ಕತ್ತಲಾಗುತ್ತಾಳೆ ಒಮ್ಮೊಮ್ಮೆ
ಕಂದನಿಗೆ 'ಗುಮ್ಮ'ನನ್ನು ತೋರಿಸಲು!
ಬೆತ್ತಲೂ ಆಗುತ್ತಾಳೆ ಮತ್ತೊಮ್ಮೆ
ಮೈಯ ನಾಡಿಯೂಡುವ ಹಾಲನುಣಿಸಲು!
ಬೆಳಕಾಗುತ್ತಾಳೆ ಅವಾಗವಾಗ
ಬೆರಗಿನ ಜಗತ್ತನ್ನು ಬಯಲು ಮಾಡಲು!
ಕೊಳಕೂ ಆಗುತ್ತಾಳೆ ಅನಿವಾರ್ಯವಾಗಿ
ಕಂದನ ಕೊಳೆ ತೊಳೆದು ಸುಖಿಸಲು!
ಗಾಳಿಯಾಗುತ್ತಾಳೆ ಯಾವಾಗಲೋ ಒಮ್ಮೆ
ಜಗದ ಸರ್ವಗಂಧಗಳನ್ನ ಕಂದನಿಗೂಡಲು!
ಮಳೆಯೂ ಆಗಿ ಧೋ ಎಂದು ಸುರಿಯುತ್ತಾಳೆ,
ಕಣ್ಣೀರನ್ನೆಲ್ಲಾ ಮಳೆಯೊಂದಿಗೆ ಕಳೆಯುತ್ತಾಳೆ!
ಭೂಮಿಯಾಗುತ್ತಾಳೆ..ಭಾರವಾಗುತ್ತಾಳೆ
ಬೆಂಕಿಯಾಗುತ್ತಾಳೆ..ಉರಿದು ಸುಡುತ್ತಾಳೆ
ಹಸಿರಾಗುತ್ತಾಳೆ..ಚಿಗುರಿ ನಲಿಯುತ್ತಾಳೆ
ಹೂವಾಗುತ್ತಾಳೆ..ಅರಳಿ ಫಳ್ಳನೆ ನಗುತ್ತಾಳೆ
ಅವಳು ಎತ್ತುವ ಅವತಾರಗಳೆದಷ್ಟು?
ದಶಾವತಾರಿ ವಿಷ್ಣುವೂ ಎಣಿಸಿ ಸೋಲುತ್ತಾನೆ.
ನನ್ನನ್ನು ಹೆತ್ತದ್ದು ಅವಳೇ..ಬ್ರಹ್ಮನೂ ಒಪ್ಪುತ್ತಾನೆ.
ನಾನವಳ ಕಾಲ ತೊತ್ತು..ಶಿವನೂ ಬಾಗುತ್ತಾನೆ.
ಜಗತ್ತು ಅವಳನ್ನು "ಹೆಣ್ಣು" ಎನ್ನುತ್ತದೆ.
ಮಡಿಲ ಕೂಸು "ಅಮ್ಮ" ಎಂದು ಕರೆಯುತ್ತದೆ.
No comments:
Post a Comment