Saturday, 20 November 2021

ಹಾದಿ - ೩


 ನಾಳೆ ಎನ್ನುವುದು

ಒಡೆದು ಓದದ ಕಾಗದ!

ನಿನ್ನೆ ಎನ್ನುವುದು

ನಾಲಗೆಯಲ್ಲಿ ಉಳಿದ

ವಿಸ್ಮಯದ ಘಮಲು!

ಮತ್ತು ಇಂದು ಎನ್ನುವುದು ;

ಮನದೊಳಗಣದ ಭಿತ್ತಿ!

ಕೆತ್ತಿದ ಕ್ಷಣಗಳೆಲ್ಲವೂ ಗತ!

ನೆನಪ ಬೀಜಗಳ ಕ್ಷತ-ಅಕ್ಷತ ಪಥ!

ಚಿಗುರೊಡೆದರೆ,ನಿನಗೆ ದಾರಿ!

ಮುರುಟಿ ಸತ್ತರೆ,ನನ್ನದೇ ದಾರಿ!

ಹೌದು,ಅದೇ 'ಹೆಜ್ಜೆ ಮೂಡದ ದಾರಿ'!


Thursday, 18 November 2021

ಸಾವು ಮತ್ತು ಘಜಲ್

 

'ಇಲ್ಲೇ ಐದು ನಿಮಿಷ ಹೋಗಿಬರತೇನೆ ಅಂತ ಅವನು ಹೋದ ಕಣ. ಇವತ್ತಿಗೆ ಐನೂರು ದಿನ ಆದವು.ಬರಲೇ ಇಲ್ಲ ಹೋದವನು!' - ಅವಳು ಹೇಳುತ್ತಲೇ ಇದ್ದಳು. ತುಂಬಾ ಚಂದನೆಯ ಸಂಸಾರವಾಗಿತ್ತು ಅವಳದು. ಎರಡು ವರ್ಷದ ಹಿಂದೆ ಗಂಡ ಆ್ಯಕ್ಸಿಡೆಂಟಿನಲ್ಲಿ ತೀರಿದಾಗಿನಿಂದ ಅವಳನ್ನು ಸಂತೈಸಿ ನಾನೇ ಬೇಸತ್ತಿದ್ದೆ.

         'ಈ ಇಬ್ಬರು ಮಕ್ಕಳು ಇಲ್ಲದೇ ಇದ್ದಿದ್ರೆ ನಾನೂ ಅವತ್ತೇ ಅವನ ಜೊತೆಗೇ ಹೋಗಿಬಿಡುತ್ತಿದ್ದೆ.' ಬಿಕ್ಕುತ್ತಿದ್ದಳು ಅವಳು. ಇಬ್ಬರೂ ಮಕ್ಕಳು ಆಗಲೇ ಮಲಗಿದ್ದರು. 

         'ಎಲ್ಲರೂ ಕ್ಯಾಲೆಂಡರಿನಲ್ಲಿ ದಿನ ಎಣಿಸ್ತಾರೆ..ನಾನು ಪ್ರತೀ ನಿಮಿಷಕ್ಕೂ ಎಣಿಸ್ತಾ ಇದೀನಿ ಕಣೋ' ಅವಳ ಅಳುವಿನ ಕಟ್ಟೆ ಒಡೆದಿತ್ತು. ನನ್ನ ಕಣ್ಣಲ್ಲೂ ನೀರು!

ಅವಳ ಗಂಡನಂತೆ, ಇಲ್ಲೇ ಒಂದು ನಿಮಿಷ ಹೋಗಿಬರತೇನೆ ಅಂದು ಶಾಶ್ವತವಾಗಿ ತಣ್ಣಗೆ ಹೋಗಿ ಬಿಡುವ ರೀತಿಯನ್ನು ನಿರ್ಲಿಪ್ತನಾಗಿ ಯೋಚಿಸಿದ್ದೆ. ಸಾವಲ್ಲೂ ಕೂಡ  ಒಳ್ಳೆಯ ಸಾವು-ಕೆಟ್ಟ ಸಾವು ಇರುವುದರ ಬಗ್ಗೆ ತಮಾಷೆ ಎನಿಸಿತ್ತು.

             ಅದೆಷ್ಟು ಬಾರಿ ಅವಳ ಅಳುವಿನ ನದಿಗೆ ಎದೆಯೊಡ್ಡಿದ್ದೇನೋ ಏನೋ. ಸಮಯ ರಾತ್ರಿ 2 ಗಂಟೆಯಾಗಿತ್ತು.

ಹೆಡ್ ಫೋನಿನಲ್ಲಿ...

ಜಗಜಿತ್ ಸಿಂಗ್ ಮಾತ್ರ ಹಾಡುತ್ತಲೇ ಇದ್ದ! ಆ ಘಜಲಿನಲ್ಲಿ ಬದುಕಿತ್ತಾ..ಸಾವಿತ್ತಾ...ಎಂದು ಹುಡುಕುವ ಹೊತ್ತಿಗೆ ಬೆಳಕು ಹರಿದಿತ್ತು.

Wednesday, 17 November 2021

ಜೋಲಿಯಾಗು!


 ಕವಿತೆಯೇ...

ನೀನೀಗ ನನಗೆ ಮಜಾ ಅಲ್ಲ.

ನೀನೇನು ನನಗೆ ಖಯಾಲಲ್ಲ.

ನಿನ್ನನ್ನೇನು ನೂರು ಜನ ಓದಬೇಕಿಲ್ಲ.

ಓದಿದವರೆಲ್ಲ ನನಗೆ ಹೇಳುವ

ಭೋಪರಾಕುಗಳಿಂದ  ಆಗಬೇಕಾದ್ದೇನಿಲ್ಲ.

ನಿನ್ನನ್ನು ಬರೆದು,ಎಲ್ಲೋ ಹಾಕಿಕೊಂಡು

ನಾನೇನು ದೊಡ್ಡ ಪೋತಪ್ಪನಾಗಬೇಕಿಲ್ಲ.

ಕವಿತೆಯೇ....

ಛಂದ-ಪ್ರಾಸಗಳ ಅಲಂಕಾರ ನಿನಗಿಲ್ಲ.

ಶಬ್ಧ-ಅರ್ಥಗಳ ಭಾರ ಹೊರಬೇಕಿಲ್ಲ.

ಕಣ್ಣ ಸೆಳೆವ ಶೀರ್ಷಿಕೆಯೂ ನಿನಗಿಲ್ಲ.

ನೀನೇನು ವೇದಿಕೆಯ ಹಾಡಾಗಬೇಕಿಲ್ಲ.

ನೀನು ನನ್ನ ಅಂತರಂಗದ ಗೋಳೂ ಅಲ್ಲ.

ಬಹಿರಂಗದ ಬಾಯಿ ಬಡಾಯಿಯೂ ಅಲ್ಲ.

ಕವಿತೆಯೇ...

ನನ್ನಂತೆ ತುಳಿಸಿಕೊಂಡು ಅತ್ತವರ

ಅತ್ತು ಸತ್ತವರ,ಎದೆಯ ಬೆಂಕಿಯಾಗು!

ಬಡವರ ಬಟ್ಟೆಯಾಗದಿದ್ದರೂ ಚಿಂತೆಯಿಲ್ಲ.

ಅವರ ಹಸಿದ ಹೊಟ್ಟೆಯ ರೊಟ್ಟಿಯಾಗು!

ಬಿದ್ದವರ ಮೇಲೆತ್ತುವ ಬಲಗೈಯ ರಟ್ಟೆಯಾಗು!

ಜೋಲು ಮೊಲೆ ಚೀಪುವ ಕೂಸಿಗೆ ಜೋಲಿಯಾಗು.

ಬಾಯಿ ಸತ್ತವರಿಗೆ ಬಲ ತುಂಬಿ ಖಾಲಿಯಾಗು.




Sunday, 14 November 2021

ಊರೆಂಬಾ ಊರಿಗೆ ಮಂಕು ಕವಿದಿತ್ತು.....!


 ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವನ ಮಗಳು,ಅವಳ ಹೆಸರು ಈಗಲೂ ನೆನಪಿದೆ - "ಕಾಸವ್ವ"! ನನಗಿಂತಲೂ ದೊಡ್ಡವಳು, ನಮ್ಮೊಡನೆ ಹಗಲಿಡೀ ಆಡಲು ಬರುತ್ತಿದ್ದಳು. ಹುಣಸೇಮರಗಳನ್ನು ಸರಸರನೇ ಹತ್ತುವುದರಲ್ಲಿ ಅವಳು ಎಕ್ಸಪರ್ಟು ಆಗ! ಅವನ ಹೆಂಡತಿ ಊರಿನ ಲಿಂಗಾಯತರೊಂದಿಗೆ ಬಂಧುವಿನಂತೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದಳು. ಹಗಲಿಡೀ ಗಂಡನೊಂದಿಗೆ ದುಡಿದರೂ ಆಗಾಗ ಕುಡಿದುಬಂದು ಹೊಡೆಯುವ ಅವನ ಮತ್ತೊಂದು ಮುಖದ ಕ್ರೌರ್ಯವನ್ನೂ ಹಂಚಿಕೊಳ್ಳುತ್ತಿದ್ದಳು. 


ಆ 'ಕಲಾಯಿಸಾಬಿ' ಅದ್ಭುತವಾಗಿ ಭಜನೆ ಹಾಡು ಹಾಡುತ್ತಿದ್ದ. ಗುಡಿಯ ಪ್ರತಿದಿನದ ಭಜನೆಯಲ್ಲಿ ಅವನ ಹಾಡು! ಅವನು ಮಸೀದಿಗೆ ಹೋಗಿದ್ದನ್ನು ನಾನೆಂದೂ ನೋಡಿರಲಿಲ್ಲ. ಅದೇ ಪೀರಲದೇವರ ಗುಡಿಯಲ್ಲೇ ಐದು ಬಾರಿ ನಮಾಜ್ ಮಾಡುತ್ತಿದ್ದ.

ಅವನ ಹೆಸರು ನೆನಪಿಲ್ಲ. ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಕಳೆದ ಇಪ್ಪತ್ತು ವರ್ಷಗಳಲ್ಲಿ ಆ 'ಕಲಾಯಿಸಾಬಿ' ನನಗೆ ಹುಡುಕಿದರೂ ಸಿಕ್ಕಿಲ್ಲ. ಅವನ ಮಗಳು ಎಲ್ಲಾದರೂ ಸಿಕ್ಕಿದರೆ, " ಹೇಗಿದ್ದೀಯಾ ಅಕ್ಕಾ?" ಎಂದು ಪ್ರೀತಿಯಿಂದ ಮಾತಾಡಿಸಬೇಕೆಂಬ ನನ್ನ ಆಸೆ ಹಾಗೇ ಇದೆ.


ಈಗಲೂ ನನ್ನೂರಿನ ಕೆಲವು ಪಿಂಜಾರ ಮುದುಕರು ಅದ್ಭುತವಾಗಿ 'ಬಯಲಾಟ' ಕುಣಿಯಬಲ್ಲರು. ರಾಮ-ಕೃಷ್ಣ-ವಿರೋಚನ-ಕಂಸರಾಗಬಲ್ಲರು! ಒಬ್ಬ ಮುದುಕ, 'ಜೈಮಿನಿ ಭಾರತ'ವನ್ನು ಚನ್ನಾಗೇ ವಾಖ್ಯಾನಿಸಬಲ್ಲರು! ಈಗ ಅದೆಲ್ಲಾ ಇತಿಹಾಸ ಬಿಡಿ!


ಮೊದಲೆಲ್ಲಾ ಸಾಬರೂ ಊರಿನ ಹಿಂದೂ ದೇವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಯನ್ನು ಹೊರುತ್ತಿದ್ದರು.ಹಣ್ಣುಕಾಯಿ ಮಾಡಿಸಿ,ಹರಕೆ ಹೊತ್ತು ಕೈ ಮುಗಿದು ಅಡ್ಡ ಬೀಳುತ್ತಿದ್ದರು. ಲಿಂಗಾಯತರನ್ನೆಲ್ಲಾ "ಮಾವ"," ಅತ್ತೆ" ಗಳೆಂದೇ ಮಾತಾಡಿಸುತ್ತ ಅವರೊಳಗೊಂದಾಗಿದ್ದರು. ಮೊಹರಂ ನ ಚೊಂಗಿ ಅದೆಷ್ಟು ಲಿಂಗಾಯತ ಮನೆಗಳ ದೇವರ ಜಗಲಿಯಲ್ಲಿರುತ್ತಿತ್ತು!


          ಊರಲ್ಲಿ ವರ್ಷಕ್ಕೊಮ್ಮೆ ಆಷಾಢದಲ್ಲಿ ಮಾಡುವ ಲಿಂಗಾಯತರೂ,ದಲಿತರೂ ಮಾಡುತ್ತಿದ್ದ ಹಬ್ಬ 'ಹೋಳಿಗೆಮ್ಮ' ನ ಹಬ್ಬವನ್ನು ಅವರೂ ಮಾಡುತ್ತಿದ್ದರು. ಕಾರಹುಣ್ಣಿಮೆಯಂದು ತಮ್ಮ ಎತ್ತುಗಳನ್ನು ಮೈ ತೊಳೆದು,ಕೋಡಿಗೆ ಬಣ್ಣ ಸವರಿ,ಶೃಂಗರಿಸುತ್ತಲಿದ್ದರು. ಸೋಮವಾರದ ದಿನ ಬೇಸಾಯ ಮಾಡುವುದು ನಿಷಿದ್ಧವಾದ್ದರಿಂದ ಆ ಕಟ್ಟಳೆಯನ್ನು ಈಗಲೂ ಅವರು ಮೀರಿಲ್ಲ.


         ಕ್ರಮೇಣ ಕಾಲ ಬದಲಾಯಿತು. ಹಿರಿಯ ಪಿಂಜಾರ ಮುದುಕರು ಸತ್ತರು.ಲಿಂಗಾಯತ,ದಲಿತ ಮುದುಕರೂ ಸತ್ತರು.ಹೊಸ ತಲೆಮಾರು ಹಳೆಯ ಮೌಲ್ಯಗಳನ್ನು ಅಸಡ್ಡೆ ಮಾಡಿತು. ಊರಲ್ಲಿ ಮಸೀದಿ ಆಯಿತು.ಬೇರೆ ಊರುಗಳ,ರಾಜ್ಯಗಳ ಇತರೇ ಜನರೂ ಮಸೀದಿಗೆ ಬಂದು ಬೋಧನೆ ಮಾಡಲು ಸುರುಹಚ್ಚಿದರು. ಅಷ್ಟೂ ಕಾಲ ಪಿಂಜಾರರಾಗಿದ್ದವರು, ದಿಡೀರನೇ ಮುಸ್ಲಿಮರಾಗಿದ್ದರು!. ಮದರಸಾ ಹುಟ್ಟಿಕೊಂಡಿತು. ಯಾವುದೋ ಓಣಿಯ ತಿರುವಿನಲ್ಲಿ 'ಟಿಪ್ಪು ಸರ್ಕಲ್' ಎಂಬ ಬೋರ್ಡು ನೇತಾಡತೊಡಗಿತು. ಟಿಪ್ಪು ಜಯಂತಿಯೂ ನಡೆಯಿತು.


        ಮತ್ತೊಂದೆಡೆ ಇವರಿಗೆ ಸಮಾಂತರವಾಗಿ ನಾವೂ ಕಮ್ಮಿಯಲ್ಲ ಎಂದು,ಲಿಂಗಾಯತರ ಹುಡುಗರು ಆರೆಸ್ಸೆಸ್ ಶಾಖೆಯನ್ನು ಮಾಡಿದರು.ಊರಿನ ಪ್ರಮುಖ ದೇವಸ್ಥಾನವಾದ ಹಾಲಸ್ವಾಮಿಯ ಜಾತ್ರೆಯ ಮುಳ್ಳುಗದ್ದುಗೆಯ ಮೆರವಣಿಗೆಯೂ ಮಸೀದಿಯ ಮುಂದಿನಿಂದಲೇ ಹೊರಟಿತು. ಆಗಲೂ ಕೆಲವು ಸಾಬರ ಭಕ್ತರು ಮುಳ್ಳುಗದ್ದುಗೆಯನ್ನು ಹೊತ್ತರು. "ಹಾಲೇಶ್ವರ ಭೋ ಪರಾಕ್" ನ ಘೋಷಕ್ಕೆ ದನಿಗೂಡಿಸಿದ್ದರು.

ಗಣೇಶ ಚತುರ್ಥೀಯ ಮೆರವಣಿಗೆಯು ಮಸೀದಿಯ ಮುಂದಿನಿಂದಲೇ ಹಾಯ್ದು ಹೋಗಲಾರಂಭಿಸಿತು.

ಜೈಶ್ರೀರಾಂ ಎಂಬ ಘೋಷಣೆಯು 'ಆಜಾನ್' ನಡುವೆ ಕೇಳಲಾರಂಭಿಸಿತು. ಯಾವ ಸಾಬರೂ "ಹಾಲೇಶ್ವರ ಭೋರಾಕ್" ಗೆ ದನಿಗೂಡಿಸಿದಂತೆ, "ಜೈ ಶ್ರೀರಾಂ" ನ ಘೋಷಕ್ಕೆ ದನಿಗೂಡಿಸಲಿಲ್ಲ..


           ಸೋಶಿಯಲ್ ಮೀಡಿಯಾಗಳು ಹಳ್ಳಿಯ ಮುಗ್ಧ ಯುವಕರ ಮನಸ್ಸುಗಳನ್ನು ಒಡೆದಿದ್ದವು. ದರಿದ್ರ ಮಾಧ್ಯಮಗಳು ಊರಿನ ನೆಮ್ಮದಿಗೆ ಕಲ್ಲು ಹಾಕತೊಡಗಿದ್ದವು. ಮೋದಿಯ ಸರಕಾರ ಬಂದ ನಂತರದಿಂದ ಇದು ವಿಪರೀತಕ್ಕೆ ಹೋಗಿತು. ಮೋದಿಯ ಅನುಯಾಯಿಗಳೆನಿಸಿಕೊಂಡ ಹಲವು ಚಿಂತಕರು ಹಿಂದೂ ಯುವಕರ ಅಂತರಂಗದ ಕೊಳಕ್ಕೆ ಕಲ್ಲುಗಳನ್ನು ಬೀಸಿ ಬೀಸಿ ಒಗೆಯಲಾರಂಭಿಸಿದ್ದರು. ಇಷ್ಟಕ್ಕೂ ಅವರು ಕಲ್ಲುಗಳನ್ನು ಒಗೆಯಬಲ್ಲವರಷ್ಟೆ ಆಗಿದ್ದರೇ ಹೊರತು, ಅವು ಎಬ್ಬಿಸುವ ಅಲೆಗಳ ಮೇಲೆ ಅವರಿಗಾವ ಅಧಿಕಾರವೂ ಇರಲಿಲ್ಲ.


      ಈಗ ನೋಡಿ...ಊರಿನಲ್ಲಿ ಸಣ್ಣ ಹಬ್ಬವಾದರೂ ಪೋಲೀಸರ ಉಪಸ್ಥಿತಿ ಬೇಕು.ಅವರು ಬಂದಾಗಲೆಲ್ಲಾ ಅವರ ಮೇಜುವಾನಿಯ ಖರ್ಚನ್ನು ನೋಡಿಕೊಳ್ಳಬೇಕು ಊರವರು.ಜಾತ್ರೆಯ ಸಂದರ್ಭದಲ್ಲಂತೂ ಇಪ್ಪತ್ತೋ ಮೂವತ್ತೋ ಸಾವಿರದ ದೊಡ್ಡ ರಖಮೇ ಪೋಲೀಸರಿಗೆ ಮೀಸಲಿಡಬೇಕು. ಚೆಂದಾಗಿ ನಡೆಯುತ್ತಲಿದ್ದ ಭಾವೈಕ್ಯದ 'ಮೊಹರಮ್' ಗೂ ಮಂಕು ಕವಿದಿದೆ. 


ಎರಡೇ ದಶಕದಲ್ಲಿ ಊರೆಂಬ ಜಗತ್ತು ಹೇಗೆ ಮಗ್ಗುಲು ಬದಲಿಸಿತು ನೋಡಿ! ದೇವರನ್ನು ಮನುಷ್ಯತ್ವದಲ್ಲಿ ಹುಡುಕುವದ ಬಿಟ್ಟ ಧರ್ಮಗಳು ರಕ್ಕಸತನದಲ್ಲಿ ಹುಡುಕತೊಡಗಿದ್ದವು. ಬದುಕುವುದನ್ನೇ ಸರಿಯಾಗಿ ಕಲಿಸದ ಧರ್ಮಗಳು ಸತ್ತ ನಂತರದ ಮೋಕ್ಷದ ಬಗ್ಗೆ ಅದೇನು ತಾನೇ ಹೇಳಿಯಾವು!


ಧರ್ಮಕ್ಕಿಂತಲೂ ಬದುಕು ದೊಡ್ಡದು ಕಣ್ರೀ..ಹಳ್ಳಿಗಳ ಜನರಿಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಬೇಕಾದಷ್ಟು ವಿಷಯಗಳಿವೆ. ಅವರುಗಳ ಬದುಕುಗಳೇ ಸ್ಥಿತ್ಯಂತರ ತಪ್ಪಿವೆ.ನೀರಿಲ್ಲದೆ ಬೋರುವೆಲ್ಲುಗಳು ಬತ್ತಿವೆ. ಚೆಂದನೆಯ ಎಲೆಬಳ್ಳಿಯ ತೋಟಗಳು ಒಣಗಿವೆ.ಮಳೆ ಬಿದ್ದರೂ ಬೆಳೆಗಳು ಕೈಗೆ ಬರದೆ ವರ್ಷಕ್ಕೊಂದು ಹೊಸ ರೋಗಕ್ಕೆ ತುತ್ತಾಗುತ್ತಿವೆ. ಹೇಗೋ ಬೆಳೆ ಬಂದರೂ ಬೆಲೆ ಸಿಗಬೇಕಲ್ಲ?

ಕೈಗೆ ಬಂದ ಮಗನಿಗೆ ಹೆಣ್ಣು ಸಿಗುತ್ತಿಲ್ಲ.ಮನೆ ಕಟ್ಟಲು,ಮಗಳ ಮದುವೆಗೆ ಮಾಡಿದ್ದ ಸಾಲ ತೀರುತ್ತಿಲ್ಲ....

ಇಷ್ಟೆಲ್ಲಾ..ಚಿಂತೆಗಳ ನಡುವೆ ಈ ಧರ್ಮ ತಾಢನಗಳು! 

ಕೃಷ್ಣ ಲಹರಿ


 ಅಷ್ಟೆಲ್ಲಾ ಕಷ್ಟಪಟ್ಟು ಕಂಸನನ್ನು ಕೊಲ್ಲುತ್ತಾನೆ ಕೃಷ್ಣ...ಆದರೆ,ತಾನು ಒಂದು ದಿನವೂ ರಾಜನಾಗಿ,ಆಡಳಿತ ಮಾಡುವುದಿಲ್ಲ.ತನ್ನಣ್ಣ ಬಲರಾಮನಿಗೂ ಬಿಡಲಿಲ್ಲ. ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ.

ಅಷ್ಟೆಲ್ಲಾ ಶ್ರಮಹಾಕಿ,ಕೌರವ-ಪಾಂಡವರ ಕಲಹ ಬಗೆಹರಿಸಲೆತ್ನಿಸಿದರೂ ಕೊನೆಗೆ ಯುದ್ಧವೇ ಆಗುತ್ತದೆ. ಒಳ್ಳೆಯವರಾದ ಪಾಂಡವರ ಪರವಾಗಿ ನಿಂತು ದುಷ್ಟ ಕುರುಕುಲವನ್ನು ಧ್ವಂಸ ಮಾಡಿದ ಕೃಷ್ಣನಿಗೆ ದಕ್ಕಿದ್ದಾದರೂ ಏನು? ಗಾಂಧಾರಿಯ ಘೋರ ಶಾಪ! ಏಕಾಂಗಿಯಾಗಿ ನರಳೀ ನರಳೀ ಸಾಯುವ ಶಿಕ್ಷೆ!

ಕೊನೆಗೆ ಸ್ವಂತ ಸಹೋದರಿಯಾದ ಪಾಂಚಾಲಿಯೂ ಕೃಷ್ಣನನ್ನು ನಿಂದಿಸುತ್ತಾಳೆ.ಕುಲಘಾತಕ,ಸ್ವಾರ್ಥಿಯೆಂದು ಜರಿಯುತ್ತಾಳೆ.ಕೃಷ್ಣಕುಲವೂ ನಾಶವಾಗಲೆಂದು ಆಶಿಸುತ್ತಾಳೆ!

ಕೃಷ್ಣ ಮಾತ್ರ ತನ್ನ ಎಂದಿನ ಅದೇ ಮಂದಸ್ಮಿತದಲ್ಲೇ ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುತ್ತಾನೆ. ತನ್ನವರೆಲ್ಲಾ ಪರಸ್ಪರ ಹೊಡೆದಾಡಿ ಸಾಯುವುದನ್ನೂ...ತನ್ನ ತಂದೆತಾಯಿ,ಹೆಂಡಿರು ಮಕ್ಕಳ ಶವಗಳಿಗೆ ಸಂಸ್ಕಾರವೂ ಇಲ್ಲದೆ ಹದ್ದು-ಕಾಗೆಗಳು ತಿನ್ನುವುದನ್ನೂ ಹಾಗೂ..ತನ್ನ ಕೊಳೆತುಹೋದ ಕಾಲು,ಅದರ ನೋವನ್ನೂ ಸಹ!!


°°°°°°°°°°°°°°° * °°°°°°°°°°°° * °°°°°°°°°°°°°°°°°


              ಮಹಾರಾಜ ಕಂಸನ ಪ್ರಿಯ ಸಹೋದರಿಯೂ,ರಾಜಪುತ್ರಿಯೂ ಆದ ದೇವಕಿಯ ಗರ್ಭದಲ್ಲಿ ಜನಿಸುತ್ತಾನೆ ಕೃಷ್ಣ! ತನ್ನ ಹಡೆದವಳ ಅಕ್ಕರೆಯನ್ನು ಅರೆಕ್ಷಣವೂ ಸವಿಯುವ ಯೋಗವಿಲ್ಲದೆ,ಅವಳ ಮಾತೃವಾಂಛಲ್ಯವನ್ನೂ ತಣಿಸದೆ, ಅದೆಲ್ಲೋ ದೂರದ ಯಮುನಾನದಿ ತೀರದ ಹಳ್ಳಿಗಾಡೊಂದರ ಯಕಃಶ್ಚಿತ್ ದನಗಾಹಿಯೊಬ್ಬನ ಹೆಂಡತಿಯಾದ ಯಶೋದೆಯ ಮಡಿಲು ಸೇರುತ್ತಾನೆ!

ಆ ದಸ್ಯುಗಳಲ್ಲಿ ಪ್ರೀತಿಯ ನದಿಯನ್ನು ಹರಿಸುತ್ತಾನೆ.ಇಡೀ ಬೃಂದಾವನವು ಮೌಢ್ಯತೆ,ಅನಾಗರೀಕತೆಯಿಂದ ವಿಮುಕ್ತವಾಗಿ ಜೀವನಪ್ರೀತಿಯ ಸೆಲೆಯಾಗಿಬಿಡುತ್ತದೆ. ಅಲ್ಲಿ ಅರಳುವ ಪ್ರತೀ ಹೂವಿಗೂ ತುಂಟತನ,ಚಿಗುರಿದ ಪ್ರತೀ ಹುಲ್ಲುಗರಿಗೂ ಪ್ರೇಮದಾಸೆ ಹುಟ್ಟುತ್ತದೆ. ಒಂದು ರೀತಿಯ ಪ್ರೀತಿಯ ಮಾಯೆ ಅಲ್ಲಿನವರನ್ನೆಲ್ಲಾ ವಿವಶಗೊಳಿಸಿಬಿಡುತ್ತದೆ. ಎಲ್ಲರೂ ಪ್ರೀತಿಸುವವರೇ..ಪ್ರೀತಿಸಲ್ಪಡುವವರೇ ಆಗಿಹೋಗುತ್ತಾರೆ.

ಎಲ್ಲರಿಗೂ ಇದೊಂದು ಅದ್ಭುತವಾಗಿ ಕಂಡರೆ, ಯಶೋದೆಗೆ ಮಾತ್ರವೇ ಕೃಷ್ಣನ ತಬ್ಬುಗೆಯಷ್ಟೇ ಸಹಜವಾಗಿ,ವಾಸ್ತವವಾಗಿ ಕಾಣುತ್ತದೆ! ...

ಮತ್ತು ಆ ರಾಧೆಗೆ ಮಾತ್ರ ತಮಾಷೆಯಾಗಿ!!


:::::::::::::::::::::::::::::::::::::::::::::::::::::::::::::::::::::::


            ಕೃಷ್ಣ ತನ್ನ ಕಾಲಿಗೆ ಆ ಬೇಟೆಗಾರನೊಬ್ಬ ಗುರಿತಪ್ಪಿ ಹೊಡೆದ ಬಾಣವು ನಾಟಿ,ರಕ್ತ ಚಿಮ್ಮಿದ ಕೂಡಲೇ "ಅಮ್ಮಾ.." ಎಂದು ನರಳಿ ಕೂಗುತ್ತಾನೆ!

ಹಡೆದ ದೇವಕಿ,ಬೆಳೆಸಿದ ಯಶೋದೆಯರ ಜೊತೆಗೆ ಇನ್ನೂ ಒಬ್ಬ ತಾಯಿ ಇರುತ್ತಾಳೆ ಅವನಿಗೆ! ಅವಳೇ - "ಪೂತನಿ" ಎಂಬ ರಕ್ಕಸಿ! ಅವಳೊಬ್ಬಳೇ ಕೃಷ್ಣನಿಗೆ ಎದೆಹಾಲು ಕುಡಿಸಿದವಳು! ಅವಳಲ್ಲಿದ್ದ ರಕ್ಕಸತನದ ವಿಷವನ್ನು ಹೀರಿ,ಮಾತೃತ್ವವನ್ನು ಮೈಯಲ್ಲರಳಿಸುತ್ತಾನೆ ಬಾಲಕ ಕೃಷ್ಣ!

ಅವನ ಕೊನೇಗಾಲದಲ್ಲಾದ ಕಾಲಿನ ಆ ಗಾಯಕ್ಕೆ ತನ್ನ ಸೆರಗು ಹರಿದು,ಪಟ್ಟಿಕಟ್ಟಿ ಸಾಂತ್ವನಿಸಿದವಳು ಪೂತನಿಯೇ! ಆ ಸೆರಗಿನ ತುಂಡು ತುಳಸೀದಳವಾಗಿ, ಅವನ ಸುರಿದ ರಕ್ತವೆಲ್ಲ ಕಣಗಿಲದ ಹೂವಾಗಿ ಅವನ ಕಳೇಬರವನ್ನು ಅಲಂಕರಿಸಿದ್ದವು! 

ಪೂತನಿಯ ಸ್ತನದ ಮೇಲೆ ಮಾತ್ರ ಕೃಷ್ಣ ಕಚ್ಚಿದ ಹಲ್ಲಿನ ಮುದ್ದಾದ ಗುರುತು!!


             

Saturday, 13 November 2021

ಚಾರ್ಲಿ ಚಾಪ್ಲಿನ್ ಎಂಬ ಹಸಿವಿನ ಪ್ರತಿಮೆ!


 ನೀವೆಲ್ಲರೂ ಆ "ಚಾರ್ಲಿ ಚಾಪ್ಲಿನ್" ನ ಸಿನಿಮಾಗಳ ಹಾಸ್ಯ ನೋಡಿ ಬಿದ್ದು ನಕ್ಕಿರುತ್ತೀರೇನೋ! ಆದರೆ, ನನಗೆ ಅವನ ಬಹುತೇಕ ಸಿನಿಮಾಗಳ ಹಾಸ್ಯದಲ್ಲೆಲ್ಲಾ ಹಸಿವಿನ ಭೂಗರ್ಭವೇ ಕಂಡಿದೆ. ತುಂಡು ಬ್ರೆಡ್ಡಿಗಾಗಿನ ಹಪಹಪಿ, ತೊಟ್ಟ ಬೂಟನ್ನೇ ಕಳಚಿ ಬೇಯಿಸಿ ತಿನ್ನುವ ಭೀಕರತೆ,ಎದುರು ಕುಳಿತ ಗೆಳೆಯನನ್ನೇ ಕಚ್ಚಿ ತಿಂದುಬಿಡುವಂಥ ರಕ್ಕಸತನದ Metaphor ಗಳ ಮೂಲಕ ಅವನ ಬದುಕು ಅನುಭವಿಸಿದ ಹಸಿವು ತೋರಿಸುತ್ತಾ ಹೋಗುತ್ತಿದ್ದಾನೇನೋ ಅನ್ನಿಸಿದೆ.


The Gold rush,Modern Days,The Kid,The Tramp,The Circus...ಹೀಗೇ ಎಲ್ಲಾ ಸಿನಿಮಾಗಳಲ್ಲೂ ಬಡತನ,ತೇಪೆ ಹಾಕಿದ ಹಳೆ ಕೋಟು,ಕಳಚಿ ಬೀಳುವ ಹಳೇ ಪ್ಯಾಂಟು,ಹರಕಲಾದ ಬೂಟು ಮತ್ತು ಅಪಾರವಾದ "ಹಸಿವು", ಸಿರಿವಂತರ ಟೊಳ್ಳುತನದ ನಾಗರೀಕತೆ,ಸ್ವಾರ್ಥಿಗಳ ಆಧ್ಯಾತ್ಮ-ಚರ್ಚು,ತಳವರ್ಗದ ಬದುಕುಗಳ ಎಂದಿಗೂ ಮುಗಿಯದ ತಲ್ಲಣಗಳೇ!

ಇಷ್ಟಕ್ಕೂ ಅವನು ಹುಟ್ಟಿದ್ದು-ಬೆಳೆದದ್ದಾದರೂ ಅಂಥದ್ದೇ ತಲ್ಲಣಗಳ ಮಧ್ಯೆಯೇ ಅಲ್ಲವಾ! ಹಸಿದ ಹೊಟ್ಟೆಯಲ್ಲೇ ಹೊಟ್ಟೆ ತುಂಬಿದವರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿಬಿಟ್ಟ ಆ ಚಾರ್ಲೀ! 

ಫಿರೋಜ್ ಗಾಂಧಿಯ ಬಗ್ಗೆ...


 












ಯಾಕೋ ಗೊತ್ತಿಲ್ಲ..ಇಂದಿರಮ್ಮನ ಗಂಡ 'ಫಿರೋಜ್ ಜಹಾಂಗೀರ್ ಗೆಂಢಿ'ಯ ವ್ಯಕ್ತಿತ್ವ ನಿಜಕ್ಕೂ ಇಷ್ಟವಾಗಿಬಿಡುತ್ತದೆ. ಹರೆಯದಲ್ಲಿ ಪ್ರೀತಿಸಿ ಮದುವೆಯಾದ ಇಂದಿರೆಯ ಜೊತೆಗಿನ ದಾಂಪತ್ಯ ಸುಖಕರವಾಗಿರಲಿಲ್ಲ. ತನ್ನ ಸರ್ಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳನ್ನೆಲ್ಲ ಬಯಲಿಗೆಳೆದು ತನ್ನನ್ನೇ ಪಾರ್ಲಿಮೆಂಟಿನಲ್ಲಿ ಲೆಫ್ಟ್-ರೈಟ್ ಝಾಡಿಸುತ್ತಿದ್ದ ಅಳಿಯನನ್ನು ನಖಶಿಖಾಂತ ದ್ವೇಷಿಸಿದ್ದರು ನೆಹರೂ! ಮದುವೆಗೂ ವಿರೋಧಿಸಿದ್ದರು,ನಂತರವೂ ಬೇರೆ ಮಾಡಲು ಪ್ರಯತ್ನಿಸಿದ್ದರು. ಮದುವೆಯ ಎರಡು ತಿಂಗಳಲ್ಲೇ ಫಿರೋಜನನ್ನು 'ಕ್ವಿಟ್ ಇಂಡಿಯಾ ಸತ್ಯಾಗ್ರಹ'ದ ನೆಪದಲ್ಲಿ ಜೈಲು ಕಾಣಿಸಿದ್ದರು. ಕೆಲವರ್ಷದ ನಂತರ ಆ ದಾಂಪತ್ಯದ ಬಿರುಕಿಗೆ ನೆಹರೂನೇ ಕಾರಣವೂ ಆದರು!

ಇಂದಿರೆ ತನ್ನ ಮಕ್ಕಳನ್ನು ತಂದೆಯಿಂದ ದೂರವೇ ಬೆಳೆಸಿದ್ದಳು. ಅವಳ ಚಾರಿತ್ರ್ಯವಾದರೂ ಎಂಥದು! ಅಪ್ಪನ ವಯಸ್ಸಿನ ಮಥಾಯಿಸ್ ಜೊತೆಗೆ,ತನ್ನ ಶಾಲಾಕಾಲದ ಮೇಷ್ಟರ ಜೊತೆ,ಕೊನೆಗೆ ತನ್ನ ಇಳಿವಯಸ್ಸಿನಲ್ಲಿ ಆ ಸನ್ಯಾಸಿ 'ಧಿರೇಂದ್ರ ಬ್ರಹ್ಮಚಾರಿ'ಯ ಜೊತೆಗೂ ಸಂಬಂಧವಿಟ್ಟಿದ್ದಳು ಆಕೆ! ಆದರೆ,ಬದುಕಿರುವವರೆಗೂ ಫಿರೋಜ್ ,ಕದ್ದುಮುಚ್ಚಿ ಮಕ್ಕಳನ್ನು ಭೇಟಿಯಾಗುತ್ತಿದ್ದ.ರಾಜೀವ್ ನನ್ನು ಹೆಚ್ಚು ಹಚ್ಚಿಕೊಂಡಿದ್ದ.ತಾಯಿಯಿಂದಾಗಿ ಅಪ್ಪನಿಂದ ದೂರವೇ ಬೆಳೆದ ಸಂಜಯ್ ಮಾತ್ರ ಪೋಲಿಯಾದ. ಅಣ್ಣ ರಾಜೀವ್ ಅಪ್ಪನ ಪಡಿಯಚ್ಚಾಗಿ ಬೆಳೆದ.

ಸ್ವೀಡಿಶ್ ಪತ್ರಕರ್ತ ಬರ್ಟೀಲ್ ಫಾಕ್ ನ  Feroze,the Forgotten Gandhi ಪುಸ್ತಕ ಅದ್ಭುತ!!!

ಮದುವೆಗಳು ಅಂದರೆ....

 

ಅಲ್ಲೊಂದಷ್ಟು ಹಾಸ್ಯ, ಕಾಲೆಳೆತ,ಸಣ್ಣ ಜಗಳ,ಹುಸಿಮುನಿಸುಗಳ ನಡುವೆಯೇ ದುಃಖ-ದುಮ್ಮಾನಗಳ ಮಾತು-ನಗುಗಳು...ಹಿರಿಯ ಜೀವಗಳ ಬದುಕಿನ ಪಾಠ,ಗೆಣೆಕಾರ್ತಿಯರ ಅಕ್ಕರೆ,ಅಪ್ಪನ ದುಗುಡ,ಅಣ್ಣನ ಪ್ರೀತಿ,ತಂಗಿಯ ತರ್ಲೆ ಮತ್ತು ಆಗಾಗ ಗೊತ್ತಿಲ್ಲದೆ ಒರೆಸಿಕೊಳ್ಳುವ ಅವ್ವನ ಕಣ್ಣಿನ ಮುಸಲಧಾರೆ....

ಇದರ ಜೊತೆಗೆ ಜನಪದದ ತುಂಟತನವೇನು ಕಡಿಮೆಯೇನು? ಹಾಡಿನಲ್ಲೇ ಬೀಗತಿಯ ಹಂಗಿಸುವ,ಹಾಡಿನಲ್ಲೇ ಭವಿತವ್ಯದ ಜವಬ್ದಾರಿಗಳನ್ನು ನಿರ್ದೇಶಿಸುವ ಹಳ್ಳಿಗರ ಮದುವೆಗಳು ನಿಜಕ್ಕೂ ಸುಂದರ..ಮೌಲಿಕ! ಅಲ್ಲೇ ಆಧ್ಯಾತ್ಮದ ಅನುಸಂಧಾನ,ಲೌಕಿಕದ ವ್ಯವಹಾರ..ಎಲ್ಲವೂ ಜರುಗಿಬಿಡಬಲ್ಲವು!


ಮೊದಲೆಲ್ಲಾ ತಿಂಗಳಿಡೀ ಮದುವೆಯಿರುತ್ತಿತ್ತಂತೆ. ಈಗೆಲ್ಲಾ ಎರಡೇ ದಿನಕ್ಕೆ ಲಕ್ಷಗಟ್ಟಲೆ ಸಾಲವಾಗಿ ಹೈರಾಣಾಗಿರುತ್ತಾರೆ ಪೋಷಕರು. ಸೋಬಾನೆ-ಸೊವ್ವೆಗಳಿಲ್ಲ. ಫೋನುಗಳಲ್ಲೇ ಹಳಬರಾಗಿರುವ ಜೋಡಿಗಳಿಗೆ ಶಾಸ್ತ್ರ-ಮೌಲ್ಯಗಳ ಹರಕತ್ತೇ ಗೊತ್ತಿರೋದಿಲ್ಲ. ಇನ್ನು ಸೋಬಾನೆ-ಸೊವ್ವೆಗಳೆಲ್ಲಿ ಇದ್ದಾವು? 

ಸಿಟಿಮಂದಿ ವಿಷಯ ಬಿಡಿ,ಅವರಿಗೆ ಅದೊಂದು Event management company ಯೊಂದರ ಪ್ಯಾಕೇಜಷ್ಟೇ!


ಇನ್ನು ಈ ಕೊರೊನಾ ಕಾಲದಲ್ಲಂತೂ ಓಣಿಗೂ ಗೊತ್ತಾಗದೆ ಕಳ್ಳತನದಲ್ಲೇ ಮದುವೆಗಳು! ಕರುಳ-ಬಳ್ಳಿಗಳ ಬಂಧಗಳನ್ನೇ ಈ ಕೋವಿಡ್ ಕತ್ತರಿಸಿಬಿಟ್ಟಿದೆ. ಎಂಥಾ ವೈರಿಗಳೂ ಕೂಡ ಸತ್ತಾಗ ಮಣ್ಣಿಗೆ ಹೋಗುತ್ತಿದ್ದವರು,ಈಗ ಕುಟುಂಬದವರು ಸತ್ತರೂ ಹೋಗಲು ಹಿಂದುಮುಂದು ನೋಡುವಂತಹ ಸ್ಥಿತಿ.. ಹೀಗಿದ್ದಾಗ ಮದುವೆಗೆ ಹೋಗುವುದು ದೂರದ ಮಾತು!


ಈ ಕೊರೊನ ಒಂದು ರೀತಿಯಲ್ಲಿ ಬಡವರ ಮದುವೆಯ ಅಷ್ಟೋ ಇಷ್ಟೋ ಖರ್ಚುಗಳನ್ನು ಕಮ್ಮಿ ಮಾಡಿದ್ದೇನೋ ನಿಜವೇ..ಆದರೆ, ಸಂಬಂಧಗಳನ್ನು ತೆಳವುಗೊಳಿಸಿದ್ದು ದುರಂತ. ಮದುವೆಗಳು ಅಂದರೆ,ಹೆಣ್ಣುಮಕ್ಕಳ ಸಂತೆ! ಯಾವತ್ತೋ ಕಲೆತವರು,ಅವತ್ತು ಕಲೆತು ಬಾಯತುಂಬಾ ಮಾತಾಡುವ ದಿನ. ಆ ಹಳ್ಳಿಯ ಹೆಂಗಸರಿಗೆ ಬೇಕೆಂದಾಗ ಬೇಕಾದವರನ್ನು ನೋಡೋಕೆ ಹೋಗೋದ ಸಾಧ್ಯವಿಲ್ಲವಲ್ಲ! ಹಾಗಾಗಿ ಈ ಮದುವೆಗಳಲ್ಲಿಯೇ ಅವರ ಬಾಲ್ಯದ ಗೆಣೆಕಾರ್ತಿಯರನ್ನು ,ದೂರದ ಬಂಧುಗಳನ್ನು ಭೇಟಿ ಮಾಡುವುದು!


             ಈಗೀಗ ಹಳ್ಳಿಗಳು ಬದಲಾದಂತೆ ತೋರಿದರೂ ಸಂಬಂಧಗಳ ದಟ್ಟತೆ ಇನ್ನೂ ಹಾಗೇ ಇದೆ ಕಣ್ರೀ..ಹಾಗೇ ಇರಬೇಕು ಕೂಡಾ! ಅದೇ ಜೀವದ್ರವ್ಯವಲ್ಲವೇ ಬದುಕುಗಳಿಗೆ!




ಶಫಾಕ್ ಳ ಪುಸ್ತಕದ ಬಗ್ಗೆ...


ನನ್ನಿಷ್ಟದ ತುರ್ಕಿಸ್ತಾನೀ(Turkey) ಬರಹಗಾರ್ತಿ "ಎಲೀಫ್ ಶಫಾಕ್" ಳ ಈ "The Bastard of Istanbul" ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ. In fact ಅವಳು ಈ ಪುಸ್ತಕ ಬರೆದಿದ್ದಕ್ಕೆ ಅನೇಕ ವರ್ಷ ಜೈಲು ಅನುಭವಿಸಿದಳು.ಹಿಂಸೆ-ಅತ್ಯಾಚಾರಕ್ಕೊಳಗಾದಳು. 1915 ರ ಜನವರಿಯಲ್ಲಿ ಮೊದಲ ವಿಶ್ವಯುದ್ಧ ಸಮಯದಲ್ಲಿ ಒಟ್ಟೋಮನಿ ತುರ್ಕರು ಆರ್ಮೇನಿಯಾ ಜನರ ಮೇಲೆ ನಡೆಸಿದ "ಭೀಕರ ನರಮೇಧ" ದ ಸಬ್ಜೆಕ್ಟಿದು. 15 ಲಕ್ಷ ಜನ ಮುಗ್ಧರ ಕೊಲೆ,ಲಕ್ಷಾಂತರ ಹೆಂಗಳೆಯರ ಸಾಮೂಹಿಕ ಅತ್ಯಾಚಾರ ನಡೆದಿತ್ತು ಆಗ.

ಅವಳ Three daughters of eve,Seven Rules of Love ತುಂಬಾ ಚಂದನೆಯ ಪುಸ್ತಕಗಳು.ಮಹಿಳಾ ಹಕ್ಕುಗಳ ಹೋರಾಟಗಾತಿಯಾಗಿ ಈಗಲೂ ತುಂಬಾ Active ಇರುವ ಹೆಂಗಸು ಈಕೆ.

ಅದಿರಲಿ..ಮೊನ್ನೆ ಇದೇ ಶಫಾಕ್ ಳ ಸಂದರ್ಶನವನ್ನು ಟರ್ಕಿಯ TRT ಚಾನೆಲ್ ನಲ್ಲಿ ನೋಡುತ್ತಿದ್ದೆ..ಅವಳು ಹೇಳುತ್ತಿದ್ದಳು - "ಮನುಷ್ಯ , ಧರ್ಮವನ್ನು ಯಾವತ್ತು ಸೃಜಿಸಿದನೋ ಅವತ್ತೇ ಮನುಷ್ಯತ್ವವೂ ನಾಶವಾಯಿತು.ಧರ್ಮಗಳನ್ನು ನಾಶಮಾಡಿ,ಮನುಷ್ಯತ್ವವನ್ನು ನಾವೀಗ ಸೃಜಿಸಬೇಕಿದೆ"

.........ನಿಜವಲ್ಲವೇ ಆಕೆ ಹೇಳಿದ್ದು?

(If anybody want this book,feel free to ask for it.I'll certainly send to them)

 

Thats Friendship!!!


ಬೇಸರ ಕಳೆಯಲು ತನ್ನ ಜೊತೆ ಪಗಡೆಯಾಡಲು ಕರ್ಣನನ್ನು ಕರೆಯುತ್ತಾಳೆ ಭಾನುಮತಿ. ಕರ್ಣ ಸಮ್ಮತಿಸಿ, ಆಟಕ್ಕೆ ಪಣವೇನೆಂದು ಕೇಳುತ್ತಾನೆ. ಭಾನುಮತಿ ತನ್ನ ಕೊರಳ ಮುತ್ತಿನ ಸರ ಪಣವಿಡುತ್ತಾಳೆ ಕರ್ಣ ತನ್ನ ಕಿರೀಟವಿಡುತ್ತಾನೆ. ಆಟ ರಂಗೇರುತ್ತದೆ. ಕರ್ಣನ ಕೈ ಮೇಲಾಗುತ್ತದೆ. ಅದೇ ಕ್ಷಣಕ್ಕೆ ಎಲ್ಲೋ ಹೋಗಿದ್ದ ದುರ್ಯೋಧನನೂ ಬರುತ್ತಾನೆ.ಆಟಕ್ಕೆ ತೊಂದರೆಯಾಗದಂತೆ ನೋಡುತ್ತ ಮರೆಯಲ್ಲಿಯೇ ನಿಲ್ಲುತ್ತಾನೆ.
ಗೆದ್ದೇ ಬಿಡುತ್ತಾನೆ ಕರ್ಣ. ಪಣವಿಟ್ಟ ಮುತ್ತಿನ ಸರ ಕೇಳುತ್ತಾನೆ. ಭಾನುಮತಿ ನಿರಾಕರಿಸುತ್ತಾಳೆ. 'ನಮ್ಮ ಊಳಿಗದ ತೊತ್ತಲ್ಲವೇ ನೀನು' ಎಂದು ಅಪಮಾನಿಸುತ್ತಾಳೆ. ಕರ್ಣ ಅವಳ ಕೊರಳ ಸರಕ್ಕೇ ಕೈ ಹಾಕುತ್ತಾನೆ. ಸರ ಹರಿಯುತ್ತದೆ.ಮುತ್ತುಗಳೆಲ್ಲಾ ನೆಲದಲ್ಲಿ ಹರಡುತ್ತವೆ.
ಮರೆಯಲ್ಲಿದ್ದ ದುರ್ಯೋಧನ ಕ್ರುಧ್ರನಾಗಿ, ಸೊಕ್ಕಿನ ಹೆಂಡತಿಯ ಕಪಾಳಕ್ಕೆರಡು ಬಿಗಿಯುತ್ತಾನೆ. ಹರಡಿದ ಮುತ್ತುಗಳೆಡೆ ಬಾಗಿ ಕೇಳುತ್ತಾನೆ... "ಮುತ್ತುಗಳನ್ನಾಯ್ದು ಕೊಡಲೇ ಕರ್ಣಾ?"

That's friendship!!

ಅಂಬೇಡಕರ್ ಮತ್ತು ಸಾವರಕರ್...


 ನಿನ್ನೆಯಿಂದಲೂ ನನ್ನ ಗೆಳೆಯರೇನಕರು "ಸಾವರ್ಕರ್" ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾವರ್ಕರ್ ರನ್ನು ಓದಿಕೊಂಡ ನನಗೆ ಅವರ "ಹಿಂದುತ್ವ" ದ ಬಗೆಗೆ ಸ್ಪಷ್ಟತೆಯಿದೆ. ಆ ಕಾಲಘಟ್ಟದಲ್ಲಿ ಆ ಚಿಂತನೆಯು ಮೈದಳೆದ ಹಿನ್ನೆಲೆ,ಆಗ ಮತ್ತು ಪ್ರಸಕ್ತ ವರ್ತಮಾನದಲ್ಲಿ ಅದು ಸಮಾಜದಲ್ಲಿ ಎಬ್ಬಿಸಿದ ತಲ್ಲಣಗಳು,ಭವಿಷ್ಯದಲ್ಲಿನ ಅದರ ಅಸಂಗತತೆಯ ಅರಿವೂ ನನಗಿದೆ. Yes..It's a Complete Bullshit!!

ಕಳೆದ ತಿಂಗಳಿನಿಂದಲೂ ಅಂಬೇಡ್ಕರ್ ರ ಸಮಗ್ರ ಬರಹ-ಭಾಷಣಗಳ ಸಂಪುಟಗಳ ಓದುಮುಗಿಸಿದ್ದೇನೆ. ಬಹುಶ

ಬರೋಬ್ಬರಿ 35 ಸಂಪುಟಗಳ ಮಹಾ ಸರಣಿ ಇದು.(ಆಸಕ್ತರಿಗೆ ಕೇಳಿದರೆ ಕಳಿಸಬಲ್ಲೆ) ಭಾರತೀಯ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ರ ಅಸ್ಖಲಿತ ಸ್ಪಷ್ಟತೆ ನನಗೆ ಬೆರಗುಮೂಡಿಸಿದೆ.

ಹಿಂದುತ್ವದ ಬಗೆಗಿನ ಅವರ ನಿಲುವು,ಕಮ್ಯುನಿಸಂ ಅನ್ನು ಅವರು ಸಾರಾಸಗಟು ತಿರಸ್ಕರಿಸಿದ ರೀತಿ,ಭಾರತದ ಸಮಾಜವನ್ನು ಸಮಾಜವಾದೀ ನೆಲೆಯಲ್ಲಿ ಹೇಗೆ ಕಟ್ಟಬಹುದೆನ್ನುವುದರ ಬಗೆಗಿನ ಅವರ ಕನಸು...ಹೃದಯ ತಟ್ಟುತ್ತವೆ.

ಅಂಬೇಡ್ಕರ್ ಯಾಕೆ ಎಲ್ಲರಿಗಿಂತಲೂ ಎತ್ತರ ನಿಲ್ಲುತ್ತಾರೆ ಎಂಬುದಕ್ಕೆ ನಾನು ಸಾವಿರ ಕಾರಣ ಕೊಡಬಲ್ಲೆ. ಸಾವರ್ಕರ್ ರ 'ಹಿಂದುತ್ವ' ಎನ್ನುವ ಪೊಳ್ಳುತನದ,ಕುತ್ಸಿತ ಚಿಂತನೆಯ ಹಿಂದೆ ಈಗಿನ ತರುಣವರ್ಗವು ಬೀಸುಗಾಲಿನ ಹೆಜ್ಜೆ ಹಾಕುವ ಪರಿಯೇ ಭಾರತಕ್ಕೆ ಅಪಾಯಕಾರಿ! ಈ 'ಸನ್ನಿ'ಗೆ ಅಂಬೇಡ್ಕರ್ ರೇ ಪರಿಹಾರ!

ಅಂಬೇಡ್ಕರ್ ರನ್ನು ಓದಿಕೊಳ್ಳಿ...ಆಮೇಲೆ ಬೇಕಾದರೆ ಜೈಶ್ರೀರಾಂ ಅನ್ನಿ!! 

ಕುಂ.ವೀ.ಯವರ "ಅರಮನೆ" ಕಾದಂಬರಿಯ ಬಗ್ಗೆ


ಕುಂ.ವೀ.ಯವರ 'ಅರಮನೆ' ವಿಶಿಷ್ಟವಾದ ಕೃತಿ.ಅದರ ಭಾಷೆಯ ನೇಯ್ಗೆಯೇ ಅತ್ಯದ್ಭುತ! ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತಳವೂರುವ ಆರಂಭಿಕ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ಅದರಲ್ಲೂ ಬಳ್ಳಾರಿ-ಆಂಧ್ರ ಭಾಗದ ತುಂಡು ಪಾಳೆಯಗಾರರು ತೆರೆಮರೆಗೆ ಸರಿಯುತ್ತಿದ್ದ ಯುಗಮಾನದಲ್ಲಿ "ಸರ್.ಥಾಮಸ್ ಮುನ್ರೋ" ಎಂಬ ಬ್ರಿಟಿಷ್ ಅಧಿಕಾರಿಯು ಇಲ್ಲಿನ ಗ್ರಾಮಭಾಗಗಳಲ್ಲಿ ಬದುಕಿದ ಸಂದರ್ಭವನ್ನು ಕುಂ.ವೀ.ಕಟ್ಟಿಕೊಡುತ್ತಾರೆ. ಕುದುರೆಡವು,ಜರ್ಮಲಿ,ಗುಡೇಕೋಟೆ ಯ ಪಾಳೇಪಟ್ಟಿನ ಹಳ್ಳಿಗೊಂಚಲುಗಳ ಜನಬಾಳ್ವೆಗಳು ಅನನ್ಯವಾಗಿ ತೆರೆದುಕೊಳ್ಳುತ್ತವೆ. ಜನಸಾಮಾನ್ಯರ ಇತಿಹಾಸದೆಡೆ ಕುತೂಹಲವುಳ್ಳವರಿಗೆ ಇದು ದಿಕ್ಸೂಚಿಯಾದೀತೇನೋ!

          ಹೇಳುವುದು ಮರೆತಿದ್ದೆ...ಕೂಡ್ಲಿಗಿ ತಾಲೂಕಿನ "ಸಿಡೇಗಲ್ಲು" ಗ್ರಾಮದಲ್ಲಿ ಆಗ ನಡೆದ ಪ್ರೇಮಪ್ರಕರಣವೊಂದನ್ನು ಕುಂ.ವೀ.ಇಲ್ಲಿ ಸುಂದರವಾಗಿ ಹರಡಿದ್ದಾರೆ. ಅಲ್ಲಿನ ಬಂಡೆ ಕಲ್ಲುಗಳಲ್ಲೂ ಜೀವಂತಿಕೆಯ ಸಾಕ್ಷ್ಯಗಳನ್ನು ಗುರುತಿಸುತ್ತಾರೆ. ಬಹುಶಃ ಇತಿಹಾಸಕಾರನ ನಿರುದ್ವಿಗ್ನ ಬರಡುತನಗಳು,ಸಂವೇದನೆಯುಳ್ಳ ಬರಹಗಾರರಾದ ಕುಂ.ವೀ.ಮೂಲಕ ನೀಗಿವೆ.
      
           ನನ್ನೂರ ಭಾಗದವರೇ ಆದ ಕುಂ.ವೀ.ಯವರ ಬಹುತೇಕ ಪುಸ್ತಕಗಳನ್ನು ಇಷ್ಟ ಪಟ್ಟು ಓದಿದ್ದೇನೆ. ಅವರ ಭಾಷೆಯು ನನ್ನೂರ ಭಾಗದ ಬಯಲುಸೀಮೆಯ ತೆಲುಗುಮಿಶ್ರಿತ ಕನ್ನಡವೇ ಅನ್ನುವುದೊಂದು ಕಾರಣವಾದರೆ, ಅವರ ಕಾದಂಬರಿ,ಕಥೆಗಳು ಕಟ್ಟಿಕೊಳ್ಳುವ ಪ್ರದೇಶವೂ ನನ್ನೂರಿನಂಥದ್ದೇ!  ಅದರಲ್ಲೂ ಗ್ರಾಮಭಾರತದ ತಳವರ್ಗದವರ ತಲ್ಲಣಗಳಿಗೇ ಅವರು ದನಿಯಾಗುವುದು. ಅಲ್ಲೇ ಅಲ್ಲವೇ ಕಥೆ ಹುಟ್ಟುವುದು!!
          

   

ದ್ವೇಶ


"ದ್ವೇಷ" ಅನ್ನುವುದೊಂದು ನಿಧಾನದ ಆತ್ಮಹತ್ಯೆ..Its a Slow Suicide! ಆ ನಂಜಿನ ವಿಷವು ಮೊದಲು ಕೊಲ್ಲುವುದು ನಮ್ಮನ್ನೇ!

ಕಮೂ ಹೇಳುತ್ತಾನೆ..

"If you spend your time hoping,someone will suffer the consequences for what they did your heart ; Then you're allowing them to hurt you a second time in your mind"

ಇಷ್ಟಕ್ಕೂ..

ಸೇಡಿಗಾಗಿ ಹೋರಾಡಿ

ಗೆದ್ದವರಾರಿಲ್ಲಿ?

ಸ್ವಾರ್ಥಕಾಗಿ ಬದುಕಿ

ಮೋಕ್ಷ ಪಡೆದವರಾರಿಲ್ಲಿ?

So..ಯಾರನ್ನೂ ದ್ವೇಷಿಸುವಷ್ಟು ಮೂರ್ಖರಾಗಬೇಡಿ.ಅವರನ್ನು ಕ್ಷಮಿಸಿ..ನಿರಾಳರಾಗಿ! ನಿಮ್ಮ ಕ್ಷಮೆಗೂ ಅವರು ಅರ್ಹರಲ್ಲದಿದ್ದರೆ Just ignore them! 

ಸುಖಾ ಅಂದರಾ....


 ಇಲ್ಯಾರೋ ಒಬ್ಬರು "ಬರೀ ಖುಷಿಯಾಗಿದ್ದರೆ,ಲೈಫು ಹೆಣಾ ಬೋರು ಕಣ,ಲೈಫಲ್ಲಿ ಅಳು,ದುಃಖ,ತಮಾಷೆ,ಜಗಳ,ದ್ವೇಷ,ಹೊಡೆದಾಟ..ಎಲ್ಲವೂ ಇದ್ದರೇನೆ ಚಂದ" ಅಂದರು! ಹಂಗೇ ಆಗಲಿ ತಾಯಿ..ಒಪ್ಪಿದೆ. 🙏🙏

ನಾನು ಹೇಳಿದ್ದು ....

ಖುಷಿಯನ್ನು ಹುಡುಕಿಕೊಂಡು ಅಲೆದಾಡುವವರ ಬಗ್ಗೆ.ಅಲ್ಪತೃಪ್ತರು,ಅತೃಪ್ತರ ಬಗ್ಗೆ! ಮನೆ ಕಟ್ಟಿಸೋ ಖುಷಿಗೆ,ಜೀವನದ ಖುಷಿಗಳನ್ನೆಲ್ಲಾ ಬಿಟ್ಟುಹಾಕಿ,ದುಡಿದು,ಸಾಲ ಮಾಡಿ,ಕೊನೆಗೆ ಅಲ್ಲಿ ವಾಸ ಮಾಡುವ ಕಾಲಕ್ಕೆ ಹಣ್ಣುಗಾಯಿಯಾಗಿರುತ್ತಾರೆ! 

ಒಂದೇನುಗೊತ್ತಾ? "ಸುಖ"- ಅನ್ನುವುದೊಂದು ಮಾನಸಿಕ ಸ್ಥಿತಿಯಷ್ಟೇ! ಎ.ಸಿ.ರೂಮಲ್ಲಿ ಕುರ್ಲಾನ್ ಬೆಡ್ಡಲ್ಲಿ ಮಲಗುವ ಸುಖದಷ್ಟೇ..ರಂಟೆ ಹೊಡೆದ ಹೊಲದ ಮಧ್ಯದ ಮಾವಿನ ಮರದ ನೆರಳಲ್ಲಿ ಮಲಗುವ ಸುಖ! ವ್ಯತ್ಯಾಸವಿಲ್ಲ.

ಮಳೆಯಿಲ್ಲದೇ ಪೈರು ಒಣಗಿ,ಕೊನೆಗೆ ಯಾವಗೋ ಬಂದ ನಾಲ್ಕು ಹನಿಗೆ ಬೆಳೆದ ಪೈರಿನ ತೆನೆ ಕೈಯಲ್ಲಿ ಹಿಡಿದು ಆ ಮುದಿ ರೈತನೊಬ್ಬ ಅನುಭವಿಸುವ ಧನ್ಯತೆಗೆ ಹೋಲಿಕೆಯಿಲ್ಲ!

ತಿನ್ನಲು ಏನೂ ಇಲ್ಲದ ದೈನೇಸಿ ಮಗುವಿನ ಕೈಗೆ ಒಣಗಿ ಹೆಟ್ಟೆಯಾದ ರೊಟ್ಟಿ ತುಂಡು ಸಿಕ್ಕು , ಅದನ್ನೇ ಪ್ರೀತಿಯಿಂದ ತಿಂದು ಹಗುರವಾಗಿ ತೇಗುವ ಸದ್ದಿಗೆ ಹೋಲಿಕೆಯಿಲ್ಲ!

"Eye in the Sky" ಸಿನಿಮಾ ಬಗ್ಗೆ....


 ಒಂದು ಕಡೆ ಆತ್ಮಹತ್ಯಾ ಬಾಂಬುಗಳ ವೆಸ್ಟ್(ಎದೆಕವಚ) ಕಟ್ಟಿಕೊಂಡು ಜನರನ್ನು ಕೊಲ್ಲಲು ಸಿದ್ಧರಾಗುತ್ತಿರುವ ಕೀನ್ಯಾದ 'ಅಲ್-ಶಬಾಬ್' ಉಗ್ರರು...ಅವರ ಪಕ್ಕದಲ್ಲೇ   ರೊಟ್ಟಿಗಳನ್ನು ಮಾರುವ ಪುಟ್ಟ ಹುಡುಗಿ(ಐಶಾ)...ಮತ್ತೊಂದೆಡೆ ಈ ಉಗ್ರರನ್ನು ವೈಮಾನಿಕ ಕ್ಷಿಪಣಿ ದಾಳಿಯಿಂದ ನಿರ್ನಾಮ ಮಾಡಲು ಸಿದ್ಧವಾಗುತ್ತಿರುವ USA,UK,ಯ ಸೈನ್ಯ!!

ಆ "ಗೇವಿನ್ ಹುಡ್" ನ ಈ ಮನಸ್ಸು ತಲ್ಲಣಗೊಳಿಸುವ ಸಿನಿಮಾ ನೋಡಿದವರನ್ನು ತುಂಬಾ ದಿನಗಳ ಕಾಲ ಡಿಸ್ಟರ್ಬ್ ಮಾಡಬಿಡುತ್ತದೆ! ಅಮಾಯಕ ಬಡವರಿಗೆ, ಹೊಟ್ಟೆಗಿಲ್ಲದಿದ್ದರೂ ಧರ್ಮದ ಅಮಲು ಹತ್ತಿಸಿ,ಗನ್ನು-ಬಾಂಬು ಕೊಟ್ಟು ರಕ್ತಹರಿಸಲು ಕಳಿಸುವ ಉಗ್ರ ಸಂಘಟನೆಗಳ ಮೇಲೆ ಸಿಟ್ಟು ಬಂದುಬಿಡುತ್ತದೆ.

But, They're still multiplying as viruses!

Eye in the Sky ಸಿನಿಮಾ ನೋಡಿದಾಗ ನನಗೆ ಅನಿಸಿದ್ದಿಷ್ಟು!

 Prime ನಲ್ಲಿ ನೀವೂ  ನೋಡಬಹುದು.

ಭಂಡಾರಿಯವರು ಹೇಳಿದ್ದು....


 ಸಂಘಪರಿವಾರದ ನನ್ನ ಗುರುಗಳಾದ ಚಂದ್ರಶೇಖರ ಭಂಡಾರಿಯವರ ಜೊತೆ ಮಾತಾಡುತ್ತಿದ್ದಾಗೊಮ್ಮೆ ಹೇಳಿದ್ದರು.

'ಸಂಘ ಸ್ಥಾಪನೆಯಾದಾಗಿನ ಸನ್ನಿವೇಶಕ್ಕೂ ಪ್ರಸಕ್ತ ಕಾಲಘಟ್ಟಕ್ಕೂ ಅಗಾಧ ವ್ಯತ್ಯಾಸವಿದೆ.ಕಾಲದ ಜೊತೆ ಹೆಜ್ಜೆಹಾಕಲು ಸಂಘಕ್ಕೆ ಸಾಧ್ಯವಾಗಲಿಲ್ಲ.ರಾಜಕೀಯದ ಒತ್ತಡ-ಪ್ರಭಾವಗಳೇ ಅದಕ್ಕೆ ತೊಡಕಾದವು.ಈಗಲೂ ಸಂಘದಲ್ಲಿ ಜಾತೀಯತೆ ಇದೆ. ಸಂಘವು ಸಾಮಾಜಿಕ ಆಂಧೋಲನದ ಸ್ವರೂಪ ತಾಳಬೇಕಿತ್ತೇ ಹೊರತು ರಾಜಕೀಯ ಶಕ್ತಿಯಾಗಿ ಬೆಳೆವ ಅಗತ್ಯ ಅದಕ್ಕಿರಲಿಲ್ಲ.'

ಅವರ ಮಾತಿನಲ್ಲಿ ಸತ್ಯವಿತ್ತು. ಒಬ್ಬ ರಾಜೇಂದ್ರಸಿಂಗ್ ರನ್ನು ಬಿಟ್ಟು ಬೇರೆ ಬ್ರಾಹ್ಮಣೇತರ ವ್ಯಕ್ತಿಯನ್ನು ಸಂಘ ಬೆಳೆಸಲಿಲ್ಲ. ರಾಜಾಜೀ ಅದಕ್ಕಾಗಿ ಸಾಕಷ್ಟು ಹಿಂಸೆ-ಅಪಮಾನ ಅನುಭವಿಸಿದ್ದರು. ಇಷ್ಟಾಗಿಯೂ ಸಂಘ ನನಗೆ ಅಪ್ಯಾಯಮಾನವೆನಿಸುವುದು ಒಂದೇ ಕಾರಣಕ್ಕೆ. ಅದು ಅದರ "ಕಠೋರ ಅನುಶಾಸನ"! ಸಂಘದಿಂದ ಕಲಿತದ್ದು ಬಹಳ..ಕಲಿಯಬೇಕಿರುವುದೂ ಇದೆ. ಇದೊಂದು ರೀತಿಯಲ್ಲಿ ಕಲ್ಲಿನಲ್ಲಿ ಕಾಳು ಆರಿಸುವ ಪ್ರಕ್ರಿಯೆ!!

ಆರಿಸಿಕೊಳ್ಳುತ್ತಿದ್ದೇನೆ... ಸಿಕ್ಕಷ್ಟು ಕಾಳುಗಳನ್ನು ಆ ಅಗಾಧ ಕಲ್ಲಿನ ರಾಶಿಯಲ್ಲಿ!!!

ಕಾಶ್ಮೀರದ ಬಗ್ಗೆ...



 ಕಾಶ್ಮೀರ ಮತ್ತೆ ಮುನ್ನೆಲೆಗೆ ಬಂದಿದೆ.ಹಿಂದೂ ನಿರಾಶ್ರಿತರನ್ನು ಪುನಃ ಅಲ್ಲಿ ನೆಲೆಗೊಳಿಸುವ ಪ್ರಯತ್ನಗಳಾಗುತ್ತಲಿವೆಯಂತೆ.ತಮ್ಮ ಪೂರ್ವಿಕರ ಆ ಸೇಬಿನ ತೋಟ,ಕೇಸರಿ ಬೆಳೆವ ಹೊಲಗಳಲ್ಲಿ ಮತ್ತೆ ಆ ನಿಷ್ಪಾಪಿ ಪಂಡಿತರು ಬೆವರು ಹರಿಸುವೆವೆಂಬ ಕನಸು ಕಾಣುತ್ತಿದ್ದಾರೆ. Al-Jazeera ಚಾನೆಲ್ ನಲ್ಲಿ ನಿನ್ನೆ ಅಲ್ಲಿನ ಸೂಫಿ ಮುಸ್ಲಿಮರ ಧಾರುಣ ಸ್ಥಿತಿಯ ಬಗ್ಗೆ ಡಾಕ್ಯುಮೆಂಟರಿ ನೋಡಿದೆ. ಧರ್ಮದ ಅಫೀಮು ತಲೆಗೇರಿಸಿಕೊಂಡರೆ,ಮೊದಲು ಬಲಿಯಾಗುವುದು ಅದೇ ಧರ್ಮದ ಬಡವರು,ಶೋಷಿತವರ್ಗದವರು! ಕಟ್ಟರ್ ಇಸ್ಲಾಮೀತನವು ಉದಾರೀತನದ,ಭಾವೈಕ್ಯ ಭಕ್ತಿಪರಂಪರೆಯ ಸೂಫಿಸಂ ನ್ನು ಸೇರುವುದಿಲ್ಲ. ಪಾಕಿಸ್ತಾನದ ಅನೇಕ ಸೂಫಿ ಹಾಡುಗಾರರಿಗೆ ಈಗಲೂ ಜೀವಭಯ ತಪ್ಪಿಲ್ಲ.ಅವರಿಗೆ ಭಾರತದಲ್ಲಿ ಇರುವಷ್ಟು ಗೌರವ ಅಲ್ಲಿಲ್ಲ.
ವರ್ಗಸಂಘರ್ಷವು ಎಲ್ಲಾ ಧರ್ಮಗಳಲ್ಲೂ ಇದ್ದದ್ದೇ. ಇಸ್ಲಾಮಿಗೂ ಒಬ್ಬ ಅಂಬೇಡ್ಕರ್ ಹುಟ್ಟಬೇಕಿತ್ತು!


'ರಶ್ದೀಯ 'Satanic Verses' ಬಗ್ಗೆ...


ಇಸ್ಲಾಂ & ಹಿಂದೂ Anatomy ಯನ್ನು ಸಾದೃಷ್ಯವಾಗಿಟ್ಟುಕೊಂಡು,ಲೀಪುಗಟ್ಟಲೆ ಬರೆಯಬಹುದು.ಆದರೆ ಬರೆದು ದಕ್ಕಿಸಿಕೊಳ್ಳುವುದು ಬಹಳ ಕಷ್ಟ! 'ರಶ್ದೀ' - ಆ ಕಷ್ಟವನ್ನು ಅನುಭವಿಸಿದವನು! ಈ ಪುಸ್ತಕದ ಮೇಲೆ 14 ಫತ್ವಾಗಳನ್ನು ಹೊರಡಿಸಲಾಯಿತು.ಭಾರತ,ಪಾಕ್ ಸೇರಿ ಸುಮಾರು ದೇಶಗಳು ಬ್ಯಾನ್ ಮಾಡಿದವು(ಈಗಲೂ ನಿಷೇಧವಿದೆ) Even ಇದರ ಹಿಂದಿ ಅನುವಾದ ಮಾಡಿದ್ದ "ಹಿತೋಶಿ" ಯ ಕೊಲೆಯೂ ಆಯ್ತು.ರಶ್ದೀಯನ್ನೂ ಕೊಲ್ಲಲು ಓಪನ್ ಆಗಿಯೇ ಬಹುಮಾನ ನಿಗದಿಯಾಗಿ,ಆ ಯತ್ನಗಳೂ ನಡೆದವು.
ರಶ್ದೀಯ 'The Midnight Children' ನಲ್ಲಿ ಅಣ್ಣ-ತಂಗಿಯ incestious sex relationship ಇದ್ದರೆ ಇದರಲ್ಲಿ ಖುರಾನ್ ನ ತೌರಾತ್-ಇಂಜೀಲ್ ಭಾಗಗಳನ್ನು ಎತ್ತಿಕೊಂಡು,ಎರಡೇ ಪಾತ್ರಗಳಲ್ಲಿ fiction ಕಟ್ಟುತ್ತಾ..ಕೆಡವುತ್ತ..ಕಟ್ಟುತ್ತಾ ಹೋಗುತ್ತಾನೆ ರಶ್ದೀ. Magical Realism ನ ತಳಹದಿಯಲ್ಲಿ ಹಿಂದೂ ಸನಾತನ ಚಿಂತನೆ ಹಾಗೂ ಇಸ್ಲಾಮಿಕ್ ನ mythology ಗಳನ್ನು ಬೆತ್ತಲು ಮಾಡುತ್ತ ಹೋಗುತ್ತಾನೆ. Novel ಒಂದರ ಚೌಕಟ್ಟು ಮುರಿಯುವ,ಹೊಸ ದಾರಿಯ ಹುಡುಕುವ ಅವನ ಯತ್ನ ಸೊಗಸಾಗಿದೆ.ಆದರೆ, ಓದಿದವನ ಎದೆಯಲ್ಲಿ ಎದ್ದ ಅಗ್ನಿದಿವ್ಯಕ್ಕೆ ಅವನು ಜವಾಬಿಲ್ಲ ಇಲ್ಲಿ!
ಬ್ಯಾನ್ ಆದ ಪುಸ್ತಕಗಳನ್ನು ಓದುವುದೇ ಒಂದು ಮಜಾ! ಎಚ್.ಎಸ್.ಶಿವಪ್ರಕಾಶ್ ರ ಮಹಾಚೈತ್ರ ,ಬಂಜಗೆರೆಯ 'ಆನುದೇವಾ ಹೊರಗಣವನು'..ಅರೇ..ಎಷ್ಟೊಂದಿವೆ ಓದಲಿಕ್ಕೆ!
ಗೆಳೆಯ @BCD ಕಳಿಸಿದ "ಸಲ್ಮಾನ್ ರಶ್ದೀ" ಯ ಈ ಪುಸ್ತಕವನ್ನು ಓದಿದಾಗ ಅನಿಸಿದ್ದು...

ಸುಗ್ಗಿ


ಆ ಸಾವಿಗೂ 

ಈಗ ಸುಗ್ಗಿಯ 

ಸಂಭ್ರಮವಿರಬೇಕು ನೋಡು!

ಈ ಮೋಡವೂ 

ನಿನ್ನೆಯಿಂದ ವಿಷಾದದ

ಗಾಳಿಯಲ್ಲೇ ತೇಲುತ್ತಿದೆ.

ಸಂಜೆಯ ಧೂಳಿನಲ್ಲಿ

ಜನರ ಅಳುವೆಲ್ಲಾ ಬೆರೆತಿದೆ.

ಅಷ್ಟೊಂದು ಮಾತು ಕಲಿತ

ನನ್ನ ರಾತ್ರಿಗಳೂ 

ಈಗ ಮೌನ ಹೊದ್ದು ಮಲಗಿವೆ.

ಮುಕ್ತಿ ಎಂದು?


 ಹೇಳು ಹೂವೇ...

ಹೆಪ್ಪುಗಟ್ಟಿದ ಮನಸ್ಸನ್ನು

ಕರಗಿಸುವ ಬಗೆ ಹೇಗೆಂದು?

ಇಬ್ಬನಿಯೇ ಹೇಳು...

ನಿನ್ನಲ್ಲಿ ಒಂದೆರಡಾದರೂ

ನನ್ನ ಕಣ್ಣಹನಿಗಳು ಬೆರೆತಿಲ್ಲವೇನು?

ಕಾಲವೇ ಹೇಳು...

ಎಲ್ಲೆಡೆ ಕವಿದ ಈ ನೋವಿನಲೆಗೆ

ಮುಕ್ತಿ ಯಾವತ್ತಿಗೆಂದು?

Wednesday, 3 November 2021

ತಾಯಿ ಆಗೋದು ಅಂದರಾ....


 ಯಾವುದೋ 'ಪುರುಷರೇಣು'ವಿನ ಫಲಿತಕ್ಕಾಗಿ 'ಭೂಮಿ'ಯಾಗುತ್ತಾಳೆ ಹೆಣ್ಣು! ತನ್ನ ಸರ್ವ ಸತ್ವಗಳನ್ನೆಲ್ಲಾ ಬಸಿದು,ತನ್ನ ಉಸಿರನ್ನೇ-ಉಣಿಸನ್ನೇ ಗರ್ಭಸ್ಥ ಕಂದನೊಂದಿಗೆ ಹಂಚಿಕೊಂಡು,ಹೊತ್ತುಕೊಂಡು ನಡೆದು, ಮರಣಸದೃಶ ನೋವುನನುಭವಿಸಿ ಹೆತ್ತರೂ...ಆ ಮಗುವು ಅದೇ 'ಪುರುಷ'ನನ್ನೇ ಪ್ರತಿನಿಧಿಸುತ್ತದೆಯೇ ಹೊರತು ಹೆತ್ತೊಡಲನ್ನಲ್ಲ! ಪ್ರಕೃತಿಯೇ 'ಪುರುಷ ಪ್ರಧಾನ್ಯ'ವನ್ನು ಪೋಷಿಸುವ ಬಗ್ಗೆ ನನಗೆ ಈಗಲೂ ಸೂಜಿಗವಿದ್ದೇ ಇದೆ!

ಸಕಲ ಸತ್ವವನ್ನೂ ಒದಗಿಸಿ,ಬೀಳುವ ಮಳೆಗೆ ಬೊಗಸೆ ಹಿಡಿದು ಕೂಡಿಸಿ-ಕುಡಿಸಿ,ಬೆಳೆಸಿದ್ದು 'ಭೂಮಿ'! ಮೊಳೆತ ಗಿಡಕ್ಕೆ ಭೂಮಿಯ ಹೆಸರಿಲ್ಲ...! 'ಬೀಜ'ದಿಂದಲೇ ಆ ಗಿಡದ ತಳಿ-ಹೆಸರು ಗುರುತಿಸುತ್ತೇವಲ್ಲವೇ ನಾವು!

Umbilical Cord ನ್ನು ಕತ್ತರಿಸಿಕೊಂಡ ಮಾತ್ರಕ್ಕೇ ತಾಯಿಯಿಂದ ಬೇರ್ಪಟ್ಟುಬಿಡುತ್ತದೇನು ಕೂಸು? Placenta ದೊಂದಿಗೇನೆ ತಾಯಿಋಣಿ ತೀರಿಬಿಡುತ್ತದೇನು? 

"ಮಾತೃತ್ವ" ವೇ ಹಾಗೆ! ಎಲ್ಲವನ್ನು ನೀಡಿಯೂ ಏನೂ ಅಲ್ಲದಂತಾಗಿಬಿಡುವ ಔದಾರ್ಯ,ತಾನೇ ಅಂತಸ್ಥವಾಗಿದ್ದೂ ನಿಃಶೂನ್ಯವೆನಿಸುವ ತ್ಯಾಗ! ತನ್ನ ತಾನೇ ಕರಗಿಸಿಕೊಂಡು ಲಯವಾಗಿ,ಜೀವ ಜಾಲ ಸರಣಿಯ ತುಣುಕೊಂದರ ರೇಣುವಿನ ಧೂಳಾಗಿಹೋಗುವ ಸೃಷ್ಟಿಕಾರ್ಯದ ಭೂಮಾನುಭೂತಿ ಕ್ರಿಯೆ!

"ತಾಯಿ" ಯಾಗೋದು ಅಂದರೆ ಸುಮ್ಮನೆ ಅಲ್ಲ..!

ನನಗೇಕೆ ಹೇಳುತ್ತೀರಿ?


 

ಕೆಲವರ ಫೋನ್ ಕರೆ ರಿಸೀವ್ ಮಾಡಲೂ ಹೆದರಿಬಿಡುತ್ತೇನೆ..

ಅವರು ಮಾತುಗಳು ದೀರ್ಘವಾಗಿರುತ್ತವೆ..ಅವರ ಸಂಸಾರದ ತಾಪತ್ರಯಗಳನ್ನೆಲ್ಲಾ ಹೇಳತಾ ಇರತಾರೆ.ಬಹುಶಃ ಅವಳು ನನ್ನನ್ನೇನಾದರೂ Dustbin ಅಂದುಕೊಂಡಿದಾಳೋ ಏನೋ! ತಂದು ತಂದು ಸುರೀತಾ ಇರತಾಳೆ! ಡಸ್ಟುಬಿನ್ನೂ ಕೂಡ ಒಂದು ದಿವಸ ತುಂಬಲೇಬೇಕಲ್ವಾ? ನಿನ್ನೆ ನನ್ನ ತಾಳ್ಮೆ ಕೊನೆಯಾಯಿತು!
ಇನ್ನೂ ಕೆಲವರಿರುತ್ತಾರೆ.ಅವರ ಫೋನುಗಳನ್ನು ರಾತ್ರಿಯ ಟೈಮಲ್ಲೇನಾದರೂ ರಿಸೀವ್ ಮಾಡಿದರೆ ಮುಗೀತು! ಕಂಠಪೂರ್ತಿ ಕುಡಿದು,ನನ್ನಂಥವರ ಜೀವ ತಿನ್ನುವ ಪಾಪಿಗಳು ಅವರು!
ಕೆಲವರು ತಮ್ಮ ದವಲತ್ತು-ಮೆಹನತ್ತುಗಳನ್ನು ಕೊಚ್ಚಿಕೊಳ್ಳೋಕೆ ಅಂತಾನೇ ಫೋನ್ ಮಾಡಿರತ್ತಾರೆ.ಅದನ್ನು ಕೇಳಿಸಿಕೊಳ್ಳುವ ಹರಕತ್ತು ನನಗಾದರೂ ಏನಿರುತ್ತೆ ಹೇಳಿ?
ಜನ ಯಾಕೆ ಹೀಗೆ ಮಾಡುತ್ತಾರೆ? ಗೊತ್ತಿಲ್ಲ!!
ಸಾಧ್ಯವಾದರೆ,ಒಂದು ಸಣ್ಣ ಖುಷಿಯನ್ನು ಹಂಚಿಕೊಳ್ಳಲು ಫೋನ್ ಮಾಡಿ.ಅದು ಹಬ್ಬಿ ಹಬ್ಬವಾದೀತು! ಒಂದು ಸಣ್ಣ ಸಹಾಯ ಬೇಕಿದ್ದರೆ ಫೋನ್ ಮಾಡಿ,ಅನುಕೂಲವಾದೀತು! ನಿಮ್ಮ ಮನಸ್ಸಿನ ರಾಡಿಗಳನ್ನು ,ನಿಮ್ಮ ಬದುಕಿನ ಕಲಗಚ್ಚನ್ನು ನನ್ನ ಹತ್ತಿರ ಸುರಿಯೋದಿಕ್ಕೆ ಹೋಗಬೇಡಿ! ದುಃಖ ಹಂಚಿಕೊಂಡರೆ ನಿರಾಳವಾಗುತ್ತೀರಿ ಅನ್ನುವ ನಿಮ್ಮ ಭ್ರಮೆಯಿಂದ ಹೊರಬನ್ನಿ!
It's my last reminder to you...ಇಷ್ಟಕ್ಕೂ ನಾನೂ ಮನುಷ್ಯನೇ ಅಲ್ವಾ?

ಆದಿಮ - "ಮ್ಯಾಸ ಬೇಡರು"







 

ಕಾಡುಗೊಲ್ಲ ಸಮುದಾಯದಂತೆಯೇ ಈ "ಮ್ಯಾಸಬೇಡ" ಸಮುದಾಯದಲ್ಲೂ ಅಸಂಖ್ಯ ಸಾಂಸ್ಕೃತಿಕ ವೀರರು ಬಾಳಿಹೋಗಿದ್ದಾರೆ. 
ಗಾದ್ರಿ ಪಾಲನಾಯಕ,ಕಾಟಮಲಿಂಗ,ಜಗಲೂರಜ್ಜ , ಕಂಪಳರಂಗ,ಪಾಪನಾಯಕ,ಸೂರ್ಯಪಾಪ ನಾಯಕ,ಕಲವೀರ,ಜಂಪಣ್ಣ...ಹೀಗೇ!!
ಇಲ್ಲೂ "ಪಶುಪಾಲನಾ ಸಂಸ್ಕೃತಿ" ಯ ಭೂಗರ್ಭದಲ್ಲೇ ಅವರ ಅಸ್ಮಿತೆಯ ಆಳವಿದೆ.ಅವರವೇ ಕುಲದ ಕಟ್ಟುಗಳಿವೆ.ಕುಣಿಯಲು ಹಬ್ಬಗಳಿವೆ. ನೆಲಮೂಲದ ಧೈವಗಳೇ ಇವರ ಬದುಕುಗಳನ್ನು ಇಲ್ಲಿಯವರೆಗೆ ಕಾಪಾಡುತ್ತಾ ಬಂದಿವೆ.
ಕಾಡುಗೊಲ್ಲ ಸಮುದಾಯದಲ್ಲಿದ್ದಷ್ಟು ಜನಪದ ಸಮೃದ್ಧಿ ಈ ಸಮುದಾಯದಲ್ಲಿಲ್ಲ. ಆದರೆ, ಕಾಡುಗೊಲ್ಲ ಜನಪದಗಳಲ್ಲೇ ಇವರ ಕಥನಗಳೂ ಮೇಳೈಸಿಬಿಟ್ಟಿವೆ.
ಆ ಪಶುಪಾಲನಾ ಸಂಸ್ಕೃತಿಯ ಪಳೆಯುಳಿಕೆಗಳು ಇಂದಿಗೂ ಉಳಿದಿವೆ. "ದೇವರ ದನಗಳ ಹಿಂಡು" ಗಳಿವೆ. ಅವುಗಳನ್ನು ಕಾಯಲಿಕ್ಕೆಂದೇ ತಲೆಮಾರಿನಿಂದ ಹುಟ್ಟಿದ ಕುಟುಂಬಗಳಿವೆ.ಅವರಿಗೆ ವಿಶೇಷ ಗೌರವಗಳಿವೆ. "ಮ್ಯಾಸಮಂಡಲ" ವು ಬರೀ 'ಬೇಟ ಸಂಸ್ಕೃತಿ'ಯದ್ದಲ್ಲ. ಬದುಕಿನ ಮೌಲ್ಯಗಳನ್ನು ಇಂದಿನ ತಲೆಮಾರಿನವರೆಗೂ ಕಾಪಿಟ್ಟುಕೊಂಡು ಬಂದಿರುವ ಕುಟುಂಬಗಳನ್ನು ನಾನು ನೋಡಿ ಅಚ್ಚರಿಪಟ್ಟದ್ದಿದೆ!

ಇಷ್ಟಕ್ಕೂ "ಆದಿಮ" ವೇ ಹಾಗೆ! ಅದರ ಹಾದಿಯು ನಮಗೆ ಅಗಮ್ಯ! ಅಗೋಚರ



 

Thursday, 28 October 2021

ಕಾಲ ಭೈರವ


 ಬಹುಶಃ ಬೆಳಗಿನ ಜಾವ 3 ಗಂಟೆಯಿರಬಹುದು.ಆಗಷ್ಟೇ ನನಗೆ ನಿದ್ರೆ..ಆಗಲೇ ಈ ಶಂಖನಾದ,ನಿವೃತ್ತಿಯ ಘಂಟೆಯ ನಾದದ ಜೊತೆಗೆ "ಹರಾ ಹರಾ ಶಂಕರಾ..ಶಿವ ಶಿವಾ ಶಂಭೋ! ಹಂಕಾರ ಓಂಕಾರ ಮಮಕಾರ ಶಂಭೋ!" ಎಂಬ ಕಂಚಿನ ಕಂಠದ ಅಸ್ಖಲಿತ ವಾಣಿಯ ನಿರಂತರ ದನಿ ಕೇಳಿತ್ತು! ಅದೊಂದು ರೀತಿಯ ಮರಣ ಸದೃಶ ಝೇಂಕಾರ! ಆ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಶಂಖ ಜಾಗಟೆಯ ದನಿಗೆ ಮನಸ್ಸು ಕಲ್ಲವಿಲಗೊಂಡಿತ್ತು!

‌‌‌‌ಊರೆಲ್ಲಾ ನಿದ್ದೆಯ ಹೊದ್ದ ನೀರವದಲ್ಲಿದ್ದಾಗ ಇದ್ಯಾವುದೆಂದು ಎದ್ದು ಹೊರಬಂದು ಕಣ್ಣುಜ್ಜಿಕೊಳ್ಳುತ್ತಾ ದಿಟ್ಟಿಸಿದೆ. ರಾತ್ರಿಯಿಡೀ ಸ್ಮಶಾನ ಕಾಯ್ದು ಬೆಳಗಿನ ಜಾವಕ್ಕೆ ಊರನ್ನು ಶಕ್ತಾಷ್ಠ ದಿಗ್ಭಂಧನ ಮಾಡುತ್ತಲಿದ್ದ "ಸುಡುಗಾಡು ಸಿದ್ಧ"! ಸಾಕ್ಷಾತ್ ಕಾಲಭೈರವನಂತೆ ಆ ಕಗ್ಗತ್ತಲಲ್ಲಿ ಕಂಗೊಳಿಸಿದ್ದ! ನನಗರಿವಿಲ್ಲದೆ ನನ್ನೆರಡೂ ಕೈಗಳನ್ನೂ ಜೋಡಿಸಿದ್ದೆ!
ಅವನು ಮಾತ್ರ ಯಾವುದರ ಪರಿವೆಯಿಲ್ಲದವನಂತೆ,ಬೊಗಳುತ್ತಲಿದ್ದ ನಾಯಿಗಳೆಡೆಯೂ ನೋಡದೆ,ನಿರ್ವಿಕಾರನಾಗಿ ಊರು ಪಂಕ್ತಿಗಟ್ಟುತ್ತಿದ್ದ! ಬೆಳಗಿನ ಮುಷ್ಠಿ ಕಾಳನ ಭಿಕ್ಷೆಗಾಗಿ ತನ್ನ ತಲೆಮಾರಿನ ಕಾಯಕದಲ್ಲಿ ಯೋಗನಿಷ್ಠನಾಗಿದ್ದ!
ಅಮರೇಶ ನುಗಡೋಣಿಯವರ " ಕನಸೆಂಬೋ ಕುದುರೆಯನೇರಿ" ಕಥೆಯೂ ಕೂಡ ನೆನಪಿಗಿ ಬಂದದ್ದು ಆಗಲೇ! 

ಬೆಂಕಿ


ಬೆಳಕಿನಲ್ಲಿದ್ದವರು

ಬೆಂಕಿ ಹಚ್ಚುತ್ತಿದ್ದಾರೆ

ಕತ್ತಲಲ್ಲಿದ್ದವರು

ಹಣತೆಗಾಗಿ ತಡವರಿಸುತ್ತಿದ್ದಾರೆ!

ಬೆಳಕಿಗೆ ಕತ್ತಲೆಯೇ

ಉರುವಲು ತಾನೇ?

ಕತ್ತಲು ಉರಿದು ಬೂದಿಯಾಗಿ

ಬೆಳಕನ್ನು ಮೆರೆಸುತ್ತದೆ.

ತಾನು ಮಂಕಾಗಿ ಮರುಗುತ್ತದೆ.


ಪ್ರೇಮಿಸುವುದೆಂದರೆ....


ಪ್ರೇಮಿಸುವುದೆಂದರೆ,

ಸಾವಿರ ಸ್ಥಾವರಗಳನ್ನು ನುಂಗಿ

ಒಂದೇ ಜಂಗಮವಾಗುವ ಬೆರಗು

ದ್ವೈತದ ದಿಗಂತದಾಚೆಗೆ

ಅದ್ವೈತವಾಗುವ ಆತ್ಮಸಂಗಾತದ ಸೊಬಗು

ನಾನು - ನೀನು ಎಂಬುವುದ 

ಕಳಚಿಕೊಳ್ಳುವ ವಿರತ-ಸುರತ ನಿಸ್ಸಂಗತ್ವ! 

'ಕೊಟ್ಟೆನೆಂಬ' ಅಹಂಕಾರ, ನೀಡಿದವರಿಗಿಲ್ಲದ,

'ಬೇಡಿದೆನೆಂಬ' ದೈನ್ಯ , ಪಡೆದವರಿಗಿಲ್ಲದ,

ಅತೀ ಸುಂದರವಾದ ನಿಸರ್ಗ ವ್ಯವಹಾರವನ್ನು 

ಈ ಜಗತ್ತು "ಪ್ರೇಮ" ವೆಂದು ಕರೆಯುತ್ತದೆ.

ನೀನು ಏನೆಂದು ಕರೆದರೂ...

ನಾನು ಏನೆಂದು ಕರೆದರೂ ಕೂಡ!


Wednesday, 27 October 2021

ಗಾಯ


 ದೇಹಕ್ಕೆ ಅದೆಷ್ಟೋ 

ಗಾಯಗಳಾಗಬಹುದು.

ಔಷಧ ಹಚ್ಚಿದರೆ ಮಾಯುತ್ತವೆ.

ಆದರೆ, ಈ ಆತ್ಮಕ್ಕಾದ ಗಾಯಕ್ಕೆ

ಯಾವ ಔಷಧವೂ ಇಲ್ಲ.

ಇದ್ದರೆ, ಅದು ಸಾವು ಮಾತ್ರ!

ಸಾವಿನ ನಿರೀಕ್ಷೆ ಮಾತ್ರವೇ

ಆ ನೋವನ್ನು ಮರೆಸುವಂಥದು!

ಸಂತೆ


 ಬದುಕೆಂದರೆ,

ನೋವುಗಳ ಸಂತೆ ಕಣೋ ಫಕೀರ..

ನಗುವ ಮಾರಬೇಕು 

ನೋವು ಕೊಳ್ಳಬೇಕು

ಆಯಸ್ಸಿನ ಜಕಾತಿ ಕಟ್ಟಬೇಕು

ಸಂಬಂಧಗಳಲ್ಲೂ ಚೌಕಾಶಿ!

ಭಾವುಕತೆಗೆಲ್ಲಿಯ ಬೆಲೆ?

ಅಲ್ಲಿ ಎಲ್ಲವೂ ಬಿಕರಿಯಾಗುತ್ತದೆ.

ಪ್ರೀತಿ,ವಿಶ್ವಾಸಗಳೆಲ್ಲಾ ತಿಪ್ಪೆಗೆ!

ಅರೇ..ಅಲ್ಲಿ ನೋಡು!

ಬದುಕೂ ಮಾರುವುದಕ್ಕಿದೆ,ಸಾವೂ ಕೂಡ!

ಇಲ್ಲಿ ಒಬ್ಬರ ಬದುಕ ಮಾರಿಸುವ

ಇನ್ನೊಬ್ಬರ ಬದುಕ ಕೊಂಡು ಕೊಡಿಸುವ

ದಲ್ಲಾಳಿಗಳೇ ತುಂಬಿದ್ದಾರೆ ಕಣೋ!!


Tuesday, 26 October 2021

ಸಾವು


ಉಸಿರು ನಿಂತರೆ ಮಾತ್ರ 

ಸಾವಲ್ಲ ಕಣೋ...

ಎದೆಯ ಬಡಿತ ನಿಂತರೆ

ಬದುಕು ಮುಗಿಯದೋ..

ಹೃದಯದ ಪ್ರೀತಿಯೊರತೆ

ಬತ್ತಿದ ಕ್ಷಣವೂ ಸಾವೇ!

ನಿನ್ನ ಮನುಷ್ಯತ್ವ ಕರಗಿದ

ಪ್ರತೀ ಕ್ಷಣವೂ ಸಾವೇ..ಸಾವೇ!

ಈಗ ಹೇಳಿಬಿಡು ;

ನೀನು ಇದುವರೆಗೂ

ಅದೆಷ್ಟು ಬಾರಿ ಸತ್ತಿರುವೆಯೆಂದು!





ಕತ್ತಲು


 ದಾರಿ ತಪ್ಪಿಸುವ ಬೆಳಕಿಗಿಂತ

ಆತ್ಮಕ್ಕಂಟಿದ ಕತ್ತಲೆಯೇ

ಅದೆಷ್ಟೋ ಬಾರಿ ನಂಬಿಗಸ್ತವೆನಿಸುತ್ತದೆ.

ಬೆಳಕಿಗಷ್ಟೇ ಬೆತ್ತಲೆಯ ಭಯ

ಕತ್ತಲು,ಭಯ ಮೀರಿದ ಅಭಯ!

ಬೆಳಕು ಜೀವಗಳನ್ನು ಕೊಂದರೆ,

ಕತ್ತಲು,ಹುಟ್ಟಿಸುತ್ತಾ ಹೋಗುತ್ತದೆ.

ಕನಸುಗಳೂ ಕತ್ತಲಲ್ಲೇ ಹುಟ್ಟುತ್ತವೆ

ಬೆಳಕಿನಲ್ಲಿ ಅಸು ನೀಗುತ್ತವೆ.

ಬೆಳಕು ಎಲ್ಲರಿಗೂ ದಕ್ಕಲಾರದು

ಕತ್ತಲು, ಯಾರನ್ನೂ ದೂರವಿಡದು.

Monday, 25 October 2021

ಅಕ್ಷರಗಳಲ್ಲಿ ಅಷ್ಟೇಕೆ ನೋವು?


ಈ ಅಕಾಲಿಕ ಮಳೆ,ಒಂದು ನೆಪವಷ್ಟೇ

ಉದುರಿದ್ದು ಮಾತ್ರ ಕಣ್ಣೀರ ಧಾರೆ!

ನಿದ್ದೆ ಕಳೆದ ರಾತ್ರಿಗಳೆಷ್ಟೋ ಮುಸಾಫಿರಾ?

ಸಾಧ್ಯವಿದ್ದರೆ ಲೆಕ್ಕವಿಡು ಎಲ್ಲವನ್ನೂ!

ನಿನ್ನ ಅಕ್ಷರಗಳಲ್ಲೇಕೆ ಅಷ್ಟು ನೋವು? 

ದಿನವೂ ಕೇಳುತ್ತಾರಿಲ್ಲಿ ಯಾರೋ...

ನನ್ನ ಅಕ್ಷರಗಳೋ..

ಉಳ್ಳವನ ಮಾಳಿಗೆಯವಲ್ಲ..ಇಲ್ಲದವನ ಜೋಳಿಗೆಯವು!

ಬಿಚ್ಚಿದರೆ ಅಲ್ಲಿ ಬರೀ ಬಿಕ್ಕಳಿಕೆ ಮಾತ್ರವೇ!

ನೋವುಣ್ಣುವುದೂ ಒಂದು ಚಟವೋ ಸೂಫಿ!

ನನ್ನ ಹೆಣದ ಮೇಲೆ ಹೊದಿಸುವ ಬಟ್ಟೆಗೂ

ಸಾವಿರ ಸಾವಿರ ರಕ್ತದ ಕಲೆಗಳಿರಲಿ..

ಮತ್ತು..ಆಗ ತಾನೇ ಅರಳಿದ ಒಂದು ಹೂವು!


"ಉಮ್ಮಾ ಹೋಗಿಬಿಟ್ಟಳು ಕಣೋ!"


 "ಉಮ್ಮಾ ಹೋಗಿಬಿಟ್ಟಳು ಕಣೋ.."

ಸೈನಕ್ಕ ಉಮ್ಮಳಿಸಿ ಅಳುತ್ತಾ ಹೇಳಿದ್ದಳು. ಒಂದು ಕ್ಷಣ ನನಗೂ ದುಃಖ ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಎದುರಿಗೆ ಅತ್ತರೆ,ಅತ್ತುಬಿಡುವ introvert ನಾನು! ಸಿನಿಮಾ ನೋಡುವಾಗಲೂ ಅತ್ತವನು! ಸೈನಕ್ಕನ ಅಳುವಿನೊಂದಿಗೇ ಮನೆಯ ಹೆಂಗಸರ,ಮಕ್ಕಳ ಅಳುವೂ ಕೇಳುತ್ತಿತ್ತು.

            ಫಾತೀಮಜ್ಜಿ....ಮೊಮ್ಮಗಳ ಶಾದಿ,ಬಾಣಂತನ,ಮರಿಮೊಮ್ಮಕ್ಕಳ ಲಾಲನೆ ಮಾಡುವಷ್ಟು ಅವಳು ಗಟ್ಟಿಯಿದ್ದಳು. ಒಂದು ಸಣ್ಣ ಜ್ವರಕ್ಕೆ ಶರಣಾಗಿದ್ದಕ್ಕೆ ಅಚ್ಚರಿಯಾಗಿತ್ತು ನನಗೆ! ಡಾಕ್ಟರು-ಆಸ್ಪತ್ರೆ ಎಂದು ಗಡಿಬಿಡಿ ಮಾಡುವಷ್ಟರಲ್ಲೇ ನಿರಮ್ಮಳವಾಗಿ ಎದ್ದು ಹೋಗಿಬಿಟ್ಟಿದ್ದಳು.

           ಅಷ್ಟೂ ಜನ ಮಕ್ಕಳನ್ನು ಎದೆಗೆ ಹಾಕಿಕೊಂಡು ದುಡಿದು,ಕುಡುಕ ಗಂಡನೊಂದಿಗೆ ಏಗುತ್ತ ಮಕ್ಕಳೆಲ್ಲರ ದಡ ಮುಟ್ಟಿಸಿದ ಅವಳ ಬದುಕಿನ ಬಗ್ಗೆ ನನಗೆ ಹೆಮ್ಮೆಯಿತ್ತು.ನನ್ನವ್ವನೂ ಹಾಗೇ ಅಲ್ಲವೇ! ಬಹುಶಃ ಆ ತಲೆಮಾರೇ ಹಾಗೆನಾ..ಗೊತ್ತಿಲ್ಲ!

          ಮನೆಗೆ ಹೋದ ಪ್ರತೀಸಾರಿಯೂ ತಟ್ಟೆತುಂಬಾ ಮೀನು ಬಡಿಸಿ,ಚುರುಕಾಗ್ತಾರೆ ತಿನ್ನೋ ಎನ್ನುತ್ತಾ ತಾಯಿಯಂತೆ ಉಣಿಸಿದವಳು! 'ನಿನ್ನ ಮದುವೆ ಒಂದು ಮಾಡಬೇಕು..ನಮ್ಮ ಸಾಬರ ಹುಡುಗೀನೇ ಮಾಡಕೋ,ಅಕ್ಕನಿಗೆ ಹೇಳತೇನೆ'ಎಂದು ನಗಾಡುತ್ತಿದ್ದವಳು..

ಸಾವು ಯಾರನ್ನು ಬಿಟ್ಟಿಲ್ಲ ಹೇಳಿ? ಆದರೆ,ಫಾತೀಮಜ್ಜಿಯ ಸಾವು ಬರೀ ಸಾವಲ್ಲ..ಅದೊಂದು ಕುಟುಂಬ ಮೌಲ್ಯದ ಸಾವು!

ಸೈನಕ್ಕನಿಗೆ,ಫರಾನ-ಸುಹೇಲ್ ರಿಗೆ ಸಮಾಧಾನ ಹೇಳಲು ನನ್ನಲ್ಲಿ ಮಾತುಗಳಿರಲಿಲ್ಲ.

ರಸ್ತೆಗೆ ಬಂದ ಉಣ್ಣುವ 'ಗಂಗಾಳ'!


 ರೈತನ ಉಣ್ಣುವ ಗಂಗಳವೀಗ ರಸ್ತೆಯ ಮೇಲೆ ಬಂದುಬಿಟ್ಟಿದೆ. ರಸ್ತೆಗಳ ಮೇಲೆಲ್ಲಾ ಕಾಳು..ಕಣಗಳೆಲ್ಲಾ ಸುರಿವ ಹಾಳು!

ಆ ಕಡೆ ರಾಜಧಾನಿ ದೆಹಲಿಯಲ್ಲಿ APMC ಕಾಯ್ದೆ ತಿದ್ದುಪಡಿಯ ವಿರುದ್ಧ ನಿಂತ ರೈತ ಹೋರಾಟಗಾರರೆಲ್ಲರೂ ಆ ಮೈನಸ್ ಚಳಿಯಲ್ಲಿ ದೆಹಲಿಯ ರಸ್ತೆಗಳಲ್ಲೇ ಉಂಡು ಮಲಗುತ್ತಿದ್ದಾರೆ.

           ಹೆಗ್ಗೋಡಿನ ಪ್ರಸನ್ನ ಅವತ್ತೊಮ್ಮೆ ನನಗೆ "ರೈತನ ದೇಹವಷ್ಟೇ ಅಲ್ಲ..ಮನಸ್ಸೂ ಕೂಡ ಸೋಮಾರಿಯಾಗಿದೆ. ಯಂತ್ರಜಗತ್ತಿನ ಮೊದಲ ಬಲಿ ಅವನೇ! ಇದರಿಂದ ಹೊರಬರದ ಹೊರತು ಅವನಿಗೆ ಉಳಿಗಾಲವಿಲ್ಲ" ಅಂದಿದ್ದರು. ಅದು ನಿಜವೇನೋ ಅನಿಸಹತ್ತಿದೆ.

          ಸುಗ್ಗಿಕಾಲದ ಹಂತಿಪದಗಳೆಲ್ಲವೂ ರಸ್ತೆಯ ಮೇಲಿನ ವಾಹನಗಳ ಟೈರಿನಡಿ ಸಿಕ್ಕ ಕಾಳಿನಂತೆ, ರಾಸಿ ಪೂಜೆಯು ಮಗ್ಗುಲ ಧೂಳರಾಸಿಯಲ್ಲಿ ಮರೆಯಾದಂತೆ..ರೈತನ ಅನ್ನದ ತಟ್ಟೆಯಲ್ಲಿ ನಿಜವಾದ ಶ್ರಮದ ಅನ್ನವೇ ಮರೆಯಾಗಿ ಯಾವುದೋ ಕೆಮಿಕಲ್ ಮಿಶ್ರಣವಾಗಿ ರೂಪಾಂತರವಾದಂತೆ...ಭ್ರಮೆಯೋ ಭ್ರಮಾನಿರಸನವೋ ಆ ಭೂತಾಯಿಯೇ ಹೇಳಬೇಕು!

        ಕಾಳು ತೂರುವ ರೈತ ಮಹಿಳೆ  "ಹುಲುಗ್ಯೋ ಹುಲುಗ್ಯೋ"ಎಂದು ಬೀಸುವ ಗಾಳಿಗೇ ಆಜ್ಞಾಪಿಸುತ್ತಿದ್ದ ಗರತಿಯ ಗೈರತ್ತುಗಳು ಒಡೆದ ಬಳೆಗಳಂತೆ,ಬರಿ ಹಣೆಯಂತೆ ವೈಧವ್ಯಕ್ಕೆ ತುತ್ತಾಗಿವೆ. 

    ಹೌದು...'ಭೂಮಿತಾಯಿ' ಅಂಬಾಕಿ ಈಗ ಒಬ್ಬ ಹುಚ್ಚು ರಂಡೆ ಮಾತ್ರ ಕಣ್ರೀ!!

ಗ್ರಾಮ ಪಂಚಾಯತ್ ಚುನಾವಣೆ.....


 ಚುನಾವಣೆಗಳು ಈಗೀಗ ಹಳ್ಳಿಗರಲ್ಲಿ ಅಂತಹ ಕುತೂಹಲ, ಸಂಭ್ರಮಗಳನ್ನು ಹುಟ್ಟಿಸುತ್ತಲಿಲ್ಲ. ಅಂತಪ್ಪ ಮೋದೀನೇ ಎರಡು ಬಾರಿ ಗೆದ್ದರೂ ನಮಗೇನೂ ಮಾಡಲಿಲ್ಲ..ಇನ್ನು ಈ ಪುಟಗೋಸಿಗಳದ್ಯಾವ ಲೆಕ್ಕ ಬಿಡು ಎಂಬ ದಿವ್ಯ ನಿರ್ಲಕ್ಷ್ಯವನ್ನು ಹಳ್ಳಿಗಳು ಹೊದ್ದು ಕುಳಿತಿವೆ. ಅದೇ ಅಟವಾಳಿಗೆಯಲ್ಲಿ ಎಲೆಡಕೆ ಮೆಲ್ಲುತ್ತಾ ಎಳೆಕೂಸಿನ ಜೋಲಿ ತೂಗುವ ಮುದುಕಿಯ ವಿಷಣ್ಣತೆ..ಪಕ್ಕದಲ್ಲೇ ಮಲಗಿದ ಕೆಂದ ನಾಯಿಯ ನಿರ್ವಿಕಾರತೆಯೇ ಎಲ್ಲೆಲ್ಲೂ....
‌      ಒಂದಷ್ಟು ದುಡ್ಡಿರುವ,ದುಡ್ಡು ಮಾಡಿಕೊಳ್ಳುವ ಹಂಬಲವಿರುವ ಅಪಾತ್ರರು,ಅಯೋಗ್ಯರು  ಜಾತಿ-ಸಮುದಾಯಗಳ ಹೆಸರಿನಲ್ಲಿ ಊರಿನ ಗುಡಿಗೋ ಅಥವಾ ಇನ್ಯಾರಿಗೋ ಒಂದಷ್ಟು ಹಣಕೊಟ್ಟು ಗೆಲ್ಲುವ ದಾರಿಯನ್ನು ಸರಳಗೊಳಿಸಿಕೊಳ್ಳುತ್ತಿದ್ದಾರೆ.ಅಂಥವರ ಬೆನ್ನಿಗೊಂದಷ್ಟು ಅದೇ ಕುಡುಕರ ಹಿಂಡು ನಿಂತಿದೆ. ತಳಜಾತಿಯ ದುಡಿವ ಬಡವರ್ಗದ ಜನಕ್ಕೆ ಚುನಾವಣೆ ಎನ್ನುವುದೇ ಕುಟುಂಬ ಒಡೆಯುವ,ಹೊಸ ಕುಡುಕರನ್ನು ಹುಟ್ಟಿಸುವ ಮಹಾಪಿಡುಗಿನಂತೆ ಕಾಡುತ್ತಲಿದೆ.
‌"ಅಂಬೇಡಕರ್" ಮಹಾತ್ಮ ಬರೆದ "ಸಂವಿಧಾನದ ಹೊತ್ತಗೆ" ಯ ಮೇಲೆಲ್ಲಾ ತಿನ್ನಲು ಕಾದ ಕೊಂಡಿಹುಳುಗಳು..!
‌ಇದರ ಮಧ್ಯೆ...ನಾನು "ಪ್ರಜಾ ಪ್ರಭುತ್ವ" ವನ್ನು ಎಲ್ಲಿದೆಯೆಂದು ಹುಡುಕುತ್ತಿದ್ದೇನೆ!!   ಟೈಮಿದ್ದರೆ ನೀವೂ ಕೂಡಾ...!

ಗ್ರಾಮ ಪಂಚಾಯತ್ ಚುನಾವಣೆಯ ಬಗ್ಗೆ....


 ಪಾರ್ಲಿಮೆಂಟು-ಅಸೆಂಬ್ಲೀ ಎಲೆಕ್ಷನ್ನುಗಳಲ್ಲಿ ಮಾತ್ರವೇ ಕಾಣಬಹುದಾಗಿದ್ದ Election Strategyಗಳು,ತಂತ್ರ-ಪ್ರತಿತಂತ್ರ-ಕುತಂತ್ರಗಳು,ಜಾತಿ ಒಡೆವ ಹವಣಿಕೆಗಳು,ಧರ್ಮದ ಹೆಸರಿನಲ್ಲಿ ಬದುಕುಗಳ ನೆಮ್ಮದಿಯ ತಿಳಿನೀರ ಕದಡುವ, ದ್ವೇಷ ದಾವರಗಳು,ಹಳೇ ಕಾಲದ ಸೇಡಿನ ದಳ್ಳುರಿಗಳು, ಸೂಳೆ-ಮಿಂಡರ ಸಂಬಂಧದ ಸುರುಳಿಗಳನ್ನೂ ಓಟುಗಳನ್ನಾಗಿ ಪರಿವರ್ತಿಸಿಕೊಳ್ಳು ಹೀನ ಹವಣಿಕೆಗಳು.....My God!!

‌        ಹಳ್ಳಿಗಳು ಮುಗ್ಧತೆಯ ಮುಸುಕು ತೆಗೆದೆಸೆದು,ಕರುಳ-ಬಳ್ಳಿಯ ಸಂಬಂಧಗಳು ಬೆಸೆದಿದ್ದ ಸಹಸ್ರ ಬಂಧಗಳನ್ನು ಕಿತ್ತು ಬಿಸುಟಿ ದೂರ..ಬಹುದೂರ ಬಂದುಬಿಟ್ಟಿವೆ! ಅಲ್ಲೀಗ Professional Strategist ಗಳನ್ನೇ ಮೀರಿಸುವ ನಿಪುಣರಿದ್ದಾರೆ. ಗುಡಿಗಳಲ್ಲಿ ಭಜನೆ ಮಾಡುವವರು ಇಲ್ಲೀಗ ಎಲ್ಲಿದ್ದಾರೆ? ಸೋಬಾನೆ-ಸೊವ್ವೆಗಳ ದನಿಗಳೆಲ್ಲ ಹೋದವೆಲ್ಲಿ? ಕೋಲಾಟಗಳೆಲ್ಲಿ? ಅರೇ...ಊರಬಾಗಿಲ ಮುಂದೆ ಬುಗುರಿ,ಚಿಣ್ಣಿದಾಂಡುಗಳನ್ನು ಜಾತಿ-ಧರ್ಮದ ಲವಲೇಶದ ಸೋಂಕಿಲ್ಲದೆ ಆಡುತ್ತಿದ್ದ ಮಕ್ಕಳಾದರೂ ಎಲ್ಲಿ?

ಧರ್ಮಕ್ಕೂ ಮೀರಿ 'ಮಾವ,ಅಳಿಯ' ಎಂದು ಬಾಯಿತುಂಬಾ ಕರೆದು ಅಕ್ಕರೆ ತೋರುತ್ತಿದ್ದ ಮುಸ್ಲಿಂ ಸಮುದಾಯದ ಸಜ್ಜನಿಕೆಯ ಆ ಜೀವಗಳೆಲ್ಲ ಹೋದವೆಲ್ಲಿ? 'ಗೌಡರೇ,ಗೊಂಚಿಗಾರರೇ'ಎಂದು ಕರೆದರೂ ಮನೆಮಕ್ಕಳಂತೆ,ಜಾತಿ ಮೀರಿದ ಬಂಧ ಕಟ್ಟಿದ್ದ ಆ ತಳಜಾತಿ ವರ್ಗದ ಪುಣ್ಯ ಜೀವಗಳೆಲ್ಲ ಹೋದವೆಲ್ಲಿ?

ಹಳ್ಳಿಗಳೆಲ್ಲ ಸ್ಮಶಾನಗಳಾಗಿವೆ ಕಣ್ರೀ...ಅಲ್ಲೀಗ ಮನುಷ್ಯರಿಲ್ಲ!


ನಗು


 

ಇಲ್ಲಿ ನಗುವಿಗಷ್ಟೇ‌ ಬೆಲೆ ಕಣೋ..
ಅಳುವಿಗಿಲ್ಲಿ ಮಾರುಕಟ್ಟೆಯಿಲ್ಲ. 
ಹೃದಯದಲ್ಲಿ ನೂರು
ನೋವಿದ್ದರೂ ಬಚ್ಚಿಟ್ಟು;
ಎಲ್ಲರೆದುರು ನಗುತ್ತಲಿರಬೇಕು!
ಕುಹಕವೋ ಕೃತಕವೋ ವಿಕೃತವೋ
ಎಂಥದ್ದೋ ಒಂದು ನಗು ಅಷ್ಟೇ!
ನಗುತ್ತಲೇ ಕೊಲ್ಲುವವರಿದ್ದಾರೆ ಇಲ್ಲಿ..
ನಾವೂ ಕೊಲ್ಲಬೇಕು..ನಗುತ್ತಲೇ

ರಕ್ಕಸರು


 

ಈ ಜಗತ್ತಿನಲ್ಲಿ ಎಲ್ಲರಿಗೂ..
ಸಂತರಾಗಿಬಿಡುವ ಹಪಾಹಪಿ!
ಮಹಾತ್ಮರೆನಿಸಿಕೊಳ್ಳುವ ಹಂಬಲ!
ಮನುಷ್ಯರಾಗಲು ಆಸಕ್ತಿಯಿಲ್ಲ..

ಜಗತ್ತಿನಲ್ಲಿ ಎಲ್ಲರಿಗೂ..
ಗಮ್ಯವನ್ನು ತಲುಪುವ ಧಾವಂತ.
ದಾರಿ ಹಿಡಿಯಲಿಕ್ಕೆ ಅವಸರ!
ಹಿಡಿದ ದಾರಿಯ ಬಗ್ಗೆ ಅರಿವಿಲ್ಲ..

ಈ ಜಗತ್ತಿನಲ್ಲಿ ಎಲ್ಲರಿಗೂ..
ಕಿತ್ತುಕೊಳ್ಳುವ ರಕ್ಕಸತನ,
ಕೇಳಿಪಡೆವ ಸೌಜನ್ಯವಿಲ್ಲ..
ಕೊಡುವ ಹೃದಯವಂತೂ ಇಲ್ಲ.

ಈ ಜಗತ್ತಿನಲ್ಲಿ ಎಲ್ಲರಿಗೂ..
ಪ್ರೀತಿಸಿಕೊಳ್ಳುವ ಹುಚ್ಚುತನ,
ಪಡೆವ ಅರ್ಹತೆಯ ಅರಿವಿಲ್ಲ
ಪ್ರೀತಿಸುವ ಬಾಧ್ಯತೆಯೂ ಬೇಕಿಲ್ಲ
.

ಜನ್ನತ್


ಕಣ್ಣೀರು ಒರೆಸುವ ಇಬಾದತ್ ಇರುವವರೇ..

ಹಸಿವು ತಣಿಸುವುದರಲ್ಲೇ ನಿಮ್ಮ ಜನ್ನತ್ ನ ಘಮವಿದೆ!

ನೀವು ಉಣಿಸುವ ಪ್ರತೀ ಅನ್ನದ ಅಗುಳೂ...

ದೇವರೆಡೆ ಸಾಗುವ ದಾರಿಯಲ್ಲಿ ಚೆಲ್ಲಿದ ಮಲ್ಲಿಗೆ!

ನೀವು ಕುಡಿಸಿದ ಹನಿ ನೀರೂ..ಚೆಯೋನಿನ ಅತ್ತರು!

ನಿಮ್ಮ ಪ್ರತೀ ದುವಾಗಳೂ ದೇವರಿಗೆ ಕೇಳಿಸುತ್ತವೆ!

ನಿಮ್ಮ ಪ್ರತೀ ರುಕುವಾಗಳೂ ಅವನಿಗೆ ತಲುಪುತ್ತವೆ!

ಆಯಸ್ಸನ್ನು ಕೇಳಿಕೊಳ್ಳಬೇಡಿ..ಅವನಲ್ಲಿ.

ಅವಕಾಶವನ್ನು ಕೇಳಿ..ಹಸಿದ ಹೊಟ್ಟೆ ತಣಿಸುವ ಅವಕಾಶ!

ಅದು ಎಲ್ಲರಿಗೂ ದಕ್ಕುವಂಥದಲ್ಲ ನೋಡಿ!

ಪುಣ್ಯವಂತರಿಗೆ ಮಾತ್ರವೇ ಆ ಪವಿತ್ರ ಕಾರ್ಯ ಮೀಸಲು!!

ಮೋಕ್ಷ


 

ಬದುಕ ಎಲೆಯ ಮೇಲೆ,
ನಗುವಿನ ಇಬ್ಬನಿಯುದುರುವುದು
ಮುಂಜಾನೆ ಒಂದೆರಡು ಕ್ಷಣವಷ್ಟೇ!!
ಈ ಮಳೆಗಾಲದಲ್ಲೂ ಬಿರುಬಿಸಿಲು,
ಹಗಲಿಡೀ ನೋವಿನ ಬಾಷ್ಪವಿಸರ್ಜನೆ!
ನೋವೆಂಬ ನೋವಿನ ಸಾನಿಧ್ಯದಲ್ಲಿಯೇ
ದ್ಯುತಿ ಸಂಶ್ಲೇಷಣೆಯಾಗಿ ಉಸಿರಾಡಲು
ಏನೋ ಒಂದಷ್ಟು ಶಕ್ತಿ ಸಂಚಯವಾದೀತು!
ರಾತ್ರಿಗಳೋ..ಭೂಮಿಗಿಳಿದ ಬೇರುಗಳೊಂದಿಗೆ!
ಗತದ ಕಸವ ಬೇರಿಗುಣಿಸುತ್ತಾ..
ಅರ್ಧ ಸತ್ತ ಕನಸುಗಳನೆಣಿಸುತ್ತಾ..
ಬೆಳೆವುದ ನಿಲ್ಲಿಸಿದ,ಬದುಕಿನ ಕಾಂಡಕ್ಕೆ
ಕಂಬನಿಯ ನೀರು,ನಿಟ್ಟುಸಿರ ಗಾಳಿ ಹಾಕಿ,
ಬದುಕಿಗಾಗಿ ಚಿಗುರುವ,ಸಾಯಲಿಕ್ಕಾಗಿ ಬೆಳೆಯುವ
ಬಗೆಯನ್ನು ನೋಡುತ್ತ ಕೂರುವುದಿದೆಯಲ್ಲಾ..
ಬಹುಶಃ..ಅದೇ ಬದುಕಿನ ಮೋಕ್ಷವಾ? ಗೊತ್ತಿಲ್ಲ!

ಹಾದಿಯ ಹುಡುಗ

 

ಬದುಕಿನ ಹಾಳೆಯೇ ಹರಿದು ಹೋದವನಿಗೆ,

ಬದಲಾಗುವ ತಾರೀಖುಗಳ ಚಿಂತೆ ಎಂಥದು?

ಕತ್ತಲನ್ನೇ ಹಾಸಿ-ಹೊದ್ದು ಮಲಗಿದವನಿಗೆ,

ಉದಯಾಸ್ತಮಾನಗಳ ಹಂಗಾದರೂ ಏನು?


ನೋಡುತ್ತಾನೆ, ಯಾವಾಗಲಾದರೊಮ್ಮೆ ಆ ಕಡೆ,

ಅದೆಲ್ಲೋ ದೂರದ ಬೆಳಕಿನ ಕಿಂಡಿಯೆಡೆಗೆ!

ಕಳೆದುಹೋದ ಕನಸೊಂದರ ನಿರೀಕ್ಷಣೆಯಲ್ಲಿ.

ಧೂಳು ಹೊತ್ತ ಗಾಳಿ,ಅವನ ಕಣ್ಣು ಮುಚ್ಚುತ್ತದೆ.


ಹಗಲು ಅಲೆಯುತ್ತಿರುತ್ತಾನೆ ; ನೆಲಕ್ಕೆ ಸುಸ್ತಾಗುವವರೆಗೆ!

ರಾತ್ರಿ ಅಳುತ್ತಿರುತ್ತಾನೆ ; ಚುಕ್ಕಿಗಳು ಉದುರುವವರೆಗೆ!

ಹುಣಸೇಮರದ ಆ ಕುಂಟಗುಬ್ಬಿಯದ್ದು ಒಂದೇ ಕೂಗು..

"ಬಾ ಸಾಯೋಣ..ಸತ್ತು ಬದುಕೋಣ..ಮತ್ತೆ ಸಾಯೋಣ!"





ಮೌನದ ಮಾತು.. -೧

 ಮೋಸ ಮತ್ತು ಸಾವು..ಇವೆರಡನ್ನೂ ಎದುರಿಸಿದವನ ಮಾತುಗಳು ಕ್ಷಣಕಾಲ ಸತ್ತುಬಿಡುತ್ತವೆ. Isolate ಮಾಡಿಬಿಡುತ್ತವೆ. ತುಂಬಾ ನಂಬಿದವರು ಮಾಡುವ  ನೋವು ಅಸಹನೀಯ. ಕ್ಷುಲ್ಲಕ ಕಾರಣಗಳಿಗೆ ನಂಬಿಕೆಯನ್ನೇ ಕತ್ತು ಹಿಸುಕುವ ಆ ಸಣ್ಣತನಗಳು ಜಿಗುಪ್ಸೆ ಹುಟ್ಟಿಸಿಬಿಡುತ್ತವೆ. ನಾನು ಪ್ರತೀಬಾರಿ ಮೋಸಹೋದಾಗಲೂ ಆ ಸಣ್ಣತನಗಳನ್ನು ಮರೆಯಲೆತ್ನಿಸುತ್ತೇನೆ. "ಜಗತ್ತೇ ಹೀಗಲ್ಲವೇ ಇರೋದು..ಅಂಥದ್ದರಲ್ಲಿ ಈ ತೋಲಪ್ಪಗಳದ್ಯಾವ ಲೆಕ್ಕಬಿಡು ಎಂದು ಉಪೇಕ್ಷಿಸುತ್ತೇನೆ.

             ಆದರೆ, ಈ 'ಸಾವು' ಹಾಗಲ್ಲ. ಅದು ಎಂದೂ ತುಂಬದ ನಿರ್ವಾತವೊಂದನ್ನು ನಿರ್ಮಿಸಿಬಿಡುತ್ತದೆ. ಅದರಲ್ಲೂ ಹತ್ತಿರದವರ ಸಾವು...ಭರಿಸಲಾರದ್ದು!

ಕಳೆದ ಒಂದು ತಿಂಗಳಿನಿಂದಲೂ ಮನಸ್ಸು ಹಣ್ಣುಗಾಯಿಯಾಗಿದೆ.

ಬದುಕನ್ನು ಕಾಲದ ಸುಫರ್ದಿಗೆ ಬಿಟ್ಟು ನಿರ್ವಿಣ್ಣನಾಗಿದ್ದೇನೆ. ಮುಂದೆ ಕಾಣುತ್ತಿರುವುದು ಸೂರ್ಯೋದಯವೋ ಸೂರ್ಯಾಸ್ತವೋ...ಕಾಲಪುರುಷನಿಗೆ ಮಾತ್ರವೇ ಗೊತ್ತು!


ಗೂಡು


 "ಟಾಯ್ಲೆಟ್ಟಿಗೆಲ್ಲಾ ವೆಸ್ಟರ್ನ್ ಕಮೊಡ್ ಹಾಕಿಸಿದಿವಿ ಕಣ, ನನ್ನ ಗಂಡನ ಸೊಂಟ ನೋವು ಗೊತ್ತಲ್ಲ: ದೇವರ ಕೋಣೆ ದೊಡ್ಡದೇ ಇದೆ. ದಿನಕ್ಕೆ ಒಂದು ಗಂಟೆಯಾದರೂ ಅಲ್ಲಿ ಒಂದಷ್ಟು ಮೆಡಿಟೇಶನ್ ಮಾಡಿದರೆ,ಸ್ಟ್ರೆಸ್ ಕಡಿಮೆಯಾಗುತ್ತೆ. ಮೇಲಿನ ಪೋರ್ಶನ್ ನ ಒಂದು ರೂಂ ಮಗಳ ಡ್ಯಾನ್ಸ್ ಪ್ರಾಕ್ಟೀಸಿಗೆ ಅಂತ ಉಳಿಸಿಕೊಂಡು,ಉಳಿದದ್ದು ಬಾಡಿಗೆ ಕೊಡೊ ಪ್ಲಾನಿದೆ...." - ಅವಳು ಹೇಳುತ್ತಲೇ ಇದ್ದಳು ಹೊಸಮನೆಯ ಬಗ್ಗೆ. 

"ಈಗಿರೋ ಮನೆ ಚನ್ನಾಗೇ ಇತ್ತಲ್ಲವಾ" ನಾನಂದದ್ದು ಅವಳಿಗೆ ಕೇಳಿಸಿತ್ತೋ ಇಲ್ವೋ!

ನನ್ನ ಮತ್ತೊಬ್ಬ ಗೆಳೆಯನೂ ಬಿ.ಡಿ.ಎ.ಫ್ಲಾಟ್ ನ interior ಬಗ್ಗೆ ಗಂಟೆಗಟ್ಟಲೆ ಮಾತಾಡಿದ್ದ ಮೊನ್ನೆ.

            ಈ ಗೂಡು ಕಟ್ಟುವ ಕ್ರಿಯೆ ಪ್ರಕೃತಿ ಸಹಜವೇನೋ! ಪ್ರತೀ ಹೆಣ್ಣು , ತನ್ನ ಸಂಗಾತಿಯು ತನಗಾಗಿ ಒಂದು ಹೊಸ ಗೂಡು ಕಟ್ಟಬೇಕೆಂದು ಅಪೇಕ್ಷಿಸುತ್ತಾಳೆ.ಅತ್ತೆ-ಮಾವನ "ಹಳೆಯ ಗೂಡು" ನೆಲಸಮವಾಗುತ್ತದೆ. ಗೂಡು ಕಟ್ಟುವುದಕ್ಕಾಗಿಯೇ ಹುಟ್ಟಿದ್ದೇನೋ ಎಂಬಂತೆ ಗಂಡು, ತನ್ನ ಜೀವಚೈತನ್ಯವನ್ನೆಲ್ಲ ಬಸಿದು ಕಟ್ಟುತ್ತಾನೆ. 

           ಅವಳ ಜೊತೆ ಮಾತಾಡಿ ಮುಗಿಸುವ ಹೊತ್ತಿಗೆ ಸರಿ ರಾತ್ರಿಯಾಗಿತ್ತು. ಯಾಕೋ ಆ ಹುಣಸೇಮರದ ಕುಂಟ ಗುಬ್ಬಿಯನ್ನು ನೋಡುವ ಮನಸ್ಸಾಯಿತು. ಫೋನ್ ಚಾರ್ಜಿಗೆ ಹಾಕಿ ಹುಣಸೇಮರದ ಹತ್ತಿರ ಆ ಹೊತ್ತಲ್ಲೂ ಹೋಗಿದ್ದೆ. ತನ್ನ ಹಾಳು ಬಿದ್ದ ಹಳೇ ಗೂಡಿನ ಮುಂದೆ ಕುಳಿತಿದ್ದ ಆ ಕುಂಟ ಗುಬ್ಬಿಯು ಮಾತ್ರ ಶೂನ್ಯದೆಡೆ ದೃಷ್ಟಿನೆಟ್ಟು ಮೂಕವಾಗಿ ನಿದ್ರೆಯಿಲ್ಲದೆ ರೋಧಿಸುತ್ತಿತ್ತು!

     

ಏನು ಮಾಡಿಯಾವು?


 

ನನ್ನ ಬದುಕಿನ
ಹೊದಿಕೆಯನ್ನು
ಸ್ವಲ್ಪವೇ ಸರಿಸಿ ನೋಡು...
ಬರೀ ಸುಟ್ಟ ಗಾಯಗಳೇ ಕಾಣುವುದು!
ಈ ನೋವುಗಳ ಮೇಲೆಯೇ
ನಿತ್ಯ ಮಲಗುವ ನನಗೆ,
ನಿನ್ನ ಚುಚ್ಚುಮಾತುಗಳು
ಏನು ತಾನೆ ಮಾಡಿಯಾವು ಹೇಳು?

ಮುಳ್ಳು


ನನ್ನ ದಾರಿಯಲ್ಲಿ

ಇಷ್ಟು ದಿನ 

ಬರೀ ಕಲ್ಲುಗಳೇ ಇದ್ದವು..

ಇದೀಗ

ಒಂದಷ್ಟು ಮುಳ್ಳುಗಳೂ

ಚಿಗುರುತ್ತಿವೆ!

ಕನಿಷ್ಟ ಅವುಗಳಿಗಾದರೂ

ಜೀವವಿದೆಯೆಲ್ಲಾ 

ಎಂಬುದೇ ನನಗೆ ಖುಷಿ!

ಅಂತ್ಯಸಂಸ್ಕಾರ


ನನ್ನ ಅಕ್ಷರಗಳೆಲ್ಲವೂ

ಆತ್ಮಹತ್ಯೆ ಮಾಡಿಕೊಂಡಿವೆ!

ಹೂಳಲು ಎಲ್ಲಿದೆ ಜಾಗ?

ಎಷ್ಟೂ ಅಂತ ಹೊರಲಿ ಇನ್ನು

ಅವುಗಳ ಹೆಣಗಳ..

ಎದೆ ಭಾರ..ಹೆಗಲೂ ಭಾರ!

ಹಾಗಾಗಿ ; ದಿನವೂ 

ಈ ಬ್ಲಾಗ್ ಪೋಸ್ಟುಗಳ ಮೂಲಕ

ನಿಮ್ಮ ಎದೆಗಳಲ್ಲಿ ಹೂಳುತ್ತಿರುತ್ತೇನೆ!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...