ಹಸಿವಿಗೆ ಅಕ್ಷರ ಓದಲುಬಾರದು ದೊರೆ!
ನಿನ್ನ ಆಗಸದಲಗೆಯ ಬರಹವೂ ತಿಳಿಯದು!
ಅದಕ್ಕೆ ಸ್ಮರಣಶಕ್ತಿಯೂ ಕಡಿಮೆಯೇ..
ಆದರೆ, ಹಸಿವು ಬರೆವ ಕಾವ್ಯ ಮಾತ್ರ ಅನನ್ಯ!
ಅದರ ಕಾವ್ಯಕ್ಕೆ ಛಂದ-ಬಂಧಗಳೇ ಅಡ್ಡಬೀಳುತ್ತವೆ!
ಹಸಿವಿಗೆ ಹಾಡುವುದು ಗೊತ್ತಿಲ್ಲ ದೊರೆ,
ಸಪ್ತಸ್ವರದ ಅಲಾಪದ ಕರ್ಮ ಅದಕ್ಕಿಲ್ಲ.
ಆದರೆ, ಅದು ತುಂಬಾ ಚನ್ನಾಗಿ ಕುಣಿಯಬಲ್ಲದು!
ಹಾಗೆಯೇ ಜಗತ್ತನ್ನೂ ಚನ್ನಾಗಿ ಕುಣಿಸಬಲ್ಲದು!
ಹಸಿವಿಗೆ,ದಾಕ್ಷಿಣ್ಯ-ಮಾನಗಳ ಹಂಗಿಲ್ಲ ದೊರೆ,
ಅದರ ದೈನ್ಯಕ್ಕೆ ನೆಲವೂ ಮುಗಿಲೂ ಬಗ್ಗುತ್ತವೆ!
ಅದರ ರಚ್ಚೆಗೆ ಸೃಷ್ಟಿಯೂ ಸೋತು ಶರಣಾಗುತ್ತದೆ.
ಸಮಧಾನಿಸಲು,ಸಂತೈಸಲು ಸಾವೇ ಬರಬೇಕು!
No comments:
Post a Comment