ಬಹುಶಃ ಬೆಳಗಿನ ಜಾವ 3 ಗಂಟೆಯಿರಬಹುದು.ಆಗಷ್ಟೇ ನನಗೆ ನಿದ್ರೆ..ಆಗಲೇ ಈ ಶಂಖನಾದ,ನಿವೃತ್ತಿಯ ಘಂಟೆಯ ನಾದದ ಜೊತೆಗೆ "ಹರಾ ಹರಾ ಶಂಕರಾ..ಶಿವ ಶಿವಾ ಶಂಭೋ! ಹಂಕಾರ ಓಂಕಾರ ಮಮಕಾರ ಶಂಭೋ!" ಎಂಬ ಕಂಚಿನ ಕಂಠದ ಅಸ್ಖಲಿತ ವಾಣಿಯ ನಿರಂತರ ದನಿ ಕೇಳಿತ್ತು! ಅದೊಂದು ರೀತಿಯ ಮರಣ ಸದೃಶ ಝೇಂಕಾರ! ಆ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಶಂಖ ಜಾಗಟೆಯ ದನಿಗೆ ಮನಸ್ಸು ಕಲ್ಲವಿಲಗೊಂಡಿತ್ತು!
Thursday, 28 October 2021
ಕಾಲ ಭೈರವ
ಬಹುಶಃ ಬೆಳಗಿನ ಜಾವ 3 ಗಂಟೆಯಿರಬಹುದು.ಆಗಷ್ಟೇ ನನಗೆ ನಿದ್ರೆ..ಆಗಲೇ ಈ ಶಂಖನಾದ,ನಿವೃತ್ತಿಯ ಘಂಟೆಯ ನಾದದ ಜೊತೆಗೆ "ಹರಾ ಹರಾ ಶಂಕರಾ..ಶಿವ ಶಿವಾ ಶಂಭೋ! ಹಂಕಾರ ಓಂಕಾರ ಮಮಕಾರ ಶಂಭೋ!" ಎಂಬ ಕಂಚಿನ ಕಂಠದ ಅಸ್ಖಲಿತ ವಾಣಿಯ ನಿರಂತರ ದನಿ ಕೇಳಿತ್ತು! ಅದೊಂದು ರೀತಿಯ ಮರಣ ಸದೃಶ ಝೇಂಕಾರ! ಆ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಶಂಖ ಜಾಗಟೆಯ ದನಿಗೆ ಮನಸ್ಸು ಕಲ್ಲವಿಲಗೊಂಡಿತ್ತು!
ಬೆಂಕಿ
ಬೆಳಕಿನಲ್ಲಿದ್ದವರು
ಬೆಂಕಿ ಹಚ್ಚುತ್ತಿದ್ದಾರೆ
ಕತ್ತಲಲ್ಲಿದ್ದವರು
ಹಣತೆಗಾಗಿ ತಡವರಿಸುತ್ತಿದ್ದಾರೆ!
ಬೆಳಕಿಗೆ ಕತ್ತಲೆಯೇ
ಉರುವಲು ತಾನೇ?
ಕತ್ತಲು ಉರಿದು ಬೂದಿಯಾಗಿ
ಬೆಳಕನ್ನು ಮೆರೆಸುತ್ತದೆ.
ತಾನು ಮಂಕಾಗಿ ಮರುಗುತ್ತದೆ.
ಪ್ರೇಮಿಸುವುದೆಂದರೆ....
ಪ್ರೇಮಿಸುವುದೆಂದರೆ,
ಸಾವಿರ ಸ್ಥಾವರಗಳನ್ನು ನುಂಗಿ
ಒಂದೇ ಜಂಗಮವಾಗುವ ಬೆರಗು
ದ್ವೈತದ ದಿಗಂತದಾಚೆಗೆ
ಅದ್ವೈತವಾಗುವ ಆತ್ಮಸಂಗಾತದ ಸೊಬಗು
ನಾನು - ನೀನು ಎಂಬುವುದ
ಕಳಚಿಕೊಳ್ಳುವ ವಿರತ-ಸುರತ ನಿಸ್ಸಂಗತ್ವ!
'ಕೊಟ್ಟೆನೆಂಬ' ಅಹಂಕಾರ, ನೀಡಿದವರಿಗಿಲ್ಲದ,
'ಬೇಡಿದೆನೆಂಬ' ದೈನ್ಯ , ಪಡೆದವರಿಗಿಲ್ಲದ,
ಅತೀ ಸುಂದರವಾದ ನಿಸರ್ಗ ವ್ಯವಹಾರವನ್ನು
ಈ ಜಗತ್ತು "ಪ್ರೇಮ" ವೆಂದು ಕರೆಯುತ್ತದೆ.
ನೀನು ಏನೆಂದು ಕರೆದರೂ...
ನಾನು ಏನೆಂದು ಕರೆದರೂ ಕೂಡ!
Wednesday, 27 October 2021
ಗಾಯ
ದೇಹಕ್ಕೆ ಅದೆಷ್ಟೋ
ಗಾಯಗಳಾಗಬಹುದು.
ಔಷಧ ಹಚ್ಚಿದರೆ ಮಾಯುತ್ತವೆ.
ಆದರೆ, ಈ ಆತ್ಮಕ್ಕಾದ ಗಾಯಕ್ಕೆ
ಯಾವ ಔಷಧವೂ ಇಲ್ಲ.
ಇದ್ದರೆ, ಅದು ಸಾವು ಮಾತ್ರ!
ಸಾವಿನ ನಿರೀಕ್ಷೆ ಮಾತ್ರವೇ
ಆ ನೋವನ್ನು ಮರೆಸುವಂಥದು!
ಸಂತೆ
ಬದುಕೆಂದರೆ,
ನೋವುಗಳ ಸಂತೆ ಕಣೋ ಫಕೀರ..
ನಗುವ ಮಾರಬೇಕು
ನೋವು ಕೊಳ್ಳಬೇಕು
ಆಯಸ್ಸಿನ ಜಕಾತಿ ಕಟ್ಟಬೇಕು
ಸಂಬಂಧಗಳಲ್ಲೂ ಚೌಕಾಶಿ!
ಭಾವುಕತೆಗೆಲ್ಲಿಯ ಬೆಲೆ?
ಅಲ್ಲಿ ಎಲ್ಲವೂ ಬಿಕರಿಯಾಗುತ್ತದೆ.
ಪ್ರೀತಿ,ವಿಶ್ವಾಸಗಳೆಲ್ಲಾ ತಿಪ್ಪೆಗೆ!
ಅರೇ..ಅಲ್ಲಿ ನೋಡು!
ಬದುಕೂ ಮಾರುವುದಕ್ಕಿದೆ,ಸಾವೂ ಕೂಡ!
ಇಲ್ಲಿ ಒಬ್ಬರ ಬದುಕ ಮಾರಿಸುವ
ಇನ್ನೊಬ್ಬರ ಬದುಕ ಕೊಂಡು ಕೊಡಿಸುವ
ದಲ್ಲಾಳಿಗಳೇ ತುಂಬಿದ್ದಾರೆ ಕಣೋ!!
Tuesday, 26 October 2021
ಸಾವು
ಉಸಿರು ನಿಂತರೆ ಮಾತ್ರ
ಸಾವಲ್ಲ ಕಣೋ...
ಎದೆಯ ಬಡಿತ ನಿಂತರೆ
ಬದುಕು ಮುಗಿಯದೋ..
ಹೃದಯದ ಪ್ರೀತಿಯೊರತೆ
ಬತ್ತಿದ ಕ್ಷಣವೂ ಸಾವೇ!
ನಿನ್ನ ಮನುಷ್ಯತ್ವ ಕರಗಿದ
ಪ್ರತೀ ಕ್ಷಣವೂ ಸಾವೇ..ಸಾವೇ!
ಈಗ ಹೇಳಿಬಿಡು ;
ನೀನು ಇದುವರೆಗೂ
ಅದೆಷ್ಟು ಬಾರಿ ಸತ್ತಿರುವೆಯೆಂದು!
ಕತ್ತಲು
ಆತ್ಮಕ್ಕಂಟಿದ ಕತ್ತಲೆಯೇ
ಅದೆಷ್ಟೋ ಬಾರಿ ನಂಬಿಗಸ್ತವೆನಿಸುತ್ತದೆ.
ಬೆಳಕಿಗಷ್ಟೇ ಬೆತ್ತಲೆಯ ಭಯ
ಕತ್ತಲು,ಭಯ ಮೀರಿದ ಅಭಯ!
ಬೆಳಕು ಜೀವಗಳನ್ನು ಕೊಂದರೆ,
ಕತ್ತಲು,ಹುಟ್ಟಿಸುತ್ತಾ ಹೋಗುತ್ತದೆ.
ಕನಸುಗಳೂ ಕತ್ತಲಲ್ಲೇ ಹುಟ್ಟುತ್ತವೆ
ಬೆಳಕಿನಲ್ಲಿ ಅಸು ನೀಗುತ್ತವೆ.
ಬೆಳಕು ಎಲ್ಲರಿಗೂ ದಕ್ಕಲಾರದು
ಕತ್ತಲು, ಯಾರನ್ನೂ ದೂರವಿಡದು.
Monday, 25 October 2021
ಅಕ್ಷರಗಳಲ್ಲಿ ಅಷ್ಟೇಕೆ ನೋವು?
ಈ ಅಕಾಲಿಕ ಮಳೆ,ಒಂದು ನೆಪವಷ್ಟೇ
ಉದುರಿದ್ದು ಮಾತ್ರ ಕಣ್ಣೀರ ಧಾರೆ!
ನಿದ್ದೆ ಕಳೆದ ರಾತ್ರಿಗಳೆಷ್ಟೋ ಮುಸಾಫಿರಾ?
ಸಾಧ್ಯವಿದ್ದರೆ ಲೆಕ್ಕವಿಡು ಎಲ್ಲವನ್ನೂ!
ನಿನ್ನ ಅಕ್ಷರಗಳಲ್ಲೇಕೆ ಅಷ್ಟು ನೋವು?
ದಿನವೂ ಕೇಳುತ್ತಾರಿಲ್ಲಿ ಯಾರೋ...
ನನ್ನ ಅಕ್ಷರಗಳೋ..
ಉಳ್ಳವನ ಮಾಳಿಗೆಯವಲ್ಲ..ಇಲ್ಲದವನ ಜೋಳಿಗೆಯವು!
ಬಿಚ್ಚಿದರೆ ಅಲ್ಲಿ ಬರೀ ಬಿಕ್ಕಳಿಕೆ ಮಾತ್ರವೇ!
ನೋವುಣ್ಣುವುದೂ ಒಂದು ಚಟವೋ ಸೂಫಿ!
ನನ್ನ ಹೆಣದ ಮೇಲೆ ಹೊದಿಸುವ ಬಟ್ಟೆಗೂ
ಸಾವಿರ ಸಾವಿರ ರಕ್ತದ ಕಲೆಗಳಿರಲಿ..
ಮತ್ತು..ಆಗ ತಾನೇ ಅರಳಿದ ಒಂದು ಹೂವು!
"ಉಮ್ಮಾ ಹೋಗಿಬಿಟ್ಟಳು ಕಣೋ!"
"ಉಮ್ಮಾ ಹೋಗಿಬಿಟ್ಟಳು ಕಣೋ.."
ಸೈನಕ್ಕ ಉಮ್ಮಳಿಸಿ ಅಳುತ್ತಾ ಹೇಳಿದ್ದಳು. ಒಂದು ಕ್ಷಣ ನನಗೂ ದುಃಖ ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಎದುರಿಗೆ ಅತ್ತರೆ,ಅತ್ತುಬಿಡುವ introvert ನಾನು! ಸಿನಿಮಾ ನೋಡುವಾಗಲೂ ಅತ್ತವನು! ಸೈನಕ್ಕನ ಅಳುವಿನೊಂದಿಗೇ ಮನೆಯ ಹೆಂಗಸರ,ಮಕ್ಕಳ ಅಳುವೂ ಕೇಳುತ್ತಿತ್ತು.
ಫಾತೀಮಜ್ಜಿ....ಮೊಮ್ಮಗಳ ಶಾದಿ,ಬಾಣಂತನ,ಮರಿಮೊಮ್ಮಕ್ಕಳ ಲಾಲನೆ ಮಾಡುವಷ್ಟು ಅವಳು ಗಟ್ಟಿಯಿದ್ದಳು. ಒಂದು ಸಣ್ಣ ಜ್ವರಕ್ಕೆ ಶರಣಾಗಿದ್ದಕ್ಕೆ ಅಚ್ಚರಿಯಾಗಿತ್ತು ನನಗೆ! ಡಾಕ್ಟರು-ಆಸ್ಪತ್ರೆ ಎಂದು ಗಡಿಬಿಡಿ ಮಾಡುವಷ್ಟರಲ್ಲೇ ನಿರಮ್ಮಳವಾಗಿ ಎದ್ದು ಹೋಗಿಬಿಟ್ಟಿದ್ದಳು.
ಅಷ್ಟೂ ಜನ ಮಕ್ಕಳನ್ನು ಎದೆಗೆ ಹಾಕಿಕೊಂಡು ದುಡಿದು,ಕುಡುಕ ಗಂಡನೊಂದಿಗೆ ಏಗುತ್ತ ಮಕ್ಕಳೆಲ್ಲರ ದಡ ಮುಟ್ಟಿಸಿದ ಅವಳ ಬದುಕಿನ ಬಗ್ಗೆ ನನಗೆ ಹೆಮ್ಮೆಯಿತ್ತು.ನನ್ನವ್ವನೂ ಹಾಗೇ ಅಲ್ಲವೇ! ಬಹುಶಃ ಆ ತಲೆಮಾರೇ ಹಾಗೆನಾ..ಗೊತ್ತಿಲ್ಲ!
ಮನೆಗೆ ಹೋದ ಪ್ರತೀಸಾರಿಯೂ ತಟ್ಟೆತುಂಬಾ ಮೀನು ಬಡಿಸಿ,ಚುರುಕಾಗ್ತಾರೆ ತಿನ್ನೋ ಎನ್ನುತ್ತಾ ತಾಯಿಯಂತೆ ಉಣಿಸಿದವಳು! 'ನಿನ್ನ ಮದುವೆ ಒಂದು ಮಾಡಬೇಕು..ನಮ್ಮ ಸಾಬರ ಹುಡುಗೀನೇ ಮಾಡಕೋ,ಅಕ್ಕನಿಗೆ ಹೇಳತೇನೆ'ಎಂದು ನಗಾಡುತ್ತಿದ್ದವಳು..
ಸಾವು ಯಾರನ್ನು ಬಿಟ್ಟಿಲ್ಲ ಹೇಳಿ? ಆದರೆ,ಫಾತೀಮಜ್ಜಿಯ ಸಾವು ಬರೀ ಸಾವಲ್ಲ..ಅದೊಂದು ಕುಟುಂಬ ಮೌಲ್ಯದ ಸಾವು!
ಸೈನಕ್ಕನಿಗೆ,ಫರಾನ-ಸುಹೇಲ್ ರಿಗೆ ಸಮಾಧಾನ ಹೇಳಲು ನನ್ನಲ್ಲಿ ಮಾತುಗಳಿರಲಿಲ್ಲ.
ರಸ್ತೆಗೆ ಬಂದ ಉಣ್ಣುವ 'ಗಂಗಾಳ'!
ರೈತನ ಉಣ್ಣುವ ಗಂಗಳವೀಗ ರಸ್ತೆಯ ಮೇಲೆ ಬಂದುಬಿಟ್ಟಿದೆ. ರಸ್ತೆಗಳ ಮೇಲೆಲ್ಲಾ ಕಾಳು..ಕಣಗಳೆಲ್ಲಾ ಸುರಿವ ಹಾಳು!
ಆ ಕಡೆ ರಾಜಧಾನಿ ದೆಹಲಿಯಲ್ಲಿ APMC ಕಾಯ್ದೆ ತಿದ್ದುಪಡಿಯ ವಿರುದ್ಧ ನಿಂತ ರೈತ ಹೋರಾಟಗಾರರೆಲ್ಲರೂ ಆ ಮೈನಸ್ ಚಳಿಯಲ್ಲಿ ದೆಹಲಿಯ ರಸ್ತೆಗಳಲ್ಲೇ ಉಂಡು ಮಲಗುತ್ತಿದ್ದಾರೆ.
ಹೆಗ್ಗೋಡಿನ ಪ್ರಸನ್ನ ಅವತ್ತೊಮ್ಮೆ ನನಗೆ "ರೈತನ ದೇಹವಷ್ಟೇ ಅಲ್ಲ..ಮನಸ್ಸೂ ಕೂಡ ಸೋಮಾರಿಯಾಗಿದೆ. ಯಂತ್ರಜಗತ್ತಿನ ಮೊದಲ ಬಲಿ ಅವನೇ! ಇದರಿಂದ ಹೊರಬರದ ಹೊರತು ಅವನಿಗೆ ಉಳಿಗಾಲವಿಲ್ಲ" ಅಂದಿದ್ದರು. ಅದು ನಿಜವೇನೋ ಅನಿಸಹತ್ತಿದೆ.
ಸುಗ್ಗಿಕಾಲದ ಹಂತಿಪದಗಳೆಲ್ಲವೂ ರಸ್ತೆಯ ಮೇಲಿನ ವಾಹನಗಳ ಟೈರಿನಡಿ ಸಿಕ್ಕ ಕಾಳಿನಂತೆ, ರಾಸಿ ಪೂಜೆಯು ಮಗ್ಗುಲ ಧೂಳರಾಸಿಯಲ್ಲಿ ಮರೆಯಾದಂತೆ..ರೈತನ ಅನ್ನದ ತಟ್ಟೆಯಲ್ಲಿ ನಿಜವಾದ ಶ್ರಮದ ಅನ್ನವೇ ಮರೆಯಾಗಿ ಯಾವುದೋ ಕೆಮಿಕಲ್ ಮಿಶ್ರಣವಾಗಿ ರೂಪಾಂತರವಾದಂತೆ...ಭ್ರಮೆಯೋ ಭ್ರಮಾನಿರಸನವೋ ಆ ಭೂತಾಯಿಯೇ ಹೇಳಬೇಕು!
ಕಾಳು ತೂರುವ ರೈತ ಮಹಿಳೆ "ಹುಲುಗ್ಯೋ ಹುಲುಗ್ಯೋ"ಎಂದು ಬೀಸುವ ಗಾಳಿಗೇ ಆಜ್ಞಾಪಿಸುತ್ತಿದ್ದ ಗರತಿಯ ಗೈರತ್ತುಗಳು ಒಡೆದ ಬಳೆಗಳಂತೆ,ಬರಿ ಹಣೆಯಂತೆ ವೈಧವ್ಯಕ್ಕೆ ತುತ್ತಾಗಿವೆ.
ಹೌದು...'ಭೂಮಿತಾಯಿ' ಅಂಬಾಕಿ ಈಗ ಒಬ್ಬ ಹುಚ್ಚು ರಂಡೆ ಮಾತ್ರ ಕಣ್ರೀ!!
ಗ್ರಾಮ ಪಂಚಾಯತ್ ಚುನಾವಣೆ.....
ಚುನಾವಣೆಗಳು ಈಗೀಗ ಹಳ್ಳಿಗರಲ್ಲಿ ಅಂತಹ ಕುತೂಹಲ, ಸಂಭ್ರಮಗಳನ್ನು ಹುಟ್ಟಿಸುತ್ತಲಿಲ್ಲ. ಅಂತಪ್ಪ ಮೋದೀನೇ ಎರಡು ಬಾರಿ ಗೆದ್ದರೂ ನಮಗೇನೂ ಮಾಡಲಿಲ್ಲ..ಇನ್ನು ಈ ಪುಟಗೋಸಿಗಳದ್ಯಾವ ಲೆಕ್ಕ ಬಿಡು ಎಂಬ ದಿವ್ಯ ನಿರ್ಲಕ್ಷ್ಯವನ್ನು ಹಳ್ಳಿಗಳು ಹೊದ್ದು ಕುಳಿತಿವೆ. ಅದೇ ಅಟವಾಳಿಗೆಯಲ್ಲಿ ಎಲೆಡಕೆ ಮೆಲ್ಲುತ್ತಾ ಎಳೆಕೂಸಿನ ಜೋಲಿ ತೂಗುವ ಮುದುಕಿಯ ವಿಷಣ್ಣತೆ..ಪಕ್ಕದಲ್ಲೇ ಮಲಗಿದ ಕೆಂದ ನಾಯಿಯ ನಿರ್ವಿಕಾರತೆಯೇ ಎಲ್ಲೆಲ್ಲೂ....
ಗ್ರಾಮ ಪಂಚಾಯತ್ ಚುನಾವಣೆಯ ಬಗ್ಗೆ....
ಪಾರ್ಲಿಮೆಂಟು-ಅಸೆಂಬ್ಲೀ ಎಲೆಕ್ಷನ್ನುಗಳಲ್ಲಿ ಮಾತ್ರವೇ ಕಾಣಬಹುದಾಗಿದ್ದ Election Strategyಗಳು,ತಂತ್ರ-ಪ್ರತಿತಂತ್ರ-ಕುತಂತ್ರಗಳು,ಜಾತಿ ಒಡೆವ ಹವಣಿಕೆಗಳು,ಧರ್ಮದ ಹೆಸರಿನಲ್ಲಿ ಬದುಕುಗಳ ನೆಮ್ಮದಿಯ ತಿಳಿನೀರ ಕದಡುವ, ದ್ವೇಷ ದಾವರಗಳು,ಹಳೇ ಕಾಲದ ಸೇಡಿನ ದಳ್ಳುರಿಗಳು, ಸೂಳೆ-ಮಿಂಡರ ಸಂಬಂಧದ ಸುರುಳಿಗಳನ್ನೂ ಓಟುಗಳನ್ನಾಗಿ ಪರಿವರ್ತಿಸಿಕೊಳ್ಳು ಹೀನ ಹವಣಿಕೆಗಳು.....My God!!
ಹಳ್ಳಿಗಳು ಮುಗ್ಧತೆಯ ಮುಸುಕು ತೆಗೆದೆಸೆದು,ಕರುಳ-ಬಳ್ಳಿಯ ಸಂಬಂಧಗಳು ಬೆಸೆದಿದ್ದ ಸಹಸ್ರ ಬಂಧಗಳನ್ನು ಕಿತ್ತು ಬಿಸುಟಿ ದೂರ..ಬಹುದೂರ ಬಂದುಬಿಟ್ಟಿವೆ! ಅಲ್ಲೀಗ Professional Strategist ಗಳನ್ನೇ ಮೀರಿಸುವ ನಿಪುಣರಿದ್ದಾರೆ. ಗುಡಿಗಳಲ್ಲಿ ಭಜನೆ ಮಾಡುವವರು ಇಲ್ಲೀಗ ಎಲ್ಲಿದ್ದಾರೆ? ಸೋಬಾನೆ-ಸೊವ್ವೆಗಳ ದನಿಗಳೆಲ್ಲ ಹೋದವೆಲ್ಲಿ? ಕೋಲಾಟಗಳೆಲ್ಲಿ? ಅರೇ...ಊರಬಾಗಿಲ ಮುಂದೆ ಬುಗುರಿ,ಚಿಣ್ಣಿದಾಂಡುಗಳನ್ನು ಜಾತಿ-ಧರ್ಮದ ಲವಲೇಶದ ಸೋಂಕಿಲ್ಲದೆ ಆಡುತ್ತಿದ್ದ ಮಕ್ಕಳಾದರೂ ಎಲ್ಲಿ?
ಧರ್ಮಕ್ಕೂ ಮೀರಿ 'ಮಾವ,ಅಳಿಯ' ಎಂದು ಬಾಯಿತುಂಬಾ ಕರೆದು ಅಕ್ಕರೆ ತೋರುತ್ತಿದ್ದ ಮುಸ್ಲಿಂ ಸಮುದಾಯದ ಸಜ್ಜನಿಕೆಯ ಆ ಜೀವಗಳೆಲ್ಲ ಹೋದವೆಲ್ಲಿ? 'ಗೌಡರೇ,ಗೊಂಚಿಗಾರರೇ'ಎಂದು ಕರೆದರೂ ಮನೆಮಕ್ಕಳಂತೆ,ಜಾತಿ ಮೀರಿದ ಬಂಧ ಕಟ್ಟಿದ್ದ ಆ ತಳಜಾತಿ ವರ್ಗದ ಪುಣ್ಯ ಜೀವಗಳೆಲ್ಲ ಹೋದವೆಲ್ಲಿ?
ಹಳ್ಳಿಗಳೆಲ್ಲ ಸ್ಮಶಾನಗಳಾಗಿವೆ ಕಣ್ರೀ...ಅಲ್ಲೀಗ ಮನುಷ್ಯರಿಲ್ಲ!
ನಗು
ಇಲ್ಲಿ ನಗುವಿಗಷ್ಟೇ ಬೆಲೆ ಕಣೋ..
ಅಳುವಿಗಿಲ್ಲಿ ಮಾರುಕಟ್ಟೆಯಿಲ್ಲ.
ಹೃದಯದಲ್ಲಿ ನೂರು
ನೋವಿದ್ದರೂ ಬಚ್ಚಿಟ್ಟು;
ಎಲ್ಲರೆದುರು ನಗುತ್ತಲಿರಬೇಕು!
ಕುಹಕವೋ ಕೃತಕವೋ ವಿಕೃತವೋ
ಎಂಥದ್ದೋ ಒಂದು ನಗು ಅಷ್ಟೇ!
ನಗುತ್ತಲೇ ಕೊಲ್ಲುವವರಿದ್ದಾರೆ ಇಲ್ಲಿ..
ನಾವೂ ಕೊಲ್ಲಬೇಕು..ನಗುತ್ತಲೇ
ರಕ್ಕಸರು
ಈ ಜಗತ್ತಿನಲ್ಲಿ ಎಲ್ಲರಿಗೂ..
ಸಂತರಾಗಿಬಿಡುವ ಹಪಾಹಪಿ!
ಮಹಾತ್ಮರೆನಿಸಿಕೊಳ್ಳುವ ಹಂಬಲ!
ಮನುಷ್ಯರಾಗಲು ಆಸಕ್ತಿಯಿಲ್ಲ..
ಈ ಜಗತ್ತಿನಲ್ಲಿ ಎಲ್ಲರಿಗೂ..
ಗಮ್ಯವನ್ನು ತಲುಪುವ ಧಾವಂತ.
ದಾರಿ ಹಿಡಿಯಲಿಕ್ಕೆ ಅವಸರ!
ಹಿಡಿದ ದಾರಿಯ ಬಗ್ಗೆ ಅರಿವಿಲ್ಲ..
ಈ ಜಗತ್ತಿನಲ್ಲಿ ಎಲ್ಲರಿಗೂ..
ಕಿತ್ತುಕೊಳ್ಳುವ ರಕ್ಕಸತನ,
ಕೇಳಿಪಡೆವ ಸೌಜನ್ಯವಿಲ್ಲ..
ಕೊಡುವ ಹೃದಯವಂತೂ ಇಲ್ಲ.
ಈ ಜಗತ್ತಿನಲ್ಲಿ ಎಲ್ಲರಿಗೂ..
ಪ್ರೀತಿಸಿಕೊಳ್ಳುವ ಹುಚ್ಚುತನ,
ಪಡೆವ ಅರ್ಹತೆಯ ಅರಿವಿಲ್ಲ
ಪ್ರೀತಿಸುವ ಬಾಧ್ಯತೆಯೂ ಬೇಕಿಲ್ಲ.
ಜನ್ನತ್
ಕಣ್ಣೀರು ಒರೆಸುವ ಇಬಾದತ್ ಇರುವವರೇ..
ಹಸಿವು ತಣಿಸುವುದರಲ್ಲೇ ನಿಮ್ಮ ಜನ್ನತ್ ನ ಘಮವಿದೆ!
ನೀವು ಉಣಿಸುವ ಪ್ರತೀ ಅನ್ನದ ಅಗುಳೂ...
ದೇವರೆಡೆ ಸಾಗುವ ದಾರಿಯಲ್ಲಿ ಚೆಲ್ಲಿದ ಮಲ್ಲಿಗೆ!
ನೀವು ಕುಡಿಸಿದ ಹನಿ ನೀರೂ..ಚೆಯೋನಿನ ಅತ್ತರು!
ನಿಮ್ಮ ಪ್ರತೀ ದುವಾಗಳೂ ದೇವರಿಗೆ ಕೇಳಿಸುತ್ತವೆ!
ನಿಮ್ಮ ಪ್ರತೀ ರುಕುವಾಗಳೂ ಅವನಿಗೆ ತಲುಪುತ್ತವೆ!
ಆಯಸ್ಸನ್ನು ಕೇಳಿಕೊಳ್ಳಬೇಡಿ..ಅವನಲ್ಲಿ.
ಅವಕಾಶವನ್ನು ಕೇಳಿ..ಹಸಿದ ಹೊಟ್ಟೆ ತಣಿಸುವ ಅವಕಾಶ!
ಅದು ಎಲ್ಲರಿಗೂ ದಕ್ಕುವಂಥದಲ್ಲ ನೋಡಿ!
ಪುಣ್ಯವಂತರಿಗೆ ಮಾತ್ರವೇ ಆ ಪವಿತ್ರ ಕಾರ್ಯ ಮೀಸಲು!!
ಮೋಕ್ಷ
ಬದುಕ ಎಲೆಯ ಮೇಲೆ,
ನಗುವಿನ ಇಬ್ಬನಿಯುದುರುವುದು
ಮುಂಜಾನೆ ಒಂದೆರಡು ಕ್ಷಣವಷ್ಟೇ!!
ಈ ಮಳೆಗಾಲದಲ್ಲೂ ಬಿರುಬಿಸಿಲು,
ಹಗಲಿಡೀ ನೋವಿನ ಬಾಷ್ಪವಿಸರ್ಜನೆ!
ನೋವೆಂಬ ನೋವಿನ ಸಾನಿಧ್ಯದಲ್ಲಿಯೇ
ದ್ಯುತಿ ಸಂಶ್ಲೇಷಣೆಯಾಗಿ ಉಸಿರಾಡಲು
ಏನೋ ಒಂದಷ್ಟು ಶಕ್ತಿ ಸಂಚಯವಾದೀತು!
ರಾತ್ರಿಗಳೋ..ಭೂಮಿಗಿಳಿದ ಬೇರುಗಳೊಂದಿಗೆ!
ಗತದ ಕಸವ ಬೇರಿಗುಣಿಸುತ್ತಾ..
ಅರ್ಧ ಸತ್ತ ಕನಸುಗಳನೆಣಿಸುತ್ತಾ..
ಬೆಳೆವುದ ನಿಲ್ಲಿಸಿದ,ಬದುಕಿನ ಕಾಂಡಕ್ಕೆ
ಕಂಬನಿಯ ನೀರು,ನಿಟ್ಟುಸಿರ ಗಾಳಿ ಹಾಕಿ,
ಬದುಕಿಗಾಗಿ ಚಿಗುರುವ,ಸಾಯಲಿಕ್ಕಾಗಿ ಬೆಳೆಯುವ
ಬಗೆಯನ್ನು ನೋಡುತ್ತ ಕೂರುವುದಿದೆಯಲ್ಲಾ..
ಬಹುಶಃ..ಅದೇ ಬದುಕಿನ ಮೋಕ್ಷವಾ? ಗೊತ್ತಿಲ್ಲ!
ಹಾದಿಯ ಹುಡುಗ
ಬದುಕಿನ ಹಾಳೆಯೇ ಹರಿದು ಹೋದವನಿಗೆ,
ಬದಲಾಗುವ ತಾರೀಖುಗಳ ಚಿಂತೆ ಎಂಥದು?
ಕತ್ತಲನ್ನೇ ಹಾಸಿ-ಹೊದ್ದು ಮಲಗಿದವನಿಗೆ,
ಉದಯಾಸ್ತಮಾನಗಳ ಹಂಗಾದರೂ ಏನು?
ನೋಡುತ್ತಾನೆ, ಯಾವಾಗಲಾದರೊಮ್ಮೆ ಆ ಕಡೆ,
ಅದೆಲ್ಲೋ ದೂರದ ಬೆಳಕಿನ ಕಿಂಡಿಯೆಡೆಗೆ!
ಕಳೆದುಹೋದ ಕನಸೊಂದರ ನಿರೀಕ್ಷಣೆಯಲ್ಲಿ.
ಧೂಳು ಹೊತ್ತ ಗಾಳಿ,ಅವನ ಕಣ್ಣು ಮುಚ್ಚುತ್ತದೆ.
ಹಗಲು ಅಲೆಯುತ್ತಿರುತ್ತಾನೆ ; ನೆಲಕ್ಕೆ ಸುಸ್ತಾಗುವವರೆಗೆ!
ರಾತ್ರಿ ಅಳುತ್ತಿರುತ್ತಾನೆ ; ಚುಕ್ಕಿಗಳು ಉದುರುವವರೆಗೆ!
ಹುಣಸೇಮರದ ಆ ಕುಂಟಗುಬ್ಬಿಯದ್ದು ಒಂದೇ ಕೂಗು..
"ಬಾ ಸಾಯೋಣ..ಸತ್ತು ಬದುಕೋಣ..ಮತ್ತೆ ಸಾಯೋಣ!"
ಮೌನದ ಮಾತು.. -೧
ಮೋಸ ಮತ್ತು ಸಾವು..ಇವೆರಡನ್ನೂ ಎದುರಿಸಿದವನ ಮಾತುಗಳು ಕ್ಷಣಕಾಲ ಸತ್ತುಬಿಡುತ್ತವೆ. Isolate ಮಾಡಿಬಿಡುತ್ತವೆ. ತುಂಬಾ ನಂಬಿದವರು ಮಾಡುವ ನೋವು ಅಸಹನೀಯ. ಕ್ಷುಲ್ಲಕ ಕಾರಣಗಳಿಗೆ ನಂಬಿಕೆಯನ್ನೇ ಕತ್ತು ಹಿಸುಕುವ ಆ ಸಣ್ಣತನಗಳು ಜಿಗುಪ್ಸೆ ಹುಟ್ಟಿಸಿಬಿಡುತ್ತವೆ. ನಾನು ಪ್ರತೀಬಾರಿ ಮೋಸಹೋದಾಗಲೂ ಆ ಸಣ್ಣತನಗಳನ್ನು ಮರೆಯಲೆತ್ನಿಸುತ್ತೇನೆ. "ಜಗತ್ತೇ ಹೀಗಲ್ಲವೇ ಇರೋದು..ಅಂಥದ್ದರಲ್ಲಿ ಈ ತೋಲಪ್ಪಗಳದ್ಯಾವ ಲೆಕ್ಕಬಿಡು ಎಂದು ಉಪೇಕ್ಷಿಸುತ್ತೇನೆ.
ಆದರೆ, ಈ 'ಸಾವು' ಹಾಗಲ್ಲ. ಅದು ಎಂದೂ ತುಂಬದ ನಿರ್ವಾತವೊಂದನ್ನು ನಿರ್ಮಿಸಿಬಿಡುತ್ತದೆ. ಅದರಲ್ಲೂ ಹತ್ತಿರದವರ ಸಾವು...ಭರಿಸಲಾರದ್ದು!
ಕಳೆದ ಒಂದು ತಿಂಗಳಿನಿಂದಲೂ ಮನಸ್ಸು ಹಣ್ಣುಗಾಯಿಯಾಗಿದೆ.
ಬದುಕನ್ನು ಕಾಲದ ಸುಫರ್ದಿಗೆ ಬಿಟ್ಟು ನಿರ್ವಿಣ್ಣನಾಗಿದ್ದೇನೆ. ಮುಂದೆ ಕಾಣುತ್ತಿರುವುದು ಸೂರ್ಯೋದಯವೋ ಸೂರ್ಯಾಸ್ತವೋ...ಕಾಲಪುರುಷನಿಗೆ ಮಾತ್ರವೇ ಗೊತ್ತು!
ಗೂಡು
"ಟಾಯ್ಲೆಟ್ಟಿಗೆಲ್ಲಾ ವೆಸ್ಟರ್ನ್ ಕಮೊಡ್ ಹಾಕಿಸಿದಿವಿ ಕಣ, ನನ್ನ ಗಂಡನ ಸೊಂಟ ನೋವು ಗೊತ್ತಲ್ಲ: ದೇವರ ಕೋಣೆ ದೊಡ್ಡದೇ ಇದೆ. ದಿನಕ್ಕೆ ಒಂದು ಗಂಟೆಯಾದರೂ ಅಲ್ಲಿ ಒಂದಷ್ಟು ಮೆಡಿಟೇಶನ್ ಮಾಡಿದರೆ,ಸ್ಟ್ರೆಸ್ ಕಡಿಮೆಯಾಗುತ್ತೆ. ಮೇಲಿನ ಪೋರ್ಶನ್ ನ ಒಂದು ರೂಂ ಮಗಳ ಡ್ಯಾನ್ಸ್ ಪ್ರಾಕ್ಟೀಸಿಗೆ ಅಂತ ಉಳಿಸಿಕೊಂಡು,ಉಳಿದದ್ದು ಬಾಡಿಗೆ ಕೊಡೊ ಪ್ಲಾನಿದೆ...." - ಅವಳು ಹೇಳುತ್ತಲೇ ಇದ್ದಳು ಹೊಸಮನೆಯ ಬಗ್ಗೆ."ಈಗಿರೋ ಮನೆ ಚನ್ನಾಗೇ ಇತ್ತಲ್ಲವಾ" ನಾನಂದದ್ದು ಅವಳಿಗೆ ಕೇಳಿಸಿತ್ತೋ ಇಲ್ವೋ!
ನನ್ನ ಮತ್ತೊಬ್ಬ ಗೆಳೆಯನೂ ಬಿ.ಡಿ.ಎ.ಫ್ಲಾಟ್ ನ interior ಬಗ್ಗೆ ಗಂಟೆಗಟ್ಟಲೆ ಮಾತಾಡಿದ್ದ ಮೊನ್ನೆ.
ಈ ಗೂಡು ಕಟ್ಟುವ ಕ್ರಿಯೆ ಪ್ರಕೃತಿ ಸಹಜವೇನೋ! ಪ್ರತೀ ಹೆಣ್ಣು , ತನ್ನ ಸಂಗಾತಿಯು ತನಗಾಗಿ ಒಂದು ಹೊಸ ಗೂಡು ಕಟ್ಟಬೇಕೆಂದು ಅಪೇಕ್ಷಿಸುತ್ತಾಳೆ.ಅತ್ತೆ-ಮಾವನ "ಹಳೆಯ ಗೂಡು" ನೆಲಸಮವಾಗುತ್ತದೆ. ಗೂಡು ಕಟ್ಟುವುದಕ್ಕಾಗಿಯೇ ಹುಟ್ಟಿದ್ದೇನೋ ಎಂಬಂತೆ ಗಂಡು, ತನ್ನ ಜೀವಚೈತನ್ಯವನ್ನೆಲ್ಲ ಬಸಿದು ಕಟ್ಟುತ್ತಾನೆ.
ಅವಳ ಜೊತೆ ಮಾತಾಡಿ ಮುಗಿಸುವ ಹೊತ್ತಿಗೆ ಸರಿ ರಾತ್ರಿಯಾಗಿತ್ತು. ಯಾಕೋ ಆ ಹುಣಸೇಮರದ ಕುಂಟ ಗುಬ್ಬಿಯನ್ನು ನೋಡುವ ಮನಸ್ಸಾಯಿತು. ಫೋನ್ ಚಾರ್ಜಿಗೆ ಹಾಕಿ ಹುಣಸೇಮರದ ಹತ್ತಿರ ಆ ಹೊತ್ತಲ್ಲೂ ಹೋಗಿದ್ದೆ. ತನ್ನ ಹಾಳು ಬಿದ್ದ ಹಳೇ ಗೂಡಿನ ಮುಂದೆ ಕುಳಿತಿದ್ದ ಆ ಕುಂಟ ಗುಬ್ಬಿಯು ಮಾತ್ರ ಶೂನ್ಯದೆಡೆ ದೃಷ್ಟಿನೆಟ್ಟು ಮೂಕವಾಗಿ ನಿದ್ರೆಯಿಲ್ಲದೆ ರೋಧಿಸುತ್ತಿತ್ತು!
ಏನು ಮಾಡಿಯಾವು?
ಮುಳ್ಳು
ನನ್ನ ದಾರಿಯಲ್ಲಿ
ಇಷ್ಟು ದಿನ
ಬರೀ ಕಲ್ಲುಗಳೇ ಇದ್ದವು..
ಇದೀಗ
ಒಂದಷ್ಟು ಮುಳ್ಳುಗಳೂ
ಚಿಗುರುತ್ತಿವೆ!
ಕನಿಷ್ಟ ಅವುಗಳಿಗಾದರೂ
ಜೀವವಿದೆಯೆಲ್ಲಾ
ಎಂಬುದೇ ನನಗೆ ಖುಷಿ!
ಅಂತ್ಯಸಂಸ್ಕಾರ
ನನ್ನ ಅಕ್ಷರಗಳೆಲ್ಲವೂ
ಆತ್ಮಹತ್ಯೆ ಮಾಡಿಕೊಂಡಿವೆ!
ಹೂಳಲು ಎಲ್ಲಿದೆ ಜಾಗ?
ಎಷ್ಟೂ ಅಂತ ಹೊರಲಿ ಇನ್ನು
ಅವುಗಳ ಹೆಣಗಳ..
ಎದೆ ಭಾರ..ಹೆಗಲೂ ಭಾರ!
ಹಾಗಾಗಿ ; ದಿನವೂ
ಈ ಬ್ಲಾಗ್ ಪೋಸ್ಟುಗಳ ಮೂಲಕ
ನಿಮ್ಮ ಎದೆಗಳಲ್ಲಿ ಹೂಳುತ್ತಿರುತ್ತೇನೆ!
ಹಸಿವು
ಸಾವಿಗಿಂತಲೂ
ಈ ಹಸಿವೆಯೇ ದೊಡ್ಡದು!
ಸಾವು ಬರುವುದು ಒಮ್ಮೆ ಮಾತ್ರ!
ಹಸಿವು ನಿರಂತರ..ಸಾವಿನವರೆಗೆ!
ಸಾವು, ಅನುಭವಕ್ಕೆ ದಕ್ಕದ್ದು!
ಹಸಿವು, ಭೀಕರ ಅನುಭವದ್ದು!
ಇಷ್ಟಕ್ಕೂ ಸತ್ತರೆ,
ಯಾರಾದರೂ ಹೂಳುತ್ತಾರೆ,ಸುಡುತ್ತಾರೆ!
ಕಾಗೆ-ಹದ್ದುಗಳೋ,ಮಣ್ಣೋ ಕರಗಿಸುತ್ತವೆ!
ಆದರೆ,ಹಸಿದರೆ?
ದೇವರೂ ತಣಿಸಲಾರ,ಒಡಲುರಿಯ!
ಸಾವು ಮಾತ್ರವೇ
ಹಸಿವನ್ನು ಕೊಲ್ಲಬಹುದೇನೋ!!
ಮರುಳಿಸು...
ನಾನು ಇಲ್ಲಿಯವರೆಗೂ ಬದುಕಿರುವುದೇ
ದೊಡ್ಡ ಪಾಪವಾಗಿ ಕಾಣಬಹುದೇನೋ ನಿನಗೆ!
ಆದರೂ..ಬದುಕುವ ಹುಚ್ಚು ಹಠ,ಯಾಕೆ ಗೊತ್ತಾ?
ನೀನು ಕೊಂದ ನನ್ನ ನಿನ್ನೆಗಳನ್ನು
ನನ್ನಿಂದ ಬದುಕಿಸಿಕೊಳ್ಳಲಾಗದಿದ್ದರೂ,
ನಿನ್ನ ನೆನಪ ಕತ್ತಲಿನ ಸೆರಗಿನೊಳಗೆ
ನನ್ನ ನಾಳೆಗಳನ್ನು ಉಸಿರುಗಟ್ಟಿಸಿ ಸಾಯಗೊಡಲಾರೆ!
ಅಯ್ಯೋ..ಹೋಗಲಿ ಬಿಡು!
ನೀನು ಕಿತ್ತುಕೊಂಡ ನನ್ನ ರಾತ್ರಿಗಳು ನಿನ್ನಲ್ಲೇ ಇರಲಿ,
ಕೊನೇಪಕ್ಷ ಸಂಜೆಗಳನ್ನಾದರೂ ಇಂದು ಮರುಳಿಸು!
ಸುಮ್ಮನಿರು...
OK ,ನೀನು ಸುಮ್ಮನಿರು..
ನಾನೂ ಸುಮ್ಮನಿರುತ್ತೇನೆ.
ಯಾವ ಕವಿತೆಯನ್ನೂ ಬರೆಯುವುದಿಲ್ಲ.
ನೀನೂ ಅಷ್ಟೇ..ಬರೆಯಕೂಡದು!
ಮೌನವೂ ಮೌನವಾಗಿ
ಬದುಕಿನೊಂದಿಗೆ ಮಾತಾಡಲಿ!
ನೆನಪುಗಳೆಲ್ಲವೂ ಕನಸುಗಳೊಂದಿಗೆ
ಸಾಕಾಗುವ ತನಕ ಹೊಡೆದಾಡಿಕೊಳ್ಳಲಿ!
ನನ್ನ ಅಕ್ಷರಗಳೆಲ್ಲವನ್ನೂ ಅಲ್ಲಿಯವರೆಗೆ
ಚುಕ್ಕು ತಟ್ಟಿ ಮಲಗಿಸುತ್ತೇನೆ.
ಏನಾದರೂ ಹೇಳಲೇಬೇಕೆಂದಿದ್ದರೆ,
ಆ ಹುಣಸೇಮರದ ಕುಂಟಗುಬ್ಬಿಗೆ ಹೇಳಿರು!
ಹಾಗೆನೇ..ರಾತ್ರಿಯ ಮುಗಿಲನೊಮ್ಮೆ ನೋಡಿಕೋ..
ನಾನೂ ಕೂಡ,ತಂಗಾಳಿಯನೊಮ್ಮೆ ಮಾತಾಡಿಸುವೆ!
ಧಾರೆ - ೦೧
ಹನಿ - ೧
ಹುಟ್ಟು ಯಾವುದಾದರೇನು?
ಪಕ್ಷಿಯದಿರಲಿ..ಪಶುವಿನದಿರಲಿ,
ಜನುಮಕ್ಕಂಟಿದ ಒಲವಿದ್ದರೆ ಸಾಕು!
ಮೂರು ಕ್ಷಣದ ಸ್ವರ್ಗ, ನೂರು ಕ್ಷಣವಾಗುತ್ತದೆ.
ನೂರು ಕ್ಷಣದ ನರಕ, ಮೂರು ಕ್ಷಣವಾಗುತ್ತದೆ.
++++++++++++++++++++++
ಹನಿ - ೨
ನಿನ್ನ ಊರಲ್ಲಿ ನಾನೊಬ್ಬ ಅಪರಿಚಿತ..
ನಿನ್ನ ಜನರ ಮಾತುಗಳು ನನಗೆ ಅರ್ಥವಾಗದು,
ನನ್ನ ಮೌನ, ಅವರಿಗೂ ಅರ್ಥವಾಗದು!
ಹಸಿವು ಮತ್ತು ಪ್ರೀತಿಗೆ ಭಾಷೆಯ ದರ್ದಿಲ್ಲವೆಂದು
ನೀನೊಮ್ಮೆ ಅವರೆಲ್ಲರಿಗೂ ತಿಳಿಸಿ ಹೇಳಿಬಿಡು!
++++++++++++++++
ಹನಿ - ೩
You See...
ಈ ಅಂತ್ಯಕ್ರಿಯೆ,ಸಮಾಧಿ,ತಿಥಿ...
ಇವೆಲ್ಲವೂ Meaningless ಕಣಾ!
ನಿನ್ನನ್ನು ನೆನಸಿಕೊಳ್ಳುವ ಒಂದು ಜೀವವೂ
ಈ ಭೂಮಿಯ ಮೇಲೆ
ನಿನ್ನ ಪಾಲಿಗೆ ಉಳಿದಿಲ್ಲದ ಕ್ಷಣವೇ
ನೀನಾಗಲೇ ಸತ್ತು ಬಿಟ್ಟೆ!
++++++++++++++++++++++
ಹನಿ - ೪
After all ಬರೀ 'ಸೊನ್ನೆ' ನೀನು!
ಯಾವುದಾದರೂ ಅಂಕಿಯ ಜೊತೆ
ತಗಲು ಹಾಕಿಕೊಂಡರೆ ಮಾತ್ರವೇ ನಿನಗೆ ಬೆಲೆ!
ನಿನ್ನ ಅಹಂಕಾರಕ್ಕೆ ನಗದೇ ಏನು ಮಾಡಲಿ?
++++++++++++++++++++++++
ಒಲವೇಕೆ ಅಷ್ಟು ನವಿರು?
ದೂರದ ಮೇಲೆ...
ನನ್ನ ಯಾವ ದೂರುಗಳೂ ಇಲ್ಲ.
ಕಾಲದ ಬಗೆಗಿನ ನನ್ನ ಜಗಳ...
ಈ ಜನ್ಮದಲ್ಲಿ ಮುಗಿಯುವುದೂ ಇಲ್ಲ.
ಈ ನಿಸರ್ಗ ಸಾಯುವುದೂ ಇಲ್ಲ.
ಆ ಕಾಲಕ್ಕೆ ವಯಸ್ಸೂ ಆಗುವುದಿಲ್ಲ.
ಮಾತುಗಳು ಮಾತ್ರವೇ ಸಾಯುತ್ತಿವೆ.
ಮೌನಕ್ಕೆ ಮುಪ್ಪಡರಿಬಿಟ್ಟಿದೆ.
ಆ ಹುಣಸೇಮರದ ಕುಂಟಗುಬ್ಬಿಯನ್ನು
ನಿನ್ನೆ ರಾತ್ರಿ ತಡೆಯಲಾರದೆ ಕೇಳಿಬಿಟ್ಟೆ...
"ಒಲವೇಕೆ ಇಷ್ಟೊಂದು ನವಿರು?"
ನನ್ನ ಅಕ್ಷರಗಳು
ನಿಮ್ಮ ಕೈಬೆರಳುಗಳು
ಪ್ರತೀದಿನ ಸವರುವ
ನನ್ನ ಈ ಅಕ್ಷರಗಳಲ್ಲಿ
ಒಂದೋ...
ಒಂದೆರಡು ರಕ್ತದ ಕಲೆಗಳು
ಇಲ್ಲವೇ..
ಒಂದೆರಡು ಬೆವರ ಹನಿಗಳು
ನಿಮ್ಮ ಬೆರಳುಗಳಿಗೆ ತಾಕಿರುತ್ತವೆ!
ಸ್ವಲ್ಪ ಹುಡುಕಿ ನೋಡಿ
ನಿಮ್ಮ ಹೃದಯವನ್ನು...
ಅಲ್ಲಿ ನನ್ನ ಅಕ್ಷರಗಳಲ್ಲಿ ಎರಡಾದರೂ
ಬೆಚ್ಚಗೆ ಅವಿತು ಕುಳಿತಿರುತ್ತವೆ!
ನಾನು ಸತ್ತರೂ,ಕೊಳೆತು ಮಣ್ಣಾದರೂ
ನನ್ನ ಅಕ್ಷರಗಳು ಬದುಕಿದ್ದರೆ
ಅಕ್ಷರಗಳನ್ನು ಮೂಡಿಸಿದ
ನನ್ನ ಬೆರಳುಗಳೂ ಸಾರ್ಥಕ!
ತಾಯಿ
ಕಾಳು ತುಂಬಿದ ತೆನೆ
ಭೂಮಿಯೆಡೆಗೆ ಬಾಗುತ್ತದೆ.
ಗೊಬ್ಬರ,ನೀರು ಕೊಟ್ಟದ್ದಕ್ಕೆ ನಮಿಸುತ್ತದೆ.
ದಿನ ತುಂಬಿದ ಮುದುಕನೂ
ಬಾಗುತ್ತಾನೆ..ತನ್ನ ಹೊತ್ತ ಭೂಮಿಯೆಡೆ.
ಕೂಸು ಹೊತ್ತ ತಾಯಿ ಮಾತ್ರವೇ
ಬಾಗುವುದಿಲ್ಲ ಭೂಮಿಯೆಡೆ,
ಅವಳು ಭೂಮಿಯನ್ನೇ ಹೊತ್ತಿರುತ್ತಾಳೆ!
ಸೊಂಟಕ್ಕೆ ಕೈಯಿಟ್ಟು ನೋಡುತ್ತಾಳೆ ಆಗಸದೆಡೆ
ದಿನಗಣನೆ ಮಾಡುವ ದಿನಕರನ ಕಡೆ!
ಸಾಂಗತ್ಯ
ನನ್ನ ಬದುಕೇ ಅಸಂಗತ..
ಆದರೂ ಬದುಕಿದ್ದೇನೆ..ಬದುಕುತ್ತೇನೆ.
ಅಸಂಗತದ ಕತ್ತಲಲ್ಲಿಯೇ
ನನ್ನ ನಾಳೆಗಳನ್ನು ಗಳಿಸಿಕೊಳ್ಳುವೆನೆಂಬ
ಹುಚ್ಚು ಹಂಬಲವಿತ್ತು ನನ್ನಲ್ಲಿ.
ಕತ್ತಲಿನಲ್ಲಿ ಮಾತುಗಳು ಸಾಯುತ್ತವಂತೆ..
ಬದುಕಲು ಮಾತುಗಳಾದರೂ ಏಕೆ ಬೇಕು?
ಕತ್ತಲಿನಲ್ಲೇ ಒಂಟಿತನವು ವಿಜೃಂಭಿಸುವುದಂತೆ..
ನನ್ನ ಸುತ್ತಲೂ ಸಾವಿರ ಸೂಫಿಗಳು ಕೂತಿದ್ದಾರೆ!
ಅವರಿಗೂ ಮಾತಿಲ್ಲ - ನನ್ನ ರಾತ್ರಿಗೂ ನಿದ್ದೆಯಿಲ್ಲ!
ಮೌನದಷ್ಟು ವಾಚಾಳಿ ಬೇರೆ ಯಾವುದಿದ್ದೀತು!
ಹುಣಸೇಮರದ ಆ ಕುಂಟಗುಬ್ಬಿ ನಗಬಹುದೇನೋ!
ಆಯಸ್ಸು ಕಳೆಯಲಿಕ್ಕೆ ಅಳು-ನಗುಗಳ ಹರಕತ್ತಿಲ್ಲ.
ಒಂದಷ್ಟು ಸತ್ತ ಕನಸುಗಳ ಸಾಂಗತ್ಯವಿದ್ದರೆ ಸಾಕು.
ಸೂತಕ
ಸುರಿವ ಮಳೆಗೂ
ಜಿಪುಣತನ ಬರುವುದಂತೆ..
ಸುಡುವ ಬಿಸಿಲಿಗೂ
ಬೇಸರವಾಗುವುದಂತೆ..
ಬೀಸುವ ಗಾಳಿಯೂ
ಸೋಮಾರಿಯಾಗುವುದಂತೆ..
ಸದಾ ಹರಿವ ನದಿಯೂ
ದಣಿದುಬಿಡುತ್ತದಂತೆ..
ನೂರು ಬಣ್ಣದ
ಮನಸ್ಸಿಗೂ ಕಪ್ಪಡರುತ್ತದಂತೆ..
ತೂಗುವ ಒಲವ
ಜೋಲಿಯೂ ತೂಕಡಿಸುತ್ತದಂತೆ..
ನಿತ್ಯ ಜರುಗುವ ಸೃಷ್ಟಿಯೂ
ಕ್ಷಣ ಸ್ಥಂಭಿಸುವುದಂತೆ..
ಕರಾರುವಕ್ಕಾಗಿರುವ
ಕಾಲವೂ ಕಕ್ಕಾಬಿಕ್ಕಿಯಾಗುವುದಂತೆ..
ಹುಟ್ಟು-ಸಾವುಗಳ
ಆವರ್ತನವೂ ನಿಂತುಬಿಡುತ್ತದಂತೆ..
ಹೀಗಿದ್ದಾಗ...
ನನ್ನ ಅಕ್ಷರಗಳೆಲ್ಲವೂ
ಆತ್ಮಹತ್ಯೆ ಮಾಡಿಕೊಂಡಿದ್ದರಲ್ಲಿ ಸೂಜಿಗವೇನು?
ನನ್ನ ಉಸಿರಿನ ಹಾಡಿಗೆ
ಸೂತಕ ಬಡಿದದ್ದರಲ್ಲಿ ವಿಶೇಷವೇನು?
ಬದುಕಿಸಿ ಬಿಡು..
ನಿನಗಾಗಿ ಅಂಗಲಾಚಿದ ಶಿಲೆಯಾಗಿದ್ದೇನೆ
ಕನಿಷ್ಠ ಗೋರಿ ಕಟ್ಟಲಾದರೂ ಬಂದುಬಿಡು "
ನಿನಗಾಗಿ ಒಣಗಿ ನಿಂತ ಮರವಾಗಿದ್ದೇನೆ,
ಕನಿಷ್ಠ ಸೌದೆಗಾದರೂ ನನ್ನನ್ನು ಕಡಿದುಬಿಡು.
ನಿನಗಾಗಿ ಉದುರಿ ಬಿದ್ದ ಹೂಪಕಳೆಯಾಗಿದ್ದೇನೆ,
ಕನಿಷ್ಠ ಕಸದಲ್ಲಾದರೂ ಎತ್ತಿ ಹಾಕಿಬಿಡು.
ನಿನಗಾಗಿ ಸತ್ತ ಮಾತಿನ ತುಣುಕಾಗಿದ್ದೇನೆ,
ಕನಿಷ್ಠ ಒಂದು ಬೈಗುಳದಿಂದಲಾದರೂ ಬದುಕಿಸಿಬಿಡು!
ಬರೆದು ಬಿಡು.
ನೋಡಿಲ್ಲಿ...
ನೀನು ಮಾತುಗಳ ಅರಸಿಯೇ ಇರಬಹುದು.
ನಿನಗೆ ಪದಗಳ ಭೋಪರಾಕ್ ಸಿಗುತ್ತಿರಬಹುದು.
ಆದರೆ ನಾನು..
ಮೌನದ ಊರಿನ ಸಾಮಾನ್ಯ ಪ್ರಜೆ.
ಇಲ್ಲಿಯ ಗಾಳಿಯ ಸದ್ದಿಗೂ ಸರಹದ್ದಿದೆ.
ಹೂ ಅರಳುವ ಶಬ್ಧಕ್ಕೂ ನಿಷಿದ್ಧವಿದೆ.
ಮಾತುಗಳನ್ನೆಲ್ಲಾ ಕಂಡಲ್ಲಿ ಕೊಲ್ಲಲಾಗುತ್ತಿದೆ.
ಇಷ್ಟಕ್ಕೂ ನನಗೆ ಏನಾದರೂ ಹೇಳುವುದಿದ್ದರೆ,
ಸೂರ‌್ಯೋದಯದ ಆಗಸದ ಮೇಲೆ ಬರೆದುಬಿಡು.
ಕಾಲದ ಜೊತೆ ಕೂತು ನಿರಾಳವಾಗಿ ಓದಿಕೊಳ್ಳುತ್ತೇನೆ!
ಬಿತ್ತಿಕೋ...
ಮಾತುಗಳ ಕೋಟೆ ಬೇಧಿಸಿ
Sunday, 24 October 2021
ಜನ
ಇಲ್ಲಿ ಎಲ್ಲರ ಎದೆಯಲ್ಲೂ ದಹಿಸುವ ಬೆಂಕಿ,
ತುಟಿಗಳಲ್ಲಿ ಮಾತ್ರ ಹೂವಿನ ಎಸಳು!
ಆದರೆ, ಮುಖದ ಮೇಲೊಂದು ಕೃತಕ ನಗು!
ಮಾತುಗಳೆಂದೂ ಹೃದಯದಿಂದ ಬರುವುದಿಲ್ಲ.
ಅವರ ನಗುವಿನಷ್ಟೇ ಕಣ್ಣೀರೂ ಕೂಡ ವಿಷವೇ!
ಆದರೂ ಅವರ ಹೆಣಕ್ಕೆ ಹೆಗಲಾಗಲು ನೂರು ಜನ!
ಪಿಂಡ ತಿನ್ನಲು ಬಂದ ಕಾಗೆಗೋ ಹಿಂಜರಿಕೆ!
ಭೂಮಿಗೂ ಹೇಸಿಗೆ,ಅವರಿಗೆ ಮಡಿಲಾಗಲು..!
ಕಾಲಕ್ಕೆ ಮಾತ್ರ, ಅದೆಂಥದ್ದೋ ಧಾವಂತ...
ಇವರನ್ನು ಹೊತ್ತು ಮೆರೆಸಲು..ಕೊಂದು ಮುಗಿಸಲು!
ನೀನು ಮಾತ್ರವೇ ಇರಬೇಕು!
ನನ್ನ ತನುವಿನೊಳಗೆ ಕರಗಿಬಿಡು.
ನನ್ನ ಎದೆಯ ಕೊಳದಲ್ಲಿ ಮುಳುಗಿಬಿಡು.
ನನ್ನ ಮನಸ್ಸೆಂಬ ಗಾಳಿಯಲ್ಲಿ ಹಾರಿಬಿಡು.
ಅಲ್ಲಿ ದೇಹದ ಲವಲೇಶವೂ ಇರಬಾರದು..
ನೆನಪು,ಪುಣ್ಯ-ಪಾಪಗಳ ಕರ್ಮದ ಸಹಿತ..
ನೀನು ಬಂದುಹೋದ ಗುರುತು ಕೂಡ..
ಜೀವವೂ ಕೂಡ ಶಾಶ್ವತವಾಗಿ ಇಲ್ಲವಾಗಬೇಕು.
ಪುನರ್ಜನ್ಮ ,ಮೋಕ್ಷಗಳ ಕೈಗೂ ಸಿಗದಂತೆ!
ನೀನು ಮಾತ್ರವೇ ಇರಬೇಕು,ಕಾಲದಾಚೆಯವರೆಗೂ!!
ಕೇಳು ...
ಮತ್ತೊಮ್ಮೆ..ಕೈ ಬಿಡಬೇಡ; ಕೊರಳ ಚಾಚುವವರೆಗೂ!!
ಕಾಣುವ ಸತ್ಯ
ಮನಸ್ಸಿನಲ್ಲಿ ಬಂಧಿಯಾದವನಿಗೆ
ಅಳು - ನಗು
ಸದಾಕಾಲವೂ
ನಗುತ್ತಿರುವವನ ಬಗ್ಗೆ
ಅಚ್ಚರಿಪಡಬೇಡ...
ಅವನೊಳಗೆ ಮಡುಗಟ್ಟಿದ
ನೋವೆಷ್ಟಿರುತ್ತದೆ ಗೊತ್ತಾ?
ಕೆಂಡಕ್ಕೆ ನಗುವಿನ ಬಟ್ಟೆಯನ್ನು
ಕಂಬನಿಯಲ್ಲದ್ದಿ ಹೊದಿಸಿರುತ್ತಾನಷ್ಟೇ..
ನಗುತ್ತಿರುತ್ತಾನೆ..ಎಲ್ಲರೆದುರು,ನನ್ನಂತೆ!
ಅಳುತ್ತಿರುತ್ತಾನೆ..ಒಬ್ಬನೇ ಇದ್ದಾಗ,ನನ್ನಂತೆ!
ಪ್ರಾರ್ಥಿಸು...
ಬಾ...ಕೊಲ್ಲೋಣ
ಬಾ..ಅವರೊಂದಿಗೆ ಅದೇನು ಮಾತು ನಿನ್ನದು?
ಒಮ್ಮೆ ಈ ಭೂಮಿಯಿಂದ ಕಳೆದುಹೋಗಿ ಬಿಡುವ!
ಮೌನವನ್ನೇ ಹಾಸಿಹೊದ್ದು ತಣ್ಣಗೆ ಮಲಗಿಬಿಡುವ!
ಕಾಲವನ್ನು ಕಾಲಬಳಿ ಸ್ವಲ್ಪಕಾಲ ಮಲಗಿಸಿಕೊಳ್ಳುವ!
ಸಾವಿನ ಭಯವನ್ನು ಮೀರಿ,ಇಬ್ಬರೇ ಬದುಕಿಬಿಡುವ!
ಬಾ..ಇಲ್ಲಿ ಅದೆಂಥಾ ವ್ಯವಹಾರ ನಿನ್ನದು?
ಆಗಸದೆಡೆ ಒಮ್ಮೆಗೇ ಇಬ್ಬರೂ ನೆಗೆದುಬಿಡುವ!
ಹಕ್ಕಿಗಳ ಜೊತೆಗೊಮ್ಮೆ ಕೈಹಿಡಿದು ನಕ್ಕುಬಿಡುವ!
ರಾತ್ರಿ ಆಗಸದಲ್ಲಿ ಮಿನುಗುವ ಚುಕ್ಕಿಗಳಾಗಿಬಿಡುವ!
ನಮ್ಮ ಕನಸುಗಳನ್ನು ಹುಡುಕಿ ಕೊಂದುಬಿಡುವ!
ಹಸಿವು
ಹಸಿವಿಗೆ ಅಕ್ಷರ ಓದಲುಬಾರದು ದೊರೆ!
ನಿನ್ನ ಆಗಸದಲಗೆಯ ಬರಹವೂ ತಿಳಿಯದು!
ಅದಕ್ಕೆ ಸ್ಮರಣಶಕ್ತಿಯೂ ಕಡಿಮೆಯೇ..
ಆದರೆ, ಹಸಿವು ಬರೆವ ಕಾವ್ಯ ಮಾತ್ರ ಅನನ್ಯ!
ಅದರ ಕಾವ್ಯಕ್ಕೆ ಛಂದ-ಬಂಧಗಳೇ ಅಡ್ಡಬೀಳುತ್ತವೆ!
ಹಸಿವಿಗೆ ಹಾಡುವುದು ಗೊತ್ತಿಲ್ಲ ದೊರೆ,
ಸಪ್ತಸ್ವರದ ಅಲಾಪದ ಕರ್ಮ ಅದಕ್ಕಿಲ್ಲ.
ಆದರೆ, ಅದು ತುಂಬಾ ಚನ್ನಾಗಿ ಕುಣಿಯಬಲ್ಲದು!
ಹಾಗೆಯೇ ಜಗತ್ತನ್ನೂ ಚನ್ನಾಗಿ ಕುಣಿಸಬಲ್ಲದು!
ಹಸಿವಿಗೆ,ದಾಕ್ಷಿಣ್ಯ-ಮಾನಗಳ ಹಂಗಿಲ್ಲ ದೊರೆ,
ಅದರ ದೈನ್ಯಕ್ಕೆ ನೆಲವೂ ಮುಗಿಲೂ ಬಗ್ಗುತ್ತವೆ!
ಅದರ ರಚ್ಚೆಗೆ ಸೃಷ್ಟಿಯೂ ಸೋತು ಶರಣಾಗುತ್ತದೆ.
ಸಮಧಾನಿಸಲು,ಸಂತೈಸಲು ಸಾವೇ ಬರಬೇಕು!
ದೂರ - ದೂರು
ದೂರದ ಮೇಲೆ...
ನನ್ನ ಯಾವ ದೂರುಗಳೂ ಇಲ್ಲ.
ಕಾಲದ ಬಗೆಗಿನ ನನ್ನ ಜಗಳ...
ಈ ಜನ್ಮದಲ್ಲಿ ಮುಗಿಯುವುದೂ ಇಲ್ಲ.
ಈ ನಿಸರ್ಗ ಸಾಯುವುದೂ ಇಲ್ಲ.
ಆ ಕಾಲಕ್ಕೆ ವಯಸ್ಸೂ ಆಗುವುದಿಲ್ಲ.
ಮಾತುಗಳು ಮಾತ್ರವೇ ಸಾಯುತ್ತಿವೆ.
ಮೌನಕ್ಕೆ ಮುಪ್ಪಡರಿಬಿಟ್ಟಿದೆ.
ಆ ಹುಣಸೇಮರದ ಕುಂಟಗುಬ್ಬಿಯನ್ನು
ನಿನ್ನೆ ರಾತ್ರಿ ತಡೆಯಲಾರದೆ ಕೇಳಿಬಿಟ್ಟೆ...
"ಒಲವೇಕೆ ಇಷ್ಟೊಂದು ನವಿರು?"
+++++++++++++++++++++++
Saturday, 23 October 2021
ಅಸಂಗತ ಸ್ವಗತ
ಸೆರಗು ಕಚ್ಚಿ
ಅಳುವ ಮುಚ್ಚಿಡುವ
ಅವಳ ಆ ಯತ್ನವನ್ನು
ಈ ಜಗತ್ತು...
"ಮಾತು"-ಎಂದು ಕರೆಯುತ್ತದೆ!
ಕಂಬನಿಯ ನದಿಗೆ
ನಿಟ್ಟುಸಿರಿನುಪ್ಪು ಕರಗಿಸಿದ
ಅವಳನ್ನು "ಮೌನಿ" ಎನ್ನುತ್ತದೆ!
ಅತ್ತವಳನ್ನು "ಹುಚ್ಚಿ" ಎನ್ನುತ್ತದೆ!
ನಕ್ಕವಳನ್ನು "ವೇಶ್ಯೆ" ಎನ್ನುತ್ತದೆ!
ಕಳೆದುಕೊಂಡವಳನ್ನು "ಹೆಣ" ಎನ್ನುತ್ತದೆ!
ಆರಡಿಯ ಗುಂಡಿಗೆ ತಳ್ಳುತ್ತದೆ ಜಗತ್ತು..
ಮಣ್ಣು ಮುಚ್ಚಿ , "ಭೂಮಿ"ಎನ್ನುತ್ತದೆ!
ಹೊಟ್ಟೆಯೊಳಗಿನ ಕೂಸು ಮಾತ್ರವೇ
ಅವಳನ್ನು "ಅಮ್ಮ" ಎಂದು ತಬ್ಬುತ್ತದೆ!
ನನ್ನ ಶ್ರಾದ್ಧ ಮಾಡಿಕೋ
ಹುಣ್ಣಿಮೆಯಾಗಸದಲ್ಲಿ
ಬೆಳದಿಂಗಳು ಬರಿದಾದ ದಿನ..
ಕಣ್ಣೆವೆಗಳ ತುದಿಯಂಚಲ್ಲಿ..
ಜಿನುಗುವ ತೊರೆ ಬತ್ತಿದ ದಿನ..
ನಿನ್ನ ಬೊಗಸೆಗೆ ಚುಕ್ಕೆಗಳ ಬದಲಿಗೆ
ಉರಿವ ಉಲ್ಕೆಗಳು ಉದುರಿದ ದಿನ..
ನಾನಿಟ್ಟ ಬದುಕಿನ ಹೆಜ್ಜೆಗಳೆಲ್ಲಾ
ನನ್ನ ಹಿಂದೆಯೇ ಓಡಿಬಂದು ಸತ್ತ ದಿನ..
ನನ್ನ ಕನಸುಗಳೆಲ್ಲವೂ ನಿನ್ನ ಕಾಲಡಿ
ಬಿದ್ದು ಒದ್ದಾಡಿ ಉಸಿರುಗಟ್ಟಿ ಸತ್ತ ದಿನ..
ನಾನಿಲ್ಲವೆಂದುಕೋ..ನನ್ನ ಶ್ರಾದ್ಧ ಮಾಡಿಕೋ..!
ಜಗತ್ತು "ಹೆಣ್ಣು" ಎಂದು ಕರೆಯುತ್ತದೆ.
ಕತ್ತಲಾಗುತ್ತಾಳೆ ಒಮ್ಮೊಮ್ಮೆ
ಕಂದನಿಗೆ 'ಗುಮ್ಮ'ನನ್ನು ತೋರಿಸಲು!
ಬೆತ್ತಲೂ ಆಗುತ್ತಾಳೆ ಮತ್ತೊಮ್ಮೆ
ಮೈಯ ನಾಡಿಯೂಡುವ ಹಾಲನುಣಿಸಲು!
ಬೆಳಕಾಗುತ್ತಾಳೆ ಅವಾಗವಾಗ
ಬೆರಗಿನ ಜಗತ್ತನ್ನು ಬಯಲು ಮಾಡಲು!
ಕೊಳಕೂ ಆಗುತ್ತಾಳೆ ಅನಿವಾರ್ಯವಾಗಿ
ಕಂದನ ಕೊಳೆ ತೊಳೆದು ಸುಖಿಸಲು!
ಗಾಳಿಯಾಗುತ್ತಾಳೆ ಯಾವಾಗಲೋ ಒಮ್ಮೆ
ಜಗದ ಸರ್ವಗಂಧಗಳನ್ನ ಕಂದನಿಗೂಡಲು!
ಮಳೆಯೂ ಆಗಿ ಧೋ ಎಂದು ಸುರಿಯುತ್ತಾಳೆ,
ಕಣ್ಣೀರನ್ನೆಲ್ಲಾ ಮಳೆಯೊಂದಿಗೆ ಕಳೆಯುತ್ತಾಳೆ!
ಭೂಮಿಯಾಗುತ್ತಾಳೆ..ಭಾರವಾಗುತ್ತಾಳೆ
ಬೆಂಕಿಯಾಗುತ್ತಾಳೆ..ಉರಿದು ಸುಡುತ್ತಾಳೆ
ಹಸಿರಾಗುತ್ತಾಳೆ..ಚಿಗುರಿ ನಲಿಯುತ್ತಾಳೆ
ಹೂವಾಗುತ್ತಾಳೆ..ಅರಳಿ ಫಳ್ಳನೆ ನಗುತ್ತಾಳೆ
ಅವಳು ಎತ್ತುವ ಅವತಾರಗಳೆದಷ್ಟು?
ದಶಾವತಾರಿ ವಿಷ್ಣುವೂ ಎಣಿಸಿ ಸೋಲುತ್ತಾನೆ.
ನನ್ನನ್ನು ಹೆತ್ತದ್ದು ಅವಳೇ..ಬ್ರಹ್ಮನೂ ಒಪ್ಪುತ್ತಾನೆ.
ನಾನವಳ ಕಾಲ ತೊತ್ತು..ಶಿವನೂ ಬಾಗುತ್ತಾನೆ.
ಜಗತ್ತು ಅವಳನ್ನು "ಹೆಣ್ಣು" ಎನ್ನುತ್ತದೆ.
ಮಡಿಲ ಕೂಸು "ಅಮ್ಮ" ಎಂದು ಕರೆಯುತ್ತದೆ.
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
-
ಪ್ರೀ ತಿಯಿಂದ ಸಾಕಿದ ಮಕ್ಕಳು.. ಕಣ್ಣೆದುರಿನಲ್ಲಿಯೇ ಆಸ್ತಿಯನ್ನು ಪಾಲು ಮಾಡಿಕೊಳ್ಳುವ , ಕಟ್ಟಿದ ಮನೆಯನ್ನು ಎರಡಾಗಿ ವಿಭಾಗಿಸಿಕೊಳ್ಳುವ ಕ್ಷಣ ಕೊಟ್ಟಷ್ಟು ಸಂಕಟವನ್ನು....
-
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...