Sunday, 6 March 2022

ದುರಂತದ ಹಂಬಲ

 ಒಂದೊಂದು ಸಲ,ಕೆಲವರಿಗೆ...

ಪ್ರೀತಿಯಷ್ಟೇ ಖುಷಿಯನ್ನು ಆ ದ್ವೇಷವೂ ಕೊಡುತ್ತದೆ.ಶಾಂತಿಗಿಂತ ಹೆಚ್ಚು ನಿರಾಳತೆಯನ್ನು ಯುದ್ಧ ಕೊಡುತ್ತದೆ.ಮಧುರ ಸಂಗೀತಕ್ಕಿಂತ ಹೆಚ್ಚು ರಂಜನೆಯನ್ನು ಈ ದೌರ್ಜನ್ಯ,ಹಿಂಸೆ,ಆಕ್ರಂದನಗಳು ಕೊಡುತ್ತವೆ.

ತಮಾಷೆ ಎನಿಸಬಹುದು ನಿಮಗೆ ;

ನೆಮ್ಮದಿಗಾಗಿ ಪರದಾಡುವಂತೆ,ದುರಂತಕ್ಕಾಗಿಯೂ ಹಂಬಲಿಸುತ್ತಾರೆ ಕೆಲವರು! 


"And two bodies ruined by a single sweetness.” - ಬರೆಯುತ್ತಾನೆ ನೆರುಡಾ!

ದುರದೃಷ್ಟವೇನು ಗೊತ್ತಾ? ಇತ್ತೀಚೆಗೆ ಇಂಥ ಮನಃಸ್ಥಿತಿಗಳು ಹೆಚ್ಚಾಗುತ್ತಿವೆ.Social Media Platform ಗಳು ಇಂತಹ ಮನಃಸ್ಥಿತಿಗಳನ್ನು Propogate ಮಾಡುತ್ತಿವೆ...ಮತ್ತು ಇದನ್ನೇ ಒಂದು ಒಳ್ಳೆಯ ಜೀವನ ಮೌಲ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಮುಂದಿನ ಸಂತತಿಗೆ ಇದು ಆದರ್ಶದ ಪಾಠವೂ ಆಗಬಹುದೇನೋ!


ಯಾರಿಗೋ ಟೋಪಿಹಾಕಿ 100 ರೂಪಾಯಿ ತೆಗೆದುಕೊಂಡು ಬಂದ ಮಗನನ್ನು ನಾವ್ಯಾರೂ ಬೈಯುತ್ತಿಲ್ಲ..'ಎಷ್ಟು ಜಾಣ' ಎಂದು ಹೆಮ್ಮೆಪಡುತ್ತಿದ್ದೇವೆ. ದೊಡ್ಡದೊಡ್ಡ Management College ಗಳಲ್ಲಿ ಜನರಿಗೆ ಯಾಮಾರಿಸಿ,ಉತ್ಪನ್ನಗಳನ್ನು ಹೇಗೆಲ್ಲಾ ಮಾರಬಹುದು ಎಂಬುದೇ Business Strategy ಯ, Ethic ಆಗಿ ಸಿಲಬಸ್ ಆಗಿ ಬೋಧಿಸಲಾಗುತ್ತಿದೆ.


         ಮತ್ತೆ ನಾವು ಮಾತ್ರ...ನಮ್ಮಗಳ ಫೇಸ್‌ಬುಕ್ -ವಾಟ್ಸಪ್ ಸ್ಟೇಟಸ್ಸುಗಳಲ್ಲಿ ಭಗವದ್ಗೀತೆ,ಉಪನಿಷತ್ತುಗಳ ಸೂಕ್ತಿಗಳನ್ನು ಹಾಕಿಕೊಳ್ಳುತ್ತಿರುತ್ತೇವೆ!

ಗಂಟು


ಅಷ್ಟು ಭಾರದ ಪ್ರಶ್ನೆಗಳ ಗಂಟನ್ನು

ತಲೆಯ ಮೇಲೆ ಯಾಕೆ ಹೊತ್ತಿರುವೆ ಗೆಳೆಯಾ?

ಅವತ್ತೊಂದಿನ ಆ 'ಉತ್ತರ'ವು ನನ್ನನ್ನು ಕೇಳಿತ್ತು!

ಅವುಗಳನ್ನು ಇಳಿಸು,ನನ್ನನ್ನು ಹೊರು ಅಂಗಲಾಚಿತ್ತು.

ಪ್ರಶ್ನೆಗಳ ಗಂಟು ಇಳಿಸಿ,ಉತ್ತರದ ಗಂಟು ಹೊತ್ತೆ!

ಉತ್ತರಗಳ ಭಾರ ತಡೆಯದೆ ಕುಸಿದು ಬಿತ್ತು ಬದುಕು..

ಈಗ ಪ್ರಶ್ನೆಗಳಿಗಾಗಿ ಅಂಡಲೆಯುತ್ತಲಿದ್ದೇನೆ...

ಕಂಡವುಗಳನ್ನೆಲ್ಲಾ ಆಯ್ದು ಗಂಟು ಕಟ್ಟುತ್ತಲಿದ್ದೇನೆ.

ಮತ್ತೆ..ನಿಮ್ಮಲ್ಲಿ ಒಂದಷ್ಟು ಪ್ರಶ್ನೆಗಳಿದ್ದರೆ ನನಗೆ ಹೇಳಿರಿ!

ಬದುಕು


ವಯಸ್ಸೇನೋ ಸಣ್ಣದೇ..

ಹೊತ್ತ ಬದುಕಿನ ಭಾರ ದೊಡ್ಡದು!

ಹೀಗೆಯೇ ಇರುತ್ತಾರೆ ಕೆಲವರು...

ಹೊತ್ತದ್ದನ್ನು ಕೈ ನೀಡಿ,ಕ್ಷಣ ಹೊತ್ತಾದರೂ

ಇಳಿಸಲಿಕ್ಕೆ ಯಾರೂ ಇಲ್ಲದವರು!


Friday, 4 March 2022

ಅಮಾಯಕರಾಗಬೇಕಿದೆ

 ನಾವು..ಈ ದೇಶದ ರಾಜಕಾರಣಿಗಳಿಂದ,ರಾಜಕಾರಣದಿಂದ ಜನಕ್ಕೆ, ಸಮಾಜಕ್ಕೆ ಏನಾದರೂ ಒಳ್ಳೆಯದಾದೀತೆಂಬ ಸಣ್ಣ ಭರವಸೆಯನ್ನೂ ಕಳೆದುಕೊಂಡು ಬಾಜೀರಾಯನ ಕಾಲವಾಯಿತು ಬಿಡಿ! In fact  ಇದು ರಾಜಕಾರಣಿಗಳಿಗೆ ಗೊತ್ತಾದ್ದರಿಂದಲೇ, ಅಭಿವೃದ್ಧಿ-ಅಭ್ಯುದಯಗಳ ಗೊಡವೆಗೆ ಹೋಗದೆ, "ಧರ್ಮ" ವೆಂಬ ಗಾಂಜಾದ ಅಮಲನ್ನು ಜನತೆಗೆ ಏರಿಸಿ,ಮರೆಸಿ,ಮಲಗಿಸಿ..ಮಲಗಿದವರ ಮೇಲೆ ಮೆರೆಯಬಹುದಾದ ಸುಲಭ-ಸರಳ,ಖರ್ಚಿಲ್ಲದ ದಾರಿ ನೋಡಿಕೊಂಡಿದ್ದಾರೆ! 

             Social Media ದ ಈ ಜಮಾನದಲ್ಲಿ ದೇಶದಲ್ಲಿ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಏನಾದರೂ ಪ್ರತಿಕ್ರಿಯೆ ಕೊಟ್ಟು ನಾವು ದೊಡ್ಡ ತೋಲಪ್ಪಗಳಾಗುವ ಧಾವಂತಕ್ಕೆ ಬಿದ್ದುಬಿಟ್ಟಿದ್ದೇವೆ ನಾವೆಲ್ಲ! ಮನಸ್ಸುಗಳ ನೆಮ್ಮದಿಗೆ ಕಲ್ಲು ಹಾಕಿಕೊಂಡು ಕ್ಷುದ್ರರಾಗುತ್ತ..ನಮ್ಮ ಭವಿಷ್ಯದ ಸಂತತಿಗಳ ಬಾಲ್ಯಕ್ಕೂ ಮುಳ್ಳುಗಳಾಗುತ್ತಿದ್ದೇವೆ. 

           Yes...ನಾವು ಅಜ್ಞಾನಿಗಳಾಗಬೇಕಿದೆ... ಅಮಾಯಕರಾಗಬೇಕಿದೆ..ಮುಗ್ಧರಾಗಬೇಕಿದೆ..ಅಯೋಗ್ಯರಾಗಬೇಕಿದೆ. ಇಲ್ಲದೇ ಇದ್ದರೆ, ನಾವು ರಾಜಕಾರಣಿಗಳು ಹಚ್ಚುವ ಬೆಂಕಿಗೆ ಉರುವಲುಗಳಾಗಿ ಉರಿದು ಬೂದಿಯಾಗುತ್ತೇವಷ್ಟೇ!

Old People of Makunti

 

ಈ Research Thesis ಗಳನ್ನು ಓದೋದೆಂದರೇನೆ ಪರಮ ಹಿಂಸೆ. ನಿರ್ಭಾವುಕ ಭಾಷೆ,ನಿರ್ಜೀವವೆನಿಸುವ presentation ಗಳು ಬೋರೆನಿಸುತ್ತವೆ. Offcoz ಆ thesis ನ್ನು ಬರೆದವರನ್ನು ಬಿಟ್ರೆ ಬೇರೆಯವರು ಓದೋದೇ ಕಡಿಮೆ.
          ಡಾ|| ಎಚ್.ಎಂ.ಎಂ.ರವರ "The Old People of Makunti" ಪುಸ್ತಕ ಮಾತ್ರ ಇದಕ್ಕೆ ಹೊರತಾಗಿದೆ. 2-3 ಸಲ ಓದಿದರೂ ಓದಬೇಕೆನಿಸುವ ಪುಸ್ತಕವಿದು. ಕನ್ನಡದ ಅಕ್ಷರ ಲೋಕದಲ್ಲಿ Gerentrology(ವೃದ್ಧರ ಅಧ್ಯಯನ ಶಾಖೆ)ಗೆ ಸಂಬಂಧಿಸಿದಂತೆ ಬಂದ ಮೊದಲ ಪುಸ್ತಕ.ವೃದ್ಧರನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಕ್ಷೇತ್ರಾಧ್ಯಯನ ಮಾಡಿ ಬರೆದ ಏಕೈಕ ಪುಸ್ತಕ.ಕರ್ನಾಟಕದಲ್ಲಷ್ಟೇ ಅಲ್ಲ ಭಾರತೀಯ ಸಮಾಜಶಾಸ್ತ್ರ ಕ್ಷೇತ್ರಕ್ಕೂ ಇದು  ಮೈಲಿಗಲ್ಲೇ!
       ಧಾರವಾಡದಿಂದ 10km ದೂರದ ಮಾಕುಂಟಿ ಎಂಬ ಹಳ್ಳಿಯ ವೃದ್ಧರನ್ನು ಸತತ 3 ವರ್ಷಗಳ ಕಾಲ ಅಧ್ಯಯನ ಮಾಡಿ(1963-66) ಅವರ ಸಾಮಾಜಿಕ ಮಹತ್ವವನ್ನು ಜಗತ್ತಿನೆದುರು ಡಾ|| ಎಚ್.ಎಂ.ಎಂ.ತೆರೆದಿಟ್ಟಿದ್ದಾರೆ.ಅಲ್ಲಲ್ಲಿ ಮಧುರ ಹಾಸ್ಯದ ನಿರೂಪಣೆ,ಅವರೇ ಕೈಯಾರೆ ಬಿಡಿಸಿದ ರೇಖಾಚಿತ್ರಗಳು..ಪುಸ್ತಕವನ್ನು ಓದಿಸುತ್ತವೆ.
         ಪ್ರಸ್ತುತ ಈ ಪುಸ್ತಕ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳ ಲೈಬ್ರರಿಗಳಲ್ಲಿದೆ. ಅದರ ಕನ್ನಡ ಆವೃತ್ತಿಯೂ ಇದೆ.(ಸಂಡೂರಿನವರೊಬ್ಬರು ಮಾಡಿದ್ದಾರೆ)  Online ನಲ್ಲಿ Google books,amazon, Penguin, Bantom ಗಳಲ್ಲಿ ಲಭ್ಯವಿದೆ.
ನೀವೂ ಓದಬಹುದು.

ನಂಬಿಗಸ್ತ


ಬದುಕು ಕೇಳುವ

ಸಾವಿರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ

ಜೀವವು ತತ್ತರಿಸಿದಾಗಲೆಲ್ಲಾ

ಆ ಸಾವು ಮಾತ್ರ

ಉತ್ತರ ನನ್ನಲ್ಲಿದೆ ಎಂದು

ಕೈ ಎತ್ತಿ ಮುಂದೆ ಬರುತ್ತದೆ!

ಬದುಕ ಬಯಲಿನಲ್ಲಿ

ಸಾವಿನೂರಿನ ದಾರಿಯನ್ನು 

ಹುಡುಕಲೇನು ಕಷ್ಟವೇನು?

ಬದುಕು ಕತ್ತಲು ಹೊದ್ದಾಗಲೆಲ್ಲಾ

ಸಾವು,ಬೆಳಕಿನಲ್ಲಿ ಫಳ್ಳನೆ ಮಿಂಚಿಬಿಡುತ್ತದೆ!

ಕೈ ಹಿಡಿದರೆ,ಬಿಟ್ಟಿತೇನು ಸಾವು?

ಬಯಲು


ಸರಿ - ತಪ್ಪುಗಳಾಚೆಗೆ,

ಪಾಪ - ಪುಣ್ಯಗಳಾಚೆಗೆ

ಸ್ವರ್ಗವೂ ಅಲ್ಲದ,ನರಕವೂ ಅಲ್ಲದ

ವಿಶಾಲ ಬಯಲೊಂದಿದೆ ಕಣಾ...

ಅಲ್ಲಿ ನಾವು ಭೇಟಿಯಾಗೋಣ!

ಒಳಿತು-ಕೆಡುಕುಗಳ ಮಾಡುತ್ತ

ದಣಿದ ಇಬ್ಬರ ಜೀವಗಳೆರಡೂ

ಎದುರೆದುರು ಕೂತು,

ನಗುತ್ತಲೋ ಅಳುತ್ತಲೋ

ಮನಸಾರೆ ಮಾತಾಡಿ ದಣಿಯೋಣ!

ಹುಡುಕುತ್ತಲೇ ಇರಲಿ...


ನಾನು ನಿನ್ನನ್ನು ಜೀವನವಿಡೀ

ಹುಡುಕಿಯೇ ದಣಿದಿದ್ದೇನೆ..

ನೀನು : ನನ್ನನ್ನು ಹುಡುಕುತ್ತಿರುವೆ.

ನಮ್ಮಿಬ್ಬರನ್ನೂ ಮತ್ಯಾರೋ ಎಲ್ಲೋ

ಬಹಳವಾಗಿ ಹುಡುಕುತ್ತಲಿರಬೇಕು.

ನಾನು ನಿನಗೆ ಸಿಗಲಾರೆ,ನೀನು ನನಗೂ!

ನಾವಿಬ್ಬರೂ ಬೇರೊಬ್ಬರಿಗೂ ಸಿಗದಿರೋಣ.

ಹುಡುಕುತ್ತಲೇ ಇರಲಿ ಎಲ್ಲರೂ!

ನತದೃಷ್ಟ


ನಿನ್ನ ಅನಂತ ಬಿತ್ತರದ,ಭೂಚಪ್ಪರದ

ನೀಲ ನಭದಲ್ಲಿ ರೆಕ್ಕೆ ಬಿಚ್ಚಿ ಹಾರಲಾಗದ

ಆ ಹಕ್ಕಿ ; ಅದೆಷ್ಟು ನತದೃಷ್ಟವಿರಬೇಕೋ ಸೂಫಿ?

ನಿನ್ನ ಬೆರಗು ಭ್ರಮೆಯ

ಕೋಟಿ ಜೀವರಾಶಿಯ ಈ ಭೂಪರಿಘದೊಳಗೆ

ನಡೆಯಲುಬಾರದ 

ಆ ಉರಗ ಕುಲ ; ಎಷ್ಟು ನತದೃಷ್ಟವಿರಬೇಕೋ ಸೂಫಿ?

ನಿನ್ನ ಕಣ್ಣು ತೆರೆಸುವ,ಎದೆಯರಳಿಸುವ

ವಿಸ್ಮೃತಿಗಳನಳಸಿ,ವಿವಶಗೊಳಿಸುವ ಆ ಬೆಳಕ ಪಥದೆಡೆ

ದೃಷ್ಟಿ ನೆಡದ ನಾನು ; ಅದೆಷ್ಟು ನತದೃಷ್ಟನಿರಬೇಕೋ ಸೂಫಿ?

ಶಿವನೆಂದರೆ...


 ಎಲ್ಲವನ್ನೂ ಸೀಟಿ ಬಳಿದಾಗ ಉಳಿವ ನಿಃಶ್ಶೇಷವೇ "ಶಿವ"!

ಸರ್ವವೂ ಸುಟ್ಟು ಕರಕಲಾಗಿ ಉಳಿದ ಬೂದಿ, ಈ " ಶಿವ"!

ಶಿವನೆಂದರೆ ಸ್ಮಶಾನ...ಅವನೇ ಕಾಲಭೈರವ!

ಶಿವನೆಂದರೆ ಮರಣ...ಅವನೇ ನಿಯಾಮಕ!

ಶಿವನೆಂದರೆ ಪ್ರಳಯ...ಅವನೇ ಮಹಾರುದ್ರ!

ಅಹಂಕಾರದಲ್ಲಿ ಶಿವನಿಲ್ಲ...ಆಕಾರದಲ್ಲಿ ಅವನಿಲ್ಲ!

ಶಿವನೆಂದರೆ, ಸುರತ-ವಿರತ ನಿಸ್ಸಂಗತ್ವ!

ಶಿವನೆಂದರೆ ವಿರಕ್ತಿಯ ಪರಕಾಷ್ಠೆ..ವಿಯೋಗದ ಅಂತ್ಯಬಿಂದು!

ಶಿವನೆಂದರೆ ಪೂರ್ಣ ಶೂನ್ಯ...ಏನೂ ಇಲ್ಲದ ಅನಂತ ಬಯಲು!

ಶಿವ, ಸಂಸಾರಿಯಾಗಿಯೂ ವೈರಾಗ್ಯ ಯೋಗೇಶ್ವರ!

ಮಕ್ಕಳಿದ್ದೂ ಲೌಕಿಕದೆಡೆ ಕಣ್ಣೆತ್ತಿಯೂ ನೋಡದ ವಿಷಣ್ಣ!

ಅರೇ..ಶಿವನೆಂದರೆ ಬೇರೇನಲ್ಲ!

ಶಿವನೆಂದರೆ, ನೀವು ಮತ್ತು ನಾನು,ಎಲ್ಲರೂ!


ಜಗಜ್ಯೋತಿ ಬಸವಣ್ಣನ ಪ್ರಣೀತ ಲಿಂಗಾಯತ ಚಿಂತನೆಯ ಮೂಲವು ಆಗಮಜನ್ಯವಾದ ಶೈವ ಪರಂಪರೆಯದ್ದು! ಆಗಿನ ಶೈವವು ಜನಸಾಮಾನ್ಯರ ನಿಲುಕಿಗೆ ದಕ್ಕದೆ ದಸ್ಯುಗಳಲ್ಲಿ , ಪೈಶಾಚಿಕ ರೀತಿಯಲ್ಲಿ ಆಚರಣೆಯಲ್ಲಿತ್ತು.

           ಶೈವದಲ್ಲಿ ನಾಥ ಪರಂಪರೆ ಬಹುಜನಪ್ರಿಯ.ಅಲ್ಲಮನು ಅಲ್ಲಿದ್ದವನೇ. ಅಘೋರ,ಕಾಪಾಲಿಕ,ಚಾಂಡಾಲ,ವಿವಂಶಕ..ಮುಂತಾದ ಕವಲುಗಳಾಗಿ ಹಂಚಿದ್ದ ಇದನ್ನು ಬಸವಣ್ಣ ಗಮನಿಸಿ, 28 ಶಿವಾಗಮಗಳ ಆಧಾರದಲ್ಲಿ "ವೀರಶೈವ" ವನ್ನು ಕಟ್ಟಿದ. ಇದು 'ವಿಶಿಷ್ಟಾದ್ವೈತ' ಚಿಂತನೆಯಾಗಿ,ಆಗಮಗಳು ವಚನಗಳಾಗಿ ಸಾಮಾನ್ಯ ಜನಕ್ಕೆ ಎಟುಕಿದವು.

             ಇವತ್ತಿಗೂ ನಾಥ ಪರಂಪರೆಯ ಸಾಧುಗಳಿದ್ದಾರೆ.ಅಘೋರಿಗಳು,ಕಾಪಾಲಿಕರು,ನಾಗಾ ಸಾಧುಗಳು ಆಗಮ ರೀತಿಯಲ್ಲೇ ಶವ ಭೋಜನ,ಶವಸಂಭೋಗ,ನಿರ್ವಸನ,ನಿರ್ವಿಕಾರ ಆಚರಣೆಗಳಲ್ಲಿ ಶಿವನನ್ನು ಪೂಜಿಸುತ್ತಾರೆ. 

           'ಶಿವ'-ಎಂಬ ವ್ಯಕ್ತಿತ್ವವು ಮುಂದೆ ಚಾರ್ವಾಕ,ಸಾಂಖ್ಯ ಚಿಂತನೆಗಳ ಮೂಲದ್ರವ್ಯವಾಯಿತು. ಬೌದ್ಧ ದರ್ಮದ ಉಗಮಕ್ಕೆ ಕಾರಣವೂ ಆಯಿತು.

ಹಾಗಾಗಿ, ಶಿವ - ಬರೀ ಭಾವುಕ ಜಗತ್ತಿನ ಕಲ್ಪನೆಯಲ್ಲ.ಮೂಢ ನಂಬಿಕೆಯೂ ಇಲ್ಲ. ಪುರಾಣ-ಕಥೆಗಳ ಪಾತ್ರವಂತೂ ಅಲ್ಲವೇ ಅಲ್ಲ. ಶಿವ - ಆದಿಮ ಸಂಸ್ಕೃತಿಯ ಬೇರು. ಅಸಂಖ್ಯವಾದ ತಳವರ್ಗದ ಜನರ ಉಸಿರು. ಬಡವರ ಆಸರೆ.

             


ನಿನದಲ್ಲ...


ನನಗೆ ಗೊತ್ತು ದೇವರೇ...

ಪ್ರೀತಿಯ ಹೊರತಾದ

ಯಾವ ಧರ್ಮವೂ ನಿನಗಿಲ್ಲ!

ಮತ್ತು ;

ಹೃದಯಗಳ ಹೊರತಾದ

ಯಾವ ಗುಡಿಯೂ ನಿನದಲ್ಲ!


ರಂಗೋಲಿ


 

ಭಗವಂತಾ...
ನೀನು ಸರಿಯಾಗಿ ಎಣಿಸಿ ಇಟ್ಟ
ಸಾಲು ಚುಕ್ಕಿಗಳ ಮೇಲೆ
ಒಡಮೂಡಿದ ರಂಗೋಲಿ ನಾನು!
ಗಾಳಿಗೋ..ಪಾದ ಧೂಳಿಗೋ
ಕರಗಿ ಅಳಿಸುವ ಮುನ್ನ
ನೋಡಿದವರ ಮುಖದಲ್ಲಿ
ಅರೆಪಾವು ನಗುವರಳಿಸಿದರೆ ಸಾಕು!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...