ..ನಿನ್ನ ಹೃದಯಕ್ಕೆ ಇಳಿಸಿಕೋ!!

ಪ್ರಾರ್ಥನೆ...


ಸಾವಿನ ವಿಚಾರ ಇರಲಿ,

ಬದುಕು ಕೇಳುವ ಪ್ರಶ್ನೆಗಳಿಗೆ

ಉತ್ತರಿಸಲಾರೆಯಾ ಭಗವಂತಾ?

ಪೂಜಿಸು ಎಂದೆ, ಆರಾಧಿಸಿದೆ.

ಬೇಡಿಕೋ ಎಂದೆ,ಅಂಗಲಾಚಿದೆ.

ಈಗ ಮೋಕ್ಷ-ವಿಮುಕ್ತಿಗಳೆಂಬ

ಕೆಲಸಕ್ಕೆ ಬಾರದವುಗಳ ಅಮಿಷವೊಡ್ಡಿ

ನನ್ನ ಬದುಕಿನ ದಾರಿ ತಪ್ಪಿಸಿರುವೆ.

ಸಾವಿನ ಭಯವನ್ನೂ ಹುಟ್ಟಿಸಿರುವೆ.

ನ್ಯಾಯಾಧಿಪತಿಯಂತೆ ನೀನು ಸಮಸ್ತಕ್ಕೆ

ನ್ಯಾಯವಾ ಇದು? ನೀನೇ ಹೇಳಿಬಿಡು!

ಕತ್ತಲು..


 ಹೋಯ್ ಕತ್ತಲೇ...

ನಿನಗೆ ಮಾತು ಬರದೇ ಇದ್ದದ್ದೇ 

ಒಳ್ಳೇದಾಯಿತು ನೋಡು!

ನನ್ನ ನಿದ್ದೆಯಿಲ್ಲದ ರಾತ್ರಿಗಳಲ್ಲೆಲ್ಲಾ

ನನ್ನ ನೋವುಗಳ ಬಗ್ಗೆ ಚರ್ಚೆಯಾಗದು!

ಅದಿರಲಿ...

ರಾತ್ರಿಯ ಪಿಸುಮಾತುಗಳಿಗೆ,

ಎದೆ ಹಿಂಡುವ ನರಳಿಕೆಗಳಿಗೆ

ಅಪ್ಪಿತಪ್ಪಿಯೂ ಕಿವಿಗೊಡಬೇಡ.

ಅವುಗಳ ಹಿಂದೆಲ್ಲಾ ದೊಡ್ಡ ಕಥೆಗಳಿವೆ!

ಸಾಧ್ಯವಾದರೆ,ಯಾವಾಗಲೋ ಒಮ್ಮೆ

ಜೊತೆಯಾಗುವ ಕನಸುಗಳಿಗೆ

ತಣ್ಣನೆಯ ಗಾಳಿಯ ಬೀಸಲು ಬಿಡು.

ಸದ್ದಿಲ್ಲದೆ, ನಗುವ ಚುಕ್ಕಿಗಳನ್ನು ಎಣಿಸು.

ಮತ್ತು...

ಕತ್ತಲ ಸರಿಸಲೆತ್ನಿಸಿ ಸೋತಿರುವ

ಚಂದಿರನ ಕಪಾಳಕ್ಕೊಮ್ಮೆ ಬಾರಿಸು!


Sunday, 13 February 2022

ಕೊನೆಯದಾಗಬೇಕು

 

ಇನ್ನಾವ ಮಾತುಗಳೂ

ಬೀಳದ ಕಿವಿಯಲ್ಲಿ

ನಿನ್ನ ದನಿಯೇ ಕೊನೆಯಾಗಬೇಕು.

ಮರಗಟ್ಟಿರುವ ನನ್ನ ಕೈ ತೊಗಲಿಗೆ

ನಿನ್ನ ಸ್ಪರ್ಶವೇ 

ಕೊನೆಯ ಸಂವೇದನೆಯಾಗಬೇಕು.

ನನ್ನ ಮೂಗು ಎಳೆವ ಕೊನೆಯುಸಿರಿಗೆ

ನಿನ್ನ ಮೈಯ ಘಮಲು ಬೆರೆಯಬೇಕು.

ಕಣ್ಣುಮುಚ್ಚುವ ಮುನ್ನ ಎದುರಿಗೆ

ನಿನ್ನ ತುಂಬಿದ ಕಣ್ಣು ಕಾಣಬೇಕು.

ಹೆಣಗಳು - ಕನಸುಗಳು!


 ಈ ರಾತ್ರಿಯಾದರೆ ಸಾಕು ;
ಖಾಲಿಯಾಗಿಬಿಡುತ್ತದೆ ಸ್ಮಶಾನ!
ಹೆಣಗಳಿಗೆಲ್ಲ ಜೀವ ಬಂದು,
ಕವಿತೆಗಳಾಗಿ ಹಾರಾಡತೊಡಗುತ್ತವೆ!
ಮಲಗಿದವರ ನಿದಿರೆಯ ಕನಸುಗಳಾಗಿ,
ಜೊಂಪಿನಲ್ಲಿಯೇ ಕನವರಿಕೆಗಳಾಗಿ
ನಗು-ಅಳುಗಳ ಮೂಲಕ 
ಜೀವಧಾತುಗಳಾಗಿ ರಾತ್ರಿಯನ್ನು
ತೇಲಾಡಿಸಿಬಿಡುತ್ತವೆ - ಮುಳುಗಿಸುತ್ತವೆ!
ನಾನೂ ಕರೆಯುತ್ತೇನೆ, ಆವಾಗವಾಗ ;
ಒಂದಷ್ಟು ಹೆಣಗಳನ್ನು , 
ನಿದ್ದೆ ಬರದ ಹೊತ್ತಲ್ಲಿ , ಟೈಂಪಾಸಿಗೆ!
ಅವುಗಳ ಕಥೆ ಕೇಳಿ, ನಗುತ್ತೇನೆ- ಅಳುತ್ತೇನೆ!
ಕೊನೆಗೆ ಇಂಥದೊಂದು ಕವಿತೆ ಬರೆಯುತ್ತೇನೆ!

Monday, 24 January 2022

ನನ್ನೂರ ತೇರು!


 ತೇರನ್ನೇನೋ ಎಳೆದು ನೆಲೆಗೆ ನಿಲ್ಲಿಸಲಾಗಿದೆ.ಅದು ಹುಟ್ಟು ಹಾಕಿದ ಮನಸ್ಸಿನ ತಲ್ಲಣದ ಮೆರವಣಿಗೆ ಮಾತ್ರ ಇನ್ನೂ ನಡೆಯುತ್ತಲೇ ಇದೆ!

ನನ್ನೂರಿನ "ಹಾಲಪ್ಪಜ್ಜನ ಜಾತ್ರೆ" ಯು ಸಂಸ್ಕೃತಿ,ಸಹಬಾಳ್ವೆ , ಸಮೈಕ್ಯತೆಗಳ ಸಂಭ್ರಮವಾಗಿತ್ತಾ? - ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲಿಲ್ಲ.


ಎಳೆಯ ವಯಸ್ಸಿನ ಹುಡುಗರೆಲ್ಲಾ ಕುಡಿದು,ತೂರಾಡುತ್ತ ಕುಣಿದದ್ದು ಸಂಸ್ಕೃತಿಯಾ? ಎಲ್ಲಿ ನೋಡಿದರೂ ಬರೀ ಕುಡುಕರದ್ದೇ ಜಾತ್ರೆ!

ಜಾತಿ ವೈಷಮ್ಯದ ಹೊಗೆಯು ಆವಾಗವಾಗ ಎದ್ದು ಉರಿದದ್ದು ಅದೆಂಥಾ ಸಹಬಾಳ್ವೆ?

ಉಳ್ಳವರಿಗೊಂದು-ಇಲ್ಲದವರಿಗೊಂದು ಬಗೆವ ಈ ಜಾತ್ರೆಯಲ್ಲಿದ್ದದ್ದು ಅದೆಂಥಾ ಸಮೈಕ್ಯತೆ? 

ಆರತಿ ಹಿಡಿದವರ ಸಾಲಲ್ಲಿ ಹಳೆಯದೊಂದು ಸೀರೆಯುಟ್ಟು ಮುದುಡಿ ಕುಳಿತಿದ್ದ ಆ ಬಡಬಾಲೆಯ ಕಣ್ಣನೋಟ...

ಗುಡಿಯೊಳಗೆ ಹೋಗಲಾಗದೆ,ಹೊರಗೆಯೇ ಕೈಮುಗಿದು ಕಣ್ಣಲ್ಲಿ ತೊಟ್ಟಿಕ್ಕಿದ ಕಂಬನಿ ಹನಿಗಳನ್ನೊರೆಸಿಕೊಂಡ ತಳಜಾತಿಯ ಆ ತಾಯಿಯೊಬ್ಬಳ ನಿಟ್ಟುಸಿರು...

ಬಳೆಯಂಗಡಿಯು ಮುಂದೆ ಬರಿಗೈಲಿ ಬಳೆಗಳೆಡೆ ನೋಡುತ್ತ ನಿಂತ ಆ ಸಣ್ಣ ಹುಡುಗಿಯೊಬ್ಬಳ ಎದೆಯ ಕುದಿ...


ದೇಹ-ಮನಸ್ಸುಗಳೆರಡೂ ದಣಿವು,ಜಿಗುಪ್ಸೆಗಳಿಂದ ಕದಡಿ ಹೋಗಿಬಿಟ್ಟಿದೆ.

I wouldn't let myself get into this again..No NOMORE .. NEVER! 

ಮಾರಾಟವಾಗುತ್ತಿರುವ ಬಡವರ ಆಶ್ರಯಮನೆಗಳು!


 ರೈತರ ಸುಗ್ಗಿ ಒತ್ತಟ್ಟಿಗಿರಲಿ..ಈ ಜನಪ್ರತಿನಿಧಿಗಳಿಗಂತೂ ಇದು ಸುಗ್ಗಿಯ ಕಾಲ! ಪಂಚಾಯತಿ ಮೆಂಬರುಗಳಿಂದ ಹಿಡಿದು,ಮಂತ್ರಿ-ಶಾಸಕನವರೆಗೂ ಇರೋ ಬರೋ ಸ್ಕೀಮುಗಳಲ್ಲೆಲ್ಲಾ ದುಡ್ಡು ಬಾಚಿಕೊಳ್ಳುವ 'ಕಟಾವು' ಸಮಯ!

             ಈ ಬಡವರಿಗಾಗಿ ಇರುವ "ವಸತಿ" ಯೋಜನೆಯನ್ನೇ ತೆಗೆದುಕೊಳ್ಳಿ. ಎರಡು ಲಕ್ಷದ ಈ ಸ್ಕೀಮಿಗೆ ಫಲಾನುಭವಿಗಳು,ತಮ್ಮ ಪಂಚಾಯತಿ ಮೆಂಬರುಗಳಿಗೆ ಬರೋಬ್ಬರಿ 30 ರಿಂದ 40 ಸಾವಿರ ಕೊಡಲೇಬೇಕು! ನನ್ನೂರಿನಲ್ಲಂತೂ ಆ ಬಡ ಫಲಾನುಭವಿಗಳು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.ಎಲ್ಲಿಂದ ತರಬೇಕು ಅವರು ಆ ದುಡ್ಡನ್ನು? 

           ಮೊನ್ನೆ ತಾನೇ ಎಮ್ಮೆಲ್ಸಿ ಎಲೆಕ್ಷನ್ನಿನಲ್ಲಿ 60-70 ಸಾವಿರ ಬಾಚಿಕೊಂಡಿದ್ದ ಈ ಪಂಚಾಯತಿ ಮೆಂಬರುಗಳಿಗೆ ಕನಿಷ್ಠ ಮಾನವೀಯತೆ ಇಲ್ಲವೇ? ಜಾತಿ-ಸಮುದಾಯ-ಗುಡಿಗಳ ಹೆಸರಿನಲ್ಲಿ ಅಷ್ಟೋ ಇಷ್ಟೋ ದುಡ್ಡು ಕೊಟ್ಟು , ಒಂದಷ್ಟು ಚಿಲ್ರೆ ಹಂಚಿ,ಎಣ್ಣೆ ,ಕೋಳಿ, ಮಂಡಕ್ಕಿ ಹಂಚಿ ಗೆದ್ದವರಿಗೆ ಈಗ ಬಂಪರ್ ಲಾಭ! ಅಧಿಕಾರಿಗಳೂ ಇವರಿಗೆ ಬೇಕಾದಂತೆ ನಿಯಮಗಳನ್ನು ಮಾಡುತ್ತಲಿದ್ದಾರೆ!

            ಡಾ|| ಎಚ್.ಎಂ.ಎಂ. ಕಂಡಿದ್ದ "ಪಂಚಮುಖೀ ಗ್ರಾಮಾಭ್ಯುದಯ" ದ ಕನಸನ್ನು ನೆನೆದಾಗ ವಿಷಾದವೆನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ.

ಬಾಬಾ ಸಾಹೇಬರ ಸಂವಿಧಾನ ಮಾತ್ರ ನಿರ್ಲಿಪ್ತವಾಗಿ ಪಾರ್ಲಿಮೆಂಟಿನಲ್ಲಿ ಭದ್ರವಾಗಿ ಕೂತು,ಸದ್ದಿಲ್ಲದೆ ಅಳುತ್ತಿದೆ!!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...