Monday 25 October 2021

"ಉಮ್ಮಾ ಹೋಗಿಬಿಟ್ಟಳು ಕಣೋ!"


 "ಉಮ್ಮಾ ಹೋಗಿಬಿಟ್ಟಳು ಕಣೋ.."

ಸೈನಕ್ಕ ಉಮ್ಮಳಿಸಿ ಅಳುತ್ತಾ ಹೇಳಿದ್ದಳು. ಒಂದು ಕ್ಷಣ ನನಗೂ ದುಃಖ ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಎದುರಿಗೆ ಅತ್ತರೆ,ಅತ್ತುಬಿಡುವ introvert ನಾನು! ಸಿನಿಮಾ ನೋಡುವಾಗಲೂ ಅತ್ತವನು! ಸೈನಕ್ಕನ ಅಳುವಿನೊಂದಿಗೇ ಮನೆಯ ಹೆಂಗಸರ,ಮಕ್ಕಳ ಅಳುವೂ ಕೇಳುತ್ತಿತ್ತು.

            ಫಾತೀಮಜ್ಜಿ....ಮೊಮ್ಮಗಳ ಶಾದಿ,ಬಾಣಂತನ,ಮರಿಮೊಮ್ಮಕ್ಕಳ ಲಾಲನೆ ಮಾಡುವಷ್ಟು ಅವಳು ಗಟ್ಟಿಯಿದ್ದಳು. ಒಂದು ಸಣ್ಣ ಜ್ವರಕ್ಕೆ ಶರಣಾಗಿದ್ದಕ್ಕೆ ಅಚ್ಚರಿಯಾಗಿತ್ತು ನನಗೆ! ಡಾಕ್ಟರು-ಆಸ್ಪತ್ರೆ ಎಂದು ಗಡಿಬಿಡಿ ಮಾಡುವಷ್ಟರಲ್ಲೇ ನಿರಮ್ಮಳವಾಗಿ ಎದ್ದು ಹೋಗಿಬಿಟ್ಟಿದ್ದಳು.

           ಅಷ್ಟೂ ಜನ ಮಕ್ಕಳನ್ನು ಎದೆಗೆ ಹಾಕಿಕೊಂಡು ದುಡಿದು,ಕುಡುಕ ಗಂಡನೊಂದಿಗೆ ಏಗುತ್ತ ಮಕ್ಕಳೆಲ್ಲರ ದಡ ಮುಟ್ಟಿಸಿದ ಅವಳ ಬದುಕಿನ ಬಗ್ಗೆ ನನಗೆ ಹೆಮ್ಮೆಯಿತ್ತು.ನನ್ನವ್ವನೂ ಹಾಗೇ ಅಲ್ಲವೇ! ಬಹುಶಃ ಆ ತಲೆಮಾರೇ ಹಾಗೆನಾ..ಗೊತ್ತಿಲ್ಲ!

          ಮನೆಗೆ ಹೋದ ಪ್ರತೀಸಾರಿಯೂ ತಟ್ಟೆತುಂಬಾ ಮೀನು ಬಡಿಸಿ,ಚುರುಕಾಗ್ತಾರೆ ತಿನ್ನೋ ಎನ್ನುತ್ತಾ ತಾಯಿಯಂತೆ ಉಣಿಸಿದವಳು! 'ನಿನ್ನ ಮದುವೆ ಒಂದು ಮಾಡಬೇಕು..ನಮ್ಮ ಸಾಬರ ಹುಡುಗೀನೇ ಮಾಡಕೋ,ಅಕ್ಕನಿಗೆ ಹೇಳತೇನೆ'ಎಂದು ನಗಾಡುತ್ತಿದ್ದವಳು..

ಸಾವು ಯಾರನ್ನು ಬಿಟ್ಟಿಲ್ಲ ಹೇಳಿ? ಆದರೆ,ಫಾತೀಮಜ್ಜಿಯ ಸಾವು ಬರೀ ಸಾವಲ್ಲ..ಅದೊಂದು ಕುಟುಂಬ ಮೌಲ್ಯದ ಸಾವು!

ಸೈನಕ್ಕನಿಗೆ,ಫರಾನ-ಸುಹೇಲ್ ರಿಗೆ ಸಮಾಧಾನ ಹೇಳಲು ನನ್ನಲ್ಲಿ ಮಾತುಗಳಿರಲಿಲ್ಲ.

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...