ನಾಳೆ ಎನ್ನುವುದು
ಒಡೆದು ಓದದ ಕಾಗದ!
ನಿನ್ನೆ ಎನ್ನುವುದು
ನಾಲಗೆಯಲ್ಲಿ ಉಳಿದ
ವಿಸ್ಮಯದ ಘಮಲು!
ಮತ್ತು ಇಂದು ಎನ್ನುವುದು ;
ಮನದೊಳಗಣದ ಭಿತ್ತಿ!
ಕೆತ್ತಿದ ಕ್ಷಣಗಳೆಲ್ಲವೂ ಗತ!
ನೆನಪ ಬೀಜಗಳ ಕ್ಷತ-ಅಕ್ಷತ ಪಥ!
ಚಿಗುರೊಡೆದರೆ,ನಿನಗೆ ದಾರಿ!
ಮುರುಟಿ ಸತ್ತರೆ,ನನ್ನದೇ ದಾರಿ!
ಹೌದು,ಅದೇ 'ಹೆಜ್ಜೆ ಮೂಡದ ದಾರಿ'!
ಒಡೆದು ಓದದ ಕಾಗದ!
ನಿನ್ನೆ ಎನ್ನುವುದು
ನಾಲಗೆಯಲ್ಲಿ ಉಳಿದ
ವಿಸ್ಮಯದ ಘಮಲು!
ಮತ್ತು ಇಂದು ಎನ್ನುವುದು ;
ಮನದೊಳಗಣದ ಭಿತ್ತಿ!
ಕೆತ್ತಿದ ಕ್ಷಣಗಳೆಲ್ಲವೂ ಗತ!
ನೆನಪ ಬೀಜಗಳ ಕ್ಷತ-ಅಕ್ಷತ ಪಥ!
ಚಿಗುರೊಡೆದರೆ,ನಿನಗೆ ದಾರಿ!
ಮುರುಟಿ ಸತ್ತರೆ,ನನ್ನದೇ ದಾರಿ!
ಹೌದು,ಅದೇ 'ಹೆಜ್ಜೆ ಮೂಡದ ದಾರಿ'!
'ಇಲ್ಲೇ ಐದು ನಿಮಿಷ ಹೋಗಿಬರತೇನೆ ಅಂತ ಅವನು ಹೋದ ಕಣ. ಇವತ್ತಿಗೆ ಐನೂರು ದಿನ ಆದವು.ಬರಲೇ ಇಲ್ಲ ಹೋದವನು!' - ಅವಳು ಹೇಳುತ್ತಲೇ ಇದ್ದಳು. ತುಂಬಾ ಚಂದನೆಯ ಸಂಸಾರವಾಗಿತ್ತು ಅವಳದು. ಎರಡು ವರ್ಷದ ಹಿಂದೆ ಗಂಡ ಆ್ಯಕ್ಸಿಡೆಂಟಿನಲ್ಲಿ ತೀರಿದಾಗಿನಿಂದ ಅವಳನ್ನು ಸಂತೈಸಿ ನಾನೇ ಬೇಸತ್ತಿದ್ದೆ.
'ಈ ಇಬ್ಬರು ಮಕ್ಕಳು ಇಲ್ಲದೇ ಇದ್ದಿದ್ರೆ ನಾನೂ ಅವತ್ತೇ ಅವನ ಜೊತೆಗೇ ಹೋಗಿಬಿಡುತ್ತಿದ್ದೆ.' ಬಿಕ್ಕುತ್ತಿದ್ದಳು ಅವಳು. ಇಬ್ಬರೂ ಮಕ್ಕಳು ಆಗಲೇ ಮಲಗಿದ್ದರು.
'ಎಲ್ಲರೂ ಕ್ಯಾಲೆಂಡರಿನಲ್ಲಿ ದಿನ ಎಣಿಸ್ತಾರೆ..ನಾನು ಪ್ರತೀ ನಿಮಿಷಕ್ಕೂ ಎಣಿಸ್ತಾ ಇದೀನಿ ಕಣೋ' ಅವಳ ಅಳುವಿನ ಕಟ್ಟೆ ಒಡೆದಿತ್ತು. ನನ್ನ ಕಣ್ಣಲ್ಲೂ ನೀರು!
ಅವಳ ಗಂಡನಂತೆ, ಇಲ್ಲೇ ಒಂದು ನಿಮಿಷ ಹೋಗಿಬರತೇನೆ ಅಂದು ಶಾಶ್ವತವಾಗಿ ತಣ್ಣಗೆ ಹೋಗಿ ಬಿಡುವ ರೀತಿಯನ್ನು ನಿರ್ಲಿಪ್ತನಾಗಿ ಯೋಚಿಸಿದ್ದೆ. ಸಾವಲ್ಲೂ ಕೂಡ ಒಳ್ಳೆಯ ಸಾವು-ಕೆಟ್ಟ ಸಾವು ಇರುವುದರ ಬಗ್ಗೆ ತಮಾಷೆ ಎನಿಸಿತ್ತು.
ಅದೆಷ್ಟು ಬಾರಿ ಅವಳ ಅಳುವಿನ ನದಿಗೆ ಎದೆಯೊಡ್ಡಿದ್ದೇನೋ ಏನೋ. ಸಮಯ ರಾತ್ರಿ 2 ಗಂಟೆಯಾಗಿತ್ತು.
ಹೆಡ್ ಫೋನಿನಲ್ಲಿ...
ಜಗಜಿತ್ ಸಿಂಗ್ ಮಾತ್ರ ಹಾಡುತ್ತಲೇ ಇದ್ದ! ಆ ಘಜಲಿನಲ್ಲಿ ಬದುಕಿತ್ತಾ..ಸಾವಿತ್ತಾ...ಎಂದು ಹುಡುಕುವ ಹೊತ್ತಿಗೆ ಬೆಳಕು ಹರಿದಿತ್ತು.
ನೀನೀಗ ನನಗೆ ಮಜಾ ಅಲ್ಲ.
ನೀನೇನು ನನಗೆ ಖಯಾಲಲ್ಲ.
ನಿನ್ನನ್ನೇನು ನೂರು ಜನ ಓದಬೇಕಿಲ್ಲ.
ಓದಿದವರೆಲ್ಲ ನನಗೆ ಹೇಳುವ
ಭೋಪರಾಕುಗಳಿಂದ ಆಗಬೇಕಾದ್ದೇನಿಲ್ಲ.
ನಿನ್ನನ್ನು ಬರೆದು,ಎಲ್ಲೋ ಹಾಕಿಕೊಂಡು
ನಾನೇನು ದೊಡ್ಡ ಪೋತಪ್ಪನಾಗಬೇಕಿಲ್ಲ.
ಛಂದ-ಪ್ರಾಸಗಳ ಅಲಂಕಾರ ನಿನಗಿಲ್ಲ.
ಶಬ್ಧ-ಅರ್ಥಗಳ ಭಾರ ಹೊರಬೇಕಿಲ್ಲ.
ನೀನೇನು ವೇದಿಕೆಯ ಹಾಡಾಗಬೇಕಿಲ್ಲ.
ನೀನು ನನ್ನ ಅಂತರಂಗದ ಗೋಳೂ ಅಲ್ಲ.
ಬಹಿರಂಗದ ಬಾಯಿ ಬಡಾಯಿಯೂ ಅಲ್ಲ.
ಕವಿತೆಯೇ...
ನನ್ನಂತೆ ತುಳಿಸಿಕೊಂಡು ಅತ್ತವರ
ಅತ್ತು ಸತ್ತವರ,ಎದೆಯ ಬೆಂಕಿಯಾಗು!
ಬಡವರ ಬಟ್ಟೆಯಾಗದಿದ್ದರೂ ಚಿಂತೆಯಿಲ್ಲ.
ಅವರ ಹಸಿದ ಹೊಟ್ಟೆಯ ರೊಟ್ಟಿಯಾಗು!
ಬಿದ್ದವರ ಮೇಲೆತ್ತುವ ಬಲಗೈಯ ರಟ್ಟೆಯಾಗು!
ಜೋಲು ಮೊಲೆ ಚೀಪುವ ಕೂಸಿಗೆ ಜೋಲಿಯಾಗು.
ಬಾಯಿ ಸತ್ತವರಿಗೆ ಬಲ ತುಂಬಿ ಖಾಲಿಯಾಗು.
ಆ 'ಕಲಾಯಿಸಾಬಿ' ಅದ್ಭುತವಾಗಿ ಭಜನೆ ಹಾಡು ಹಾಡುತ್ತಿದ್ದ. ಗುಡಿಯ ಪ್ರತಿದಿನದ ಭಜನೆಯಲ್ಲಿ ಅವನ ಹಾಡು! ಅವನು ಮಸೀದಿಗೆ ಹೋಗಿದ್ದನ್ನು ನಾನೆಂದೂ ನೋಡಿರಲಿಲ್ಲ. ಅದೇ ಪೀರಲದೇವರ ಗುಡಿಯಲ್ಲೇ ಐದು ಬಾರಿ ನಮಾಜ್ ಮಾಡುತ್ತಿದ್ದ.
ಅವನ ಹೆಸರು ನೆನಪಿಲ್ಲ. ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಆ 'ಕಲಾಯಿಸಾಬಿ' ನನಗೆ ಹುಡುಕಿದರೂ ಸಿಕ್ಕಿಲ್ಲ. ಅವನ ಮಗಳು ಎಲ್ಲಾದರೂ ಸಿಕ್ಕಿದರೆ, " ಹೇಗಿದ್ದೀಯಾ ಅಕ್ಕಾ?" ಎಂದು ಪ್ರೀತಿಯಿಂದ ಮಾತಾಡಿಸಬೇಕೆಂಬ ನನ್ನ ಆಸೆ ಹಾಗೇ ಇದೆ.
ಈಗಲೂ ನನ್ನೂರಿನ ಕೆಲವು ಪಿಂಜಾರ ಮುದುಕರು ಅದ್ಭುತವಾಗಿ 'ಬಯಲಾಟ' ಕುಣಿಯಬಲ್ಲರು. ರಾಮ-ಕೃಷ್ಣ-ವಿರೋಚನ-ಕಂಸರಾಗಬಲ್ಲರು! ಒಬ್ಬ ಮುದುಕ, 'ಜೈಮಿನಿ ಭಾರತ'ವನ್ನು ಚನ್ನಾಗೇ ವಾಖ್ಯಾನಿಸಬಲ್ಲರು! ಈಗ ಅದೆಲ್ಲಾ ಇತಿಹಾಸ ಬಿಡಿ!
ಮೊದಲೆಲ್ಲಾ ಸಾಬರೂ ಊರಿನ ಹಿಂದೂ ದೇವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಯನ್ನು ಹೊರುತ್ತಿದ್ದರು.ಹಣ್ಣುಕಾಯಿ ಮಾಡಿಸಿ,ಹರಕೆ ಹೊತ್ತು ಕೈ ಮುಗಿದು ಅಡ್ಡ ಬೀಳುತ್ತಿದ್ದರು. ಲಿಂಗಾಯತರನ್ನೆಲ್ಲಾ "ಮಾವ"," ಅತ್ತೆ" ಗಳೆಂದೇ ಮಾತಾಡಿಸುತ್ತ ಅವರೊಳಗೊಂದಾಗಿದ್ದರು. ಮೊಹರಂ ನ ಚೊಂಗಿ ಅದೆಷ್ಟು ಲಿಂಗಾಯತ ಮನೆಗಳ ದೇವರ ಜಗಲಿಯಲ್ಲಿರುತ್ತಿತ್ತು!
ಊರಲ್ಲಿ ವರ್ಷಕ್ಕೊಮ್ಮೆ ಆಷಾಢದಲ್ಲಿ ಮಾಡುವ ಲಿಂಗಾಯತರೂ,ದಲಿತರೂ ಮಾಡುತ್ತಿದ್ದ ಹಬ್ಬ 'ಹೋಳಿಗೆಮ್ಮ' ನ ಹಬ್ಬವನ್ನು ಅವರೂ ಮಾಡುತ್ತಿದ್ದರು. ಕಾರಹುಣ್ಣಿಮೆಯಂದು ತಮ್ಮ ಎತ್ತುಗಳನ್ನು ಮೈ ತೊಳೆದು,ಕೋಡಿಗೆ ಬಣ್ಣ ಸವರಿ,ಶೃಂಗರಿಸುತ್ತಲಿದ್ದರು. ಸೋಮವಾರದ ದಿನ ಬೇಸಾಯ ಮಾಡುವುದು ನಿಷಿದ್ಧವಾದ್ದರಿಂದ ಆ ಕಟ್ಟಳೆಯನ್ನು ಈಗಲೂ ಅವರು ಮೀರಿಲ್ಲ.
ಕ್ರಮೇಣ ಕಾಲ ಬದಲಾಯಿತು. ಹಿರಿಯ ಪಿಂಜಾರ ಮುದುಕರು ಸತ್ತರು.ಲಿಂಗಾಯತ,ದಲಿತ ಮುದುಕರೂ ಸತ್ತರು.ಹೊಸ ತಲೆಮಾರು ಹಳೆಯ ಮೌಲ್ಯಗಳನ್ನು ಅಸಡ್ಡೆ ಮಾಡಿತು. ಊರಲ್ಲಿ ಮಸೀದಿ ಆಯಿತು.ಬೇರೆ ಊರುಗಳ,ರಾಜ್ಯಗಳ ಇತರೇ ಜನರೂ ಮಸೀದಿಗೆ ಬಂದು ಬೋಧನೆ ಮಾಡಲು ಸುರುಹಚ್ಚಿದರು. ಅಷ್ಟೂ ಕಾಲ ಪಿಂಜಾರರಾಗಿದ್ದವರು, ದಿಡೀರನೇ ಮುಸ್ಲಿಮರಾಗಿದ್ದರು!. ಮದರಸಾ ಹುಟ್ಟಿಕೊಂಡಿತು. ಯಾವುದೋ ಓಣಿಯ ತಿರುವಿನಲ್ಲಿ 'ಟಿಪ್ಪು ಸರ್ಕಲ್' ಎಂಬ ಬೋರ್ಡು ನೇತಾಡತೊಡಗಿತು. ಟಿಪ್ಪು ಜಯಂತಿಯೂ ನಡೆಯಿತು.
ಮತ್ತೊಂದೆಡೆ ಇವರಿಗೆ ಸಮಾಂತರವಾಗಿ ನಾವೂ ಕಮ್ಮಿಯಲ್ಲ ಎಂದು,ಲಿಂಗಾಯತರ ಹುಡುಗರು ಆರೆಸ್ಸೆಸ್ ಶಾಖೆಯನ್ನು ಮಾಡಿದರು.ಊರಿನ ಪ್ರಮುಖ ದೇವಸ್ಥಾನವಾದ ಹಾಲಸ್ವಾಮಿಯ ಜಾತ್ರೆಯ ಮುಳ್ಳುಗದ್ದುಗೆಯ ಮೆರವಣಿಗೆಯೂ ಮಸೀದಿಯ ಮುಂದಿನಿಂದಲೇ ಹೊರಟಿತು. ಆಗಲೂ ಕೆಲವು ಸಾಬರ ಭಕ್ತರು ಮುಳ್ಳುಗದ್ದುಗೆಯನ್ನು ಹೊತ್ತರು. "ಹಾಲೇಶ್ವರ ಭೋ ಪರಾಕ್" ನ ಘೋಷಕ್ಕೆ ದನಿಗೂಡಿಸಿದ್ದರು.
ಗಣೇಶ ಚತುರ್ಥೀಯ ಮೆರವಣಿಗೆಯು ಮಸೀದಿಯ ಮುಂದಿನಿಂದಲೇ ಹಾಯ್ದು ಹೋಗಲಾರಂಭಿಸಿತು.
ಜೈಶ್ರೀರಾಂ ಎಂಬ ಘೋಷಣೆಯು 'ಆಜಾನ್' ನಡುವೆ ಕೇಳಲಾರಂಭಿಸಿತು. ಯಾವ ಸಾಬರೂ "ಹಾಲೇಶ್ವರ ಭೋರಾಕ್" ಗೆ ದನಿಗೂಡಿಸಿದಂತೆ, "ಜೈ ಶ್ರೀರಾಂ" ನ ಘೋಷಕ್ಕೆ ದನಿಗೂಡಿಸಲಿಲ್ಲ..
ಸೋಶಿಯಲ್ ಮೀಡಿಯಾಗಳು ಹಳ್ಳಿಯ ಮುಗ್ಧ ಯುವಕರ ಮನಸ್ಸುಗಳನ್ನು ಒಡೆದಿದ್ದವು. ದರಿದ್ರ ಮಾಧ್ಯಮಗಳು ಊರಿನ ನೆಮ್ಮದಿಗೆ ಕಲ್ಲು ಹಾಕತೊಡಗಿದ್ದವು. ಮೋದಿಯ ಸರಕಾರ ಬಂದ ನಂತರದಿಂದ ಇದು ವಿಪರೀತಕ್ಕೆ ಹೋಗಿತು. ಮೋದಿಯ ಅನುಯಾಯಿಗಳೆನಿಸಿಕೊಂಡ ಹಲವು ಚಿಂತಕರು ಹಿಂದೂ ಯುವಕರ ಅಂತರಂಗದ ಕೊಳಕ್ಕೆ ಕಲ್ಲುಗಳನ್ನು ಬೀಸಿ ಬೀಸಿ ಒಗೆಯಲಾರಂಭಿಸಿದ್ದರು. ಇಷ್ಟಕ್ಕೂ ಅವರು ಕಲ್ಲುಗಳನ್ನು ಒಗೆಯಬಲ್ಲವರಷ್ಟೆ ಆಗಿದ್ದರೇ ಹೊರತು, ಅವು ಎಬ್ಬಿಸುವ ಅಲೆಗಳ ಮೇಲೆ ಅವರಿಗಾವ ಅಧಿಕಾರವೂ ಇರಲಿಲ್ಲ.
ಈಗ ನೋಡಿ...ಊರಿನಲ್ಲಿ ಸಣ್ಣ ಹಬ್ಬವಾದರೂ ಪೋಲೀಸರ ಉಪಸ್ಥಿತಿ ಬೇಕು.ಅವರು ಬಂದಾಗಲೆಲ್ಲಾ ಅವರ ಮೇಜುವಾನಿಯ ಖರ್ಚನ್ನು ನೋಡಿಕೊಳ್ಳಬೇಕು ಊರವರು.ಜಾತ್ರೆಯ ಸಂದರ್ಭದಲ್ಲಂತೂ ಇಪ್ಪತ್ತೋ ಮೂವತ್ತೋ ಸಾವಿರದ ದೊಡ್ಡ ರಖಮೇ ಪೋಲೀಸರಿಗೆ ಮೀಸಲಿಡಬೇಕು. ಚೆಂದಾಗಿ ನಡೆಯುತ್ತಲಿದ್ದ ಭಾವೈಕ್ಯದ 'ಮೊಹರಮ್' ಗೂ ಮಂಕು ಕವಿದಿದೆ.
ಎರಡೇ ದಶಕದಲ್ಲಿ ಊರೆಂಬ ಜಗತ್ತು ಹೇಗೆ ಮಗ್ಗುಲು ಬದಲಿಸಿತು ನೋಡಿ! ದೇವರನ್ನು ಮನುಷ್ಯತ್ವದಲ್ಲಿ ಹುಡುಕುವದ ಬಿಟ್ಟ ಧರ್ಮಗಳು ರಕ್ಕಸತನದಲ್ಲಿ ಹುಡುಕತೊಡಗಿದ್ದವು. ಬದುಕುವುದನ್ನೇ ಸರಿಯಾಗಿ ಕಲಿಸದ ಧರ್ಮಗಳು ಸತ್ತ ನಂತರದ ಮೋಕ್ಷದ ಬಗ್ಗೆ ಅದೇನು ತಾನೇ ಹೇಳಿಯಾವು!
ಧರ್ಮಕ್ಕಿಂತಲೂ ಬದುಕು ದೊಡ್ಡದು ಕಣ್ರೀ..ಹಳ್ಳಿಗಳ ಜನರಿಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಬೇಕಾದಷ್ಟು ವಿಷಯಗಳಿವೆ. ಅವರುಗಳ ಬದುಕುಗಳೇ ಸ್ಥಿತ್ಯಂತರ ತಪ್ಪಿವೆ.ನೀರಿಲ್ಲದೆ ಬೋರುವೆಲ್ಲುಗಳು ಬತ್ತಿವೆ. ಚೆಂದನೆಯ ಎಲೆಬಳ್ಳಿಯ ತೋಟಗಳು ಒಣಗಿವೆ.ಮಳೆ ಬಿದ್ದರೂ ಬೆಳೆಗಳು ಕೈಗೆ ಬರದೆ ವರ್ಷಕ್ಕೊಂದು ಹೊಸ ರೋಗಕ್ಕೆ ತುತ್ತಾಗುತ್ತಿವೆ. ಹೇಗೋ ಬೆಳೆ ಬಂದರೂ ಬೆಲೆ ಸಿಗಬೇಕಲ್ಲ?
ಕೈಗೆ ಬಂದ ಮಗನಿಗೆ ಹೆಣ್ಣು ಸಿಗುತ್ತಿಲ್ಲ.ಮನೆ ಕಟ್ಟಲು,ಮಗಳ ಮದುವೆಗೆ ಮಾಡಿದ್ದ ಸಾಲ ತೀರುತ್ತಿಲ್ಲ....
ಇಷ್ಟೆಲ್ಲಾ..ಚಿಂತೆಗಳ ನಡುವೆ ಈ ಧರ್ಮ ತಾಢನಗಳು!
ಅಷ್ಟೆಲ್ಲಾ ಶ್ರಮಹಾಕಿ,ಕೌರವ-ಪಾಂಡವರ ಕಲಹ ಬಗೆಹರಿಸಲೆತ್ನಿಸಿದರೂ ಕೊನೆಗೆ ಯುದ್ಧವೇ ಆಗುತ್ತದೆ. ಒಳ್ಳೆಯವರಾದ ಪಾಂಡವರ ಪರವಾಗಿ ನಿಂತು ದುಷ್ಟ ಕುರುಕುಲವನ್ನು ಧ್ವಂಸ ಮಾಡಿದ ಕೃಷ್ಣನಿಗೆ ದಕ್ಕಿದ್ದಾದರೂ ಏನು? ಗಾಂಧಾರಿಯ ಘೋರ ಶಾಪ! ಏಕಾಂಗಿಯಾಗಿ ನರಳೀ ನರಳೀ ಸಾಯುವ ಶಿಕ್ಷೆ!
ಕೊನೆಗೆ ಸ್ವಂತ ಸಹೋದರಿಯಾದ ಪಾಂಚಾಲಿಯೂ ಕೃಷ್ಣನನ್ನು ನಿಂದಿಸುತ್ತಾಳೆ.ಕುಲಘಾತಕ,ಸ್ವಾರ್ಥಿಯೆಂದು ಜರಿಯುತ್ತಾಳೆ.ಕೃಷ್ಣಕುಲವೂ ನಾಶವಾಗಲೆಂದು ಆಶಿಸುತ್ತಾಳೆ!
ಕೃಷ್ಣ ಮಾತ್ರ ತನ್ನ ಎಂದಿನ ಅದೇ ಮಂದಸ್ಮಿತದಲ್ಲೇ ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುತ್ತಾನೆ. ತನ್ನವರೆಲ್ಲಾ ಪರಸ್ಪರ ಹೊಡೆದಾಡಿ ಸಾಯುವುದನ್ನೂ...ತನ್ನ ತಂದೆತಾಯಿ,ಹೆಂಡಿರು ಮಕ್ಕಳ ಶವಗಳಿಗೆ ಸಂಸ್ಕಾರವೂ ಇಲ್ಲದೆ ಹದ್ದು-ಕಾಗೆಗಳು ತಿನ್ನುವುದನ್ನೂ ಹಾಗೂ..ತನ್ನ ಕೊಳೆತುಹೋದ ಕಾಲು,ಅದರ ನೋವನ್ನೂ ಸಹ!!
°°°°°°°°°°°°°°° * °°°°°°°°°°°° * °°°°°°°°°°°°°°°°°
ಮಹಾರಾಜ ಕಂಸನ ಪ್ರಿಯ ಸಹೋದರಿಯೂ,ರಾಜಪುತ್ರಿಯೂ ಆದ ದೇವಕಿಯ ಗರ್ಭದಲ್ಲಿ ಜನಿಸುತ್ತಾನೆ ಕೃಷ್ಣ! ತನ್ನ ಹಡೆದವಳ ಅಕ್ಕರೆಯನ್ನು ಅರೆಕ್ಷಣವೂ ಸವಿಯುವ ಯೋಗವಿಲ್ಲದೆ,ಅವಳ ಮಾತೃವಾಂಛಲ್ಯವನ್ನೂ ತಣಿಸದೆ, ಅದೆಲ್ಲೋ ದೂರದ ಯಮುನಾನದಿ ತೀರದ ಹಳ್ಳಿಗಾಡೊಂದರ ಯಕಃಶ್ಚಿತ್ ದನಗಾಹಿಯೊಬ್ಬನ ಹೆಂಡತಿಯಾದ ಯಶೋದೆಯ ಮಡಿಲು ಸೇರುತ್ತಾನೆ!
ಆ ದಸ್ಯುಗಳಲ್ಲಿ ಪ್ರೀತಿಯ ನದಿಯನ್ನು ಹರಿಸುತ್ತಾನೆ.ಇಡೀ ಬೃಂದಾವನವು ಮೌಢ್ಯತೆ,ಅನಾಗರೀಕತೆಯಿಂದ ವಿಮುಕ್ತವಾಗಿ ಜೀವನಪ್ರೀತಿಯ ಸೆಲೆಯಾಗಿಬಿಡುತ್ತದೆ. ಅಲ್ಲಿ ಅರಳುವ ಪ್ರತೀ ಹೂವಿಗೂ ತುಂಟತನ,ಚಿಗುರಿದ ಪ್ರತೀ ಹುಲ್ಲುಗರಿಗೂ ಪ್ರೇಮದಾಸೆ ಹುಟ್ಟುತ್ತದೆ. ಒಂದು ರೀತಿಯ ಪ್ರೀತಿಯ ಮಾಯೆ ಅಲ್ಲಿನವರನ್ನೆಲ್ಲಾ ವಿವಶಗೊಳಿಸಿಬಿಡುತ್ತದೆ. ಎಲ್ಲರೂ ಪ್ರೀತಿಸುವವರೇ..ಪ್ರೀತಿಸಲ್ಪಡುವವರೇ ಆಗಿಹೋಗುತ್ತಾರೆ.
ಎಲ್ಲರಿಗೂ ಇದೊಂದು ಅದ್ಭುತವಾಗಿ ಕಂಡರೆ, ಯಶೋದೆಗೆ ಮಾತ್ರವೇ ಕೃಷ್ಣನ ತಬ್ಬುಗೆಯಷ್ಟೇ ಸಹಜವಾಗಿ,ವಾಸ್ತವವಾಗಿ ಕಾಣುತ್ತದೆ! ...
ಮತ್ತು ಆ ರಾಧೆಗೆ ಮಾತ್ರ ತಮಾಷೆಯಾಗಿ!!
:::::::::::::::::::::::::::::::::::::::::::::::::::::::::::::::::::::::
ಕೃಷ್ಣ ತನ್ನ ಕಾಲಿಗೆ ಆ ಬೇಟೆಗಾರನೊಬ್ಬ ಗುರಿತಪ್ಪಿ ಹೊಡೆದ ಬಾಣವು ನಾಟಿ,ರಕ್ತ ಚಿಮ್ಮಿದ ಕೂಡಲೇ "ಅಮ್ಮಾ.." ಎಂದು ನರಳಿ ಕೂಗುತ್ತಾನೆ!
ಹಡೆದ ದೇವಕಿ,ಬೆಳೆಸಿದ ಯಶೋದೆಯರ ಜೊತೆಗೆ ಇನ್ನೂ ಒಬ್ಬ ತಾಯಿ ಇರುತ್ತಾಳೆ ಅವನಿಗೆ! ಅವಳೇ - "ಪೂತನಿ" ಎಂಬ ರಕ್ಕಸಿ! ಅವಳೊಬ್ಬಳೇ ಕೃಷ್ಣನಿಗೆ ಎದೆಹಾಲು ಕುಡಿಸಿದವಳು! ಅವಳಲ್ಲಿದ್ದ ರಕ್ಕಸತನದ ವಿಷವನ್ನು ಹೀರಿ,ಮಾತೃತ್ವವನ್ನು ಮೈಯಲ್ಲರಳಿಸುತ್ತಾನೆ ಬಾಲಕ ಕೃಷ್ಣ!
ಅವನ ಕೊನೇಗಾಲದಲ್ಲಾದ ಕಾಲಿನ ಆ ಗಾಯಕ್ಕೆ ತನ್ನ ಸೆರಗು ಹರಿದು,ಪಟ್ಟಿಕಟ್ಟಿ ಸಾಂತ್ವನಿಸಿದವಳು ಪೂತನಿಯೇ! ಆ ಸೆರಗಿನ ತುಂಡು ತುಳಸೀದಳವಾಗಿ, ಅವನ ಸುರಿದ ರಕ್ತವೆಲ್ಲ ಕಣಗಿಲದ ಹೂವಾಗಿ ಅವನ ಕಳೇಬರವನ್ನು ಅಲಂಕರಿಸಿದ್ದವು!
ಪೂತನಿಯ ಸ್ತನದ ಮೇಲೆ ಮಾತ್ರ ಕೃಷ್ಣ ಕಚ್ಚಿದ ಹಲ್ಲಿನ ಮುದ್ದಾದ ಗುರುತು!!
The Gold rush,Modern Days,The Kid,The Tramp,The Circus...ಹೀಗೇ ಎಲ್ಲಾ ಸಿನಿಮಾಗಳಲ್ಲೂ ಬಡತನ,ತೇಪೆ ಹಾಕಿದ ಹಳೆ ಕೋಟು,ಕಳಚಿ ಬೀಳುವ ಹಳೇ ಪ್ಯಾಂಟು,ಹರಕಲಾದ ಬೂಟು ಮತ್ತು ಅಪಾರವಾದ "ಹಸಿವು", ಸಿರಿವಂತರ ಟೊಳ್ಳುತನದ ನಾಗರೀಕತೆ,ಸ್ವಾರ್ಥಿಗಳ ಆಧ್ಯಾತ್ಮ-ಚರ್ಚು,ತಳವರ್ಗದ ಬದುಕುಗಳ ಎಂದಿಗೂ ಮುಗಿಯದ ತಲ್ಲಣಗಳೇ!
ಇಷ್ಟಕ್ಕೂ ಅವನು ಹುಟ್ಟಿದ್ದು-ಬೆಳೆದದ್ದಾದರೂ ಅಂಥದ್ದೇ ತಲ್ಲಣಗಳ ಮಧ್ಯೆಯೇ ಅಲ್ಲವಾ! ಹಸಿದ ಹೊಟ್ಟೆಯಲ್ಲೇ ಹೊಟ್ಟೆ ತುಂಬಿದವರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿಬಿಟ್ಟ ಆ ಚಾರ್ಲೀ!
ಯಾಕೋ ಗೊತ್ತಿಲ್ಲ..ಇಂದಿರಮ್ಮನ ಗಂಡ 'ಫಿರೋಜ್ ಜಹಾಂಗೀರ್ ಗೆಂಢಿ'ಯ ವ್ಯಕ್ತಿತ್ವ ನಿಜಕ್ಕೂ ಇಷ್ಟವಾಗಿಬಿಡುತ್ತದೆ. ಹರೆಯದಲ್ಲಿ ಪ್ರೀತಿಸಿ ಮದುವೆಯಾದ ಇಂದಿರೆಯ ಜೊತೆಗಿನ ದಾಂಪತ್ಯ ಸುಖಕರವಾಗಿರಲಿಲ್ಲ. ತನ್ನ ಸರ್ಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳನ್ನೆಲ್ಲ ಬಯಲಿಗೆಳೆದು ತನ್ನನ್ನೇ ಪಾರ್ಲಿಮೆಂಟಿನಲ್ಲಿ ಲೆಫ್ಟ್-ರೈಟ್ ಝಾಡಿಸುತ್ತಿದ್ದ ಅಳಿಯನನ್ನು ನಖಶಿಖಾಂತ ದ್ವೇಷಿಸಿದ್ದರು ನೆಹರೂ! ಮದುವೆಗೂ ವಿರೋಧಿಸಿದ್ದರು,ನಂತರವೂ ಬೇರೆ ಮಾಡಲು ಪ್ರಯತ್ನಿಸಿದ್ದರು. ಮದುವೆಯ ಎರಡು ತಿಂಗಳಲ್ಲೇ ಫಿರೋಜನನ್ನು 'ಕ್ವಿಟ್ ಇಂಡಿಯಾ ಸತ್ಯಾಗ್ರಹ'ದ ನೆಪದಲ್ಲಿ ಜೈಲು ಕಾಣಿಸಿದ್ದರು. ಕೆಲವರ್ಷದ ನಂತರ ಆ ದಾಂಪತ್ಯದ ಬಿರುಕಿಗೆ ನೆಹರೂನೇ ಕಾರಣವೂ ಆದರು!
ಇಂದಿರೆ ತನ್ನ ಮಕ್ಕಳನ್ನು ತಂದೆಯಿಂದ ದೂರವೇ ಬೆಳೆಸಿದ್ದಳು. ಅವಳ ಚಾರಿತ್ರ್ಯವಾದರೂ ಎಂಥದು! ಅಪ್ಪನ ವಯಸ್ಸಿನ ಮಥಾಯಿಸ್ ಜೊತೆಗೆ,ತನ್ನ ಶಾಲಾಕಾಲದ ಮೇಷ್ಟರ ಜೊತೆ,ಕೊನೆಗೆ ತನ್ನ ಇಳಿವಯಸ್ಸಿನಲ್ಲಿ ಆ ಸನ್ಯಾಸಿ 'ಧಿರೇಂದ್ರ ಬ್ರಹ್ಮಚಾರಿ'ಯ ಜೊತೆಗೂ ಸಂಬಂಧವಿಟ್ಟಿದ್ದಳು ಆಕೆ! ಆದರೆ,ಬದುಕಿರುವವರೆಗೂ ಫಿರೋಜ್ ,ಕದ್ದುಮುಚ್ಚಿ ಮಕ್ಕಳನ್ನು ಭೇಟಿಯಾಗುತ್ತಿದ್ದ.ರಾಜೀವ್ ನನ್ನು ಹೆಚ್ಚು ಹಚ್ಚಿಕೊಂಡಿದ್ದ.ತಾಯಿಯಿಂದಾಗಿ ಅಪ್ಪನಿಂದ ದೂರವೇ ಬೆಳೆದ ಸಂಜಯ್ ಮಾತ್ರ ಪೋಲಿಯಾದ. ಅಣ್ಣ ರಾಜೀವ್ ಅಪ್ಪನ ಪಡಿಯಚ್ಚಾಗಿ ಬೆಳೆದ.
ಸ್ವೀಡಿಶ್ ಪತ್ರಕರ್ತ ಬರ್ಟೀಲ್ ಫಾಕ್ ನ Feroze,the Forgotten Gandhi ಪುಸ್ತಕ ಅದ್ಭುತ!!!
ಅಲ್ಲೊಂದಷ್ಟು ಹಾಸ್ಯ, ಕಾಲೆಳೆತ,ಸಣ್ಣ ಜಗಳ,ಹುಸಿಮುನಿಸುಗಳ ನಡುವೆಯೇ ದುಃಖ-ದುಮ್ಮಾನಗಳ ಮಾತು-ನಗುಗಳು...ಹಿರಿಯ ಜೀವಗಳ ಬದುಕಿನ ಪಾಠ,ಗೆಣೆಕಾರ್ತಿಯರ ಅಕ್ಕರೆ,ಅಪ್ಪನ ದುಗುಡ,ಅಣ್ಣನ ಪ್ರೀತಿ,ತಂಗಿಯ ತರ್ಲೆ ಮತ್ತು ಆಗಾಗ ಗೊತ್ತಿಲ್ಲದೆ ಒರೆಸಿಕೊಳ್ಳುವ ಅವ್ವನ ಕಣ್ಣಿನ ಮುಸಲಧಾರೆ....
ಇದರ ಜೊತೆಗೆ ಜನಪದದ ತುಂಟತನವೇನು ಕಡಿಮೆಯೇನು? ಹಾಡಿನಲ್ಲೇ ಬೀಗತಿಯ ಹಂಗಿಸುವ,ಹಾಡಿನಲ್ಲೇ ಭವಿತವ್ಯದ ಜವಬ್ದಾರಿಗಳನ್ನು ನಿರ್ದೇಶಿಸುವ ಹಳ್ಳಿಗರ ಮದುವೆಗಳು ನಿಜಕ್ಕೂ ಸುಂದರ..ಮೌಲಿಕ! ಅಲ್ಲೇ ಆಧ್ಯಾತ್ಮದ ಅನುಸಂಧಾನ,ಲೌಕಿಕದ ವ್ಯವಹಾರ..ಎಲ್ಲವೂ ಜರುಗಿಬಿಡಬಲ್ಲವು!
ಮೊದಲೆಲ್ಲಾ ತಿಂಗಳಿಡೀ ಮದುವೆಯಿರುತ್ತಿತ್ತಂತೆ. ಈಗೆಲ್ಲಾ ಎರಡೇ ದಿನಕ್ಕೆ ಲಕ್ಷಗಟ್ಟಲೆ ಸಾಲವಾಗಿ ಹೈರಾಣಾಗಿರುತ್ತಾರೆ ಪೋಷಕರು. ಸೋಬಾನೆ-ಸೊವ್ವೆಗಳಿಲ್ಲ. ಫೋನುಗಳಲ್ಲೇ ಹಳಬರಾಗಿರುವ ಜೋಡಿಗಳಿಗೆ ಶಾಸ್ತ್ರ-ಮೌಲ್ಯಗಳ ಹರಕತ್ತೇ ಗೊತ್ತಿರೋದಿಲ್ಲ. ಇನ್ನು ಸೋಬಾನೆ-ಸೊವ್ವೆಗಳೆಲ್ಲಿ ಇದ್ದಾವು?
ಸಿಟಿಮಂದಿ ವಿಷಯ ಬಿಡಿ,ಅವರಿಗೆ ಅದೊಂದು Event management company ಯೊಂದರ ಪ್ಯಾಕೇಜಷ್ಟೇ!
ಇನ್ನು ಈ ಕೊರೊನಾ ಕಾಲದಲ್ಲಂತೂ ಓಣಿಗೂ ಗೊತ್ತಾಗದೆ ಕಳ್ಳತನದಲ್ಲೇ ಮದುವೆಗಳು! ಕರುಳ-ಬಳ್ಳಿಗಳ ಬಂಧಗಳನ್ನೇ ಈ ಕೋವಿಡ್ ಕತ್ತರಿಸಿಬಿಟ್ಟಿದೆ. ಎಂಥಾ ವೈರಿಗಳೂ ಕೂಡ ಸತ್ತಾಗ ಮಣ್ಣಿಗೆ ಹೋಗುತ್ತಿದ್ದವರು,ಈಗ ಕುಟುಂಬದವರು ಸತ್ತರೂ ಹೋಗಲು ಹಿಂದುಮುಂದು ನೋಡುವಂತಹ ಸ್ಥಿತಿ.. ಹೀಗಿದ್ದಾಗ ಮದುವೆಗೆ ಹೋಗುವುದು ದೂರದ ಮಾತು!
ಈ ಕೊರೊನ ಒಂದು ರೀತಿಯಲ್ಲಿ ಬಡವರ ಮದುವೆಯ ಅಷ್ಟೋ ಇಷ್ಟೋ ಖರ್ಚುಗಳನ್ನು ಕಮ್ಮಿ ಮಾಡಿದ್ದೇನೋ ನಿಜವೇ..ಆದರೆ, ಸಂಬಂಧಗಳನ್ನು ತೆಳವುಗೊಳಿಸಿದ್ದು ದುರಂತ. ಮದುವೆಗಳು ಅಂದರೆ,ಹೆಣ್ಣುಮಕ್ಕಳ ಸಂತೆ! ಯಾವತ್ತೋ ಕಲೆತವರು,ಅವತ್ತು ಕಲೆತು ಬಾಯತುಂಬಾ ಮಾತಾಡುವ ದಿನ. ಆ ಹಳ್ಳಿಯ ಹೆಂಗಸರಿಗೆ ಬೇಕೆಂದಾಗ ಬೇಕಾದವರನ್ನು ನೋಡೋಕೆ ಹೋಗೋದ ಸಾಧ್ಯವಿಲ್ಲವಲ್ಲ! ಹಾಗಾಗಿ ಈ ಮದುವೆಗಳಲ್ಲಿಯೇ ಅವರ ಬಾಲ್ಯದ ಗೆಣೆಕಾರ್ತಿಯರನ್ನು ,ದೂರದ ಬಂಧುಗಳನ್ನು ಭೇಟಿ ಮಾಡುವುದು!
ಈಗೀಗ ಹಳ್ಳಿಗಳು ಬದಲಾದಂತೆ ತೋರಿದರೂ ಸಂಬಂಧಗಳ ದಟ್ಟತೆ ಇನ್ನೂ ಹಾಗೇ ಇದೆ ಕಣ್ರೀ..ಹಾಗೇ ಇರಬೇಕು ಕೂಡಾ! ಅದೇ ಜೀವದ್ರವ್ಯವಲ್ಲವೇ ಬದುಕುಗಳಿಗೆ!
ನನ್ನಿಷ್ಟದ ತುರ್ಕಿಸ್ತಾನೀ(Turkey) ಬರಹಗಾರ್ತಿ "ಎಲೀಫ್ ಶಫಾಕ್" ಳ ಈ "The Bastard of Istanbul" ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ. In fact ಅವಳು ಈ ಪುಸ್ತಕ ಬರೆದಿದ್ದಕ್ಕೆ ಅನೇಕ ವರ್ಷ ಜೈಲು ಅನುಭವಿಸಿದಳು.ಹಿಂಸೆ-ಅತ್ಯಾಚಾರಕ್ಕೊಳಗಾದಳು. 1915 ರ ಜನವರಿಯಲ್ಲಿ ಮೊದಲ ವಿಶ್ವಯುದ್ಧ ಸಮಯದಲ್ಲಿ ಒಟ್ಟೋಮನಿ ತುರ್ಕರು ಆರ್ಮೇನಿಯಾ ಜನರ ಮೇಲೆ ನಡೆಸಿದ "ಭೀಕರ ನರಮೇಧ" ದ ಸಬ್ಜೆಕ್ಟಿದು. 15 ಲಕ್ಷ ಜನ ಮುಗ್ಧರ ಕೊಲೆ,ಲಕ್ಷಾಂತರ ಹೆಂಗಳೆಯರ ಸಾಮೂಹಿಕ ಅತ್ಯಾಚಾರ ನಡೆದಿತ್ತು ಆಗ.
ಅವಳ Three daughters of eve,Seven Rules of Love ತುಂಬಾ ಚಂದನೆಯ ಪುಸ್ತಕಗಳು.ಮಹಿಳಾ ಹಕ್ಕುಗಳ ಹೋರಾಟಗಾತಿಯಾಗಿ ಈಗಲೂ ತುಂಬಾ Active ಇರುವ ಹೆಂಗಸು ಈಕೆ.
ಅದಿರಲಿ..ಮೊನ್ನೆ ಇದೇ ಶಫಾಕ್ ಳ ಸಂದರ್ಶನವನ್ನು ಟರ್ಕಿಯ TRT ಚಾನೆಲ್ ನಲ್ಲಿ ನೋಡುತ್ತಿದ್ದೆ..ಅವಳು ಹೇಳುತ್ತಿದ್ದಳು - "ಮನುಷ್ಯ , ಧರ್ಮವನ್ನು ಯಾವತ್ತು ಸೃಜಿಸಿದನೋ ಅವತ್ತೇ ಮನುಷ್ಯತ್ವವೂ ನಾಶವಾಯಿತು.ಧರ್ಮಗಳನ್ನು ನಾಶಮಾಡಿ,ಮನುಷ್ಯತ್ವವನ್ನು ನಾವೀಗ ಸೃಜಿಸಬೇಕಿದೆ"
.........ನಿಜವಲ್ಲವೇ ಆಕೆ ಹೇಳಿದ್ದು?
(If anybody want this book,feel free to ask for it.I'll certainly send to them)
ಕಳೆದ ತಿಂಗಳಿನಿಂದಲೂ ಅಂಬೇಡ್ಕರ್ ರ ಸಮಗ್ರ ಬರಹ-ಭಾಷಣಗಳ ಸಂಪುಟಗಳ ಓದುಮುಗಿಸಿದ್ದೇನೆ. ಬಹುಶ
ಬರೋಬ್ಬರಿ 35 ಸಂಪುಟಗಳ ಮಹಾ ಸರಣಿ ಇದು.(ಆಸಕ್ತರಿಗೆ ಕೇಳಿದರೆ ಕಳಿಸಬಲ್ಲೆ) ಭಾರತೀಯ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ರ ಅಸ್ಖಲಿತ ಸ್ಪಷ್ಟತೆ ನನಗೆ ಬೆರಗುಮೂಡಿಸಿದೆ.
ಹಿಂದುತ್ವದ ಬಗೆಗಿನ ಅವರ ನಿಲುವು,ಕಮ್ಯುನಿಸಂ ಅನ್ನು ಅವರು ಸಾರಾಸಗಟು ತಿರಸ್ಕರಿಸಿದ ರೀತಿ,ಭಾರತದ ಸಮಾಜವನ್ನು ಸಮಾಜವಾದೀ ನೆಲೆಯಲ್ಲಿ ಹೇಗೆ ಕಟ್ಟಬಹುದೆನ್ನುವುದರ ಬಗೆಗಿನ ಅವರ ಕನಸು...ಹೃದಯ ತಟ್ಟುತ್ತವೆ.
ಅಂಬೇಡ್ಕರ್ ಯಾಕೆ ಎಲ್ಲರಿಗಿಂತಲೂ ಎತ್ತರ ನಿಲ್ಲುತ್ತಾರೆ ಎಂಬುದಕ್ಕೆ ನಾನು ಸಾವಿರ ಕಾರಣ ಕೊಡಬಲ್ಲೆ. ಸಾವರ್ಕರ್ ರ 'ಹಿಂದುತ್ವ' ಎನ್ನುವ ಪೊಳ್ಳುತನದ,ಕುತ್ಸಿತ ಚಿಂತನೆಯ ಹಿಂದೆ ಈಗಿನ ತರುಣವರ್ಗವು ಬೀಸುಗಾಲಿನ ಹೆಜ್ಜೆ ಹಾಕುವ ಪರಿಯೇ ಭಾರತಕ್ಕೆ ಅಪಾಯಕಾರಿ! ಈ 'ಸನ್ನಿ'ಗೆ ಅಂಬೇಡ್ಕರ್ ರೇ ಪರಿಹಾರ!
ಅಂಬೇಡ್ಕರ್ ರನ್ನು ಓದಿಕೊಳ್ಳಿ...ಆಮೇಲೆ ಬೇಕಾದರೆ ಜೈಶ್ರೀರಾಂ ಅನ್ನಿ!!
ಕಮೂ ಹೇಳುತ್ತಾನೆ..
"If you spend your time hoping,someone will suffer the consequences for what they did your heart ; Then you're allowing them to hurt you a second time in your mind"
ಇಷ್ಟಕ್ಕೂ..
ಸೇಡಿಗಾಗಿ ಹೋರಾಡಿ
ಗೆದ್ದವರಾರಿಲ್ಲಿ?
ಸ್ವಾರ್ಥಕಾಗಿ ಬದುಕಿ
ಮೋಕ್ಷ ಪಡೆದವರಾರಿಲ್ಲಿ?
So..ಯಾರನ್ನೂ ದ್ವೇಷಿಸುವಷ್ಟು ಮೂರ್ಖರಾಗಬೇಡಿ.ಅವರನ್ನು ಕ್ಷಮಿಸಿ..ನಿರಾಳರಾಗಿ! ನಿಮ್ಮ ಕ್ಷಮೆಗೂ ಅವರು ಅರ್ಹರಲ್ಲದಿದ್ದರೆ Just ignore them!
ನಾನು ಹೇಳಿದ್ದು ....
ಖುಷಿಯನ್ನು ಹುಡುಕಿಕೊಂಡು ಅಲೆದಾಡುವವರ ಬಗ್ಗೆ.ಅಲ್ಪತೃಪ್ತರು,ಅತೃಪ್ತರ ಬಗ್ಗೆ! ಮನೆ ಕಟ್ಟಿಸೋ ಖುಷಿಗೆ,ಜೀವನದ ಖುಷಿಗಳನ್ನೆಲ್ಲಾ ಬಿಟ್ಟುಹಾಕಿ,ದುಡಿದು,ಸಾಲ ಮಾಡಿ,ಕೊನೆಗೆ ಅಲ್ಲಿ ವಾಸ ಮಾಡುವ ಕಾಲಕ್ಕೆ ಹಣ್ಣುಗಾಯಿಯಾಗಿರುತ್ತಾರೆ!
ಒಂದೇನುಗೊತ್ತಾ? "ಸುಖ"- ಅನ್ನುವುದೊಂದು ಮಾನಸಿಕ ಸ್ಥಿತಿಯಷ್ಟೇ! ಎ.ಸಿ.ರೂಮಲ್ಲಿ ಕುರ್ಲಾನ್ ಬೆಡ್ಡಲ್ಲಿ ಮಲಗುವ ಸುಖದಷ್ಟೇ..ರಂಟೆ ಹೊಡೆದ ಹೊಲದ ಮಧ್ಯದ ಮಾವಿನ ಮರದ ನೆರಳಲ್ಲಿ ಮಲಗುವ ಸುಖ! ವ್ಯತ್ಯಾಸವಿಲ್ಲ.
ಮಳೆಯಿಲ್ಲದೇ ಪೈರು ಒಣಗಿ,ಕೊನೆಗೆ ಯಾವಗೋ ಬಂದ ನಾಲ್ಕು ಹನಿಗೆ ಬೆಳೆದ ಪೈರಿನ ತೆನೆ ಕೈಯಲ್ಲಿ ಹಿಡಿದು ಆ ಮುದಿ ರೈತನೊಬ್ಬ ಅನುಭವಿಸುವ ಧನ್ಯತೆಗೆ ಹೋಲಿಕೆಯಿಲ್ಲ!
ತಿನ್ನಲು ಏನೂ ಇಲ್ಲದ ದೈನೇಸಿ ಮಗುವಿನ ಕೈಗೆ ಒಣಗಿ ಹೆಟ್ಟೆಯಾದ ರೊಟ್ಟಿ ತುಂಡು ಸಿಕ್ಕು , ಅದನ್ನೇ ಪ್ರೀತಿಯಿಂದ ತಿಂದು ಹಗುರವಾಗಿ ತೇಗುವ ಸದ್ದಿಗೆ ಹೋಲಿಕೆಯಿಲ್ಲ!
ಆ "ಗೇವಿನ್ ಹುಡ್" ನ ಈ ಮನಸ್ಸು ತಲ್ಲಣಗೊಳಿಸುವ ಸಿನಿಮಾ ನೋಡಿದವರನ್ನು ತುಂಬಾ ದಿನಗಳ ಕಾಲ ಡಿಸ್ಟರ್ಬ್ ಮಾಡಬಿಡುತ್ತದೆ! ಅಮಾಯಕ ಬಡವರಿಗೆ, ಹೊಟ್ಟೆಗಿಲ್ಲದಿದ್ದರೂ ಧರ್ಮದ ಅಮಲು ಹತ್ತಿಸಿ,ಗನ್ನು-ಬಾಂಬು ಕೊಟ್ಟು ರಕ್ತಹರಿಸಲು ಕಳಿಸುವ ಉಗ್ರ ಸಂಘಟನೆಗಳ ಮೇಲೆ ಸಿಟ್ಟು ಬಂದುಬಿಡುತ್ತದೆ.
But, They're still multiplying as viruses!
Eye in the Sky ಸಿನಿಮಾ ನೋಡಿದಾಗ ನನಗೆ ಅನಿಸಿದ್ದಿಷ್ಟು!
Prime ನಲ್ಲಿ ನೀವೂ ನೋಡಬಹುದು.
'ಸಂಘ ಸ್ಥಾಪನೆಯಾದಾಗಿನ ಸನ್ನಿವೇಶಕ್ಕೂ ಪ್ರಸಕ್ತ ಕಾಲಘಟ್ಟಕ್ಕೂ ಅಗಾಧ ವ್ಯತ್ಯಾಸವಿದೆ.ಕಾಲದ ಜೊತೆ ಹೆಜ್ಜೆಹಾಕಲು ಸಂಘಕ್ಕೆ ಸಾಧ್ಯವಾಗಲಿಲ್ಲ.ರಾಜಕೀಯದ ಒತ್ತಡ-ಪ್ರಭಾವಗಳೇ ಅದಕ್ಕೆ ತೊಡಕಾದವು.ಈಗಲೂ ಸಂಘದಲ್ಲಿ ಜಾತೀಯತೆ ಇದೆ. ಸಂಘವು ಸಾಮಾಜಿಕ ಆಂಧೋಲನದ ಸ್ವರೂಪ ತಾಳಬೇಕಿತ್ತೇ ಹೊರತು ರಾಜಕೀಯ ಶಕ್ತಿಯಾಗಿ ಬೆಳೆವ ಅಗತ್ಯ ಅದಕ್ಕಿರಲಿಲ್ಲ.'
ಅವರ ಮಾತಿನಲ್ಲಿ ಸತ್ಯವಿತ್ತು. ಒಬ್ಬ ರಾಜೇಂದ್ರಸಿಂಗ್ ರನ್ನು ಬಿಟ್ಟು ಬೇರೆ ಬ್ರಾಹ್ಮಣೇತರ ವ್ಯಕ್ತಿಯನ್ನು ಸಂಘ ಬೆಳೆಸಲಿಲ್ಲ. ರಾಜಾಜೀ ಅದಕ್ಕಾಗಿ ಸಾಕಷ್ಟು ಹಿಂಸೆ-ಅಪಮಾನ ಅನುಭವಿಸಿದ್ದರು. ಇಷ್ಟಾಗಿಯೂ ಸಂಘ ನನಗೆ ಅಪ್ಯಾಯಮಾನವೆನಿಸುವುದು ಒಂದೇ ಕಾರಣಕ್ಕೆ. ಅದು ಅದರ "ಕಠೋರ ಅನುಶಾಸನ"! ಸಂಘದಿಂದ ಕಲಿತದ್ದು ಬಹಳ..ಕಲಿಯಬೇಕಿರುವುದೂ ಇದೆ. ಇದೊಂದು ರೀತಿಯಲ್ಲಿ ಕಲ್ಲಿನಲ್ಲಿ ಕಾಳು ಆರಿಸುವ ಪ್ರಕ್ರಿಯೆ!!
ಆರಿಸಿಕೊಳ್ಳುತ್ತಿದ್ದೇನೆ... ಸಿಕ್ಕಷ್ಟು ಕಾಳುಗಳನ್ನು ಆ ಅಗಾಧ ಕಲ್ಲಿನ ರಾಶಿಯಲ್ಲಿ!!!
ಕಾಶ್ಮೀರ ಮತ್ತೆ ಮುನ್ನೆಲೆಗೆ ಬಂದಿದೆ.ಹಿಂದೂ ನಿರಾಶ್ರಿತರನ್ನು ಪುನಃ ಅಲ್ಲಿ ನೆಲೆಗೊಳಿಸುವ ಪ್ರಯತ್ನಗಳಾಗುತ್ತಲಿವೆಯಂತೆ.ತಮ್ಮ ಪೂರ್ವಿಕರ ಆ ಸೇಬಿನ ತೋಟ,ಕೇಸರಿ ಬೆಳೆವ ಹೊಲಗಳಲ್ಲಿ ಮತ್ತೆ ಆ ನಿಷ್ಪಾಪಿ ಪಂಡಿತರು ಬೆವರು ಹರಿಸುವೆವೆಂಬ ಕನಸು ಕಾಣುತ್ತಿದ್ದಾರೆ. Al-Jazeera ಚಾನೆಲ್ ನಲ್ಲಿ ನಿನ್ನೆ ಅಲ್ಲಿನ ಸೂಫಿ ಮುಸ್ಲಿಮರ ಧಾರುಣ ಸ್ಥಿತಿಯ ಬಗ್ಗೆ ಡಾಕ್ಯುಮೆಂಟರಿ ನೋಡಿದೆ. ಧರ್ಮದ ಅಫೀಮು ತಲೆಗೇರಿಸಿಕೊಂಡರೆ,ಮೊದಲು ಬಲಿಯಾಗುವುದು ಅದೇ ಧರ್ಮದ ಬಡವರು,ಶೋಷಿತವರ್ಗದವರು! ಕಟ್ಟರ್ ಇಸ್ಲಾಮೀತನವು ಉದಾರೀತನದ,ಭಾವೈಕ್ಯ ಭಕ್ತಿಪರಂಪರೆಯ ಸೂಫಿಸಂ ನ್ನು ಸೇರುವುದಿಲ್ಲ. ಪಾಕಿಸ್ತಾನದ ಅನೇಕ ಸೂಫಿ ಹಾಡುಗಾರರಿಗೆ ಈಗಲೂ ಜೀವಭಯ ತಪ್ಪಿಲ್ಲ.ಅವರಿಗೆ ಭಾರತದಲ್ಲಿ ಇರುವಷ್ಟು ಗೌರವ ಅಲ್ಲಿಲ್ಲ.
ವರ್ಗಸಂಘರ್ಷವು ಎಲ್ಲಾ ಧರ್ಮಗಳಲ್ಲೂ ಇದ್ದದ್ದೇ. ಇಸ್ಲಾಮಿಗೂ ಒಬ್ಬ ಅಂಬೇಡ್ಕರ್ ಹುಟ್ಟಬೇಕಿತ್ತು!
ಈಗ ಸುಗ್ಗಿಯ
ಸಂಭ್ರಮವಿರಬೇಕು ನೋಡು!
ಈ ಮೋಡವೂ
ನಿನ್ನೆಯಿಂದ ವಿಷಾದದ
ಗಾಳಿಯಲ್ಲೇ ತೇಲುತ್ತಿದೆ.
ಸಂಜೆಯ ಧೂಳಿನಲ್ಲಿ
ಜನರ ಅಳುವೆಲ್ಲಾ ಬೆರೆತಿದೆ.
ಅಷ್ಟೊಂದು ಮಾತು ಕಲಿತ
ನನ್ನ ರಾತ್ರಿಗಳೂ
ಈಗ ಮೌನ ಹೊದ್ದು ಮಲಗಿವೆ.
ಹೆಪ್ಪುಗಟ್ಟಿದ ಮನಸ್ಸನ್ನು
ಕರಗಿಸುವ ಬಗೆ ಹೇಗೆಂದು?
ಇಬ್ಬನಿಯೇ ಹೇಳು...
ನಿನ್ನಲ್ಲಿ ಒಂದೆರಡಾದರೂ
ನನ್ನ ಕಣ್ಣಹನಿಗಳು ಬೆರೆತಿಲ್ಲವೇನು?
ಕಾಲವೇ ಹೇಳು...
ಎಲ್ಲೆಡೆ ಕವಿದ ಈ ನೋವಿನಲೆಗೆ
ಮುಕ್ತಿ ಯಾವತ್ತಿಗೆಂದು?
ಸಕಲ ಸತ್ವವನ್ನೂ ಒದಗಿಸಿ,ಬೀಳುವ ಮಳೆಗೆ ಬೊಗಸೆ ಹಿಡಿದು ಕೂಡಿಸಿ-ಕುಡಿಸಿ,ಬೆಳೆಸಿದ್ದು 'ಭೂಮಿ'! ಮೊಳೆತ ಗಿಡಕ್ಕೆ ಭೂಮಿಯ ಹೆಸರಿಲ್ಲ...! 'ಬೀಜ'ದಿಂದಲೇ ಆ ಗಿಡದ ತಳಿ-ಹೆಸರು ಗುರುತಿಸುತ್ತೇವಲ್ಲವೇ ನಾವು!
Umbilical Cord ನ್ನು ಕತ್ತರಿಸಿಕೊಂಡ ಮಾತ್ರಕ್ಕೇ ತಾಯಿಯಿಂದ ಬೇರ್ಪಟ್ಟುಬಿಡುತ್ತದೇನು ಕೂಸು? Placenta ದೊಂದಿಗೇನೆ ತಾಯಿಋಣಿ ತೀರಿಬಿಡುತ್ತದೇನು?
"ಮಾತೃತ್ವ" ವೇ ಹಾಗೆ! ಎಲ್ಲವನ್ನು ನೀಡಿಯೂ ಏನೂ ಅಲ್ಲದಂತಾಗಿಬಿಡುವ ಔದಾರ್ಯ,ತಾನೇ ಅಂತಸ್ಥವಾಗಿದ್ದೂ ನಿಃಶೂನ್ಯವೆನಿಸುವ ತ್ಯಾಗ! ತನ್ನ ತಾನೇ ಕರಗಿಸಿಕೊಂಡು ಲಯವಾಗಿ,ಜೀವ ಜಾಲ ಸರಣಿಯ ತುಣುಕೊಂದರ ರೇಣುವಿನ ಧೂಳಾಗಿಹೋಗುವ ಸೃಷ್ಟಿಕಾರ್ಯದ ಭೂಮಾನುಭೂತಿ ಕ್ರಿಯೆ!
"ತಾಯಿ" ಯಾಗೋದು ಅಂದರೆ ಸುಮ್ಮನೆ ಅಲ್ಲ..!
ಕೆಲವರ ಫೋನ್ ಕರೆ ರಿಸೀವ್ ಮಾಡಲೂ ಹೆದರಿಬಿಡುತ್ತೇನೆ..
ಅವರು ಮಾತುಗಳು ದೀರ್ಘವಾಗಿರುತ್ತವೆ..ಅವರ ಸಂಸಾರದ ತಾಪತ್ರಯಗಳನ್ನೆಲ್ಲಾ ಹೇಳತಾ ಇರತಾರೆ.ಬಹುಶಃ ಅವಳು ನನ್ನನ್ನೇನಾದರೂ Dustbin ಅಂದುಕೊಂಡಿದಾಳೋ ಏನೋ! ತಂದು ತಂದು ಸುರೀತಾ ಇರತಾಳೆ! ಡಸ್ಟುಬಿನ್ನೂ ಕೂಡ ಒಂದು ದಿವಸ ತುಂಬಲೇಬೇಕಲ್ವಾ? ನಿನ್ನೆ ನನ್ನ ತಾಳ್ಮೆ ಕೊನೆಯಾಯಿತು!
ಇನ್ನೂ ಕೆಲವರಿರುತ್ತಾರೆ.ಅವರ ಫೋನುಗಳನ್ನು ರಾತ್ರಿಯ ಟೈಮಲ್ಲೇನಾದರೂ ರಿಸೀವ್ ಮಾಡಿದರೆ ಮುಗೀತು! ಕಂಠಪೂರ್ತಿ ಕುಡಿದು,ನನ್ನಂಥವರ ಜೀವ ತಿನ್ನುವ ಪಾಪಿಗಳು ಅವರು!
ಕೆಲವರು ತಮ್ಮ ದವಲತ್ತು-ಮೆಹನತ್ತುಗಳನ್ನು ಕೊಚ್ಚಿಕೊಳ್ಳೋಕೆ ಅಂತಾನೇ ಫೋನ್ ಮಾಡಿರತ್ತಾರೆ.ಅದನ್ನು ಕೇಳಿಸಿಕೊಳ್ಳುವ ಹರಕತ್ತು ನನಗಾದರೂ ಏನಿರುತ್ತೆ ಹೇಳಿ?
ಜನ ಯಾಕೆ ಹೀಗೆ ಮಾಡುತ್ತಾರೆ? ಗೊತ್ತಿಲ್ಲ!!
ಸಾಧ್ಯವಾದರೆ,ಒಂದು ಸಣ್ಣ ಖುಷಿಯನ್ನು ಹಂಚಿಕೊಳ್ಳಲು ಫೋನ್ ಮಾಡಿ.ಅದು ಹಬ್ಬಿ ಹಬ್ಬವಾದೀತು! ಒಂದು ಸಣ್ಣ ಸಹಾಯ ಬೇಕಿದ್ದರೆ ಫೋನ್ ಮಾಡಿ,ಅನುಕೂಲವಾದೀತು! ನಿಮ್ಮ ಮನಸ್ಸಿನ ರಾಡಿಗಳನ್ನು ,ನಿಮ್ಮ ಬದುಕಿನ ಕಲಗಚ್ಚನ್ನು ನನ್ನ ಹತ್ತಿರ ಸುರಿಯೋದಿಕ್ಕೆ ಹೋಗಬೇಡಿ! ದುಃಖ ಹಂಚಿಕೊಂಡರೆ ನಿರಾಳವಾಗುತ್ತೀರಿ ಅನ್ನುವ ನಿಮ್ಮ ಭ್ರಮೆಯಿಂದ ಹೊರಬನ್ನಿ!
It's my last reminder to you...ಇಷ್ಟಕ್ಕೂ ನಾನೂ ಮನುಷ್ಯನೇ ಅಲ್ವಾ?
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...